Dhaara Raamayana 20


#ಧಾರಾ_ರಾಮಾಯಣ - 09-07-2019 ದಿನ20
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ

ದೊಡ್ಡ ಸಂಕಟವಾದಾಗ  ಜನನ ದೊಡ್ಡ ಸಂತೋಷವಾದಾಗ ನಮಗೆ ಯಾರ ನೆನಪಾಗುತ್ತದೆಯೋ, ಅವನೇ ನಿಜವಾದ ಬಂಧು.

ಜನಕನಿಗೆ ಬಹುದೊಡ್ಡ ಸಂತೋಷವಾಗಿದೆ; ಸೀತಾಕಲ್ಯಾಣದ ಶುಭ ಸಂದರ್ಭ, ಜನಕನಿಗೆ ತನ್ನ ಸಹೋದರನ ನೆನಪಾಯಿತು. ಅವನು ಇಕ್ಷುಮತಿ ನದಿಯ ತೀರದಲ್ಲಿರುವ ಸಾಂಕಾಷ್ಯ ನಗರಿಯನ್ನಾಳುತ್ತಿದ್ದ ಕುಶಧ್ವಜ. ಆತನನ್ನು ಕರೆತರಲು ಗುರು ಶತಾನಂದರಿಗೆ ಜನಕನು ಸೂಚನೆಯಿತ್ತನು, ಕುಶಧ್ವಜನ ಆಗಮನವಾಯಿತು.

ಮಂತ್ರಿ 'ಸುಧಾಮನ'ನ ಮೂಲಕ ದಶರಥನಿಗೆ ಕರೆಯಿತ್ತು ಕರೆಸಿಕೊಂಡ ಜನಕ. ದಶರಥ ಅಷ್ಟಮಂತ್ರಿಗಳು, ಅಷ್ಟಗುರುಗಳೊಡನೆ ಆಗಮಿಸಿದನು. ಎಲ್ಲರೂ (ಎರಡೂ ಕಡೆಯವರು) ಸೇರಿಕೊಂಡರು.

ಈಗ ಸಂದರ್ಭ: ಕುಲವನ್ನು ಕೀರ್ತನೆ ಮಾಡಬೇಕು. ಏಕೆ? ವಿವಾಹವೆಂದರೆ ಕೇವಲ ಎರಡು ಜೀವಗಳ ಎರಡು ವ್ಯಕ್ತಿಗಳ ಸೇರುವಿಕೆಯಷ್ಟೇ ಅಲ್ಲ, ಎರಡು ಕುಲಗಳು ಸೇರುತ್ತವೆ ಅಲ್ಲಿ. ಶ್ರೀರಾಮ ಮತ್ತು ಸೀತೆಯ ವಿವಾಹವೆಂದರೇನು? ಸೂರ್ಯವಂಶ ಮತ್ತು ನಿಮಿವಂಶದ ಎರಡು ಕುಡಿಗಳಾದ ಶ್ರೀರಾಮ ಮತ್ತು ಸೀತೆ ಸೇರುವಾಗ ಎರಡು ವಂಶಗಳೇ ಸೇರುತ್ತವೆ.

ಕನ್ಯಾಪಿತ ಮತ್ತು ವರನ ಪಿತ ತಮ್ಮ ಕುಲಗಳ ಬಗ್ಗೆ ಹೇಳಬೇಕು. ದಶರಥ ಆರಂಭಿಸುತ್ತಾನೆ, ' ನಮ್ಮ ಕುಲಕ್ಕೆ ಕುಲಗುರುಗಳು ಮಾತ್ರವಲ್ಲ ದೇವರಿದ್ದಂತೆ ವಸಿಷ್ಠರು. ಯಾವುದೇ ಕಾರ್ಯಕ್ಕೆ ನಮ್ಮ ಪರವಾಗಿ ಮಾತನಾಡುವವರು ವಸಿಷ್ಠರು. ವಿಶ್ವಾಮಿತ್ರರ ಅನುಮೋದನೆಯಲ್ಲಿ ನನ್ನ ಕುಲಕ್ರಮವನ್ನು ವಸಿಷ್ಠರು ವಿವರಿಸುತ್ತಾರೆ'..
ಹೀಗೆಂದ.ದಶರಥನು ಸುಮ್ಮನಾದ ಬಳಿಕ ವಸಿಷ್ಠರು ವಿವರಿಸುತ್ತಾರೆ..
ಮಾತನಾಡುತ್ತಿರುವವರು ಸುಮ್ಮನಾದ ಮೇಲೆ ಇನ್ನೊಬ್ಬರು ಮಾತನಾಡುವುದು ಶಿಷ್ಟಾಚಾರ ~ #ಶ್ರೀಸೂಕ್ತಿ

ಸೃಷ್ಟಿಕರ್ತನಾದ ಚತುರ್ಮುಖ ಬ್ರಹ್ಮನಿಂದ ಆರಂಭ! ಆತನೆಲ್ಲಿಂದ ಹುಟ್ಟಿಬಂದನೆಂಬುದು‌ ಅವ್ಯಕ್ತ, ನಿಗೂಢ, ಗುಪ್ತ. ಆತ ಶಾಶ್ವತ, ನಿತ್ಯ, ಸಾವಿಲ್ಲದವನು. ಬ್ರಹ್ಮನ ಮಗ ಮರೀಚಿ, ಆತನ ಮಗ ಕಶ್ಯಪ, ಅವನ ಮಗ ಸೂರ್ಯ, ಸೂರ್ಯನ ಮಗನೇ ವೈವಸ್ವತ ಮನು, ಆತನ ಹಿರಿಯ ಮಗ ಇಕ್ಷ್ವಾಕು. ಅಯೋಧ್ಯೆಗೆ ಮೊಟ್ಟಮೊದಲ ರಾಜ ಇಕ್ಷ್ವಾಕು. ಇಕ್ಷ್ವಾಕುವಿನ ಮಗ ಕುಕ್ಷಿ, ಅವನ ಮಗ ವಿಕುಕ್ಷಿ, ಅವನ ಮಗ ಬಾಣ, ಅವನ ಮಗ ಅನರಣ್ಯ. ಆತ ರಾವಣನೊಂದಿಗೆ ಯುದ್ಧ ಮಾಡುತ್ತಾ ವೀರಸ್ವರ್ಗವನ್ನು ಪಡೆದವನು, ರಾವಣನಿಗೆ "ನನ್ನ ವಂಶದಲ್ಲಿ ರಾಮನೆಂಬುವನು ಹುಟ್ಟಿ ಬರುತ್ತನೆ, ಅವನು ನಿನ್ನನ್ನು ಸರ್ವನಾಶ ಮಾಡುತ್ತಾನೆ" ಎಂದು ಶಪಿಸಿದವನು. ಅನರಣ್ಯನ ಮಗ ಪೃಥು, ಅವನ ಮಗ ತ್ರಿಶಂಕು. ಅವನ ಮಗ ದುಂಧುಮಾರ, ಮುಂದೆ ಯವನಾಶ್ವ, ನಂತರ ಪ್ರಸಿದ್ಧನಾದ ಮಾಂಧಾತ. ಇವನನ್ನು ಕೃತಯುಗನ ಅಲಂಕಾರ ಎಂದು ಕರೆಯುವರು! ಅವನ ಮಗ ಸುಸಂಧಿ, ಅವನಿಗೆ ಧ್ರುವಸಂಧಿ-ಪ್ರಸಯಾನಜಿತ್ ಎಂಬ ಇಬ್ಬರು ಮಕ್ಕಳು. ಧ್ರವಸಂಧಿಯ ಮಗ ಭರತ, ಅವನ ಮಗ ಅಸಿತ. ಅವನ ಮಗನೇ ಸಗರ ಚಕ್ರವರ್ತಿ. ಒವನ ಮಗ ಅಸಮಂಜ, ಅವನ ಮಗ ಅಂಶುಮಾನ್. ಮುಂದೃ ದಿಲೀಪ, ದಿಲೀಪನ ಮಗನೆ ಭಗೀರಥ. ಅವನ ಮಗ ಕಕುಸ್ತ್ಥ. ಅವನ ಮಗ ರಘು (ಅವನಿಂದಲೇ ರಾಘವರು ಅಂದರೆ ರಘುವಂಶೀಯರು). ಅವನ ಮಗ ಕಲ್ಮಾಶಪಾದ. ಅವನ ಮಗ ಶಂಖಣ, ಮುಂದೆ ಸುದರ್ಶನ, ನಂತರ ಅಗ್ನಿವರ್ಣ. ಮುಂದೆ ಶೀಘ್ರಗ, ಅವನ ಮಗ ಮರು, ಅವನ ಮಗ ಪ್ರಶುಶ್ರುಕ. ಅವನ ಮಗ ಅಂಬರೀಶ. ಅವನ ಮಗ ನಹುಶ, ಮುಂದೆ ಯಯಾತಿ. ಅವನ ಮಗ ನಾಭಾಗ. ಆತನ ಮಗ ಅಜ, ಅಜನ ಮಗನೇ ದಶರಥ, ದಶರಥನ ಮಕ್ಕಳೇ ರಾಮ-ಲಕ್ಷ್ಮಣರು. ಆದಿ ಬ್ರಹ್ಮನಿಂದ ಆರಂಭಿಸಿ ಇಲ್ಲಿಯವರೆಗೆ ವಿಶುದ್ಧವಾದ ವಂಶ, ಇದರ ರಾಜರು ಪರಮಧರ್ಮಾತ್ಮರು, ವೀರರೂ, ಪರಾಕ್ರಮಿಗಳೂ, ಸತ್ಯವಾದಿಗಳಾಗಿ ಸೂರ್ಯವಂಶದ ಕೀರ್ತಿಪತಾಕೆಯನ್ನು ಏರಿಸಿದ್ದಾರೆ. ಇಕ್ಷ್ವಾಕು ವಂಶಜರಾದ ಈ ಈರ್ವರು ಮಕ್ಕಳಿಗೆ ನಿಮ್ಮೀರ್ವರು ಮಕ್ಕಳನ್ನು ವರಿಸುವುದಾಗಿ ನಿಶ್ಚಯಿಸಿದ್ದೇವೆ ಎಂದು ವಸಿಷ್ಠರು ಕನ್ಯಾವರಣವನ್ನು ಮಾಡಿದರು.

ಈಗ ಜನಕನ ಸರದಿ. ಕೈಮುಗಿದ ಜನಕನು ತನ್ನ ವಂಶವನ್ನ ತಾನೇ ವಿವರಿಸಲಾರಂಭಿಸಿದ‌.
ಜೀವರಾಶಿಗಳಲ್ಲಿಯೇ ಶ್ರೇಷ್ಠನೆನಿಸಿದ ಧರ್ಮಾತ್ಮನಾದ ತ್ರಿಲೋಕ‌ ವಿಖ್ಯಾತ 'ನಿಮಿ'ಯಿಂದ
ತನ್ನ ವಂಶದ ಆರಂಭ. ಆತನ ಮಗನೇ ಮಿಥಿ, ಮಿಥಿಯಿಂದ ಮಿಥಿಲೆಯಾಯಿತು! ಮಿಥಿಯ ಮಗ ಜನಕ! ಪ್ರಥಮ ಜನಕ ಅವನು, ಮುಂದೆ ಉಧಾವಸು, ನಂದಿವರ್ಧನ, ಸುಕೇತ, ದೇವರಾತ, ಬೃಹದೃತ, ಮಹಾವೀರ, ಸುದೃತಿ, ದೃಷ್ಟಕೇತು, ಹರ್ಯಶ್ವ, ಮರು, ಪ್ರತೀಂಧ್ರಕ, ಕೀರ್ತಿರಥ, ದೇವಮೀಢ, ವಿಬುಧ, ಮಹೀಂದ್ರಕ, ಕೀರ್ತಿರಾತ, ಮಹಾರೋಮ, ಸ್ವರ್ಣರೋಮ. ಹೀಗೆ ವಿವಿಧ ನಾಮದ ಜನಕರು ಆಗಿಹೋದ ಬಳಿಕ ಮುಂದೆ ಬಂದವನು ಹೃಸ್ವರೋಮ ಜನಕ. ಆತನಿಗೆ ಇಬ್ಬರು ಮಕ್ಕಳು. ಅವರಲ್ಲಿ ಸೀರಧ್ವಜ ಜನಕನಾದ ನಾನು ದೊಡ್ಡವನು. ನನ್ನ ತಮ್ಮನೇ ವೀರನಾದ ಕುಶಧ್ವಜ ಜನಕ. (ಸಾಯುವಾಗ ತಂದೆಯು ರಾಜ್ಯವನ್ನು ಮಾತ್ರವಲ್ಲ, ತಮ್ಮನನ್ನೂ ಒಪ್ಪಿಸಿ ಹೋಗಿದ್ದಾನೆ. ಹಾಗಾಗಿ ತಮ್ಮನು ಮಗನಂತೆ ಸೀರಧ್ವಜ ಜನಕನಿಗೆ). ತಂದೆ ಸ್ವರ್ಗವನ್ನು ಸೇರಿದ ಬಳಿಕ ಧರ್ಮದಿಂದ ರಾಜ್ಯಭಾರ ಮಾಡಿದ ನಾನು ಕುಶಧ್ವಜನನ್ನು ದೂರಮಾಡದೇ ತುಂಬ ಪ್ರೀತಿಯಿಂದ ನೋಡಿದೆ ಎಂದನು.

ಸಾಹೋದರ್ಯ ರಾಮಾಯಣದ ಅದ್ಭುತ ತತ್ತ್ವಗಳಲ್ಲಿ ಒಂದು ~ #ಶ್ರೀಸೂಕ್ತಿ

ಸುಧನ್ವನೆಂಬ ಪರಾಕ್ರಮಿ ರಾಜನು ಯುದ್ಧಕ್ಕೆ ಬಂದು‌ ಸೋತು ಸಂಹರಿಸಲ್ಪಟ್ಟಾಗ ಸಾಂಕಾಷ್ಯ ನಗರವು ಅನಾಥವಾಗಿ, ತನ್ನ ತಮ್ಮನನ್ನು ಅಲ್ಲಿಗೆ ಪಟ್ಟಕಟ್ಟಿದೆನೆಂದು ವಿವರಿಸುತ್ತಾ, ನಾವಿಬ್ಬರೂ ಸೇರಿ ಇಬ್ಬರು ಮಕ್ಕಳಾದ ಸೀತೆ, ಊರ್ಮಿಳೆಯರನ್ನು ರಾಮ ಲಕ್ಷ್ಮಣ ರಿಗೆ ಪರಮಪ್ರೇಮದಿಂದ ಕೊಡುತ್ತೇವೆ ಎಂದು ತಾನಾಗಿ ಹೇಳಿದ ಜನಕ.

ವಾಗ್ದಾನವಾಯಿತು, ಇನ್ನುಳಿದಿದ್ದು ಕಾರ್ಯ ಮಾತ್ರ. ಕೂಡಲೇ ಮಕ್ಕಳ ಶ್ರೋಯೋಭಿವೃದ್ಧಿಗಾಗಿ ಗೋದಾನ ಮಾಡಲಾಯಿತು. ಉತ್ತರ ಫಾಲ್ಗುಣಿ ನಕ್ಷತ್ರದಲ್ಲಿ ವಿವಾಹವೆಂದು ನಿಶ್ಚಯಿಸಲಾಯಿತು.

ಮುಂದೆ ವಸಿಷ್ಠರ ಅಭಿಮತದಲ್ಲಿ‌ ವಿಶ್ವಾಮಿತ್ರರು ಹೊಸ ಪ್ರಸ್ತಾಪವೊಂದನ್ನು ಮುಂದಿಡುತ್ತಾರೆ. ಈ ಬಂಧವನ್ನು ಇನ್ನಷ್ಟು ದೃಢತಮ ಮಾಡಿದರೆ ಪ್ರಪಂಚಕ್ಕೇ ಒಳ್ಳೆಯದು. ನಿನ್ನ ತಮ್ಮನಿಗೆ ಎರಡು ಮಕ್ಕಳಿದ್ದಾರಲ್ಲ, ಒಬ್ಬಳು ಭರತನಿಗೆ, ಮತ್ತೊಬ್ಬಳನ್ನು ಶತ್ರುಘ್ನನಿಗೆ ನಾವು ಕೊಟ್ಟು ಮದುವೆಮಾಡಿಸೋಣ.! ನಾಲ್ಕು ಮಕ್ಕಳಿಗೂ ವಿವಾಹ ಮಾಡಿಬಿಡೋಣ, ಸಂಬಂಧವಿನ್ನೂ ದೃಢ!

ಜನಕ ಕೈಮುಗಿದ. ನನ್ನ ಕುಲವೇ ಧನ್ಯವೆಂದ!!
ಋಷಿಮುನಿಗಳು ಹೇಳುವಾಗ ದಿವ್ಯಪ್ರೇರಣೆಯಿಂದಲೇ ಹೇಳುತ್ತಾರೆ.
ಒಂದೇ ದಿನ ೪ ಮಕ್ಕಳಿಗೂ ವಿವಾಹ ನೆರವೇರಿಸುವುದು ನಿಶ್ಚಯವಾಯಿತು.
ಜನಕ ವಸಿಷ್ಠ-ವಿಶ್ವಾಮಿತ್ರರಿಗೆ ಶರಣು ಶರಣಾರ್ಥಿಗಳನ್ನು ಅರ್ಪಿಸಿದ.  ಇನ್ನು ಮುಂದೆ ಅಯೋಧ್ಯೆಯೂ ಮಿಥಿಲೆಯೂ ಬೇರೆಯಲ್ಲವೆಂದೂ ಜನಕನು ನುಡಿಯುತ್ತಾನೆ.

ದಶರಥನು ಆನಂದಪೂರ್ವಕವಾಗಿ ಮುಂದುವರೆಯುತ್ತಾನೆ. ಮರುದಿನ ಒಂದೊಂದು ಮಗನಿಗೆ ಒಂದೊಂದು ಲಕ್ಷದಂತೆ ಸ್ವರ್ಣಾಲಂಕೃತ ಸವತ್ಸ ಗೋದಾನವನ್ನು ಕಂಚಿನ ಹಾಲುಕರೆಯುವ ಪಾತ್ರೆಗಳೊಂದಿಗೆ ಮಾಡಿದ. ತುಂಬ ಸಂಪತ್ತನ್ನು ಬ್ರಾಹ್ಮಣರಿಗೆ ದಾನ ಮಾಡಿದ. ನಾಲ್ವರು ದಿಕ್ಪಾಲಕರನ್ನು ಒಡಗೂಡಿದ ಪ್ರಜಾಪತಿ ಬ್ರಹ್ಮನಂತೆ ಶೋಭಿಸಿದ.

ವಿಜಯವನ್ನು ತಂದುಕೊಡುವ ಮುಹೂರ್ತ ಬಂತು. ಜನಕನು ಲೋಕರಾಮನಾದ ರಾಮನ ವೈವಾಹಿಕ ಕ್ರಿಯೆಯನ್ನು ಶತಾನಂದರು, ವಿಶ್ವಾಮಿತ್ರರ ಜೊತೆಗೆ ನೀವೇ ನಡೆಸಿಕೊಡಬೇಕೆಂದು ವಸಿಷ್ಠರನ್ನು ಜನಕನು ಬಿನ್ನವಿಸಲು,  ವಸಿಷ್ಠರು ಮಂತ್ರಪೂರ್ವಕವಾಗಿ ಹವನ ನೆರವೇರಿಸಿ ಬಳಿಕ ಒಳ್ಳೆಯ ರೀತಿಯಲ್ಲಿ ವಿವಾಹ ನಡೆಸಿಕೊಟ್ಟರು.

ಧಾರೆ ಎರೆದು ಕೊಡುವಾಗ ಜನಕನ ವಚನ,
'ನನ್ನ ಮಗಳು ಇನ್ನುಮುಂದೆ ನಿನ್ನ ಸಹಧರ್ಮಚಾರಿಣಿ ಆಗುತ್ತಾಳೆ. ಸ್ವೀಕರಿಸು ಈಕೆಯನ್ನು, ನಿನಗೆ ಮಂಗಲವಾಗಲಿ, ಪಾಣಿಗ್ರಹಣ ಮಾಡು. ಈಕೆ ಇನ್ನುಮುಂದೆ ಪತಿವ್ರತೆಯಾಗಿರುತ್ತಾಳೆ, ನೆರಳಿನಂತೆ ನಿನ್ನನ್ನೇ ಹಿಂಬಾಲಿಸುತ್ತಾಳೆ.'

ಪತ್ನಿಯ ಭಾರವನ್ನು ಪತಿ ವಹಿಸುತ್ತಾನೆ, ಪತ್ನಿಯ ಸಾಧನೆ ಪತಿಯ ಹೊಣೆಗಾರಿಕೆ. ಸಾಧನಾಮಾರ್ಗದಲ್ಲಿಯೂ ಕೈಹಿಡಿದು ನಡೆಸುತ್ತಾನೆ ಪತಿ. ಪತ್ನಿಯ ಜೀವನ ಜವಾಬ್ದಾರಿಯನ್ನು ಪತಿಯು ತೆಗೆದುಕೊಳ್ಳಬೇಕು, ಜತೆಗೆ ಆಕೆಯ ಆಧ್ಯಾತ್ಮಿಕ ಹೊಣೆಗಾರಿಕೆಯನ್ನು ಕೂಡ..!  ~ #ಶ್ರೀಸೂಕ್ತಿ

ಜನಕ ಧಾರೆ ಎರೆದು ಕೊಟ್ಟ. ಆಗ ದೇವಲೋಕದಿಂದ 'ಸಾಧು ಸಾಧು' ದೊಡ್ಡದಾಗಿ ಕೇಳಿತು. ಈ ವಿವಾಹದಿಂದ ವಿಶ್ವಕಲ್ಯಾಣವಾಗಲಿಕ್ಕಿದೆ ಎಂದು ದೇವತೆಗಳು ಸಂತುಷ್ಟರಾದರು. ಸೀತಾರಾಮ ಕಲ್ಯಾಣವೆಂದರೆ ವಿಶ್ವಕಲ್ಯಾಣ! ದೇವದುಂದುಭಿ ಮೊಳಗಿತು, ದೊಡ್ಡ ಪುಷ್ಪವೃಷ್ಟಿಯಾಯಿತು. ಬಹುದೊಡ್ಡ ಗೋಷ್ಠಿ ಗಗನದಲ್ಲಿ!!
ಹರ್ಷಸಾಗರದಲ್ಲಿ ಜನಕ!

ಮುಂದೆ ಲಕ್ಷ್ಮಣ, ಭರತ, ಶತ್ರುಘ್ನರಿಂದ ಪತ್ನಿಯರ ಪಾಣಿಗ್ರಹಣ.

ಹೀಗೆ ಸೀತಾ-ರಾಮ ಕಲ್ಯಾಣ, ಊರ್ಮಿಳಾ-ಲಕ್ಷ್ಮಣ ಕಲ್ಯಾಣ, ಮಾಂಡವಿ-ಭರತ ಕಲ್ಯಾಣ,  ಶೃತಕೀರ್ತಿ-ಶತ್ರುಘ್ನ ಕಲ್ಯಾಣ ಸುಸೂತ್ರವಾಗಿ ನೆರವೇರಿತು.
ವಾಕ್ಯಗಳಿಂದ ಇಂದು ಸಂಪನ್ನಗೊಂಡಿದೆ.

ನಾಳೆ ಮೊದಲಿಗೆ ಸೀತಾರಾಮಕಲ್ಯಾಣವನ್ನು‌ ಕಣ್ಣಲ್ಲಿ‌ ಕಟ್ಟಿಕೊಳ್ಳಲು ಬನ್ನಿ. ನಮ್ಮ-ನಿಮ್ಮ ಹೃದಯ ಸಿಂಹಾಸನದಲ್ಲಿ ಸೀತಾರಾಮರು ನೆಲೆನಿಂತು ಪ್ರಪಂಚಕ್ಕೆಲ್ಲ ಒಳಿತನ್ನುಂಟುಮಾಡಲಿ.

#DhaaraRaamayan

No comments:

Post a Comment

Please leave your comments here.....