#ಧಾರಾ_ರಾಮಾಯಣ - 04-07-2019 ದಿನ15
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ
ಜೀವಿಗಳಲ್ಲಿ ಎರಡು ವರ್ಗ:
೧. ಮುಂದೆ ಹೋಗುವವರು
೨. ಹಿಂದೆ ಹೋಗುವವರು.
ಕೆಲವರಿಗೆ ಮುಂದೆ ಹೋಗುವುದು ಸಹಜ ಪ್ರವೃತ್ತಿ, ಕೆಲವರಿಗೆ ಹಿಂದೆ ಹೋಗುವುದು ಸಹಜ ಪ್ರವೃತ್ತಿ. ಹಿಂದೆ ಹೋಗುವವರಲ್ಲೂ ಮುಂದೆ ಹೋಗುವವರಿರುತ್ತಾರೆ.
ಯಾವ ವರ್ಗ, ಗುಂಪು, ಸಮುದಾಯವಾದರೂ 'ಮುಂದಾಳು' ಬೇಕಾಗುತ್ತದೆ.
ಈ 'ನಾಯಕತ್ವ' ಅನ್ನುವುದು ಸುಮ್ಮನೆ ಬಂದು ಬಿಡುವುದಿಲ್ಲ. ಸಹಜ ನಾಯಕತ್ವ ಎಂದರೆ 'ಮೊದಲು ಪ್ರಹಾರಕ್ಕೆ ಎದೆಯೊಡ್ಡುವಂಥದ್ದು'.
ದೇವ ಸೈನಿಕರಿಗೂ ಒಬ್ಬ ಮುಂದಾಳು ಬೇಕಿತ್ತು. ದೇವತೆಗಳು ಬ್ರಹ್ಮನನ್ನು ಕಂಡು, ' ನೀನು ನಮಗೆ ಸೇನಾಪತಿಯನ್ನು ಕೊಟ್ಟಿದ್ದೀಯೆ, ಆದರೆ ಅವನು ಹುಟ್ಟಿಯೇ ಇಲ್ಲ' ಎಂದು ನುಡಿದರು.
ಹಿಂದಾಳುಗಳು ಮುಂದಾಳುಗಳಿಗೆ ಅವಕಾಶ ಮಾಡಿಕೊಡಬೇಕು.
ದೈವಸಂಕಲ್ಪದಂತೆ ಶಿವನ ತೇಜಸ್ಸು ಅಗ್ನಿಯೊಳಗೆ ಪ್ರವೇಶಿಸಿತು. ಅಗ್ನಿಯು ಗಂಗೆಯ ಮುಂದೆ ಪ್ರಕಟವಾಗಿ ತೇಜಸ್ಸನ್ನು ಆಕೆಯೆಡೆಗೆ ಚೆಲ್ಲುತ್ತಾನೆ. ಗಂಗೆ ಅದನ್ನು ಸ್ವೀಕರಿಸಿ ಹಿಮವತ್ ಪರ್ವತದೆಡೆಗೆ ಆ ತೇಜಸ್ಸನ್ನು ಹರಿಸಿದಾಗ 'ಸ್ಕಂದ' ಹುಟ್ಟಿಬಂದ.
ಕಾರ್ತಿಕೇಯನಿಗೆ ತಾಯ್ತಂದೆಯರು ಅನೇಕ. ಆತ ಶಿವತನಯ, ಅಗ್ನಿಕುಮಾರನೂ ಹೌದು. ಗಂಗೆ, ಪಾರ್ವತಿ ಆತನ ತಾಯಿಯರು. ಕೃತ್ತಿಕಾ ನಕ್ಷತ್ರ (ಆರು ನಕ್ಷತ್ರಗಳು) ಹಾಲು ಕೊಟ್ಟರು, ಆ ಆರು ತಾಯಿಯರೂ ಅಗ್ನಿಕನ್ಯೆಯರು.
ಆರು ಕೃತ್ತಿಕೆಯರಿಂದ 'ಕಾರ್ತಿಕೇಯ'ನಾದ ಆತ.
ಸ್ಕಂದ ಎಂದರೆ 'ಸ್ಕನ್ನಮ್' ~ ಜಾರಿಬಂದವನು. ಶಿವನ ತೇಜಸ್ಸು ಅಗ್ನಿಯೊಳಗೆ, ಅಗ್ನಿಯಿಂದ ಗಂಗೆಗೆ, ಗಂಗೆಯಿಂದ ಹಿಮವತ್ ಪರ್ವತದೆಡೆಗೆ ಜಾರಿ ಬಂದವನು.
ಸ್ವಂತಬಲದಿಂದ ತಾರಕಾಸುರನನ್ನು ಸಂಹರಿಸಿದ, ದೇವಸೇನಾಪತಿ ಎನಿಸಿದ.
ಅವನು 'ನಿತ್ಯ ಕುಮಾರ'.
ಈ ಕಥಾಭಾಗಕ್ಕೆ 'ಕುಮಾರಸಂಭವ' ಎನ್ನುತ್ತಾರೆ. ಇದನ್ನು ಪಠಿಸಿದವರು ಆಯಸ್ಸು, ಪುತ್ರ-ಪೌತ್ರರನ್ನು ಪಡೆಯುತ್ತಾರೆ, ಕೊನೆಗೆ ಕಾರ್ತಿಕೇಯನನ್ನು ಸೇರುತ್ತಾರೆ. ಇದು ಪುಣ್ಯ!
ಮುಂದೆ ವಿಶ್ವಾಮಿತ್ರರು ರಾಮನಿಗೆ ಆಕಾಶಗಂಗೆ ಭೂಮಿಗೆ ಹರಿದ 'ಗಂಗಾವತರಣದ' ಕಥೆಯನ್ನು ಹೇಳುತ್ತಾರೆ.
ಅಯೋಧ್ಯಾಧಿಪತಿ ಸಗರನ ಕಥೆಯದು. ಸಗರನ ಕೀರ್ತಿಪತಾಕೆ ~ ಸಗರನಿಂದ ಸಾಗರವಾಯಿತು. ಸೂರ್ಯವಂಶದ ಕೀರ್ತಿಪತಾಕೆ~ ದೇಶಕ್ಕೆ ಗಂಗೆಯನ್ನು, ಸಾಗರವನ್ನು ಕೊಟ್ಟವರು ಸೂರ್ಯವಂಶದವರು.
ಸಗರನಿಗೆ ಇಬ್ಬರು ಪತ್ನಿಯರು. ಒಬ್ಬಾಕೆ ವಿದರ್ಭದ ರಾಜಕುಮಾರಿ ಕೇಶಿನಿ, ಮತ್ತೊಬ್ಬಳು ಅರಿಷ್ಟನೇಮಿಯ ಪುತ್ರಿ, ಗರುಡನ ಸಹೋದರಿಯಾದ ಸುಮತಿ. ಮಕ್ಕಳನ್ನು ಪಡೆಯುವ ಸಲುವಾಗಿ ಸಗರನು ಹಿಮಾಲಯಕ್ಕೆ ಹೋಗಿ ಭೃಗುಮುನಿಗಳನ್ನು ಕುರಿತು ಶತವರ್ಷಗಳ ತಪಸ್ಸನ್ನು ಮಾಡಿ ಕೇಶಿನಿಯಿಂದ 'ಅಸಮಂಜ' ಎಂಬ ವಂಶೋದ್ಧಾರಕ ಮಗನನ್ನೂ, ಸುಮತಿಯಿಂದ 'ಗರ್ಭತುಂಬ'ದ ಮೂಲಕ 60,000 ಮಕ್ಕಳನ್ನೂ ಪಡೆಯುತ್ತಾನೆ.
ಈ 60,000 ಮಕ್ಕಳು ಎಲ್ಲರದರಲ್ಲಿಯೂ ಒಳ್ಳೆಯವರಾಗಿ ಮೂಡಿದರು. ಆದರೆ ಒಬ್ಬನೇ ಮಗನಾದ ಅಸಮಂಜನು ತಂಟೆಕೋರನಾಗಿ ಬೆಳೆದು ಪುಟ್ಟ ಪುಟ್ಟ ಮಕ್ಕಳನ್ನು ಸರೋವರದಲ್ಲಿ ಮುಳುಗಿಸಿ ಖುಷಿಪಡುತ್ತಿದ್ದ. ಮಿತಿಮೀರಿದಾಗ ದೂರು ರಾಜನಿಗೆ ಹೋಯಿತು. ಆತ ಮಗನೆಂದೂ ನೋಡನೆ 'ದೇಶನಿಷ್ಕಾಶನ' ~ ಜೀವನಪರ್ಯಂತ ಎಲ್ಲಿಯೂ ಕಾಣಿಸಿಕೊಳ್ಳಬಾರದೆಂಬ ದಂಡನೆ ವಿಧಿಸಿದನು. ಅಸಮಂಜನ ಪತ್ನಿಯೂ ಆತನನ್ನು ಹಿಂಬಾಲಿಸಿದಳು. ಅವರ ಮಗ 'ಅಂಶುಮಾನ್', ಆತನನ್ನು ವಂಶೋದ್ಧಾರದ ಸಲುವಾಗಿ ಸಗರನು ಉಳಿಸಿಕೊಳ್ತಾನೆ.
ಸಗರನಿಗೆ ಆಶ್ವಮೇಧಯಾಗ ಮಾಡುವ ಮನಸ್ಸಾಯಿತು. ಹಿಮಾಲಯ ಪರ್ವತ ಮತ್ತು ವಿಂಧ್ಯ ಪರ್ವತಗಳ ಮಧ್ಯದಲ್ಲಿ 'ಆರ್ಯಾವರ್ತ' ಎಂಬ ಪ್ರಶಸ್ತ ಜಾಗದಲ್ಲಿ ಯಜ್ಞ ಆರಂಭವಾಯಿತು. ಅಶ್ವಚರ್ಯೆಯನ್ನು ಅಂಶುಮಂತನೇ ಮಾಡುತ್ತಿದ್ದ.
ತ್ರಿಲೊಕದೊಡೆಯ ದೇವೇಂದ್ರನೇ ಅಶ್ವವನ್ನು ಚಾಕಚಕ್ಯತೆಯಿಂದ ಕದ್ದೊಯ್ದ.
ಒಳ್ಳೆಯ ಕಾರ್ಯಗಳಿಗೆ ದೇವತೆಗಳು ವಿಘ್ನ ಒಡ್ಡುವುದುಂಟು, ಅದೇ ಪರೀಕ್ಷೆ ~ #ಶ್ರೀಸೂಕ್ತಿ
ಆಗ ಋಷಿಮುನಿಗಳು ಇದು ನಮಗೆಲ್ಲರಿಗೂ ಪಾಪ, ನಷ್ಟವೆಂದು ಎಚ್ಚರಿಸುತ್ತಾರೆ. ಆಗ ಸಗರನು ತನ್ನ 60,000 ಮಕ್ಕಳನ್ನು ಕರೆದು 'ರಾಕ್ಷಸರು ಕುದುರೆಯನ್ನು ಕದ್ದೊಯ್ದಿದ್ದಾರೆ, ಭೂಮಿಯೆಲ್ಲವನ್ನೂ ಹುಡುಕಿ, ಭೂಮಿಯನ್ನು ಅಗೆಯಿರಿ, ಅಗೆದು ಒಳಗೆ ಹೋಗಿ ಹುಡುಕಿ, ಯಜ್ಞ ನಿಲ್ಲಿಸಿ ಅಶ್ವಕ್ಕಾಗಿ ಕಾಯುತ್ತಿರುತ್ತೇನೆ' ಎಂದು ಆಜ್ಞೆ ಮಾಡಿ ಕಳುಹಿಸುತ್ತಾನೆ. ಸಗರಪುತ್ರರು ಭೂಮಿಯನ್ನು ವಜ್ರಾಯುಧಕ್ಕೆ ಸಮವಾದ ತಮ್ಮ ಉಗುರುಗಳಿಂದ, ಶೂಲ, ಹಲಗಳಿಂದ ಸೀಳ್ತಾರೆ ಭೂಮಿಯನ್ನು.
ಆಗ ಸಿಕ್ಕಿಸಿಕ್ಕಿದ ಮಹಾನಾಗರುಗಳು, ಅಸುರರು, ಅವರನ್ನೆಲ್ಲ ಧ್ವಂಸ ಮಾಡುತ್ತಾ ಅಗೆದು ರಸಾತಳದ ವರೆಗೆ ಹೋಗ್ತಾರೆ.
ಹಿಂದಿರುಗಿ ತಂದೆಯ ಬಳಿ ಭೂಮಿಯಲ್ಲೆಲ್ಲ ಕುದುರೆ ಮಾತ್ರ ಕಂಡಿಲ್ಲ, ಕುದುರೆ ಕಳ್ಳನೂ ಇಲ್ಲವೆಂದರು. ಇದನ್ನು ಕೇಳಿ ಸಗರನಿಗೆ ಕೋಪವುಂಟಾಯಿತು.
"ಯಾಕೆ ಬಂದಿರಿ ಬರಿಗೈಯಲ್ಲಿ? ಹೋಗಿ, ಭೂಮಿಯನ್ನು ಅಗೆಯಿರಿ, ತನ್ನಿ; ತರುವುದಾದರೆ ಮಾತ್ರ ಬನ್ನಿ" ಎಂದು ಮತ್ತೆ ಕಳುಹಿಸಿದನು. ನಾಲ್ಕು ದಿಕ್ಕುಗಳಲ್ಲಿಯೂ ಅಗೆದಾಗ ಅಷ್ಟದಿಗ್ಗಜರಲ್ಲಿ ನಾಲ್ಕುದಿಗ್ಗಜಗಳ ಆಶೀರ್ವಾದ ಪಡೆದರು. ಕುದುರೆ ಮಾತ್ರ ಎಲ್ಲೂ ಸಿಗದಾಗ ರೋಷದಿಂದ ಈಶಾನ್ಯ ದಿಕ್ಕಿನಲ್ಲಿ ಖನನ ಆರಂಭಿಸಿದರು. ಅಲ್ಲಿ ಕಪಿಲ (ಮಹಾವಿಷ್ಣುವಿನ ಗುರುಸ್ವರೂಪದ ಅವತಾರ)ನ ದರ್ಶನವಾಯಿತು. ಅಲ್ಲೇ ಅನತಿ ದೂರದಲ್ಲಿ ಕುದುರೆ ಇತ್ತು. ಕಪಿಲನೇ ಕಳ್ಳನೆಂದು ಅಪಾರ್ಥ ಮಾಡಿಕೊಂದು ಬೆಂಕಿಯ ಮೇಲೆ ಪತಂಗಗಳು ಬಿದ್ದಂತೆ ಅವನ ಮೇಲೆ ಬಿದ್ದರು. ಕೋಪ ಬಂತು ಕಪಿಲನಿಗೆ, ಮಾಡಿದ್ದು ಹೂಂಕಾರ ಮಾತ್ರ! 60,000 ಮಂದಿ ಅಲ್ಲೇ ಸುಟ್ಟು ಬೂದಿಯಾದರು.
ಸಾತ್ವಿಕರ ಹೂಂಕಾರ ಈ ರೀತಿ ಇರುತ್ತದೆ. ನಿನ್ನ ನಾಶ ಸಮೀಪಿಸುತ್ತಿದೆ, ನಾಶಕ್ಕೆ ಅಸ್ತು ಎನ್ನುವಂತಿರಬಹುದು! ~ #ಶ್ರೀಸೂಕ್ತಿ.
ಇತ್ತ ಮಕ್ಕಳನ್ನೂ ಕುದುರೆಯನ್ನೂ ಕಾಣದ ಸಗರನು ಮೊಮ್ಮಗ ಅಂಶುಮಂತನನ್ನು ಕರೆದು ಮೊದಲಿಗೆ ಚಿಕ್ಕಪ್ಪಂದಿರನ್ನು ಹುಡುಕಿ ಜತೆಗೆ ಕುದುರೆಯನ್ನೂ ಹುಡುಕಿಕೊಂಡು ಬರುವಂತೆ ಆಜ್ಞಾಪಿಸಿ ಹಿತೋಪದೇಶ ಮಾಡುತ್ತಾನೆ. ಅಂಶುಮಂತ ತನ್ನ ಪಿತೃಗಳ ಹಾದಿಯನ್ನು ಹಿಂಬಾಲಿಸಿ ಈಶಾನ್ಯ ದಿಕ್ಕಿನತ್ತ ಬಂದಾಗ ಕಂಡಿದ್ದು ಬೂದಿಯರಾಶಿ! ಅಲ್ಲಿಯೇ ಅಶ್ವವೂ ಕಂಡುಬಂತು.
ಕುದುರೆ ಸಿಕ್ಕಿದ ಸಮಾಧಾನ, ಪಿತೃಗಳಿಗಾಗಿದ್ದಕ್ಕೆ ಪರಿತಾಪ. ತರ್ಪಣ ಮಾಡಬಯಸಿದ ಅಂಶುಮಂತ. ಹುಡುಕಿದರೆ ಎಲ್ಲೂ ನೀರಿಲ್ಲ. ಆಗ ಗರುಡನು ಅಲ್ಲಿಗೆ ಬಂದು ಇದಕ್ಕೆ ಪರಿಹಾರವೊಂದೇ, 'ಗಂಗೆ ಬಂದು ತೊಳೆಯಬೇಕು. ಆಗಲೇ ಈ ಸಗರಪುತ್ರರ ಪಾಪ ಕಳೆಯುವಂತದ್ದು' ಎನ್ನುತ್ತಾನೆ.
ಸಗರನಿಗಾದ ದುಃಖ ಅಷ್ಟಿಷ್ಟಲ್ಲ. ಅಶ್ವಮೇಧ ಮುಗಿಯಿತು. ಗಂಗೆಯನ್ನು ಹೇಗೆ ಭುವಿಗಿಳಿಸುವುದು ಎಂದು ಚಿಂತಿಸುತ್ತಾ 30,000 ವರ್ಷ ಕಳೆದ. ಮುಂದೆ ಅಂಶುಮಂತನು ದಿಲೀಪನಿಗೆ ಅಯೋಧ್ಯೆಯ ರಾಜ್ಯಾಭಿಷೇಕವನ್ನು ಮಾಡಿ ಪಿತೃಗಳಿಗಾಗಿ 32,000 ವರ್ಷಗಳ ಕಾಲ ತಪ್ಪಸ್ಸನ್ನಾಚರಿಸಿದ. ಆತನಿಗೆ ಸ್ವರ್ಗ ಸಿಕ್ಕಿತು, ಗಂಗೆ ಸಿಗಲಿಲ್ಲ. ದಿಲೀಪನು ಮಾಡಿದ ಕೆಲಸಗಳು ಚಿಕ್ಕದಲ್ಲ. ಆದರೆ ಗಂಗೆ ಅವನಿಗೆ ದಕ್ಕುವವಳಲ್ಲ! 30,000 ವರ್ಷ ತಪಸ್ಸು ಮಾಡಿ, ಕೊನೆಗೆ ವ್ಯಾಧಿಯಿಂದ ಆತನ ಕಾಲ ಕಳೆಯಿತು. ದಿಲೀಪನ ಮಗ ಭಗೀರಥ.
ಆತನಿಗೆ ಮಕ್ಕಳಾಗಲಿಲ್ಲ. ಯಾಕೆ?
ಯಾರಿಗೆ ಹಿಂದಿಲ್ಲವೋ, ಮುಂದೆಯೂ ಇಲ್ಲ.
ಪಿತೃಗಳು ತೃಪ್ತಿಯಲ್ಲಿ ಇಲ್ಲದಿದ್ದರೆ ನಮಗೆ ಇಲ್ಲವೇ ಇಲ್ಲ.
ಮಕ್ಕಳಾಗದಿದ್ದಾಗ ರಾಜ್ಯಭಾರ ಮಂತ್ರಿಗಳಿಗೆ ಮೀಸಲಿರಿಸಿ ಭಗೀರಥನು ತಪಸ್ಸಿಗೆ ಹೋದ, ಗೋಕರ್ಣದಲ್ಲಿ ಬಹುದೀರ್ಘ ತಪಸ್ಸು ಮಾಡಿದ. ಅನೇಕ ಸಹಸ್ರ ವರ್ಷಗಳ ಸುಘೋರ ತಪಸ್ಸಿನ ನಂತರ ಬ್ರಹ್ಮನೊಲಿದ. ಭಗೀರಥ ಎರಡು ವರಗಳನ್ನು ಕೇಳಿದ. 'ಸಗರನ ಮಕ್ಕಳಿಗೆ ನನ್ನಿಂದ ತರ್ಪಣ ನೀಡುವ ಯೋಗ ನನಗೆ ಬರಲಿ', ಗಂಗೆಯ ಜಲ ಬರಿಸಿ ನನ್ನ ಪಿತೃಗಳ ಪಾಪ ತೊಳೆದು ಸ್ವರ್ಗ ನೀಡು' ಎನ್ನುವುದು ಮೊದಲನೇ ವರ. ಸಂತತಿತನ್ನು ನೀಡು, ನಮ್ಮ ಕುಲವು ನಾಶವಾಗದಿರಲಿ ಎಂಬುದು ಎರಡನೇ ವರ. ಅದಾದರೆ ಇದಾಗುತ್ತದೆ!.
ಬ್ರಹ್ಮನು, " ಇಕ್ಷ್ವಾಕು ಕುಲವು ಅವ್ಯವಾಗಲಿ." ಆದರೆ ಒಂದು ಮಾತು ಭಗೀರಥ, ಅಷ್ಟೆತ್ತರದಿಂದ ಅಷ್ಟು ದೊಡ್ಡ ಜಲಪ್ರವಾಹ ಭೂಮಿಗೆ ಬಂದರೆ ಭೂಮಿಯು ಉಳಿಯಬೇಕಲ್ಲ? ಎಂದು ಪ್ರಶ್ನಿಸಲು, ಭಗೀರಥನು ಈ ಕಾರ್ಯವು ಶಿವನಿಂದ ಸಾಧ್ಯ ಎಂದಾಗ ಬ್ರಹ್ಮನು, 'ಈ ಕಾರ್ಯಕ್ಕೆ ಶಿವನನ್ನು ನಿಯೋಜಿಸು' ಎಂದು ಹೇಳಿದ.
ಭಗೀರಥನು ಮತ್ತೆ ಅಂಗುಷ್ಠಾಗ್ರದಲ್ಲಿ ನಿಂತು
ಉಗ್ರ ತಪಸ್ಸಿಗೆ ಶರಣಾದ. ಒಂದು ವರ್ಷದಲ್ಲಿ ಒಲಿದ ಶಿವನು, 'ಸಂತೋಷಗೊಂಡಿದ್ದೇನೆ, ಶೈಲರಾಜಸುತೆಯನ್ನು ಶಿರಸ್ಸಿನಲ್ಲಿ ಧಾರಣೆ ಮಾಡುತ್ತೇನೆ' ಎಂದು ತಿಳಿಸಿದ.
ಆದರೆ ಗಂಗೆಯು ಗರ್ವದಿಂದ ಅತಿಮಹತ್ತಾದ ರೂಪವನ್ನು ಧಾರಣೆ ಮಾಡಿ ಸಹಿಸಲಸಾಧ್ಯ ವೇಗದಿಂದ ಧಾವಿಸಲು ಶಿವನು ಕ್ರುದ್ಧನಾಗಿ ಸೆಟೆದು ನಿಂತನಂತೆ.
ಶಿವಗಂಗೆಯರ ಈ ಸಮರದಿಂದ ಏನು ಲಾಭವಾಯಿತು, ಏನು ನಷ್ಟವಾಯಿತು ಎಂಬುದನ್ನು ಮುಂದೆ ತಿಳಿಯೋಣ.
ಭಾರತವು 'ಭಾರತ' ಏಕೆಂದರೆ ಗಂಗೆಯನ್ನು ಪಡೆದ ಪುಣ್ಯಭೂಮಿಯಿದು.
ಈ ಗಂಗಾವತರಣದ ಪುಣ್ಯಕಥೆಯನ್ನು ವಿಶ್ವಾಮಿತ್ರರು ರಾಮನಿಗೆ ಹೇಳ್ತಿದ್ದಾರೆ. ಇದೆಲ್ಲವೂ 'ಸಂಸ್ಕಾರ'.
#DhaaraRaamayan

No comments:
Post a Comment
Please leave your comments here.....