#ಧಾರಾ_ರಾಮಾಯಣ - 21-07-2019 ದಿನ28
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ
ಏನು ಬೇಕಾದರೂ ಆಗಬಹುದು. ಕಾಲಪ್ರವಾಹ ಕರ್ಮಪ್ರಹಾರ ಯಾರನ್ನು ಏನು ಬೇಕಾದರೂ ಮಾಡಬಹುದು. ಉನ್ನತಿಯ ಉತ್ತುಂಗದಲ್ಲಿದ್ದವನು ಪತನದ ಪಾತಾಳಕ್ಕಿಳಿಸಬಹುದು. ಪಾತಾಳದಲ್ಲಿರುವವರನ್ನು ವೈಕುಂಠಕ್ಕೇರಿಸಬಹುದು. ಸೂರ್ಯವಂಶದ ಚಕ್ರವರ್ತಿ ತನ್ನದೇ ಮನೆಯಲ್ಲಿ, ಮೋಹದ ಮಡದಿಯ, ಪಟ್ಟದ ರಾಣಿಯ ಭವನದ ನೆಲದ ಮೇಲೆ ಬಿದ್ದು ಹೊರಳಾಡುವುದೆಂದರೇನು..! ಅದಕ್ಕವನು ಅರ್ಹನಲ್ಲ, ಅದು ಅವನಿಗೆ ಉಚಿತವಲ್ಲ...!!
ಸಾಯುವ ಮೊದಲೇ ಸತ್ತಂತಹಾ ಸನ್ನಿವೇಶ ದಶರಥನಿಗೆ. ಅನುಭವಿಸಲಾರದ ಹಿಂಸೆಯನ್ನು ಅನುಭವಿಸುತ್ತಿದ್ದಾನೆ ದಶರಥ. ಯಾರಿಂದ ಈ ದುರ್ಗತಿಯೆಂದರೆ, ರಾಮ ಬರುವುದಕ್ಕಿಂತ ಮೊದಲು ಎಲ್ಲರಿಗಿಂತ ಮಿಗಿಲಾದ ಪ್ರೀತಿಯನ್ನು ಯಾರಿಗೆ ಕೊಟ್ಟನೋ ಆ ಪ್ರೀತಿಯ ಮಡದಿ ದಶರಥನ ಕೊರಳಿಗೆ ಉರುಳಾಗಿದ್ದಾಳೆ. ರಾಮ ಲಕ್ಷ್ಮಣ ಭರತ ಶತ್ರುಘ್ನರಿರುವಾಗ ಯಾರೂ ಆಕ್ರಮಣ ಮಾಡಲು ಸಾಧ್ಯವಿಲ್ಲ, ಆದರೆ ಮನೆಯೊಳಗಿಂದಲೇ ಆಕ್ರಮಣವಾಯಿತು; ಯಾರೂ ಎದುರಿಸುವುದಕ್ಕೆ ಸಾಧ್ಯವಿಲ್ಲ.
ರಾಮನಿಗಾಗಿ ಕೊಟ್ಟ ಮಾತನ್ನು ಮುರಿದುಬಿಟ್ಟಾನು, ಆದರೆ ಸದ್ಯ ರಾಮನ ಮೇಲೆ ಆಣೆ ಮಾಡಿ ಪ್ರತಿಜ್ಞೆ ಮಾಡಿದ್ದಾನೆ. ನಾನಾ ರೀತಿಯಿಂದ ದಶರಥ ಕೈಕೇಯಿಯ ಮನವೊಲಿಸಲು ಪ್ರಯತ್ನಿಸಿದನು. ಆದರೆ ಆಕೆಯ ಮನಸ್ಸಿನಲ್ಲಿ ಅವ್ಯಾವುದಕ್ಕೂ ಪ್ರವೇಶವಿರಲಿಲ್ಲ. ತರ್ಕವು ಮಾತ್ರವಲ್ಲ ಭಾವವೂ ಕೂಡಾ ಒಳಹೋಗುತ್ತಿಲ್ಲ.
ಅಂತಹಾ ದೀನಾವಸ್ಥೆಯಲ್ಲಿದ್ದ ದಶರಥನನ್ನು ಮತ್ತೆ ಕೆದರಿದಳು ಕೈಕೇಯಿ. ಆಕೆಗೆ ಇಹಲೋಕ ಪರಲೋಕಗಳ ಭಯವೇ ಇಲ್ಲ. ಎಲ್ಲಿ ಪ್ರೀತಿಯು ಆಳಬೇಕಿತ್ತೋ ಅಲ್ಲಿ ಭೀತಿಯು ಆಳುತ್ತಿದೆ....!! ಆಕೆಯದು ಅದೇ.ರಾಗ ಅದೇ ಹಾಡು, "ಸತ್ಯವಾದಿ, ಸತ್ಯವನ್ನು ಬಿಡುವವನಲ್ಲ ಎನ್ನುತ್ತೀಯಲ್ಲಾ, ಈ ವರವನ್ನು ಪೂರ್ತಿಗೊಳಿಸು" ಎಂದಳು. ಆಗ ಮತ್ತೆ ಕೋಪ ಬಂತು ದಶರಥನಿಗೆ.
ಆತನು "ಇದರಿಂದಾಗಿ ವಿಚಿತ್ರ ಸ್ಥಿತಿ ಉಂಟಾಗಬಹುದು. ದೊರೆ ಪರಲೋಕಕ್ಕೆ, ದೊಡ್ಡ ಮಗ ಕಾಡಿಗೆ. ಇಂತಹಾ ಸ್ಥಿತಿ ಬಂದಮೇಲೆ ಅದೇನು ರಾಜ್ಯವನ್ನಾಳುವೆ? ಇದು ನಿನ್ನ ಕಾಮನೆಯಾ? ಬಹಳ ಶ್ರಮದಿಂದ ಪಡೆದ ದೊಡ್ಡ ಯೋಗ್ಯತೆಯ ಮಗನನ್ನು ಹೇಗೆ ಕಾಡಿಗೆ ಕಳುಹಿಸಲಿ....? ಅವನದಕ್ಕೆ ಉಚಿತನಲ್ಲ. ಆತ ಸುಖಕ್ಕೆ ಉಚಿತ. ಆತ ಯಾವುದೇ ತಪ್ಪು ಮಾಡಿಲ್ಲ. ನಾಳೆ ಬೆಳಗ್ಗೆ ರಾಮನಿಗೆ ಕಾಡಿಗೆ ಹೋಗು ಎಂದು ನಾನು ಹೇಳುವ ಮೊದಲೇ ನಾನು ಸತ್ತಿದ್ದರೆ ಎಷ್ಟು ಚೆನ್ನಾಗಿತ್ತು." ರಾತ್ರಿದೇವಿಯನ್ನು ಪ್ರಾರ್ಥಿಸಿದ, "ನೀನೇ ಇದ್ದುಬಿಡು, ಬೆಳಗಾಗುವುದೇ ಬೇಡ. ಅಥವಾ ಈ ರಾತ್ರಿಯೇ ನಾನು ಸತ್ತುಸೋದರೆ ಅಡ್ಡಿಯಿಲ್ಲ". ಮುಂದೆ ಮತ್ತೆ ಕೈಮುಗಿದು ಆಕೆಯನ್ನು ಪ್ರಸನ್ನಗೊಳಿಸಲು ಮುಂದಾದ. ಈ ಸ್ಥಿತಿಯು ಯಾವ ಸತಿಗೂ ಬರಬಾರದು. "ನೀನೇ ಗತಿ, ನಿನ್ನನ್ನೇ ಆಶ್ರಯಿಸುತ್ತಿದ್ದೇನೆ. ಈವರೆಗೆ ನಿನ್ನಲ್ಲೇ ಪ್ರಾಣವನ್ನಿಟ್ಟವನು, ಇನ್ನೇನು ಕೊನೆಯ ಕ್ಷಣದಲ್ಲಿದ್ದೇನೆ, ಕೃಪೆ ಮಾಡು. ಕೊನೆಯ ಪಕ್ಷ ರಾಜ್ಯದ ರಾಜ ಎಂಬುದಕ್ಕಾದರೂ ದಯಮಾಡು. ಬೇಕಾದರೆ, ನೀನೇ ಕೊಟ್ಟ ರಾಜ್ಯವನ್ನು ರಾಮನಾಳಲಿ, ನಾನು ಕೊಟ್ಟ ರಾಜ್ಯವೆಂದು ಬೇಡ. ನೀನು ಹೀಗೆಮಾಡುವುದು ಎಲ್ಲರಿಗೂ ಇಷ್ಟವಾಗುವುದು. ಗುರು, ಲೋಕ, ನನಗೆ, ಕೊನೆಗೆ ಯಾರಿಗಾಗಿ ನೀನು ಅಕಾರ್ಯವನ್ನು ಮಾಡಲು ಹೊರಟಿರುವೆಯೋ ಆ ಭರತನಿಗೂ ಅದೇ ಇಷ್ಟ." ಆದರೂ ಆಕೆ ಒಪ್ಪಲಿಲ್ಲ. "ನಿನಗೆ ಧರ್ಮ ಬೇಕು ಎಂದಿದ್ದರೆ ರಾಮನನ್ನು ಕಾಡಿಗಟ್ಟು" ಎಂದು ಮೂರು ಬಾರಿ ಹೇಳಿ ಸುಮ್ಮನಾದಳು. ದೊರೆಗೆ ಆ ಪಾಶವನ್ನು ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವನ ಹೃದಯವು ತಿರುಗಿದಂತಾಯಿತು, ಮುಖವು ಬಿಳಿಗಟ್ಟಿತು. ಆಗ ಒಂದು ಕಾರ್ಯವನ್ನು ಮಾಡಿದ. ಕಣ್ಣನ್ನು ನೆಟ್ಟು ಆಕೆಯನ್ನು ನೋಡಿ, ಬಹುಕಷ್ಟದಿಂದ ಸಾವರಿಸಿಕೊಂಡು ಕೈಕೇಯಿಗೆ ಹೇಳಿದ್ದೇನೆಂದರೆ: "ಪಾಪಿ, ಮಂತ್ರವತ್ತಾಗಿ ಅಗ್ನಿಸಾಕ್ಷಿಯಾಗಿ ಯಾವ ನಿನ್ನ ಕೈಹಿಡಿದೆನೋ ಅಂದು, ಆ ಕೈಯನ್ನು ಬಿಟ್ಟೆ.ಇಂದು. ಪರಿತ್ಯಜಿಸಿದೆ ನಿನ್ನನ್ನು. ಇನ್ನು ನಾನು ನಿನಗೇನೂ ಅಲ್ಲ , ನೀನು ನನಗೇನೂ ಅಲ್ಲ. ಸತಿಪತಿಯರ ಬಂಧ ಮುಗಿಯಿತು. ನಿನ್ನ ಜೊತೆಗೆ ನಿನ್ನ ಮಗನನ್ನೂ ತ್ಯಜಿಸಿದೆ". ಇದೇ ವಿಧಿ. ಈ ಪರಿಸ್ಥಿತಿಯಲ್ಲಿ ಪರಿಹಾರ ಅಂತ ಇದ್ದಿದ್ದರೆ ಅದು ಭರತ ಮಾತ್ರ. ಆದರೆ ಆತನನ್ನೇ ದಶರಥ ಕೇಕಯಕ್ಕೆ ಕಳುಹಿಸಿದ್ದ. ಒಂದುವೇಳೆ ಭರತನಿದ್ದಿದ್ದರೆ ಅವನೇ ಸಾಕಿತ್ತು. ಅಲ್ಲಿ ಮುಗಿದೇ ಹೋಗುತ್ತಿತ್ತು. ಆತನಿಗೂ ರಾಮನಲ್ಲದೇ ತಾನು ರಾಜ್ಯವಾಳುವುದು ಇಷ್ಟವಿರಲಿಲ್ಲ. ರಾಮನ ಪಟ್ಟಾಭಿಷೇಕವನ್ನು ನೋಡುವ ಆಸೆ ಪಾಪ ಭರತನಿಗೂ ಇತ್ತಲ್ಲವೇ? ಆದರೆ ಅದನ್ನು ತಪ್ಪಿಸಲು ಹೊರಟಿದ್ದ ದಶರಥ, ತನ್ನ ಅತಿಯಾದ ಚಿಂತನೆಯಿಂದ. ಪರಿಣಾಮ, ದಶರಥನಿಗೇ ಆ ಯೋಗ ತಪ್ಪಿತು! ಭರತ ಕೊನೆಗಾದರೂ ನೋಡಿದ, ಆದರೆ ಇವನಿಗೆ ಅದು ದಕ್ಕಲಿಲ್ಲ. ಇದನ್ನು ಭಾಗವತ ಅಪಚಾರ ಎನ್ನುತ್ತಾರೆ. ಯಾರ ಮನನಸ್ಸಿನಲ್ಲಿ ಕಲಂಕವಿಲ್ಲ, ಕೇಡಿಲ್ಲ ಅವರನ್ನು ವೃಥಾ ಸಂಶಯಿಸಬಾರದು. ಸಂಶಯಿಸಿದರೆ ದೋಷ ಬರುವುದು. ಈ ಸಮಯಕ್ಕೆ ರಾಮನೂ ಪರಿಹಾರವಲ್ಲ, ಬರತನೊಬ್ಬನೇ. ಆದರೆ ವಿಧಿಯು ಅವನನ್ನು ಇನ್ನೆಲ್ಲೋ ಬಿಟ್ಟಿತ್ತು. ಅವನಲ್ಲಿ ಯಾವ ದೋಷವೂ ಇಲ್ಲ ಆದರೆ ಕೈಕೇಯಿ ಮಾಡಿದ ಅನಾಹುತದಿಂದ ಬಿಸಿ ಅವನಿಗೂ ತಟ್ಟುತ್ತಿದೆ.
ಮುಂದುವರಿಸಿದ ದಶರಥ "ಬೆಳಗಾಯಿತು, ರಾಮನ ಪಟ್ಟಾಭಿಷೇಕದ ಸಾಮಗ್ರಿಗಳನ್ನು ಏನು ಮಾಡುವುದು, ಅವುಗಳಿಂದಲೇ ನನ್ನ ಅಂತ್ಯಕ್ರಿಯೆ ನಡೆಸು, ಆದರೆ ಆ ಅಂತ್ಯಕ್ರಿಯೆಯಲ್ಲಿ ನಿನಗೆ ಭರತನಿಗೆ ಪ್ರವೇಶವಿಲ್ಲ" ಎಂದ.
ಆ ಕಡೆಗೆ ರಾಮರಾಜ್ಯಾಭಿಷೇಕದ ಸಂತೋಷ ಮಹೋತ್ಸವದ ರೂಪತಾಳಿತ್ತು. ಅಯೋಧ್ಯೆ ಸರ್ವಸಿದ್ಧವಾಗಿತ್ತು ಪಟ್ಟಾಭಿಷೇಕಕ್ಕೆ. ದಶರಥ ಇನ್ನೂ ಬರದ ಕಾರಣ, ವಸಿಷ್ಠರು ಸುಮಂತ್ರನಿಗೆ ಸೂಚಿಸಿದರು, ಸುಮಂತ್ರನು ರಾಜಭವನವನ್ನು ಪ್ರವೇಶಿಸಿ, ದಶರಥನನ್ನು ಕುರಿತು ಸ್ತುತಿಸುತ್ತಾನೆ.
ರಾಮರಾಜ್ಯಾಭಿಷೇಕಕ್ಕೆ ಸರ್ವಸಿದ್ಧತೆಯಾಗಿದೆ, ಬನ್ನಿ ಪ್ರಭು ಎಂದು ಸುಮಂತ್ರನು ಎಬ್ಬಿಸುವನು. ಬೇಸರಗೊಂಡ ದೊರೆಯನ್ನು ನೋಡುತ್ತಿದ್ದಂತೆ ಕೈಕೇಯಿಯು, "ರಾಮರಾಜ್ಯಾಭಿಷೇಕದ ಆನಂದದಿಂದ ರಾಜನಿಗೆ ನಿದ್ದೆಯೇ ಬಂದಿಲ್ಲ. ಅದಕ್ಕಾಗಿ ಆತನಿಗೆ ಈಗ ನಿದ್ದೆ ಬರುತ್ತಿದೆ. ಈಗಲೇ ಹೋಗಿ ರಾಮನನ್ನು ಕರೆದುಕೊಂಡು ಬಾ" ಎಂದು ಸುಮಂತ್ರನಿಗೆ ಹೇಳಿದಳು. ರಾಮನನ್ನು ಕರೆತರಲು ತಾನು ಹೋಗುತ್ತಿದ್ದೇನೆ ಎಂದು ಸುಮಂತ್ರನು ಅತ್ಯಂತ ಖುಷಿಪಡುವನು.
ಮತ್ತೆ ಸುಮಂತ್ರನು ದಶರಥನಲ್ಲಿಗೆ ಬಂದು ನೋಡಿ ದುಃಖದಲ್ಲಿದ್ದದನ್ನು ಕಂಡಾಗ, ಮತ್ತೆ ಸ್ತುತಿ ಮಾಡಿದಾಗ, "ರಾಮನನ್ನು ಕರೆದುಕೊಂಡು ಬಾ ಅಂದೆನಲ್ಲ, ಹೋಗು, ನನ್ನ ಆಜ್ಞೆಯಾಗಿದೆಯಲ್ಲ" ಎಂದನು ದಶರಥ. ಸಂತಸದಿಂದ ಹೊರಟ ಸುಮಂತ್ರ.
ಕೈಲಾಸ ಶಿಖರವನ್ನು ಹೋಲುವಂತೆ, ಅದ್ಭುತ ಸೌಧ ರಾಮನ ಭವನ. ಪರಿಮಳಯುಕ್ತ, ನಿನಾದಮಯ, ಚಿತ್ರಭಿತ್ತಿಗಳನ್ನೊಳಗೊಂಡ ಮಹೇಂದ್ರನ ಅರಮನೆಯಂತಿತ್ತು ರಾಮನ ಅರಮನೆ. ಈಗ ರಾಮಭವನ ಕೈಮುಗಿವ ಜನರ ಗುಂಪಾಗಿತ್ತು. ರಾಮನ ದರ್ಶನಕ್ಕೆ ಕಾಯುತ್ತಿದ್ದರು.
ಸುಮಂತ್ರ ರಾಮನ ಮನೆ ಪ್ರವೇಶಿಸುತ್ತಾ ಇದ್ದಾನೆ, ಪುರರಿಗೆಲ್ಲ ರೋಮಾಂಚನ. ಸುಮಂತ್ರನಿಗೆ ಸಂಭ್ರಮ, ರಾಮನನ್ನು ತಾನು ಕರೆದುಕೊಂಡು ಹೋಗುತ್ತೇನೆ ಎಂದು. ಯುವಕರು ಕಾವಲು ಕಾಯ್ತಾ ಇದ್ದರು. ವೃದ್ಧರು, ಸ್ತ್ರೀಯರೆಲ್ಲರೂ ರಾಮನಿಗಾಗಿ ಕಾಯುತ್ತಿದ್ದರು.
ರಾಮನು ಸುಮಂತ್ರನನ್ನು ತನ್ನಲ್ಲಿಗೆ ಬರಮಾಡಿಕೊಳ್ಳುತ್ತಾನೆ. ಕುಬೇರನಂತೆ ಚಿನ್ನದ ಮಂಟಪದಲ್ಲಿ ಕುಳಿತಿದ್ದಾನೆ. ಪಕ್ಕದಲ್ಲಿ ಸೀತೆ ಚಾಮರಸೇವೆ ಮಾಡುತ್ತಿದ್ದಾಳೆ. ಅವರ ಸಮಾಗಮ ಚಿತ್ರಾನಕ್ಷತ್ರ ಚಂದ್ರನ ಜೊತೆ ಇರುವಂತೆ ತೋರುತ್ತಿತ್ತು. ತಪಿಸುವ ಆದಿತ್ಯನಂತೆ ಸ್ವಯಂ ಪ್ರಭೆಯಿಂದ ಶೋಭಿಸುತ್ತಿದ್ದನು ರಾಮ. ವಿನೀತನಾಗಿ ಸುಮಂತ್ರನು ವಿಹಾರಸುಖ, ಪ್ರಾಜಂಲಿಸುಖ, ನಿದ್ರಾಸುಖ ಇತ್ಯಾದಿ ಕುಶಲಪ್ರಶ್ನೆಗಳನ್ನು ಕೇಳುತ್ತಾನೆ.
ಕೈಕೇಯಿ ಸನ್ನಿಹಿತನಾದ ದಶರಥ ನಿನ್ನನ್ನು ನೋಡಬಯಸುತ್ತಾನೆ. ತಡಮಾಡದೇ ಹೋಗೋಣ ಎಂದನು ಸುಮಂತ್ರ. ಆಗ ರಾಮ ಸೀತೆಗೆ, "ದೇವಿ, ನನ್ನ ತಂದೆ ತಾಯಿ ನನ್ನ ಪಟ್ಟಾಭಿಷೇಕದ ವಿಷಯವನ್ನೇ ಮಾತಾಡುತ್ತಿದ್ದಾರೆ. ಕೈಕೇಯಿಯು ಪಟ್ಟಾಭಿಷೇಕದ ವಿಷಯ ತಿಳಿದು, ರಾಜನಿಗೆ ಪ್ರಚೋದಯವನ್ನು ನೀಡುತ್ತಿರಬೇಕು, ಪ್ರಿಯವನ್ನು ಬಯಸುವವಳಾಗಿ ಏನೋ ಮಾಡಲು ಹೊರಟಿದ್ದಾಳೆ. ರಾಜನನ್ನು ಕಾಣುತ್ತೇನೆ. ನೀನು ಇಲ್ಲೇ ಇರು" ಎಂದನು. ಬಾಗಿಲವರೆಗೆ ಜೊತೆಗೆ ಬಂದು ಮಂಗಲವನ್ನು ಬಯಸಿದಳು ಸೀತೆ.
ಪರ್ವತದೊಳಗಿಂದ ಸಿಂಹವು ಹೊರಬರುವಂತೆ ರಾಮನು ಹೊರಬಂದನು. ಈವರೆಗೆ ರಾಮನು ಮುದ್ದು ಮಗನಾಗಿದ್ದನು. ಇಲ್ಲಿಂದ ಮುಂದೆ ರಾಮನ ರಾಮತ್ವ ಪ್ರಕಟವಾಗುತ್ತದೆ.
ಮಹಾರಥವನ್ನೇರಿ ರಾಮನು ಹೊರಟನು. ರಾಮ ಬಂದದ್ದು ಎಲ್ಲರಿಗೂ ಗೊತ್ತಾಯಿತು. ದೊಡ್ಡ ಮೋಡದ ಮರೆಯಿಂದ ಹೊರಬರುವ ಚಂದ್ರನಂತೆ ರಾಮನು ಶೋಭಿಸಿದನು. ಇಡೀ ಜನಸ್ತೋಮ, ಎಷ್ಟೆಷ್ಟೋ ಗಜಗಳು ಅಶ್ವಗಳು, ಯೋಧರು, ಶೂರರು, ಪೌರರು, ಜನಪದರು, ಸ್ತ್ರೀಯರು ಹೀಗೆ ಎಲ್ಲರೂ ರಾಮನನ್ನು ಮಂಗಲವಾದ್ಯಗಳಿಂದೊಳಗೊಂಡು ನಮಿಸಿದರು.
ಆಗ ಸ್ತ್ರೀಯರೆಲ್ಲರೂ "ಕೌಸಲ್ಯೆಗೆ ಆನಂದವೆಂದರೆ ಇಂದು ಬಂದಿರಬೇಕು. ಪರಮ ಆನಂದ ಅವಳನ್ನಾವರಿಸಿರಬೇಕು. ನಂತರ ಸೀತೆಯ ಬಗ್ಗೆ, ಸೀತೆಯೆಂದರೆ ಸ್ತ್ರೀಕುಲದ ರತ್ನ. ರಾಮನ ವಲ್ಲಭನಾಗಿ ಪಡೆಯಲು ಹಳೆಯ ಪುಣ್ಯವೆ ಇರಬೇಕೆಂದರು."
ರಾಮನು ದೊರೆಯಾದರೆ ಅಯೋಧ್ಯೆಗೆ ಹೊಸ ಕಾಲ ಬಂದ ಹಾಗೆ. ಇನ್ನು ಮುಂದೆ ನಮ್ಮನ್ನು ದುಃಖ ಮುಟ್ಟದು. ರಾಜನಗರಿಯಲ್ಲಿ ದೊಡ್ಡ ಮೆರವಣಿಗೆಯೇ ನಡೆಯುತ್ತಿತ್ತು.
ರಾಮ ಬರುವ ಮುನ್ನ ದಾರಿಯನ್ನೇ ನೋಡುತ್ತಿದ್ದರು. ರಾಮ ಬಂದ ಕೂಡಲೇ ರಾಮನಲ್ಲೇ ಸರ್ವರ ದೃಷ್ಟಿ, ಮನಸ್ಸು ನೆಟ್ಟಿದ್ದರು. ಪ್ರಯತ್ನಪಟ್ಟರೂ ಕೂಡ ತೆಗೆಯಲಾಗಲಿಲ್ಲ. ಅಂಥಹ ಪ್ರಭೆ ರಾಮನದು.
ಯಾರು ರಾಮನನ್ನು ನೋಡಲಿಲ್ಲವೋ, ರಾಮ ಯಾರನ್ನು ನೋಡಲಿಲ್ಲವೋ ಅವನ ಜೀವ ವ್ಯರ್ಥ ಎಂದು ಮಾತನಾಡಿಕೊಳ್ಳುತ್ತಿತ್ತು ಜನಸ್ತೋಮ.
ರಾಮನಿಗಾಗಿ ಯುಗದ ಮೆರವಣಿಗೆ ನಡೆದಿದೆ. ಗಂಭೀರನಾಗಿ, ಮುಗುಳ್ನಗೆಯುಳ್ಳ ರಾಮನು ರಾಜಭವನಕ್ಕೆ ರಾಜ ತಲುಪಿದನು.
ಹೇಗೆ ತಾನೆ ರಾಜನು ರಾಮನಿಗೆ ಆ ವಿಷಯವನ್ನು ಹೇಳಿಯಾನು...ಸೀತೆ ಹೇಗೆ ಸ್ವೀಕರಿಸಿಯಾಳು. ಲಕ್ಷ್ಮಣ ಹೇಗೆ ಸ್ವೀಕರಿಸಿಯಾನು. ಈ ಸಂದರ್ಭದಲ್ಲಿ ರಾಮನು ಸ್ವೀಕರಿಸುವ ರೀತಿಯು ತುಂಬಾ ದೊಡ್ಡದು. ನಾಳೆ ಬನ್ನಿ, ಅತ್ಯಂತ ಪ್ರೀತಿಯುಳ್ಳ ತಂದೆ ಮಗನ ಮಧ್ಯೆ ಏನು ಸಂಭಾಷಣೆ ನಡೆಯಿತು ಎಂದು ಕೇಳೋಣ. ರಾಮನ ಪಟ್ಟಾಭಿಷೇಕ ಎಷ್ಟು ದೊಡ್ಡದೋ, ರಾಮನ ರಾಜ್ಯತ್ಯಾಗವೂ ಅಷ್ಟೇ ದೊಡ್ಡದು. ನಾಳೆ ನೋಡೋಣ ಅಲ್ಲಿನ ಸಂದರ್ಭವನ್ನು.
#DhaaraRaamayan
No comments:
Post a Comment
Please leave your comments here.....