Dhaara Raamayana 23


#ಧಾರಾ_ರಾಮಾಯಣ - 16-07-2019 ದಿನ23
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ

ತನ್ನ ಸ್ಥಾನವಾಗಲಿ,  ತಾನು‌ ಬೆಳೆಸಿದ ಧನವಾಗಲಿ
ತನ್ನ ಕಾಲಾನಂತರದಲ್ಲಿ ಇಂಥವರಿಗೆ ಸಿಗಲಿ ಎನ್ನುವವರು ಬಹಳ ಮಂದಿ. ಆದರೆ ತಾನು ಊರ್ಜಿತವಾಗಿರುವಾಗಲೇ ತನ್ನ ಸಂಪತ್ತು, ಅಧಿಕಾರವು ಇವನಿಗೆ ಹೋಗಲಿ ಎಂದು ಬಯಸುವುದು ಉತ್ಕೃಷ್ಟ ಭಾವ. ಅಲ್ಲಿ ತ್ಯಾಗದ ಭಾವ ಸೇರಿರುತ್ತದೆ. ಅದು, ತಂದೆಯೇ ಮಗನಿಗೆ ಕೊಡುವುದಾದರೂ..!

ಆದರೆ ಇಲ್ಲಿ ವಾತಾವರಣ ಬೇರೆ ಇದೆ;
ದಶರಥ ಏನು ಬಯಸುತ್ತಿದ್ದಾನೆ?
ನಾನು ಬದುಕಿರುವಾಗಲೇ ರಾಮನು ದೊರೆಯಾದರೆ ಎಷ್ಟು ಸಂತೋಷ ಕೊಡಬಹುದು ಆ ಸಂಗತಿ! ಆ ವೃದ್ಧ ದೊರೆ ಚಿರಜೀವಿ. ಬಹಳ ಹಳೆ ಮನುಷ್ಯ ಅವನು. ಅವನಿಗೆ ಯಾಕೆ ಹೀಗೆ ಆಲೋಚನೆ ಹುಟ್ಟಿಕೊಂಡಿತು ಅಂದರೆ,
ರಾಮನ ಗುಣಗಳು ಹಾಗಿದ್ದವು. ಚಂದೊಂದು ಗುಣವೂ ಕೂಡ ಪ್ರಪಂಚಕ್ಕೆ ಒಳಿತನ್ನು ಉಂಟು ಮಾಡುವಂಥದ್ದು ಆಗಿತ್ತದು‌. ಅದಕ್ಕಿಂತ ಬಹು ದೊಡ್ಡ ಸಂತೋಷ ಇನ್ನಿಲ್ಲ ; "ಯಾವಾಗ ನಾನು ರಾಮನು ಪಟ್ಟಾಭಿಷಿಕ್ತನಾಗಿ ಕಂಗೊಳಿಸುವುದನ್ನು ಕಂಡೇನು..?" ಎಂಬುದು.

ಲೋಕದ ವೃದ್ಧಿ ರಾಮನ ಆಕಾಂಕ್ಷೆ. ಜನರ ವೃದ್ಧಿ, ಇಡೀ ಪ್ರಪಂಚದ ಅಭಿವೃದ್ಧಿ ಬಯಸುವವನು ರಾಮ, ಎಲ್ಲರಲ್ಲೂ ಅನುಕಂಪ ರಾಮನಿಗೆ. ಯಾರಿಗೂ ನೋವಾದರೂ ಟರಿತಪಿಸುವವನು ಅವನು.
ಒಂದು ಹೋಲಿಕೆ ಮಾಡ್ತಾನೆ ದಶರಥ, 'ನನಗಿಂತ ರಾಮ ಜಗತ್ತಿಗೆ ಇಷ್ಟ' ಎನ್ನುವ ಸತ್ಯ ದಶರಥನ ಮನಸ್ಸಿಗೆ ಬಂದಿದೆ. ಈ ಸತ್ಯ ಎಲ್ಲರ ಮನಸ್ಸಿಗೆ ಬರುವುದು ಬಹಳ ಕಷ್ಟ.

ಮಳೆ ಯಾರಿಗೆ ಬೇಡ ಹೇಳಿ! ಮಳೆ ಬಂದರೆ ಬೆಳೆ, ಜೀವಲೋಕವು ಚಿಗುರುವುದು ಮಳೆ‌ಬಂದಾಗ ತಾನೇ! ಹಾಗೆ ಪರ್ಜನ್ಯದಂತೆ ರಾಮ.
ಪರಾಕ್ರಮದಲ್ಲಿ ಯಮರಾಜನಿಗೆ ಸಮಾನ, ಬುದ್ಧಿಯಲ್ಲಿ ಬೃಹಸ್ಪತಿಗೆ ಸಮಾನ, ಧೃತಿಯಲ್ಲಿ ಮಹಾಪರ್ವತದಂತೆ. ಧೃತಿ: ವಿಚಲಿತನಾಗುವ ಸಂದರ್ಭ ಬಂದರೂ ವಿಚಲಿತನಾಗದಿರುವುದು, ತನ್ನ ನೆಲೆಯನ್ನು ತಾನು ಕಳೆದುಕೊಳ್ಳದಿರುವುದು.

ದಶರಥ ಕಾರಣ ಹೇಳ್ತಾನೆ: ಯಾಕೆ ಇಷ್ಟ ರಾಮ?
ನನಗಿಂತ ಹೆಚ್ಚು ಗುಣವಂತ, ಶ್ರೇಷ್ಠ, ಹಾಗಾಗಿ ಪ್ರಪಂಚಕ್ಕೆ ಇಷ್ಟ. ಹಾಗಾಗಿ ಜಗತ್ತನ್ನೆಲ್ಲ ಆಳುವ ನನ್ನ ಮಗನನ್ನು ನೋಡಿದರೆ ಸಾಕು, ಹೊರಟೆ ಸ್ವರ್ಗಕ್ಕೆ.
ದಶರಥನು ರಾಜತ್ವವನ್ನು ಸಮಗ್ರವಾಗಿ ಬಲ್ಲವನಾಗಿ ನುಡಿಯುತ್ತಾನೆ.
ಪ್ರಪಂಚದಲ್ಲಿರುವ  ಎಲ್ಲ ರಾಜರುಗಳಿಗೂ ಆಸೆ ಇರುತ್ತದೆ ಆದರೆ ಆ ಯೋಗ್ಯತೆ ಇರುವುದಿಲ್ಲ. ಆಸೆ ಪಟ್ಟರೆ ಯೋಗ್ಯತೆ ಇರಬೇಕೆಂದಿಲ್ಲ. ಆದರೆ ರಾಮನಿಗೆ ಯೋಗ್ಯತೆಯಿದೆ. ರಾಮನ ಒಂದೊಂದು ಗುಣವೂ ಅಳತೆಗೆ ಒಳಗೊಡುವುದಲ್ಲ ಅದು, ಲೋಕೋತ್ತರವದು! ಸಾಮಾನ್ಯವಾಗಿ ಪ್ರಪಂಚಕ್ಕೆ ಕಾಣಸಿಗುವಂಥದ್ದಲ್ಲ, ಮೇಲಿದೆ ~ ಅಂಥದ್ದು.

ಬಳಿಕ ದೊರೆ, ಸುಮಂತ್ರನೇ ಮೊದಲಾಗಿರತಕ್ಕಂತಹ ಅಷ್ಟಸಚಿವರ ಜೊತೆ ಸಮಾಲೋಚನೆ ಮಾಡ್ತಾನೆ. ಹೇಗೆ ಮಾಡಲಿ?
ಮಗನನ್ನ ಯುವರಾಜನನ್ನಾಗಿ ಮಾಡಿ, ನೆಪ ಮಾತ್ರಕ್ಕೆ ನಾನು ರಾಜನಾಗಿರಲಾ? ನಿಧಾನಕ್ಕೆ ವಾನಪ್ರಸ್ಥಕ್ಕೆ ಹೋಗಬಹುದು. ರಾಜ್ಯವನ್ನು ರಾಮನಿಗೆ ಕೊಡಲಾ? ಎಂದಾಗ ಯಾರೂ ಬೇಡ ಎನ್ನಲಿಲ್ಲವಂತೆ. ಎಲ್ಲರೂ ಅದೇ ಸರಿ ಎಂದರಂತೆ.
ಎಂಟೂ ಸಚಿವರು ಏಕಾಭಿಪ್ರಾಯದಲ್ಲಿ 'ಸರಿ, ಯೋಗ್ಯ' ಎಂದರಂತೆ. ಹಾಗಾಗಿ.ರಾಮನನ್ನು ಯುವರಾಜನನ್ನಾಗಿ ಮಾಡುತ್ತೇನೆಂಬ ನಿಶ್ಚಯಕ್ಕೆ ಬಂದ.

ಹಾಗೆ ನಿಶ್ಚಯಕ್ಕೆ ಬರಲಿಕ್ಕೆ ಇನ್ನೊಂದು ಕಾರಣವಿದೆ, ಹಲವು ಒಳ್ಳೆ ಕಾರಣಗಳು ತುಂಬಾ ಇವೆ, ಹಾಗೆಯೇ ಕೇಡೂ ಕಾರಣವಾಗಿದೆ!! ರಾಮನಲ್ಲಲ್ಲ, ಮತ್ತೆ? ದಶರಥನು ಗಮನಿಸಿದ, ತಾಯಿ ಪ್ರಕೃತಿ ಎರಡು ಸೂಚನೆಗಳನ್ನು ತೋರಿಸುತ್ತಿದ್ದಾಳೆ,
*ಒಂದೋ ರಾಜನಿಗೆ ಘೋರ ಆಪತ್ತು
*ಇಲ್ಲಾ ರಾಜನಿಗೆ ಸಾವು!
ದಿವಿ, ಅಂತರಿಕ್ಷ, ಭುವಿ.. ಮೂರು ಕಡೆ ನಿಮಿತ್ತಗಳನ್ನು ಕಾಣುತ್ತಾನೆ ದಶರಥ. ವಿವರಿಸಿದನು ಮಂತ್ರಿಗಳಿಗೆ.
ಒಂದೋ ಸಾವು, ಇಲ್ಲ ಸಾವಿಗೆ ಕಡಿಮೆಯಲ್ಲದ ಸಂಕಟ-ಘೋರವಾದ ಆಪತ್ತು.
ನಿಜ, ಎರಡೂ ಬಂತು! ರಾಜಾಂತ್ಯದ ಚಿಹ್ನೆಗಳು ಪ್ರಕೃತಿಯಲ್ಲಿದೆ.

ಸಂಕಟದ ಮಧ್ಯೆಯೂ ಸಮಾಧಾನ ದಶರಥನಿಗೆ. ತನ್ನ ಶೋಕವೆಂಬ ರೋಗಕ್ಕೆ ಮದ್ದು ರಾಮ.
ಯಾರು ತನ್ನನ್ನು ನೋಡ್ತಾರೋ ಅವರ ಶೋಕವನ್ನು ದೂರ ಮಾಡುವ ರಾಮ. ತನಗೂ ಶ್ರೇಯಸ್ಸು, ಪ್ರಜೆಗಳಿಗೂ ಶ್ರೇಯಸ್ಸು, ಲೋಕಪ್ರಿಯ. ಇಲ್ಲಿ ಹಿತ ಪ್ರಿಯ ಎರಡೂ ಒಂದೇ ಆಗಿದೆ.

ಕಾಲ ಬಂತು ಎಂದು ನಿಶ್ಚಯಾಸಿದವನು, ತ್ವರೆ ಮಾಡಿದ ದಶರಥ. ವಿಘ್ನ ಬರುವ ಮೊದಲೇ ಕಾರ್ಯ ಮಾಡಬೇಕು.
ಮೇದಿನಿಯ ಪ್ರಧಾನರಾದ ದೊಡ್ಡ ದೊಡ್ಡ ರಾಜರು; ಕೋಸಲದ ಮಿತ್ರರನ್ನು ಕರೆಯಿಸಿ, ದೊರೆಗಳನ್ನು ಬರಮಾಡಿದ ದಶರಥ. ಪುರದಲ್ಲಿ ಇರುವವನು ಪೌರ, ಹಳ್ಳಿಗಳಲ್ಲಿ ಇರುವವರು ಜಾನಪದರು. ಅವರಿಗೆಲ್ಲ ಉಚಿತವಾದ ಸತ್ಕಾರ ನಡೆಯಿತು, ಪ್ರಜೆಗಳಿಗೂ ಕೂಡ.

ಇಬ್ಬರಿಗೆ ಕರೆಹೋಗಿಲ್ಲ - ಕೇಕಯದ ದೊರೆಗೆ ಹಾಗೂ ಜನಕನಿಗೆ. ಕೇಕಯದ ದೊರೆಗೆ ಏಕಿಲ್ಲ ಎಂದರೆ, ನನ್ನ ಮೊಮ್ಮಗನಿಗೆ ಸಲ್ಲಬೇಕು ಎಂದರೆ ಎಂಬ ಭಯ. ಜನಕನಿಗೆ ಏಕೆ ಕರೆಯಿಲ್ಲ ಎಂದರೆ, ಕೇಕಯದ ದೊರೆಗೆ ಹೇಳಲು ಸರಿಯಾದ ಕಾರಣ ಬೇಕಲ್ಲ! 'ಅವಸರವಸರವಾಗಿ ಆಯಿತು' ಎಂದು ಕಾರಣ ಹೇಳಬಹುದು ಎಂಬ ಚಿಂತನೆ. ರಾಜನೀತಿ ಇದು.

ದಶರಥನು ಉನ್ನತಾಸನದಲ್ಲಿ, ಎಲ್ಲರೂ ಅವರವರ ಆಸನದಲ್ಲಿ ಕುಳಿತಾಗ ದೇವತೆಗಳ ಮಧ್ಯೆ ಸೂರ್ಯನಂತೆ ಶೋಭಿಸಿದ ದಶರಥ. ಪ್ರಸ್ತಾವನೆ ದಶರಥನದೇ. ಔಪಚಾರಿಕ ಮಾತುಗಳನ್ನು ಪೂರೈಸಿ, ಎಲ್ಲರನ್ನೂ ಸಂಬೋಧಿಸಿ, ದಶರಥ ಹೇಳಿದ್ದು ಅಲ್ಲಿದ್ದವರಿಗೂ ಇಲ್ಲದವರಿಗೂ ಎಲ್ಲರಿಗೂ ಹಿತವಾಗುವಂಥದ್ದನ್ನು!

ಒಳ್ಳೆಯದು ಇಷ್ಟವಾಗುವುದಿಲ್ಲ, ಇಷ್ಟವಾದದ್ದೆಲ್ಲ ಒಳ್ಳೆಯದಾಗಿರುವುದಿಲ್ಲ. ಒಳ್ಳೆಯದೇ ಇಷ್ಟವಾಗುವುದಕ್ಕಿಂತ ವರದಾನ ಬೇರಿಲ್ಲ!

ದಶರಥನ ಕಂಠ ದುಂಧುಬಿಯ ನಾದವನ್ನು ಹೋಲುವ ಸ್ವರ ಮೊಳಗುವಂತೆ, ದೊಡ್ಡ ಸ್ವರ.
ಮೇಘವು ಗುಡುಗುವಂತೆ ಇದ್ದ ಸ್ವರವದು, ರಾಜಲಕ್ಷಣಯುಕ್ತ, ಇಷ್ಟವಾಗುವಂಥಾ, ಹೋಲಿಕೆಯಿಲ್ಲದ, ಅಪರೂಪದ, ರಸಪೂರ್ಣ, ಭಾವಪೂರ್ಣ ಸ್ವರ‌.

ಶುಷ್ಕಪೂರ್ಣ ಮಾತುಗಳನ್ನಾಡಿ ಪ್ರಯೋಜನವಿಲ್ಲ, ಭಾವಪೂರ್ಣವಾಗಿ ಮಾತನಾಡಬೇಕು ~ #ಶ್ರೀಸೂಕ್ತಿ

ಇಕ್ಷ್ವಾಕು ವಂಶಜರ ಆಳ್ವಿಕೆಯಿಂದ ಕೂಡಿದ ಜಗತ್ತಿಗೆ ಮಹದಾದ ಒಳಿತನ್ನು ನೀಡಬಯಸುತ್ತಿದ್ದೇನೆಂದ ದಶರಥ.
ಹಿಂದಿನದಕಿಂತಲೂ ಮುಂದಿನದು ಉತ್ಕೃಷ್ಟ ಎಂಬುದರ ಅರಿವಿದೆ ಆತನಿಗೆ!
ದಶರಥ: ಎಷ್ಟೋ ದಿನಗಳು ನಿದ್ದೆಯನ್ನೇ ಮಾಡದೆ, ಲೋಕಚಿಂತನೆಯಿಂದ
ಯಥಾಶಕ್ತಿ ಒಳಿತನ್ನು ನನ್ನ ಪ್ರಜೆಗಳಿಗೆ ಧಾರೆ ಎರೆದಿದ್ದೇನೆ. ಈ ನನ್ನ ಶರೀರವು ಶ್ವೇತಛತ್ರದಡಿಯಲ್ಲಿ ಮುಪ್ಪಾಯಿತು. ದೊಡ್ಡ ಆಯಸ್ಸು, ಶರೀರವು ಜೀರ್ಣವಾಗಿದೆ. ಈ ಶರೀರಕ್ಕಿನ್ನು ವಿಶ್ರಾಂತಿ ಬೇಕು.

ಇದೇನು ಸುಲಭವಲ್ಲ, ಇಡೀ ಪ್ರಪಂಚದ ಧರ್ಮಭಾರವನ್ನೇ ಹೊತ್ತವನು ದಶರಥ. ಆದರೆ ಈಗ ದೇಹವು ಬಳಲಿದೆ. ಧರ್ಮಭಾರವನ್ನು ಹೊತ್ತವನು ದಶರಥ.
ಯಾರಿಗೆ ಇಂದ್ರಿಯಗಳ ಮೇಲೆ ಹತೋಟಿಯಿಲ್ಲವೋ ಆತನು ಧರ್ಮಭಾರವನ್ನು ಹೊರಲಾರ.

ಧರ್ಮವನ್ನು ಉಳಿಸುವ ದೊಡ್ಡ ಭಾರವನ್ನು ಹೊತ್ತೂ ಹೊತ್ತೂ ಹೊತ್ತೂ ದಣಿದೆ. ನನ್ನ ಸ್ಥಾನದಲ್ಲಿ ರಾಮನನ್ನು ನಿಲ್ಲಿಸಿ ನಾನು ವಿಶ್ರಾಂತನಾಗುತ್ತೇನೆ. ಅವನಲ್ಲಿ ಎಲ್ಲ ಗುಣಗಳಿದೆ, ನನಗೇನು ಕಡಿಮೆಯಿಲ್ಲ ಅವನು, ನನಗಿಂತ ಮಿಗಿಲು. ಅವನಿಗೆ ಸಲ್ಲಲಿ ಯುವರಾಜ್ಯ ಎಂದು ಹೇಳಿ,
ಎಲ್ಲರನ್ನೂ ಕೇಳ್ತಾನೆ.

ಪುಷ್ಯ ನಕ್ಷತ್ರದ ಬಳಿಸಾರುವ ಚಂದ್ರ ಹೇಗೆ ಶೋಭೆಯನ್ನು ಪಡೆಯುತ್ತಾನೋ, ಯುವರಾಜ್ಯವನ್ನು ಪಡೆದು ಅತಿಶಯ ಶೋಭೆಯಿಂದ ಕಂಗೊಳಿಸುತ್ತಾನೆ ಪುರುಷ ಪುಂಗವ ರಾಮ ಎಂದು ಉಪಮೆಯನ್ನೂ ಕೊಟ್ಟ, ದಶರಥ. ಅಂದರೆ ಚಂದ್ರ ಪುಷ್ಯ ನಕ್ಷತ್ರದ ಬಳಿ ಬರುವಾಗ ಈ ಕಾರ್ಯ ಮಾಡುತ್ತೇನೆ ಎಂಬ ಪರೋಕ್ಷವಾದ ಧ್ವನಿಯನ್ನೂ ಕೊಟ್ಟ.
ಮೂರುಲೋಕಕ್ಕೂ ಅನುಪಮನಾದ ದೊರೆಯಾಗಬಲ್ಲ. ಈಗಿರುವುದಕ್ಕಿಂತ ಒಳ್ಳೆಯ ಆಡಳಿತ ಕೊಡಬಲ್ಲ.
ಭೂಮಂಡಲಕ್ಕೆ ಒಳಿತುಂಟುಮಾಡುವಂತಹಾ ಈ ಕಾರ್ಯವನ್ನು ಮಾಡಿ ನಾನು ಭಾರವನ್ನು ಇಳಿಸುತ್ತೇನೆ, ಕೆಳಗಿಳಿಯುತ್ತೇನೆ.
ನಿಮಗೆಲ್ಲ ಒಪ್ಪಿಗೆ ಇದೆಯೇ? ಸರಿಯಾ ಇದು?
ನನಗೆ ಇದೇ ಇಷ್ಟ. ಆದರೂ ನಿಮಗೆ ಬೇರೆಯೆನಿಸಿದರೆ ಹೇಳಿ. ಚರ್ಚೆಯಾದಾಗ ಬರುವ ನಿರ್ಣಯ ಅಂತಿಮ ಎಂದ..

ಸಭೆಯಲ್ಲಿ ದೊಡ್ಡ ಹರ್ಷೋದ್ಘಾರ,
ದಶರಥನನ್ನು ಅಭಿನಂದಿಸಿದರು. ಒಂದು ಆನಂದದ ಕೇಕೆ ಹೊಮ್ಮಿತು ಸಭೆಯಿಂದ.
ಪ್ರತಿಧ್ವನಿತವಾದ ಬಹು ಹಿತವಾದ ನಾದ ಒಂದು‌ಕ್ಷಣ ಭೂಮಿಯನ್ನೇ ಕಂಪನಗೊಳಿಸಿತು.

ಬಳಿಕ ಸಭೆಯಲ್ಲಿ ಪರಸ್ಪರ ಮಾತಾಡಿಕೊಳ್ತಾರೆ, ಏಕಾಭಿಪ್ರಾಯ ಬಂತು ಮತ್ತೆ. ಎಲ್ಲರ ಮನಸ್ಸು ಒಂದೇ ಆಗಿ ದಶರಥನಿಗೆ ಹೇಳ್ತಾರೆ, 'ನಿನಗೆ ವಯಸ್ಸಾಗಿದೆ ಹೌದು, ನಿನಗೆ ಶ್ರಮವಾಗಿರುವುದು ಸಹಜ, ನೀನು ಒಂದು ವೇಳೆ ರಾಮನನ್ನು ಯುವರಾಜನಾಗಿ ಪಟ್ಟಾಭಿಷೇಕ ಮಾಡುವೆಯಾದರೆ ನಾವು ಸಮ್ಮತಿಸುತ್ತೇವೆ. ಮಹಾಬಲನಾದ ರಾಮನು ಪಟ್ಟದಾನೆಯನ್ನೇರಿ ಶ್ವೇತಛತ್ರದಡಿಯಲ್ಲಿ ಸಾಗಿ ಬರುವ ರಾಮನನ್ನು ರಾಜನಾಗಿ ನೋಡುವ ಆಸೆ ನಮಗೂ ಇದೆ'.
ಸತ್ಯವನ್ನು ಹೇಳಲು ಮುಕ್ತವಾದ ವಾತಾವರಣ ಬೇಕು!!
ದಶರಥನ ಬಗ್ಗೆ ಯಾವ negative ಹೇಳದೆ ರಾಮನ ಗುಣಗಳನ್ನು ಹೇಳಿದರು.
ದೇವರಂತಹವನು, ಪ್ರೀತಿ~ ಸಂತೋಷ ಉಂಟಾಗುತ್ತದೆ ಅವನನ್ನು ನೋಡಿದಾಗ. ದಿವ್ಯ ಗುಣಗಳು ಇವೆ ಅವನಲ್ಲಿ. ಒಂದೇ‌ ಮಾತಿನಲ್ಲಿ ಹೇಳುವುದಾದರೆ ಈ ವಂಶದಲ್ಲಿ ಆಗಿಹೋದ ರಾಜರುಗಳು ಎಲ್ಲರಿಗಿಂತಲೂ ಶ್ರೇಷ್ಠನು ರಾಮ. ಲೋಕಕಂಡ ಸತ್ಪುರುಷ ರಾಮನೆಂದರೆ‌. ಸತ್ಯವೇ ಸರ್ವೋಪರಿ ಅವನಿಗೆ. ರಾಮನಿಂದ ಧರ್ಮ ಮತ್ತು ಸಂಪತ್ತುಗಳು ನಿರಂತರವಾಗಿ ಹೊರಹೊಮ್ಮುತ್ತವೆ..

ಧರ್ಮದ ಫಲ ಸಂಪತ್ತು.
ಧರ್ಮಜ್ಞ, ಸತ್ಯಸಂಧ, ಶೀಲವಂತ, ಗುಣಕೆ ಮತ್ಸರವಿಲ್ಲ, ಸಮಾಧಾನ ಮಾಡುತ್ತಾನೆ, ಕೋಪ ತಣಿಸುತ್ತಾನೆ, ಪ್ರೀತಿ ಮಾತುಗಳನ್ನು ಆಡುವವ, ಜಿತೇಂದ್ರಿಯ, ಮೃದು, ಅಸೂಯೆ ಇಲ್ಲದವ, ಮಾತಿನಿಂದ ಇನ್ನೊಬ್ಬರಿಗೆ ನೋವನ್ನು ಮಾಡದವನು.
ಮಾತಿನಿಂದ ಇನ್ನೊಬ್ಬರಿಗೆ ನೋವು ಮಾಡಬಾರದು ~ #ಶ್ರೀಸೂಕ್ತಿ.
ಸತ್ಯವನ್ನೇ ಹೇಳ್ತಾನೆ, ಪ್ರಿಯವಾಗುವಂತೆ ಹೇಳ್ತಾನೆ. ಹಿರಿಯರ ಸೇವೆ ಮಾಡ್ತಾನೆ, ಸರ್ವಶಾಸ್ತ್ರ ವಿಶಾರದ, ಸರ್ವ ಅಸ್ತ್ರ ಶಸ್ತ್ರಗಳನ್ನು ಬಲ್ಲವನು, ಸಂಪೂರ್ಣ ವಿದ್ಯಾಭ್ಯಾಸ ಪಡೆದವನು.

ಗಾಂಧರ್ವ ವಿದ್ಯೆ (ಗಾಯನ, ವಾದನ, ನರ್ತನ ಅಂದರೆ ಸಂಗೀತ ಶಾಸ್ತ್ರ) ಯಲ್ಲಿ ಭೂಮಿಗೇ ಶ್ರೇಷ್ಠ. ಅವನೊಳಗಿನಿಂದ ಶುಭಗಳನ್ನು ಹೊರಚೆಲ್ಲುವವನು. ಈ ಹೊತ್ತಿಗೇ ಅದೆಷ್ಟೋ ಯುದ್ಧಗಳನ್ನ ಮಾಡಿದ್ದ ರಾಮ. ಯುದ್ಧಕ್ಕೆ ಹೋದರೆ ಗೆದ್ದೇ ಬರುವ ರಾಮ ~ ನಿಶ್ಚಿತವದು. ಗೆಲ್ಲದೇ ಮರಳುವವನಲ್ಲ!
ಆದರೆ ಯುದ್ಧ ಭೂಮಿಯಿಂದ ಅರಮನೆಗೆ ಹೋಗುವ ಮೊದಲು ಪೌರರನ್ನು ಭೇಟಿ ಮಾಡಿ ತನ್ನವರಂತೆ ಪ್ರೀತಿಯಿಂದ ವಿಚಾರಿಸುವವ, ಮಾತನಾಡುವವ ರಾಮ. ತಂದೆಯಂತೆ ಪ್ರಜೆಗಳಿಗೆ.

ಭಾವ ಹೇಗಿದೆ ನೋಡಿ! ಅಷ್ಟರ ಮಟ್ಟಿಗೆ ಕಾಳಜಿ.
ಒಂದೇ ಮಾತಿನಲ್ಲಿ ಹೇಳುವುದಾದರೆ : ನಮ್ಮ ದುಃಖ ಅವನ ದುಃಖ, ನಮ್ಮ ಸುಖ ಅವನ ಸುಖ.

ಸಣ್ಣವನಾದರೂ ತಂದೆಯಂತಿದ್ದಾನೆ ಪ್ರಜೆಗಳಿಗೆ.
ಮೊದಲು ಮಂದಹಾಸ, ತಾನೇ ಮೊದಲಾಗಿ ಮಾತನಾಡುವ ಪ್ರಕ್ರಿಯೆ ~ ಸ್ಮಿತ ಪೂರ್ವಾಭಿಭಾಷಿ.
ಧರ್ಮವೇ ಮೂರ್ತಿವೆತ್ತಂತೆ.

ಸಾಕ್ಷಾತ್ ವಿಷ್ಣುವಿನಂತೆ, ಲೋಕಾಭಿರಾಮ, ಭುವನಾಭಿರಾಮ ಅವನು. ಸಂತೋಷಕ್ಕೆ ಕಾರಣನಾದವನಿಗೆ ಒಳ್ಳೆಯದು, ಸಿಟ್ಟು ಬಂದರೆ ತಪ್ಪು ಮಾಡಿದವನನ್ನು ದಂಡಿಸಿಯೇ ದಂಡಿಸ್ತಾನೆ. ಯಾರು ಯೋಗ್ಯರೋ ಅವರಿಗೆ ಒಳ್ಳೆಯದು ಮಾಡ್ತಾನೆ. ಹೀಗೆ ಪ್ರಜೆಗಳಿಗೆ ಮಾತ್ರವಲ್ಲದೆ ಲೋಕವೇ ಬಯಸ್ತಾ ಇದೆ ರಾಮನನ್ನು. ಇಂತಹ ಮಗನನ್ನು ಪಡೆದ ನೀನು ಅದೃಷ್ಟವಂತ. ದೇವರಂತ ಮಗನನ್ನು ಪಡೆದಿದ್ದೀಯೆ, ಭಾಗ್ಯವಂತ ನೀನು.

ರಾಮನಿಗೆ ಬಲ ಹೆಚ್ಚಲಿ, ಆರೋಗ್ಯ ಆಯಸ್ಸು ಚೆನ್ನಾಗಿರಲಿ ಎಂದು ದೇವಾಸುರಮನುಷ್ಯರೆಲ್ಲರೂ ಬಯಸುತ್ತಿದ್ದೇವೆ, ಬೆಳಗ್ಗೆ ಸಂಜೆ ಅದನ್ನೇ ಬಯಸಿ ಸಕಲ ದೇವರನ್ನೂ ಪೂಜಿಸ್ತಿದ್ದೇವೆ.ಅದು ನಿನ್ನ ಕೃಪೆಯಿಂದ, ನಮ್ಮೆಲ್ಲರ ಅಪೇಕ್ಷೆಯಿಂದ ನೆರವೇರಲಿ.
ಹೇ ರಾಜೋತ್ತಮನೇ, ಈಗ ಸದ್ಯ ನಿನ್ನ ಮಗ ಯುವರಾಜನಾಗಲಿ! ರಾಮನಾಗಮನದಿಂದ ದಶರಥ ಯೋಗ್ಯನಾಗಿದ್ದರೂ ಸಪ್ಪೆಯಾಗಿ ಕಾಣ್ತಾನೆ. ರಾಮರಾಜ್ಯಾಭಿಷೇಕ ನಡೆಸು ಎಂದು ಅಪೇಕ್ಷೆ ಪಟ್ಟು ಸಾವಿರಾರು ಜನರು ಕೈಮುಗಿದಿದ್ದಾರೆ ಒಟ್ಟಿಗೆ, ಸಹಸ್ರಪದ್ಮದಂತೆ..

ಅವರೆಲ್ಲರ ಪ್ರಣಾಮವನ್ನ ಸ್ವೀಕರಿಸಿ ಪ್ರಿಯವೂ ಹಿತವೂ ಆದ ಮುಂದಿನ ಮಾತುಗಳನ್ನಾಡ್ತಾನೆ ದಶರಥ; ಶುದ್ಧಮಾನಸ!

ವಸಿಷ್ಠರು & ವಾಮದೇವರನ್ನು ಕರೆದು, ಚೈತ್ರಮಾಸವಾದ ಈ ಕಾಲದಲ್ಲಿಯೇ ರಾಜ್ಯಾಭಿಷೇಕ ಮಾಡೋಣವೆಂದು ಸೂಚಿಸಿದಾಗ, ಆಗ ಹೊರಹೊಮ್ಮಿದ ಖುಷಿಯ ಜನಘೋಷವು ಶಾಂತವಾಗಲು ಕೆಲ ಸಮಯವೇ ಹಿಡಿಯಿತು.
ವಸಿಷ್ಠರು ಸಂಬಂಧಿಸಿದವರಿಗೆ ಆಜ್ಞೆ ಮಾಡ್ತಾರೆ, ಬೇಕಾದ ವಸ್ತುಗಳನ್ನು ರಾಜನ ಅಗ್ನಿಹೋತ್ರ ಗೃಹದಲ್ಲಿ ತಂದಿಡಲು. ಅನ್ನ ಸಿದ್ಧಪಡಿಸಿ, ಒಂದು ಲಕ್ಷ ಬ್ರಾಹ್ಮಣರಾದರೂ ಹೊಟ್ಟೆ ತುಂಬಿ ಊಟ ಮಾಡ್ಬೇಕು. ಬ್ರಾಹ್ಮಣರನ್ನು ಕರೀಬೇಕು, ಆಸನಗಳ‌ ಸುವ್ಯವಸ್ಥೆ, ಮಂಗಲಜಲದಿಂದ ಸಿಂಪಡಿಸಬೇಕು. ಸಂಗೀತ-ವಾದ್ಯ-ನರ್ತಕಿಯರು ಅರಮನೆಯ ಎರಡನೇ ಪ್ರಾಕಾರದಲ್ಲಿ ಇರಲಿ! ಎಲ್ಲ ದೇವ ಮಂದಿರಗಳು ಅಲಂಕೃತವಾಗಬೇಕು. ಅನ್ನದಾನ, ದ್ರವ್ಯದಾನ ಆಗಬೇಕು. ನಾಲ್ಕು ರಸ್ತೆ ಸೇರುವಲ್ಲಿಯೂ!
ಯೋಧರುಗಳು ಮಹಾರಾಜನ ಅಂಗಣ ಪ್ರವೇಶಿಸಲಿ. ಹೀಗೆ ಎಲ್ಲ ಕರ್ತವ್ಯಗಳಿಗೆ ಆಜ್ಞೆಯಿತ್ತು ಮರಳಿ ರಾಜನಲ್ಲಿ ಕಾರ್ಯವಾದ ಬಗ್ಗೆ ನುಡಿಯುತ್ತಾರೆ ವಸಿಷ್ಠರು‌.

ರಾಜ ರಾಮನನ್ನು ಕರೆಯಲು ಸುಮಂತ್ರನನ್ನು ಕರೆದ. ಯೋಗ್ಯರಥವನ್ನು ತೆಗೆದುಕೊಂಡು ರಾಜಭವನದಿಂದ ರಾಮಭವನದೆಡೆಗೆ ಸುಮಂತ್ರ ಹೊರಟ.
ಹೀಗೆ ಸುಮಂತ್ರನ ರಥ ಧಾವಿಸಿತು ರಾಮನ ಭವನದೆಡೆಗೆ. ಹೇಗೆ ಕರೆದುಕೊಂಡು ಬರ್ತಾನೆ ರಾಮನನ್ನ; ರಾಮನ ಪ್ರತಿಕ್ರಿಯೆ ಹೇಗಿರಬಹುದು.‌.?
ಮುಂದಿನದನ್ನು ಗ್ರಹಣ ಮುಗಿದ ಬಳಿಕ ನೋಡೋಣ!!!

#DhaaraRaamayan

No comments:

Post a Comment

Please leave your comments here.....