#ಧಾರಾ_ರಾಮಾಯಣ - 28-07-2019 ದಿನ35
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ
ನಾಲಿಗೆ ಕುಲವನ್ನು ಹೇಳುತ್ತದೆ. ನಮ್ಮೊಳಗಿನ ಸತ್ಯವನ್ನು ನಾಲಿಗೆ ಹೇಳಿಯೇ ಬಿಡುತ್ತದೆ.
ದಶರಥನು ಹೊಸ ಅಸ್ತ್ರವನ್ನು ಪ್ರಯೋಗಿಸುತ್ತಾನೆ. ರಾಮನ ಜೊತೆಗೆ ಸೇನೆ, ವೀರರನ್ನು, ಕಲಾವಿದರನ್ನು ಕಳುಹಿಸಲು ಅಪ್ಪಣೆಯಿತ್ತನು. ಆ ಅಪ್ಪಣೆಯನ್ನು ಕೇಳಿದ ಕೈಕೇಯಿಯ ಸ್ವರ ಬಿತ್ತು, ಮುಖ ಒಣಗಿ, ರಾಜನನ್ನು ನೇರದೃಷ್ಟಿಯಿಂದ ನೋಡಿದವಳಾಗಿ, "ಜನರೆಲ್ಲರೂ ಹೋದಮೇಲೆ ಈ ರಾಜ್ಯವನ್ನು ಭರತನು ಇಷ್ಟಪಡಲಾರ" ಎಂದು ಹೇಳಿ ಹೆಂಡಕ್ಕೆ ರಾಜ್ಯವನ್ನು ಹೋಲಿಸುತ್ತಾಳೆ. ಸಾರವನ್ನೆಲ್ಲ ಅವನಿಗೆ ಕೊಟ್ಟಮೇಲೆ ಇವನಿಗೇನುಳಿದೀತು? "ಎಲ್ಲವನ್ನು ರಾಮನಿಗೆ ಕೊಟ್ಟು, ಭರತನಿಗೆ ಏನು? ಅವನದನ್ನು ಇಷ್ಟಪಡಲಾರ" ಎಂದು ಲಜ್ಜೆ ಬಿಟ್ಟು ಹೇಳಿ ಪ್ರಶ್ನಿಸಿದಾಗ ದಶರಥನು ಕುಪಿತಗೊಂಡು "ಹೊರಲಾರದ ಹೊರೆಯನ್ನು ಹೊರೆಸಿ ಎತ್ತು ಹೇರನ್ನು ಹೊರುವಾಗ ಪುನಃ ಚುಚ್ಚುವುದುಂಟೇ? ಹೇ ಅಹಿತಳೇ, ಎಲೈ ಅನಾರ್ಯೆಯೇ ಈಗ ಯಾಕೆ ಚುಚ್ಚುತ್ತಿದ್ದೇಯೆ? ವರವನ್ನು ಕೇಳುವಾಗಲೇ ಕೇಳಬೇಕಿತ್ತು." ಎಂದು ಗದರಿದನು. ಇದರಿಂದ ರಾಜನಿಗಿಂತ ದುಪ್ಪಟ್ಟು ಸಿಟ್ಟು ಮಾಡಿಕೊಂಡು ಕೈಕೇಯಿಯು ದಶರಥನ ಕುರಿತು "ನಿನ್ನ ವಂಶದಲ್ಲಿ, ನಿನ್ನದೇ ಪೂರ್ವಜ ಸಗರ ತನ್ನ ಮಗ ಅಸಮಂಜಸನನ್ನು ಹೊರಹಾಕಲಿಲ್ಲವೆ, ಹಾಗೆಯೇ ಇವನೂ ಹೋಗಲಿ." ಇಷ್ಟು ವರ್ಷ ಕಳೆದಮೇಲೂ, ಇದು ಆಕೆಗೆ ಇನ್ನೂ ಮನೆಯಾಗಿಲ್ಲ! ನಿನ್ನ ವಂಶ, ನಿನ್ನ ಮನೆ ಎಂದು ಹೇಳಿದ್ದಾಳೆ, ಇದನ್ನು ಗಮನಿಸಬೇಕು! ಮದುವೆಯಾದಮೇಲೆ ನಮ್ಮ ವಂಶ ಎಂದಾಗಬೇಕಿತ್ತು! ಈ ಮಾತನ್ನು ಕೇಳಿ ದೊರೆಗೆ ಮಾತೇ ಬರಲಿಲ್ಲ! ಉತ್ತರ ಇಲ್ಲದೇ ಅಲ್ಲ, ಆದರೆ ಹೀಗೂ ಮಾತಾಡುತ್ತಾದ್ದಾಳಲ್ಲಾ ಎಂದು. 'ಅಯ್ಯೋ ಧಿಕ್ಕಾರ' ಎಂದು ದಶರಥ ಉದ್ಗರಿಸಿದ. ಆಕೆಯ ಮಾತನ್ನು ಕೇಳಿ ಅಲ್ಲಿ ನೆರೆದ ಎಲ್ಲರಿಗೂ ನಾಚಿಕೆಯಾಯಿತು, ಆದರೆ ಆಕೆಗೆ ಏನೂ ಅನ್ನಿಸಲಿಲ್ಲ.
ಆಗ ದಶರಥನ ಅಷ್ಟಮಂತ್ರಿಗಳಲ್ಲೊಬ್ಬನಾದ ಸಿದ್ಧಾರ್ಥ - ನಿರ್ಮಲತೆಗೆ ಪ್ರಸಿದ್ಧನಾದವನು ಕೈಕೇಯಿಗೆ ಅಸಮಂಜಸನನ್ನು ಕಾಡಿಗೆ ಅಟ್ಟಿದ ಕಾರಣವನ್ನು ನೀಡುತ್ತಾನೆ. ಬೀದಿಯಲ್ಲಿ ಆಡುತ್ತಿದ್ದ ಬಾಲರನ್ನು ಸರಯೂ ನದಿಯಲ್ಲಿ ಮುಳುಗಿಸಿ ಶಬ್ದ ಬರುವಾಗ ಖುಷಿ ಪಡುತ್ತಿದ್ದವ ಅಸಮಂಜ. ಇದು ದೊರೆಗೆ ಗೊತ್ತಾಗಿ, ತನ್ನ ಮಗನ ವಿರುದ್ಧವೇ ದಂಡವಿತ್ತ ಸಗರ. 'ಆಜೀವ ಬಹಿಷ್ಕಾರ' ಎಂಬ ದಂಡ ಇತ್ತ, ನನಗೆ ಪ್ರಜೆಗಳೇ ಮುಖ್ಯವೆಂದ. ಇಷ್ಟು ಹೇಳಿ ನಂತರ ಕೈಕೇಯಿಯಲ್ಲಿ "ರಾಮನ ತಪ್ಪೇನು, ಪಾಪವೇನು? ರಾಮನ ಹೊರಹಾಕಲು ಏನು ಕಾರಣ? ರಾಮನು ಆಗುಣ ದುರ್ಲಭ, ಪಾಪದುರ್ಲಭನು. ನಮಗೇನೂ ಆತನಲ್ಲಿ ದೋಷವನ್ನು ಕಂಡಿಲ್ಲ. ನೀನು ಏನು ದೋಷವನ್ನು ಆತನಲ್ಲಿ ಕಂಡೆ? ದೋಷವಿಲ್ಲದವನನ್ನು, ಸನ್ಮಾರ್ಗದಲ್ಲಿರುವವನನ್ನು ದಂಡಿಸಿದರೆ, ತ್ಯಜಿಸಿದರೆ ಮೂರು ಲೋಕದ ದೊರೆಯನ್ನಾದರೂ ಸುಟ್ಟುಹಾಕೀತು. ಅದು ಧರ್ಮಾಪಚಾರ. ಅದು ಧರ್ಮಕ್ಕೆ ಪೆಟ್ಟು. ರಾಮನ ಶ್ರೇಯಸ್ಸಿಗೆ ಕಲ್ಲು ಹಾಕಬೇಡ, ಅಪವಾದ ಶಾಶ್ವತವಾದೀತು, ಸರ್ವವ್ಯಾಪಿಯಾದೀತು" ಎಂದು ಎಚ್ಚರಿಸಿದನು ಸಿದ್ಧಾರ್ಥ. ಇದು 'ಸಿದ್ಧಾರ್ಥ ಪ್ರತಿಬೋಧನಮ್'.
ದಶರಥನು ಇನ್ನೂ ನಿನಗೆ ಅರ್ಥವಾಗುತ್ತಿಲ್ಲವೇ? ಹಾಳಾಗಿ ಹೋಗು, ನಾನು ರಾಮನನ್ನು ಹಿಂಬಾಲಿಸುವವನು. ಭರತನ ಜೊತೆಗೆ ನೀನು ಶೂನ್ಯರಾಜ್ಯವನ್ನಾಳು ಎಂದು ಗದರಿದಾಗ, ರಾಮನು ಈ ಪ್ರಸಂಗಕ್ಕೆ ತೆರೆ ಎಳೆಯುತ್ತಾನೆ. ರಾಮನು "ಆನೆಯನ್ನು ಕೊಟ್ಟಮೇಲೆ ಹಗ್ಗ ಏಕೆ? ರಾಜ್ಯವನ್ನು ತ್ಯಾಗ ಮಾಡಿದ ಮೇಲೆ ಭಂಡಾರ ಇತ್ಯಾದಿ ಏಕೆ? ನನಗೆ ಏಕೆ ಬೇಕು? ಏನೂ ಬೇಡ ಅಂತಲ್ಲ, ನಾರು ವಸ್ತ್ರ , ಹಾರೆ ಬುಟ್ಟಿಗಳು ಬೇಕು ನನಗೆ. ತಾಪಸಯೋಗ್ಯವಾದದ್ದನ್ನ ಕೊಡಿ. ಇಷ್ಟೇ ಅಯೋಧ್ಯೆಯಿಂದ ನಾನು ನಿರೀಕ್ಷಿಸುತ್ತಿರುವುದು" ಎಂದು ಕೇಳಿದ ಮಾತ್ರಕ್ಕೆ ಕೈಕೆಯಿಯಾದರೋ ತಾನೇ ಓಡಿ ನಾರು ಬಟ್ಟೆಯನ್ನು ತಂದು ಕೊಡುತ್ತಾಳೆ. ಲಜ್ಜೆಯಿಲ್ಲದವಳು ಎಂದು ವಾಲ್ಮೀಕಿಗಳು ಹೇಳಿದ್ದಾರೆ ಆಕೆಗೆ. ಗೌರವದಿಂದ ಸ್ವೀಕರಿಸಿ ರಾಮ ಲಕ್ಷ್ಮಣರು ಅಲ್ಲಿಯೇ ಎಲ್ಲರ ಮುಂದೆಯೇ ಉಟ್ಟುಕೊಂಡರು. ಆ ನಾರುಬಟ್ಟೆಯನ್ನು ಮುಟ್ಟಿದ ಕೂಡಲೇ ಸೀತೆ ಕೆಂಪಗಾದಳಂತೆ, ಅಷ್ಟು ಕೋಮಲೆ ಸೀತೆ! ಕೋಮಲೆ ಸೀತೆಗೆ ಇದನ್ನು ಉಟ್ಟುಕೊಳ್ಳುವುದು ಹೇಗೆ? ಅದನ್ನು ಉಡಲು ತನಗೆ ಗೊತ್ತಿಲ್ಲ ಎಂದು ನಾಚಿಸಿಕೊಂಡು, ಕಣ್ತುಂಬ ನೀರು ತುಂಬಿಕೊಂಡು ರಾಮನನ್ನು ಇದನ್ನು ಮುನಿಪತ್ನಿಯರು ಉಟ್ಟುಕೊಳ್ಳುವ ಬಗೆ ಹೇಗೆ ಎಂದು ಕೇಳಿದಾಗ ಧಾವಿಸಿಬಂದ ರಾಮನು ಉಟ್ಟ ಸೀರೆಯ ಮೇಲೆ ಅದನ್ನು ಉಡಿಸಿದ ತಾನೇ.
ಆಗ ಅಂತಃಪುರದ ನಾರಿಯರ ಶೋಕದ ಕಟ್ಟೆ ಒಡೆಯಿತು, ಆಗ ರಾಮನಲ್ಲಿ, "ಮಗೂ, ನಿನಗೆ ವನವಾಸ, ಈಕೆಗೆ ವಿಧಿ ಅಲ್ಲ. ಈಕೆಗೇಕೆ ಈ ದುರವಸ್ಥೆ? ಈಕೆಯನ್ನಾದರೂ ಬಿಟ್ಟು ಹೋಗು. ನೀನು ಮರಳಿ ಬರುವವರೆಗೆ ಈಕೆಯಲ್ಲಿ ನಿನ್ನನ್ನು ಕಾಣುತ್ತೇವೆ. ವನವಾಸದ ವಾತಾವರಣಕ್ಕೆ ಆಕೆ ಸರ್ವಥಾ ಯೋಗ್ಯಳಲ್ಲ. ನಮ್ಮ ಈ ಬೇಡಿಕೆಯನ್ನು ಈಡೇರಿಸು, ಈಕೆ ಇಲ್ಲಿರಲಿ" ಎಂದು ಉದ್ಗಾರವನ್ನು ಮಾಡಿದರು.
ಆಗ ಒಂದು ಆಶ್ಚರ್ಯದ ಘಟನೆ ನಡೆಯಿತು. ಅವರು - ಕೋಪಗೊಂಡದ್ದನ್ನು ಯಾವ ಗ್ರಂಥವೂ ಉಲ್ಲೇಖಿಸಿಲ್ಲ, ಅಂತಹಾ ಶಾಂತರು. ಅವರೇ ವಸಿಷ್ಠರು. ಕ್ಷಮಾಧನ, ಶಾಂತಿಮೂರ್ತಿ, ಯಾವತ್ತೂ ಕೋಪಗೊಂಡಿರದ ವಸಿಷ್ಠ ಮಹರ್ಷಿಗಳು ಅತ್ಯಂತ ಕುಪಿತಗೊಂಡು ಕೈಕೇಯಿಗೆ "ಅತಿಯಾಯಿತು ನಿನ್ನದು. ದುರ್ಬುದ್ಧಿಯೇ, ಈ ಕುಲಕ್ಕೆ ಕಳಂಕ, ರಾಜನಿಗೆ ಮೋಸಮಾಡಿ ನಿನ್ನ ಮಿತಿಯೊಳಗೆ ಇರುತ್ತಿಲ್ಲ ನೀನು. ಹೇ ಶೀಲಭ್ರಷ್ಟಳೇ, ಶೀಲವಂತಳಾದ ಸೀತೆಯನ್ನು ಸಿಂಹಾಸನದಲ್ಲಿ ಕೂರಿಸುತ್ತೇನೆ. ಈಕೆ ರಾಜ್ಯಭಾರವನ್ನು ಮಾಡಲಿ. ಇವಳು ವನವಾಸಕ್ಕೆ ಹೋಗುವುದು ಬೇಡ. ಒಂದುವೇಳೆ ವೈದೇಹಿ ಕಾಡಿಗೆ ಹೋಗುವವಳಾದರೆ, ನಾನು - ನನ್ನ ಶಿಷ್ಯರು, ಇಡೀ ಅಯೋಧ್ಯೆ ರಾಮನೊಂದಿಗೆ ಕಾಡಿಗೆ ಹೋಗುತ್ತೇವೆ. ಇಡೀ ನಗರಕ್ಕೆ ನಗರವೇ ಹೋಗುತ್ತದೆ ಕಾಡಿಗೆ. ಇದು ತನ್ನಿಂತಾನೇ ಆಗುವುದು. ನಿನ್ನ ಭರತ ಶತ್ರುಘ್ನನೊಡಗೂಡಿ ಕಾಡಿಗೆ ಹೊರಡುವ ನೋಡು. ಅವನೇನು ರಾಜ್ಯವಾಳಲಾರ. ಯಾವ ನಾರುಬಟ್ಟೆಯನ್ನು ರಾಮನಿಗೆ ನೀನು ತೊಡಿಸಿದೆಯೋ, ಸೀತೆಗೆ ತೊಡಿಸಲುಹೊರಟೆಯೋ, ನಿನ್ನ ಮಗನು ತೊಡುತ್ತಾನೆ ಅದನ್ನು. ನೀನು ಮರಗಳನ್ನು ಭೂತದ ಹಾಗೆ ನೀನೊಬ್ಬಳೇ ಪಾಲನೆ ಮಾಡು, ಏಕೆಂದರೆ ಅವುಗಳಿಗೆ ಬೇರಿನಿಂದಾಗಿ ಬಂಧನ. ರಾಮನಿಲ್ಲದ ರಾಷ್ಟ್ರ, ರಾಷ್ಟ್ರವಲ್ಲ. ಅಂತರಂಗದಿಂದ ದೊರೆಯು ಕೊಡದ ಭೂಮಿಯನ್ನು ಭರತ ಸ್ವೀಕರಿಸಲಾರ. ದಶರಥನ ಮಗನೇ ಆದರೆ, ಭರತನು ಶತ್ರುಘ್ನ ಸಹಿತವಾಗಿ ಕಾಡಿಗೆ ಹೋಗುತ್ತಾನೆ. ನೀನು ಬೇಕಾದರೆ ಆಕಾಶಕ್ಕೆ ನೆಗೆ, ಆದರೆ ಭರತನು ಮಾತ್ರ ಪಿತೃವಂಶದ ಚರಿತ್ರೆಯನ್ನು ಬಲ್ಲವನು, ಅವನು ಬೇರೆ ತರಹ ಮಾಡುವುದಿಲ್ಲ. ಹಾಗಾಗಿ ವಿಚಿತ್ರ ವ್ಯಾಮೋಹದಿಂದ, ಪುತ್ರಲೋಭದಿಂದ ಮಗನಿಗೆ ನೀನೇ ಕೇಡು ಮಾಡಿದೆ. ಎಲ್ಲರಿಗೂ ಭರತನ ಮೇಲೆ ಎಷ್ಟು ಕೋಪಬರಬಹುದು ಯೋಚಿಸು. ಪಶು ಪಕ್ಷಿ ಹಾವುಗಳೂ ರಾಮನ ಹಿಂದೆ ಹೋಗುತ್ತವೆ, ಇಂದೇ, ನೋಡುತ್ತಿರು. ಸೀತೆಗೆ ಪಟ್ಟೆ ವಸ್ತ್ರ, ಆಭರಣಗಳನ್ನು ಕೊಡಬೇಕಿತ್ತು ಹೊರತು ನಾರು ಬಟ್ಟೆಯನ್ನಲ್ಲ. ಸೀತೆ ವನವಾಸದಲ್ಲೂ ಸರ್ವಾಲಂಕಾರಭೂಷಿತಳಾಗಿಯೇ ಇರುತ್ತಾಳೆ, ಇರಬೇಕು; ಹೀಗಲ್ಲ." ಎಂದು ಆಕ್ರೋಶದಿಂದ ನುಡಿದರು. ಕೈಕೇಯಿ ತೆಪ್ಪಗಾದಳು. ಆದರೆ ಸೀತೆಗೆ ಭಾವ ಹಾಗೆಯೇ ಉಳಿಯಿತು, ಸೀತೆಗೆ ಸಮಾಧಾನವಾಗಲಿಲ್ಲ. ಗಂಡನು ಉಟ್ಟಮೇಲೆ ನಾನು ಯಾಕಿಲ್ಲ ಎಂಬ ಭಾವ.
ಲೋಕನಾಥನ ಮಡದಿ ಅನಾಥಳಂತೆ ನಾರುಬಟ್ಟೆಯನ್ನು ಉಟ್ಟದ್ದನ್ನು ಕಂಡಾಗ ಜನರು ಆಕ್ರೋಶಗೊಂಡರು, ದಶರಥನಿಗೆ ಧಿಕ್ಕಾರವನ್ನು ಕೂಗಿದರು.
ಒಳ್ಳೆಯವರ ಜೊತೆ ಇರಬೇಕು, ನಮ್ಮ ಜೊತೆ ಒಳ್ಳೆಯವರನ್ನು ಇಟ್ಟುಕೊಳ್ಳಬೇಕು- ಶ್ರೀಸೂಕ್ತಿ
ದಶರಥನು ಧರ್ಮಸಾಧನೆಮಾಡಲಾಗಲಿಲ್ಲವೆಂಬ ಕಾರಣಕ್ಕೆ ಆ ಕ್ಷಣದಲ್ಲಿ ಜೀವದಾಸೆಯನ್ನು ತೊರೆದ.
ರಾಮನು ತಲೆಕೆಳಗೆ ಹಾಕಿ ಕೂತ ದಶರಥನಿಗೆ, "ಇನ್ನೇನು ಅಪೇಕ್ಷೆಯಿಲ್ಲ, ಆದರೆ ನನ್ನಮ್ಮ ಕೌಸಲ್ಯೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಜೀವ ಉಳಿಯಲಿ ನಾನು ಬರುವವರೆಗೆ." ಎಂದ.
ಒಬ್ಬಳಿಂದಾಗಿ ಎಲ್ಲರಿಗೂ ಪೀಡೆ.
ದಶರಥನು "ರಾಮಾ......" ಎಂದು ಉದ್ಗಾರ ಮಾಡುತ್ತಿರುವಾಗಲೇ ಬೋಧತಪ್ಪಿ ಬಿದ್ದ. ಸ್ವಲ್ಪ ಸಮಯದಲ್ಲಿ ಎದ್ದ ದೊರೆ, ಸುಮಂತ್ರನಿಗೆ ರಥವನ್ನು ತರಲು ಹೇಳಿ ಹಳ್ಳಿಗಳನ್ನು ದಾಟಿ ತಲುಪಿಸುವ ಸಲುವಾಗಿ ಆಜ್ಞೆಯಿತ್ತನು.
ಸದ್ಗುಣಗಳ ಫಲವೇ ಇದು ಎಂದು ದಶರಥನು ದುಃಖಿಸುತ್ತಾನೆ. ಅತ್ಯಂತ ದಕ್ಷ ಕೋಶಾಧಿಕಾರಿಯನ್ನು ಕರೆದು ಸರಿಯಾಗಿ ಎಣಿಸಿ 14 ವರ್ಷಗಳಿಗೆ ಬೇಕಾದ ವಸ್ತ್ರಗಳನ್ನು, ಆಭರಣಗಳನ್ನು ಸೀತೆಗೆ ಕೊಡಲು ಸೂಚಿಸಿದನು. ಅಂತೆಯೇ ಆತ ಸೀತೆಗೆ ಕೊಡುತ್ತಾನೆ.
ಕಾಡಿಗೆ ಹೊರಟ ಸೀತೆಯನ್ನು ಮದುವೆಯ ಸಮಯದಲ್ಲಿ ಸಿಂಗರಿಸುವಂತೆ ಸಿಂಗರಿಸಿದರು. ಉದಿಯಿಸುವ ಸೂರ್ಯನ ಪ್ರಭೆಯಂತೆ ಆ ಭವನವನ್ನೇ ಆಕೆ ಆಗ ಬೆಳಗಿದಳು, ಕಂಗೊಳಿಸಿದಳು.
ನಂತರ ಸೀತೆಯು ತನ್ನ ತಾಯಿಗೆ ಸಮಾನಳಾದ ಕೌಸಲ್ಯೆಗೆ ನಮಸ್ಕರಿಸಿದಳು. ನಂತರ ಕೌಸಲ್ಯೆ ಸೀತೆಗೆ ಪತ್ನಿಯರು ಹೇಗಿರಬೇಕು ಎಂದು ಹೇಳಿದಳು. "ಚೆನ್ನಾಗಿದ್ದಾಗ ಎಲ್ಲಾ ಸೌಲಭ್ಯವನ್ನು ಪಡೆದು, ತೊಂದರೆ ಬಂದಾಗ ಬಿಟ್ಟು ಬಿಡುವರು, ಕೇಡು ಮಾಡುತ್ತಾರೆ. ಇದು ಅಸತಿಯರ ಸ್ವಭಾವ. ಅವರು ಪಾಪಸಂಪನ್ನರು. ಇದು ವಿಕೃತಿ, ಅಂತಹವರ ಮನಸ್ಸು ಏನೆಂದು ತಿಳಿಯುವುದು ಕಷ್ಟ. ಗಂಡ ಬೇಡ ಎಂದಾಗಲಿಕ್ಕೆ ಒಂದು ಕ್ಷಣ ಸಾಕು ಅವರಿಗೆ. ಆದರೆ ಸಾಧ್ವಿಯವರಿಗೆ ಪತಿಯೇ ಪರಮಪವಿತ್ರ, ಸರ್ವಸ್ವ. ಹಾಗೆ ನೀನು ಈ ನಿನ್ನ ಪತಿಯನ್ನು, ನಿರ್ಧನನಾಗಲಿ ಸಧನನಾಗಲಿ ರಾಮನೇ ದೇವರು ನಿನಗೆ; ಅವಗಣನೆ ಮಾಡಬೇಡ." ಸೀತೆ ಎಲ್ಲವನ್ನೂ "ಹೀಗೇ ನಡೆದುಕೊಳ್ಳುತ್ತೇನೆ, ಬಲ್ಲೆ ನಾನು. ಆ ಅಸತಿಯರ ಸಾಲಿನಲ್ಲಿ ನಾನೆಂದೂ ಬರುವವಳಲ್ಲ, ನಾನು ಅಂತಹವಳಲ್ಲ. ತಂತಿಯಿಲ್ಲದೆ ವೀಣೆಯಿಲ್ಲ, ಚಕ್ರವಿಲ್ಲದ ರಥವಿಲ್ಲ. ಪತಿಯಿಲ್ಲದ ಸತಿ, ಚಕ್ರವಿಲ್ಲದ ರಥದಂತೆ" ಎಂದು ಸೀತೆಯು ಹೇಳಿದಾಗ ಕೌಸಲ್ಯೆ ದುಃಖಹರ್ಷದ ಕಣ್ಣೀರನ್ನು ಸುರಿಸಿದಳು.
ರಾಮನು ತಾಯಿಗೆ ನಮಸ್ಕರಿಸಿದ. ತಂದೆಯನ್ನು ನೋಡಿಕೋ ಸರಿಯಾಗಿ ಎಂದು ಹೇಳಿದ! ಇದು ರಾಮ! ದೊರೆಯಲ್ಲಿ ತಾಯಿಯನ್ನು ನೋಡಿಕೋ ಎಂದಿದ್ದ. ವನವಿಹಾರ ಮಾಡಿ ಬೇಗನೇ ಬರುವೆ. ಬರುವಾಗ ಬಳಗದೊಡನೆ, ಮಿತ್ರವೃಂದದೊಡನೆ ಬರುವೆ ಎಂದ!
ಹಾಗೇ ಬಂದ ಅವನು ಮುಂದೆ! ಹೋಗ್ತಾ ರಾಮ-ಸೀತೆ-ಲಕ್ಷ್ಮಣ; ಬರ್ತಾ ಸಮಗ್ರ ಕಪಿಸೇನೆ. ಮುಂದೆ 350 ಜನ ಅಂತಃಪುರದಲ್ಲಿದ್ದ ಮಾತೆಯಂದಿರಿಗೆ ಕೈಮುಗಿದು, ಗೊತ್ತಿಲ್ಲದೇ ನಾನು ತಪ್ಪು ಮಾಡಿದ್ದಲ್ಲಿ ಕ್ಷಮಿಸಿ ನನ್ನನ್ನು ಎಂದ. ಆಗ ಅವರೆಲ್ಲರೂ ಆಕ್ರಂದಿಸಿದರು, ಮನೆ ಅದರಿಂದ ತುಂಬಿಹೋಯಿತು.
ಲಕ್ಷ್ಮಣನು ಕೌಸಲ್ಯೆಗೆ ನಮಸ್ಕರಿಸಿ ತನ್ನ ತಾಯಿಗೆ ನಮಸ್ಕರಿಸಿದ. ರೋಧಿಸುತ್ತಾ, ಕಣ್ಣೀರು ಹರಿಸುತ್ತಾ ತಾಯಿ ಸುಮಿತ್ರೆ, "ವನವಾಸಕ್ಕಾಗಿ ಹುಟ್ಟಿದವನು ನೀನು, ಇನ್ನಿಲ್ಲದ ಪ್ರೀತಿಯನ್ನು ರಾಮನಲ್ಲಿಟ್ಟಿರುವೆ. ರಾಮನ ವಿಷಯದಲ್ಲಿ ತಪ್ಪನ್ನು ಮಾಡಬೇಡ. ಕಷ್ಟದಲ್ಲಿರಲಿ, ಸಮೃದ್ಧಿಯಲ್ಲಿರಲಿ, ಮಗೂ ನಿನಗೆ ರಾಮನೇ ಗತಿ. ಅಣ್ಣನ ವಶದಲ್ಲಿ ತಮ್ಮ ಇರಬೇಕು, ಅವನನ್ನು ಅನುಸರಿಸಬೇಕು. ಇದು ಲೋಕಧರ್ಮ, ನಮ್ಮ ವಂಶದ ಧರ್ಮ. ಹೋಗು...... ಹೋಗು......" ಎಂದು ಹೇಳಿದಳು.
ಕೊನೆಯಲ್ಲಿ ಮಹತ್ತಾದ ಒಂದು ಸಂದೇಶವನ್ನು ಕೊಡುತ್ತಾಳೆ. ಇದು ತುಂಬಾ ಪ್ರಸಿದ್ಧವಾದದ್ದು. ಲಕ್ಷ್ಮಣನ ಭಾವ ಹೇಗಿರಬೇಕು ಎಂಬುದನ್ನು ನಿರೂಪಣೆ ಮಾಡುತ್ತಾಳೆ ಸುಮಿತ್ರೆ. "ನಿನಗೆ ರಾಮನೇ ದಶರಥ, ತಂದೆ. ನಾನಿಲ್ಲ ಅಂತಿಲ್ಲ, ಸೀತೆಯೇ ನಾನು, ತಾಯಿ. ಸೀತೆಯಲ್ಲಿ ನನ್ನನ್ನು ಕಾಣು, ಅಡವಿಯಲ್ಲಿ ಅಯೋಧ್ಯೆಯನ್ನು ಕಾಣು. ನೀನು ಹೋದಮೇಲೆ ಅಯೋಧ್ಯೆ ಕಾಡಾಗುವುದು. ಸುಖವಾಗಿ ಹೋಗಿ ಬಾ"......
ಬಲ್ಲವರು ಸುಮಿತ್ರೆಯು ಜ್ಞಾನಿಯೆಂದು ವರ್ಣಿಸಿದ್ದಾರೆ. ಕೌಸಲ್ಯೆಯೇ ದಶರಥನಿಗಿಂತ ಜ್ಞಾನಿ; ಆದರೆ ಸುಮಿತ್ರೆಯಂತಹಾ ವಿವೇಕಿ ಸಿಗಲಾರರು. ಕೌಸಲ್ಯೆಗೆ ದಿಕ್ಕುತೋಚದೇಹೋದರೆ, ಜಿಜ್ಞಾಸೆಗಳುಂಟಾದರೆ, ಸುಮಿತ್ರೆ ಕೌಸಲ್ಯೆಗೂ ವಿವೇಕ ಹೇಳುತ್ತಾಳೆ! ದಾರಿ ತೋರಿಸುವವಳು ಇವಳೇ. ಅವಳಂತಹಾ ವಿವೇಕಿನಿಯನ್ನು ಕಾಣಲು ಸಾಧ್ಯವಿಲ್ಲ. ಅಂತಹವಳು ಲಕ್ಷ್ಮಣನಿಗೆ ಹೋಗು ಎಂಬುದಾಗಿ ಪ್ರೋತ್ಸಾಹವನ್ನು ಕೊಟ್ಟಳು..
#DhaaraRaamayan
No comments:
Post a Comment
Please leave your comments here.....