Dhaara Raamayana 25


#ಧಾರಾ_ರಾಮಾಯಣ - 18-07-2019 ದಿನ25
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ

"ಶ್ರಮವಿಲ್ಲದೇ ಫಲವಿಲ್ಲ, ಫಲ ಬಂದ ಬಳಿಕ ಶ್ರಮವು ಶ್ರಮವಲ್ಲ". ಏಕೆಂದರೆ ಶ್ರಮದಲ್ಲಿ ತ್ಯಾಗವಿದೆ. ಆದರೆ ಅದೇ ಶ್ರಮಕ್ಕೆ ಫಲ ಬಂದ ಬಳಿಕ ಕ್ಲೇಶವೆಲ್ಲ ದೂರಾಗುವುದು, ಸುಖವಾಗಿ ಪರಿವರ್ತನೆಗೊಳ್ಳುವುದು; ಆಗ ಹಿಂದಿನ ಶ್ರಮವು ಶ್ರಮವೆಂದೇ ಅನಿಸುವುದಿಲ್ಲ.

ಕೌಸಲ್ಯೆಯ ಮುಂದೆ ಆಕೆಯ ಮಗ ಬಂದು ನಿಂತಿದ್ದಾನೆ,  ತನ್ನನ್ನು ಪ್ರಜಾಪಾಲನೆಯ ಕರ್ತವ್ಯಕ್ಕಾಗಿ ನಿಯೋಜಿಸಿದ ಕುರಿತು ಹೇಳುತ್ತಿದ್ದಾನೆ. ಆಗ ಕೌಸಲ್ಯೆಗೆ ಮೇಲೆ ವಿವರಿಸಿದ ಅನುಭವವೇ ಆಯಿತು. ರಾಮನ ಮಾತುಗಳನ್ನು ಕೇಳಿ ಅವಳಿಗೆ ಇದುವರೆಗೂ ಪಟ್ಟ ಕ್ಲೇಶಗಳೆಲ್ಲವೂ, ಪಟ್ಟ ಶ್ರಮವೆಲ್ಲವೂ ಮರೆತು ಹೋಯಿತು. ಆಕೆ ಜೀವನದಲ್ಲಿ ಸುಖ ಎಂದು ಕಂಡಿದ್ದು ರಾಮ ಬಂದ ಬಳಿಕ. ಆನಂದ ಬಾಷ್ಪಗಳಿಂದ ಕೂಡಿದ ಕಣ್ಣುಗಳು ತುಂಬಿ ಬಂದವು, ಕಂಠವು ಕಟ್ಟಿತು, ವಾಕ್ಯಗಳು ಕೌಸಲ್ಯೆಗೆ ತೊದಲಿದವು...ಮಗು ರಾಮ, ನೂರ್ಕಾಲ ಬದುಕು. ನಿನ್ನ ವೈರಿಗಳು ಅಂದರೆ ಸತ್ಯ - ಧರ್ಮದ ವೈರಿಗಳು ಹತರಾಗಿಹೋದರು; ನಾನು ಇದುವರೆಗೆ ಮಾಡಿದ ಪುಂಡರೀಕನ ವ್ರತ, ಜಪ, ದಾನ, ತಪಸ್ಸು ಎಲ್ಲವಕ್ಕೂ ಫಲಬಂತು, ಕ್ಲೇಶವು ಇಲ್ಲವಾಯಿತು.

ಕೌಸಲ್ಯೆ ಮತ್ತು ಸುಮಿತ್ರೆಯ ಬಳಗಕ್ಕಿನ್ನು ಆನಂದದ ಸುರಿಮಳೆಯ ಸಮಯವಿದು.
ಕೌಸಲ್ಯೆ ಹಾಗೂ ಸುಮಿತ್ರೆಗೆ ಉಣಲು, ಉಡಲು ಯಾವ ಕೊರತೆಯೂ ಇಲ್ಲ, ದಾನಗಳನ್ನು ಮಾಡುವುದಕ್ಕೂ ಯಾವ ಅಡ್ಡಿಯೂ ಇಲ್ಲ‌. ಆದರೆ ಇದರ ಹೊರತಾಗಿ ಅವರಿಗೆ ಯಾವ ಸುಖವೂ ಇರಲಿಲ್ಲ. ಏಕೆಂದರೆ ಇವರುಗಳ ಸುಖಕ್ಕೆ ಕಲ್ಲಾದವಳೇ ಕೈಕೇಯಿ; ಆಕೆಯ ಬಳಗ. ಹಾಗಾಗಿ ಈ ಮಾತುಗಳು ಬಂದವು, ಕೌಸಲ್ಯೆಯಿಂದ.

ಒಳ್ಳೆಯವರು ಯಾರಾದರೂ ದೊರೆಯಾದರೆ ತಾನೇತಾನಾಗಿ ಎಲ್ಲರಿಗೂ ಒಳ್ಳೆಯದಾಗುವುದು.

ತಾಯಿಯ ನಂತರ ರಾಮನು ಪಟ್ಟಾಭಿಷೇಕದ ವಿಷಯವನ್ನು ತಿಳಿಸಲು ಲಕ್ಷ್ಮಣನ ಬಳಿ ಹೋದ. ಆಗಲೂ  ಲಕ್ಷ್ಮಣನು ಕೈ ಮುಗಿದೇ ಇದ್ದ, ಬೆನ್ನು ಬಾಗಿಯೇ ಇದ್ದ. ಶ್ರೀರಾಮನು ಸಣ್ಣಕ್ಕೆ ನಸು ನಕ್ಕು 'ಲಕ್ಷ್ಮಣಾ, ನಾನು ನೀನು ಸೇರಿ ರಾಜ್ಯವಾಳೋಣ'. ಈ ಶ್ರೀ ನನಗೂ ನಿನಗೂ ಸೇರಿ ಬಂದಿರುವಂತಹದ್ದು. ಏಕೆಂದರೆ (ಲಕ್ಷ್ಮಣನು ರಾಮನ ಅಂತರಾತ್ಮ) ನೀನು ನನ್ನ ಅಂತರಾತ್ಮ, ಎರಡನೇಯ ಆತ್ಮ ನೀನು, ಈ ಸಂಪತ್ತು ನನಗೂ-ನಿನಗೂ ಇಬ್ಬರಿಗೂ ಬಂದಿದ್ದು; ನಾವು ದೇಹ ಬೇರೆ-ಬೇರೆಯಾದರೂ; ಆತ್ಮ ಒಂದೇ. ಹಾಗಾಗಿ ಈ ರಾಜ್ಯವನ್ನು ನೀನಾಳು, ನನ್ನ ಜೊತೆಗೆ ನೀನಾಳು ಎಂದು ನುಡಿದು ಒಂದು ದೊಡ್ಡ ಮಾತನ್ನು ಹೇಳಿದ ರಾಮ. 'ಲಕ್ಷ್ಮಣಾ, ರಾಜ್ಯವಾಗಲೀ, ಬದುಕಾಗಲೀ, ಉಸಿರಾಗಲೀ, ನನಗೆ ಬೇಕು ಅಂತಾದರೆ ಅದು ನಿನಗಾಗಿ ಬೇಕು. ನೀನಿಲ್ಲದೆ ನನಗೆ ಜೀವಿತವೇ ಬೇಗ.' ಹೀಗೆಂದು ಲಕ್ಷ್ಮಣನನ್ನು ಧನ್ಯಗೊಳಿಸಿದ.

ಲಕ್ಷ್ಮಣನಿಗೂ ಇನ್ನೇನು ಬೇಕು, ಲಕ್ಷ್ಮಣನ ಪೂರ್ಣ ಜೀವನವೇ ರಾಮನಾಗಿದ್ದ. ಅಲ್ಲಿ ಬೇರೇನೂ ಇಲ್ಲ. ರಾಮನ ಹೊರತುಪಡಿಸಿದರೆ ಆತನ ಜೀವನ ಬರಿದು, ಆದರೆ ಆತನ ಜೀವನ ಬರಿದಲ್ಲ ಏಕೆಂದರೆ ಪೂರ್ಣನೇ ಆತನ ಜೀವನ!

ಹೀಗೆ ಲಕ್ಷ್ಮಣನಿಗೆ ಹೇಳಿ, ಇಬ್ಬರೂ ತಾಯಂದಿರಿಗೆ ನಮಸ್ಕರಿಸಿ, ಅನಂತರದಲ್ಲಿ ಸೀತೆಗೆ 'ಮನೆಗೆ ಹೊರಟೆ' ಎಂದು ತಿಳಿಸಿ, ತನ್ನ ಭವನದತ್ತ ತೆರಳಿದ.

ಇತ್ತ ದಶರಥ ವಸಿಷ್ಠರಿಗೆ ರಾಮನ ಭವನಕ್ಕೆ ತೆರಳಿ ವಿಧಿಗಳನ್ನು ಮಾಡಿಸುವಂತೆ ತಿಳಿಸಿದ.
ಮಹರ್ಷಿ ವಸಿಷ್ಠರು ದಶರಥನ ಮಾತಿನಂತೆ ಬ್ರಾಹ್ಮ ರಥವನ್ನೇರಿ ರಾಮಭವನದತ್ತ ತೆರಳಿದರು.
ಗುರುಗಳು ಬಂದದ್ದನ್ನು ಗಮನಿಸಿ, ಸಂಭ್ರಮದಿಂದ ತ್ವರೆಮಾಡಿ, ತಾನೇ ರಥದ ಬಳಿಸಾರಿ, ಸೇವಕನಾಗಿ ಕೈ ನೀಡಿ ಗುರುಗಳನ್ನು ರಥದಿಂದ ಕೆಳಗಿಳಿಸುವನು ರಾಮ. ನಂತರ ಗುರುಗಳುನೆಯೊಳಗೆ ಬಂದು ನಾಳೆಯೇ ನಿನಗೆ ಪಟ್ಟಾಭಿಷೇಕ; ತದಂಗವಾಗಿ ನೀನು ಉಪವಾಸವನ್ನು ಮಾಡಬೇಕು, ದೇವರು ದೇವತೆಗಳಿಗೆ ಹವಿಸ್ಸನ್ನು ನೀಡಿ, ದರ್ಭಾಶಯನಸ್ಥನಾಗಿ ಜನಾರ್ದನನ ಆಲಯವನ್ನು ಸೇರಿ ನೀನು ಮತ್ತು ಸೀತೆ ಅಲ್ಲಿ ರಾತ್ರಿಯನ್ನು ಕಳೆಯಬೇಕು. ಅದಕ್ಕೆ ಬೇಕಾದ ಮಂತ್ರವತ್ತಾದ ವ್ರತ ಉಪದೇಶವನ್ನು ವೈದೇಹೀ ಸಹಿತನಾದ ಶ್ರೀರಾಮನಿಗೆ ನೀಡುತ್ತಾರೆ. ನಂತರ ವಸಿಷ್ಠರು ತೆರಳುತ್ತಾರೆ.

ಹಾಗೆಯೇ ರಾಮನ ಭವನದಿಂದ ಹೊರಬಂದು ನೋಡಿದ ವಸಿಷ್ಠರು ಜನ ತುಂಬಿದ ದಾರಿ, ರಸ್ತೆಗಳಲ್ಲಿ  ನೂಕುನುಗ್ಗಲು, ಜಾಗವಿಲ್ಲ ; ಜನರು ಕುತೂಹಲದಿಂದ /ಕಾತರದಿಂದ ರಾಮನ-ರಾಜ್ಯಾಭಿಷೇಕಕ್ಕಾಗಿ ಕಾಯುತ್ತಿದ್ದರು. ಭವನದ ಮುಂದೆ ಸೇರಿದ ಜನರ ಗುಂಪುಗಳು ಸಾಗರದ ಅಲೆಗಳಂತಿತ್ತು.
ಜನರು ದಾರಿಯನ್ನು ಸುಗಂಧ, ತಂಪು ಜಲದಿಂದ ಪೂರ್ತಿ ಶುಚಿಗೊಳಿಸಿದ್ದಾರೆ. ಅಲಂಕರಿಸಿದ್ದಾರೆ. ಪರಿಸರವು ಫಲ-ಪುಷ್ಪಗಳಿಂದ ತುಂಬಿದೆ, ಮನೆ-ಮನೆಯಲ್ಲಿಯೂ ಧ್ವಜ-ಪತಾಕೆಗಳನ್ನು ಏರಿಸಿದ್ದಾರೆ.
ಅಯೋಧ್ಯೆಯ ಪ್ರತಿಯೊಬ್ಬರೂ ಕೂಡ ರಾಮಾಭಿಷೇಕದ ಆಕಾಂಕ್ಷಿಗಳು. ಪ್ರತಿಯೊಂದು ಜೀವವೂ ಸಹ ನಾಳೆಯ  ಸೂರ್ಯೋದಯಕ್ಕಾಗಿ ಉತ್ಸುಕತೆಯಿಂದಿತ್ತು. ಹೀಗೆ ರಾಮನರಮನೆಯ ಎದುರು ಸೇರಿದ್ದ ಸೇನೆಯ ಗುಂಪಿನಂತಿದ್ದ ಜನರ ಗುಂಪನ್ನು ವಸಿಷ್ಠರು ಸರಿಸಿಕೊಂಡು ಅರಮನೆಯನ್ನು ತಲುಪಿದರು.

ಅಲ್ಲಿ ರಾಜ ಮತ್ತು ರಾಜಗುರುವಿನ ಭೇಟಿಯಾಯಿತು. ಹೋದ ಕಾರ್ಯವು ಪೂರ್ಣಗೊಂಡಿತೆಂದು ವಸಿಷ್ಠರು ದಶರಥನಿಗೆ ತಿಳಿಸಿದರು. ನಂತರ ಗುರುವಿನ ಆಜ್ಞೆಯಂತೆ ಜನಸ್ತೋಮನ್ನು ವಿಸರ್ಜಿಸಿ ಬೆಟ್ಟದ ಗುಹೆಯನ್ನು ಸಿಂಹ ಪ್ರವೇಶಿಸುವಂತೆ ದಶರಥ ಅಂತಃಪುರವನ್ನು ಪ್ರವೇಶಿಸಿದ.

ಇತ್ತ ರಾಮನು ವ್ರತಾಚರಣೆಯನು ಮಾಡಿ, ಮನಸ್ಸನ್ನು ಸಂಯಮಗೊಳಿಸಿ, ವಿಶಾಲನೇತ್ರೆಯಾದ ಸೀತೆಯೊಡಗೂಡಿ ಹವಿಸ್ಸಿನ ಪಾತ್ರೆಯನ್ನು ತಲೆಯಲ್ಲಿರಿಸಿಕೊಂಡು ಶ್ರೀಮನ್ನಾರಾಯಣನ ಮಂದಿರವನ್ನು ಸೇರುವನು. ಹೋಮವನ್ನು ಮಾಡಿ, ನಾರಾಯಣನೆಂಬ ಆ ಮಹಾದೇವತೆಗೆ ಆಹುತಿಗಳನ್ನು ನೀಡಿದನು. ಬಳಿಕ ಉಳಿದ ಹವಿರ್ಭಾಗವನ್ನು (ಅಮೃತವೆಂದು ಹೆಸರು ಅದಕ್ಕೆ) ಪ್ರಸಾದವನ್ನು ಸೇವಿಸಿ, ಪ್ರಾರ್ಥನೆಯನ್ನು ಮಾಡಿ, ಧರ್ಭೆಯ ಹಾಸನ್ನು ಸಿದ್ಧಪಡಿಸಿ, ನಾರಾಯಣನ ಧ್ಯಾನವನ್ನು ಮಾಡುತ್ತಾ ನಾರಾಯಣನು ಪವಡಿಸಿದ! ದಿವಿಯ ನಾರಾಯಣನನ್ನು ಭುವಿಯ ನಾರಾಯಣನನು ಸ್ಮರಿಸುತ್ತಾ ದರ್ಭಾಶಯನನಾಗಿ, ಮೌನಧಾರಣೆಯನು ಮಾಡಿ ಪವಡಿಸಿದ. ಸೀತೆಯೂ ಕೂಡ ಇವೆಲ್ಲವುಗಳನ್ನು ಮಾಡಿದಳು. ಹೀಗೆ ನರ-ವರ ರಾಜಕುಮಾರ ವಿಶ್ರಾಂತಿಯನ್ನು ಮಾಡಿದ.

ಸೂರ್ಯೋದಯದ ಒಂದು ಯಾಮದ ಮೊದಲು ಎದ್ದ ರಾಮನು ಮನೆಯ ಶೋಭಾಕರ ಕರ್ಮವನ್ನು ಮಾಡಿಸಿ; ಸ್ನಾನಾದಿಕರ್ಮಗಳನ್ನು ಮುಗಿಸಿ ಬೆಳಗಿನ ಸಂಧ್ಯಾವಂದನೆಯನ್ನು ಮಾಡಿದನು.
ನಂತರ ಹರಿಗೆ ಸಾಷ್ಟಾಂಗ ಪ್ರಣಾಮವನ್ನು ಮಾಡಿದನು. ಅಂದರೆ ನರರೂಪದಲ್ಲಿ ಬಂದ ಹರಿಯು, ತಾನೇ ತನಗೆ ಸಾಷ್ಟಾಂಗ ಪ್ರಣಾಮವನ್ನು ಭಾಡಿ ತಾನೇ ತನ್ನ ಸ್ತುತಿಯನ್ನು ಮಾಡಿದ! ಹಾಗೆ ಮಾಡಬಹುದೇ ಎಂದರೆ ಅದು ಆತ್ಮಾನುಸಂಧಾನ.

ಶುಚಿಯಾದ ಶ್ವೇತವಸ್ತ್ರ ಧರಿಸಿದ್ದ ರಾಮನು. ಬ್ರಾಹ್ಮಣರಿಂದ ಪುಣ್ಯಾಹ ವಾಚನವನ್ನು ಮಾಡಿಸಿದ, ಆ ಘೋಷವು ಅಯೋಧ್ಯೆಯಲಿ ತುಂಬಿತು. ಮಂಗಲ ವಾದ್ಯಗಳ ಘೋಷ ತುಂಬಿತು. ಇದರಿಂದ ಅಯೋಧ್ಯೆಯ ಜನರು ರಾಮಾಭಿಷೇಕದ ಖಚಿತತೆಯನ್ನು ಅರಿತರು.

ಅತ್ತ ಪ್ರಜೆಗಳಿಂದ ಚತುಷ್ಪಥ ರಸ್ತೆಗಳು, ದೇವಸ್ಥಾನಗಳು, ಅಟ್ಟಾಲಕಗಳು, ಹಾಗೆಯೇ ನಾನಾ ಅಂಗಡಿಗಳು, ಮನೆಗಳು ಹೀಗೆ ಇಡೀ ಪುರಿಯು ಅಲಂಕೃತಗೊಂಡವು. ಇದರೊಂದಿಗೆ ಮರಗಳು ಕೂಡ ಅಲಂಕಾರಗೊಂಡವು. ಬಗೆ ಬಗೆಯ ವರ್ಣ ವಿನ್ಯಾಸದ ಪತಾಕೆಗಳು ಮೇಲೆದ್ದವು. ಗಾಯನ-ನರ್ತನಗಳು ಸುತ್ತಲೆಲ್ಲಾ.
ಜನರು ಪರಸ್ಪರ ಪಟ್ಟಾಭಿಷೇಕದ ಬಗ್ಗೆ, ರಾಮನ ಬಗ್ಗೆ, ಮಾತನಾಡುತ್ತಿದ್ದರು. ಎಲ್ಲೆಲ್ಲೂ ಹೂ ಚೆಲ್ಲಿತ್ತು, ದೀಪವೃಕ್ಷಗಳು ಸ್ಥಾಪನೆಗೊಂಡಿದ್ದವು. ಹೀಗೆ ರಾಮ-ರಾಜ್ಯಾಭಿಷೇಕವನ್ನು ನಿರೀಕ್ಷಿಸುತ್ತಾ ದಶರಥನನ್ನು ಹೊಗಳಿದರು/ಪ್ರಶಂಸಿಸಿದರು. ಇನ್ನು ರಾಮನ ಆಳ್ವಿಕೆ ಎಂಬ ಧನ್ಯತೆಯನ್ನು ಹೊಂದುತ್ತಿದ್ದರು. ಏಕೆಂದರೆ ರಾಮನು ಭ್ರಾತೃವತ್ಸಲ; ತಮ್ಮಂದಿರಲ್ಲಿ ಹೇಗೆ ಪ್ರೀತಿಯಿತ್ತೋ ಅಂತೆಯೇ ಜನರಲ್ಲಿಯೂ ರಾಮನಿಗೆ ಅದೇ ಪ್ರೀತಿ ಭಾವವಿತ್ತು. ಅವನ ಮನಸ್ಸು ನಮ್ರ, ಉದ್ಧತವಲ್ಲ. ಅಂತೆಯೇ ದಶರಥನಿಗೆ ದೀರ್ಘಾಯುಸ್ಸು ಬರಲಿ ಎಂದರು. ರಾಮನನ್ನು ಕೊಟ್ಟವನು ಎಂಡ ಕೃತಜ್ಞತೆ! ಹೀಗೆ ಪರಸ್ಪರ ಜನರು ಮಾತನಾಡುತ್ತಿದ್ದರು, ದಿಕ್ಕು ದಿಕ್ಕುಗಳಿಂದ ಗ್ರಾಮಗಳಿಂದ ಬಂದಿದ್ದ ಜಾನಪದರಿಂದ ತುಂಬಿಹೋಯಿತು ಆ ನಗರ. ಹಾಗೆಯೇ ಎಲ್ಲೆಲ್ಲೂ ಆನಂದವೇ ಆನಂದ. ಅಯೋಧ್ಯೆಯು ಪರ್ವಕಾಲದಲ್ಲಿ ಉಕ್ಕಿ ಬರುವ ಸಮುದ್ರದಂತಾಯಿತು.

ಹೀಗೆ ಎಲ್ಲೆಡೆ ಆನಂದವೇ ತುಂಬಿರುವಾಗ ಈ ಸಂತೋಷಕ್ಕೆ "ದೃಷ್ಟಿಬೊಟ್ಟೊಂದು ಬಿದ್ದಿತು".

ಮುಂದಿನ ಪ್ರಕರಣದ ಆರಂಭದ ಮೊದಲೊಂದು ಮಾತು: ನಾವು ಒಳ್ಳೆಯವರ ಜೊತೆಯಲ್ಲಿರಬೇಕು ಮಾತ್ರವಲ್ಲ ನಾವು ಒಳ್ಳೆಯವರನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಕು. ಜೀವನ ಸಫಲವಾಗಬೇಕಾದರೆ ಇದು ಬೇಕು.
ಕೆಟ್ಟವರಿಗೆ ಬೇಸರ ಮಾಡಲು ಮನಸ್ಸಿಲ್ಲದಿದ್ದಲ್ಲಿ ಅವರಿಗೆ ಕೊಡಡೇಕಾದ್ದನ್ನು ಕೊಟ್ಟು, ಮಾಡಬೇಕಾದ್ದನ್ನು ಮಾಡಿ ಕಳಿಸಿಬಿಡಿ; ಹತ್ತಿರವಾಗಿ, ಅಂತರಂಗಕ್ಕೆ ಆತ್ಮೀಯವಾಗಿ, ಸುತ್ತಮುತ್ತಲಿನಲ್ಲಿ ಯಾವತ್ತೂ ಇಟ್ಟುಕೊಳ್ಳಬೇಡಿ. ಏಕೆಂದರೆ ಅಂತಹವನಿಗೆ ಕೇಡು ಮಾಡಿಯೇ ಗೊತ್ತು! ಅಥವಾ, ಒಳ್ಳೆಯದು ಮಾಡಬೇಕೆಂಬ ಉದ್ದೇಶದಿಂದ ಏನೋ ಮಾಡಿದರೂ ಅದು ಕೇಡಾಗಿಬಿಡುವುದು! ಹಾಗಾಗಿ ಕೆಟ್ಟವರಿಂದ ದೂರವಿರಿ.

ಇಡಿಯ ಅಯೋಧ್ಯೆಯಲ್ಲಿ ಅಂತಹವರಾರೂ ಇರಲಿಲ್ಲ ಆದರೆ ಇದ್ದ ಆ ಒಂದು ಜನ ಸಾಕಾಯಿತು! ಒಂದೇ ಒಂದು ಹಂಡು ಹುಳಿ ಹಂಡೆ ಹಾಲಿಗೆ ಸಾಕಲ್ಲವೇ? ಆಕೆಯ ಹುಟ್ಟೇನು ಎಂದು ಯಾರಿಗೂ ತಿಳಿಯದು, ಕುಲ ಗೋತ್ರ ಮಾತಾ ಪಿತೃ ದೇಶ ಗೊತ್ತಿಲ್ಲ, ಮೂಲ ಹಿನ್ನೆಲೆಯೇನು ಎಂಬುದು ಚಿದಂಬರ ರಹಸ್ಯವಂತೆ. ಅಂತಹಾ ಒಬ್ಬಳವಳು. ಕೈಕೇಯಿಯ ತಾಯಿಯ ಕಡೆಯಲ್ಲಿ ಯಾರಿಗೋ ದಾಸಿಯಾಗಿದ್ದವಳವಳು. ಹೇಗೋ ಆ ಕೇಕಯದ ಅರಮನೆಯನ್ನು ಸೇರಿ, ಕೈಕೇಯಿಯ ತಾಯಿಯ ಮನೆಯಿಂದ ಬಳುವಳಿಯಾಗಿ ಸಿಕ್ಕಿ ಅಯೋಧ್ಯೆಯ ಅರಮನೆಗೆ ಬಂದವಳು ಆಕೆ. ಹೊರಗಿಂದೆಲ್ಲಿಂದಲೋ ಬಂದು ಸೇರಿದ ಭೂತ ಅದು. ಬಹಳ ಮೊದಲಿಂದಲೇ ಕೈಕೇಯಿಯ ಸಹವಾಸಿ, ಕೈಕೇಯಿಯ ಬೇರು ಬೇರು ಗೊತ್ತಾಕೆಗೆ.

ಅಂತಹಾ ಮಂಥರೆಯು ಅದೆನೋ ಆಕಸ್ಮಿಕವೆಂಬಂತೆ ಚಂದ್ರಕಾಂತ ಉಪ್ಪರಿಗೆಯನ್ನು ಏರಿದಳು. ಆಶ್ಚರ್ಯದಿಂದ ನೋಡಿದಳು. ವಿಧಿಯದು; ತಕ್ಷಣಕ್ಕೆ ಹೇಳಬೇಕಾದರೆ ಅಯೋಧ್ಯೆಯ ದೌರ್ಭಾಗ್ಯ, ದೂರದೃಷ್ಟಿಯಿಂದ ಹೇಳಿದರೆ ರಾವಣನ ಅವಸಾನ, ರಾಮಾವತಾರಕಾರ್ಯ! ರಾಜಮಾರ್ಗವು ಶುಚಿಗೊಂಡು ಕಮಲದ ಹೂಗಳನ್ನು ಚೆಲ್ಲಲಾಗಿದೆ, ಮಂಗಳಸ್ನಾನವನ್ನು ಮಾಡಿದ್ದ ಜನರು, ಬ್ರಾಹ್ಮಣ ಶ್ರೇಷ್ಟರ ಕೈಯಲ್ಲಿ ಮೋದಕಗಳು, ಮಾಲೆಗಳು, ದೇವಾಲಯಗಳಿಗೆಲ್ಲಾ ಸುಣ್ಣ - ಬಣ್ಣ ಲೇಪಿಸುತ್ತಿರುವುದು, ಬಿಳಿಯ ಮಾಲೆಗಳಿಂದ ಅಲಂಕಾರಗೊಂಡಿದೆ, ಸಂತುಷ್ಟರಾಗಿದ್ದರು ಜನರು. ಅಯೋಧ್ಯೆಯ ಜನರು ಮಾತ್ರವಲ್ಲದೇ ಆನೆ, ಕುದುರೆ, ನಂದಿ, ಪಶು ಪಕ್ಷಿಗಳು ಸಂತುಷ್ಟಗೊಂಡಿದ್ದವು. ಇದನ್ನು ನೋಡಿ ಭಯಂಕರ ಅಚ್ಚರಿಯಾಯಿತು ಆಕೆಗೆ. ಮಂಥರೆಗೆ ಬೇರೆಯವರ ಸಂತೋಷ ಸಹಿಸುವುದು ಕಷ್ಟ, ಅಂತಹಾ ಮನಸ್ಸು ಅದು. ಹೀಗೆ ಮಂಥರೆಯು ನಂಜು ತುಂಬಿದ ದೃಷ್ಟಿಯಲ್ಲಿ ಅಯೋಧ್ಯೆಯನ್ನು ನೋಡಿದಳು. ಪ್ರಾರಂಭವಾಯಿತು ಗ್ರಹಚಾರ.

ಏನಿದು ವಿಷಯವೆಂದು ತಿಳಿಯುವ ಸಲುವಾಗಿ ಅತ್ತಿತ್ತ ನೋಡಿದಾಗ ಒಬ್ಬಳು ಬಿಳಿ ರೇಷ್ಮೆ ಮಡಿಯನ್ನುಟ್ಟ, ಬಲು ಹರ್ಷಿತಗೊಂಡ ದಾದಿಯನ್ನು ಕಂಡು, ಅವಳನ್ನು ಕೇಳಿದಳು. ಕೇಳಿದ ರೀತಿಯಲ್ಲೇ ನಂಜು ಗೊತ್ತಾಗುತ್ತದೆ.

ಕೌಸಲ್ಯೆಗೆ ಏಕೆ ಇಂದಿಷ್ಟು ಸಂತೋಷ? ಯಾವತ್ತೂ ಕಂಡಿಲ್ಲ ಅಷ್ಟು ಖುಷಿಯಾಗಿದ್ದಾಳೆ. ಏನಿವತ್ತು ಜನರಿಗೆ ಇಷ್ಟೆಲ್ಲಾ ದಾನವನ್ನು ಮಾಡುತ್ತಿದ್ದಾಳೆ? ಈ ಜನರ ಅಳತೆ ಮೀರಿದ, ಇದುವರೆಗಿಲ್ಲದ ಆನಂದಕ್ಕೆ ಕಾರಣವಾದರೂ ಏನು? ಇಲ್ಲಿಯ ಅಲಂಕಾರಗಳನ್ನು ನೋಡಿದರೆ ದೊರೆಗೆ ಏನೋ ಸಂತೋಷವಾಗಿರಬೇಕು!!!

ದಾದಿಯು ಬಹಳ ಖುಷಿಯಿಂದಿದಾದರಿಂದ ವಿವೇಚನೆ ಮಾಡುವ ಸ್ಥಿತಿಯಲ್ಲಿರಲಿಲ್ಲ. ಪರಮಾನಂದದ ಪರವಶದಲ್ಲಿ ವಿವೇಚನೆಯನ್ನು ಮಾಡದೆ, ಗೂನು ಬೆನ್ನಿನ ಕುಬ್ಜೆ, ದೃಷ್ಟಿ ಮತ್ತು ಮನಸ್ಸಿನಲ್ಲೂ ವಕ್ರತೆಯಿದ್ದ ವಕ್ರಿಣಿ ಮಂಥರೆಗೆ - "ಅತಿಶಯವಾದ ಸಿರಿ ರಾಮನನ್ನು ವರಿಸುತ್ತಿದ. ಪಾಪವಿಲ್ಲದ, ಸಿಟ್ಟು ಗೊತ್ತಿಲ್ಲದ ಸೌಮ್ಯಮೂರ್ತಿ ರಾಮನಿಗೆ ನಾಳೆ ಪುಷ್ಯ ನಕ್ಷತ್ರದಲ್ಲಿ ರಾಜ್ಯಾಭಿಷೇಕ" ಎಂದು ದಾದಿಯು ಹೇಳಿದಳು.

ಅಯೋಧ್ಯೆಗೆ ಆಯೋಧ್ಯೆಯೇ ಸಂತೋಷಪಟ್ಟ ವಾರ್ತೆಯಿದು, ಆದರೆ ಈಕೆಗೆ ಹಾಗಲ್ಲ. ಈ ಮಾತನ್ನು ಕೇಳಿದ ಮಂಥರೆಯು ಪ್ರತಿಕ್ರಿಯೆಯಿಲ್ಲದೇ, ದಾದಿಯ ಮುಖವನ್ನೇ ನೋಡದೇ, ಆ ವಾರ್ತೆಯನ್ನು ಸಹಿಸಲಾರದೇ, ಅಸಹನೆಯಿಂದ ಅವಸರ ಅವಸರದಲ್ಲಿಯೇ ಉಪ್ಪರಿಗೆಯಿಂದಿಳಿದವಳೇ, ಕೋಪದಿಂದ ಬೆಂಕಿಯಾಗುತ್ತಾ, ಕಣ್ಣಿನಲ್ಲಿ ಪಾಪವನ್ನು ತುಂಬಿಕೊಳ್ಳುತ್ತಾ ನೇರವಾಗಿ ಕೈಕೇಯಿ ಇದ್ದಲ್ಲಿಗೆ ಬಂದಳು.

ಇನ್ನೂ ಶಯನಾವಸ್ಥಯಲ್ಲೇ ಇದ್ದ ಕೈಕೇಯಿ ಬಳಿ ನಿಂದು "ಏಳು ಮೂರ್ಖಳೇ! ಇನ್ನೂ ಮಲಗಿಕೊಂಡಿರುವೆಯಾ??? ದೊಡ್ಡ ಆಪತ್ತು ನಿನ್ನರಸಿ ಬರುತ್ತಿದೆ, ಆಪತ್ತಿನ ಮಹಾ ಪ್ರವಾಹವು ಬಂದು ನಿನ್ನನ್ನು ಮುಳುಗಿಸುತ್ತಿದೆ, ನಿನಗೆ ಬೋಧವೇ ಇಲ್ಲ. ನೀನು ನೋಡೋಕೆ ಚಂದ, ದೊರೆಗೆ ಇಷ್ಟ ಎಂದು ಅಂದುಕೊಂಡಿರುವೆ...ಆದರೆ ಹಾಗಿಲ್ಲ‌. ಅವನಿಗೇನು ನೀನು ನಿಜವಾಗಿ ಇಷ್ಟವಲ್ಲ. ಮುಗಿಯಿತು ನಿನ್ನ ಸೌಭಾಗ್ಯದ ಸಮಯ. ಇನ್ನು ನಿನ್ನ ಸೌಭಾಗ್ಯ ಬೇಸಿಗೆಯಲ್ಲಿ ಹರಿವ ನದಿಯಂತೆ, ಬತ್ತಿ ಹೋಗುತ್ತಿದೆ. ಆ ಸಮಯ ಬಂದಿದೆ..."ಎಂದು ಹೇಳುತ್ತಾಳೆ.

ಆಗ ವಿಷಾದ ತುಂಬಿದ ಕೈಕೇಯಿಯು ಅರ್ಧ ನಿದ್ದೆಯಿಂದ ಎಚ್ಚೆತ್ತು ಅಂಥಾದ್ದು ಏನಾಯಿತು? ಎಲ್ಲಾ ಕ್ಷೇಮ ತಾನೇ? ನಿನ್ನ ನೋಡಿದರೆ ಕೋಪ, ತಾಪ, ದುಃಖ ತುಂಬಿರುವೆ, ಎಂದು ಕೇಳುವಾಗ ಮತ್ತೂ ವಿಷಾದದ ಮುಖ ತೋರುವಳು ಮಂಥರೆ... ರಾಮನನ್ನು ವಾಕ್ಯದಿಂದ ಭೇದಿಸಬೇಕು ಎಂಬ ಉದ್ದೇಶದಿಂದ ಮುಂದುವರಿಯುತ್ತಾಳೆ ಮಂಥರೆ.

ಮಂಥರೆ ಮುಂದುವರೆದು, ಪರಿಹಾರವೇ ಇಲ್ಲವೆಂಬಂತಹಾ ನಿನ್ನ ಸರ್ವನಾಶದ ಪ್ರಕ್ರಿಯೆ ಆರಂಭವಾಗಿದೆ. ರಾಮನನ್ನು ದಶರಥ ರಾಜನನ್ನಾಗಿ ಮಾಡುತ್ತಿದ್ದಾನೆ.
ನಿನ್ನ ಹಿತೈಷಿಯು ನಾನು, ನಿನ್ನ ಹಿತವನು ಬಯಸಿ ಬಂದಿರುವೆ. ನಿನಗೆ ಸುಖ ಇದ್ದರೆ ನನಗೆ ಮಹಾಸುಖ, ನೀ ದುಃಖಿಯಾದರೆ ನನಗೂ ಮಹಾ ದುಃಖ. ನಾನು ನೀನು ಒಂದೇ. ಎಂದು ನುಡಿದು,
ನೀನು ಮುಗ್ಧಳು, ಈ ಕ್ರೂರ ರಾಜನೀತಿಯ ಅರಿವಿಲ್ಲ. ನಿನಗದು ತಿಳಿಯದು, ನಿನ್ನನ್ನೂ ನಿನ್ನ ಮಗನನ್ನೂ ಸರ್ವನಾಶ ಮಾಡುತ್ತಾನೆ. ನಿನ್ನ ಗಂಡ ದಶರಥನ ಬಾಯಲ್ಲಿ ಧರ್ಮ, ಕಾರ್ಯದಲ್ಲಿ ವಂಚನೆ; ನೀನು ಪರಮಪ್ರಿಯೆಯೆಂದು ಹೇಳುತ್ತಾನೆ, ಆದರೆ ಪರಮಕ್ರೂರಿ ಆತ. ಆತ ಆಗಾಗ ನೀನೇ ನನಗೆ ಇಷ್ಟ, ಪ್ರಿಯೆ ಎಂದೀ ಆಗಾಗ ಬಂದು ಭ್ರಮೆಹುಟ್ಟಿಸಿ ಕೊನೆಗೆ ಜೀವನದಲ್ಲಿ ಅತೀ ದೊಡ್ಡ ಒಳ್ಳೆಯದು ಮಾಡಿದ್ದು ಕೌಸಲ್ಯೆಗೆ. ನಿನ್ನ ಸರ್ವನಾಶವನ್ನು ಸ್ವತಃ ದಶರಥನು ಮಾಡುತ್ತಿದ್ದಾನೆ ಎನ್ನುವ ದಾಟಿಯಲ್ಲಿ ಮಂಥರೆಯು ತನ್ನ ಮಾತನ್ನು ಕೈಕೇಯಿಯ ಮುಂದೆ ಪ್ರಚುರ ಪಡಿಸಿದಳು.

ಮಿತಿ ಮೀರಿದ ವಿಷದ ಶಕ್ತಿ ಹಾಗೂ ಅದಕ್ಕೂ ಮೀರಿದ ಅಮೃತದ ಪ್ರಭಾವ ಹೇಗಿತ್ತು ಎಂಬುದನ್ನು ನಾಳೆ ನೋಡೋಣ..

#DhaaraRaamayan

No comments:

Post a Comment

Please leave your comments here.....