Dhaara Raamayana 34


#ಧಾರಾ_ರಾಮಾಯಣ - 27-07-2019 ದಿನ 34
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ

ಸೇರಲೆಂದು ಉಂಟು, ಬೇರೆಯಾಗಲೆಂದು ಸೇರುವುದು ಉಂಟು. ಬೇರೆಯಾಗಲೆಂದೆ ಬೇರೆಯಾಗುವುದು ಉಂಟು. ಸೇರಲೆಂದೇ ಸೇರುವುದು ಉಂಟು. ಮುಕ್ತಿಯಲ್ಲಿ ನಾವು ದೇವರನ್ನು ಸೇರುತ್ತೇವೆ. ಸೇರಲೆಂದೆ ಸೇರುವುದು ಮತ್ತೆ ಬೇರೆಯಾಗಲಲ್ಲ. ಅದು ಅದ್ವೈತ ಶಾಶ್ವತ.

ಈಗ ರಾಮ ದಶರಥನನ್ನು ಭೇಟಿಯಾಗುತ್ತಿದ್ದಾನೆ. ಈ ಸೇರುವಿಕೆ ಬೀಳ್ಕೊಡುವ ಸಲುವಾಗಿ. ಹೋಗಿ ಬರುವೆನೆಂದು ಹೇಳುವುದಕ್ಕಾಗಿ ಭೇಟಿಯಾಗುತ್ತಿರುವುದು. ಈ ಭೇಟಿ ಅವರಿಬ್ಬರ ಕೊನೆಯ ಭೇಟಿಯಾಗಲಿದೆ.

ರಾಜಭವನದ ದ್ವಾರದಲ್ಲಿ ಬಂದು ನಿಂತ ರಾಮ ಅಲ್ಲಿ ನಿಂತಿರುವ ದಶರಥನ ಪ್ರಿಯ ಸಾರಥಿಯೂ, ಪ್ರಧಾನ ಸಚಿವನೂ ಆದ ಸುಮಂತ್ರನಲ್ಲಿ ನಾನು ಬಂದ ವಿಷಯವನ್ನು ತಂದೆಗೆ ತಿಳಿಸು ಎಂದು ಹೇಳಿದ.

ಕಮಲನಯನ, ಶ್ಯಾಮವರ್ಣ, ನಿರುಪಮ, ಚಿಕ್ಕವಯಸ್ಸಿನಲ್ಲಿಯೇ ಆತ್ಮದಿಂದ, ಅಂತರಂಗದಿಂದ, ಗುಣಗಣಗಳಿಂದ ಬಹುದೊಡ್ಡವನಾಗಿ ಮುಗಿಲೆತ್ತರಕ್ಕೆ ಬೆಳೆದುನಿಂತ ರಾಮನನ್ನು ನೋಡಿ, ನಿಶ್ಚಿತವಾದ ರಾಮ ವಿಯೋಗದಿಂದ ದುಃಖಿತನಾಗಿ ಒಳಗೆ ಹೋಗಿ ದಶರಥನನ್ನು ಕಾಣುತ್ತಾನೆ ಸುಮಂತ್ರ. ಜಗತೀನಾಥನೇ ಹೌದು ದಶರಥ ಆದರೀಗ ಅನಾಥ. ಅವನಿಗೆ ರಾಮನೇ ಸರ್ವಸ್ವ ಅಂತಹ ರಾಮನ ಕುರಿತಾಗಿ ಶೋಕಿಸುತ್ತಿದ್ದಾನೆ. ಅಂತಹ ದಶರಥನಿಗೆ ಜಯಕಾರ ಹಾಕಿ ವಂದಿಸಿ ರಾಮ ಬಂದ ವಿಷಯ ಹೇಳಲು ಹೊರಟಾಗ ಸುಮಂತ್ರನ ಧ್ವನಿ ಕಂಪಿಸಿದೆ, ಭಯದಿಂದ ನಡುಗಿದೆ. ಪುರುಷಸಿಂಹನಾದ, ರಾಜಗುಣಗಳೆಲ್ಲವೂ ಇರುವ ನಿನ್ನ ಮಗ ಸಂಪೂರ್ಣವಾದ ತನ್ನ ಸಂಪತ್ತನ್ನು ದಾನ ಮಾಡಿ, ತನ್ನೆಲ್ಲ ಸಹೃದರನ್ನು ಕಂಡು ಕೊನೆಯದಾಗಿ ನಿನ್ನನ್ನು ನೋಡಿ ಹೇಳಿಹೋಗಲು ಬಂದಿದ್ದಾನೆ ಎನ್ನುವಾಗ ಸುಮಂತ್ರನಿಗೆ ಹೊಟ್ಟೆಯುರಿದಿದೆ. ಯಾರು ಊರಿನಲ್ಲಿದ್ದರೆ ಊರಿಗೆ ಕ್ಷೇಮವೋ, ಊರಿಗೆ ಊರೋ ಬಯಸುತ್ತದೆಯೋ, ಯಾರಿಲ್ಲದಿದ್ದರೆ ಅಸಂಖ್ಯ ಹೃದಯಗಳಿಗೆ ನೋವಾಗುತ್ತದೆಯೋ, ಊರಿಗೆ ಕತ್ತಲಾವರಿಸುತ್ತದೆಯೋ ಅಂತಹವನು ಕಾಡಿಗೆ ಹೋಗುತ್ತಿದ್ದಾನೆ. ಸಿಂಹಾಸನಕ್ಕೆ ಅವನಿಗಿಂತ ಅರ್ಹರಿಲ್ಲ ಆದರೆ ಅವನಿಗೆ ಸಿಂಹಾಸನವಿಲ್ಲ. ಹೊಟ್ಟೆಯುರಿಯದೇ ಇನ್ನೇನು?

ದಶರಥನು ಸುಮಂತ್ರನಿಗೆ ಎಲ್ಲ ತಾಯಂದಿರನ್ನು ಕರೆ ತಾ ಎಂದಾಗ ಹೋಗಿ ಅವನ ರಾಣಿಯರಿಗೆ ಹೇಳಿ ಕರೆತಂದ. ಹೋಗಿಬಾರೆಂದು ಹೇಳಲು ಅವರೆಲ್ಲರಿಗೂ ಅವಕಾಶ.  ದಶರಥನ ಅಂತಃಪುರದ ಸ್ತ್ರೀಯರೆಲ್ಲ, ಪತ್ನಿಯರೆಲ್ಲ ಕೌಸಲ್ಯೆಯನ್ನು ಮುಂದಿಟ್ಟುಕೊಂಡು ಬಂದರು. ಎಲ್ಲರೂ ಬಂದಮೇಲೆ ದೊರೆ ಸುಮಂತ್ರನಿಗೆ ರಾಮನನ್ನು ಕರೆ ತಾ ಎಂದಾಗ ಕ್ಷಿಪ್ರವಾಗಿ ರಾಮ, ಲಕ್ಷ್ಮಣ, ಸೀತೆಯನ್ನು ಕರೆತರುತ್ತಿದ್ದಾನೆ.

ರಾಮ ದೂರದಿಂದ ಅಲ್ಲಿಂದಲೇ ಕೈಮುಗಿದು ಬರುತ್ತಿದ್ದಾನೆ. ತನ್ನೆಲ್ಲದನ್ನೂ ಕಳೆದುಕೊಂಡರೂ ಅಷ್ಟು ವಿನಯ ರಾಮನಿಗೆ, ತಂದೆಗೆ ಕೈಮುಗಿದು ಬರುತ್ತಿದ್ದಾನೆ. ಅವನನ್ನು ಅಷ್ಟು ದೂರದಿಂದ ನೋಡಿದ ದಶರಥನಿಗೆ ತಡೆಯಲಾಗಲಿಲ್ಲ, ಮುಪ್ಪಿನ ದಶರಥ ಅತಿವೇಗವಾಗಿ ಸಾಗಿ ಅವನನ್ನು ತಲುಪುವ ಮೊದಲೇ ಮೂರ್ಛೆತಪ್ಪಿ ಅಲ್ಲಿಯೇ ಬಿದ್ದ. ಅದು ಮುಂದೆ ಬರಲಿರುವ ರಾಮನ ವಿಯೋಗ. ಆ ಒಂದು ಭಾವೋನ್ಮಾದವನ್ನು ನಾವು ಗಮನಿಸಬೇಕು. ಆ ಚಕ್ರವರ್ತಿಯು ಧರಗುರುಳಿ ಬಿದ್ದ! ಎಚ್ಚರವಿಲ್ಲ ದೊರೆಗೆ.

ಧರೆಗುರುಳಿದ ದಶರಥನ ಬಳಿ ಧಾವಿಸಿದರು ರಾಮ ಲಕ್ಷ್ಮಣರು. ಸಾವಿರಾರು ಸ್ತ್ರೀಯರ ಆರ್ತನಾದ, ಹಾಹಾಕಾರ ಪ್ರತಿಧ್ವನಿಸಿತು ಅಂತಃಪುರದಲ್ಲಿ. ಆಗಲೂ ಅವರೆಲ್ಲರೂ 'ಹಾ ರಾಮ' ಎಂದೇ ಆರ್ತನಾದ ಮಾಡಿದ್ದರಂತೆ! ಸೀತೆಯೊಡಗೂಡಿ ರಾಮಲಕ್ಷ್ಮಣರು ದಶರಥನನ್ನು ತಬ್ಬಿ ಮೇಲೆತ್ತಿ ಕರೆತಂದು ಪರ್ಯಂಕದಲ್ಲಿ ಕೂರಿಸಿದಾಗ ದಶರಥನ ಪರಿಸ್ಥಿತಿಗೆ ಕಣ್ಣೀರು ಹಾಕಿದರು ರಾಮ-ಲಕ್ಷ್ಮಣ-ಸೀತೆಯರು. ಸೀತೆಗದು ಸಹಜ; ದಶರಥ ಹಾಗೂ ಕೌಸಲ್ಯೆ ಇಬ್ಬರಿಗೂ ಪ್ರೀತಿಯ ಸೊಸೆ ಸೀತೆ. ಮಗಳಂತೆಯೇ ಆಕೆ.

ಸ್ವಲ್ಪ ಸಮಯದ ಬಳಿಕ ಎಚ್ಚರವಾದಾಗ ಮತ್ತೆ ಶೋಕಸಾಗರದಲ್ಲಿ ಮುಳುಗಿದ ದಶರಥನಿಗೆ ಹೀಗೆಂದನಂತೆ ರಾಮ, ಮಹಾಪ್ರಭುವೆ ಹೋಗಿ ಬರುವೆ ನಾನು, ನಮ್ಮೆಲ್ಲರ ಒಡೆಯ ನೀನು, ದಂಡಕಾರಣ್ಯಕ್ಕೆ ಹೊರಟೆ, ಲಕ್ಷ್ಮಣ ಮತ್ತು ಸೀತೆಯರ ಒಡಗೂಡಿ. ಅವರಿಗೆ ಎಷ್ಟು ಬೇಡವೆಂದರೂ ಕೇಳಲಿಲ್ಲ ಹಾಗಾಗಿ ನಮ್ಮೆಲ್ಲರನ್ನೂ ಹರಸು. ಅಪ್ಪಣೆ ಕೊಡು. ಶೋಕವನ್ನು ಬಿಡು‌ ಎಂದಾಗ ದಶರಥ ರಾಮನ ನೋಡಿ ನುಡಿದನಂತೆ - ಒಂದು ಕಾರ್ಯ ನಡೆಸಿಕೊಡು ನನಗಾಗಿ, ನನ್ನನ್ನು ನಿಗ್ರಹಿಸಿ ಸೆರೆಗೆತಳ್ಳಿ ನೀನೇ ಅಯೋಧ್ಯೆಗೆ ರಾಜನಾಗು. ಇದೊಂದೇ ದಾರಿ ಕಾಣುತ್ತಿರುವುದು ನನಗೆ. ರಾಮನಿಗೆ ಹೇಗಾಗಬೇಡ? ರಾಮ ಮತ್ತೆ ಕೈಮುಗಿದು ಹೇಳಿದನಂತೆ - ಇನ್ನು ಸಾವಿರ ವರ್ಷಕ್ಕೆ ಪೃಥ್ವಿಗೆ ನೀನೇ ದೊರೆಯಾಗಿರು. ನಾನು ವನವಾಸಕ್ಕೆ ಹೋಗುತ್ತೇನೆ, ನಿನ್ನ ಮಾತು ಸುಳ್ಳಾಗಲು ನಾ ಬಿಡಲಾರೆ, ನಿನ್ನ ಮಿಥ್ಯೆಗೆ ನಾನು ಕಾರಣನಾಗಕೂಡದು. ಬೇಸರಿಸಬೇಡ ಅಪ್ಪಾ, ಕೇವಲ 9 ಮತ್ತು 5 ವರ್ಷ ವನದಲ್ಲಿ ವಿಹರಿಸಿ ಮರಳಿಬಿಡುವೆ, ಎನ್ನುವಾಗ ಕೈಕೇಯಿ ಹಿಂದಿನಿಂದ ದಶರಥನನ್ನು ತಿವಿಯುತ್ತಿದ್ದಾಳೆ! ಒಪ್ಪಿಗೆ ಕೊಡು ಎಂಬುದಾಗಿ. ದಶರಥನಿಗೆ ಹೋಗಿ ಬಾ ಎನ್ನಲೂ ಸ್ವರ ಬರುತ್ತಿಲ್ಲ. ಅನ್ಯಮಾರ್ಗವಿಲ್ಲದೇ, ಆರ್ದ್ರನಾಗಿ ಹೇಳಿದನಂತೆ; ಶ್ರೇಯಸ್ಸಿಗಾಗಿ, ಬೇಗ ಪುನರಾಗಮನವಾಗುವಂತೆ ಹೋಗಿ ಬಾ. ನಿನಗೇನೂ ತೊಂದರೆ ಬಾರದಿರಲಿ ಅಲ್ಲಿ. ಮಗೂ, ಹೋಗಿ ಬಾ. ನಿನ್ನನ್ನು ಬದಲಿಸಲು ಸಾಧ್ಯವಿಲ್ಲ, ಆದರೆ ಇಂದೊಂದು ರಾತ್ರಿ ಉಳಿದು ಹೊರಡು. ನಾನು ಹಾಗೂ ಕೌಸಲ್ಯೆ ಇಂದು ರಾತ್ರಿಯಿಡೀ ನಿನ್ನನೋಡುವ ಅವಕಾಶ ಕೊಡು, ಆಗಲಾದರೂ ಬದುಕಿಯೇನು. ಸತ್ಯದ ಮೇಲಾಣೆ ನೀನು ಹೋಗುವುದು ನನಗೆ ಸ್ವಲ್ಪವೂ ಇಷ್ಟವಿಲ್ಲ. ಸಮ್ಮತವಲ್ಲ ನನಗೆ. ವಂಚನೆಯಾಗಿದೆ ನನಗೆ. ಬೂದಿ ಮುಚ್ಚಿದ ಕೆಂಡದಂತೆ ನನ್ನ ಮನೆಯೊಳಗಿದ್ದು ಶತ್ರುವೇ ಪತ್ನಿಯಾಗಿದ್ದು ಮೋಸ ಮಾಡಿದಳು. ಎಂತಹಾ ಕ್ರೂರಿ, ಪಾಪಿ, ರಾಕ್ಷಸಿ ಇವಳು, ಆದರೆ ನನಗೆ ಗೊತ್ತೇ ಆಗಲಿಲ್ಲ. ರಘುಕುಲದ ಚರಿತ್ರೆಗೆ ಮುಳ್ಳು ಇವಳು, ನಾಶ ಮಾಡಲೆಂದೇ ಬಂದವಳು. ನನಗಾದ ಮೋಸಕ್ಕೆ ನೀನು ಪರಿಹಾರ ಮಾಡುತ್ತಿರುವೆ, ಕಷ್ಟ ಪಡುತ್ತಿರುವೆ. ಇವಳಿಂದಾಗಿ ನಿನ್ನನ್ನು ವನವಾಸಕ್ಕೆ ಕಳುಹಿಸಬೇಕಾಗಿ ಬಂದಿದೆ ಎಂದಾಗ ರಾಮನಿಗೆ ಮನಸ್ಸಿಗೆ ಬಂದದ್ದು ಒಂದೇ ವಿಷಯ, ಇದೊಂದು ರಾತ್ರಿ ಉಳಿದು ಹೋಗು. ಆದರೆ ಮಾತಿರುವುದು - ಇಂದೇ ಹೋಗಬೇಕು ಎಂಬುದಾಗಿ, ಕೈಕೇಯಿ ಹಾಗೆಯೇ ಕೇಳಿದ್ದಳು.

ದೈನ್ಯದಿಂದ ಹೇಳಿದನಂತೆ ರಾಮ - ಅಪ್ಪ, ಇಂದು ನಾನು ಕಾಡಿಗೆ ಹೋದರೆ ಯಾವ ಗುಣಗಳು ಪ್ರಾಪ್ತವಾಗುವವೋ ನಾಳೆ ಯಾರು ಕೊಡುವವರು ಅದನ್ನು? ಸತ್ಯವಚನದ ಗುಣ ಸಿದ್ಧಿಸಬೇಕಾದರೆ ಇಂದೇ ಹೋಗಬೇಕು. ಇಂದು ರಾತ್ರಿಯಿಂದ ನಾಳೆ ಬೆಳಗ್ಗಿನವರೆಗೆ ಏನೇನು ಪ್ರೀತಿಯಿಂದ ಮಾಡಬೇಕೆಂದುಕೊಂಡಿದ್ದೆಯೋ ಅದೆಲ್ಲ ಸೇರಿಸಿ ಪ್ರೀತಿಯಿಂದ ಕೇಳುವೆ ವನಪರಿಕ್ರಮಣಕ್ಕೆ ಅಪ್ಪಣೆ ಕೊಡು. ನಾನು ತ್ಯಜಿಸಿದ ಈ ರಾಷ್ಟ್ರವನ್ನು - ಜನಪೂರ್ಣ ಧನಪೂರ್ಣ ಅಯೋಧ್ಯೆಯನ್ನು ಭರತನಿಗೆ ನೀಡು. ಇದೇ ನನ್ನಿಷ್ಟ. ಮತ್ತೆ ಚರ್ಚೆಯಿಲ್ಲ. ದುಃಖವನ್ನು ದೂರಮಾಡು. ನನ್ನ ಪುಣ್ಯದ ಮೇಲಾಣೆ ನನ್ನಂತರಂಗದ ಮಾತಿದು ಒಂದು ಕ್ಷಣವೂ ಇಲ್ಲಿರಲಾರೆ. ನನಗೆ ಬೇರೆ ದಾರಿ ಇಲ್ಲ. ಕೈಕೇಯಿಗೆ ನಾನು ಮಾತು ಕೊಟ್ಟಿದ್ದೇನೆ ವನಕ್ಕೆ ಹೋಗುವೆನೆಂದು, ಹಾಗಾಗಿ ಬೇಸರಿಸಬೇಡ. ತಂದೆಯೆಂದರೆ ದೇವರು. ಈ ವಾಕ್ಯವನ್ನು ದೇವರವಾಕ್ಯವೆಂದೇ ಭಾವಿಸುವೆ. ಮತ್ತು ಇವರೆಲ್ಲರನ್ನೂ ಸಂತೈಸುವ ಹೊಣೆ ನಿನ್ನ ಮೇಲಿದೆ. ನೀನೆ ಅತ್ತರೆ ಇವರಿಗೆ ಸಮಾಧಾನ ಹೇಳುವರಾರು? ಹಾಗಾಗಿ ಶೋಕಿಸದಿರು ಎಂದಾಗ ದೊರೆ ದುಃಖ ಶೋಕದಿಂದ ಕೂಡಿ ಮಗನನ್ನು ಗಾಢವಾಗಿ ತಬ್ಬಿಕೊಂಡು ಮೂರ್ಛೆ ತಪ್ಪಿದ. ಅದನ್ನು ಕಂಡ ಸುಮಂತ್ರನೂ ಅಳುತ್ತಾ ಎಚ್ಚರ ತಪ್ಪಿದ. ಹಾಹಾಕಾರ ಆವರಿಸಿತು.

ಮತ್ತೆ ಎಚ್ಚರವಾದಾಗ ರೋಷ ಬಂತಂತೆ ಸುಮಂತ್ರನಿಗೆ, ತಲೆ ಕೊಡವಿದ, ಮುಖ ಕೆಂಪಾಯಿತು, ನಿಟ್ಟುಸಿರು ಬಂತು, ಹಲ್ಲು ಕಡಿಯುತ್ತಾ, ಅಶುಭವಾದ ಸಂತಾಪಕ್ಕೆ ಒಳಗಾಗಿ ಕೈಕೇಯಿಗೆ ವಾಗ್ಬಾಣಗಳ ಮೂಲಕ ಆಕೆಯನ್ನು ಕತ್ತರಿಸುವಂತೆ, ಆಕೆಯ ಹೃದಯವು ಕಂಪಿಸುವಂತೆ ನುಡಿದನಂತೆ. ಪತಿಯನ್ನು ಬಿಟ್ಟೆ, ಸೂರ್ಯನಂಥವನನ್ನು ಬಿಟ್ಟೆ - ಪತಿಘಾತಿನಿ, ಕುಲಘಾತಿನಿ ನೀನು. ಇನ್ನು ನೀನು ಮಾಡಬಾರದ್ದು ಯಾವುದೂ ಇಲ್ಲ. ಮಹೇಂದ್ರನಂತೆ ಅಜೇಯನೂ, ಮಹಾಪರ್ವತದಂತೆ ಅಕಂಪನೂ, ಮಹಾಸಮುದ್ರದಂತೆ ಅಕ್ಷೋಭನೂ ಆದಂತಹ ದೊರೆಯನ್ನು ನಿನ್ನ ಪಾಪಕೃತ್ಯದಿಂದ ನೋಯಿಸುತ್ತಿರುವೆ. ದಶರಥನನ್ನು ಅಪಮಾನಿಸಬೇಡ. ನಿನಗೆ ಅಶನ - ವಸನ - ಭವನ ಕೊಟ್ಟವನು ಕೇಳಿದ ವರಗಳ ಕೊಟ್ಟವನು. ಕೋಟಿ ಮಕ್ಕಳಿಗಿಂತ ಪತಿಯ ಇಚ್ಛೆ ದೊಡ್ಡದು - ಸತಿಯಾದವಳಿಗೆ! ಮಹತ್ವ ಅಲ್ಲಿ ಕೊಡಬೇಕು. ಇಕ್ಷ್ವಾಕುವಂಶಕ್ಕನುಸಾರವಾಗಿ ಹಿರಿಯ ಪುತ್ರ ದೊರೆಯಾಗುತ್ತಾನೆ. ಕುಲಪರಂಪರೆಗೆ ಲೋಪ ತರಬೇಡ. ಇಷ್ಟಕ್ಕೂ ಮೀರಿ ನಿನ್ನ ಮಗನೇ ದೊರೆಯಾಗುವುದಾದರೆ ಆಗಲಿ ನಾವೆಲ್ಲ ರಾಮನೊಡನೆ ಹೋಗುವೆವು. ನಾನು ಮಾತ್ರವೇನು ಈ ರಾಜ್ಯದ ಯಾವೊಬ್ಬ ಬ್ರಾಹ್ಮಣನೂ ಇರಲಾರ, ಯಜ್ಞಯಾಗಗಳು ನಡೆಯಲಾರವು, ಇದು ಅಮಂಗಲಭೂಮಿಯಾದೀತು. ಮರ್ಯಾದೆ ಮೀರಿದ ಕೆಲಸ ಮಾಡುತ್ತಿರುವೆ ನೀನು. ಇಷ್ಟೆಲ್ಲ ಮಾಡಿದರೂ ಭೂಮಿಯೇಕೆ ಬಾಯ್ಬಿಡಲಿಲ್ಲ, ಮಹಾಬ್ರಹ್ಮರ್ಷಿಗಳ ವಾಗ್ದಂಡಗಳು ನಿನ್ನನ್ನೇಕೆ ದಹಿಸಲಿಲ್ಲ ಎಂದು ಹೇಳಿ ಅವಳ ಕುಲದ ಉಲ್ಲೇಖ ಮಾಡುತ್ತಾನೆ. ಮಾವಿನ ಮರ ಕಡಿದು ಬೇವು ನೆಟ್ಟು, ಅದಕ್ಕೆ ಹಾಲು, ಸಕ್ಕರೆ, ಜೇನು ಹಾಕಿ ಬೆಳೆಸಿದರೂ ಅದು ಬದಲಾಗದು. ಏಕೆಂದರೆ ಅದರ ತಾಯಿಯೂ ಬೇವು. ನಿನ್ನ ತಾಯಿಯೂ ಇಂಥವಳೇ ಆಗಿರುವಾಗ ನೀನು ಹಾಗೆಯೇ ಇರಬೇಕಲ್ಲ. ಒಂದು ಗಾದೆ ಹೇಳಿದ. ಬೇವಿನ ಮರದಿಂದ ಜೇನು ಸುರಿಯಲು ಸಾಧ್ಯವಿಲ್ಲ. ನಿನ್ನ ತಾಯಿಯ ದುರ್ಬುದ್ಧಿಯನ್ನು ಬಿಚ್ಚಿಡುವೆನೆಂದು ಹೇಳಿದ.

ಕೈಕೇಯಿಯ ತಂದೆ ಅಶ್ವಪತಿಗೆ ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳ ಭಾಷೆ ತಿಳಿಯುವ ವರವಿತ್ತು. ಒಂದು ದಿನ ಅಂತಃಪುರದಲ್ಲಿ ಅಶ್ವಪತಿ ಹಾಗೂ ಅವನ ರಾಣಿ ಆಂದರೆ ಕೈಕೇಯಿಯ ತಾಯಿ ಇಬ್ಬರೇ ಇದ್ದಾಗ ಹಕ್ಕಿಯೊಂದು ಕೂಗಿತಂತೆ. ಅದನ್ನು ಕೇಳಿ ಜೋರಾಗಿ ನಕ್ಕುಬಿಟ್ಟನಂತೆ. ರಾಣಿಗೆ ಕೋಪ ಬಂದು ದೊರೆಯೇ ನಕ್ಕ ಕಾರಣ ಹೇಳು ಎಂದಾಗ ರಾಜನು ನಾನು ಕಾರಣ ಹೇಳಿದ್ದೇ ಹೌದಾದರೆ ಕೂಡಲೆ ನಾನು ಸಾಯುತ್ತೇನೆ ಎಂದನಂತೆ. ಏಕೆಂದರೆ ನನಗೆ ವರ ಕೊಟ್ಟ ಸಾಧು ನಿನಗೆ ಎಲ್ಲ ಪ್ರಾಣಿ ಪಕ್ಷಿಗಳ ಭಾಷೆ ತಿಳಿಯುತ್ತದೆ ಅದನ್ನು ಬೇರೆಯವರಿಗೆ ಹೇಳಿದರೆ ಕೂಡಲೇ ಸಾಯುವೆ ಎಂದಿದ್ದರು. ಸಾವು ಬರುತ್ತದೆ ಎಂದರೂ ನನ್ನ ಕುರಿತಾಗಿ ನಗಲು ಕಾರಣವೇನು ನನಗೆ ವಿಷಯ ತಿಳಿಯಲೇಬೇಕೆಂದು ಆಕೆ ಹಠಹಿಡಿದಳಂತೆ. ಸತ್ತರೆ ಸಾಯಿ, ಬದುಕಿದರೆ ಬದುಕು; ಹೇಳು ನನಗೀಗ. ನನ್ನ ವಿಷಯದಲ್ಲಿ ನಗುವುದಕ್ಕೆ ನಾನು ಬಿಡುವುದಿಲ್ಲ, ಎಂದಳು. ಸಂದಿಗ್ಧ ಸ್ಥಿತಿ - ದೊರೆಗೆ. ಆತ ಒಮ್ಮೆ ಆ ಗುರುವನ್ನು ಕೇಳಿ ಹೇಳುವೆನೆಂದು ಹೇಳಿದ. ಗುರುವಿನ ಬಳಿ ವಿಷಯ ಹೇಳಿದಾಗ ಅವರು ವಿಷಯ ಹೇಳುವುದಾದರೆ ನಿನಗೆ ಸಾವು ನಿಶ್ಚಿತ ಎಂದರು. ಪತಿಯ ಜೀವಕ್ಕಿಂತ ವಿಷಯ ತಿಳಿಯುವುದೇ ಹೆಚ್ಚಾದರೆ ಏನು ಬೇಕಾದರೂ ಮಾಡಿಕೊಳ್ಳಲಿ, ಸತ್ತರೆ ಸಾಯಲಿ, ಆಕೆಯ ಯೋಚನೆ ಬಿಡು ಎಂದರಂತೆ. ನೇರವಾಗಿ ಮನೆಗೆ ಹೋಗಿ ಅವಳನ್ನು ಹೊರಗೆ ಹಾಕಿದನಂತೆ ಅಶ್ವಪತಿ. ಹಾಗೆಯೇ ನೀನೂ ಕೂಡ. ನಿನ್ನಮ್ಮನನ್ನು ಕಳಿಸಿದ ನಂತರ ಕುಬೇರನಂತೆ ವಿಹರಿಸಿದ ಅಶ್ವಪತಿ. ದುರ್ಜನರ ಮಾತು ಕೇಳಿ ರಾಜನಿಂದ ಬೇಡದ ಕೆಲಸ ಮಾಡಿಸುತ್ತಿರುವೆಯಲ್ಲ, ಪಾಪದರ್ಶಿನಿ, ಗಾದೆ ಸತ್ಯವಾಯಿತು - ನಿನ್ನ ತಾಯಿಯಂತೆಯೇ ಆದೆ. ಹೀಗೆ ಮಾಡದಿರು. ದೊರೆಯ ಇಚ್ಛೆ ನಡೆಸು. ಜನರಿಗೆ ಗತಿಯಾಗು. ಪಾಪಿಗಳ ಪ್ರಚೋದನೆಗೊಳಗಾಗಿ ದೇವತೆಗಳ ದೊರೆಯಂತಹ ನಿನ್ನ ಪತಿಯನ್ನು ಮಾತಿನಲ್ಲಿ ಕಟ್ಟಿಹಾಕಿ ಆತನಿಂದ ಕೆಟ್ಟ ಕೆಲಸವನ್ನು ಮಾಡಿಸಬೇಡ. ರಾಮ ಪಟ್ಟಾಭಿಷಿಕ್ತನಾಗಿ ರಾಜನಾಗಲಿ ಇಲ್ಲವಾದರೆ ನಿನಗೆ ಶಾಶ್ವತ ಅಪವಾದ ಬಂದೀತು, ಲೋಕ ನಿಂದಿಸೀತು, ದಾರಿಹೋಕರು ನಿನ್ನನ್ನು ನೋಡಿ ಅಸಹ್ಯಪಟ್ಟಾರು, ಕೋಸಲ ಮಾತ್ರವಲ್ಲ ವಿಶ್ವವ್ಯಾಪಿ ನಿನ್ನ ನಿಂದೆ ಪಸರಿಸೀತು. ಹಾಗಾಗಿ ರಾಮ ಕಾಡಿಗೆ ಹೋಗುವಂತೆ ಮಾಡದಿರು, ರಾಮನದ್ದೇ ರಾಜ್ಯವಿದು, ನ್ಯಾಯತಃ, ಧರ್ಮತಃ ಅವನಿಗೇ ಸಲ್ಲಬೇಕು, ಸಲ್ಲಲಿ. ನೀನು ನಿಶ್ಚಿಂತೆಯಿಂದಿರು. ರಾಮನನ್ನುಳಿದು ಇನ್ನಾರೂ ಅಯೋಧ್ಯೆಯನ್ನು ರಕ್ಷಿಸಲು ಸಮರ್ಥರಲ್ಲ, ಬೇರೆಯಾರೂ ಅವನಂತೆ ಪಾಲಿಸಲು ಸಾಧ್ಯವಿಲ್ಲ. ರಾಮ ಬಿಟ್ಟು ಹೋದರೆ ಜನರು ಸಹಕರಿಸುವುದಿಲ್ಲ, ಸೇನೆಯಾಗಲಿ, ಪ್ರಜೆಗಳಾಗಲಿ ಒಪ್ಪುವುದಿಲ್ಲ. ರಾಮನು ಯುವರಾಜನಾದಮೇಲೆ ದಶರಥ ವಾನಪ್ರಸ್ಥಕ್ಕೆ ಹೋಗಲಿ. ಇಕ್ಷ್ವಾಕು ವಂಶದ ಪೂರ್ವಜರ ನಡೆಯಿದು. ವಯಸ್ಸಾದ ನಂತರ, ಮೊಮ್ಮಗುವನ್ನು ಕಂಡಮೇಲೆ ಮಕ್ಕಳಿಗೆ ಪಟ್ಟಕಟ್ಟಿ ತಾನು ವಾನಪ್ರಸ್ಥಕ್ಕೆ ಹೋಗುವುದು.

ಮುಕ್ತವಾಗಿ ನುಡಿದ ಸುಮಂತ್ರ. ಕೆಲವು ಮಾತುಗಳನ್ನು ಸಮಾಧಾನದಿಂದ ಹಾಗೂ ಕೆಲವು ದಂಡಸದೃಶ ಮಾತುಗಳಿಂದ ರಾಜಸಭೆಯ ಮಧ್ಯೆ ಕೈಕೇಯಿಯನ್ನು ಕ್ಷೋಭೆಗೊಳಿಸಿದ ಸುಮಂತ್ರ. ಕೆಲವೊಮ್ಮೆ ಕೆಂಗಣ್ಣಿನಿಂದ, ಕೆಲವೊಮ್ಮೆ ಕೈಮುಗಿದು. ಕೈಕೇಯಿ ಕೊಂಚವೂ ವಿಚಲಿತಳಾಗಲಿಲ್ಲ, ಬೇಸರವೂ ಇಲ್ಲ, ಮುಖವರ್ಣವೂ ಬದಲಾಗಲಿಲ್ಲ. ರಾಮ ಹೇಗೆ ವನವಾಸಕ್ಕೆ ಹೋಗುವೆನೆಂದು ದೃಢನಿಶ್ಚಯ ಮಾಡಿದ್ದಾನೋ ಹಾಗೆಯೇ ಇವಳೂ, ರಾಮನನ್ನು ಕಳಿಸಲು ದೃಢನಿಶ್ಚಯ ಮಾಡಿದ್ದಾಳೆ.

ಒಳ್ಳೆಯದಕ್ಕೆ ಹಠ ಬೇಕು. ಕೆಟ್ಟದ್ದಕ್ಕೆ ಹಠ ಬಂದರೆ ಆಗುವ ಅನಾಹುತ ಅಪಾರ.

ಆಗ ದಶರಥ ಕಣ್ಣೀರು, ನಿಟ್ಟುಸಿರಿನೊಂದಿಗೆ ಹೀಗೆಂದ. ಸುಮಂತ್ರನೇ ರಾಮ ವನವಾಸಕ್ಕೆ ಹೋಗುವುದಾದರೆ ಹೋಗಲಿ ಅವನೊಡನೆ ಮುತ್ತು ರತ್ನಗಳೊಡನೆ ಕೂಡಿದ ಚತುರಂಗ ಸೈನ್ಯವೂ ಹೋಗಲಿ, ಇದು ನನ್ನ ಆಜ್ಞೆ. ಕೂಡಲೇ ತಯಾರಿ ಮಾಡು.
ಕಲಾವಿದರು ಹೊರಡಲಿ, ಅಯೋಧ್ಯೆಯ ಮಹಾಧನಿಕರಾದ ವೈಶ್ಯಶ್ರೇಷ್ಠರೆಲ್ಲ ಹೋಗಲಿ. ರಾಮನ ಸೇವಕರೆಲ್ಲ ಹೋಗಲಿ. ಶ್ರೇಷ್ಠವಾದ ಆಯುಧಗಳು, ಅಯೋಧ್ಯೆಯ ಪ್ರಜಾಪ್ರಮುಖರು, ಬೇಡರು ಹೋಗಲಿ. ಇಡಿಯ ಧನಕೋಶ ಧಾನ್ಯಕೋಶವೂ ರಾಮನನ್ನು ಹಿಂಬಾಲಿಸಲಿ. ಹೀಗೆ ಕಾಡನ್ನು ವಿಹರಿಸುತ್ತಾ ರಾಮ ನಮ್ಮನ್ನು ಮರೆಯಲಿ. ಕಾಡಿನಲ್ಲಿ ವಿಹರಿಸುತ್ತ, ಪ್ರಕೃತಿಯನ್ನು ಈಕ್ಷಿಸುತ್ತಾ ಯಜ್ಞಗಳನ್ನು ಮಾಡಲಿ. ಭರತ ಅಯೋಧ್ಯೆಯನ್ನು ಪಾಲಿಸಲಿ.

ದಶರಥ ಕಾಡಿನಲ್ಲಿಯೇ ನಾಡನ್ನು ಕಟ್ಟಿಕೊಡುವ ಪ್ರಯತ್ನದಲ್ಲಿದ್ದಾನೆ. ಇಷ್ಟಾಗುವಾಗ ಕೈಕೇಯಿಗೆ ಮುಖ ಒಣಗಿತು, ಗಂಟಲು ಕಟ್ಟಿತು, ಭಯವಾಯಿತು.
ಏಕೆಂದರೆ ವರದೊಳಗೆ ಇದು ಬಂದಿಲ್ಲ, ಪ್ರತಿಜ್ಞೆಯ ಕಟ್ಟಿನೊಳಗಿಲ್ಲ. ಇಡೀ ಅಯೋಧ್ಯೆಯೇ ರಾಮನ ಜೊತೆಯಿದೆ. ಕೈಕೇಯಿಗೆ ಮುಂದೇನು ಎಂಬ ಚಿಂತೆಯಾಯಿತು.

ಕೈಕೇಯಿ ಹೇಗೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾಳೆ? ರಾಮನ ವನವಾಸದ ಹಾದಿ ಹೇಗೆ ತೆರೆದುಕೊಳ್ಳುತ್ತದೆ? ಎಂಬುದನ್ನು ನಾಳೆಯ ಪ್ರವಚನದಲ್ಲಿ ನೋಡೋಣ...

#DhaaraRaamayan

No comments:

Post a Comment

Please leave your comments here.....