Dhaara Raamayana 33


#ಧಾರಾ_ರಾಮಾಯಣ - 26-07-2019 ದಿನ33
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ

ಅನ್ನವನ್ನು ಉಂಡು ಬದುಕುವುದು ದೇಹ; ಆನಂದವನ್ನು ಉಂಡು ಬದುಕುವುದು ಜೀವ. ರಾಮ ಮತ್ತು ರಾಮನಂಥವರು ಯಾರಿರುತ್ತಾರೋ ಅವರು ಎಲ್ಲರನೂ ಸೆಳೆಯುವರು ಮತ್ತು ಅವನನ್ನು ಕಂಡಾಗ ಆಕರ್ಷಿತರಾಗುವರು. ಅಂತಹವರೊಂದಿಗಿರುವುದು ಸುಖ.
ಕೌಸಲ್ಯೆಯು ಕಾಡಿಗೆ ಬರುತ್ತೇನೆಂದಳು, ಸೀತೆ ಬರುತ್ತೇನೆಂದು ಒಪ್ಪಿಗೆಯನ್ನೂ ಪಡೆದಳು. ಈಗ ಲಕ್ಷ್ಮಣನ ಸರದಿ. ಆತನು ಅಣ್ಣ, ನಾನು ನಿನ್ನೊಡನೆ ಕಾಡಿಗೆ ಬರುವೆ ಎಂದನು. ಅದಕ್ಕೆ ಕಾರಣ: ಅಣ್ಣನ ಸಾಂಗತ್ಯ, ಅಣ್ಣನೆಂದರೆ ಆತ ಸುಖ-ನಿಧಿ. ಅದು ಬಿಟ್ಟು ಆತನಿಗೆ ಬೇರಾವುದೂ ಬೇಡ.

ಸೀತಾ ರಾಮರ ಸಂವಾದಕ್ಕೆ ಲಕ್ಷ್ಮಣ ಸಾಕ್ಷಿ. ಲಕ್ಷ್ಮಣನಿಗೆ ದುಃಖ ತಡೆಯಲಾಗಲಿಲ್ಲ. ಇತ್ತ ಸೀತೆಗೆ ರಾಮನೊಡನೆ ಕಾಡಿಗೆ ಜೊತೆಗೆ ಬರಲು ಅಪ್ಪಣೆ ಸಿಕ್ಕಿದ ತಕ್ಷಣವೇ; ಲಕ್ಷ್ಮಣ ಅಣ್ಣನ ಕಾಲಿಗೆ ಬಿದ್ದು; ಕಾಡಿಗೆ ಹೋಗುವುದೇ ಹೌದಾದರೆ, ನಾನು ಧನುಷ್ಪಾಣಿಯಾಗಿ ನಾನು ಮುಂದಿರುವೆ, ನನ್ನ ಜೊತೆ ಹಿಂದಿನಿಂದ ಚಲಿಸು, ನನಗೆ ನೀನು ಬೇಕು, ನನಗೆ ಈ ದೈವ ಲೋಕ, ಸ್ವರ್ಗಲೋಕಗಳು ಬೇಡ ಎಂದು ರಾಮನ ಬಳಿ ಪರಿ ಪರಿಯಾಗಿ ಹೇಳಿದ.

ಆಗ ರಾಮನು ಯಥಾಪ್ರಕಾರ ಲಕ್ಷ್ಮಣನ ಮನಸ್ಸನ್ನು ಬದಲಿಸುವ ಪ್ರಯತ್ನ ಮಾಡುತ್ತಾನೆ.

ಆದರೆ ಒಪ್ಪದ ಲಕ್ಷ್ಮಣನು "ಈ ಮೊದಲು ನೀನು ಒಪ್ಪಿಗೆ ಕೊಟ್ಟಾಗಿದೆಯಲ್ಲಾ, ಈಗ ನೀನು ನಾ ಜೊತೆಗೆ ಬರಲು ಬೇಡ ಎನ್ನಲು ನಾನು ಮಾಡಿದ ತಪ್ಪಾದರು ಏನು??? "ನನ್ನ ಬುದ್ಧಿಯನು ನೀನು ಅನುಸರಿಸು" ಎಂದು ಹೇಳಿದ್ದೆ, ಅದೇ ನೀನು ಕೊಟ್ಟ ಒಪ್ಪಿಗೆ; ಮತ್ತೆ ಈಗ ಏಕೆ ಬೇಡ?" ಎಂದು ಕೇಳಿದ. ಹೀಗೆ ಸೂಕ್ಷ್ಮಮತಿಯಾದ ಲಕ್ಷ್ಮಣನು ಕೈ ಮುಗಿದು ಯಾಚಿಸುತ್ತಾ ಮುಂದೆ ಹೊರಟು ನಿಂತಿದ್ದಾನೆ.

ಆಗ ರಾಮನು "ರಾಮ ಲಕ್ಷ್ಮಣರಿಗಿರುವುದು ಪ್ರೀತಿ, ನೀನು ಧರ್ಮರಥ, ಎಂದೆಂದೂ ಸನ್ಮಾರ್ಗದಲ್ಲಿ ಇದ್ದವ, ನನಗಿಷ್ಟ, ನನ್ನ ಪ್ರಾಣವೇ ನೀನು, ನಾನು ಹೇಳಿದ್ದನ್ನ ಮೀರದವ, ನೀನು ತಮ್ಮನೂ ಹೌದು, ಹೆಚ್ಚಾಗಿ ಮಿತ್ರನೂ ಹೌದು. ಮತ್ತೆ ನಿನ್ನಲ್ಲಿ ದೋಷವೇನು ಇಲ್ಲ, ಬೇಡ ಅಂತೇನೂ ಅನಿಸಿಲ್ಲ. ಆದರೆ ನೀನು ನನ್ನ ಜೊತೆಗೆ ಬಂದರೆ ಕೌಸಲ್ಯೆ ಹಾಗೂ ಸುಮಿತ್ರೆಯನ್ನು ನೋಡಿಕೊಳ್ಳುವವರಾರು? ನಿನ್ನ ಅಭಿಪ್ರಾಯದ ಪ್ರಕಾರ ದಶರಥನು ಕೈಕೇಯಿಯ ಬಯಕೆಯ ಜಾಲದಲ್ಲಿ ಬದ್ಧ, ನಿನ್ನ ಪ್ರಕಾರ ಕೈಕೇಯಿಯು ಇವರಿಗೆ ಒಳ್ಳೆಯದು ಮಾಡಲು ಸಾಧ್ಯವಿಲ್ಲ, ನಿನ್ನ ಪ್ರಕಾರ ಭರತ ರಾಜ್ಯವನ್ನು ಪಡೆದಮೇಲೆ ಇವರನ್ನು ಮರೆತುಬಿಡಬಹುದು (ಇದೆಲ್ಲ ಲಕ್ಷ್ಮಣನ ಪ್ರಕಾರ, ರಾಮನ ವಿಚಾರಸರಣಿ ಬೇರೆಯಿದೆ). ಹಾಗಾಗಿ ಅವರಿಬ್ಬರನ್ನು ನೋಡಿಕೋ, ನನ್ನ ಮಾತು ಕೇಳು" ಎಂದು ಹೇಳಿದಾಗ...

ವಾಕ್ಯ ಕೋವಿದನಾದ ರಾಮನಿಗೆ ವಾಕ್ಯಜ್ಞನಾದ ಲಕ್ಷ್ಮಣನು ಈ ರೀತಿ ಹೇಳುವನು. ನಿನ್ನ ಪ್ರಭಾವದಿಂದಾಗಿ ಭರತನು ಕೌಸಲ್ಯೆ-ಸುಮಿತ್ರೆಯರನ್ನು ನೋಡಿಕೊಳ್ಳುತ್ತಾನೆ. ನಿನ್ನ ತೇಜಸ್ಸೇ ಹಾಗಿದೆ. ಅಕಸ್ಮಾತ್ ಭರತನು ತಾಯಂದಿರನ್ನು ನೋಡಿಕೊಳ್ಳದಿದ್ದರೆ  ನಾನು ಸುಮ್ಮನಿರಲಾರೆ. ಆದರೆ, ಕೌಸಲ್ಯೆ ನನ್ನಂತಹಾ ಸಾವಿರ ಜನರನ್ನು ಸಾಕಿಯಾಳು, ಮಹಾತಾಯಿ ಆಕೆ. ಸಾವಿರರನು ಸಾಕಿರುವ ಕೌಸಲ್ಯೆಯನು ನಾನು ಸಾಕುವುದೇ! ಆಕೆಯೇ ನಮ್ಮೆಲ್ಲರನು ಸಾಕಿಯಾಳು,ಅಂಥವರನ್ನು ನಾನು ಸಾಕುವುದೇ! ಆಕೆ ತನ್ನನ್ನು ತಾನೇ ಸಲಹಬಲ್ಲಳು, ಸುಮಿತ್ರೆಗೂ ಅವಳೇ ಆಶ್ರಯ. ಹಾಗಾಗಿ ನನ್ನನ್ನು ಅನುಚರನನ್ನಾಗಿ ಮಾಡೆಂದು ಹೇಳಿದನು.
ನಾನು ಧನುರ್ಬಾಣಗಳನ್ನು ಹಿಡಿದು ಭಟನಂತೆ, ಸೀತೆಯ ಅಂಗರಕ್ಷಕನಾಗಿ ಕೆಲಸ ಮಾಡುವೆ, ಗೆಡ್ಡೆ ಗೆಣಸುಗಳನ್ನು ಅಗೆದು(ಸಂಗ್ರಹಿಸಿ) ಕೊಡುವೆ, ನೀ ನಡೆಯುವಾಗ ಸದಾ ನಿನ್ನ ಮುಂದೆ ನಾನೇ ಹೋಗುವೆ, ಪೂಜೆಗೆ ಬೇಕಾದ ಸಾಹಿತ್ಯ-ಪರಿಕರಗಳನ್ನು ಮಾಡಿಕೊಡುವೆ, ಇದೆಲ್ಲ ನಾನೇ ಮಾಡುವೆ, ನೀನು ವೈದೇಹಿಯೊಡನೆ ಗಿರಿ-ಶಿಖರಗಳನ್ನು ನೋಡಿ ರಮಿಸು, ನಿನ್ನ ಎಲ್ಲಾ ಸೇವೆಯನ್ನು ನಾನೇ ಮಾಡುತ್ತೇನೆ ಎಂದಾಗ ರಾಮನು - ಹೋಗಿ ನಿನ್ನವರಿಗೆ ತಿಳಿಸಿ ಬಾ ಎಂದು ಹೇಳುವನು. ಅವಶ್ಯಕವಾದ ನಮ್ಮ ಆಯುಧಗಳು, ಕವಚಗಳು ಗುರುಸದನದಲ್ಲಿವೆ, ಕಾಡಿಗೆ ತೆರಳುವಾಗ ಅವುಗಳನ್ನು ಆಚಾರ್ಯ/ಗುರುಗಳಿಂದ ಕೇಳಿ ಪಡೆದುಕೊಂಡು ತಾ... ಎಂದನು.

ತನ್ನ ಬಳಗಕ್ಕೆಲ್ಲ ತಿಳಿಸಿ ಲಕ್ಷ್ಮಣನು ಆಯುಧಗಳನ್ನು ಗುರುಗಳಿಂದ ಸ್ವೀಕಾರ ಮಾಡುವನು. ಅವುಗಳನ್ನು ರಾಮನ ಮುಂದಿರಿಸಿ ತೋರಿಸಿದ.

ಇದ ನೋಡಿ ಸಂತೋಷವಾಗಿ ರಾಮನು ಈಗ ನಿನ್ನದೇ ಅಪೇಕ್ಷೆಯಲ್ಲಿದ್ದೆ, ಸಕಾಲಕ್ಕೆ ಬಂದೆ ಎಂದು ಹೇಳಿದನು. ಕಾರಣ: ನನ್ನದಾದ ವಸ್ತುವನ್ನು ದಾನ ಮಾಡಬೇಕು. ಸಹಾಯಕನಾಗಿ ನೀನು ಬೇಕು. ದಾನ ಯಾರಿಗೆಂದರೆ- ದಾನಗಳಲ್ಲಿ ಮೊದಲ ಹಕ್ಕಿರುವುದು ತಪಸ್ವಿಗಳಾದ ಬ್ರಾಹ್ಮಣರಿಗೆ, ಹಾಗಾಗಿ ದೃಢವಾದ ಗುರು-ಭಕ್ತಿಯುಳ್ಳ ತಪಸ್ವಿಗಳಾದ ಬ್ರಾಹ್ಮಣರನ್ನು ಆಯ್ಕೆ ಮಾಡು, ಅವರಿಗೆ ದಾನ. ಮತ್ತೆ, ಯಾರು ನಮ್ಮ ಸೇವೆಯನ್ನು ಮಾಡಿದ್ದಾರೆ ಅವರಿಗೆ ದಾನವನ್ನು ಮಾಡಬೇಕು. ಹಾಗೆಯೇ ವಸಿಷ್ಠರ ಪುತ್ರರಾದ ಆಚಾರ್ಯ ಸುಯಜ್ಞರನ್ನು ಕರೆ ತಾ ಎಂದು ಹೇಳಿದನು. ಅದರಂತೆಯೇ ಲಕ್ಷ್ಮಣನು ಸುಯಜ್ಞರ ಬಳಿ ತೆರಳಿ ಮಿತ್ರನೇ, ದುಷ್ಕರಕಾರಿಯಾದ ರಾಮನು ಬರಲು ಹೇಳಿರುವ; ಅವನ ಮನೆಗೆ ಬಾ ಎಂದು ರಾಮನ ಸಂದೇಶವನ್ನು ತಿಳಿಸುವನು. ಅದರಂತೆಯೇ ತಮ್ಮ ಸಂಧ್ಯಾವಂದನೆಯನ್ನು ಮುಗಿಸಿ ರಾಮನ ಬಳಿ ಲಕ್ಷ್ಮಣನೊಡನೆ ಬರುವರು. ನಂತರ ರಾಮನು ತನ್ನ ಬಳಿ ಇದ್ದ ಮತ್ತು ಧರಿಸಿರುವ ಬೆಳ್ಳಿ - ಬಂಗಾರಗಳಿಂದ ಮಾಡಲ್ಪಟ್ಟ ಆಭರಣಗಳೆಲ್ಲವನ್ನೂ, ಮುತ್ತು ರತ್ನಗವಚ, ಕಡಗ ಮುಂತಾದವುಗಳನ್ನು ದಾನಮಾಡುವನು. ಅದರಂತೆಯೇ ಸೀತೆಯು ಸುಯಜ್ಞರ ಮಡದಿಗೆ ತನ್ನ ಬಳಿ ಇದ್ದ ಹಾರಗಳು, ಡಾಬು, ಪಟ್ಟಕ, ರತ್ನ ಖಚಿತವಾದ ಮಂಚ ಮುಂತಾದವುಗಳನ್ನು ದಾನವಾಗಿ ನೀಡುವಳು. ಶತ್ರುಂಜಯನೆಂಬ ನನ್ನ ಮಾವ ಕೊಟ್ಟ ಆನೆಯನ್ನು ಸಾವಿರ ನಿಷ್ಕಗಳ ಜೊತೆಗೆ ನಿನಗೆ ಕೊಡುತ್ತೇನೆ ಎಂದ ರಾಮ. ಮತ್ತೆ ಲಕ್ಷ್ಮಣನಿಗೆ ಅಗಸ್ತ್ಯ-ಕೌಶಿಕರನ್ನು (ಆ ಅಗಸ್ತ್ಯರಲ್ಲ) ಕರೆತರಲು ಹೇಳಿ ಅವರಿಗೆ ತೃಪ್ತಿ ಆಗುವಷ್ಟು ಅವರಿಗೆ ವಸ್ತುಗಳನ್ನು ನೀಡಿದನು. ತೈತ್ತಿರೀಯನೆಂಬ ಆಚಾರ್ಯರಿಗೂ ತೃಪ್ತಿಯಾಗುವಷ್ಟು ದಾನವನ್ನು ಮಾಡು ಎಂದು ಲಕ್ಷ್ಮಣನಿಗೆ ಹೇಳಿದನು.
ಹಾಗೆಯೇ ತನ್ನಲಿದ್ದ ಪಶು-ಸಂಪತ್ತನ್ನು ಸೂತ ಚಿತ್ರರಥನಿಗೆ ದಾನಗೈದನು. ನಿರಂತರ ಮೋಕ್ಷದ ಗುರಿಯನು ಹೊಂದಿರುವಂತಹ, ನಿರಂತರ ವೇದಾಧ್ಯಯನವನ್ನು ಮಾಡುವವರಾದ, ದಂಡವನ್ನು ಧರಿಸಿದವರಿಗೆ, ಸಾಧನಾ ಪರರಾಗಿದ್ದವರಿಗೆ ಮಾಡಿದ ದಾನವದು ಆನಂದವೆನಿಸುವುದು, ಅಂತಹವರಿಗೆ ದಾನ ಮಾಡು, ಅಮ್ಮ ಸಂತೋಷಪಡುವಷ್ಟು ದಾನ ಮಾಡು ಎಂದು ಹೇಳಿದನು. ಆಗ ಲಕ್ಷ್ಮಣ ರಾಮನ ಕೋಶದಿಂದ ಸಂಪತ್ತನ್ನು ತಂದನಂತೆ, ಕುಬೇರನಂತೆ ಕಂಡನಂತೆ! ಹೀಗೆ ರಾಮನು ದಾನವನ್ನು ಮಾಡುವಾಗ ಜನರೆಲ್ಲರೂ ಕಣ್ಣಲ್ಲಿ ನೀರನ್ನು ಸುರಿಸುತ್ತಾ ನಿಂತಿದ್ದರು. ಅವರ ಮುಂದೆ ರಾಮನು ಒಂದು ಅಪೇಕ್ಷೆಯನ್ನಿಡುವನು. ಅದೇನೆಂದರೆ- ನಾನು ಮರಳಿ ಬರುವವರೆಗೆ ಈ ಎರಡು ಭವನಗಳನ್ನು ಶೂನ್ಯವಾಗದಂತೆ ನೋಡಿಕೊಳ್ಳಿ ಎಂದನು.
ನಂತರ ರಾಮನು ಧನಾಧ್ಯಕ್ಷರನು ಬರ ಹೇಳಿ ಸಂಪತ್ತಿನ ರಾಶಿಯನ್ನು ತರ ಹೇಳಿ; ಆ ಸಂಪತ್ತನ್ನು ಅಗತ್ಯವಿರುವವರಿಗೆ ನೀಡಿ ಎಂದನು. ಆ ಸಂಪತ್ತುಗಳನ್ನು ಬಾಲರಿಗೆ, ವೃದ್ಧರಿಗೆ ಹಂಚಲಾಯಿತು.

ಇಷ್ಟೆಲ್ಲಾ ಆದಮೇಲೆ ಇತ್ತ ರಾಜ್ಯದೊಳಿದ್ದ ಉಂಚ ವೃತ್ತಿಯ ತ್ರಿಜಟನೆಂಬ ವಯೋವೃದ್ಧ ಬ್ರಾಹ್ಮಣನ (ಆತ ತಪಸ್ಸು ಮಾಡಿ ಮಾಡಿ ಆತನ ಬಣ್ಣವೇ ಹಳಿದಿಯಾಗಿತ್ತಂತೆ; ಹಾರೆ, ಗುದ್ದಲಿ, ಕೊಕ್ಕೆಯನ್ನು ಹಿಡಿದು ತನ್ನ ಕೆಲಸ ಮಾಡುತ್ತಿದ್ದ; ತುಂಬಾ ಮಕ್ಕಳು ಆತನಿಗೆ) ತರುಣಿ ಪತ್ನಿಯು "ಇಂದಾದರೂ ಈ ಗುದ್ದಲಿ, ಹಾರೆ, ಕೊಕ್ಕೆಯನ್ನು ಪಕ್ಕಕ್ಕಿಟ್ಟು ರಾಮನ ಬಳಿ ಹೋದರೆ ಪ್ರಯೋಜನವಾದೀತು, ಹೋಗಿ ರಾಮನ ಬಳಿಗೆ" ಎಂದಳು.
ಆಗ ಆ ಬಡಬ್ರಾಹ್ಮಣ ತ್ರಿಜಟನು ತನ್ನ ಬಳಿ ಇದ್ದ ಅದೇ ಹರಕು ವಸ್ತ್ರವನು ಹೊದ್ದು; ರಾಮನ ಬಳಿ ಹೋಗಿ 'ನನ್ನ ಬಳಿ ಚಿಕ್ಕಾಸಿಲ್ಲ, ಆದರೆ ಮನೆಯಲ್ಲಿ ಚಿಕ್ಕ-ಚಿಕ್ಕ ಮಕ್ಕಳು, ಉಂಚವೃತ್ತಿ, ನನ್ನ ಕಡೆಗೆ ದೃಷ್ಟಿಯನು ಹಾಯಿಸು' ಎಂದಾಗ ರಾಮನಿಗೆ ವಿನೋದದ ಮನಸ್ಸಾಯಿತು. ನನ್ನಲ್ಲಿ ಸಂಪತ್ತೇನೂ ಉಳಿದಿಲ್ಲ, ಆದರೆ ಗೋವುಗಳು ಕೆಲವಿವೆ. ಈ ನಿನ್ನ ಕೈಯಲ್ಲಿರುವ ದಂಡವನ್ನು ಎಸೆದಾಗ ಎಲ್ಲಿಯವರೆಗೆ ಹೋಗಿ ಬೀಳುವುದೋ ಅಲ್ಲಿಯವರೆಗಿನ ಪಶು-ಸಂಪತ್ತು ನಿನಗೆ ಎಂದು ಹೇಳಿದನು. ಆಗ ತ್ರಿಜಟನು ಎಸೆದ ಕೋಲು ಸರಯೂ ನದಿಯ ಆಚೆ ಹೋಗಿ ಎತ್ತುಗಳ ಗುಂಪಿರುವಲ್ಲಿವರೆಗೆ ಬಿತ್ತು. ಆಗ ರಾಮನು ತ್ರಿಜಟನನ್ನು ಬಾಚಿ ತಬ್ಬಿಕೊಂಡು ಹೇಳಿದ-ವಿನೋದವನ್ನು ಮಾಡಿದ ಉದ್ದೇಶ ತಮ್ಮೊಳಗಿನ ಅಂತಃಸತ್ವದ ಪ್ರಕಟಪಡಿಸುವಿಕೆ ಮಾತ್ರವೇ ಹೊರತು ಬೇರೇನಿಲ್ಲ. ಅಷ್ಟೂ ಗೋವುಗಳನ್ನು ತ್ರಿಜಟನ ಮನೆಗೆ ಕಳುಹಿಸಿದ. ಮತ್ತೇನು ಬೇಕು ಎಂದು ಕೇಳಿದ, ಸತ್ಯವನ್ನು ಹೇಳುವುದಾದರೆ ನನ್ನಲ್ಲಿರುವ ಎಲ್ಲಾ ಸಂಪತ್ತೂ ಬ್ರಾಹ್ಮಣರಿಗಾಗಿಯೇ ಇರುವುದು ಎಂದಾಗ ಸಂತೋಷದಿಂದ ತ್ರಿಜಟ ರಾಮನಿಗೆ ನಿನ್ನ ಬಲವು ವೃದ್ಧಿಯಾಗಲಿ, ಕಷ್ಟ ದೂರವಾಗಲಿ, ಪ್ರೀತಿ ಹೆಚ್ಚಲಿ ಎಂಬುದಾಗಿ ಪ್ರೀತಿ ಹೆಚ್ಚುವ ಅನುಗ್ರಹವನ್ನು ಮಾಡುವನು.

ಆ ಪರಿಸರದಲ್ಲಿ ಈ ಹೊತ್ತಿನಲ್ಲಿ ಅತೃಪ್ತರು ಯಾರೂ ಇರಲಿಲ್ಲ, ಅಷ್ಟು ದೊಡ್ಡ ರಾಮನ ಭಂಡಾರ ವಿತರಣೆಯಾಗಿತ್ತು. ಅವನ ಭಂಡಾರ ಪೂರ್ತಿಯಾಗಿ ಕರಗಿತು.

ಇನ್ನು ಕೊನೆಯದಾಗಿ ಉಳಿದಿರುವುದು ದಶರಥನ ಅರಮನೆಗೆ ಸೀತೆಯೊಡಗೂಡಿ ತೆರಳುವುದು.
ಇತ್ತ ಸ್ವಯಂ ಸೀತೆಯೇ ಅಲಂಕರಿಸಿದ ಆಯುಧಗಳಾದ ಧನುಸ್ಸು, ಖಡ್ಗಗಳು ರಾಮನಲ್ಲಿ ಕಂಗೊಳಿಸಿದವು. ಬೇರೇನೂ ಅವನಲ್ಲಿರಲಿಲ್ಲ.
ಪದಾತಿಯಾದ ಮುಂದೆ ದುರ್ಲಭವಾದ ರಾಮನ ದರ್ಶನಕ್ಕಾಗಿ ದೀನ ಜನರು ವಿಮಾನ ಶಿಖರಗಳಂತಿದ್ದ ಮಹಡಿ, ಗೋಪುರಗಳನ್ನು ಏರಿದರು, ಸದಾ ಚತುರಂಗ ಬಲಗಳೊಂದಿಗೆ ರಾಜಮಾರ್ಗದಲಿ ಸಾಗುವ ರಾಮನ ಹಿಂದೆ ಇಂದು ಸೀತೆ ಮತ್ತು ಲಕ್ಷ್ಮಣರೀರ್ವರು ಮಾತ್ರ ಇರುವರು, ತಂದೆಯ ಮಾತನ್ನು ಉಳಿಸಲು ರಾಮನು ಕಾಡಿಗೆ ತೆರಳಲು ಸಿದ್ಧನಾಗಿರುವನೆಂದು ಶೋಕಿಸಿದರು. ಹೀಗೆ ರಾಮನು ದಶರಥನ ಅಪ್ಪಣೆಗಾಗಿ ತಂದೆಯ ಭವನದತ್ತ ತೆರಳುತ್ತಿದ್ದಾನೆ. ಸದಾ ಅರಮನೆಯಲ್ಲಿರುತ್ತಿದ್ದ, ಜನಸಾಮಾನ್ಯರು ಕಾಣಲು ದುರ್ಲಭವಾಗಿದ್ದ ಸೀತೆಯನ್ನಿಂದು ಆಕಾಶ, ಭೂಮಿ, ಜನಸಾಮಾನ್ಯರೆಲ್ಲರೂ ನೋಡುತ್ತಿದ್ದರು. ಸ್ವರ್ಣವರ್ಣದ ಸೀತೆಯ ಮೈಬಣ್ಣವನಿನ್ನು ಕಾಡಿನ ಮಳೆ, ಸೂರ್ಯನ ಬಿಸಿಲು(ಬೇಸಿಗೆ), ಚಳಿಗಳಿಂದ ಮಾಸುವುದು, ದೊರೆಗೆ ಏನೋ ಗಾಳಿ ಸೋಕಿದೆ, ಯಾವ ಷಟ್ಗುಣಗಳನ್ನು ಹೊಂದಿದ ರಾಮನನ್ನು ನೋಡಿ ಲೋಕವು ಸೋತಿದೆಯೋ ಅಂತಹ ರಾಮನನ್ನು ಕಾಡಿಗೆ ಕಳಿಸುವುದೇ? ಪಿಶಾಚ ಹೊಕ್ಕಿದೆ ರಾಜನಿಗೆ. ರಾಮನ ಪೀಡೆ - ಲೋಕ ಪೀಡೆ, ರಾಮನಿಗೆ ದುಃಖವಾದರೆ ನಾವೆಲ್ಲ ನೀರಿನಿಂದ ಹೊರತೆಗೆದ ಮೀನುಗಳಂತೆ; ನಾವೂ ಕೂಡ ಕಾಡಿಗೆ ಹೋಗೋಣ, ಲಕ್ಷ್ಮಣನಂತೆಯೇ ನಾವು ಸಹ ಮಾಡೋಣ, ನಮ್ಮ ಕ್ಷೇತ್ರ, ಮನೆ, ತೋಟ ಮುಂತಾದವುಗಳನ್ನು ತ್ಯಾಗ ಮಾಡಿ ಏಕಮುಖ-ಸುಖರಾಗಿ; ನಾವು ರಾಮನೊಡನೆ ಹೋಗೋಣ, ಅವನನ್ನು ಅನುಸರಿಸೋಣ.
ಕೈಕೇಯಿಗೆ ರಾಜ್ಯ ಬೇಕಂತೆ, ಆಕೆಗೆ ನಾವುಗಳು ಹೋದ ಬಳಿಕ ಕ್ಷಾಮ-ಡಾಮರಗಳಲಿ ಮುಳುಗಿ ಹೋದ, ಮಂತ್ರ ಹೋಮ, ಜಪ-ತಪಗಳಿಲ್ಲದ ಶೂನ್ಯ ರಾಜ್ಯ, ಹಾಳು ಬಿದ್ದ ರಾಜ್ಯ ಕೈಕೇಯಿಗೆ ಸಿಗಲಿ ಎಂದು ಕೈಕೇಯಿಯನ್ನು ಶಪಿಸಿದರು.
"ರಾಮನಿರುವ ಕಾಡು ನಾಡಾಗಲಿ, ನಾಡು ಕಾಡಾಗಲಿ",
ಕಾಡಿನ ಮೃಗಗಳು ನಾಡಿಗೆ ಬರಲಿ ಏಕೆಂದರೆ ರಾಮನಿಗೆ ಕಷ್ಟಗಳು ಬರದಿರಲಿ, ಆದುದರಿಂದ ನಾವೂ ಸಹ ಕಾಡನ್ನು ಸೇರೋಣ ಎಂಬುದಾಗಿ ಜನರು ಮಾತನಾಡಿಕೊಳ್ಳುತ್ತಿದ್ದರು. ಜನರ ಮಾತನ್ನು ಕೇಳಿದ ರಾಮನ ಮನದಲ್ಲಿ ಏನೊಂದೂ ವಿಕಾರ, ವಿಚಲಿತನಾಗಲಿಲ್ಲ. ಮದ ಗಜದ ನಡಿಗೆಯಂತಿದ್ದ ರಾಮನ ನಡಿಗೆಯನ್ನು ಜನ ಗಮನಿಸುತ್ತಿದ್ದರಲ್ಲದೇ, ರಾಮನು ಕೇಳುತ್ತಾ, ನಡೆಯುತ್ತಾ ರಾಜಸದನವನು ಸಮೀಪಿಸುವನು.

ತಂದೆಯ ಅರಮನೆಯನ್ನು ಸಮೀಪಿಸಿದ ರಾಮನು ಮನೆಯ ಮುಂದೆ ಸುಮಂತ್ರರನ್ನು ಕಂಡನು.
ವಿನೀತರಾಗಿ ಕಾವಲು ಕಾಯುತ್ತಿದ್ದ ಭಟರು ರಾಮನನ್ನು ಕಂಡು ಮತ್ತಷ್ಟು ವಿನೀತರಾದರು, ಜನರ ಆರ್ತನಾದ ಕೇಳಿ ಬರುತ್ತಿತ್ತು... ಆದರೂ ರಾಮ ಮಾಸದ ಮುಗುಳ್ನಗೆಯನ್ನು ಬೀರುತ್ತಾ ಸುಮಂತ್ರರನ್ನು ಕರೆದು ರಾಮ ಬಂದಿದ್ದಾನೆ ಎಂದು ತಂದೆಗೆ ತಿಳಿಸೆಂದು ಹೇಳುವನು. ವಿಷಾದ, ನೋವು ತುಂಬಿತ್ತು ಆದರೂ ಕಾಲೆಳೆದುಕೊಂಡು ತನ್ನ ಕರ್ತವ್ಯ ಪಾಲನೆಗಾಗಿ ದಶರಥನೆಡೆಗೆ ತೆರಳಿ ರಾಮ ಬಂದಿದ್ದಾನೆ, ಬಾಗಿಲ ಬಳಿ ನಿಂತಿರುವನೆಂದು ವಿಷಯವನ್ನು ಅರಹುವನು.

#DhaaraRaamayan

No comments:

Post a Comment

Please leave your comments here.....