#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ
ಕೈಕೇಯಿ ಇಲ್ಲಿ ಕಾರ್ಯಸಾಧನೆಗಾಗಿ ಕ್ರೋಧದ ಅಭಿನಯ ಮಾಡುತ್ತಿರುವಳು. ಅಭಿನಯ ಯಾರಲ್ಲಿ ಅಂದರೆ, ಪತಿಯಲ್ಲಿ! ತನ್ನ ಇನ್ನೊಂದು ಅರ್ಧವೇ ಆಗಿರತಕ್ಕಂಥಾ ಪತಿಯಲ್ಲಿ! ಯಾರ ಜೊತೆಗೆ ಮುಚ್ಚುಮರೆ ಇರಬಾರದೋ, ಅಂಥವನ ಜೊತೆಗೆ ಒಂದು ಅಭಿನಯ ಮಾಡಲಿಕ್ಕೆ ಕ್ರೋಧಾಗಾರದ ದುರುಪಯೋಗವಾಗುತ್ತಾ ಇದೆ.
ಸ್ವಂತ ಬುದ್ಧಿಯಲ್ಲ, ಮಂಥರೆ ಪ್ರೋತ್ಸಾಹಿಸಿ ಮಾಡುತ್ತಾ ಇರುವಂಥದ್ದು ಕೈಕೇಯಿ. ಹಾಗಾಗಿ ಮಂಥರೆಯಿಂದ ಪ್ರೇರಿತಳಾಗಿ ಕೈಕೇಯಿ ಕ್ರೋಧಾಗಾರವನ್ನ ಸೇರಿದಳು. ಮಾಡಿದ ಮೊದಲ ಕೆಲಸ ಯಾವುದು ಅಂದರೆ, ದಶರಥ ಪ್ರೀತಿಯಿಂದ ಕೊಟ್ಟಿದ್ದ 'ಮುಕ್ತಾಹಾರ' - ಮುತ್ತಿನ ಹಾರ, ಲಕ್ಷ ಲಕ್ಷ ಸ್ವರ್ಣ ಮುದ್ರೆಗಳ ಬೆಲೆಯುಳ್ಳಂತಹಾ ಆ ಮುಕ್ತಾಹಾರವನ್ನ ಕಿತ್ತೆಸೆದಳು.
ಕೈಕೇಯಿಯ ಸಿಟ್ಟು ತುಟ್ಟತುದಿಗೆ ತಲುಪಿದೆ. ಅದರ ಪರಿಣಾಮ ರಾಮನಿಗೂ, ರಾಜ್ಯಕ್ಕೂ ಎಲ್ಲರಿಗೂ ತೊಂದರೆಯಾಗಬೇಕು. ಕೈಕೇಯಿ ತನ್ನ ಅಸಹನೆಯ ಸ್ಥಿತಿಯನ್ನು ದಿಕ್ಕುದಿಕ್ಕುಗಳಿಗೆ ಆಭರಣಗಳನ್ನು ಎಸೆಯುವುದರ ಮೂಲಕ ತೋರಿಸಿಕೊಳ್ಳಲಾರಂಭಿಸಿದಳು. ಅದೆಲ್ಲ ದಶರಥ ಮಾಡಿಸಿ ಕೊಟ್ಟದ್ದು. ಚಿನ್ನದ ಬೆಲೆ ಮಾತ್ರ ಅಲ್ಲ, ಭಾವದ ಬೆಲೆ ಕೂಡ ಇದೆ ಅದಕ್ಕೆ.
ನೀವು ಯಾರಿಗೋ ತುಂಬ ಪ್ರೀತಿಯಿಂದ ಒಂದು ವಸ್ತುವನ್ನು ಕೊಟ್ಟಿರ್ತೀರಿ ಅಂತ ಅಂದುಕೊಳ್ಳಿ, ಅವರು ತೆಗೆದು ಎಸೆದರೆ ನಿಮಗೆ ಕಾಣುವ ಹಾಗೇ, ಎಷ್ಟು ನೋವಾಗಬಹುದು ಅದು..
ಈ ಕಡೆಗೆ, ರಾಮಾಭಿಷೇಕವನ್ನ ರಾಜಾಜ್ಞೆ ಮೂಲಕ ಹೊರಡಿಸಿ ಎಲ್ಲರನ್ನೂ ಬೀಳ್ಕೊಟ್ಟು
ಸಿಂಹವು ಗುಹೆಯನ್ನು ಪ್ರವೇಶ ಮಾಡುವಂತೆ ದಶರಥ ತನ್ನ ಅಂತಃಪುರವನ್ನು ಪ್ರವೇಶಿಸಿದ. ಅದರಲ್ಲಿ ಕೈಕೇಯಿ ಮನೆ ಬೇರೆ ಇದೆ. ಹಾಗಾಗಿ, ಆ ಭವನವನ್ನ ಪ್ರವೇಶ ಮಾಡಿದ. ಏನಿತ್ತು ಮನಸ್ಸಿನಲ್ಲಿ? ಅಂದರೆ ಎಲ್ಲರಿಗೂ ರಾಮಾಭಿಷೇಕದ ವಿಷಯ ಗೊತ್ತಾಗಿದೆ, ಇನ್ನು ಕೈಕೇಯಿಗೆ ಹೇಳಿ ಬಿಡುವುದು ಒಳ್ಳೆಯದು. ಹೇಳುವ ಸಲುವಾಗಿಯೇ ಹೊರಟಿದ್ದಾನೆ.
ಮಂಥರೆಯ ಪ್ರವೇಶವಾಗದೇ ಇದ್ದರೆ, ಇದು ಪ್ರಿಯವಾರ್ತೆ ಕೈಕೇಯಿಗೆ. ಹಾಗಾಗಿ, ಖುಷಿಯಾಗುವ ವಿಷಯವೊಂದನ್ನು ಹೇಳುವೆ ಎಂದು ಭಾವಿಸಿ ದಶರಥ ಅಂತಃಪುರ ಪ್ರವೇಶ ಮಾಡುತ್ತಾ ಇದ್ದಾನೆ.
ಅತ್ಯಂತ ವೈಭವದ ಮನೆ ನಿರ್ಮಿಸಿಕೊಟ್ಟಿದ್ದ ದಶರಥ ಕೈಕೇಯಿಗೆ.
ಮನೆಗೆ ತಕ್ಕ ಮನ ಬೇಕು ~ #ಶ್ರೀಸೂಕ್ತಿ
ತನ್ನ ಸಮೃದ್ಧಿಯಿಂದ ಕೂಡಿದ ಅಂತಃಪುರವನ್ನು ಮಹಾರಾಜ ಪ್ರವೇಶ ಮಾಡಿದ, ಅಲ್ಲಿರಬೇಕಿತ್ತವಳು, ಶಯನೋತ್ತಮೆ! ಅಲ್ಲಿ ಅವಳನ್ನ ಕಾಣಲಿಲ್ಲ.
ತುಂಬಾ ಪ್ರೀತಿಯಿಂದ ಬಂದಿದ್ದಾನೆ ದಶರಥ. ಅವಳು ಯಾವಾಗಲೂ ಕಾಣುವಲ್ಲಿ ಕಾಣಲಿಲ್ಲ ಅಂದ ಮಾತ್ರಕ್ಕೆ ವಿಷಾದಗೊಂಡ ದಶರಥ. ಪತಿ ಪತ್ನಿಯ ಮಧ್ಯ ಭಾವನಾಶವಾಗಿದೆ! ಅದರಿಂದಲೇ ಕೈಕೇಯಿಯ ಗೃಹಶೂನ್ಯವಾಗಿದೆ.
'ಎಲ್ಲಿ ಹೋದಳು?' ಎಂದು ಪ್ರತೀಹಾರಿಯನ್ನ ಕೇಳಿದ ದಶರಥ. ಆಕೆಯೋ ಗಡಗಡ ನಡುಗುತ್ತಿದ್ದಾಳೆ. ಕೈಮುಗಿದು ದಶರಥನಿಗೆ ಹೇಳಿದಳು, 'ಹೇ ದೇವನೆ, ದೇವಿಯು ಭಯಂಕರವಾಗಿ ಕ್ರೋಧಗೊಂಡು ಕ್ರೋಧಾಗಾರಕ್ಕೆ ಧಾವಿಸಿದ್ದಾಳೆ". ರಾಜನಿಗೆ ಅತ್ಯಂತ ದುಃಖವಾಯಿತು ಇದನ್ನು ಕೇಳಿ. ಮನಸ್ಸು ಪೂರ್ತಿ ಕೆಟ್ಟು ಹೋಯಿತು. ಏನಾಯಿತು ಅಂಥದ್ದು? ಮತ್ತೆ ವಿಷಾದ, ಮತ್ತಷ್ಟು ವಿಷಾದ. ಅವನ ಇಂದ್ರಿಯಗಳು ಕ್ಲೇಶಗೊಂಡವು. ಕ್ರೋಧಾಗಾರಕ್ಕೆ ಹೋದ ದಶರಥ.
ಅಲ್ಲಿ ಹೋಗಿ ನೋಡಿದರೆ ನೆಲದಲ್ಲಿ ಬಿದ್ದುಕೊಂಡಿದ್ದಾಳೆ. ಕಿತ್ತೆಸೆದ ಬಳ್ಳಿಯ ಹಾಗೆ; ಧರೆಗುರುಳಿದ ಕಿನ್ನರಿಯಂತೆ; ಹರಿದ ಮಾಲೆಯಂತೆ ಇದ್ದಳಾಕೆ. ತುಂಬ ಪ್ರೀತಿಯಿಂದ ತನ್ನ ಕೈಯನ್ನು ಆಕೆಯ ಮೇಲೆ ಇಟ್ಟನವನು. ನೇವರಿಸಿದ ಆಕೆಯನ್ನು. ಎದೆ ನಡುಗಿದೆ, ಆತನ ಅಂತಃಸ್ಸತ್ವ ವಿಚೇತವಾಗಿದೆ. ದಶರಥ ಕೇಳಿದ, 'ಇದೇನು ಕ್ರೋಧವಿದು? ಅರ್ಥ ಆಗುತ್ತಿಲ್ಲ ನನಗೆ. ಯಾಕೆ? ಯಾರಾದರೂ ಅವಮಾನ ಮಾಡಿದರೇ? ಏನಾದರೂ ಕ್ಲೇಶವಾಯಿತೇ ನಿನಗೆ? ಯಾಕೆ ನನ್ನೊಳಗೆ ಈ ಪರಿಯ ದುಃಖವನ್ನು ಉಂಟುಮಾಡಿ ನೀನು ಧೂಳಿನಲ್ಲಿ ಬಿದ್ದು ಒದ್ದಾಡುತ್ತಿದ್ದೀಯೇ? ನಾನು ಜೀವಿಸಿರ್ತಾ ನೀನು ಹೀಗಿರಬೇಕಾ? ಇನ್ನೂ ದಶರಥ ಬದುಕಿದ್ದಾನೆ. ಬದುಕಿರ್ತಾ ಬದುಕಿರ್ತಾ ನೀನು ಮಲಿನ ವಸ್ತ್ರಧಾರಿಣಿ, ಏಕವೇಣೀಧಾರಿಣಿಯಾಗಿ ಭೂಮಿಯಲ್ಲಿ ಈ ರೀತಿ ಬಿದ್ದು ಹೊರಳಾಡಬೇಕಾ? ಏನಾಯಿತು? ನನ್ನ ಮನಸ್ಸು ಹಿಂಡಿ ಹೋಗುತ್ತಿದೆ. ಆರೋಗ್ಯದ ತೊಂದರೆಯೇ? ಅಯೋಧ್ಯೆಲ್ಲಿ ಕುಶಲರಾದ ವೈದ್ಯರಿದ್ದಾರೆ. ಅವರ ಮೂಲಕ ಚಿಕಿತ್ಸೆ ಮಾಡಿ ನಿನಗೆ ಸುಖ ಉಂಟಾಗುವಂತೆ ಮಾಡುವೆ, ಹೇಳು.. ಶಾರೀರಿಕವಾದ ಕ್ಲೇಶವಾದರೆ ಅದನ್ನು ಬಿಡಿಸಿ ಹೇಳು' ಎಂದ. ಈವರೆಗೆಲ್ಲ ಸರೀ ಇದೆ. ಮುಂದೆ ಒಂಚೂರು ಧಾಟಿ ತಪ್ಪಿತು. "ನಿನ್ನನ್ನು ಸಮಾಧಾನ ಪಡಿಸಲು ಯಾರಿಗೆ ಪ್ರಿಯವನ್ನ ಮಾಡಲಿ, ಯಾರಿಗೆ ಅಪ್ರಿಯವನ್ನ ಮಾಡಲಿ?
ಅಳಬೇಡ, ಶರೀರ ಶೋಷಣೆಯನ್ನ ಮಾಡಬೇಡ. ಯಾಕೆಂದರೆ ಏನು ಬೇಕಾದರೂ ಮಾಡುವೆ ನಿನಗಾಗಿ. ಮಾಡಬಾರದ್ದನ್ನೂ ಮಾಡುವೆ! ವಧೆಗರ್ಹನಲ್ಲದವನ್ನೂ ವಧಿಸಬಲ್ಲೆ ನಿನಗಾಗಿ, ಅಥವಾ ವಧೆಗರ್ಹನನ್ನು ಬಿಡುಗಡೆಗೊಳಿಸುವೆ"
(ಇಲ್ಲಿ ಗೆರೆ ತಪ್ಪಿದೆ ದಶರಥನದು. ದೊರೆ ಸುಳ್ಳಾಗಿಯೂ ಇದನ್ನಾಡೋ ಹಾಗಿಲ್ಲ.)
ಕೇಳಿಲ್ಲಿ, ನಾನಾಗಲೀ ನನ್ನವರಾಗಲೀ, ಎಲ್ಲರೂ ನಿನ್ನ ವಶ. ನಿನ್ನ ಯಾವ ಇಚ್ಛೆಯನ್ನು ನಾವು ಇಲ್ಲ ಎಂದು ಮಾಡುವವರಲ್ಲ. ಜೀವ ಕೊಟ್ಟೇನು. ನನ್ನ ಸಾಮರ್ಥ್ಯವೇನು, ಗೊತ್ತಲ್ಲವೇ ನಿನಗೆ.. ಮತ್ತೇನು? ಸಂತೋಷವಾಗುವಂತೆ ಮಾಡುತ್ತೇನೆ. ನಿನ್ನಿಷ್ಟವನ್ನು ನೆರವೇರಿಸುತ್ತೇನೆ. ಇಡೀ ಭೂಚಕ್ರವೇ ನನ್ನದು. ಪುಣ್ಯದ ಮೇಲಾಣೆ!!
ಪ್ರಪಂಚದ ಯಾವ ದ್ರವ್ಯ ಬೇಕಾದರೂ ಕೇಳು, ಕೊಟ್ಟೆ. ಯಾಕೆ ಸುಮ್ಮನೆ ಕಷ್ಟ ಪಡ್ತೀಯೆ? ಏಳು.. ಏನು ಭಯ/ತೊಂದರೆ ನಿನಗೆ ಹೇಳು" ಎಂದಾಗ ಅವಳು ಮಾತಾಡಲು ಪ್ರಾರಂಭಿಸಿದಳು ಅನ್ನುವುದಕ್ಕಿಂತ ವಾಲ್ಮೀಕಿಗಳು ಏನು ಹೇಳಿದ್ದಾರೆ ಎಂದರೆ ತನ್ನ ಪತಿಯನ್ನು ಪರಿಪೀಡಿಸಲು ಪ್ರಾರಂಭ ಮಾಡಿದಳು.
ಅವನೋ, ಈಕೆಯ ಬಗ್ಗೆ ಮೃದುಭಾವನೆಯುಳ್ಳವನು. ಈಕೆ ಮಾಡಲು ಹೊರಟಿರುವಂಥದ್ದು ಅವನ ಎದೆ ಕತ್ತರಿಸತಕ್ಕಂಥ ಮಾತನ್ನು. ಹಾಗಿತ್ತು ಅವರ ನಡುವಿನ ಅಂತರ ಎಂದು ವಾಲ್ಮೀಕಿಗಳು ಉಲ್ಲೇಖ ಮಾಡಿದ್ದಾರೆ. ಅವಳು ಹೇಳಿದ್ದು ಸತ್ಯವೇ.
'ನನಗೆ ಯಾವ ಅಪಕಾರವೂ ಆಗಿಲ್ಲ, ಯಾವ ಅವಮಾನವೂ ಆಗಿಲ್ಲ. ಏನೋ ನನ್ನ ಮನಸ್ಸಲ್ಲಿ ಇದೆ ಒಂದು ವಿಷಯ. ಅದನ್ನ ಮಾಡಿಕೊಡಬೇಕು ನೀವು'. ಅದಕ್ಕಾಗಿ ಕ್ರೋಧಾಗಾರ ಪ್ರವೇಶ ಮಾಡುವ ಹಾಗಿಲ್ಲ. ತಪ್ಪದು.
'ಹೇಳು' ಅಂತ ದಶರಥ ಮುಖ ಮಾಡುವ ಹೊತ್ತಿಗೆ ಆಕೆ ಹೇಳಿದಳು, 'ದಶರಥ, ನನಗೇನು ಬೇಕೆಂದು ಹೇಳಬೇಕಿದ್ದರೆ ಪ್ರತಿಜ್ಞೆ ಮಾಡಬೇಕು.'
ನಕ್ಕನಂತೆ ದಶರಥ. 'ನನಗೆಷ್ಟು ಪ್ರೀತಿಯಿದೆ ನಿನ್ನ ಮೇಲೆ ಅಂತ ನೀನರಿಯೆ. ಎಷ್ಟು ಪ್ರೀತಿಯಿದೆ? ರಾಮನೊಬ್ಬನನ್ನುಳಿದು, ನಿನಗಿಂತ ಹೆಚ್ಚು ಪ್ರೀತಿ ಯಾರ ಮೇಲೂ ಇಲ್ಲ' ಅಂದ.
"ಆ ರಾಮನ ಮೇಲಾಣೆ. ಹೇಳು ಏನು ಬೇಕು ನಿನಗೆ. ಯಾವ ರಾಮನನ್ನು ಒಂದು ಮುಹೂರ್ತವೂ ಬಿಟ್ಟು ನನಗೆ ಬದುಕಿರಲಾರೆನೋ, ಆ ರಾಮನ ಮೇಲಾಣೆ.
ಒಂದು ವೇಳೆ ನಾನೋ ರಾಮನೋ ಎಂಬ ಆಯ್ಕೆ ಬಂದರೆ ನಾನು ನನ್ನನ್ನು ಆರಿಸಿಕೊಳ್ಳುವುದಿಲ್ಲ, ರಾಮನನ್ನು ಆರಿಸಿಕೊಳ್ಳುತ್ತೇನೆ. ಇನ್ನು ಮೂರು ಮಕ್ಕಳು ಮತ್ತು ರಾಮ ಎಂದು ತಕ್ಕಡಿ ಹಾಕುವ ಸಂದರ್ಭ ಬಂದರೆ ನಾನು ರಾಮನನ್ನು ಆರಿಸಿಕೊಳ್ತೇನೆ. ಅಂತಹಾ ರಾಮನ ಮೇಲಾಣೆ" ಎಂದು ಕೈಕೇಯಿಗೆ ಹೇಳುತ್ತಿದ್ದಾನೆ.
ಆಗ ಆಕೆಯು ಆಡಿದ ಮಾತುಗಳು ಅಂತಕ ಮನೆಬಾಗಿಲಿಗೆ ಬಂದಂತಿತ್ತು! ಅದಕ್ಕಿಂತ ಮೊದಲು ಇನ್ನೊಂದು ಕಟ್ಟು ಹಾಕಿದಳು ದಶರಥನಿಗೆ: "ಆಡುವುದಕ್ಕಿಂತ ಮೊದಲು ಪ್ರತಿಜ್ಞೆ ಮಾಡುತ್ತಿದ್ದೀಯೆ; ವರ ಕೊಡುತ್ತಿದ್ದೀಯೆ ನನಗೆ. ಇದನ್ನ 33 ಕೋಟಿ ದೇವತೆಗಳು ಕೇಳಿಸಿಕೊಳ್ಳಲಿ, ಅವರೆಲ್ಲ ಸಾಕ್ಷಿ, ಪಂಚಭೂತಗಳೆಲ್ಲವೂ ಸಾಕ್ಷಿ, ನಾನು ಹೇಳುವುದೇನಾದರೂ ಬಿಟ್ಟು ಹೋದಲೀ ಅವರೂ ಸಾಕ್ಷಿ." ಬಳಿಕ ವರವನ್ನು ಕೇಳ್ತಾಳೆ.
ಹಿಂದಿನದನ್ನು ನೆನಪು ಮಾಡಿಕೊಟ್ಟಳು ಪುನಃ. "ದೈವಾಸುರ ಯುದ್ಧದಲ್ಲಿ ನಡೆದದ್ದು. ಪ್ರಾಣವೊಂದೇ ಉಳಿದಿತ್ತು ನಿನಗಂದು. ಅಂತಹ ಸಂದರ್ಭ ನಾನು ನಿನ್ನ ರಕ್ಷಣೆ ಮಾಡಿದ್ದು. ಆಗ ಕೊಟ್ಟ ಎರಡು ವರಗಳನ್ನ ಈಗ ನಿನ್ನ ಕೈಯಿಂದ ಕೇಳುತ್ತಿದ್ದೇನೆ. ನೀನು ಪುನಃ ಪ್ರತಿಜ್ಞೆ ಮಾಡದಿದ್ದರೆ ಈಗಲೇ ನಾನು ಪ್ರಾಣತ್ಯಾಗವನ್ನು ಮಾಡುವೆ. ವರ ಕೊಡಬೇಕು ನನಗೆ" ಹೀಗೆ ಹೇಳಿ ವರ ಕೇಳ್ತಾನೆ.
ಒಂದನೇಯದೇನು?
ರಾಮನಿಗಾಗಿ ಕಲ್ಪಿತವಾದಂತಹ ಅಭಿಷೇಕದ ಸಿದ್ಧತೆಗಳೇನಿದೆ, ಈ ಅಭಿಷೇಕ ರಾಮನಿಗಾಗದೇ, ಭರತನಿಗಾಗಬೇಕು. ಇದು ಒಂದು.
ಇನ್ನೊಂದು, 14 ವರ್ಷಗಳ ಕಾಲ ನಾರು, ಚರ್ಮ, ಜಟೆ, ಇದನ್ನೆಲ್ಲ ಧಾರಣೆ ಮಾಡಿ ತಾಪಸ್ಯದ ವ್ರತವನ್ನಾಶ್ರಯಿಸಿ ರಾಮ ಕಾಡಿನಲ್ಲಿರಬೇಕು. ಇದು ನನ್ನ ಪರಮಾಪೇಕ್ಷೆ. ಮತ್ತೆ ಯಾವತ್ತೋ ಅಲ್ಲ. ಮರುದಿನ ಬೆಳಗಾದ ಕೂಡಲೇ, ಸೂರ್ಯೋದಯವಾದಾಗಲೇ ರಾಮ ಕಾಡಿಗೆ ಹೋಗಬೇಕು. ಕೊಡು ಈ ವರವನ್ನು' ಎಂಬುದಾಗಿ ಹೇಳಿ, ',ನೀನು ರಾಜಾಧಿರಾಜ, ನೀನು ಸತ್ಯಪ್ರತಿಜ್ಞ. ನಿನ್ನ ಕುಲ ಇಕ್ಷ್ವಾಕು ವಂಶ. ನಿನ್ನ ಶೀಲ, ಜನ್ಮ ಎಂಥಾದ್ದು ಎಂದು ನೆನಪಿಸಿಕೊಂಡು ವ್ಯವಹರಿಸು. ಪರಲೋಕದಲ್ಲಿ ಸತ್ಯವಚನವೇ ಉಳಿಸುವುದಂತೆ!' ಎಂದು ಕೈಕೇಯಿ ಹೇಳಿದಳು ದಶರಥನಿಗೆ.
ಹೇಗಾಗಿರಬಹುದು ದಶರಥನಿಗೆ?
ತಾನೆಲ್ಲಿದ್ದೇನೆಂದೇ ಗೊತ್ತಾಗಲಿಲ್ಲ ಅವನಿಗೆ. ಸ್ವಪ್ನವೇ, ಚಿತ್ತಮೋಹವೇ? ಯಾವುದೇ ಜನ್ಮದ ಘಟನೆಯೇ? ದಶರಥ ಬೆಂದ, ಅಕ್ಷರಶಃ ಬೆಂಕಿಯಲ್ಲಿಟ್ಟು ಬೇಯಿಸಿದ ಹಾಗೆ ಬೆಂದ ದಶರಥ. ದುಃಖದ ಕಡಲೊಳಗೇ ಈಜುತ್ತಾ ಇದ್ದಾನೆ. ಎಷ್ಟು ಈಜಿದರೂ ಸುಖದ ತೀರ ಕಾಣಲಿಲ್ಲ ದಶರಥನಿಗೆ. ಅವನಿಗೆ ಪುನಃ 'ಎಚ್ಚರ' ಆಗಬೇಕಾದರೆ ಸಮಯ ತಗಲಿತು. ಎಲ್ಲೋ ಹೋಗಿಬಿಟ್ಟಿದ್ದ, ಏನಂತಲೇ ಗೊತ್ತಾಗಲಿಲ್ಲ. ಆ ಪ್ರಮಾಣದಲ್ಲಿ, ಅಷ್ಟು ದೊಡ್ಡ ಆಘಾತವಾಗಿದೆ ಅವನಿಗೆ. ಆಕೆಯ ವಾಕ್ಯ ಬಂದಪ್ಪಳಿಸಿದೆ ಅವನನ್ನು.
ಕಣ್ತೆರೆದು ನೋಡಿದರೆ, ಮೋಹದ ಮಡದಿ ಈಗ ಬಾಯ್ತೆರೆದ ಹೆಬ್ಬುಲಿ. ನುಂಗಲು ಕಾಯುತ್ತಿದೆ. ಎಷ್ಟು ಹೊತ್ತು ಆಯಸ್ಸೋ, ಗೊತ್ತಿಲ್ಲ ಎನ್ನುವ ರೀತಿಯಲ್ಲಿ ಇವನಿಗೆ ಜಿಂಕೆಯ ಸ್ಥಿತಿ, ಆಕೆಗೆ ಹೆಬ್ಬುಲಿಯ ಸ್ಥಿತಿ ಬಂದುಬಿಟ್ಟಿತು ಕ್ಷಣಮಾತ್ರದಲ್ಲಿ.
ಕುಸಿದು ನೆಲದಲ್ಲಿ ಕುಳಿತು ನಿಟ್ಟುಸಿರು ಬಿಡುತ್ತಿದ್ದಾನೆ ರಾಜಾಧಿರಾಜ. ಆ ಸಮಯದಲ್ಲಿ ಆತನು ಭಯಂಕರದ ಮಹಾಸರ್ಪ ಆದರೆ ಮಂಡಲದಲ್ಲಿ ಬಂಧಿ ಎಂಬ ಸ್ಥಿತಿ. ಆತ ಸೂರ್ಯವಂಶದ ಚಕ್ರವರ್ತಿ, ಮಹಾಸಾಮ್ರಾಜ್ಯ ಸಂಪನ್ನನೇ ಹೌದು. ಕೈಕೇಯಿ ಏನು ಅವನ ಮುಂದೆ? ಅವನು ನಿರ್ಧಾರ ಮಾಡಿದರೆ ಕೈಕೇಯಿಯನ್ನು ತ್ಯಾಗ ಮಾಡಬಹುದು. ಆದರೆ ಈಗ ಏನನ್ನೂ ಮಾಡುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ, ಆ ಪ್ರತಿಜ್ಞೆ, ಈ ಪ್ರತಿಜ್ಞೆ ಎಲ್ಲ ಸೇರಿ ಅವನನ್ನು ಬಂಧಿಸಿದೆ. ಧರ್ಮಪಾಶದಿಂದ ಬದ್ಧನಾಗಿದ್ದಾನೆ.
ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಸಹಿಸಲು ಸಾಧ್ಯವಾಗುತ್ತಿಲ್ಲ. 'ಅಯ್ಯೋ ಧಿಕ್ಕಾರ' ಅಂತ ಹೇಳಿ ಎಚ್ಚರ ತಪ್ಪಿದ ಮತ್ತೆ. ಯಾಕೆ ಮೂರ್ಛೆ ಬಂತು? ಎಂದರೆ, ದುಃಖವಾಗಲಿ ಸುಖವಾಗಲಿ ಅದಕ್ಕೊಂದು ಮಿತಿಯಿದೆ. ಆ ಮಿತಿಯೊಳಗೆ ಮಾತ್ರವೇ ಮನಸ್ಸು ರಕ್ಷಿತವಾಗಿರುತ್ತದೆ. ಅದರಾಚೆಗೆ ನೋವಾದಾಗ ಮನುಷ್ಯನಿಗೆ ಎಚ್ಚರ ತಪ್ಪಬಹುದು. ಸಾವೂ ಬರಬಹುದು. ಸುಮಾರು ಹೊತ್ತಾಯಿತಂತೆ ಮತ್ತೆ ಪ್ರಜ್ಞೆ ಬರಬೇಕಿದ್ದರೆ ಅವನಿಗೆ. ಎಚ್ಚರವಾದರೆ ಮತ್ತದೇ ನರಕದಲ್ಲಿದ್ದಾನೆ ಅವನು. ಅದೇ ಕೈಕೇಯಿ. ಅದೇ ಕ್ರೋಧಾಗಾರ. ಎಲ್ಲಿತ್ತೋ ಸಿಟ್ಟು! ಕ್ರುದ್ಧನಾದ ದಶರಥ, ಕಣ್ಣಿಂದಲೇ ಸುಡುವಂತೆ ಕೈಕೇಯಿಯನ್ನು ಬೈಯುತ್ತಾನೆ, "ದುರ್ನಡತೆಯವಳೇ, ನಮ್ಮ ಕುಲವನ್ನೇ ನಾಶ ಮಾಡಲು ಹೊರಟವಳೇ, ಕ್ರೂರಿ, ಪಾಪಿ, ರಾಮ ನಿನಗೆ ಮಾಡಿದ್ದಾದರೂ ಏನು? ನಾನಾದರೂ ನಿನಗೆ ಮಾಡಿದ್ದೇನು?
ರಾಮ ತನ್ನ ಹೆತ್ತ ತಾಯಿಯಂತೆ ನಿನ್ನನ್ನು ನೋಡಿದ್ದಾನೆ. ಅವನ ಸರ್ವನಾಶಕ್ಕೆ ಹೊರಟೆಯಾ ನೀನು? ನನಗೆ ಧಿಕ್ಕಾರ, ನಿನ್ನನ್ನು ನಾನು ಸಾಕಿದೆನಲ್ಲ ಇಲ್ಲಿ, ಎಷ್ಟು ವರ್ಷ ನಿನಗೆ ಸ್ಥಾನಮಾನ ಕೊಟ್ಟು ಪೋಷಣೆ ಮಾಡಿದೆನಲ್ಲ, ಹಾವು ಸಾಕಿದಂತಾಯಿತು, ವಿಷ ನಿನ್ನೊಳಗಿತ್ತೆಂದು ಗೊತ್ತಾಗಲಿಲ್ಲ ನನಗೆ. ಸಮಸ್ತ ಪ್ರಪಂಚವೇ ಯಾರ ಗುಣಗಳನ್ನ ಕೊಂಡಾಡುತ್ತದೋ, ಅಂಥಾ ರಾಮನನ್ನ ಯಾವ ತಪ್ಪಿಗಾಗಿ ತ್ಯಾಗ ಮಾಡಲಿ ಹೇಳು. ಯಾವ ಅಪರಾಧಕ್ಕಾಗಿ? ರಾಮ ಮಾಡಿದ ತಪ್ಪೇನು? ಏಕೆ ರಾಮನನ್ನು ಬಿಡಲಿ ನಾನು? ಇಷ್ಟಪುತ್ರ. ಕೌಸಲ್ಯೆಯನ್ನು ಬಿಟ್ಟೇನು, ಸುಮಿತ್ರೆಯನ್ನು ಬಿಟ್ಟೇನು, ಸಂಪತ್ತೆಲ್ಲವನ್ನೂ ಬಿಟ್ಟೇನು. ಪ್ರಾಣವನ್ನೇ ಬಿಟ್ಟೇನು, ರಾಮನನ್ನು ಬಿಡಲಾರೆ. ಎಷ್ಟು ಪ್ರೀತಿ ಅವನಿಗೆ ತಂದೆ ಅಂದರೆ, ಅವನನ್ನು ಬಿಡಲಾ ನಾನು?" ತನ್ನ ಅನುಭೂತಿಯನ್ನ ವಿಲಾಪದಲ್ಲಿ ಹಲುಬುತ್ತಾ ಹೇಳಿಕೊಳ್ಳುತ್ತಾನವನು. "ಯಾರನ್ನ ನೋಡಿದ ಮಾತ್ರದಿಂದ ಎಲ್ಲಿಲ್ಲದ ಸಂತೋಷ ನನ್ನಲ್ಲಿ ಉಂಟಾಗುತ್ತದೋ, ಯಾರನ್ನು ಸ್ವಲ್ಪ ಹೊತ್ತು ಕಾಣದೇ ಇದ್ದರೆ ಉಸಿರೇ ನಿಂತ ಹಾಗಾಗುತ್ತದೋ, ಅಂತಹವನನ್ನು ಬಿಡಲಾ? ಸೂರ್ಯ ಇಲ್ಲದೇ ಲೋಕವಿರಬಹುದು, ರಾಮನಿಲ್ಲದೆ ನಾನಿರಲಾರೆ". ಹೀಗೇ ಕ್ರೋಧದ ತುಟ್ಟತುದಿಗೆ ಹೋಗಿ ಅವಳನ್ನ ಬೈದು ಭಂಗಿಸಿದವನು, ಹಾಗೇ ಬಂದು ಕಾಲು ಹಿಡಿದುಕೊಂಡು ಬಿಟ್ಟನಂತೆ. "ಈ ನನ್ನ ನೆತ್ತಿಯಿಂದ ನಿನ್ನ ಕಾಲನ್ನು ಮುಟ್ಟುತ್ತೇನೆ. ಈ ಪಾಪ ನಿಶ್ಚಯವನ್ನ ಬಿಟ್ಟುಬಿಡು, ಪ್ರಸನ್ನಳಾಗು. ಎಂಥಾ ಕೆಡುಕನ್ನು ಚಿಂತನೆ ಮಾಡಿಬಿಟ್ಟೆ ನೀನು! ಪಾಪಿ!! ಮತ್ತೆ ಅವತ್ತೆಲ್ಲ ಹೇಳಿದ್ದೆಯಲ್ಲ, ನನಗೆ ರಾಮ ಭರತನಿಗಿಂತ ಹೆಚ್ಚು, ಪ್ರೀತಿಯಿಂದ ನೋಡಿಕೊಳ್ಳುತ್ತಾನೆ, ಸೇವೆ ಮಾಡುತ್ತಾನೆ, ಎಂದು ಸುಮ್ಮನೆ ಹೇಳಿದ್ದೇ ಅದು? ಸೇವೆ ಮಾಡಿಸಿಕೊಳ್ಳಲು ಹೇಳಿದ್ದಾ? ನಿಜವಲ್ವಾ ಅವೆಲ್ಲ? ಅದೇನೆ ಇರಲಿ, ಇಕ್ಷ್ವಾಕು ವಂಶಕ್ಕೆ ಬಹುದೊಡ್ಡ ಅನೀತಿ ನಿನ್ನಿಂದಲಾಗಿ. ಅಲ್ಲ, ನೀನ್ಯಾಕೆ ಹೀಗಾದೆ? ಇಷ್ಟು ದಿನವೂ ಪ್ರತಿದಿನ ನಿನಗೆ ಬೇಕು ಬೇಕಾದಂತೆ ಸೇವೆ ಮಾಡಿದ್ದಾನೆ. ಅವನು ಕಾಡಿಗೆ ಹೋಗ್ಬೇಕಾ? ನೀನೇ ಕಳುಹಿಸಿ ಕೊಡುವವಳಾ? ಶುಶ್ರೂಷೆ, ಗೌರವ, ಪ್ರಮಾಣ, ವಚನಪ್ರಿಯ ರಾಮನ ಹಾಗೇ ಯಾರೂ ಮಾಡಲು ಸಾಧ್ಯ ಇಲ್ಲ. ಅಂತಹವನು ಕಾಡಿಗೆ ಹೋಗಬೇಕೇ? ನೀನು ಬಿಡು, ಸಾವಿರಾರು ಸ್ತ್ರೀಯರು ಇದ್ದಾರೆ ಅಂತಃಪುರದಲ್ಲಿ. ಒಬ್ಬರು ಒಂದು ಮಾತು ರಾಮನ ಬಗ್ಗೆ ಹೇಳಿದರೆ ಹೇಳು. ಪರಿವಾದವೂ ಇಲ್ಲ, ಅಪವಾದವೂ ಇಲ್ಲ ರಾಮನ ಬಗ್ಗೆ. ಶುದ್ಧ ಮನಸ್ಸಿನಿಂದ ಎಲ್ಲರನ್ನೂ ಪ್ರೀತಿ ಮಾಡುವಂಥವನು ಅವನು. ಸತ್ಯದಿಂದ ಲೋಕವನ್ನು ಜಯಿಸ್ತಾನೆ, ದಾನದಿಂದ ದೀನರನ್ನು ಜಯಿಸ್ತಾನೆ, ಶುಶ್ರೂಷೆಯಿಂದ ಗುರುಗಳನ್ನು ಗೆದ್ದುಕೊಳ್ತಾನೆ, ಯುದ್ಧದಲ್ಲಿ ಶತ್ರುಗಳನ್ನು ಗೆಲ್ತಾನೆ, ಅಂಥವನು. ಅವನಲ್ಲಿ ಸತ್ಯವಿದೆ, ತ್ಯಾಗವಿದೆ, ತಪಸ್ಸಿದೆ, ಮೈತ್ರಿಯಿದೆ, ಶೌಚವಿದೆ, ಋಷಿತ್ವವಿದೆ, ಗುರುಶುಶ್ರೂಷೆಯಿದೆ, ವಿದ್ಯೆ ಇದೆ. ಅಂತಹ ಮಹರ್ಷಿತಮ ತೇಜಸ್ವಿಯಾಗಿರತಕ್ಕಂಥಾ ದೇವತೆಯಂಥವನಿಗೆ ಕೆಡುಕನ್ನು ಮಾಡಲು ಹೊರಟೆಯಾ?
ಈವರೆಗಿನ ಬದುಕಿನಲ್ಲಿ ಒಂದು ಮಾತು ನನಗೆ ನೋವಾಗುವಂತೆ ಆಡದಿದ್ದವನು, ಅಂಥವನನ್ನು ಈಗ ನಾನು ಹೇಗೆ ಕಾಡಿಗೆ ಹೋಗುವಂತೆ ಹೇಳಲಿ? ಯಾವುದಕ್ಕೆ ಯಾವುದು ಪ್ರತಿಕ್ರಿಯೆ? ನಿನಗಾಗಿ ಈ ಮಾತನ್ನು ಹೇಳುವ ಪರಿಸ್ಥಿತಿ ನನಗೆ ಬಂತಲ್ಲಾ! ಅವನನ್ನುಳಿದು ನಾಳೆಯಿಂದ ಯಾರು ಗತಿ ನನಗಿನ್ನು?" ದೀನನಾಗಿ ಯಾಚನೆ ಮಾಡುತ್ತಾನೆ. "ಕೈಕೇಯಿ, ಮುಪ್ಪಿನಲ್ಲಿ ಸಾಯಬೇಕಾದರೆ ನೆಮ್ಮದಿಯಿಂದ ಬಿಟ್ಟುಬಿಡು. ಬೇಡಿಕೊಳ್ಳುತ್ತಿದ್ದೇನೆ ನಿನ್ನಲ್ಲಿ, ಕರುಣೆ ತೋರು. ಈ ಭೂಮಂಡಲದಲ್ಲಿ ಏನು ಬೇಕಾದರೂ ಕೇಳು. ಕ್ಷಮಿಸು, ಕರುಣೆ ತೋರು, ಈ ಒಂದು ವಿಷಯ ಬಿಟ್ಟುಬಿಡು. ರಾಮನಿಗೆ ಆಶ್ರಯ ಕೊಡು, ರಾಮನ ರಕ್ಷಣೆ ಮಾಡು. ನನಗೆ ಪಾಪ ತಟ್ಟದಿರಲಿ. ಮಾಡಿದರೂ ಮಹತ್ತಾದ ಅನ್ಯಾಯ, ಮಾಡದಿದ್ದರೆ ಮಾತಿಗೆ ತಪ್ಪಿದ ಪಾಪ". ಹೀಗೆ ದುಃಖಸಂತಪ್ತನಾಗಿ ವಿಲಪಿಸುತ್ತಿದ್ದಾನೆ. ಶೋಕಸಾಗರದ ದಡ ಸೇರಲಿಕ್ಕೆ ಹಾತೊರೆಯುತ್ತಿದ್ದಾನೆ.
ಅಂತಹ ರಾಜನ ಮಾತುಗಳಿಗೆ ರೌದ್ರಾವತಾರ ತಾಳಿದ ಕೈಕೇಯಿ , "ನೀನೀಗ ಕೊಟ್ಟ ಮಾತಿಗೆ ತಪ್ಪಿದರೆ ನಿನ್ನ ಧಾರ್ಮಿಕತ್ವವೇ ಹೋಗಿಬಿಡುತ್ತದೆ. ರಾಜರ್ಷಿಗಳ ಮಧ್ಯೆ ಹೇಗೆ ಕೂರುವೆ? ಯಾರು ನನ್ನನ್ನು ರಕ್ಷಿಸಿದಳೋ, ಅಂಥವಳಿಗೆ ಕೊಟ್ಟ ಮಾತನ್ನು ತಪ್ಪಿದೆನೆಂದು ಹೇಳುವೆಯಾ? ರಾಜಕುಲಕ್ಕೆ ಕಳಂಕವಾಗಬೇಡ. ನಾನು ಕೇಳಿದ್ದನ್ನು ಮಾಡು" ಅಂತ ಹೇಳಿ ಶಿಬಿ ಚಕ್ರವರ್ತಿ, ರಾಜಾ ಅಲರ್ಕ, ಮತ್ತು ಸಮುದ್ರದ ದೃಷ್ಟಾಂತವನ್ನ ಕೊಡುತ್ತಾಳೆ. "ರಾಮನಿಗೆ ರಾಜ್ಯಾಭಿಷೇಕ ಮಾಡಿ ಕೌಸಲ್ಯೆಯ ಜೊತೆ ವಿಹರಿಸಲು ಹೊರಟೆಯಾ, ದುರ್ಮತಿ ನೀನು!"
ಮೂಲವಿಷಯ ಅಲ್ಲಿದೆ. "ಧರ್ಮವಾಗಲೀ ಅಧರ್ಮವಾಗಲೀ, ಸತ್ಯವಾಗಲೀ ಅಸತ್ಯವಾಗಲೀ, ನನಗೆ ಕೊಟ್ಟ ಮಾತನ್ನು ನಡೆಸು. ಇಲ್ಲವೆಂದರೆ ಈಗಲೇ ವಿಷ ಕುಡಿದು ಸಾಯುವೆ ನಿನ್ನ ಮುಂದೆ. ನನ್ನ ಬದುಕಿನಲ್ಲಿ ಒಂದು ದಿನವಾದರೂ ಕೌಸಲ್ಯೆಗೆ ಗೌರವ ಸಲ್ಲಿಸುವ ದಿನ ಬರದಿರಲಿ. ಭರತನ ಮೇಲಾಣೆ, ನನ್ನ ಮೇಲಾಣೆ, ರಾಮ ಕಾಡಿಗೆ ಹೋಗುವುದೇ ಬೇಕು ನನಗೆ". ಎಂದು ಹೇಳಿ ಸುಮ್ಮನಾದಳು ಕೈಕೇಯಿ. ರಾಜ ಕೇಳಿದ ಆಕೆಯ ಮಾತನ್ನು. ಆತನಿಗೂ ಮಾತು ಬರಲಿಲ್ಲ. ಬೆಪ್ಪನಂತೆ ನೋಡುತ್ತಾ ಇದ್ದು ಬಿಟ್ಟ ಕೈಕೇಯಿಯನ್ನೇ. ಆಮೇಲೆ ದೊಪ್ಪನೆ ಬಿದ್ದುಬಿಟ್ಟ ಉರುಳಿ ಧರೆಯಲ್ಲಿ. ರಾಮಾ ಎಂಬೊಂದು ಉದ್ಘಾರ, ನಿಟ್ಟುಸಿರು. ಅಷ್ಟೇ, ಬಿದ್ದುಹೋದ.
ಹುಚ್ಚುಹಿಡಿದಂತೆ, ವ್ಯಾಧಿಗ್ರಸ್ತನ ಹಾಗೆ ಅಥವಾ ಹಲ್ಲು ಕಿತ್ತ ಸರ್ಪದ ಹಾಗೆ ತನ್ನ ತೇಜಸ್ಸನ್ನೇ ಕಳಕೊಂಡು ನಿಸ್ತೇಜನಾದ ಜಗತೀಪತಿ. ಮತ್ತೆ ಏಳುವಾಗ 'ಯಾರು ಹೇಳಿಕೊಟ್ಟಿದ್ದು ನಿನಗೆ ಹೇಳು' ಎಂದು ಕೇಳಿದ.
ಅವಳು ಹೇಳಲಿಲ್ಲ. ನನಗಾಗಿ, ಲೋಕಕ್ಕಾಗಿ, ಭರತನಿಗಾಗಿ ಈ ನಿಶ್ಚಯವನ್ನು ಬಿಟ್ಟುಬಿಡೆಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ ದಶರಥ. "ರಾಮನನ್ನುಳಿದು ಖಂಡಿತವಾಗಿಯೂ ಭರತ ರಾಜ್ಯವಾಳಲಾರ, ನೆನಪಿಡು. ಈ ವಿಷಯದಲ್ಲಿ ರಾಮನಿಗಿಂತ ಗಟ್ಟಿ ಇರಬಹುದು ಭರತ ನೋಡು ನೀನು. ಗುರುಹಿರಿಯರ, ಸಚಿವರ, ಅನೇಕ ದೊರೆಗಳ, ಪಂಡಿತರ ಇವರೆಲ್ಲರ ಜೊತೆ ಕೂತು ನಿಶ್ಚಯ ಮಾಡಿದ ನಿರ್ಣಯವನ್ನು ಹೇಗೆ ಬಿಟ್ಟುಬಿಡಲಿ?" ತುಂಬಾ ಕ್ಲೇಶಗಳಿವೆ ದಶರಥನಿಗೆ. "ನಾಳೆ ಬೆಳಗಾದರೆ ಅವರುಗಳೆಲ್ಲ ಏನೆಂದಾರು? ತಿಳಿದವರು ಏನೆಂದಾರು? ರಾಮ ಕಾಡಿಗೆ ಎಂದು ಗೊತ್ತಾದಾಗ ಕೌಸಲ್ಯೆ ನನಗೇನೆಂದಾಳು? ಇಂಥಾ ಕೇಡನ್ನು ಮಾಡಿ ಆಕೆಗೆ ಏನೆನ್ನಲಿ? ಕೌಸಲ್ಯೆ ದಾಸಿಯಂತೆ, ಪ್ರಿಯಸಖಿಯಂತ, ಪತ್ನಿಯಂತೆ, ತಂಗಿಯಂತೆ, ತಾಯಿಯಂತೆ ಹೀಗೆ ಪರಿಪರಿಯಾಗಿ ಬಂದಳು. ನಾನು ದೂರ ತಳ್ಳಿದೆ ಅವಳನ್ನು - ನಿನಗಾಗಿ. ದೆವತೆಯಂತಹವಳವಳು, ನಿನಗಾಗಿ ನಾನೇನ್ನನ್ನೂ ಮಾಡಿಲ್ಲ - ನಿನಗಾಗಿ. ಕಲ್ಲಾದೆ ಅವಳ ಪಾಲಿಗೆ - ನಿನಗಾಗಿ. ಅಲ್ಲಿ ಅವಳಿಗೆ ಮಾಡದೇ ಇದ್ದಿದ್ದು, ಇಲ್ಲಿ ನಿನಗಾಗಿ ಮಾಡಿದ್ದು. ಇಂದು ನನ್ನನ್ನು ಅವೆಲ್ಲವೂ ಸುಡುತ್ತಿದೆ, ಚುಚ್ಚುತ್ತಿದೆ. ಸುಮಿತ್ರೆಯು ಭೀತಳಾಗಿ ನಡುಗಿಯಾಳು, ಪ್ರಪಂಚದ ಮೇಲೆ ನಂಬಿಕೆ ಕಳೆದುಕೊಂಡಾಳು. ಸೀತೆಯನ್ನು ನೆನಪಿಸಿ ಅತ್ಯಂತ ದುಃಖಪಡುವಳು. ಎರಡು ದುಃಖವಾರ್ತೆ ಅವಳಿಗೆ - ರಾಮ ವನವಾಸಕ್ಕೆ, ದಶರಥ ಪರಲೋಕಕ್ಕೆ. ನಾನಂತೂ ಸಾಯುತ್ತೇನೆ. ವಿಧವಾ ರಾಜ್ಯವನ್ನಾಳು ನೀನು! ಇಷ್ಟು ಪ್ರೀತಿ ಮಾಡಿದ್ದೆಲ್ಲ ಸುಳ್ಳು ಅಲ್ಲವೇ? ಇನ್ನು ನಾಳೆ ನನ್ನ ಕಥೆಯೇನು? ನಾಳೆ ನಡುರಸ್ತೆಯಲ್ಲಿ ನನಗೆ ಧಿಕ್ಕಾರ ಕೂಗುವರು ಜನರು. ಅಯ್ಯೋ ಕಷ್ಟವೇ! ನಿನ್ನ ಮಾತನ್ನು ಕೇಳುತ್ತಾ ಇನ್ನೂ ಬದುಕಿರುವೆನಲ್ಲಾ ನಾನು!" ಅಂತ ಹೇಳಿ, "ಇಂಥಾ ಕಾಡಿಗಟ್ಟುವ ತಂದೆ ಬೇಕಾ ರಾಮನಿಗೆ? ಇಲ್ಲಿಯವರೆಗೂ ಅವನಿಗೆ ಗುರುಕುಲವಾಸದ, ಬ್ರಹ್ಮಚರ್ಯವಾಸದ ಕಷ್ಟ, ಅದು ಮುಗಿಸಿ ಬಂದಿರುವನಷ್ಟೇ".
ರಾಮ ಒಪ್ಪದೇ ಇದ್ದು ಬಿಟ್ಟಿದ್ದರೇ? ಎನ್ನುವ ಯೋಚನೆ ಬಂತು ದಶರಥನಿಗೆ. "ಅವನು ನನ್ನ ಮಾತನ್ನು ಧಿಕ್ಕರಿಸಿದರೇ ಸುಖವಾಗಿತ್ತು ನನಗೆ. ಆದರೆ ಅವನು ಹಾಗೆ ಮಾಡುವುದಿಲ್ಲ.
ಹೇಗೂ ನಾನು ಸಾಯುವವನೇ, ನಾನು ಸತ್ತ ಮೇಲೆ, ರಾಮ ಕಾಡಿಗೆ ಹೋದ ಮೇಲೆ ಇನ್ನುಳಿದ ನನ್ನವರಿಗೆ ನೀನು ಏನೇನು ಮಾಡುವೆಯೋ? ಕೌಸಲ್ಯೆಯನ್ನು, ಸುಮಿತ್ರೆಯನ್ನೂ, ಭರತನುಳಿದು ನನ್ನ 3 ಮಕ್ಕಳನ್ನೂ ನರಕಕ್ಕೆ ಹಾಕಿ ನೀನು ಸುಖವಾಗಿರು.
ಈ ಘಟನೆ ಭರತನಿಗೆ ಪ್ರಿಯವಾದರೆ, ಒಪ್ಪಿತವಾದರೆ ಅವನಿತ್ತ ಪಿಂಡ ನನಗೆ ತಲುಪದಿರಲಿ, ನಿನ್ನ ಮಗ ನನ್ನ ಅಂತ್ಯಕ್ರಿಯೆ ಮಾಡಬಾರದು" ಎನ್ನುವ ಪ್ರತಿಜ್ಞೆ ಮಾಡಿದ.
"ನನ್ನ ಮಗು ಹೇಗೆ ನಡೆಯುತ್ತಾನೆ ಕಾಡಿಗೆ? ಆ ವಗರನ್ನ ಹೇಗೆ ಸೇವಿಸಿಕೊಂಡಿರುತ್ತಾನೆ? ನಾಳೆಯಿಂದ ನಾರುಮುಡಿಯನ್ನು ಉಡಬೇಕು! ಯಾರು ಈ ಕೆಡುಕನ್ನು ಚಿಂತನೆ ಮಾಡಿದರು?" ಕುತೂಹಲ ಆತನಿಗೆ! ಸ್ತ್ರೀಕುಲಕ್ಕೆ ಧಿಕ್ಕಾರ ಎಂದು ಕೂಗಿದವ ಮರುಕ್ಷಣವೇ ಎಲ್ಲರಿಗೂ ಅಲ್ಲ ಕೈಕೇಯಿಗೆ ಧಿಕ್ಕಾರ, ಭರತನ ತಾಯಿಗೆ ಮಾತ್ರವೇ ಹೋಗಲಿ ಈ ಮಾತು.. ಎಂದ!
ಕೊನೆಗೆ ಹೇಳಿದ, "ನಾನು ಮಗನನ್ನು ತ್ಯಾಗ ಮಾಡುತ್ತಿದ್ದ ಹಾಗೇ ಏನೇನಾಗಬಹುದೋ.. ಜಗತ್ತೆಲ್ಲವೂ ಕುಪಿತವಾಗಬಹುದು" ಎಂಬುದಾಗಿ ಹೇಳಿ "ನನ್ನ ಶತ್ರುಗಳಿಗೆ ನೀನೊಂದು ವರದಾನವಾಗಿ ಬಂದೆ" ಎಂದು ಹೇಳಿ ನಿನ್ನ ಹಲ್ಲೆಲ್ಲ ಯಾಕೆ ಉದುರಬಾರದು, ಕೇಕಯ ಕುಲ ಕಲಂಕಳೇ ಎಂದೆಲ್ಲಾ ತುಂಬಾ ಬೈದು "ನಿನ್ನ ಮಾತನ್ನು ನಡೆಸೋದಿಲ್ಲ ನಾನು, ನೀನು ಸತ್ತುಹೋದರೂ ಚಿಂತೆಯಿಲ್ಲ" ಅಂದರೂ.. ನಡೆಸಲೇಬೇಕು, ಅನ್ಯಮಾರ್ಗವಿಲ್ಲ. ಇಷ್ಟು ಹೇಳಿ ಆ ಭೂಮಿಪಾಲ ಬೇರೆ ದಾರಿ ಕಾಣದೇ ಮತ್ತೆ ಆಕೆಯ ಕಾಲಿಗೆ ಬಿದ್ದುಬಿಟ್ಟ, ಆದರೆ ಕಾಲನ್ನ ಮುಟ್ಟದೇ ಬಿದ್ದುಬಿಟ್ಟ ದಶರಥ ಮುಂದಿನ ದಾರಿಗಾಣದೆ...
ಇಂತಹಾ ಸ್ಥಿತಿ ಯಾರಿಗೂ ಬರಬಾರದು. ಇದು ಅತಿ ಕ್ರೂರವಾದ ಪ್ರಸಂಗ.
ಶತ್ರು ಬೇಕಾದರೆ ಎದೆ ಮೆಟ್ಟಲಿ, ಆದರೆ ಯಾರನ್ನು ತುಂಬಾ ಪ್ರೀತಿ ಮಾಡಿರುತ್ತೇವೋ ಅವರೇ ಇಷ್ಡು ದೊಡ್ಡ ಅನ್ಯಾಯ ಮಾಡಿದರೆ ಆಗುವ ಆಘಾತ ತುಂಬಾ, ತುಂಬಾ ದೊಡ್ಡದು ~ #ಶ್ರೀಸೂಕ್ತಿ
ಆದರೆ ಅನಿವಾರ್ಯ ವಿಧಿಗದು. ಹಾಗಾಗಿ ವಿಧಿ ಇಂಥಾ ದೊಡ್ಡ ಆಟವನ್ನ ಆಡಿದೆ. ನೋಡೋಣ ಎಲ್ಲಿಯವರೆಗೆ ಹೋಗುತ್ತದೆ ಇದು, ದಶರಥನಿಗೆ ಎಲ್ಲಿಯಾದರೂ ನೆಮ್ಮದಿ ಇದೆಯಾ? ಎಲ್ಲಿದೆ? ಎನ್ನುವುದನ್ನ ಮುಂದಿನ ಪ್ರವಚನದಲ್ಲಿ ನೋಡೋಣ..
#DhaaraRaamayan

No comments:
Post a Comment
Please leave your comments here.....