Dhaara Raamayana 19


#ಧಾರಾ_ರಾಮಾಯಣ - 08-07-2019 ದಿನ19
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ

ವಾಲ್ಮೀಕಿ ರಾಮಾಯಣ - ಬಾಲಕಾಂಡ- 66ನೇ ಸರ್ಗ.
ಬಾಲಕಾಂಡದಲ್ಲಿ ಇನ್ನುಳಿದಿರುವುದು - ಶಿವನ ಧನುರ್ಭಂಗ, ಪರಶುರಾಮ ಗರ್ವಭಂಗ; ರಾಮನಿಗೆ ಲಭಿಸಿದ ಸೀತಾಸಂಗ!

ಆವರೆಗೆ ವಿಶ್ವಾಮಿತ್ರರಿಂದ ಕಥೆ ಕೇಳಿದ ರಾಮ ಅಂದು  ವಿಶ್ವಾಮಿತ್ರರ ಕಥೆಯನ್ನು ಶತಾನಂದರ ಬಾಯಲ್ಲಿ ಕೇಳಿದ.

ಬೆಳಗಾಯಿತು; ಜನಕನು ಕುಮಾರರೀರ್ವರು (ರಾಮ ಲಕ್ಷ್ಮಣರು) ಮತ್ತು ಗುರು ವಿಶ್ವಾಮಿತ್ರರನ್ನು ಕರೆಸಿಕೊಂಡು, ವಿಶ್ವಾಮಿತ್ರರನ್ನು ಪೂಜಿಸಿದನು ಹಾಗೂ ರಾಮಲಕ್ಷ್ಮಣರನ್ನು ಗೌರವಿಸಿದನು.

ಜನಕನು ವಿಶ್ವಾಮಿತ್ರರಿಗೆ ವಿಜ್ಞಾಪನೆ ಮಾಡುತ್ತಾನೆ - ನೀವು ನನಗೆ ಅಪ್ಪಣೆ ಕೊಡಿ; ನೀವು ಅಪ್ಪಣೆ ಕೊಡಬೇಕಾದವರು, ನಾನು ಪಾಲಿಸಬೇಕಾದವನು ಎಂದಾಗ ವಿಶ್ವಾಮಿತ್ರರು ಹೇಳಿದ್ದು - ನನಗೇನು ಆಗಬೇಕಾಗಿಲ್ಲ , ದಶರಥನ ಸುಕುಮಾರರಿಗೆ ನಿನ್ನಲ್ಲಿ ಮಾತ್ರವೇ ಇರತಕ್ಕಂತಹಾ ಶ್ರೇಷ್ಠ ಶಿವ ಧನುಸ್ಸನ್ನು ತೋರಿಸು, ಅಷ್ಟೇ, ನಿನಗೆ ಮಂಗಲವಾಗಲಿ.

ಮುಂದೆ ಜನಕ ಧನಸ್ಸಿನ ಬಗ್ಗೆ ಹೇಳುತ್ತಾನೆ. ಈ ವಂಶದ ಆದಿಪುರುಷ ನಿಮಿಯಿಂದ 6ನೇ ರಾಜನಾದ ದೇವರಾತನ ಕಾಲದಿಂದ ಇದ್ದ ಧನುಸ್ಸು ಇದು.

ದಕ್ಷ ಯಜ್ಞ ಸಮಯದಲ್ಲಿ ರುದ್ರನಿಗೆ ಭಯಂಕರವೋದ ಕೋಪ ಬಂದಿತ್ತು. ಯಾರ್ಯಾರ ಮೇಲೋ ಬಂದಿತ್ತು, ಜತೆಗೆ ದೇವತೆಗಳ ಮೇಲೂ ಬಂದಿತ್ತು. ಆಗ ತನ್ನ ಧನುಸ್ಸನ್ನಿತ್ತಿ ಘರ್ಜಿಸಿದನಂತೆ! ಆಗ ದೇವತೆಗಳು ಶಿವನ ಕಾಲನ್ನೇ ಹಿಡಿದರಂತೆ. ಶಿವನ ಕೋಪವೆಷ್ಟು ದೊಡ್ಡದೋ, ಅದಕ್ಕಿಂತ ದೊಡ್ಡದು ಆತನ ಕರುಣೆ! ಆತ ಸುಪ್ರೀತನಾಗಿ ಅದೇ ಧನುಸ್ಸನ್ನೇ ದೇವತೆಗಳಿಗೆ ಕೊಟ್ಟುಬಿಟ್ಟನಂತೆ! ಶಿವನು ದೇವತೆಗಳಿಗೆ, ನಂತರ ದೇವತೆಗಳು ಅದೇ ಧನುರತ್ನವನ್ನು ದೇವರಾತರಿಗೆ ನೀಡಿದರು.

ಇದು ಧನುಸ್ಸಿನ ಪೂರ್ವಕಥೆ. ಅದು ಮಾತ್ರ ಸಾಲದು, ಸೀತೆಯ ಪೂರ್ವಕಥೆಯನ್ನೂ ಹೇಳಬೇಕು!

ತಲೆಮಾರುಗಳನ್ನು ದಾಟಿ ಜನಕನಲ್ಲಿರುವ ಧನುಸ್ಸದು, ಜನಕನು ಪ್ರತಿದಿನ ಪೂಜಿಸುವ ಧನುಸ್ಸದು. ಒಂದುದಿನ, ಜನಕನು ಯಜ್ಞ ಮಾಡಬೇಕೆಂದು ಯಜ್ಞ ಭೂಮಿಯನ್ನು  ಹಲಮುಖದಿಂದ ಉಳುಮೆ ಮಾಡುವಾಗ... ನೇಗಿಲ ನಾಲಿಗೆಯು ಭೂಮಿಯ ಬಾಗಿಲನ್ನು ತೆರೆದಾಗ... ಲೋಕೇಶ್ವರಿಯಾದ ಲಕ್ಷ್ಮಿ, ಜನಕನ ಪುರದಲ್ಲಿ, ಶುಭಕ್ಷೇತ್ರದಲ್ಲಿ, ನೇಗಿಲು ಬಾಗಿಲನ್ನು ತೆರೆದಾಗ, ಪರಮಸುಂದರ ಹೆಣ್ಣುಶಿಶುವಾಗಿ ಎದ್ದು ಬಂದಳು - ಸೀತೆ!

ಇದು ಸೀತಾವತಾರ..

ಹನುಮಂತ ಮುಂದೆ ಅದನ್ನೇ ವರ್ಣಿಸಿದ್ದಾನೆ. ಹಲಮುಖದಿಂದ ಕ್ಷತವಾದ ನೆಲದಿಂದ ಉದ್ಭವಿಸಿದಳು ಸೀತೆ. ಕಮಲದ ರೇಣುಗಳನ್ನು ಹೋಲುವ ಗದ್ದೆಯ ಮಣ್ಣಿನ ಕಣಗಳಿಂದ ಅಲಂಕೃತಳಾಗಿದ್ದ ತಾಯಿ ಸೀತೆ.

ಶುಕ್ಲ ಪಕ್ಷದ ಚಂದ್ರನಂತೆ ದಿನಕಳೆದಂತೆ ಬೆಳೆದಳು / ಬೆಳಗಿದಳು ಸೀತೆ. ಸೀತೆಯನ್ನು ವಿಶ್ವವೇ ಬಯಸಿತು. ಜನಕನಿಗೆ ಸೀತೆಯಂತಹಾ ಸೀತೆಯನ್ನು, ಅನರ್ಘ್ಯ ರತ್ನವನ್ನು ವರಿಸುವವರಾರು - ಬಾಳಿಸುವವರಾರು? ಎನ್ನುವ ಚಿಂತೆಯಾಯಿತು.

ಸೌಂದರ್ಯದ ಚರಸೀಮೆಯನ್ನು ವರಿಸಬೇಕಾದರೆ ಶೌರ್ಯದ ಚರಮಸೀಮೆಯೇ ಆಗಿರಬೇಕಾಗುತ್ತದೆ.

ಹಾಗೆ ಜನಕನು ನಿಶ್ಚಯಿಸಿದ - ಈ ಶಿವಧನುಸ್ಸು, ಈ ಸೀತೆ ಒಂದಕ್ಕೊಂದು ಸರಿ. ದೈವಾನುಗ್ರಹಗಳು.

ಯಾರು ಶಿವಧನುಸ್ಸನ್ನು ಎತ್ತಿ, ಹೆದೆಯೇರಿಸಿ, ಬಾಣವನ್ನು ಹೂಡಬಲ್ಲವನಿಗೆ ಸೀತೆಯನ್ನು ಕೊಡುತ್ತೇನೆಂದು ಜನಕನು ನಿಶ್ಚಯಿಸಿದ. ಅಪಾರ ಸಾಮರ್ಥ್ಯವಂತೂ ಬೇಕು, ಜತೆಗೆ ಶಿವಧನುಸ್ಸಾಗಿದ್ದರಿಂದ ಯಾರೋ ಅಯೋಗ್ಯನು ಎತ್ತಲು ಸಾಧ್ಯವಿಲ್ಲ! ಶಿವನಂಥವನೇ ಬಂದು ಎತ್ತಬೇಕಷ್ಟೇ! ಆ ಯೋಗ್ಯತೆಯಿರುವವನೇ ಸೀತೆಯನ್ನು ವರಿಸಬೇಕೆಂದು ತೀರ್ಮಾನಿಸಿದ.

ಅನೇಕಾನೇಕ ರಾಜರು ಬಂದು ಸೇರಿದರು, ಶಿವಧನುಸ್ಸನ್ನು ತರಲಾಯಿತು. ಆದರೆ ಎಷ್ಟು ಪ್ರಯತ್ನಿಸಿದರೂ ಧನುಸ್ಸನ್ನು ಹಿಡಿಯಲೂ ಸಾಧ್ಯವಾಗಲಿಲ್ಲ! ಎತ್ತಲು ಸಮರ್ಥರಾಗಿರಲಿಲ್ಲ. ಅವರನ್ನೆಲ್ಲ ತಿರಸ್ಕರಿಸಿದೆ ಎಂದ ಜನಕ.

ಶಿವಧನಸ್ಸನ್ನು ಎತ್ತಲಾಗದೆ ಸೋತುಹೋದ ಎಲ್ಲ ರಾಜರು ಸೇರಿ ಮಿಥಿಲೆಯನ್ನು ಮುತ್ತಿದರು. ನಮ್ಮ ದೌರ್ಬಲ್ಯವೇ, ನಮ್ಮ ದೋಷವೇ ಕೋಪಕ್ಕೆ ಕಾರಣ.  ನಂತರ ನಡೆದ ಒಂದು ವರ್ಷಗಳ ಕಾಲ ಘೋರಯುದ್ದದ ಪರಿಣಾಮವಾಗಿ ಜನಕನ ಯುದ್ಧ ಸಾಧನಗಳು ಬರಿದಾದವು. ದೇವರ ಮೊರೆ ಹೊಕ್ಕೆ. ದೇವತೆಗಳಿಂದ ಚದುರಂಗ ಬಲವನ್ನು ಪಡೆದು ಯುದ್ದಮಾಡಿದಾಗ ಎಲ್ಲ ರಾಜರು ಸೋತು ದಿಕ್ಕುದಿಕ್ಕುಗಳಿಗೆ ಓಡಿ ಹೋದರು ಎಃಬುದಾಗಿ ಜನಕನು ಹೇಳಿದನು.

"ಇಂತಹ ಶ್ರೇಷ್ಠ ಶಿವಧನಸ್ಸನ್ನು ರಾಮ ಎತ್ತಿ , ಹೆದೆಯೇರಿಸಿದರೆ ಅಯೋನಿಜೆ ಸೀತಾರತ್ನವನ್ನು ರಾಮನಿಗೆ ಕೊಟ್ಟೆ" ಎಂದು ಜನಕ ಹೇಳಿದಾಗ ವಿಶ್ವಾಮಿತ್ರರು ಮೂರೇ ಶಬ್ದಗಳನ್ನು ಹೇಳಿದರು. "ನೀನು ರಾಮನಿಗೆ ಧನಸ್ಸನ್ನು ತೋರಿಸು".

8 ಚಕ್ರಗಳಿರುವ ಪೆಟ್ಟಿಗೆಯಲ್ಲಿ ಇಡಲಾದ ಧನಸ್ಸನ್ನು  5000 ದೇಹತಾಲೀಮು ಮಾಡಿ ಬಲಿಷ್ಠರಾದ ಜನರಿಂದ ಜನಕನು ತರಿಸಿದನು. ತೋರಿಸಿದ. ವಿಶ್ವಾಮಿತ್ರರು ರಾಮನಿಗೆ "ಆ ಧನಸ್ಸನ್ನು ನೋಡು" ಎಂದು ಸೂಚಿಸಿದರು. ರಾಮ ಪೆಟ್ಟಿಗೆ ಬಾಗಿಲನ್ನು ತೆಗೆದು ಧನಸ್ಸನ್ನು ನೋಡಿ, ಶಿವದರ್ಶನ ಮಾಡಿದನು.

ರಾಮನು ಧನಸ್ಸನ್ನು  ಮುಟ್ಟಲೇ, ಹೆದೆಏರಿಸುವ ಪ್ರಯತ್ನ ಮಾಡಲೇ ಎಂದು ವಿಶ್ವಾಮಿತ್ರರಿಗೆ ಕೇಳಿದಾಗ ಒಪ್ಪಿಗೆ ನೀಡಿದರು. ಲೋಕದಲ್ಲಿ ರಾಮನಂತಹ ಧನುರ್ಧಾರಿ ಇಲ್ಲ. ಲೋಕೈಕವೀರನಾದ ರಾಮನು ಸಾವಿರಾರು ಜನ ನೋಡುತ್ತಿರುವಂತೆಯೇ ಧನಸ್ಸನ್ನು ಎತ್ತಿ, ಹೆದೆಯನ್ನು ಬಲವಾಗಿ ಸೆಳೆದಾಗ.. ಧನಸ್ಸು ಮುರಿದೇ ಹೋಯಿತು!
ಚಂಡ ಮಾರುತವು ಮತ್ತೊಂದು ಚಂಡ ಮಾರುತದೊಡನೆ ಸೇರಿ ಭೂಮಿಗೆ ಅಪ್ಪಳಿಸುವಾಗ ಆಗಬಹುದಾದ ಶಬ್ದದಂತಹಾ ಶಬ್ದವಾಯಿತು. ಭೂಮಿಯು ಕಂಪಿಸಿದಂತೆ ಭಾಸವಾಯಿತು, ಪರ್ವತವು ಸೀಳಿದಂತೆ ಭಾಸವಾಯಿತು! ಸ್ವತಃ ರಾಮ ,ಲಕ್ಷ್ಮಣ, ಜನಕ, ವಿಶ್ವಾಮಿತ್ರರನ್ನು ಹೊರತುಪಡಿಸಿ ಎಲ್ಲರಿಗೂ ಪ್ರಜ್ಞೆ ತಪ್ಪಿತಂತೆ.

ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತಂತೆ! ಜನಕನೆಂದರೆ ಸಮಾಧಾನ, ಅಂತಹ ಜನಕನಿಗೆ ಇದನ್ನು ಕಳೆಯಲು ಕೆಲಸಮಯ ಬೇಕಾಯಿತು. ಎರಡೂ ಕೈಜೋಡಿಸಿದನಂತೆ! "ಅತ್ಯದ್ಭುತ, ಚಿಂತನೆಗೆ ಮೀರಿದ್ದು, ನನ್ನ ಯುಕ್ತಿಗೆ ನಿಲುಕುವಂತಹದ್ದಲ್ಲ! ಕಂಡೆ ರಾಮನ ಪರಾಕ್ರಮವನ್ನು!" ಇದು ಜನಕನ ಮಾತುಗಳು.
ಮುಂದೆ, ಸಂತೋಷಗೊಂಡ ಜನಕನು "ಸೀತೆ ನನ್ನ ವಂಶಕ್ಕೆ ಕೀರ್ತಿ ತರುವಳು, ದಶರಥಾತ್ಮಜನನ್ನು ವರಿಸಿದ ಸೀತೆ ನನ್ನ ವಂಶವನ್ನು ಬೆಳಗುವಳು, ಎರಡೂ ಕುಲಕ್ಕೆ ಆರತಿಯಾಗುವಳು, ಬೆಳಗುವಳು" ಎಂದನು.

ರಾಮನು, ವಿವಾಹಕ್ಕೆ ತಂದೆಯು ಒಪ್ಪಬೇಕೆಂದು ಹೇಳಿದಾಗ ಜನಕನು ಕೌಶಿಕರಲ್ಲಿ ನಿಮ್ಮ ಅಪ್ಪಣ್ಣಯ ಮೇರೆಗೆ ಎಂದು ಹೇಳಿ ದೂತರನ್ನು ಕಳುಹಿಸಿಕೊಡಲೇ ಎಂದು ಕೇಳಿದಾಗ ಕೌಶಿಕರು ಒಪ್ಪಿದರು, ಕೌಶಿಕರ ಅಪ್ಪಣೆಯ ಮೇರೆಗೆ  ಅಯೋಧ್ಯೆಗೆ ದೂತರನ್ನು ಕಳುಹಿಸಿದನು.

ದೇವತುಲ್ಯನಾದ ವೃದ್ಧನಾದ ದಶರಥನನ್ನು ದೂತರು ಕಂಡು ಕೈಮುಗಿದು ಮಧುರವಾದ ಮಾತುಗಳಿಂದ ವಿಷಯ ಪ್ರಸ್ತಾಪಿಸದರು. ಕೌಶಿಕರ ಅನುಮತಿಯ ಮೇರೆಗೆ ಜನಕನು ಹೇಳಿದಂತೆ ಸೀತೆಯನ್ನು ರಾಮನಿಗೆ ಕೊಟ್ಟು ಮದುವೆ ಮಾಡಬೇಕೆಂದು ಹೇಳಿದ ವಿಷಯವನ್ನು ಪ್ರಸ್ತಾಪಿಸಿದರು.

ದಶರಥನು ಕೌಸಲ್ಯಾನಂದವರ್ಧನನು ಮಿಥಿಲೆಯಲ್ಲಿ ಇರುವ ಹಾಗೂ ಧನಸ್ಸನ್ನು ಮುರಿದ ಸುದ್ದಿ ಕೇಳಿ ಪರಸಮಸಂತೋಷಗೊಂಡನು. ನಂತರ ದಶರಥನು ಮಂತ್ರಿಗಳು, ಗುರು - ವಸಿಷ್ಠರಲ್ಲಿ ವಿಷಯ ಪ್ರಸ್ತಾಪಿಸಿ  ಅವರಿಂದ ಒಪ್ಪಿಗೆ ಪಡೆದನು.

ಮರುದಿನವೇ ಮಿಥಿಲೆಗೆ ಹೋಗುವ ಸಕಲ ಸಿದ್ಧತೆಗಳನ್ನು ಮಾಡಿದನು. ಅಯೋಧ್ಯೆಯಿಂದ ನಾಲ್ಕು ದಿನಗಳ ಪ್ರಯಾಣಮಾಡಿ ವಿದೇಹದ ಮಿಥಿಲೆಗೆ ತಲುಪಿದರು. ಜನಕನು ಅತಿವಿಶೇಷವಾದ ಸತ್ಕಾರವನ್ನು ದಶರಥನಿಗೆ ಮಾಡಿ, ನಾಳೆ ಋಷಿಸಮ್ಮುಖದಲ್ಲಿ ವಿವಾಹ ನಡೆಸಿಕೊಡಬೇಕು ಎಂದು ವಿದ್ಯುಕ್ತವಾಗಿ ಪ್ರಾರ್ಥನೆಮಾಡಿದ. ಆಗ ದಶರಥ "ಕೊಡುವುದು ಕೊಡುವವನ ಕೈಯಲ್ಲಿದೆ, ಹಾಗಾಗಿ ನೀನು ಹೇಗೆ ಹೇಳುವೆಯೋ ಹಾಗೇ ಆಗಲಿ" ಎಂದನು. ಎಲ್ಲರೂ ಆ ರಾತ್ರಿ ಸುಖವಾಗಿ ವಾಸಮಾಡಿದರು. ಜನಕನು ರಾತ್ರಿ ಯಜ್ಞಕ್ಕೆ ಸಂಬಂಧಿಸಿದ ಹಾಗೂ ವಿವಾಹಕ್ಕೆ ಸಂಬಂಧಿಸಿದ ಧಾರ್ಮಿಕ ಪ್ರಕ್ರಿಯೆಗಳನ್ನು ಮುಗಿಸಿದನು.......

ಮುಂದೇನಾಯಿತು?? ಮುಂದಿನ ಪ್ರವಚನದಲ್ಲಿ ತಿಳಿಯೋಣ.

#DhaaraRaamayan

No comments:

Post a Comment

Please leave your comments here.....