Dhaara Raamayana 24


#ಧಾರಾ_ರಾಮಾಯಣ - 17-07-2019 ದಿನ24
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ

ಕರೆ. ಎರಡಕ್ಷರದ ಪದ.
ಒಂದು ಜೀವದಲ್ಲಿ ಮತ್ತೊಂದು ಜೀವದ ಬಗ್ಗೆ ಅದು ಬಳಿ ಬರಬೇಕು ಎಂಬ ಅಪೇಕ್ಷೆ ಹುಟ್ಟಿದಾಗ, ಹತ್ತಿರವಾಗುವಾಗ ಆ ಜೀವ ಇತ್ತ ತಿರುಗಬೇಕು, ದೃಷ್ಠಿ ಒಂದಾಗಬೇಕು, ಮನಸ್ಸು ಒಂದಾಗಬೇಕು, ಭಾವ ಸಂವಹನವಾಗಬೇಕು ಎಂದಾದಾಗ ಜೀವವೊಂದು ಧ್ವನಿ ಮಾಡುತ್ತದೆ, ಅದು ಕರೆ.
ಈ ಕರೆ ಸರಿಯಾದರೆ ಅದು ಅದ್ವೈತದಲ್ಲಿ  ಪರ್ಯವಸಾನವಾಗುತ್ತದೆ.

ದಶರಥ ರಾಮನನ್ನ ಕರೆಯುತ್ತಿದ್ದಾನೆ ಸುಮಂತ್ರನ ಮೂಲಕ. ಇದೇನು ಮೊದಲ ಬಾರಿಯಲ್ಲ. ಆದರೆ ಈ ಕರೆ ಏಕೆಂದರೆ ನೀನು ನಾನಾಗು ಎಂಬ ಕರೆ. ಚಕ್ರವರ್ತಿ ಪದವಿಯನ್ನು ಕೊಡಲು ಕರೆದಿದ್ದಾನೆ. ಹಾಗೆನ್ನುವಾಗ ದಶರಥನ ಮುಖ ಬೆಳಗಿದೆ.

ಯಾರ ಬುದ್ಧಿಯು ಧರ್ಮದಲ್ಲಿ ನೆಲೆನಿಂತಿದೆಯೋ ಅವನು ಕೃತಾತ್ಮ. #ಶ್ರೀಸೂಕ್ತಿ

ಸುಮಂತ್ರ ರಾಜಭವನಕ್ಕೆ ರಾಮನನ್ನು ಕರೆತಂದಿದ್ದಾನೆ. ಅನೇಕ ದೊರೆಗಳು ಸಚಿವರು ವಿದ್ವಾಂಸರು ಆಸೀನರಾಗಿದ್ದಾರೆ.
ಆರ್ಯರು, ಮ್ಲೇಚ್ಛರೂ ಕೂಡಾ ಆಸೀನರಾಗಿದ್ದಾರೆ.
ರಾಜಭವನದ ಬಾಗಿಲಿಗೆ ರಾಮ ಬಂದ. ಮಾಳಿಗೆಯ ಮೇಲಿನಿಂದ ರಥದಲ್ಲಿ ಬರುತ್ತಿರುವ ರಾಮನನ್ನು ನೋಡುತ್ತಾನೆ ದಶರಥ.
ಗಂಧರ್ವರ ದೊರೆಯಂತೆ, ಭುಜಬಲ ಪರಾಕ್ರಮ ಉಳ್ಳವನು, ಆಜಾನುಬಾಹು, ಮಹಾಸಾಮರ್ಥ್ಯ ಉಳ್ಳವನು, ಮದಗಜಗಮನ, ಚಂದ್ರಕಾಂತಿಯುಳ್ಳವನು, ಅತೀವ ಪ್ರಿಯದರ್ಶನ, ದೃಷ್ಟಿಯನ್ನು ತನ್ನೆಡೆಗೆ ಸೆಳೆದಿಟ್ಟುಕೊಳ್ಳುವ ರೂಪ.
ಬಿರುಬೇಸಿಗೆಯಲ್ಲಿ ಬರುವ ತಂಪಾದ ಮಳೆಯಂತೆ ಪ್ರಿಯವಾದವನು, ನೋಡಿದಷ್ಟೂ ತೃಪ್ತಿಯಾಗಲಿಲ್ಲ ದಶರಥನಿಗೆ. ಅವನೇನು ಇದೇ ಮೊದಲು ನೋಡುತ್ತಿರುವುದಲ್ಲ, ದಿನವಿಡೀ ನೋಡುವ ರೂಪವೇ ಅದು. ಆದರೂ ಇಂದು ಅತೀ ಸುಂದರವಾಗಿ ಕಾಣುತ್ತಿದ್ದಾನೆ. ರಾಮ ಮುಂದಾಗಿ ಕೈಮುಗಿದು ತಂದೆಯೆಡೆಗೆ ಸಾಗುತ್ತಿದ್ದಾನೆ. ಹಿಂದಿನಿಂದ ಸುಮಂತ್ರ. ಕೈಲಾಸ ಶೃಂಗದಂತಿತ್ತು ರಾಜಭವನ. ಉಪ್ಪರಿಗೆಯನ್ನು ಅಧಿರೋಹಿಸಿ, ತಂದೆಯ ಬಳಿಸಾರಿ, ತಂದೆಗೆ ರಾಮೋಸ್ಮಿ ಎಂದು ಹೇಳಿ ಪಾದಾಭಿವಂದನೆಯನ್ನು ಮಾಡುತ್ತಾನೆ. ಸೇವಕನಂತೆ ಕೈಮುಗಿದು ನಿಂತ ಮಗನನ್ನು ನೋಡಿ  ತಡೆಯಲಾಗಲಿಲ್ಲ ದಶರಥನಿಗೆ, ಹಾಗೆಯೇ ಮುಗಿದ ಕೈಹಿಡಿದು ತಬ್ಬಿಕೊಳ್ಳುತ್ತಾನೆ. ನಂತರ ಉಚಿತಾಸನವನ್ನು ನೀಡುತ್ತಾನೆ. ಶ್ರೀರಾಮ ಆಸನದಲ್ಲಿ ಮಂಡಿಸಿದ. ವಾಲ್ಮೀಕಿಗಳು ಹೇಗೆ ವರ್ಣಿಸಿದ್ದಾರೆಂದರೆ, 'ಶ್ರೀರಾಮ ಮಂಡಿಸಿದ್ದರಿಂದ ಆಸನ ಶೋಭಿಸಿತು' ಎಂಬುದಾಗಿ! ಮೇರುವಿನ ಬಳಿ ಸೂರ್ಯಉದಯಿಸಿದಾಗ ಆ ಪ್ರಭೆಯಿಂದ ಶೋಭಿಸುವ ಮೇರುವಿನಂತೆ ಆ ಉನ್ನತಾಸನವು ರಾಮನ ಪ್ರಭೆಯಿಂದ ಶೋಭಿಸಿತು.

ವ್ಯಕ್ತಿಯಿಂದ ಸ್ಥಾನಕ್ಕೆ ಶೋಭೆ ಬರಬೇಕು ಹೊರತು ಸ್ಥಾನದಿಂದ ವ್ಯಕ್ತಿಗೆ ಶೋಭೆಯಲ್ಲ. #ಶ್ರೀಸೂಕ್ತಿ

ಮೊದಲೇ ನಕ್ಷತ್ರಗಳಿಂದ ಕೂಡಿದ ಗಗನದಂತೆ ಶೋಭಿಸುತ್ತಿದ್ದ ಸಭೆಗೆ ರಾಮ ಬಂದಾಗ ಶರತ್ಕಾಲದ ಚಂದ್ರಬಂದಂತಾಯಿತು. ಆ ಉನ್ನತಾಸನದಲ್ಲಿ ಮಗನನ್ನು ಕೂರಿಸಿದಾಗ ದಶರಥನಿಗೆ ಎಂಥಾ ಸಂತೋಷವೆಂದರೆ, ತನಗೆ ತಾನೇ ಅಲಂಕಾರ ಮಾಡಿಕೊಂಡು ತನ್ನನ್ನು ತಾನೇ ಕನ್ನಡಿಯಲ್ಲಿ ನೋಡಿಕೊಂಡಷ್ಟು ಸಂತೋಷ. ಆತ್ಮಾವೈ ಪುತ್ರನಾಮಾಸಿ; ಪುತ್ರ ಎಂದರೆ ತನ್ನದೇ ಮುಂದುವರಿಕೆ. ತನ್ನನ್ನೇ ಕಂಡ ದಶರಥ ರಾಮನಲ್ಲಿ. ಬಳಿಕ ಮುಗುಳ್ನಕ್ಕು ಹೇಳಿದನಂತೆ, ನನ್ನ ಹಿರಿಯ ರಾಣಿ ಕೌಸಲ್ಯೆ, ಆಕೆಯಲ್ಲಿ ಹುಟ್ಟಿದ ಹಿರಿಯ ಮಗ ನೀನು, ಸೂರ್ಯವಂಶಕ್ಕೆ ತಕ್ಕ ಸೊಸೆಯಾಕೆ, ನನಗೆ ತಕ್ಕವಳು, ಅವಳಲ್ಲಿ ಜನಿಸಿದ ತಕ್ಕ ಮಗ ನೀನು. ಗುಣಶ್ರೇಷ್ಠ, ನನ್ನ ಪ್ರಿಯ ಪುತ್ರ ನೀನು ಆದರೆ ಅಷ್ಟೇ ಕಾರಣವಲ್ಲ, ನಿನ್ನ ಗುಣ ನಡತೆಗಳಿಂದ ಪ್ರಜೆಗಳನ್ನು ರಂಜಿಸಿದೆ. ಹಾಗಾಗಿ ಪುಷ್ಯನಕ್ಷತ್ರವು ಚಂದ್ರನ ಬಳಿ ಹೋಗುವಾಗ ನಿನಗೆ ಪಟ್ಟಾಭಿಷೇಕ. ನಿನಗೆ ಯೌವರಾಜ್ಯವನ್ನು ಕೊಡುತ್ತೇನೆ ಎಂದು ದಶರಥ ನುಡಿದಾಗ ರಾಮನ ಮುಖದಲ್ಲಿ ಯಾವ ವ್ಯತ್ಯಾಸವೂ ಇಲ್ಲ, ಅದೇ ಶಾಂತ ಭಾವ! ಕರ್ತವ್ಯ ಪ್ರಜ್ಞೆಯ ಹೊರತು ಯಾವುದೇ ಬದಲಾವಣೆಯಿಲ್ಲ ರಾಮನಲ್ಲಿ. ಉಪದೇಶಿಸುತ್ತಾನೆ ದಶರಥ, ನಾನು ಏನೂ ಹೇಳಬೇಕಾದ್ದಿಲ್ಲ, ಏನು ಹೇಳಬೇಕಾಗಿತ್ತೋ ಹಾಗೆ ಈಗಾಗಲೇ ಇದ್ದೀಯ. ಆದರೂ ಕರ್ತವ್ಯ ಎಂದು ಹೇಳುತ್ತಿದ್ದೇನೆ. ವಿನಯವಂತ ನೀನು, ಇನ್ನಷ್ಟು ವಿನಯ ಬರಲಿ ನಿನಗೆ.
ದೊರೆತನ ಬಂದಾಗ ಬೀಗಬಾರದು, ಬಾಗಬೇಕು. ದೊರೆತನಕ್ಕೆ ಅಲಂಕಾರ ವಿನಯ. ಹಾಗಾಗಿ ಯಾವಾಗಲೂ ವಿನಯದಿಂದಿರು. ಸರ್ವಜ್ಞನಂತರ ನೀನು, ಆದರೂ ಇನ್ನೂ ಮತ್ತೂ ಕಲಿಯುತ್ತಲೇ ಇರಬೇಕು. ಅಪರಿಮಿತ ಅಧಿಕಾರ ಸಂಯಮ ತಪ್ಪುವಂತೆ ಮಾಡುತ್ತದೆ.
ಅದಕ್ಕೆ ಅವಕಾಶ ಕೊಡಬೇಡ. ಯಾವ ವ್ಯಸನವನ್ನೂ ಹತ್ತಿರ ಬರಲು ಬಿಗಬೇಡ, ಸಲ್ಲದು. ಪರೋಕ್ಷ ಹಾಗೂ ಪ್ರತ್ಯಕ್ಷ ವೃತ್ತಿ ಎರಡನ್ನೂ ಅನುಸರಿಸು.
ಮಂತ್ರಿಗಳಿಂದ ಆರಂಭಿಸಿ ಸಮಸ್ತ ಪ್ರಜೆಗಳನ್ನು ಸಂತೋಷವಾಗಿಡುವ ಹೊಣೆ ನಿನ್ನಮೇಲಿದೆ. ಇಬ್ಬಗೆಯ ಸಂಗ್ರಹಗಳನ್ನು ದಶರಥ ಹೇಳುತ್ತಾನೆ. ಗೋಸಂಪತ್ತು ರಕ್ಷಿಸು, ಗೋವುಗಳ ಸಂಖ್ಯೆ ಹೆಚ್ಚುವಂತೆ ಮಾಡು. ಗೋವುಗಳು ಹೆಚ್ಚಿದಂತೆ ಸಂಪತ್ತು ಹೆಚ್ಚುತ್ತದೆ. ಗೋಸಂಪತ್ತಿಲ್ಲದ ರಾಜ್ಯ ಭೂಮಿಗೆ ಭಾರ. ಆಯುಧಗಳನ್ನು ಹೆಚ್ಚಿಸು. ಗೋವುಗಳು ಸಮೃದ್ಧಗೊಳಿಸುವುದಕ್ಕೆ, ಆಯುಧಗಳು ರಕ್ಷಿಸುವುದಕ್ಕೆ. ಧಾನ್ಯಸಂಗ್ರಹವೂ ಬೇಕು.
ಕೋಷ್ಠಾಗಾರದಲ್ಲಿ ಧಾನ್ಯಗಳು ಹೆಚ್ಚುವಂತೆ ನೋಡಿಕೊ. ಇದೆಲ್ಲವನ್ನೂ ಇಟ್ಟುಕೊಂಡು ಮಾಡುವುದು ರಾಜ್ಯಭಾರ. ಅದಿಲ್ಲದಿದ್ದರೆ ಅವನು ಭೂಮಿಗೆ ಭಾರ. ಮಗೂ, ಹೀಗೆ ನೀನು ರಾಷ್ಟ್ರವನ್ನು ಆಳಬೇಕು ಎಂದು ಪದ್ಧತಿಯ ಕಾರಣಕ್ಕೆ ಮಗನಿಗೆ ತಂದೆ ಇದನ್ನು ಉಪದೇಶಿಸಿದ.

ಗೃಹಿಣಿಯೇ ರಾಣಿ ಮನೆಗೆ, ಸ್ಮೃತಿ ವಚನ ಇದು. ಆಕೆಗೆ ಹೇಗೆ ಸಂಸಾರವನ್ನು ನಡೆಸಬೇಕು ಎಂಬುದು ಸಹಜವಾಗಿ ಗೊತ್ತು. ಹಾಗಾಗಿ ಆಕೆಗೆ ಎಲ್ಲಾ ಕಡೆಗೂ ದೃಷ್ಟಿಇರಬೇಕು. ಕೌಸಲ್ಯೆಯ ಗುಪ್ತಚರರು - ಯಾರು ರಾಮನನ್ನು , ಕೌಸಲ್ಯೆಯನ್ನು ಪ್ರೀತಿಸುತ್ತಾರೋ ಅವರು - ಕೌಸಲ್ಯೆಯ ಬಳಿ ಧಾವಿಸಿ ವಿಷಯ ತಿಳಿಸಿದರು. ಅಪರಿಮಿತ ಸಂತೋಷವಾಯಿತು ಆಕೆಗೆ. ಈ ಪ್ರಿಯವಾರ್ತೆಯನ್ನು ಅರುಹಿದವರಿಗೆ ಉತ್ತಮೋತ್ತಮವಾದ ಗೋವು, ಬಂಗಾರ ರತ್ನಗಳನ್ನು ಎತ್ತಿ ಎತ್ತಿ ಕೊಟ್ಟಳು. ಏತನ್ಮಧ್ಯೆ ರಾಮ ರಾಜನನ್ನು ವಂದಿಸಿ ಮನೆಗೆ ಮರಳುವಾಗ ಎಲ್ಲರೂ ಗೌರವಿಸುತ್ತಾರೆ. ಈ ಸುವಾರ್ತೆಯನ್ನು ಕೇಳಿದ ಉಳಿದವರೂ ಮನೆಗೆ ತೆರಳಿ ಧನ್ಯವಾದರೂಪವಾಗಿ ದೇವರನ್ನು ಅರ್ಚಿಸುತ್ತಾರೆ! ಇದು ಬಹಳ ಅಪರೂಪ. ಮನುಷ್ಯನ ಸ್ವಭಾವ ಮರೆವು, ಆದರೆ ಇಲ್ಲಿ ಹಾಗಲ್ಲ. ಆನಂದದಲ್ಲಿ ದೇವರ ಪೂಜೆಯನ್ನು ಮಾಡುತ್ತಾರೆ.

ಏತನ್ಮಧ್ಯೆ ದಶರಥನು ಮತ್ತೊಂದು ಸಮಾಲೋಚನಾ ಸಭೆ ಕರೆದು, ನಾಳೆಯೇ ಪುಷ್ಯ ನಕ್ಷತ್ರ ಬಂದಿದೆ, ನಾಳೆಯೇ ಪಟ್ಟಾಭಿಷೇಕ ಎಂದು ನಿಶ್ಚಯಿಸುತ್ತಾನೆ ದಶರಥ. ಪಟ್ಟಾಭಿಷೇಕವನ್ನು ತಪ್ಪಿಸಲು ಅವಕಾಶವಿರಬಾರದು ಎಂಬ ಪ್ರಯತ್ನವದು - ರಾಜನೀತಿ. ಸುಮಂತ್ರನಿಗೆ ದಶರಥನು ಮತ್ತೆ ರಾಮನನ್ನು ಕರೆತರಲು ಹೇಳಿದ.
ದಶರಥನ ಆಜ್ಞೆಯಂತೆ ರಾಮನನ್ನು ಮತ್ತೆ ಕರೆತರಲು ಬಂದ ಸುಮಂತ್ರನನ್ನು, ಬಳಿಕರೆದ ರಾಮ ಶಂಕೆಯಿಂದ ಮತ್ತೇನಾಯಿತು ಎಂದಾಗ - ರಾಜಾಜ್ಞೆ ಎಂದ ಸುಮಂತ್ರ.

ಮತ್ತೆ ಬಂದ ರಾಮನನ್ನು ಬಳಿಕರೆದು ಉಚಿತಾಸನದಲ್ಲಿ ಕುಳ್ಳಿರಿಸಿ, ದಶರಥ ಮಾತನಾಡಿದ. ಮಗನೇ ವೃದ್ಧನಾದೆ, ಜೀವನದಲ್ಲಿ ಅನುಭವಿಸದ ಭೋಗವಿಲ್ಲ. ನನಗಾರು ಸಮಾನರು ನಿನ್ನಂತಹ ಪುತ್ರನಿದ್ದ ಮೇಲೆ, ಕೊರತೆಯಿನ್ನೇನಿದೆ? ದೇವ, ಪಿತೃ, ವಿಪ್ರ ಋಣ ಯಾವುದೂ ಇಲ್ಲ. ನಿನ್ನನ್ನು ದೊರೆಯಾಗಿಸುವುದರ ಹೊರತು ಬೇರೆ ಕರ್ತವ್ಯವಿಲ್ಲ, ಮರಣದ ಸಿದ್ಧತೆಯೇ. ಹಾಗಾಗಿ ನನ್ನ ಮಾತನ್ನು ಪಾಲಿಸಬೇಕು ಈಗ.

ದೊರೆಯನ್ನು ಸೇರಿಸಿ ಸಮಸ್ತರ ಅಪೇಕ್ಷೆ ನಿನಗೆ ಪಟ್ಟಾಭಿಷೇಕ. ಅವಸರಿಸ್ತಿದೆ ನನ್ನ ಮನಸ್ಸು.
ಇತ್ತೀಚಿನ ದಿನಗಳಲ್ಲಿ ನನಗೆ ದಾರುಣವಾದ ಅಶುಭಸೂಚಕ ಸ್ವಪ್ನ ಬೀಳುತ್ತಿದೆ. ನನ್ನ ನಕ್ಷತ್ರವನ್ನು ಕ್ರೂರ ಗ್ರಹಗಳು ಮುತ್ತಿದ್ದಾವೆ. ದಿವಿ, ಅಂತರಿಕ್ಷ, ಭುವಿಗಳಲ್ಲಿ ನಿಮಿತ್ತಗಳು ಆಗುತ್ತಿವೆ. ಇದರ ತಾತ್ಪರ್ಯ ರಾಜನಿಗೆ ಮೃತ್ಯು ಬರುತ್ತದೆ ಇಲ್ಲವೇ ಅದಕ್ಕೆ ಕಡಿಮೆಯಿಲ್ಲದ ಆಪತ್ತು ಬರುತ್ತದೆ. ಹಾಗಾಗಿ ನನಗೆ ಬುದ್ಧಿಭ್ರಮಣೆಯಾಗುವ ಮೊದಲು ನಿನಗೆ ರಾಜ್ಯ ಕೊಡಬೇಕು. ಅದಕ್ಕಾಗಿ ಅವಸರ.
ಚಂದ್ರ ಇಂದು ನಿನ್ನ ನಕ್ಷತ್ರವಾದ ಪುನರ್ವಸು ಸೇರಿದ್ದಾನೆ, ನಾಳೆ ಪುಷ್ಯ ನಕ್ಷತ್ರಕ್ಕೆ ಬರುವುದರಿಂದ ನಾಳೆಯೇ ರಾಜ್ಯಾಭಿಷೇಕ, ಇಲ್ಲ ಅಂತ ಹೇಳಬೇಡ.

ಇಂದು ನಿನಗೆ ಕರ್ತವ್ಯವಿದೆ, ವಿಧಿಗಳಿವೆ. ಈಗಿನಿಂದಲೇ ನೀನು ಹಾಗೂ ಸೀತೆ ಇಬ್ಬರೂ ಉಪವಾಸ ಮಾಡಬೇಕು ಮತ್ತು ದರ್ಭದ ಹಾಸಿನಲ್ಲಿ ಮಲಗಬೇಕು. ನಿನಗೆ ಯಾರು ಪರಮಾಪ್ತರೋ, ಯಾರು ವಿಶ್ವಸ್ತರೋ, ಅವರೆಲ್ಲ ನಿನ್ನ ರಕ್ಷೆಯಲ್ಲಿರಲಿ, ರಕ್ಷಿಸಲಿ ನಿನ್ನನ್ನು ರಾತ್ರಿಯೆಲ್ಲ ಎಂದು ಹೇಳಿದ. ಮುಂದೆ ರಾಜನೀತಿಯ ಕಾರಣವನ್ನು ಹೇಳಿದ ದಶರಥ - ಮಾವನ ಮನೆಗೆ ಹೋದ ಭರತ ಮರಳುವುದರ ಮೊದಲಾಗಿ ನಿನಗೆ ರಾಜ್ಯಾಭಿಷೇಕವಾಗಬೇಕು - ಇದು ದೊರೆಯಾಗಿ ರಾಜನೀತಿಯ ಚೌಕಟ್ಟಿನಲ್ಲಿ ನನ್ನ ಮಾತು. ಭರತ ನಿನ್ನ ಸೋದರ, ಕೆಟ್ಟವನಲ್ಲ, ಸನ್ನಡತೆ ಬಿಟ್ಟವನಲ್ಲ, ನೀನೆಂದರೆ ಪರಮಪ್ರೀತಿ, ನಿನ್ನನ್ನೇ ಅನುಸರಿಸುವವನು, ಧರ್ಮಾತ್ಮ, ಜಿತೇಂದ್ರಿಯನೇ.. ಭರತನು ಒಳ್ಳೆಯವನೇ ಆದರೂ ಮನುಷ್ಯರ ಮನಸ್ಸುಗಳು ಬದಲಾಗಬಹುದು, ಹಾಗಾಗಿ ಮಾಡುವ ಕೆಲಸ ಮಾಡಿಯೇ ಕುಳಿತುಕೊಳ್ಳಬೇಕು ಎಂದ ದಶರಥ.

ನೋಡಿ, ಗಮನಿಸಿ, ಮುಂದೆ ನಡೆಯುವ ಘಟನೆಗಳು ಅನಿರೀಕ್ಷಿತವಾಗಿ ನಡೆದದ್ದಲ್ಲ! ಕೈಕೇಯಿಯ ನಡೆಯು ನಿರೀಕ್ಷಿತವಿತ್ತು, ಹಾಗಾಗಿ ಎಲ್ಲ ರಾಜನೀತಿಯೂ ಅಲ್ಲಿ ಪ್ರಯೋಗವಾಗಿತ್ತು. ರಾಜನೀತಿ ಕೆಲಸಮಾಡಿದೆ ಆದರೆ ದೈವನೀತಿ ಬೇರೆಯಿತ್ತು.

ರಾಮನ ಭಾವದಲ್ಲಿ ಈಗಲೂ ಕೊಂಚವೂ ಬದಲಾವಣೆಯಿಲ್ಲ. ತಂದೆಗೆ ವಂದಿಸಿ ಮನೆಗೆ ಮರಳಿದವ ಮೊಟ್ಟಮೊದಲು ತಾಯಿಯ ಆಶೀರ್ವಾದಕ್ಕಾಗಿ ಧಾವಿಸಿದ. ತಾಯಿಗಿಂತ ದೊಡ್ಡ ದೇವರಿಲ್ಲ, ಹಾಗಾಗಿ ಧಾವಿಸಿದ. ಅಲ್ಲಿ ಕೌಸಲ್ಯೆ ದೇವತಾ ಉಪಾಸನೆಯಲ್ಲಿ  ಮೈಮರೆತು ತನ್ನ ಮಗನಿಗಾಗಿ ಸಿರಿಯನ್ನು ಬೇಡುತ್ತಿದ್ದಾಳೆ. ಸೀತೆ, ಸುಮಿತ್ರೆ , ಲಕ್ಷ್ಮಣ ಅದಾಗಲೇ ಉಪಸ್ಥಿತರಿದ್ದಾರೆ. ತಾಯಿಯನ್ನು ನೋಡಿದ ರಾಮ, ಆಕೆ ಧ್ಯಾನದಲ್ಲಿದ್ದಾಳೆ, ಸುಮಿತ್ರೆ ಆಕೆಯ ಸೇವೆಮಾಡುತ್ತಿದ್ದಾಳೆ. ಸಮಯವಿಲ್ಲದ್ದರಿಂದ ಅದೇ ಸ್ಥಿತಿಯಲ್ಲಿದ್ದ ಕೌಸಲ್ಯೆಯ ಬಳಿಸಾರಿ ಅಭಿವಂದಿಸಿ ಶುಭವಾರ್ತೆಯನ್ನು ಅರುಹುತ್ತಾನೆ ರಾಮ. ಅಮ್ಮ ತಂದೆಯ ಅಪ್ಪಣೆಯಾಗಿದೆ. ನಾಳೆಯಿಂದ ಪ್ರಜಾಪಾಲನೆಯ ಕರ್ತವ್ಯದಲ್ಲಿ ನಿಯೋಜಿಸಿದ್ದಾರೆ. ನಾಳೆಯೇ ಅಭಿಷೇಕವಂತೆ. ಹಾಗಾಗಿ ಧರ್ಮ, ಸಂಪ್ರದಾಯ, ರಾಜ್ಯ ಹಾಗೂ ಕುಲದ ಒಳಿತಿನ ದೃಷ್ಟಿಯಿಂದ ನನಗೂ ಸೀತೆಗೂ ಇಂದು ಏನೆಲ್ಲಾ ಕರ್ತವ್ಯಗಳೆಲ್ಲವನ್ನೂ ನೀನು ಮಾಡಿಸು ಎಂದು ಎಲ್ಲ ಸಂಪ್ರದಾಯ, ಕರ್ತವ್ಯಗಳ ಬಲ್ಲ ತಾಯಿ ಕೌಸಲ್ಯೆಯಲ್ಲಿ ಕೇಳಿದ.

ಕೌಸಲ್ಯೆಯ ಪ್ರತಿವಚನ ಏನು ಎಂಬುದನ್ನು ನಾಳೆಯ ಪ್ರವಚನದಲ್ಲಿ ನಿರೀಕ್ಷಿಸೋಣ..

#DhaaraRaamayan

No comments:

Post a Comment

Please leave your comments here.....