Dhaara Raamayana 17


#ಧಾರಾ_ರಾಮಾಯಣ - 06-07-2019 ದಿನ17
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ

ಮಿಥಿಲೆಯ ಪ್ರವೇಶ ಸ್ಥಳದಲ್ಲಿರುವುದು ಜನಕನ ಪುರೋಹಿತರಾದ ಗೌತಮ ಮುನಿಗಳ ಆಶ್ರಮ. ಅಹಲ್ಯಾಸಹಿತರಾಗಿ ಬಹಳವಾಗಿ ತಪಸ್ಸು ಮಾಡಿದ್ದಾರೆ. ದೇವರಾಜ ಇಂದ್ರ ಅಹಲ್ಯಾ ಗೌತಮರ ತಪಸ್ಸನ್ನು ಭಂಗಮಾಡುವ ಉದ್ದೇಶದಿಂದ ಗೌತಮರ ವೇಷಧಾರಣೆ ಮಾಡಿ, ಮಾಡಬಾರದ್ದನ್ನು ಮಾಡಲು ಬಂದನು. ಮುನಿವೇಷಧಾರಿಯಾಗಿ ಇಂದ್ರನೇ ಬಂದಿರುವುದೆಂದು ಗೊತ್ತಿದ್ದೂ, ಆತನಲ್ಲಿ ಮನಸ್ಸು ಮಾಡಿದಳು ಅಹಲ್ಯಾ.

ಅರಿಯದೇ ಅಪರಾಧ ಮಾಡಿದರೆ, ಪರಿಹಾರವಿದೆ. ಅರಿತೂ ಅಪರಾಧ ಮಾಡಿ ಪಶ್ಚಾತ್ತಾಪ ಬಂದರೆ, ಪರಿಹಾರವಿದೆ. ಆದರೆ ಅಹಲ್ಯೆ...!

ದೇವೇಂದ್ರನು ಪಾಪಕರ್ಮವನ್ನು ಮಾಡಿ ಮನಸ್ಸಿನಲ್ಲಿ ಭಯತುಂಬಿಕೊಂಡು ತ್ವರಿತಗತಿಯಲ್ಲಿ ಆಶ್ರಮದಿಂದ ಹೊರಹೋಗುವಾಗ, ಗೌತಮರು ಎದುರೇ ಸಿಕ್ಕಿದರು. ಗಡಗಡ ನಡುಗಿದ ಇಂದ್ರ. ಗೌತಮರು ಮುನಿವೇಷಧರನಾದ ಸಹಸ್ರಾಕ್ಷನನ್ನೇ ನೋಡಿದರು. "ಮಾಡಬಾರದ್ದನ್ನು ಮಾಡಲಿಕ್ಕೆ ನನ್ನ ವೇಷವಾ? ಇನ್ನು ಮುಂದೆ ನೀನು ಪುರುಷನಲ್ಲ. ಇಂದ್ರಪಟ್ಟ ನಿನಗೆ ಸ್ಥಿರವಲ್ಲ. ಸದಾ ಭಯವನ್ನು ಹೊಂದು" ಎಂದು ಶಪಿಸಿದರು.

ಅಹಲ್ಯೆಗೆ, "ಬಹುಸಹಸ್ರವರ್ಷಗಳ ಕಾಲ ಅದೃಶ್ಯಳಾಗಿರು. ಅನಂತಕಾಲ ಬೂದಿರಾಶಿಯಲ್ಲಿ ಬಿದ್ದಿರು. ರಾಮಬರುವವರೆಗೆ ಈ ವನದಲ್ಲಿ, ಈ ಆಶ್ರಮದಲ್ಲಿ ಬಿದ್ದಿರು. ಯಾವಾಗ ರಾಮನ ಪೂಜೆ ಮಾಡುತ್ತಿಯೋ, ಆಗ ಮತ್ತೆ ನನ್ನವಳಾಗುತ್ತೀಯೆ" ಎಂದರು. ತಪಸ್ಸಿನ ಮೂಲಕ ಪಾವಿತ್ರ್ಯತೆ ಪಡೆಯಬೇಕು ಅಹಲ್ಯೆಗೆ. ಒಂದು ರೀತಿಯಲ್ಲಿ ಗೌತಮರು ಶಾಪರೂಪದಲ್ಲಿ ಸಾಧನೆಯ ಮಾರ್ಗವನ್ನೇ ತೋರಿಸಿಕೊಟ್ಟಿದ್ದಾರೆ! ಇಷ್ಟು ಹೇಳಿ ಗೌತಮರು ಆಶ್ರಮ ತೊರೆದು, ಹಿಮಾಲಯಕ್ಕೆ ತೆರಳಿದರು.

ವಿಶ್ವಾಮಿತ್ರರು ಇದನ್ನು ಸಂಪೂರ್ಣವಾಗಿ ವಿವರಿಸಿದರು; ಯಾರಿಗೂ ಕಾಣದಿದ್ದ ಅಹಲ್ಯೆಯು ರಾಮನ ಕಣ್ಣಿಗೆ ಬಿದ್ದಳು! ಅದೆಷ್ಟೋ ಸಹಸ್ರವರ್ಷಗಳ ತಪಸ್ಸಿನ ಬಲದಿಂದ ಆಕೆಯ ತೇಜೋರಾಶಿ ಅಸಾಮಾನ್ಯವಾಗಿ ವರ್ಧಿಸಿತ್ತಂತೆ!

ರಾಮಲಕ್ಷ್ಮಣರು ಆಕೆಗೆ ನಮಸ್ಕರಿಸಿದರು - ಇಲ್ಲಿ ಎರಡು ಕಾರಣಗಳು. ಮುನಿಪತ್ನಿ ಹಾಗೂ ವಯಸ್ಸಿನಲ್ಲಿ ದೊಡ್ಡವಳೆಂಬ ಶಿಷ್ಟಾಚಾರ ಒಂದು; ಆಕೆಯ ಸಾಧನೆಯ ಔನ್ನತ್ಯ ಇನ್ನೊಂದು! ಪಾತಾಳದಲ್ಲಿ ಬಿದ್ದ ಅಹಲ್ಯೆಯ ಸಾಧನೆಯೆಂತಹಾದ್ದೆಂದರೆ, ದೇವದೇವನೇ ನಮಸ್ಕರಿಸುವಂತಹಾದ್ದು! ಅದನ್ನೇ ಹೇಳಿದ್ದು - ಪಾತಾಳಕ್ಕೆ ಬಿದ್ದರೂ ಕಠಿಣವಾದ ಸಾಧನೆಯಿದ್ದಲ್ಲಿ ಪಾಪಕರ್ಮವನ್ನು ತೊಳೆದುಕೊಂಡು ದಿವಿಯೆತ್ತರಕ್ಕೇರಬಹುದು! ಅಂತಹಾ ಸಾಧನೆಗೆ ಅಹಲ್ಯೆಯು ಆದರ್ಶವಾಗಿ ನಿಲ್ಲುತ್ತಾಳೆ.

ರಾಮಪಾದಸ್ಪರ್ಶದಿಂದ ಅಹಲ್ಯೆಯ ಶಾಪವಿಮೋಚನೆಯಾಯಿತು...! ಎಲ್ಲರ ಕಣ್ಣಿಗೆ ಕಂಡಳು. ಗೌತಮರು ಪ್ರಕಟರಾದರು..! ರಾಮನನ್ನು ಪೂಜಿಸಿದರು ಗೌತಮ- ಅಹಲ್ಯಾ ದಂಪತಿಗಳು.

ಹಾಗೇ ಮುಂದುವರಿದು ಮಿಥಿಲೆಯನ್ನು ವಿಶ್ವಾಮಿತ್ರ, ರಾಮ, ಲಕ್ಷ್ಮಣರು ಸೇರುತ್ತಾರೆ. ಜನಕನು ವಿಶ್ವಾಮಿತ್ರರು ತನ್ನ ನಗರಿಗೆ ಬಂದ ವಿಚಾರವನ್ನು ತಿಳಿದು, ಪುರೋಹಿತರಾದ ಶತಾನಂದರು, ಋಷಿವೃಂದದ ಸಮೇತ ಅವರಿರುವ ಕುಟೀರದೆಡೆಗೆ ಬಂದರು. ವಿಶ್ವಾಮಿತ್ರರನ್ನು ಸತ್ಕರಿಸಿ, ಜನಕ ರಾಮಲಕ್ಷ್ಮಣರನ್ನು ನೋಡಿ ಕೇಳಿದ, "ಇವರ್ಯಾರು...? ದೇವಸಮಾನರು... ಮಹಾಪುರುಷರ ನಡಿಗೆಯುಳ್ಳ ಕಮಲಾಕ್ಷರು ಯಾರಿವರು...? ತನ್ನಿಚ್ಛೆಯಂತೆ ದೇವರು ಭುವಿಗಿಳಿದ ರೂಪ ಇವರದು. ಯಾವ ದೇಶದ ಯಾವ ರಾಜನ ಮಕ್ಕಳೀರ್ವರು..?" ಎಂದಾಗ ವಿಶ್ವಾಮಿತ್ರರು, ಕೋಸಲ ಅಯೋಧ್ಯೆಯ ದಶರಥನ ಮಕ್ಕಳು ಎಂದು ಆರಂಭಿಸಿ, ಅಲ್ಲಿವರೆಗಿನ ಎಲ್ಲ ಕಥೆಯನ್ನು ಹೇಳಿದರು.

ರಾಮಪಾದದ ಧೂಳಿನ ಸ್ಪರ್ಶಮಾತ್ರದಿಂದ ಅಹಲ್ಯೆಯ ದರ್ಶನವಾಯಿತು ಎಂದಾಗ, ಅಹಲ್ಯಾ ಸುಪುತ್ರ ಶತಾನಂದರಿಗೆ ರಾಮನ ಕುರಿತು ಎಲ್ಲಿಲ್ಲದ ವಿಸ್ಮಯ....!  ಆಗ ಶತಾನಂದರು, "ತನ್ನ ತಾಯಿಯಾದ ಅಹಲ್ಯೆ ರಾಮನನ್ನು ಪೂಜಿಸಿದಳಾ? ತಂದೆ ತಾಯಿ ಒಂದಾದರಾ..? ರಾಮನನ್ನು ಗೌತಮರು ಪೂಜಿಸಿದರಾ..? " ಎಂದು ಪ್ರಶ್ನಿಸುತ್ತಾರೆ. ಆಗ ವಿಶ್ವಾಮಿತ್ರರು "ಹೌದು, ಕರ್ತವ್ಯಪಾಲನೆಯಾಗಿದೆ" ಎಂದರು.

ವಿಶ್ವಾಮಿತ್ರರಿಂದ ಅಂತಹಾ ಮಹತ್ತರವಾದ ಕಾರ್ಯವಾಗಿದ್ದರೂ, ಅಷ್ಟದರಲ್ಲೇ ಹೇಳಿ ಮುಗಿಸುತ್ತಾರೆ! ಆದರೆ, ವಿಶ್ವಾಮಿತ್ರರು ಯಾರು, ಎಂತಹಾ ಮಹಾತ್ಮರು ಎಂಬುದನ್ನು ರಾಮನಿಗೆ ಶತಾನಂದರು ಹೇಳುವರು. ಮುಂದಿನ ಪ್ರವಚನದಲ್ಲಿ ಅದನ್ನು ಕೇಳೋಣ.

#DhaaraRaamayan

No comments:

Post a Comment

Please leave your comments here.....