Dhaara Raamayana 22


#ಧಾರಾ_ರಾಮಾಯಣ - 15-07-2019 ದಿನ22
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ

ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಗಳೆಂಬ ಶತ್ರುಗಳನ್ನು ಗೆದ್ದವನು ಶತ್ರುಘ್ನ! ಮಾತ್ರವಲ್ಲ, ನಮ್ಮೊಳಗಿನ ನಿತ್ಯ ಶತ್ರುಗಳನ್ನು - ಅಂತಃಶತ್ರುಗಳನ್ನು ಗೆಲ್ಲಲು ಆಶೀರ್ವಾದ ಮಾಡುವವನು ಶತ್ರುಘ್ನ!

ಕೇಕಯಕ್ಕೆ ಹೋಗಬೇಕಾದವನು ಭರತ ಮಾತ್ರ, ಏಕೆಂದರೆ ಭರತನ ತಾಯಿಯ ತಂದೆ ಅಶ್ವಪತಿಗೆ ಮೊಮ್ಮಗನನ್ನು ನೋಡುವ ಬಯಕೆಯಾಯಿತು. ಆದರೆ ಹೋಗಿದ್ದು ಭರತ ಮತ್ತು ಶತ್ರುಘ್ನರು! ಅಶ್ವಪತಿಗೆ ಭರತನ ನೋಡುವ ಬಯಕೆಯಾದರೆ, ಭರತನಿಗೆ ಯಾವಾಗಲೂ ಶತ್ರುಘ್ನ ಜತೆಗಿರಲೇಬೇಕು! ಅವೆರಡೂ ಜೋಡಿ ಜೀವಗಳು; ನಾಲ್ಕೂ ಒಂದೇ, ಆದರೂ ರಾಮ-ಲಕ್ಷ್ಮಣ ಹಾಗೂ ಭರತ-ಶತ್ರುಘ್ನರೆಂಬ ಸಣ್ಣ ಜೋಡಿಗಳು. ಹಾಗೆ ಭರತನು ಶತ್ರುಘ್ನನನ್ನು ಕರೆದೊಯ್ದ.

ಅಜ್ಜನ ಮನೆಯಲ್ಲಿ ಸುಖವಾಗಿದ್ದರೂ, ಅಯೋಧ್ಯೆಯನ್ನು - ದಶರಥನನ್ನು ಮರೆಯಲಿಲ್ಲ; ಭರತ ಶತ್ರುಘ್ನರು. ದಶರಥನೂ ಅಷ್ಟೇ, ಮಕ್ಕಳ ನೆನಪಿನಲ್ಲಿದ್ದನಂತೆ. ಆದರೂ, ರಾಮನೆಂದರೆ ತುಂಬಾ ಪ್ರೀತಿಯಂತೆ. ಮಹಾವಿಷ್ಣುವಿನ ನಾಲ್ಕು ಬಾಹುಗಳಂತೆ ನಾಲ್ವರು ಮಕ್ಕಳಾದರೂ ರಾಮನ ಮೇಲೆ ಪ್ರೀತಿ ಅಧಿಕವಿತ್ತು, ಏಕೆಂದರೆ ರಾಮನಲ್ಲಿ ಗುಣವೂ ಅಧಿಕವಿತ್ತು!

ರಾಮಾಯಣವು ರಾಮನನ್ನು ಆತ ಯಾರೆಂದು ಪದೇ ಪದೇ ನೆನಪಿಸುವುದಿಲ್ಲ; ಮಾನವೋತ್ತಮನಾಗಿಯೇ ಬಿಂಬಿಸಿದೆ. ಆದರೆ ಇಲ್ಲಿ ಬರುವ ಶ್ಲೋಕವು ಆತ ಯಾರೆಂದು ಪರೋಕ್ಷವಾಗಿ ನೆನಪಿಸಿದೆ. ಹೇಗೆ ರಾಮ ಗುಣಾಧಿಕ? ಹೇಗೆ ರಾಮ ಸರ್ವಗುಣ ಪರಿಪೂರ್ಣ? ಹೇಗೆ ರಾಮ ಲೋಕಕಾಂತ? ಹೇಗೆ ಸರ್ವರಿಗೂ ಆನಂದಪ್ರದ? ಅಂದರೆ, ಅದು ಇಲ್ಲಿಯ ವಸ್ತುವಲ್ಲ, ಅದು ಪರವಸ್ತು! ರಾವಣ ವಧೆಗಾಗಿ ದೇವತೆಗಳು ಬೇಡಿಕೊಂಡಿದ್ದಕ್ಕಾಗಿ ಮನುಷ್ಯ ಲೋಕದಲ್ಲಿ ಹುಟ್ಟಿದ ಸನಾತನ ವಿಷ್ಣುವವನು! ಹಾಗಾಗಿ ಅವನು ಅಷ್ಟು ಶೋಭಿಸುತ್ತಾನೆ. ಇಂದ್ರನೊಂದಿಗೆ ಶೋಭಿಸುವ ಅದಿತಿಯಂತೆ ರಾಮನೊಂದಿಗೆ ಕೌಸಲ್ಯೆಯು ಶೋಭಿಸುತ್ತಾಳೆ.

ಹೋಲಿಕೆಯಿಲ್ಲದ ಮಗ - ಇದು ದಶರಥನ ಕಣ್ಣಲ್ಲಿ ರಾಮ!

ನಿತ್ಯವೂ ಪ್ರಶಾಂತವಾದ ಅಂತಃಕರಣವುಳ್ಳವನು ; ಸಮಾಧಾನಿ, ಮೃದುವಾಗಿ ಮಾತನಾಡುವವನು, ಯಾರಾದರೂ ಕೆಡುಮಾತಾಡಿದರೂ ತಿರುಗಿ ಸುಡುಮಾತಾಡುವವನಲ್ಲ! ಉಪಕಾರ ಮರೆಯುವವನಲ್ಲ! ಎಷ್ಟೇ ಅಪಕಾರಮಾಡಿದರೂ ನೆನಪೇ ಇರುವುದಿಲ್ಲವಂತೆ ರಾಮನಿಗೆ! ಅದು ಹೇಗೆ? ಅದು ಸಂಯಮದಿಂದ. ಇದೆಲ್ಲಾ ನಾವು ಜೀವನದಲ್ಲಿ ಅಳವಡಿಸಿಕೊಳ್ಳುವಂತಹಾದ್ದು! ಪ್ರಜೆಗಳು ಪ್ರೀತಿಸುವಂತಿದ್ದ, ತಾನೂ ಪ್ರಜೆಗಳನ್ನು ಪ್ರೀತಿಸುತ್ತಿದ್ದ. ಕರುಣೆಯುಳ್ಳವನು, ನಿಯಂತ್ರಣ ತಪ್ಪದ ಕೋಪ, ವಿಪ್ರರನ್ನು ಆರಾಧಿಸುವವ, ದೀನಾನುಕಂಪಿ, ಧರ್ಮಜ್ಞ, ಸಂಯಮವುಳ್ಳವನು, ಸ್ವಚ್ಛ, ಕುಲಕ್ಕೆ ತಕ್ಕ ಮತಿಯುಳ್ಳವನು, ಕ್ಷಾತ್ರ ಧರ್ಮದ ಬಗ್ಗೆ ಗೌರವವಿದೆ, ಒಳಿತಲ್ಲದ್ದರಲ್ಲಿ ಆಸಕ್ತಿಯಿಲ್ಲದವನು, ಒಳ್ಳೆಯ ಮಾತುಕಥೆಗಳಲ್ಲಿ ಆಸಕ್ತಿಯುಳ್ಳವನು, ವಾಗ್ಭವನವನ್ನು ಕಟ್ಟಬಲ್ಲವನು, ಮಾತಿಗೆ ನಿಂತರೆ ವಾಚಸ್ಪತಿ! ರೋಗವಿಲ್ಲದವನು, ತರುಣ, ವಾಗ್ಮೀ, ಪ್ರಶಸ್ತವಾದ ಶರೀರವುಳ್ಳವನು, ದೇಶ ಕಾಲದ ಪರಿವೆಯುಳ್ಳವನು, ಲೋಕದ ಸಾರವನ್ನು ಬಲ್ಲವನು! ಅಂತಹಾ ಒಬ್ಬ ಸತ್ತ್ವವುಳ್ಳವವನನ್ನು ವಿಧಿ ನಿರ್ಮಿಸಿತು! ವಿದ್ಯಾವ್ರತವನ್ನು ಸರಿಯಾಗಿ ಪೂರೈಸಿದವ, ಎಲ್ಲ ಅಂಗಗೊಳೊಂದಿಗೆ ಕೂಡಿದ ವೇದವನ್ನು ಬಲ್ಲವನು, ಭರತನ ದೊಡ್ಡಣ್ಣ ರಾಮ ಧನುರ್ವಿದ್ಯೆಯಲ್ಲಿ ತಂದೆಗಿಂತ ಮಿಗಿಲಾದ, ಶುಭಗಳಿಗೆ ಉಗಮಸ್ಥಾನ ರಾಮ! ಧರ್ಮ ಅರ್ಥ ಕಾಮಗಳ ಸೂಕ್ಷ್ಮ ಬಲ್ಲವನು, ಸ್ಮೃತಿಯುಳ್ಳವನು - ಬೇಕಾದಾಗ ಸ್ಮೃತಿಯು ಸ್ಪುರಿಸುವವನು, ಲೌಕಿಕವಾದ ಸಮಯಾಚಾರವನ್ನು ಬಲ್ಲವನು, ವಿನೀತ, ತಾಯಿ ತಂದೆ ಗುರುವನ್ನು ನಿತ್ಯ ಸೇವಿಸುವವನು. ಅವನೊಳಗೆ ಎಷ್ಟು ಆಳವಿದೆ ಎಂಬುದು ಸುಲಭವಾಗಿ ಗೊತ್ತಾಗಲಾರದು, ಗುಟ್ಟನ್ನು ಗುಟ್ಟಾಗಿ ಇಟ್ಟುಕೊಳ್ಳುವವನು, ಗುಪ್ತ ಮಿತ್ರರುಗಳ ಮೂಲಕ ದೇಶ ವಿದೇಶದ ಸುದ್ದಿಗಳನ್ನು ತಿಳಿದವನು, ಆಯವ್ಯಯ ಬಲ್ಲವನು, ಶಾಸ್ತ್ರಸಮೂಹದಲ್ಲಿ ಶ್ರೈಷ್ಠ್ಯ, ಅಭಿನಯದ ಕಲೆಯನ್ನು ಬಲ್ಲವನು, ಧರ್ಮ ಅರ್ಥಕ್ಕೆ ಸರಿಯಾಗಿ ಕಾಮ  ಎಂಬಂತಿದ್ದವನು, ಆಲಸ್ಯವಿಲ್ಲ, ಶಿಲ್ಪ ಗೀತ ಚಿತ್ರ ಮುಂತಾದ ಕಲೆಗಳಲ್ಲಿ ನಿಷ್ಣಾತ, ಶಸ್ತ್ರ ವಿದ್ಯಾ ವಿಶಾರದ, ಆನೆ ಕುದುರೆಗಳನ್ನು ಪಳಗಿಸಬಲ್ಲವನು, ಧನುರ್ವೇದವನ್ನು ಬಲ್ಲವರಲ್ಲಿ ಶ್ರೇಷ್ಠ, ಅತಿರಥ, ಪರಮವೀರ, ಅಭಿಯಾತ! ಸೇನಾತಜ್ಞ, ಯೋಧ, ಸೇನೆಯನ್ನು ಮುಂದುವರಿಸಬಲ್ಲವನು, ಸಣ್ಣವರನ್ನೂ ಯೋಗ್ಯರನ್ನು ಪೂಜಿಸುವವನು, ಅತಿಶ್ರೇಷ್ಠನು, ಲೋಕನಾಯಕನು!

ಸಾವಿರಾರು ಕಿರಣಗಳಂದ ಸೂರ್ಯ ಕಂಗೊಳಿಸಿದಂತೆ ಸಾವಿರಾರು ಗುಣಗಳಿಂದ ರಾಮ ಕಂಗೊಳಿಸಿದ! ಧರೆಯೇ ಅವನನ್ನು ಬಯಸಿತು! ಇವನು ನನ್ನ ದೊರೆಯಾಗಲಿ, ನನ್ನ ಪತಿಯಾಗಲೆಂದು ಭೂಮಿ ಬಯಸಿದಳು! ಗೊತ್ತಿದ್ದೋ ಗೊತ್ತಿಲ್ಲದೆಯೋ ಜೀವ-ಜಡಗಳೆಲ್ಲವೂ, ಪ್ರಪಂಚವೆಲ್ಲವೂ ಬಯಸಿದವು ರಾಮನನ್ನು! ಸಕಲ ಭೂಮಂಡಲ, ಧರಾದೇವಿಯ ಬಯಕೆಯು ಸ್ಪುರಿಸಿತು ದಶರಥನ ಅಂತರಂಗದಲ್ಲಿ!

ರಾಜಾರಾಮನನ್ನು ನಾನು ನೋಡಬೇಕೆಂದು ದಶರಥ ಬಯಸಿದ! ಕೊಟ್ಟು ಹೋಗಬೇಕು ನಾನು ಆಡಳಿತವನ್ನು ಎಂದು ಬಯಸಿದ! ಆತ ಹಾಗೆ ಬಯಸಲು ಮಹತ್ವವಾದ ಕಾರಣಗಳಿದ್ದವು, ಆತನ ಅಂತರಂಗದಲ್ಲಿ ಅನೇಕಾನೇಕ ಕಾರಣಗಳು ಪ್ರೇರೇಪಿಸಿದವು! ಒಳಿತು - ಕೆಡುಕುಗಳೆರಡೂ ಅಂತಹಾ ಕಾರಣಗಳು; ಒಳ್ಳೆಯ ಕಾರಣಗಳು - ನಿಮಗಿಂದು ಗೊತ್ತಾಯಿತು, ಕೆಡುಕಿನ ಕಾರಣಗಳು - ಯಾವುವು ಎಂಬುದನ್ನು ನಾಳೆ ನೋಡೋಣ..

#DhaaraRaamayan

No comments:

Post a Comment

Please leave your comments here.....