Dhaara Raamayana 18


#ಧಾರಾ_ರಾಮಾಯಣ - 07-07-2019 ದಿನ18
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ

ವಿಧಿಯ ಕುರಿತು ಒಂದು ಸುಭಾಷಿತ:

ವಿಧಿಯು ತಾನು ಮಾಡಬೇಕೆಂದುಕೊಂಡಿರುವುದನ್ನು ಮಾಡಿಯೇ ಮಾಡುತ್ತದೆ. ಅದೆಷ್ಟೇ ವಿಘ್ನಗಳಿರಲಿ, ನಮ್ಮ ಕಲ್ಪನೆಗೆ ಮೀರಿದ ವಾತಾವರಣ ಈಗ ಇರಲಿ, ವಿಧಿಗೆ ತಾನು ಏನು ಮಾಡಬೇಕೆಂದು ಅಂದುಕೊಂಡಿದೆಯೋ ಅದನ್ನು ಸಾಧಿಸಿಯೇ ಸಾಧಿಸುತ್ತದೆ. ಯಾರ ಮೂಲಕ ಮಾಡಬೇಕೆಂದಿದೆಯೋ ಆತ ಆ ಸ್ವರೂಪದಲ್ಲಿ ಇಲ್ಲದಿರಬಹುದು, ಆದರೆ ಕಾಲಬಂದಾಗ ಅದು ಆತನನ್ನು ಬದಲಿಸಬಲ್ಲದು, ಆ ಕಾರ್ಯ ಆಗಬೇಕಾದಲ್ಲಿಗೆ ತರಿಸಿಕೊಳ್ಳಬಹುದು! ತನ್ನ ಕಾರ್ಯವನ್ನು ವಿಧಿ ಸಾಧನೆಮಾಡದೇ ಬಿಡಲಾರದು.

ಜಗಕ್ಕೆ ಗಾಯತ್ರಿ,
ರಾಮನಿಗೆ ಅಸ್ತ್ರಗಳನ್ನು
ಸೀತಾ ಕಲ್ಯಾಣ ವನ್ನು ವಿಶ್ವಾಮಿತ್ರರು ಮಾಡಬೇಕು..

ಹುಟ್ಟಿದ್ದು ರಾಜನ ಮಗನಾಗಿ, ಕ್ಷತ್ರಿಯನಾಗಿ, ತಾನೊಬ್ಬ ಮಹರ್ಷಿಯಾಗ್ತೇನೆ ಎಂದು ಕಲ್ಪನೆಯೂ ಮಾಡಿರಲಿಲ್ಲ...
ವಿಶ್ವಾಮಿತ್ರರು ಹೇಗಿದ್ದರು, ಹೇಗಾದರು! ಅದು ಹೇಗೆ? ದೈವವು ಬಯಸಿತ್ತು, ವಿಧಿಯು ನಡೆಸಿತ್ತು!

ಬಹುಕಾಲ ಧರ್ಮಾತ್ಮನಾಗಿದ್ದ ಈ ವಿಶ್ವಾಮಿತ್ರರು,

ಬ್ರಹ್ಮನ ಮಾನಸ ಪುತ್ರ ಕುಶ - ಅವನ ಮಗ ಕುಶನಾಭ - ಅವನ ಮಗ ಗಾದಿ - ಅವನ ಮಗ ಗಾಧೇಯ ಇವರೇ ಕೌಶಿಕ ಅಂದರೆ ವಿಶ್ವಾಮಿತ್ರರು...

ಒಮ್ಮೆ ಕೌಶಿಕನು ಸೇನಾ ಸಮೇತವಾಗಿ ಜಗತ್ಪರ್ಯಟನೆ ಮಾಡ ಹೊರಟ... ಪ್ರಪಂಚವನ್ನೆಲ್ಲ ಸುತ್ತಿ ಹೋಗಿ ತಲುಪಿದ್ದು ವಸಿಷ್ಠಾಶ್ರಮಕ್ಕೆ... ವಿಧಿ ಅವನನ್ನು ಅಲ್ಲಿಗೆ ಕರೆದುಕೊಂಡು ಹೋಗಿತ್ತು...

ಸಿದ್ಧ ಚಾರಣರು, ದೇವ ಗಂಧರ್ವರು, ಕಿನ್ನರರು, ಬಗಬಗೆಯ ಮಹರ್ಷಿಗಳು‌..
ಮತ್ತೊಂದು ಬ್ರಹ್ಮಲೋಕದಂತಿದ್ದ ವಸಿಷ್ಠರ ಆಶ್ರಮಕ್ಕೆ ಬಂದ ಕೌಶಿಕನಿಗೆ ವಸಿಷ್ಠರು ಆಶ್ರಮ ಸಹಜ ಸತ್ಕಾರ ಮಾಡಿದರು... ಕುಶಲೋಪರಿ ನಡೆಯಿತು.. ಪರಸ್ಪರರ ಕುರಿತು ಪ್ರೀತಿ ಇಲ್ಲಿ ಕಾಣುತ್ತದೆ.

ಇನ್ನೇನು ವಿಶ್ವಾಮಿತ್ರರು ಹೊರಡುವಷ್ಟರಲ್ಲಿ, ವಸಿಷ್ಠರು ಹೇಳಿದರು, ನಿನಗೆ, ನಿನ್ನ ಸೇನೆಗೆ, ನಿನ್ನವರಿಗೆ ರಾಜಾತಿಥ್ಯ ಮಾಡಬೇಕು ಎಂಬ ಮನಸ್ಸು ನಮಗೆ...ಎಂದರು

ಇದೆಲ್ಲ ಏಕೆ, ಈಗಾಗಲೇ ಆತಿಥ್ಯವನ್ನು ಮಾಡಿದ್ದೀರಿ, ಪ್ರೀತಿ ತೋರಿಸಿದ್ದೀರಿ, ಎಲ್ಲಕ್ಕಿಂತ ಹೆಚ್ಚಾಗಿ ದರ್ಶನ ಕೊಟ್ಟಿದ್ದೀರಿ.. ನಿಮ್ಮ ಆಶೀರ್ವಾದ ಮಾತ್ರ ಸಾಕು ಎಂದರು ವಿಶ್ವಾಮಿತ್ರರು.
ವಸಿಷ್ಠರು ಒಪ್ಪದೆ, ಆತಿಥ್ಯವನ್ನು ಸ್ವೀಕರಿಸುವಂತೆ ಆಗ್ರಹಿಸಿದರು.

ನಿಮ್ಮ ಇಚ್ಛೆಯಂತೆ ಆಗಲಿ ಎಂದರಂತೆ ವಿಶ್ವಾಮಿತ್ರರು..

ಕೌಶಿಕನು ತನ್ನ ಪೂರ್ತಿ ಸೈನ್ಯವನ್ನು ಆಶ್ರಮಕ್ಕೆ ಕರೆ ತಂದ.. ಇತ್ತ ವಸಿಷ್ಠರು ಶಬಲೆ ಎಂಬ ಗೋವನ್ನು ಕರೆದರು...
ಯಾರು ಯಾರಿಗೆ ಏನು ಏನು ಇಷ್ಟವೋ ಎಂದು ತಿಳಿದು ಅಡುಗೆ ಸಿದ್ಧಪಡಿಸು, ಷಡ್ರಸದ ಮಳೆ ಸುರಿಸು ಎಂದರು ಶಬಲೆಗೆ..
ಏನಾಶ್ಚರ್ಯ, ಅಡುಗೆಗಳು ಸಿದ್ಧವಾಯಿತು.. ಕಂಡು ಕೇಳರಿಯದ, ಉಂಡರಿಯದ ಪದಾರ್ಥಗಳು ತಯಾರಾದವು. ಶಬಲೆ ಸಂಕಲ್ಪ ಮಾತ್ರದಿಂದ ಸಿದ್ಧಪಡಿಸಿದಳು....

ಸೈನ್ಯ ಸಹಿತ ವಿಶ್ವಾಮಿತ್ರರಿಗೆ ಇಲ್ಲಿಯ ವರೆಗೆ ಕಾಣದ ರಾಜಾತಿಥ್ಯ ಲಭಿಸಿತು!

ಒಡಕುಗಳುಂಟಾಗುವುದೆಲ್ಲಿ ಎಂದರೆ - ಸಲ್ಲದ ಆಸೆಯಿಂದ!

ಉಂಡು ತೇಗಿದ ವಿಶ್ವಾಮಿತ್ರರಿಗೆ ಆ ಗೋವು ಬೇಕು ಎನಿಸಿತು

ಯಾವುದೇ ಪರರ ಸ್ವತ್ತನ್ನು ನಾವು ಬಯಸಬಾರದು - ಶ್ರೀಸೂಕ್ತಿ

ಒಂದು ಲಕ್ಷ ಗೋವುಗಳನ್ನು ಕೊಡ್ತೇನೆ, ಆ ಗೋವನ್ನು ಕೊಡಿ.... ಎಂದು ವ್ಯಾಪಾರಕ್ಕಿಳಿದ ಕೌಶಿಕ...

ವಸಿಷ್ಠರು ಉತ್ತರಿಸಿದರು, ಲಕ್ಷ ಅಲ್ಲ ಕೋಟಿ ಕೊಟ್ಟರೂ ಈ ಗೋವನ್ನು ಕೊಡೆ...

ಮುಂದೆ ದರವನ್ನು ಏರಿಸಿದಂತೆ ಏರಿಸಿದ ವಿಶ್ವಾಮಿತ್ರ! ಬಗೆಬಗೆಯ ಸುವಸ್ತುಗಳನ್ನು ಬದಲಿಗೆ ಕೊಡುವೆನೆಂದ..

ಶಬಲೆ ನನ್ನ ತಪಸ್ಸು, ನನ್ನ ಆತಿಥ್ಯ ಆಕೆ... ಆಕೆ ನನ್ನ ಸರ್ವಸ್ವ... ಅವಳನ್ನು ಬಿಟ್ಟು ನಾನಿಲ್ಲ.. ಕಾಮಧೇನುವನ್ನು ಕೊಡಲಾರೆ ಎಂದ ಗಟ್ಟಿಯಾಗಿ ಹೇಳಿದರು ವಸಿಷ್ಠರು.

ಆಗ ವಿಶ್ವಾಮಿತ್ರನು ರಾಜಭಟರ ಮೂಲಕ ಗೋವನ್ನು ಒತ್ತಾಯಪೂರ್ವಕವಾಗಿ ಸೆಳೆದ...

ಬಲ ಇರುವುದು ರಕ್ಷಣೆಗೇ ಹೊರತು ಭಕ್ಷಣೆಗಲ್ಲ.. - ಶ್ರೀಸೂಕ್ತಿ

ಸೆಳೆದಾಗ, ಶಬಲೆ ರೋಧಿಸಿದಳು, ಚಿಂತಿಸಿದಳು... ಯಾಕೆ ಚಿಂತಿಸದಳು ಅಂದರೆ, ವಸಿಷ್ಠರು ಯಾಕೆ ನನ್ನ ತ್ಯಜಿಸಿದರು, ಧರ್ಮ ಬಿಟ್ಟವರಲ್ಲದ ವಸಿಷ್ಠರು ಧರ್ಮಧೇನುವನ್ನು ಯಾಕೆ ಬಿಟ್ಟರು...

ಇಂದಿನ ಪರಿಸ್ಥಿತಿಯೂ ಇದಕ್ಕೆ ಚೂರುಪಾರು ಹೊಂದಿಕೆಯಾಗುವಂತಿದೆ; ಗೋವಿನ ಯಾವ ತಪ್ಪೂ ಇಲ್ಲ, ಗೋವನ್ನು ನಾವು ಕಟುಕರಿಗೇ ಬಿಟ್ಟುಕೊಡ್ತೇವೆ...

ಶಬಲೆ ಅಬಲೆಯಲ್ಲ; ಸಬಲೆ! ಸಬಲೆಯಾದ ಶಬಲೆ ತನ್ನನ್ನು ಸುತ್ತಿದ್ದ, ಸೆಳೆಯುತ್ತಿದ್ದ ನೂರಾರು ರಾಜಭಟರನ್ನು ಧ್ವಂಸ ಮಾಡಿದಳು, ವಸಿಷ್ಠರ ಕಾಲಿಗೆ ವಾಯುವೇಗದಲ್ಲಿ ಎರಗಿ ಪ್ರಶ್ನಿಸಿದಳು, ಯಾಕೆ ನನ್ನನ್ನು ತ್ಯಜಿಸಿದಿರಿ?

ನಿನ್ನನ್ನು ಅವನು ಸೆಳೆದೊಯ್ಯುತ್ತಿರುವುದು ನನಗೆ ಇಷ್ಟವಿಲ್ಲ, ಅದು ನನಗೆ ಕಷ್ಟ... ಅದು ನನ್ನ ಆಯ್ಕೆ ಅಲ್ಲ, ನಾನುಬಡ ಬ್ರಾಹ್ಮಣ, ಅವನು ಕ್ಷತ್ರಿಯ, ದೊರೆ, ಅಸ್ತ್ರಗಳನ್ನು ಹೊಂದಿದವನು.. ನಾನು ಅವನನ್ನು ಹೇಗೆ ಎದುರಿಸಲಿ?

ಶಬಲೆ ಹೇಳ್ತಾಳೆ, ಕ್ಷಾತ್ರ ಬಲ ಬಲವಲ್ಲ, ಬ್ರಹ್ಮಬಲವೇ ಬಲ... ನಿಮ್ಮ ಬ್ರಹ್ಮಬಲವನ್ನು ನನ್ನಲ್ಲಿ ಇರಿಸಿ, ಅಪ್ಪಣೆ ಕೊಡಿ, ನಾನು ಅವನ ಸೊಕ್ಕನ್ನು ಇಳಿಸುತ್ತೇನೆ...

ವಸಿಷ್ಠರು ಅಪ್ಪಣೆ ಇತ್ತರು, ಶಬಲೆ ಹುಂಬಾರವವನ್ನು ಹಾಕಿದಳು... ಆ ಹುಂಬಕಾರಕ್ಕೆ ಕೋಟ್ಯಂತರ ಪಪ್ಲವರೆಂಬ ವೀರಭಟರು ಸಷ್ಟಿಯಾದರು... ಅವರು ಹುಟ್ಟುತ್ತಲೇ ನೇರವಾಗಿ ವಿಶ್ವಾಮಿತ್ರರ ಸೈನ್ಯದ ಮೇಲೆ ದಾಳಿ ಮಾಡುತ್ತಾರೆ... ಆಗ ವಿಶ್ವಾಮಿತ್ರರು ಅಸ್ತ್ರಗಳನ್ನು ಪ್ರಯೋಗಿಸುತ್ತಾರೆ..

ಆಗ ಶಬಲೆ ಶಕ, ಯವನರನ್ನು ಸೃಷ್ಟಿಸುತ್ತಾಳೆ... ಅವರೆಲ್ಲ ಸೇರಿ ವಿಶ್ವಾಮಿತ್ರರ ಸೈನ್ಯದ ಮೇಲೆ ದಾಳಿ ಮಾಡ್ತಾರೆ... ಅವರುಗಳ ಮೇಲೂ ವಿಶ್ವಾಮಿತ್ರರು ಅಸ್ತ್ರ ಪ್ರಯೋಗ ಮಾಡ್ತಾರೆ..

ಯುದ್ಧಕ್ಕಿಳಿದ ಮೇಲೆ ಹಿಂದಿರುಗಿ ನೋಡುವ ಪ್ರಶ್ನೆಯೇ ಇಲ್ಲ ಎಂಬಂತೆ, ಆಗ ವಸಿಷ್ಠರು ಮತ್ತೊಮ್ಮೆ ಸೃಜಿಸು ಎಂದು ಹೇಳುತ್ತಾರೆ.. ಆಗ ಶಬಲೆ ಕಾಂಬೋಜರು, ಕಿರಾತಕರು, ಶಕರು, ಯವನರನ್ನು ಸೃಜಿಸಿದಳು..

ಈ ಎಲ್ಲರೂ ಸೇರಿ, ವಿಶ್ವಾಮಿತ್ರನ ಮೇಲೆ ದಾಳಿ ಮಾಡಿದಾಗ, ಅವನ ಆ ಬೃಹತ್ ಸೈನ್ಯ ಇಲ್ಲವಾಗಿಹೋಯಿತು

ಇದರಿಂದ ಕುಪಿತರಾದ ವಿಶ್ವಾಮಿತ್ರನ ಮಕ್ಕಳು ವಸಿಷ್ಠರ ಮೇಲೆ ಕೋಪವನ್ನು ತೋರಿಸುತ್ತಾರೆ... ಆಗ ವಸಿಷ್ಠರು ಕೇವಲ ಹುಂಕಾರವನ್ನು ಮಾಡಿದರು... ವಿಶ್ವಾಮಿತ್ರರ ಮಕ್ಕಳೆಲ್ಲ ಸುಟ್ಟುಬೂಧಿಯಾದರು...!

ಹಲ್ಲುಕಿತ್ತ ಹಾವಿನ ಹಾಗೆ ಆದ ವಿಶ್ವಾಮಿತ್ರ, ಗ್ರಹಣಕ್ಕೊಳಗಾದ ಸೂರ್ಯನ ಹಾಗೆ ನಿಸ್ತೇಜನಾದ.. ಇಂತಹ ಪ್ರತಿಕ್ರಿಯೆ ಬರಬಹುದೆಂದು ಊಹಿಸಿರಲಿಲ್ಲ... ಸೈನ್ಯವನ್ನು, ಮಕ್ಕಳನ್ನು ಕಳೆದುಕೊಂಡ ದೈನ್ಯನಾಗಿದ್ದಾನೆ... ಗರ್ವಭಂಗವಾಗಿದೆ...

ಉಳಿದ ಮಕ್ಕಳ ಪೈಕಿಯಲ್ಲಿ ಒಬ್ಬನನ್ನು ಕರೆದು, ರಾಜ್ಯಭಾರವನ್ನು ಮಾಡುವಂತೆ ಹೇಳಿದ... ತಾನು ಹೊರಟೇಹೋದ! ಎಲ್ಲಿಗೆ?
ಹೆಂಡತಿಯೊಂದಿಗೆ ಕಾಡಿಗೆ ಹೋಗಿ, ಶಿವನ ಕುರಿತು ದೀರ್ಘವಾದ ತಪಸ್ಸಿಗೆ ಕುಳಿತ....

ಶಿವ ಪ್ರತ್ಯಕ್ಷವಾಗಿ ಏನು ಬೇಕು ಎಂದು ಕೇಳಿದಾಗ, ವಿಶ್ವಾಮಿತ್ರನು "ಧನುರ್ವೇದ ನನಗೆ ಸ್ಪುರಿಸಲಿ, ಪ್ರಪಂಚದ ಎಲ್ಲ ಬಗೆಯ ಅಸ್ತ್ರಗಳು ನನಗೆ ಸಿಗಲಿ.." ಎಂಬ ವರವನ್ನು ಕೇಳಿದ.

ಶಿವ ಒಂದು ಚೂರೂ ವಿಚಾರ ಮಾಡದೇ, ತಗೋ ಎಂದು ಕೊಟ್ಟ...! ಬಹುಶಃ ಮುಂದೆ ಅದು ರಾಮನಿಗೆ ಪಾರದಾನವಾಗಬೇಕಿದೆ ಎಂಬ ಸಂಕಲ್ಪವಿರಬಹುದೇ?

ವಸಿಷ್ಠರ ಎದುರು ಹೋಗಿದ್ದ ದರ್ಪ, ಈಗ ಮತ್ತೆ ಬಂತು...

ನೇರವಾಗಿ ವಸಿಷ್ಠರ ಆಶ್ರಮಕ್ಕೆ ಹೋಗಿ, ಅಸ್ತ್ರಗಳನ್ನು ಪ್ರಯೋಗ ಮಾಡಿದ... ವಸಿಷ್ಠರ ಆಶ್ರಮ ಸುಟ್ಟು ಉರಿದು ಹೋಯಿತು...

ಅಲ್ಲಿದ್ದ ಋಷಿಗಳು, ವಸಿಷ್ಠರ ಶಿಷ್ಯರು ಜೀವಭಯದಿಂದ ಓಡಿದರು‌.‌..

ರೋಷ ತುಂಬಿ ವಸಿಷ್ಠರು ವಿಶ್ವಾಮಿತ್ರರಿಗೆ ಹೇಳಿದರು, ಎಷ್ಟು ಕಾಲದಿಂದ ಈ ಆಶ್ರಮವನ್ನು ಬೆಳೆಸಿದ್ದೆ, ಒಂದು ಕ್ಷಣದಲ್ಲಿ ನಾಶ ಮಾಡಿದೆಯಾ, ದುರಾಚಾರಿ ನೀನು... ನೀನು ಉಳಿಯಲಾರೆ...ಎಂದರು! ಅಂದರೆ ಶಾಪವೇ ಅದು? ಸೂಕ್ಷ್ಮವಾಗಿ ನೋಡಿದರೆ ಅದರ ಅರ್ಥ ಏನು ಅಂದರೆ, ಅವನು ಅವನಾಗಿ ಉಳಿಯುವುದಿಲ್ಲ, ಮುಂದೆ ಕ್ಷಾತ್ರತ್ವ ಇರುವುದಿಲ್ಲ... ಮರುಜನ್ಮ ಪಡೆದಂತೆ ಈಗಿನ ತನ್ನತನವನ್ನೆಲ್ಲ ಕಳೆದು ಹೊಸತನವನ್ನು ಪಡೆಯಲಿದ್ದಾನೆ!

ವಸಿಷ್ಠರು ಬ್ರಹ್ಮದಂಡ ಹಿಡಿದು ನಿಂತರು‌‌‌... ವಿಶ್ವಾಮಿತ್ರನು ಆಗ್ನೇಯಾಸ್ತ್ರವನ್ನು ಪ್ರಯೋಗ ಮಾಡಿದ... ಎಲ್ಲಿ ಬ್ರಹ್ಮಬಲ ನನ್ನದು, ಎಲ್ಲಿ ಕ್ಷಾತ್ರಬಲ ನಿನ್ನದು ಎಂದರು ವಸಿಷ್ಠರು...

ವಿಶ್ವಾಮಿತ್ರನ ಆಗ್ನೇಯಾಸ್ತ್ರ ವಸಿಷ್ಠರ ಬ್ರಹ್ಮದಂಡದಲ್ಲಿ ಬಂದು ನಿಂತಿತು...

ಎಲ್ಲ ಬಗೆಯ ಅಸ್ತ್ರಗಳನ್ನು ವಿಶ್ವಾಮಿತ್ರರು ವಸಿಷ್ಠರ ಮೇಲೆ ಪ್ರಯೋಗಿಸಿದ... ಆ ಎಲ್ಲ ಅಸ್ತ್ರಗಳನ್ನು ತಮ್ಮ ಬ್ರಹ್ಮದಂಡದಿಂದ ವಸಿಷ್ಠರು ನುಂಗಿ ಜೀರ್ಣ ಮಾಡಿಕೊಂಡರು...

ಕೊನೆಯಲ್ಲಿ ಬ್ರಹ್ಮಾಸ್ತ್ರ ಪ್ರಯೋಗ ವಸಿಷ್ಠರ ಮೇಲೆ... ಬ್ರಹ್ಮರ್ಶಿಯ ಮೇಲೆ ಬ್ರಹ್ಮದಂಡ ಪ್ರಯೋಗ ಆದರೆ ಈ ಸೃಷ್ಟಿ ಏನಾದೀತು ಎಂದು ದೇವದೇವತೆಗಳು, ಗಂಧರ್ವರು, ಎಲ್ಲಾ ಜೀವಿಗಳೂ ಭಯಗೊಂಡರು...

ಆ ಬ್ರಹ್ಮಾಸ್ತ್ರವನ್ನೂ ಕೂಡ ತಮ್ಮ ಬ್ರಹ್ಮಬಲದಿಂದ‌‌ ನುಂಗಿ ಜೀರ್ಣಿಸಿಕೊಂಡರು.. ರೌದ್ರರೂಪವನ್ನು ತಾಳಿದರು.. ವಸಿಷ್ಠರ ರೂಪ ಹೇಗಿತ್ತೆಂದರೆ ಬೆಂಕಿ,ಹೊಗೆಯನ್ನು ಉಗುಳುವಂತಿತ್ತು..! ಆ ಬ್ರಹ್ಮಾಗ್ನಿ ಇದೆ ಒಳಗೆ..
ಬ್ರಹ್ಮದಂಡ ಯಮದಂಡದಂತೆ ಪ್ರಜ್ವಲಿಸಿತು‌..

ಪ್ರಪಂಚ ಉಳಿಯಲಿ, ಶಾಂತಿಯನ್ನು ಹೊಂದಿ, ನಿಮ್ಮ ಬ್ರಹ್ಮ ತೇಜಸ್ಸನ್ನು ಹೊರಹಾಕದಿರಿ..ಎಂದು ದೇವತೆಗಳು ಬೇಡಿಕೊಂಡಾಗ ವಸಿಷ್ಠರು ಶಾಂತರಾದರು, ವಿಶ್ವಾಮಿತ್ರನು ಅಶಾಂತನಾದ... ಆಗ ಅವನಿಗೆ ಅರಿವಾಯಿತು ಬಾಹುಬಲ ಬಲವಲ್ಲ, ಬ್ರಹ್ಮಬಲ - ಭಾವಬಲವೇ ಬಲ!

ಮಿದುಳು ಹೇಳಿದಾಗ ತೋಳು ಕೇಳಿಕೊಂಡು ಇರಬೇಕು.. ಬ್ರಹ್ಮಬಲಕ್ಕಿಂತ ಮಿಗಿಲಾದುದು ಯಾವುದು ಇಲ್ಲ ಎಂಬುದು ತಿಳಿಯಿತು...
ಈಗ ವಿಶ್ವಾಮಿತ್ರನಿಗೆ, ಆ ಬ್ರಹ್ಮಬಲ ಬೇಕು ಎಂದು ಅನಿಸಿತಂತೆ....

ತಪಸ್ಸು ಮಾಡುತ್ತೇನೆ, ಬ್ರಹ್ಮತ್ವಕಾರಕವಾದ ತಪಸ್ಸು ಮಾಡುತ್ತೇನೆ, ನಾನೂ ಬ್ರಾಹ್ಮಣ ಆಗುತ್ತೇನೆ, ನಾನೂ ಸಾಧನೆ ಮಾಡುತ್ತೇನೆ, ನಾನೂ ವಸಿಷ್ಠರಂತಾಗುತ್ತೇನೆ... ಇಂತಹ ಈರ್ಷ್ಯೆ ಒಳ್ಳೆಯದು...

ಮತ್ತೆ ಕಾಡು ಸೇರಿದ ಕೌಶಿಕ, ಆ ಸೋಲು ಬಹಳ ಪೆಟ್ಟುಕೊಟ್ಟಿದೆ..

ಹೆಂಡತಿಯೊಡನೆ ದಕ್ಷಿಣದ ಕಡೆಗೆ ಹೋಗಿ, ಸಹಸ್ರ ವರ್ಷಗಳ ತಪಸ್ಸಿನ ನಂತರ‌‌‌... ಬ್ರಹ್ಮ ಪ್ರತ್ಯಕ್ಷನಾಗಿ... "ನೀನು ಈಗ ರಾಜರ್ಷಿ" ಎಂದು ಹೇಳಿ ಹೊರಟುಹೋದ.... ಬ್ರಹ್ಮರ್ಷಿ ಆಗಬೇಕೆಂದಿದ್ದವನಿಗೆ ಇದನ್ನು ಕೇಳಿ ಲಜ್ಜೆಯಾಯಿತು..

ಆ ಕಾಲದಲ್ಲಿ ಅಯೋಧ್ಯೆಯನ್ನು ತ್ರಿಶಂಕು(ಸತ್ಯವ್ರತ) ಆಳುತ್ತಿದ್ದ.. ಸಾಯದೇ, ಸಶರೀರನಾಗಿ ಸ್ವರ್ಗಕ್ಕೆ ಹೋಗಬೇಕು ಎಂಬ ವಿಚಿತ್ರ ಅಪೇಕ್ಷೆ ಅವನಿಗಾಯಿತು... ಅವನು ಕುಲಗುರುಗಳಾದ ವಸಿಷ್ಠರ ಬಳಿ ಹೋಗಿ ಈ ಕುರಿತು ಯಜ್ಞವನ್ನು ಮಾಡಿ ಕೊಡಿ ಎಂದು ಕೇಳಿದ... ಗುರು ವಸಿಷ್ಠರು ಆಗುವುದಿಲ್ಲ ಎಂದರು...

ವಸಿಷ್ಠರ ಮಕ್ಕಳು ವಾಸಿಷ್ಠರ ಬಳಿ ಹೋಗಿ ಇದೇ ಬೇಡಿಕೆ ಇಟ್ಟರು, ವಾಸಿಷ್ಠರೂ ಒಪ್ಪದಿದ್ದಾಗ, ಕೋಪಗೊಂಡ ತ್ರಿಶಂಕು, ನಿಮ್ಮನ್ನ ಬಿಟ್ಟು ಬೇರೆಯವರ ಬಳಿ ಹೋಗುತ್ತೇನೆ ಎಂದ...

ಇದರಿಂದ ಕೋಪಗೊಂಡ ವಾಸಿಷ್ಠರು, ಹೋಗು ಚಾಂಡಾಲ ಎಂದು ಶಪಿಸಿದರು‌...

ಇದರಿಂದ ಮರುದಿನ ಬೆಳಿಗ್ಗೆ ಏಳುವುದರೊಳಗೆ ಇವನಿಗೆ ಚಾಂಡಾಲತ್ವ ಬಂದುಬಿಟ್ಟಿತ್ತು... ಅವನ ಮಂತ್ರಿಗಳು, ಸೈನ್ಯ ಎಲ್ಲರೂ ಇವನನ್ನು ಬಿಟ್ಟು ಹೋದರು, ಇವನು ಒಬ್ಬಂಟಿಯಾದ...

ಇವನು ಕೌಶಿಕನಲ್ಲಿಗೆ ಹೋಗಿ, ನಡೆದ ಘಟನೆಯನ್ನು ಹೇಳಿದ... ವಸಿಷ್ಠರು ಬೇಡ ಅಂದರಾ, ಹಾಗಿದ್ರೆ ನಾನು ಮಾಡಿಕೊಡುವೆ ಎಂದರಂತೆ!

ಮಕ್ಕಳನ್ನು‌ ಕರೆದು ಯಜ್ಞಕ್ಕೆ ತಯಾರಿ ಮಾಡಲು ಹೇಳಿದರು... ಶಿಷ್ಯರನ್ನು ಕರೆದು ಎಲ್ಲ ಬ್ರಾಹ್ಮಣರನ್ನು ಋಷಿಗಳನ್ನು ಆಹ್ವಾನಿಸುವಂತೆ ಹೇಳಿ, ತನ್ನ ಬಗ್ಗೆ ಏನು ಹೇಳಿದರೆಂದು ತನಗೆ ಹೇಳಬೇಕು ಎಂದರು....

ವಾಸಿಷ್ಠರು ಈ ಯಜ್ಞವು ಹೇಗೆ ಫಲಿಸಲು ಸಾಧ್ಯ ಎಂಬ ಮಾತುಗಳನ್ನು ಆಡುತ್ತಾರೆ, ಇದನ್ನು ಕೇಳಿದ ಕೌಶಿಕ ಶಾಪ ಕೊಟ್ಟನಂತೆ...ಶ್ವಾನಮಾಂಸವನ್ನು ತಿನ್ನುವ ಜನ್ಮವೀ ಅವರಿಗೆ ಬರಲಿ ಎಂಬುದಾಗಿ! ತನ್ನ ವಿರುದ್ಧ ಹೇಳಿದ್ದ ಮಹೋದಯ ಎಂಬುವವನಿಗೂ ಶಾಪ ಕೊಟ್ಟನಂತೆ...

ಯಾಗ ಶುರುವಾಯಿತು, ಕೌಶಿಕ ಹೇಳಿದಂತೆ ಎಲ್ಲ ಬ್ರಾಹ್ಮಣರು ಕೇಳಿದರಂತೆ....
ಹರ್ವಿಭಾವ ಸ್ವೀಕರಿಸುವುದಕ್ಕೆ ದೇವತೆಗಳನ್ನು ಕರೆದಾಗ, ಯಾವೊಬ್ಬ ದೇವತೆಯೂ ಬರಲೇ ಇಲ್ಲ..

ಇದರಿಂದ ಕೋಪಗೊಂಡ ಕೌಶಿಕ, ತನ್ನ ತಪಸ್ಸಿನ ಬಲದಿಂದಲೇ ನಿನ್ನನ್ನು ಸ್ವರ್ಗಕ್ಕೆ ಏರಿಸುವೆ ಎಂದು ತ್ರಿಶಂಕುವಿಗೆ ಹೇಳಿದ.. ಹೇಳಿದ ಮಾತ್ರಕ್ಕೆ ತ್ರಿಶಂಕು ಸ್ವರ್ಗಕ್ಕೇರಿದ! ಆದರೆ... ಇಂದ್ರಾದಿ ದೇವತೆಗಳು ತ್ರಿಶಂಕು ಸ್ವರ್ಗಕ್ಕೆ ಬರುವುದನ್ನು ಒಪ್ಪಲಿಲ್ಲ, ಗುರುಶಾಪಗ್ರಸ್ತ ನೀನು, ಇಂಥವರು ಸ್ವರ್ಗಕ್ಕೆ ಬಂದಿಲ್ಲ, ಇರಲಿಲ್ಲ.. ನೀನು ಇರಲು ಸಾಧ್ಯವಿಲ್ಲ, ತಲೆಕೆಳಗಾಗಿ ಬೀಳು ಭೂಮಿಗೆ ಎಂದು ನೂಕಿದರು.. ..ಅವನು ಕೆಳಗೆ ಬೀಳತೊಡಗಿದ... ಬೀಳ್ತಾ ಬೀಳ್ತಾ ತ್ರಿಶಂಕು ವಿಶ್ವಾಮಿತ್ರರನ್ನು ಕೂಗಿ ಕರೆದ, ಕೌಶಿಕ ಹೇಳಿದ 'ತಿಷ್ಟ ತಿಷ್ಟ' ಎಂದರು... ಅವನು ಅಲ್ಲೇ ಇದ್ದುಬಿಟ್ಟ... ಅತ್ತ ಭೂಮಿಯಲ್ಲೂ ಅಲ್ಲ  ಇತ್ತ ಸ್ವರ್ಗದಲ್ಲೂ ಇಲ್ಲ..ಅದೂ ಕೂಡ ತಲೆಕೆಳಗಾಗಿ...!

ಆಗ ಕೌಶಿಕ ಹೇಳಿದ, ನಿನಗೆ ಸ್ವರ್ಗಕ್ಕೆ ಇಂದ್ರ ಬಿಡಲಿಲ್ವಾ, ಲೋಕಕ್ಕೆ ಇಂದ್ರನೇ ಇಲ್ಲದಂತೆ ಮಾಡುವೆ, ಅಥವಾ ಇನ್ನೊಬ್ಬ ಇಂದ್ರನನ್ನು ಸೃಷ್ಟಿಸುತ್ತೇನೆ ಎಂದರಂತೆ!

ಸೃಷ್ಟಿಸಲು ಶುರುಮಾಡಿದನಂತೆ... ಗ್ರಹಗಳನ್ನು, ನಕ್ಷತ್ರ ಮಂಡಲಗಳನ್ನು ಸೃಷ್ಟಿಸಿದನಂತೆ, ಮುಂದೆ ಇಂದ್ರಾದಿ ದೇವತೆಗಳನ್ನು ಸೃಷ್ಟಿಸಲು ಮುಂದಾದ.. ಆಗ ದೇವತೆಗಳು ಓಡಿಬಂದು ಕೇಳಿದರಂತೆ, ಗುರುಶಾಪ ಸಹಿತನಾದ ಈ ದೊರೆ ಸಶರೀರನಾಗಿ ಸ್ವರ್ಗಕ್ಕೆ ಹೋಗಲು ಸಾಧ್ಯವಿಲ್ಲ, ಇದನ್ನು ಬಿಟ್ಟು ಬೇರೆ ಏನು ಬೇಕಾದರೂ ಕೇಳು..

ಆಗ ಒಪ್ಪಿದ ಕೌಶಿಕ ಹೇಳಿದನಂತೆ, ತ್ರಿಶಂಕು ಇರುವಲ್ಲಿಯೇ ಒಂದು ಸ್ವರ್ಗ ಸೃಷ್ಟಿಯಾಗಲಿ, ತಾನು ಸೃಷ್ಟಿಸಿದ ಗ್ರಹ, ನಕ್ಷತ್ರಗಳು ಅವನ ಹಿಂದೆ ಸುತ್ತಲಿ.. ಎಂದನಂತೆ

ಅಷ್ಟೊತ್ತಿಗೆ, ತಾನು ಬ್ರಹ್ಮರ್ಷಿ ಆಗಬೇಕೆಂದು ಮಾಡಿದ್ದ ತಪಸ್ಸೆಲ್ಲ ಖರ್ಚಾಗಿತ್ತು...  ಆಗ ಈ ದಿಕ್ಕೇ ಬೇಡ ಎಂದು ದಕ್ಷಿಣ ದಿಕ್ಕನ್ನು ಬಿಟ್ಟು, ಪಶ್ಚಿಮ ದಿಕ್ಕಿಗೆ ಹೋದ..

ಅಯೋಧ್ಯೆಯಲ್ಲಿ ಅಂಬರೀಶ ಆಳುತ್ತಿದ್ದ, ಅಂಬರೀಶ ಮಾಡುತ್ತಿದ್ದ ಯಜ್ಞದಲ್ಲಿ ಯಜ್ಞಪಶುವನ್ನು ಇಂದ್ರ ಅಪಹರಿಸಿದನಂತೆ... ಈಗ ಪರ್ಯಾಯ ಯಜ್ಞಪಶುಗಾಗಿ ಹುಡುಕಿಕೊಂಡು ಹೊರಟ‌.. ಅಂಬರೀಶನು ನ್ಯಾಯಯುತವಾಗಿ ಮೌಲ್ಯ ಕೊಟ್ಟು ಖರೀದಿ ಮಾಡಿದುದರಿಂದ ಅನಿವಾರ್ಯವಾಗಿ ವಿಶ್ವಾಮಿತ್ರರ ಸೋದರಳಿಯನು ಯಜ್ಞಪಶುವಾಗಬೇಕಾಯಿತು!

ಮಾರ್ಗಮಧ್ಯದಲ್ಲಿ ಆತ ಹೇಗಾದರೂ ಜೀವ ಉಳಿಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ಹೋಗಿ ಮಾವನ ಮಡಿಲಿಗೆ ಬಿದ್ದ, ಅಪ್ಪ-ಅಮ್ಮ ಬಿಟ್ಟುಕೊಟ್ಟಿದ್ದಾರೆ, ನನ್ನನ್ನು ಉಳಿಸು, ದೊರೆಯ ಯಜ್ಞಕ್ಕೆ ತೊಂದರೆ ಆಗಬಾರದು, ನನಗೆ ದೀರ್ಘಾಯಸ್ಸು ಪ್ರಾಪ್ತಿಯಾಗಬೇಕು....

ಆಗ ಕೌಶಿಕ ತನ್ನ ಮಕ್ಕಳನ್ನು ಕರೆದು, ಇವನನ್ನು ಯಜ್ಞಕ್ಕೆ ಕಳಿಸುವುದಿಲ್ಲ ಎಂದು ಹೇಳಿದ್ದೇನೆ, ನೀವು ಯಜ್ಞಪಶುವಾಗಿ ಹೋಗಿ...

ಕೌಶಿಕನ ಮಕ್ಕಳು ತಂದೆಗೆ ಅಗೌರವದ ಮಾತುಗಳನ್ನು ಆಡಿದರು, ವಾಸಿಷ್ಠರಿಗೆ ಕೊಟ್ಟ ಶಾಪವನ್ನೇ ಕೌಶಿಕ ತನ್ನ ಮಕ್ಕಳಿಗೂ ಕೊಟ್ಟನಂತೆ!

ಕೌಶಿಕ ಘೋರ ತಪಸ್ಸನ್ನು ಮುಂದುವರೆಸಿದ, ಮತ್ತೆ ವಿಘ್ನ ಬಂತು.. ಮೇನಕೆ ಬಂದಳು...
ಕೌಶಿಕನೇ ಸ್ವತಃ ಮೇನಕೆಯನ್ನು ಆಶ್ರಮಕ್ಕೆ ಸ್ವಾಗತಿಸಿದ... ಹಾಗೆ ಆಕೆ.ಬಂದು ಹತ್ತು ವರ್ಷ ಆಗಿಹೋಗಿದೆ..

ಗೊತ್ತಿರಲಿಲ್ಲ ವಿಶ್ವಾಮಿತ್ರರಿಗೆ! ಹತ್ತು ವರ್ಷ ಸಂದಿತೆಂದು ಗೊತ್ತಾದಾಗ ಮೇನಕೆಯನ್ನು ಕಳಿಸಿಕೊಟ್ಟ..

ಪಶ್ಚಿಮ ದಿಕ್ಕನ್ನು ಬಿಟ್ಟು ಉತ್ತರ ದಿಕ್ಕಿಗೆ ಹೋದ.. ಅಲ್ಲಿ ಕೌಶಿಕಿ ಇದ್ದಾಳೆ, ನದಿಯ ರೂಪದಲ್ಲಿ, ತನ್ನಕ್ಕ ಅವಳು! ಆ.ನದಿಯ ನೀರನ್ನು ಕುಡಿದು ತಪಸ್ಸು ಮಾಡಿದ... ಬ್ರಹ್ಮ ದೇವ ಪ್ರತ್ಯಕ್ಷನಾದ... ನೀನಿಗ ಋಷಿತ್ವ ಸಿಕ್ಕಿದೆ ಹೌದು ಆದರೆ ಇನ್ನೂ ಇಂದ್ರಿಯಗಳ ಹಿಡಿತ ಬಂದಿಲ್ಲ, ಕಾಲ ಪಕ್ವವಾಗಿಲ್ಲ ಎಂದು ಹೇಳಿ ಮಾಯವಾದ...

ಮತ್ತೆ ತಪಸ್ಸು ಮುಂದುವರೆಸಿದ, ಎರಡು ಕೈ ಮೇಲೆತ್ತಿ, ವಾಯುವನ್ನೇ ಆಹಾರವಾಗಿಸಿಕೊಂಡು...

ಈ ಬಾರಿ ರಂಭೆ ಬಂದಳು, ಕೌಶಿಕ ಕಣ್ಣು ಬಿಟ್ಟ, ಅಂತರ್ಗತನಾದ ಕೌಶಿಕನಿಗೆ ಗೊತ್ತಾಯ್ತು ಇದು ತಪಸ್ಸು ಭಂಗಕ್ಕಾಗಿ ಇಂದ್ರನ ಕೆಲಸ ಎಂಬುದು...
ಮತ್ತೆ ಶಾಪ ಕೊಟ್ಟ, ಕಲ್ಲಾಗಿ ಬೀಳು... ಬ್ರಾಹ್ಮಣೋತ್ತಮನ ಸ್ಪರ್ಶದಿಂದ ಶಾಪ ಮುಕ್ತಿ ಎಂದನು...

ಇಷ್ಟಾದಾಗ ಕೌಶಿಕ‌ನಿಗೆ ಅರಿವಾಯಿತು, ಬ್ರಹ್ಮದೇವ ಹೇಳಿದ್ದು ಸರಿ ಇದೆ, ನಾನಿನ್ನೂ ಇಂದ್ರಿಯಗಳನ್ನು ಜಯಿಸಿಲ್ಲ...!

ಘೋರ ಸಂಕಲ್ಪವನ್ನು ಮಾಡುತ್ತಾನೆ! ನಾನಿನ್ನು  ಕೋಪವನ್ನು ಮಾಡುವುದಿಲ್ಲ, ನಾನು ಮಾತೇ ಆಡುವುದಿಲ್ಲ, ಉಸಿರಾಟವನ್ನೇ ಮಾಡುವುದಿಲ್ಲ, ದೇಹವನ್ನು ದಂಡಿಸುತ್ತೇನೆ ಎಂದು..

ಉತ್ತರ ದಿಕ್ಕನ್ನು ಬಿಟ್ಟು ಪೂರ್ವಕ್ಕೆ ಬಂದ... ಸಾವಿರ ವರ್ಷಗಳ ಮೌನ,ಉಪವಾಸ.... ದೇಹ ಕಟ್ಟಿಗೆಯಂತಾಗಿತ್ತು...

ಸಾವಿರ ವರ್ಷಗಳ ನಂತರ ಮೌನ ತಪಸ್ಸು ಮುಗಿಸಿ ಇನ್ನೊಂದು ವೃತ ವನ್ನು ಪ್ರಾರಂಭಿಸುವ ಮುನ್ನ ಹವಿರನ್ನವ‌ನ್ನು ಇನ್ನೇನು ತಿನ್ನಬೇಕು ಎಂದು ತುತ್ತು ತೆಗೆದುಕೊಳ್ಳುವಾಗ, ಇಂದ್ರ ಬ್ರಾಹ್ಮಣ ರೂಪದಲ್ಲಿ ಬಂದು, ದೇಹಿ ಎಂದ.... ಕೌಶಿಕ ಒಂದು ಮಾತನ್ನೂ ಆಡದೆ ಕೊಟ್ಟುಬಿಟ್ಟ..

ಮತ್ತೊಂದು ತಪಸ್ಸು...ಅದೆಂತಹ ತಪಸ್ಸು ಅಂದರೆ ನೆತ್ತಿಯಿಂದ ಧೂಮರೇಖೆ ಬಂದಿದೆ..

ದೇವತೆಗಳೆಲ್ಲರೂ ಸೇರಿ ಬ್ರಹ್ಮನೊಂದಿಗೆ ಕೌಶಿಕ ಇರುವಲ್ಲಿಗೆ ಹೋಗಿ,  ಬ್ರಹ್ಮದೇವ ಸಂಭೊಂಧಿಸುತ್ತಾರೆ, "ಎಲೈ ಬ್ರಹ್ಮರ್ಷಿಯೇ, ಬ್ರಹ್ಮಲೋಕಕ್ಕೆ ಸ್ವಾಗತ, ನಿನಗೆ ಬ್ರಾಹ್ಮಣ್ಯ ಬಂದಿದೆ.."

ನನಗೆ ಬ್ರಾಹ್ಮಣ್ಯ ಬಂದಿರುವುದೇ ಹೌದಾದರೆ, ಬ್ರಹ್ಮಪುತ್ರ, ಬ್ರಹ್ಮರ್ಷಿ ಪದವಿ ಕೊಡುವ ಅರ್ಹರಾದ ವಸಿಷ್ಠರೇ ನನಗೆ ಹೇಳಬೇಕು, ಅವರೆಲ್ಲಾದರೂ ನೀನು ಬ್ರಹ್ಮರ್ಷಿ ಎಂದು ಘೋಸಿಸಿದರೆ ನಾನು ಒಪ್ಪುತ್ತೇನೆ..

ದೇವತೆಗಳೆಲ್ಲ ವಸಿಷ್ಠರ ಬಳಿ ಹೋಗಿ ಪ್ರಾರ್ಥಿಸಿದರು, ನೀವೇ ಬಂದು ಕೌಶಿಕನಿಗೆ ಬ್ರಹ್ಮರ್ಷಿ ಎಂದು ಹೇಳಬೇಕಂತೆ...

ವಸಿಷ್ಠರು ಬಂದು ಹೇಳಿದರಂತೆ, ನೀನು ಬ್ರಹ್ಮರ್ಷಿ, ಅದರಲ್ಲಿ ಯಾವುದೇ ಅನುಮಾನವಿಲ್ಲ.. ಸಕಲವೂ ನಿನಗೆ ಸಿದ್ಧಿಸಲಿದೆ, ಎಂದರು‌.‌ ನಂತರ ವಸಿಷ್ಠರು ಕೌಶಿಕರಲ್ಲಿ ಸಖ್ಯವನ್ನು ಹೊಂದಿದರು..

ಬ್ರಹ್ಮರ್ಷಿಯಾದ ವಿಶ್ವಾಮಿತ್ರರು ಲೋಕಸಂಚಾರ ಮಾಡಿದರು, ಗಾಯತ್ರಿಯನ್ನು ಲೋಕಕ್ಕೆ ಕೊಟ್ಟರು...

ವಿಧಿ ಯಾರಿಂದ ಏನು ಮಾಡಿಸಿಕೊಳ್ಳಬೇಕೋ, ಅವನು ಎಲ್ಲೇ ಇದ್ದರೂ, ಯಾವ ಕಡೆ ಅಭುಮುಖನಾಗಿದ್ದರೂ ವಿಧಿ ತಾನೇ ಅವನೆಡೆ ಅಭಿಮುಖವಾಗಿ ಸಾಗುತ್ತದೆ, ಕೆಲಸವನ್ನು ಮಾಡಿಸಿಕೊಳ್ಳುತ್ತದೆ.

ಇದು ವಿಶ್ವಾಮಿತ್ರರ ಗೋವಿನಿಂದ ಗಾಯತ್ರಿಯವರೆಗಿನ ಪ್ರಯಾಣ...! ಗೋವು ಗಾಯತ್ರಿಯನ್ನು ಕೊಟ್ಟಿತು‌!

ಹ್ಮಾ! ನೆನಪಿರಲಿ: ವಿಶ್ವಾಮಿತ್ರರ ಎದುರಲ್ಲೇ, ಶತಾನಂದರು ವಿಶ್ವಾಮಿತ್ರರ ಕಥೆಯನ್ನು ರಾಮನಿಗೆ ಹೇಳುತ್ತಿದ್ದಾರೆ.. ‌

#DhaaraRaamayan

No comments:

Post a Comment

Please leave your comments here.....