Dhaara Raamayana 36


#ಧಾರಾ_ರಾಮಾಯಣ - 29-07-2019 ದಿನ36
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ

"ಏನೂ ಆಗಬಹುದು, ರಾತ್ರಿ ಹಗಲಾಗಬಹುದು, ಹಗಲು ರಾತ್ರಿಯಾಗಬಹುದು; ಹಾಗೆಯೇ ನಿತ್ಯ ನಮ್ಮ ಕರಕೊಂಡು ಹೋಗುವ ರಥ ಕಾಡಿಗೂ ಕರೆದೊಯ್ಯಬಹುದು"... ಸುಮಂತ್ರ ಬಂದು ರಾಮನಿಗೆ ರಥವು ಸಜ್ಜಾಗಿದೆ ಎಂದಾಗ ಸುಮಂತ್ರನ ಮನಸಿಗೆ ಬಂದ ಭಾವವಿದು. ಈಗ ಸಜ್ಜಾಗಿರುವುದು ರಾಮನನ್ನು ಗೊಂಡಾರಣ್ಯಕ್ಕೆ ಕೊಂಡೊಯ್ಯಲಿಕ್ಕೆ!

ನಂತರ 14 ವರುಷ ವನವಾಸ ನಡೆಸಲು ಹೊರಟು ನಿಂತಿಹ ರಾಮನ ಬಳಿ 'ಏರು ರಥವನು ರಾಮ, ಎಲ್ಲಿಗೆ ಬೇಕೋ ಅಲ್ಲಿಗೆ ಕೊಂಡೊಯ್ಯುವೆ' ಎಂದು ಹೇಳಿದಾಗ ಮೊದಲನೆಯದಾಗಿ ಸರ್ವಾಲಂಕಾರಭೂಷಿತಳಾದ ಸೀತೆಯು ಸಂತಸದಿಂದ ನಗುಮೊಗದಲಿ ರಥವನ್ನೇರುವಳು. ರಾಮನು ಜತೆಗಿರುವ ಎಂಬ ಖುಷಿಯಾಕೆಗೆ. ಜೊತೆಗೆ ಸೀತೆಗೆ ದಶರಥನು ನೀಡಿದ ಆಭರಣ ಹಾಗೂ ಎಣಿಕೆಮಾಡಿದಂತೆ ನೀಡಿಹ ವಸ್ತ್ರಗಳು, ಶಸ್ತ್ರಾಸ್ತ್ರಗಳ ಪೆಟ್ಟಿಗೆಯನ್ನು ಕೂಡ ರಥದಲ್ಲಿರಿಸಲಾಯಿತು. ಅನಂತರ ರಾಮ ಮತ್ತು ಲಕ್ಷ್ಮಣ ರಥವನ್ನು ಹತ್ತುವರು. ರಾಮ-ಲಕ್ಷ್ಮಣರು ರಥವೇರಿದಾಗ ವಾಯುವೇಗದಂಥ ಕುದುರೆಗಳಗನ್ನು ಸುಮಂತ್ರನು ಪ್ರಚೋದಿಸಿ ಮುನ್ನಡೆಸಿದ.

ಆಗ ಅಯೋಧ್ಯೆಯಿಡೀ ಮೂರ್ಛಿತವಾದಂತೆ - ಅಂದರೆ ಚೈತನ್ಯವನ್ನು ಕಳಕೊಂಡಿತು. ಕೇವಲ ಅಯೋಧ್ಯೆ ಮಾತ್ರವಲ್ಲ; ಸೇನೆಗೆ ಕೂಡ ಕ್ಲಿಷ್ಟ ಸ್ಥಿತಿ, ಜನರು ಕೂಡ ಕುಂದಿ ಹೋದರು - ಪ್ರಾಣ ಹೋಗುವಾಗ ಶರೀರ ಸತ್ತ್ವ ಕಳೆದುಕೊಂಡಂತೆ.
ಇತ್ತ ರಾಜ್ಯದ ಸೇನೆಯ ಮಹಾಗಜಗಳು ಕ್ರೋಧಗೊಂಡವು, ಎಲ್ಲೆಲ್ಲೂ ಕುದುರೆಗಳು ವಿಚಲಿತಗೊಂಡವು, ಸಂಪೂರ್ಣ ಅಯೋಧ್ಯೆಗೆ ಅಯೋಧ್ಯೆಯೇ ಅತ್ತಿತ್ತು. ಚಿಕ್ಕ ಸ್ವಾರ್ಥಕ್ಕಾಗಿ ದೊಡ್ಡ ಅನಾಹುತಗಳನ್ನು ಮಾಡುವವರು ಇದನ್ನೆಲ್ಲಾ ಗಮನಿಸುವುದಿಲ್ಲ; ಕೈಕೇಯಿಯದು ಚಿಕ್ಕ ಸ್ವಾರ್ಥವದು, ಆಕೆ ಈ ಪರಿಣಾಮಗಳನ್ನೆಲ್ಲ ಗಮನಿಸಿಲ್ಲ ಆಕೆ.

ಮರಳುಗಾಡಿನಲಿ ನೀರು ಕಂಡಾಗ ನೀರಿನ ಬಳಿ ಓಡುವ ಜನರಂತೆ... ಪ್ರಜೆಗಳೆಲ್ಲರೂ ರಾಮರಥ ಮುಂದೋಡಿದಂತೆ ರಥದ ಹಿಂದೆ ಓಡಿದರು. ಮುಪ್ಪಿನ ಮುದುಕರಿಂದ ಹಿಡಿದು ಮಕ್ಕಳವರೆಗೆ, ಪರಮಪೀಡಿತರಾಗಿ ಇಡೀ ನಗರಕ್ಕೆ ನಗರವೇ ರಾಮನ ಕಡೆಗೆ ಧಾವಿಸಿತು.
ಅನೇಕರು ರಥಕ್ಕೆ ಜೋತು ಬಿದ್ದಿದ್ದರು, ಸಾವಿರ ಸಾವಿರ ಕಣ್ಣುಗಳಿಗೆ ಲಕ್ಷ್ಯ ಒಂದೇ, ಜನರ ಕಣ್ಣುಗಳಲ್ಲಿ ನೀರು ತುಂಬಿತ್ತು. ಜನರು ಆಗ ವೇಗವಾಗಿ ಸಾಗುತಿಹ ರಾಮ ರಥಕ್ಕೆ ಸ್ವಲ್ಪ ಕಡಿವಾಣ ಹಾಕೆಂದು ಸುಮಂತ್ರನಿಗೆ ಮನವಿಯನು ಮಾಡುವರು.

ಇನ್ನೂ ಕೆಲವರು "ಕೌಸಲ್ಯೆಯ ಹೃದಯ ಕಬ್ಬಿಣದ್ದೇ ಇರಬೇಕು" ಎಂದು ಕೌಸಲ್ಯೆಯ ಬಗ್ಗೆ ಮಾತನಾಡಿಕೊಂಡರು.
ಹಾಗೆಯೇ ಸೀತೆಯನ್ನು ಕೊಂಡಾಡಿದರು; ಧರ್ಮವನ್ನು ಬಿಟ್ಟಿಲ್ಲ, ಸೂರ್ಯ ಪ್ರಭೆಯು ಮೇರುವನ್ನು ಹೇಗೆ ಬಿಡುವುದಿಲ್ಲವೋ ಅದೇ ರೀತಿ ಸೀತೆ ನೆರಳಿನಂತೆ ರಾಮನನ್ನು ಅನುಸರಿಸಿದ್ದಾಳೆ; ಮತ್ತೆ ಇತ್ತ ಲಕ್ಷ್ಮಣ... ಅಹೋ ಲಕ್ಷ್ಮಣ; ದೇವತೆಯಂಥ ಅಣ್ಣನ ಸೇವೆಯನ್ನು ಬಿಟ್ಟಿಲ್ಲ, ಅಣ್ಣನ ಸೇವೆಯೆಂದರೆ ಆತನಿಗೆ ಸಿದ್ಧಿಯದು ಎಂದೆಲ್ಲಾ ಹೇಳುತ್ತಾ ಜನ ಅತ್ತುಕೊಂಡರು.

ಇತ್ತ ರಾಜ ದಶರಥ ರಾಮನನ್ನು ನೋಡುವುದಕ್ಕೆ ಪತ್ನಿಯರೊಡಗೂಡಿ ಅರಮನೆಯಿಂದ ಹೊರಗೆ ಬರುವನು. ರಾಮನ ಮಾತೆಯರ ರೋಧನದ ದೃಶ್ಯವು ವನದ ಮಹಾಗಜವನ್ನು ಕಟ್ಟಿ ಹಾಕಿದರೆ ಉಳಿದ ಎಲ್ಲ ಗಜಗಳು ಸೇರಿ ಆಕ್ರಂದನ ಮಾಡಿದಂತೆ ಇತ್ತು ಎಂದು ಮಹಾಕಾವ್ಯದಲ್ಲಿ ಉಲ್ಲೇಖಿಸಿದ್ದಾರೆ.
ಅರಮನೆಯ ಹೊರಗೆ ನಿಂತು ದಶರಥನು ರಾಮನನ್ನು ನೋಡುತ್ತಿರುವುದನ್ನು ಗಮನಿಸಿದ ರಾಮನು ಸುಮಂತ್ರನಿಗೆ ಓಡಿಸು ರಥವನ್ನು ಎಂದು ಪ್ರಚೋದಿಸುವನು. ದೊಡ್ಡದಾಗಿ ಧೂಳೆದ್ದಿತ್ತು, ಎದ್ದ ಧೂಳೆಲ್ಲವೂ ಶಮನವಾಯಿತು - ಹೇಗೆ ಗೊತ್ತಾ? ಕಣ್ಣೀರುಗಳಿಂದಲೇ! ನಗರಕ್ಕೆ ನಗರವೇ ರೋಧಿಸುತ್ತಿರುವುದನ್ನು ಗಮನಿಸಿದಾಗ ಅಲ್ಲೇ ಕುಸಿದನಂತೆ ದಶರಥ! ಎಂತಹಾ ಪಾಪಿ ನಾನು ಎಂಬಂತೆ!

ಆಗ ರಾಮನು ಹಿಂದಿರುಗಿ ನೋಡಿ, ವಿಷಣ್ಣನಾದ ತಂದೆ-ತಾಯಿಯರನ್ನು ಕಂಡ. ಧರ್ಮಪಾಶದಿಂದ ಬದ್ಧನಾದ ರಾಮ ಆಕೆಗೂ ಗೊತ್ತಾಗದಂತೆ ಕೌಸಲ್ಯೆಯನ್ನು ನೋಡಿದ. ಮತ್ತೆ ಸುಮಂತ್ರನಿಗೆ ಹೇಳಿದ - ಓಡಿಸು ರಥವನ್ನು, ಪರಿಸ್ಥಿತಿಯನು ಅರ್ಥಮಾಡಿಕೊ, ಇಲ್ಲಿಂದ ಆದಷ್ಟು ಬೇಗನೆ ಕ್ರಮಿಸಿದಷ್ಟು ಒಳ್ಳೆಯದು... ಬೇಗ ಹೋಗು ಎಂದು ಹೇಳಿದನು. ತಂದೆ-ತಾಯಿಯ ಆ ದುಃಖ ಉಂಟುಮಾಡುವ ಆ ನೋಟವನ್ನು ರಾಮನು ನೋಡಲಾರ ಎಂದು ವಾಲ್ಮೀಕಿಗಳು ಬಣ್ಣಿಸಿದ್ದಾರೆ.
ಆಗ ಕೌಸಲ್ಯೆಯು ಗೋಷ್ಠದಲ್ಲಿ ಕಟ್ಟಿದ ಕರುವನು ನೋಡಿದ ತಾಯಿ ಹಸುವಿನಂತೆ ಓಡುತ್ತಿರುವ ರಥದತ್ತ ರಾಮಾ ಎಂದು ಕೂಗುತ್ತಾ ರಾಮ-ಲಕ್ಷ್ಮಣ-ಸೀತೆಯರಿಗಾಗಿ ಓಡೋಡಿ ಬರುವಳು, ಜೊತೆಗೆ ರಾಮ-ಸೀತೆ ಮತ್ತು ಲಕ್ಷ್ಮಣರಿಗಾಗಿ ಕಣ್ಣೀರು ಹಾಕುತ್ತಾ ರಥದ ಹಿಂದೆ ಓಡುವಳು.
ರಥದ ಹಿಂದೆ ಕೌಸಲ್ಯೆಯು ಓಡೋಡಿ ಬರುವುದನ್ನು ರಾಮನು ಮತ್ತೆ ಮತ್ತೆ ತಿರುಗಿ ನೋಡುವನು. ಅವಳ ಹಿಂದಿನಿಂದ ಧೂಳಿನಲಿ ದೊರೆಯು ಸಹ ಓಡೋಡಿ ಬರುವನು, ನಿಲ್ಲಿಸು ರಥವನ್ನು ಎಂದನು ಸುಮಂತ್ರನಿಗೆ.

ಇತ್ತ ಸುಮಂತ್ರನಿಗೆ ಓಡಿಸು ರಥವನ್ನು ಎಂದು ರಾಮನ ಆಜ್ಞೆ, ಒಂದೆಡೆ ರಥ ನಿಲ್ಲಿಸು ಎಂದು ರಾಜನ ಅಪ್ಪಣೆ, ರಥಕ್ಕೆ ಕಡಿವಾಣ ಹಾಕು ಎಂಬ ಪ್ರಜೆಗಳ ಮನವಿ ಮತ್ತೊಂದೆಡೆ ಈ ಮೂರು ರೀತಿಯ ಮಾತುಗಳಲ್ಲಿ ಸುಮಂತ್ರನ ಮನವು ಎರಡು ಚಕ್ರಗಳ ಮಧ್ಯೆ ಸಿಕ್ಕಿದಂತಾಯಿತು.
ಹೀಗೆ ರಥವನ್ನು ಶೀಘ್ರವಾಗಿ ಮುನ್ನಡೆಯುವಾಗ ಅರಮನೆಯ ಪರಿಜನರು ರಥದ ಹಿಂದೆಯೇ ಧಾವಿಸುತ್ತಿದ್ದರು, ಕೊನೆಗೆ ಕರ್ತವ್ಯ ಪ್ರಜ್ಞೆಯಿಂದ ಅವರ ಕಾಲುಗಳ ಗತಿಯು ನಿಂತಿದ್ದರೂ ಮನಸು ನಿಂತಿರಲಿಲ್ಲ, ಕಣ್ಣೀರು ಹಾಕಿತ್ತು.
ಮನೆಯಿಂದ ಯಾರನ್ನಾದರೂ ಬೀಳ್ಕೊಡುವಾಗ ತುಸು ದೂರ ಅವರೊಂದಿಗೆ ಸಾಗುವುದು ಪದ್ಧತಿ. ಆದರೆ ಇಲ್ಲಿ ದೊರೆಯು ರಾಮನ ರಥದ ಹಿಂದೆ ಓಡುತ್ತಿದ್ದ...
ಇದರೆ ರಾಮನು ಬೇಗ ಬರಬೇಕೆಂದಾದರೆ, ನೀನು ಬಹುದೂರ ಸಾಗಬಾರದು ಎಂದು ಅಮಾತ್ಯರು ಹೇಳಿದ ಮಾತನು ಕೇಳಿ ಬೆವೆತಿದ್ದ ದೊರೆಯು ಆಗ ಅಲ್ಲೇ ನಿಂತ.

ಆದರೆ ಇತ್ತ ಅರಮನೆಯಲಿ ರಾಮ-ಮಾತೆಯರ ರೋಧನ ಕೇಳುತ್ತಿತ್ತಲ್ಲದೇ, ಈ ನಿಜವಾದ ಅನಾಥರಿಗೆ ಯಾರು ಗತಿ, ಎಲ್ಲಿ ಹೋದ?? ನಮ್ಮ ರಾಮ!! ಅವನಿಗೆ ಕೌಸಲ್ಯೆಯಲ್ಲಿದ್ದ ಪ್ರೀತಿಯೇ ನಮ್ಮಲ್ಲಿ, ಈ ರಾಜ ಎಂತಹ ಕೆಲಸ ಮಾಡಿದ ಎಂದು ಹೇಳಿ ಅಳುತ್ತಿದ್ದರು. ಇದನ್ನು ಕೇಳಿ ರಾಜನಿಗೆ ದುಃಖವಾಯಿತು.

ಅಯೋಧ್ಯೆಯಲ್ಲಿ ಆಗ ಪರಿಸ್ಥಿತಿ ಹೇಗಿತ್ತೆಂದರೆ: ಅಗ್ನಿಹೋತ್ರಗಳು ನಿಂತವು, ಗೃಹಸ್ಥರು ಯಾರು ಅಡಿಗೆಯನ್ನು ಮಾಡಲಿಲ್ಲ, ಯಾರೂ ಯಾವ ಕಾರ್ಯವನ್ನೂ ಮಾಡಲಿಲ್ಲ, ಸೂರ್ಯನೇ ಮಂಕಾಗಿ ಹೋಗಿದ್ದ.
ಸೇನೆಯ ಆನೆಗಳು ಬಾಯಲ್ಲಿದ್ದ ಹುಲ್ಲನ್ನು ಬಿಟ್ಟವು, ಹಸುಗಳು ಕರುಗಳಿಗೆ ಹಾಲುಣಿಸಲಿಲ್ಲ.

ಅತ್ತ ಗಗನಾಂಕಣದಲ್ಲಿಯೂ ವಿಕಟಾವಸ್ಥೆ, ಚಂದ್ರನು ಕ್ರೂರಾವಸ್ಥೆಯನ್ನು ತಾಳಲ್ಪಟ್ಟ ಗ್ರಹಗಳಿಂದ ಮುತ್ತಲ್ಪಟ್ಟಿದ್ದ, ಕೋಸಲದ ನಕ್ಷತ್ರವಾದ ವಿಶಾಖವನ್ನು ಏನೋ ಹೊಗೆ ಆವರಿಸಿದಂತಿತ್ತು, ಎಂದು ಜಗತೀಪತಿ ರಾಮನ ಕುರಿತಾಗಿ ಶೋಕಿಸುವರು. ಇತ್ತ ಪ್ರಕೃತಿಯು ಶೋಕಿಸಿತು. ಸೂರ್ಯನ ಪ್ರಭೆ, ಪ್ರಕೃತಿ ವ್ಯಾಕುಲವಾಯಿತು. ಹೀಗೆ ಎಲ್ಲರೂ ಎಲ್ಲವನ್ನೂ ಬಿಟ್ಟರು.

ಸಂಪೂರ್ಣ ಅಯೋಧ್ಯೆಯೇ ಅಕ್ರಂದಿಸಿತು, ರಾಮ ರಹಿತನಾದ ರಾಜ್ಯವು ಭಯದೊಳು ನಡುಗಿತು.
ರಾಮ ಸಾಗಿದ ಬಳಿಕ ರಥದಿಂದ ಎದ್ದ ಧೂಳನ್ನು ದಶರಥನು ಕಣ್ಣು ಮುಚ್ಚದೇ ನೋಡಿದ. ಯಾವಾಗ ಧೂಳು ಆಡಗಿತೋ ಅಲ್ಲೇ ರಸ್ತೆಯಲ್ಲಿ ಕುಸಿದ.
ಕುಸಿದು ಬಿದ್ದ ದೊರೆಯನ್ನು ಎತ್ತಲು ಕೌಸಲ್ಯೆ ಮತ್ತು ಕೈಕೇಯಿಯು ಬಂದಾಗ ಕೈಕೇಯಿಯನ್ನು ಮುಟ್ಟದಿರು ನನ್ನನ್ನು, ನಾನು ನಿನ್ನನು ನೋಡಲು ಬಯಸಲಾರೆ, ನೀನು ನನ್ನ ಪತ್ನಿ ಅಲ್ಲ, ನೀನು ಧರ್ಮವನ್ನು ಬಿಟ್ಟಿರುವೆ ಆದ್ದರಿಂದ ನಾನು ನಿನ್ನನ್ನು ಬಿಟ್ಟೆ ಎಂದು ಹೇಳಿದನು. ಒಂದುವೇಳೆ ಭರತನಿಗಿದು ಸಮ್ಮತವಾದರೆ, ಅವನು ನನಗೆ ಪಿಂಡತರ್ಪಣ ಮಾಡದಿರಲಿ, ಮಾಡಿದರೂ ಅದು ನನಗೆ ಮುಟ್ಟದೇ ಇರಲಿ.

ನಂತರ ನರಾಧಿಪತಿಯಾದ ದಶರಥನನ್ನು ಕೌಸಲ್ಯೆಯು ಮೇಲೆಬ್ಬಿಸಿ ಅರಮನೆಯತ್ತ ಕರೆದೊಯ್ಯುವಳು. ಆಗ ದಶರಥನು ರಾಮನನ್ನು, ಸೀತೆಯ ಸ್ಥಿತಿಯನ್ನು ನೆನಪು ಮಾಡಿಕೊಳ್ಳುವನು. ನಿನ್ನೆ ರಾತ್ರಿ ಹಂಸತೂಲಿಕಾ ತಲ್ಪದಲಿ ಮಲಗಿಹ ರಾಮನಿಗೆ ಇಂದು ರಾತ್ರಿ ಯಾವುದೊ ಮರದಡಿ ಆಶ್ರಯ, ತಲೆಯಡಿಗೆ ಮೆತ್ತನೆಯ ದಿಂಬಿಲ್ಲ, ಬದಲಾಗಿ ಮರದ ತುಂಡು ಅಥವಾ ಬಂಡೆಕಲ್ಲು,
ಇತ್ತ ಸೀತೆ ರಾಜಕುವರಿ, ಹೂವಿನ ಮೇಲೆ ನಡೆಯುತ್ತಿದ್ದವಳು; ಒಂದು ದಿನವೂ ಮುಳ್ಳಲ್ಲಿ ನಡೆದವಳಲ್ಲ ಎಂದು ಅವರ ಸ್ಥಿತಿಯನ್ನು ನೆನಪಿಸಿಕೊಳ್ಳುತ್ತಾನೆ.

ಕೈಕೇಯಿ ನಿನಗೆ ರಾಜ್ಯ ತಾನೇ ಬೇಕಾದದ್ದು, ವಿಧವೆಯಾಗಿ ರಾಜ್ಯವನಾಳೆಂದು ಶಪಿಸುವನು. ಲೋಕನಾಥನಾದ ರಾಮನು ಅನಾಥನಂತೆ ಕಾಡಿನೊಳು ಒಬ್ಬನೇ ಸಂಚರಿಸಬೇಕು ಎಂದೆಲ್ಲಾ ದಶರಥನು ರಾಮನನ್ನು ನೆನೆಯುವನು.
ಅರಮನೆಯತ್ತ ಬಂದ ದಶರಥನಿಗೆ ಮನೆ, ರಾಜ್ಯ ಎಲ್ಲವೂ ಶೂನ್ಯವಾಗಿ ತೋರಿದವು, ಗದ್ಗದಿತನಾಗಿ ಶೋಕಿಸುವನು. ಅರಮನೆಯನ್ನು ಹೊಕ್ಕ ದಶರಥನು ನನ್ನನ್ನು ರಾಮ-ಮಾತೆಯ ಮನೆಗೊಯ್ಯಿರಿ ಎಂದ. ಆ ದಿನದ ರಾತ್ರಿಯು ದಶರಥನಿಗೆ ಕಾಲರಾತ್ರಿಯಾಯಿತು. ಏನೊಂದೂ ಕಾಣಿಸುತ್ತಿಲ್ಲ, ನನ್ನ ಕೈಯನ್ನು ಹಿಡಿದುಕೊ ಎಂದು ಕೌಸಲ್ಯೆಯ ಬಳಿ ಹೇಳುವನು.

ಆಗ ಕೌಸಲ್ಯೆಯು ರಾಮನನ್ನು ಕಾಡಿಗೆ ಅಟ್ಟುವುದು ಎಂದರೆ ರಾಕ್ಷಸರ ಪಾಲಾಗು ಎಂದಂತೆಯೇ, ಯಜ್ಞದಲ್ಲಿ ನೀಡಿದ ಹವಿಸ್ಸು ರಾಕ್ಷಸರಿಗೆ ನೀಡಿದಂತಾಯಿತು. ನಾನು ಹಿಂದಿನ ಜನ್ಮದಲ್ಲಿ ಕರುವಿಗೆ ಹಾಲುಣಿಸುತ್ತಿರುವ ಹಸುವಿನ ಕೆಚ್ಚಲನು ಕಡಿದಿರಬೇಕು ಎಂದೆಲ್ಲಾ ಹೇಳಿ ನೊಂದುಕೊಳ್ಳುವಳು... ಆದರೆ ಇದಾವುದರ ಕಲ್ಪನೆಗಳ ಕೂಡ ಕೈಕೇಯಿಗಿರುವುದಿಲ್ಲ.
ಪುನಃ ರಾಮ ಮತ್ತು ಲಕ್ಷ್ಮಣರು ಸೀತೆಯೊಡಗೂಡಿ ರಾಜ ಮಾರ್ಗದಲಿ ನಡೆದುಕೊಂಡು ಎಂದು ಬರುವರೋ.... ಎಂದು ನೆನೆಯುತ್ತಾ... ಬದುಕಿನಲ್ಲಿ ಆಸೆಯನ್ನು ಕಳಕೊಂಡವಳಂತೆ ಕೌಸಲ್ಯೆಯು ಕಲ್ಪನೆಯನ್ನು ಮಾಡುವಳು.

ಆಗ ಕೌಸಲ್ಯೆಯನ್ನು ಆ ವಿವೇಕಿಯು ಸಮಾಧಾನಪಡಿಸುವಳು. ಅಂದು ಕೌಸಲ್ಯೆಯ ಜೀವ ಉಳಿಯಿತೆಂದಾದರೆ ಅದು ಆಕೆಯಿಂದ. ಯಾರಾಕೆ? ನಾಳೆ ಕಾಣೋಣ!

#DhaaraRaamayan

No comments:

Post a Comment

Please leave your comments here.....