#ಧಾರಾ_ರಾಮಾಯಣ - 19-07-2019 ದಿನ26
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ
ನೆಮ್ಮದಿಯ ಹತ್ತಿರದ ದಾರಿ ನಂಬಿಕೆ.
ನೆಮ್ಮುವುದರಿಂದ ನೆಮ್ಮದಿ. ಒಂದು ವ್ಯಕ್ತಿತ್ವ ಅಥವಾ ಶಕ್ತಿಯನ್ನು ಪೂರ್ಣವಾಗಿ ಆಶ್ರಯಿಸಿದ್ದಲ್ಲಿ ಅದರ ಪಕ್ಕದಲ್ಲೇ ನೆಮ್ಮದಿಯಿದೆ. ನಂಬಿಕೆಯನ್ನು ಕೆಡಿಸುವುದೆಂದರೆ ತಲೆಕಡಿಯುವುದಕ್ಕಿಂತಲೂ ಕೆಟ್ಟದು. ದೇವರನ್ನು ಪೂರ್ಣವಾಗಿ, ಗಟ್ಟಿಯಾಗಿ ನಂಬಿದರೆ ಆ ನಂಬಿಕೆಯೇ ಸಾಕ್ಷಾತ್ಕಾರವಾಗಿ ಪರ್ಯವಸಾನವಾಗುತ್ತದೆ. ಕೆಲವು ಬಾರಿ ವ್ಯಕ್ತಿಯನ್ನು ನಂಬಿದರೆ ಸ್ವಲ್ಪ ಆಚೀಚೆಯಾಗುವುದು, ತೊಂದರೆಯಾಗುವುದು ಸಹಜ. ಹಾಗಾಗಿ ನಂಬುವುದೆಂದರೆ ನೂರು ಸಾವಿರ ಸಲ ಯೋಚನೆ ಮಾಡಿ ನಂಬಬೇಕು. ಹಾಗೆಯೇ, ಒಬ್ಬನನ್ನು ನಂಬಬೇಡ ಎಂದು ಹೇಳುವಾಗ ನೂರು ಬಾರಿ ಯೋಚಿಸಬೇಕು, ಅವನು ಕೆಟ್ಟವನೇ ಹೌದಾ, ಆಥವಾ ನನ್ನ ಭ್ರಮೆಯಾ ಎಂಬುದಾಗಿ. ಹಿತೈಷಿಯಲ್ಲದೇ ನಂಬಿಕೆಯನ್ನು ಕೆಡಿಸುವುದಕ್ಕೆ ಕ್ಷಮೆಯಿಲ್ಲ.
ಮಂಥರೆ ಕೈಕೇಯಿಯ ದಶರಥನ ಮೇಲಿನ ನಂಬಿಕೆಯನ್ನು ತನ್ನ ಸ್ವಾರ್ಥಕ್ಕೋಸ್ಕರ ಕೆಡಿಸುವ ಪ್ರಯತ್ನವನ್ನು ಮಾಡುತ್ತಾಳೆ. ಆಕೆ ಕೈಕೇಯಿಯ ಹಿತೈಷಿ ಹೌದು ಒಂದು ಮಟ್ಟಿಗೆ, ಆದರೆ ಕೈಕೇಯಿಯ ಮುಖಾಂತರ ತನ್ನ ವಶದಲ್ಲಿ ಎಲ್ಲವೂ ಇರಬೇಕೆಂಬ ಸ್ವಾರ್ಥ ಮಂಥರೆಯದ್ದು.
ಮಂಥರೆಯು, " ಅಶ್ವಪತಿಯ ಮಗಳೇ, ರಾಜಕುಮಾರಿಯಾಗಿದ್ದವಳು ನೀ, ರಾಜವಂಶಕ್ಕೇ ಮದುವೆಯಾಗಿ ಬಂದವಳು. ಆದರೂ ರಾಜನೀತಿಯ ಕಲಾಪನೆ ನಿನಗೇಕಿಲ್ಲ? ರಾಜನೀತಿಯು ಕಠೋರ, ಹೆಂಡತಿ ಮಕ್ಕಳು ಅಂತಿಲ್ಲ. ನಿನ್ನ ಗಂಡ ಮಾತಿನಲ್ಲಿ ಧರ್ಮಿಷ್ಠ, ಆದರೆ ಮಾಡುವುದು ಮೋಸ, ಆಪ್ಯಾಯವಾದ ಮಾತುಗಳನ್ನು ಆಡುವನು ಆದರೆ ಕ್ರೂರಿ. ನಿನ್ನದು ಹಾಲು ಮನಸ್ಸು, ನಿನಗೆ ಗೊತ್ತಾಗುತ್ತಿಲ್ಲ, ರಾಜನಿಂದ ವಂಚಿಸಲ್ಪಟ್ಟಿರುವೆ. ನಿನ್ನ ಮುಂದೆ ಪ್ರೀತಿಮಾತುಗಳನ್ನು ಆಡುತ್ತಾನೆ ಆದರೆ ಆತನು ನಿಜವಾಗಿ ಉಪಕಾರವನ್ನು ಮಾಡುತ್ತಿರುವುದು ಕೌಸಲ್ಯೆಗೆ. ಅದಲ್ಲದಿದ್ದರೆ, ಭರತನನ್ನು ಕೇಕಯಕ್ಕೆ ಕಳುಹಿಸಿ, ಸಾಗಹಾಕಿ ರಾಮನಿಗೆ ಪಟ್ಟಕಟ್ಟುತ್ತಿದ್ದಾನೆ? ದುಷ್ಟಾತ್ಮ ಅವನು, ನಾಳೆ ಬೆಳಗಾದರೆ ರಾಮನನ್ನು ಪಟ್ಟದಲ್ಲಿ ಕೂರಿಸುತ್ತಿದ್ದಾನೆ. ಪತಿಯ ನೆಪದಲ್ಲಿ ಶತ್ರು ಇವನು, ಸರ್ಪ ಇವನು, ಪಾಪಿ. ಮಗೂ, ನೀನು ದುಃಖಕ್ಕೆ ಯೋಗ್ಯಳಲ್ಲ, ಆದರೆ ಅವನು ಮಾಡುತ್ತಿರುವುದೇನು? ರಾಮನಿಗೆ ಪಟ್ಟಕಟ್ಟಿದರೆ, ಪರಿಹಾರ ಸಹಿತವಾಗಿ ನಿನ್ನ ಸರ್ವನಾಶ ಕಟ್ಟಿಟ್ಟಬುತ್ತಿ. ತಡಮಾಡದೆ ನೀನು ನಿನ್ನ ಒಳಿತಿಗಾಗಿ ದಾರಿಯನ್ನು ಕಂಡುಕೋ. ಭರತನನ್ನು, ನಿನ್ನನ್ನು, ನನ್ನನ್ನೂ ಕಾಪಾಡಿಕೊ!!" ಎಂದಳು.
ಬಾನಂಗಳದಲ್ಲಿ ಚಂದ್ರರೇಖೆ ಮೇಲೇಳುವ ಹಾಗೆ ಕೈಕೇಯಿ ಸಂತೋಷದಲ್ಲಿ ಮಂಚದಿಂದ ಎದ್ದಳು. ಅತ್ಯಂತ ಸಂತುಷ್ಟಳಾಗಿ ಕೈಗೆ ಸಿಕ್ಕಿದ ಉತ್ತಮವಾದ ಆಭರಣವನ್ನು ಮಂಥರೆಗೆ ಕೊಟ್ಟಳು. "ಪರಮಪ್ರಿಯವನ್ನು ನನಗೆ ಹೇಳಿದೆ ನೀನು ಮಂಥರೆ. ಈ ನಿನಗೆ ಕೊಟ್ಟ ಆಭರಣ ಸಾಲದು, ಇನ್ನೂ ವಿಶೇಷವಾದದ್ದನ್ನು ಕೊಡಬೇಕು. ಯಾಕೆ? ರಾಮನಾದರೇನು, ಭರತನಾದರೇನು? ನನಗೆ ಯಾವ ವ್ಯತ್ಯಾಸವೂ ಇಲ್ಲ! ಆದ್ದರಿಂದಾಗಿ ರಾಜನು ರಾಮನಿಗೆ ಪಟ್ಟಾಭಿಷೇಕಮಾಡುವುದು ನನಗೆ ಸಂತೋಷವಾಗಿದೆ. ಇದಕ್ಕಿಂತ ಪ್ರಿಯವಾದುದನ್ನು ನೀನು ನನಗೆ ಹೇಳಲು ಸಾಧ್ಯವಿಲ್ಲ. ಹಾಗಾಗಿ ನಿನಗೆ ವರ ಕೊಟ್ಟೆ, ಕೇಳು."
ಕೈಕೇಯಿಯ ಇಷ್ಟು ಒಳ್ಳೆಯತನ ಮಂಥರೆಗೆ ಸಹ್ಯವಾಗಲಿಲ್ಲ. ಮಂಥರೆಯು ಕೈಕೇಯಿಯು ಕೊಟ್ಟ ಆಭರಣವನ್ನು ಎಸೆದಳು. ಕೋಪ ದುಃಖ ಎರಡೂ ಆಯಿತಂತೆ. "ಬಾಲಿಶಳು ನೀನು. ಶೋಕಸಮುದ್ರದಲ್ಲಿ ಮುಳುಗಿ ಹೋದರೂ ನಿನಗೆ ಗೊತ್ತಾಗುತ್ತಿಲ್ಲ. ಇಂತಹಾ ಆಪತ್ತು ಬಂದರೂ ಸಂತೋಷವೇ? ಸವತಿಯ ಮಗನ ಅಭ್ಯುದಯಕ್ಕೆ ಸಂತೋಷವೇ? ಸವತಿಯ ಮಗ ಶತ್ರು ಇದ್ದಂತೆ. ರಾಮನಿಗೆ ಪಟ್ಟಕಟ್ಟಿದರೆ ನಿನಗೆ ಮೃತ್ಯುವೇ. ಅವನಿಂದ ಭರತನಿಗೆ ಅಪಾಯ, ಏಕೆಂದರೆ ರಾಜ್ಯಕ್ಕಾಗಿ ರಾಮನಿಗೆ ಭರತನೇ ಸ್ಪರ್ಧಿ. ಹಾಗಿದ್ದಾಗ ರಾಜನಾದವನು ಬಿಡುವನೇ? ಭರತನು ಜೀವಂತ ಇರುವುದಿಲ್ಲ. ಕೌಸಲ್ಯೆಯೇ ಭಾಗ್ಯವಂತೆ, ಇಷ್ಟು ದೊಡ್ಡ ರಾಜ್ಯ ಅವಳ ಮಗನಿಗೆ ಹೋಗುವುದು. ನೀನು ನಾಳೆಯಿಂದ ಕೌಸಲ್ಯೆಯ ದಾಸಿಯಾಗುವುದು ಖಚಿತ. ನೀನೇ ಹಾಗಾದಮೇಲೆ ನಾವೆಲ್ಲ ಅವಳ ದಾಸಿಯ ದಾಸಿಯಂದಿರು. ನಾಳೆಯಿಂದ ನಾನೂ ನೀನೂ ಒಂದೇ, ನೀನೂ ದಾಸಿ ನಾನೂ ದಾಸಿ. ರಾಮನ ಬಳಗ ಸಂತೋಷ ಪಡುತ್ತದೆ ಆದರೆ ನಿನ್ನ ಬಳಗ ದುಃಖದಿಂದ ಕೊರಗಬೇಕಾದೀತು. ಹಾಗಾಗಿ ಕೂಡಲೇ ಕಾರ್ಯಕ್ಷೇತ್ರಕ್ಕೆ ಇಳಿ" ಎಂದು ಕಪಟದಿಂದ ನುಡಿದಳು.
ಆಗಲೂ ಕೈಕೇಯಿಯ ಒಳಗೆ ಇದಾವುದೂ ಹೋಗಲಿಲ್ಲ. ರಾಣಿ, ರಾಮನ ಗುಣವನ್ನು ಎತ್ತಿ ಎತ್ತಿ ಹೊಗಳುತ್ತಾಳೆ. "ಅವನು ಧರ್ಮಜ್ಞ, ಉತ್ತಮ ಗುರುಗಳು ಶಿಕ್ಷಣ ಕೊಟ್ಟಿದ್ದಾರೆ, ದುರ್ಮಾರ್ಗಿಯಲ್ಲ, ನನ್ನ ಪ್ರೀತಿಯನ್ನು ಮರೆಯಲಾರ, ನಿರ್ಮಲ ಅವನು, ನೀನು ಏನೇ ಹೇಳು, ದಶರಥನ ದೊಡ್ಡ ಮಗ ರಾಮ, ಹಾಗಾಗಿ ಪಟ್ಟ ಅವನಿಗೇ ಸೇರಬೇಕು. ಭರತನಿಗೆ ತೊಂದರೆಯೇ? ಸಾಧ್ಯವಿಲ್ಲ. ತನ್ನ ತಮ್ಮಂದಿರನ್ನು ಸ್ವಂತ ತಂದೆಯಂತೆ ನೋಡಿಕೊಳ್ಳುತ್ತಾನೆ. ಸೇವಕರನ್ನು ಮಕ್ಕಳಂತೆ ನೋಡುವವನು ರಾಮ ತಮ್ಮಂದಿರನ್ನು ಹಾಗೆ ನೋಡದಿರುವನೇ? ರಾಮ ದೀರ್ಘಾಯುವಾಗಲಿ. ಬಹುಕಾಲ ಬಾಳಿ ತಮ್ಮಂದಿರನ್ನು ಪಾಲಿಸಲಿ. ಇಂತಹಾ ಸಂದರ್ಭದಲ್ಲಿ ಏಕೆ ಹೀಗೆ ಹೇಳುವೆ? ಅಸಂಖ್ಯ ವರ್ಷಗಳ ಕಾಲ ರಾಜ್ಯವನ್ನು ಆಳಿದ ನಂತರ ವಾನಪ್ರಸ್ಥಕ್ಕೆ ಹೋಗುವ ಸಮಯದಲ್ಲಿ ಭರತನಿಗೆ ಕೊಟ್ಟು ಹೋಗಲಿ. ಆಗ ರಾಜ್ಯವಾಳಲಿ ಭರತ. ತಪ್ಪೇನು, ಅವನ ನಂತರವೇ ಹುಟ್ಟಿದವನು. ನಿನಗೇನಾಗಿದೆ? ಯಾಕೆ ಹೀಗಾಡುತ್ತಿದಾದೀಯಾ? ಕೊನೆಗೆ, ಭರತ ಹೇಗೆ ನನಗೆ ಮಾನ್ಯನೋ ರಾಮ ಅದಕ್ಕಿಂತ ಹೆಚ್ಚು ಮಾನ್ಯನು. ಏಕೆಂದರೆ, ರಾಮನು ಕೌಸಲ್ಯೆಗಿಂತ ಹೆಚ್ಚು ನನ್ನ ಸೇವೆ ಮಾಡಿದ್ದಾನೆ. ಬೇಡದ ಮಾತುಗಳನ್ನು ಆಡಬೇಡ ಮುಚ್ಚುಬಾಯಿ" ಎಂದು ವಿಶ್ವಾಸದಿಂದ ಹೇಳಿದಳು ರಾಣಿ.
ಅತೀವ ದುಃಖದಿಂದ ಕೂಡಿದ ದಾಸಿ ದೀರ್ಘ ಬಿಸಿ ಉಸಿರು ಬಿಟ್ಟು ಕೈಕೇಯಿಗೆ ಹೇಳುತ್ತಾಳೆ, "ಮೌಢ್ಯೆ ನೀನು, ಅರ್ಥವಾಗುತ್ತಿಲ್ಲ ನಿನಗೆ. ರಾಮನಾದ ಮೇಲೆ ಆತನ ಮಕ್ಕಳು ರಾಜ್ಯವನ್ನಾಳುತ್ತಾರೆ, ಭರತನಲ್ಲ. ಹಿರಿಯ ಮಕ್ಕಳಿಗೆ ರಾಜ್ಯ ಕೊಡುವುದು ಪದ್ಧತಿ, ಹಾಗೆಯೇ ಗುಣವಂತರಾದ ಮಕ್ಕಳಿಗೂ ಆಳಲು ಅರ್ಹರು. ನಿನ್ನ ಮಗ ರಾಜಪರಂಪರೆಯಿಂದ ಚ್ಯುತನಾಗುವನು. ನನ್ನ ಮೇಲೆ ನಿನಗೆ ಪ್ರೀತಿಯಿಲ್ಲ, ಕೌಸಲ್ಯೆಯ ಮೇಲೆ ಪ್ರೀತಿ. ನಾನು ದುಃಖದಿಂದ ಬಂದರೆ ಕೌಸಲ್ಯೆಯ ಮಗ ರಾಜನಾಗುವುದಕ್ಕೆ ಸಂತೋಷಿಸಿ ನೀನು ನನಗೆ ಆಭರಣ ಕೊಡುತ್ತೀಯ? ರಾಮನು ರಾಜನಾದರೆ ಭರತನನ್ನು ದೇಶಾಂತರಕ್ಕೆ ಅಥವಾ ಪರಲೋಕಕ್ಕೆ ಕಳುಹಿಸುತ್ತಾನೆ ರಾಮ. ಹಾಗಾಗಿ ಒಂದು ಕೆಲಸ ಮಾಡು, ಅಲ್ಲಿಂದ ಬರುವುದೇ ಬೇಡ ಎಂದು ಸಂದೇಶ ಕಳುಹಿಸು ಭರತನಿಗೆ, ಹಾಗೇ ಕಾಡಿಗೆ ಹೋಗಿಬಿಡಲಿ ಅವನು, ಇಲ್ಲಿ ಬಂದರೆ ವಧೆ ನಿಶ್ಚಿತ. ಇದೆಲ್ಲಾ ಬಿಡು, ಮುಂದೆ ನಾನು ಹೇಳುವುದನ್ನು ಯೋಚಿಸು. ಈವರೆಗೆ ನೀನು ಕೌಸಲ್ಯೆಯನ್ನು ರಾಜನಿಗೆ ನೀನು ಹತ್ತಿರದವಳು ಎಂಬ ದರ್ಪದಿಂದ ಅವಳನ್ನು ಪೀಡಿಸಿದ್ದನ್ನು ರಾಜಮಾತೆಯಾದಮೇಲೆ ಆಕೆ ತೀರಿಸದೆ ಇರಬಹುದೇ!!?? ಕೌಸಲ್ಯೆಯೇ ನಿಜವಾದ ಸ್ಪರ್ಧಿ." ಎಂದು ರಾಣಿಗೆ ಹೇಳಿದಳು. ಈ ಕೊನೆಯ ಮಾತು ಕೆಲಸಮಾಡಿತು. ರಾಮ ದಶರಥರು ಎಷ್ಟು ಸರಿ ಎಂದು ಗೊತ್ತಿದ್ದದ್ದಕ್ಕಾಗಿ ಬೇರೆ ಯಾವ ಮಾತುಗಳೂ ಅಲ್ಲಿ ಕೆಲಸಮಾಡಲಿಲ್ಲ, ಆದರೆ ತಾನೆಷ್ಟು ತಪ್ಪು ಎಂಬುದು ಗೊತ್ತಿದ್ದಿದ್ದರಿಂದ ಮಂಥರೆಯ ಆ ಕೊನಯ ಮಾತು ಕೈಕೇಯಿಯಲ್ಲಿ ಕೆಲಸಮಾಡಿತು.
ಕೈಕೇಯಿಯ ಮುಖ ಕ್ರೋಧದಿಂದ ಉರಿದುಹೋಯಿತು. ಉಸಿರು ಬಿಸಿಯಾಯಿತು. ಆಕೆಯು "ಇಂದೇ ರಾಮನನ್ನು ಕಾಡಿಗೆ ಅಟ್ಟುತ್ತೇನೆ, ನನ್ನ ಮಗನಿಗೆ ಪಟ್ಟಾಭಿಷೇಕವಾಗಬೇಕು" ಎಂದಳು!
ಮಂಥರೆಯಲ್ಲಿ ಕೈಕೇಯಿಯು ಉಪಾಯವನ್ನು ಕೇಳಿದಾಗ ರಾಮನ ಶ್ರೇಯಸ್ಸನ್ನು ನಾಶಪಡಿಸುವ ಯೋಜನೆಯಲ್ಲಿ ದಾಸಿಯು, "ನಿನಗೆ ಮರೆತುಹೋಯಿತೇ ಅಥವಾ ನಾಟಕವಾಡುತ್ತಿದ್ದೀಯಾ ಅಥವಾ ನನ್ನ ಬಾಯಲ್ಲೇ ಕೇಳಬೇಕು ಎಂಬ ಆಸೆಯಾ? ಹಾಗಿದ್ರೆ ಹೇಳ್ತೇನೆ ಕೇಳು. ದೇವದಾನವರ ಯುದ್ಧದಲ್ಲಿ ದಶರಥನು ಇಂದ್ರನಿಗೆ ಸಹಾಯ ಮಾಡಲು ಹೋದಾಗ ನಿನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದ. ಶಂಭರಾಪುರದಲ್ಲಿ ಘೋರಯುದ್ಧದಲ್ಲಿ ರಾಜ ಗಾಯಗೊಂಡಾಗ ನೀನು ಆತನಿಗೆ ಸಹಾಯಮಾಡಿ ಬೇಕಾದ ಉಪಚಾರ ಉಪಾಯಗಳನ್ನು ಮಾಡಿ ಬದುಕಿಸಿದೆ. ನಿನಗೆ 2 ವರಗಳನ್ನು ನೀಡಿದ್ದ. ಆಗ ನೀನು, ಮುಂದೆ ಬೇಕಾದಾಗ ಕೇಳುತ್ತೇನೆ ಎಂದು ಹೇಳಿರುವೆ. ಈಗ ಆ ವರವನ್ನು ಕೇಳುವ ಸಮಯ ಬಂದಿದೆ. 1)ಭರತ ರಾಜನಾಗಬೇಕು, 2)ರಾಮನಿಗೆ 14 ವರ್ಷ ವನವಾಸ. ಅಷ್ಟು ಹೊತ್ತಿಗೆ ಭರತ ಪ್ರಜಾಸ್ನೇಹವನ್ನು ಸಂಪಾದಿಸಿ ಗಟ್ಟಿಯಾಗುತ್ತಾನೆ, ರಾಮನನ್ನು ಮರೆತುಹೋಗುವುದು.
ಅದಕ್ಕಾಗಿ ನೀನು ಕ್ರೋಧಾಗಾರವನ್ನು ಪ್ರವೇಶಿಸಬೇಕು. ದಶರಥನಿಗೆ ತಿಳಿಯಲಿ. ಕ್ರೋಧಗೊಂಡಂತೆ ನಟಿಸು, ಬರೀ ನೆಲದಲ್ಲಿ ಮಲಗು, ಕೊಳಕು ಬಟ್ಟೆಯನ್ನು ಸುತ್ತು, ಅವನು ಅಲ್ಲಿಗೆ ಬಂದೇ ಬರುವ ಆಗ ಅವನನ್ನು ನೋಡಲೇಬೇಡ, ಮಾತಂತೂ ಆಡಲೇಬೇಡ. ಅವನು ನಿನ್ನ ಕೈಗೆ ಬಂದಮೇಲಷ್ಟೇ ಮಾತಾಡು. ದೊರೆಯನ್ನು ಕಂಡಕೂಡಲೇ ಧಾರಾಕಾರವಾಗಿ ಅಳಲು ಆರಂಭಿಸು." ಎಂದು ಕೈಕೇಯಿಗೆ ಉಪಾಯವನ್ನು ನೀಡಿ ಮುಂದುವರಿಸುತ್ತಾಳೆ.
"ಗಂಡನಿಗೆ ನೀನು ಅತ್ಯಂತ ಪ್ರಿಯೆ, ನನಗೆ ಯಾವ ಸಂಶಯವೂ ಇಲ್ಲ, ನಿನಗಾಗಿ ಅವನು ಬೆಂಕಿಯನ್ನು ಹೊಕ್ಕಾನು, ಪ್ರಾಣ ಕೊಟ್ಟಾನು. ನಿನ್ನ ದುಃಖವನ್ನು ಕಾಣಲಾರ ಅವನು, ಕೈಕೇಯಿ ನಿನ್ನನ್ನು ಮೀರಲಾರನು ಅವನು. ಇಷ್ಟಾಗುವಾಗ ಅವನು ಉಡುಗೊರೆಗಳನ್ನು ಕೊಡಲು ಮುಂದೆಬರುತ್ತಾನೆ, ಮನಸ್ಸು ಮಾಡಬೇಡ, ಅದೇ ಎರಡು ವರ ಕೇಳು."
ದುಃಖವಾದಾಗ ಸಂಯಮವನ್ನು ಮೀರಬಾರದು -ಶ್ರೀಸೂಕ್ತಿ
ಅನರ್ಥವನ್ನು ಅರ್ಥವನ್ನಾಗಿ ಪರಿವರ್ತಿಸಿಕೊಂಡ ಕೈಕೇಯಿಗೆ ಮಂಥರೆಯ ಮೇಲೆ ಗರ್ವ ಬಂತು. ಆಕೆಯನ್ನು ರಾಣಿ ಹೊಗಳುತ್ತಾಳೆ. "ಕುಬ್ಜೆಯೇ, ಇಂದಿನವರೆಗೂ ನೀನು ಏನೆಂದು ಅರ್ಥ ಆಗಿರಲಿಲ್ಲ, ಈಗ ಅರ್ಥವಾಗಿದೆ. ಅತ್ಯಂತ ಶ್ರೇಷ್ಠಳು ನೀನು, ಭೂಮಂಡಲದ ಎಲ್ಲಾ ಕುಬ್ಜೆಯರಲ್ಲಿ ಬುದ್ಧಿನಿಶ್ಚಯದಲ್ಲಿ ನೀನು ಶ್ರೇಷ್ಠೆ. ನಿನ್ನ ಒಳ್ಳೆ ಬುದ್ಧಿ, ರಾಜನ ಕೆಟ್ಟ ಬುದ್ಧಿ ನನಗೆ ತಿಳಿಯಲಿಲ್ಲ. ಜಗತ್ತಿನ ಎಲ್ಲಾ ಗೂನಿಯರೂ ವಕ್ರರು, ಆದರೆ ನೀನು ಹಾಗಲ್ಲ. ನೀನೂ ಬಾಗಿದೇಯೆ ಆದರೆ ಮಲಯಮಾರುತ ಬೀಸಿಬಂದಾಗ ಪದ್ಮವೂ ಕೂಡಾ ಬಾಗುವುದಿಲ್ಲವೇ? ನೀನು ಪ್ರಿಯದರ್ಶಿನಿ, ನಿರ್ಮಲ ಚಂದ್ರನ ಹೋಲುವ ಮುಖ ನಿನ್ನದು, ಶೋಭಿಸುತ್ತಿದ್ದಿಯೇ ನೀನು, ನಡೆಯುತ್ತಾ ಹೋಗುತ್ತಿದ್ದರೆ ನೀನು ರಾಜಹಂಸಿನಿ. ಅಸುರಾಧಿಪತಿ ಶಂಭರಾಸುರನಲ್ಲಿದ್ದ ಎಲ್ಲಾ ಮಾಯೆಗಳೂ ನಿನ್ನಲ್ಲಿವೆ, ಅದು ಬಿಡು, ಅದಕ್ಕಿಂತ ಹೆಚ್ಚು ಮಾಯೆಗಳು, ಉಪಾಯಗಳು ನಿನ್ನ ಗೂನಿನಲ್ಲಿ ಅಡಗಿವೆ" ಎಂದು ಹೇಳಿ ಉಡುಗೊರೆ, ಬಹುಮಾನಗಳನ್ನು ನೀಡಿದಳು. "ಈಗ ಚಿನ್ನದ ಈ ಹಾರವನ್ನು ನಿನ್ನ ಗೂನಿಗೆ ಹಾಕುತ್ತೇನೆ, ಮುಂದೆ ಕಾರ್ಯಸಾಧನೆಯಾದಮೇಲೆ ಚಿನ್ನದ ಕವಚವನ್ನು ಮಾಡಿಸಿ ಗೂನಿಗೆ ಹಾಕುತ್ತೇನೆ." ಎಂದು ಹೇಳಿದಳು. "ಮುಖಕ್ಕೆ ಬಂಗಾರದ ತಿಲಕ, ಮೈತುಂಬ ಚಿನ್ನ, ಎಣೆಯಿಲ್ಲದ ಮುಖದವಳೇ, ಉತ್ತಮೋತ್ತಮವಾದಂತಹ ಪಟ್ಟೆಸೀರೆಗಳನ್ನುಟ್ಟು ನೀನು ದೇವತೆಯ ಹಾಗೆ ಸಂಚಾರಮಾಡುತ್ತಿದ್ದರೆ, ಎಲ್ಲರ ಹೊಟ್ಟೆಯುರಿಯಬೇಕು. ಅವರನ್ನು ಗೇಲಿಮಾಡುತ್ತಾ ಓಡಾಡಬೇಕು. ನನ್ನ ಸೇವೆಗೆ ಗೂನಿ ನೀನಿದೀಯೆ, ನಿನ್ನ ಸೇವೆಗೆ ನೂರಾರು ಗೂನಿಯರನ್ನು ನೇಮಕ ಮಾಡುವೆ, ಮಾತ್ರವಲ್ಲ ಅವರು ಬಂಗಾರಭೂಷಿತರಾಗಿ ಸೇವೆ ಮಾಡುವಂತೆ ಮಾಡುವೆ." ಎಂದು ಬಹುಮಾನ ಘೋಷಣೆಯಾಯಿತು.
ಆಗ ಮಂಥರೆ,"ಆಗಲಿ, ಎಲ್ಲವನ್ನು ಕೊಡು. ಆದರೆ ಈಗ ಈ ಕೆಲಸವನ್ನು ತಡಮಾಡಬೇಡ. ಈಗಲೇ ಕಾರ್ಯವನ್ನು ಮಾಡು" ಎಂದು ಹೇಳಿದಳು.
ಹೀಗೆ, ಮಂಥರೆಯಿಂದ ಪ್ರೇರೇಪಿತಳಾಗಿ ವಿರೂಪಳಾಗಿ ಕ್ರೋಧಾಗಾರವನ್ನು ಹೊಕ್ಕಳು, ಕೈಕೇಯಿ.
ಹೇಗೆ ದಶರಥ ಮತ್ತು ಕೈಕೇಯಿಯರು ಸಂಧಿಸಿದರು ಎಂದು ನಾಳಿನ ಪ್ರವಚನದಲ್ಲಿ ಕೇಳೋಣ.
(Picture courtesy: Internet)
#DhaaraRaamayan

No comments:
Post a Comment
Please leave your comments here.....