#ಧಾರಾ_ರಾಮಾಯಣ - 03-07-2019 ದಿನ14
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ
ಮಹಾಪುರುಷರ ನುಡಿನಡೆಗಳಿಗೆ ಸಾಮಾನ್ಯರ ಲೆಕ್ಕಾಚಾರಕ್ಕೆ ಮೀರಿದ ಅರ್ಥವಿರುತ್ತದೆ.
ರಾಮ ಲಕ್ಷ್ಮಣರನ್ನು ವಿಶ್ವಾಮಿತ್ರರು ಕಾಡಿಗೆ ಕರೆದುಕೊಂಡು ಬರುವಾಗ ಇದ್ದ ಲೆಕ್ಕಾಚಾರವೇನು? ವಿಶ್ವಾಮಿತ್ರರು ಯಜ್ಞ ಮಾಡುತ್ತಾರೆ, ಆ ಯಜ್ಞಕ್ಕೆ ರಾಕ್ಷಸರ ಉಪಟಳವಿದೆ, ಯಜ್ಞ ರಕ್ಷಿಸಬೇಕು - ರಾಕ್ಷಸರನ್ನು ಶಿಕ್ಷಿಸಬೇಕು ಎಂಬುದಾಗಿ. ಅಷ್ಟೇ ಆಗಿದ್ದರೆ ಯಜ್ಞ ಮುಗಿದಲ್ಲಿಗೆ ಮುಗಿಯಿತು, ರಾಮಲಕ್ಷ್ಮಣರನ್ನು ಅಯೋಧ್ಯೆಗೆ ಕಳುಹಿಸಿಕೊಡಬೇಕಿತ್ತು... ಆದರೆ ಹಾಗಾಗಲಿಲ್ಲ.
ಯಜ್ಞ ಮುಗಿದ ಮರುದಿನ ಬೆಳಿಗ್ಗೆ, ರಾಮಲಕ್ಷ್ಮಣರು ವಿಶ್ವಾಮಿತ್ರರ ಬಳಿ ಬಂದು "ತಮ್ಮ ಕಿಂಕಕರು ನಾವಿಬ್ಬರೂ ನಿಮ್ಮ ಸನ್ನಿಧಿಗೆ ಬಂದಿದ್ದೇವೆ, ನಿಮ್ಮಿಷ್ಟದಂತೆ ಆಜ್ಞೆ ಮಾಡಿ, ನಮಗಿನ್ನೇನಪ್ಪಣೆ? ಮುಂದಿನ ಕಾರ್ಯ ಯಾವುದು?"
ರಾಮಲಕ್ಷ್ಮಣರಿಗೆ ಸಾಕಾಗಿರಲಿಲ್ಲ, ಕೊಟ್ಟ ಕಾರ್ಯವನ್ನು ಪೂರೈಸಿ, ಮುಂದೇನು ಎಂದು ಕೇಳತಕ್ಕಂತಹಾ ತವಕ ಆ ಚಿಕ್ಕ ಮಕ್ಕಳಲ್ಲಿ..
ವಿಶ್ವಾಮಿತ್ರರು ಹಾಗೂ ಅಲ್ಲಿದ್ದ ಋಷಿಗಳೆಲ್ಲರೂ ಒಕ್ಕೊರಲಿನಿಂದ ಹೇಳಿದರು "ರಾಮ, ಮಿಥಿಲಾಧಿಪತಿಯಾದ ರಾಜ ಜನಕನ ಮನೆಯಲ್ಲಿ ಒಂದು ದೊಡ್ಡ ಯಜ್ಞ ನಡೆಯುತ್ತಿದೆ, ನಾವು ಅಲ್ಲಿಗೆ ಹೊರಟಿದ್ದೇವೆ, ನಮ್ಮ ಜೊತೆಗೆ ನೀನೂ ಬರುವೆಯಂತೆ.
ನಾವು ಯಜ್ಞವನ್ನು ನೋಡುತ್ತೇವೆ, ಅದು ನಮ್ಮ ಆಸಕ್ತಿ. ನೀನು ನಿನ್ನ ಆಸಕ್ತಿಯನ್ನು ನೋಡು, ಅದ್ಭುತವಾದ ಧನು ರತ್ನವನ್ನು ನೋಡಬಹುದು. ಏನದು ಧನಸ್ಸು? ಕೆಲವಾರು ತಲೆಮಾರುಗಳ ಹಿಂದಿನ ದೈವರಾತನೆಂಬ ಜನಕನ ಕಾಲದಲ್ಲಿ, ಯಜ್ಞದ ಸಭೆಯಲ್ಲಿ ಆ ಅದ್ಭುತವಾದ ಧನಸ್ಸನ್ನು ದೇವತೆಗಳು ಸೇರಿ ಕೊಟ್ಟಿದ್ದಾರೆ. ಅಪ್ರಮೇಯವಾದ ಶಕ್ತಿ, ತುಂಬಾ ತೇಜಸ್ಸು!
ಅದರ ವಿಶೇಷವೆಂದರೆ ದೇವತೆಗಳಿಂದ, ಗಂಧರ್ವರಿಂದ, ರಾಕ್ಷಸರಿಂದ, ಕ್ಷತ್ರಿಯರಿಂದ, ಹೀಗೆ ಯಾರಿಂದಲೂ ಆ ಧನಸ್ಸನ್ನು ಎತ್ತಿ ಹೆದೆಯೇರಿಸಲು ಸಾಧ್ಯವಾಗಿಲ್ಲ. ಅದನ್ನು ನೀನು ನೋಡಬೇಕು.
ಅದೀಗ ಜನಕನ ಆಸ್ಥಾನದಲ್ಲಿ ಪೂಜಾವಸ್ತುವಾಗಿದೆ ಕಾರಣ ಏನೆಂದರೆ, ಆ ಧನಸ್ಸಿನಲ್ಲಿ ಶಿವನ ಸನ್ನಿಧಾನ ಇದೆ.. ಶಿವಧನಸ್ಸು.. ವಿಧವಿಧವಾದ ಗಂಧಪುಷ್ಪಗಳಿಂದ ಅರ್ಚನೆ ಮಾಡುತ್ತಾರೆ"
ವಿಶ್ವಾಮಿತ್ರರು ಅಯೋಧ್ಯೆಗೆ ಬರುವ ಸಮಯದಲ್ಲಿ, ದಶರಥ ರಾಮನ ಮದುವೆ ಕುರಿತು ಚಿಂತಿಸುತ್ತಿದ್ದ.. ಅದೇ ಸಂದರ್ಭದಲ್ಲಿ ವಿಶ್ವಾಮಿತ್ರರು ಧಾವಿಸಿದ ಕಾರಣ, ರಾಮನ ಮದುವೆಯ ಕರ್ತವ್ಯ ವಿಶ್ವಾಮಿತ್ರರದ್ದು ಎಂಬುದು ಇಲ್ಲಿನ ತಾತ್ಪರ್ಯ.
ನಿನ್ನ ಮಗನಿಗೆ ಶ್ರೇಷ್ಠವಾದ ಶ್ರೇಯಸ್ಸನ್ನು ವಿಶ್ವಾಮಿತ್ರರು ಕೊಡಿಸುತ್ತಾರೆ ಎಂದು ವಸಿಷ್ಠರು ಹೇಳಿದ್ದರಲ್ಲ, ಸೀತೆಯೆ ಆ ಶ್ರೇಷ್ಠವಾದ ಶ್ರೇಯಸ್ಸು, ಅದು ರಾಮನೇ ಆದರೂ ರಾಮನಿಗೂ ಶ್ರೇಯಸ್ಸು ಸೀತೆ, ಅವಳೊಬ್ಬಳು ಅನರ್ಘ್ಯ ರತ್ನ. ರಾಮನಿಗೂ ಸಂಪತ್ತೇ ಆಕೆ, ಏಕೆಂದರೆ ಲಕ್ಷ್ಮಿ ಆಕೆ. ವಸಿಷ್ಠರು ಹೇಳಿದ ಬಹುವಿಧವಾದ ಸಂಪತ್ತು ಆಕೆಯೇ.
ವಿಶ್ವಾಮಿತ್ರರು ಹೊರಟರು, ಜೊತೆಯಲ್ಲಿ ಋಷಿ ಸಮುದಾಯವೂ ಹೊರಟಿತು. ಹಿಂದೆಯೇ ರಾಮಲಕ್ಷ್ಮಣರೂ ಹೊರಟರು.
ಸಿದ್ಧಾಶ್ರಮದಿಂದ ಸಿದ್ಧನಾಗಿ ಹೊರಟೆ ಎಂದು ವನದೇವತೆಗಳಿಗೆ ಹೇಳಿ ಉತ್ತರದಿಕ್ಕಿಗೆ ಅಭಿಮುಖವಾಗಿ ಹೊರಟರು. ಅವರನ್ನು ನೂರು ಎತ್ತಿನ ಬಂಡಿ ತುಂಬುವಷ್ಟು ಬ್ರಹ್ಮವಾದಿಗಳು ಅನುಸರಿಸಿದರು. ಆ ಕಾಡಿನ ಎಲ್ಲ ಮೃಗ-ಪಕ್ಷಿಗಳೂ ವಿಶ್ವಾಮಿತ್ರರನ್ನು ಹಿಂಬಾಲಿಸಿದವು. ಅದಕ್ಕೆ ವಿಶ್ವಾಮಿತ್ರರೂ ಕಾರಣ, ರಾಮನ ಆಕರ್ಷಣೆಯೂ ಕಾರಣ.
ವಿಶ್ವಾಮಿತ್ರರು ಪ್ರಯತ್ನಪೂರ್ವಕವಾಗಿ ಮೃಗಪಕ್ಷಿಗಳನ್ನು ಅಲ್ಲೇ ಇರುವಂತೆ ಮನವೊಲಿಸಿ ಹಿಂದಿರುಗಿಸಿದರು.
ಸಂಧ್ಯಾ ಸಮಯದಲ್ಲಿ ಶೋಣಾ ನದಿಯ ತೀರವನ್ನು ಸೇರಿದರು, ಸಾಯಂಕಾಲದ ಧರ್ಮಕಾರ್ಯಗಳನ್ನು ನೆರವೇರಿಸಿದರು..
"ಭಗವನ್, ಈ ಪ್ರದೇಶ ಯಾವುದು, ವನ ಸಮೃದ್ಧವಾಗಿದೆ, ಏನು ವಿಶೇಷ?" ಎಂದು ರಾಮ ವಿಶ್ವಾಮಿತ್ರರಿಗೆ ಕೇಳಿದ..
ಅದು ನಿಜವಾಗಿ ವಿಶ್ವಾಮಿತ್ರರ ಪೂರ್ವಾಶ್ರಮ.
ವಿಶ್ವಾಮಿತ್ರರು ಹಿನ್ನೆಲೆಯನ್ನು ಹೇಳಲು ಪ್ರಾರಂಭಿಸಿದರು.
ಕುಶ, ಬ್ರಹ್ಮಮಾನಸಪುತ್ರ, ಮಹಾತಪಸ್ವಿ..
ಭೂಮಿಗೆ ಶ್ರೇಯಸ್ಸುಮಾಡಬೇಕು ಎಂಬುದಕ್ಕಾಗಿ ಭೂಮಿಗೆ ಬಂದು, ವಿದರ್ಭ ರಾಜಕುಮಾರಿಯನ್ನು ವರಿಸಿ, ನಾಲ್ಕು ಸತ್ಪುತ್ರರನ್ನು ಪಡೆದ... ಯಾಕೆಂದರೆ ಕ್ಷತ್ರ ಧರ್ಮ ವೃದ್ಧಿಸಲು.. ಕ್ಷತ್ರಧರ್ಮಗಳು ಮುಖ್ಯವಾಗಿ ಎರಡು. ಪ್ರಜೆಗಳ ಇಷ್ಟಪ್ರಾಪ್ತಿ - ರಾಜ್ಯಭಾರ ಒಂದನೆಯದು, ಪ್ರಜೆಗಳ ಅನಿಷ್ಟನಿವೃತ್ತಿ - ರಕ್ಷಣೆ ಮತ್ತು ಯುದ್ಧ ಎರಡನೆಯದು.
ಕುಶನ ಮಕ್ಕಳು - ಕುಶಾಂಬ, ಕುಶನಾಭ, ಅಧೂತ್ತರಜಸ, ಬಸು
ನಾಲ್ವರು ಮಕ್ಕಳಿಗೆ ಕುಶ ಹೇಳಿದ , "ಪ್ರಜಾಪಾಲನೆ ಮಾಡಿ, ಧರ್ಮವನ್ನು ಸಂಪಾದನೆ ಮಾಡಿ..."
ಕುಶನ ಮಕ್ಕಳು ತಂದೆಯ ಆಜ್ಞೆಯಂತೆ ನಾಲ್ಕು ರಾಜ್ಯಗಳನ್ನು, ನಾಲ್ಕು ರಾಜಧಾನಿಗಳನ್ನು ನಿರ್ಮಿಸಿದರು.
ಈಗ ರಾಮ- ವಿಶ್ವಾಮಿತ್ರರು ಇರುವ ಪ್ರದೇಶ ವಸುವಿಗೆ ಸೇರಿದ್ದು..
ಕುಶನಾಭನಿಗೆ ನೂರು ಹೆಣ್ಣುಮಕ್ಕಳಂತೆ..
ಒಂದುಬಾರಿ ಉದ್ಯಾನವನದಲ್ಲಿ ಅವರೆಲ್ಲ ಹಾಡುತ್ತಾರೆ, ನರ್ತಿಸುತ್ತಾರೆ, ವಾದನಗಳನ್ನು ನುಡಿಸುತ್ತಾರೆ. ಒಮ್ಮೆ ವಾಯುದೇವನಿಗೆ ಈ ಹೆಣ್ಣುಮಕ್ಕಳನ್ನು ನಾನು ಯಾಕೆ ವರಿಸಬಾರದು ಎಂದು ಅನಿಸಿತಂತೆ... ಹೋಗಿ ಕೇಳಿದನಂತೆ ಆ ಹೆಣ್ಣುಮಕ್ಕಳನ್ನು, ನನಗೆ ನಿಮ್ಮಲ್ಲಿ ಅಪೇಕ್ಷೆ ಇದೆ, ನರತ್ವವನ್ನು ಬಿಟ್ಟು, ನನ್ನ ಪತ್ನಿಯರಾಗಿಬಿಡಿ ಎಂದು... ಆ ನೂರು ಹೆಣ್ಣುಮಕ್ಕಳು ವಾಯುದೇವನನ್ನು ತಿರಸ್ಕರಿಸಿದರು. ದರ್ಪದಿಂದ ಮುಂದೆ ನುಡಿಯುತ್ತಾ,
"ಯಾರು ನೀನು ಎಂಬುದು ನಮಗೆ ಗೊತ್ತಿಲ್ಲವೇ, ನಮ್ಮನ್ನು ಅವಹೇಳನ ಮಾಡುತ್ತೀಯಾ? ಕುಶನಾಭನ ಮಕ್ಕಳು ನಾವು. ಮನಸ್ಸು ಮಾಡಿದರೆ ನಿನ್ನನ್ನು ನಿನ್ನ ಸ್ಥಾನದಿಂದ ಇಳಿಸಬಲ್ಲೆವು ನಾವು.
ಧರ್ಮಾತ್ಮನಾದ ನಮ್ಮ ತಂದೆಯನ್ನು ಉಪೇಕ್ಷೆಮಾಡಿ ನಮ್ಮಷ್ಟಕ್ಕೆ ನಾವೇ ನಿರ್ಧರಿಸುವುದಿಲ್ಲ, ತಂದೆಯು ಒಪ್ಪಬೇಕು, ತಂದೆ ತೋರಿಸಿದವರನ್ನೇ ನಾವು ಮದುವೆಯಾಗುವುದು.." ಎಂದರು.
ವಾಯುದೇವನಿಗೆ ಇವರ ದರ್ಪದ ಮಾತುಗಳನ್ನು ಕೇಳಿ ಸಿಟ್ಟು ಬಂತು, ನೂರೂ ಹೆಣ್ಣುಮಕ್ಕಳ ಅಂಗಾಂಗಗಳನ್ನು ಭಂಗಗೊಳಿಸಿಬಿಟ್ಟ, ವಕ್ರಗೊಳಿಸಿದ. ಸೌಂದರ್ಯವತಿಯರಾಗಿದ್ದವರು ಕ್ಷಣಮಾತ್ರದಲ್ಲಿ ವಕ್ರಾಂಗಿನಿಯರಾದರು. ಹೆಣ್ಣುಮಕ್ಕಳು ಭ್ರಮೆಗೊಳಗಾಗಿ, ದುಃಖಿತರಾಗಿ ತಂದೆಯ ಬಳಿ ಬಂದರು... ತಂದೆ ಚಿಂತಿತನಾದ, ನೊಂದುಕೊಂಡ... ಆಗ ಹೆಣ್ಣುಮಕ್ಕಳು ನಡೆದ ಘಟನೆಯನ್ನು ವಿವರಿಸಿದರು.
ಕುಶನಾಭ ಮಕ್ಕಳ ಕ್ಷಮೆಯನ್ನು ಪ್ರಶಂಸಿಸಿದ. ಶಪಿಸುವ ಶಕ್ತಿಯಿದ್ದರೂ ನೀವು ಕ್ಷಮಿಸಿದರಿ, ನೂರು ಜನ ಒಂದೇ ಅಭಿಪ್ರಾಯಕ್ಕೆ ಬಂದು ನನ್ನ ಕುಲವನ್ನು ಮಾನ್ಯಮಾಡಿ, ಅವನನ್ನು ಕ್ಷಮಿಸಿದಿರಿ, ಪುರುಷನಾಗಲೀ ಸ್ತ್ರೀಯಾಗಲೀ, ಕ್ಷಮೆಯು ಅಲಂಕಾರ, ದೌರ್ಬಲ್ಯವಲ್ಲ! ನೀವು ಕ್ಷಮಿಸಿದ ಹಾಗೆ ಬೇರೆಯವರು ಕ್ಷಮಿಸೋದು ಸುಲಭವಲ್ಲ ಎಂದು ಮಕ್ಕಳನ್ನು ಹರಸಿ ಕಳಿಸಿದ, ತಾನು ಮುಂದಿನ ಆಲೋಚನೆಗೆ ತೊಡಗಿದ.
ಕುಶನಾಭ ತನ್ನ ಮಂತ್ರಿಯನ್ನು ಕರೆದು ಅವಲೋಕಿಸುತ್ತಾನೆ.. ಈ ದೋಷವನ್ನು ಯಾರಿಗೆ ಪರಿಹಾರಮಾಡಲು ಸಾಧ್ಯವೋ ಅವರಿಗೆ ಈ ಮಕ್ಕಳನ್ನು ಕೊಟ್ಟು ಮದುವೆ ಮಾಡಬೇಕು ಎಂದು ನಿರ್ಧರಿಸಿ ಹುಡುಕತೊಡಗಿದ.
ಕಾಂಪಿಲ್ಯನಗರಿಯ ಬ್ರಹ್ಷದತ್ತರಾಜ, ಚೂಲಿಯ ಮಾನಸ ಪುತ್ರ, ಸೋಮದೆಯ ಮಗ ಬ್ರಹ್ಮದತ್ತನೇ ಸರಿಯಾದ ವ್ಯಕ್ತಿ ಎಂದು ಕುಶನಾಭ ನಿರ್ಧರಿಸಿ ಅವನ ನೂರು ಹೆಣ್ಣುಮಕ್ಕಳನ್ನು ಬ್ರಹ್ಮದತ್ತನಿಗೆ ಧಾರೆ ಎರೆದ.
ಪಾಣಿಗ್ರಹಣದ ಸಮಯದಲ್ಲಿ, ಬ್ರಹ್ಮದತ್ತನ ಸ್ಪರ್ಶ ಮಾತ್ರದಿಂದಲೇ ಆ ಹೆಣ್ಣುಮಕ್ಕಳು ಮೊದಲಿನಂತಾದರು. ನೂರೂ ಜನರ ಕುಬ್ಜತ್ವವನ್ನು ನಿವಾರಿಸಿದ
ಯಾರ ಬದುಕಿನಲ್ಲಿ ಮಹಾಪುರುಷರ ಪ್ರವೇಶ ಆಗುತ್ತದೋ ಅವರ ಬದುಕಿನ ಡೊಂಕು ಪರಿಹಾರ ಆಗುತ್ತದೆ - ಶ್ರೀಸೂಕ್ತಿ
ಈ ನೂರು ಜನ ಹೆಣ್ಣುಮಕ್ಕಳು ವಿಶ್ವಾಮಿತ್ರರ ಅತ್ತೆಯಂದಿರು, ಕುಶ ವಿಶ್ವಾಮಿತ್ರರ ಮುತ್ತಜ್ಜ, ಕುಶನಾಭ ಅಜ್ಜ...
ಹೆಣ್ಣುಮಕ್ಕಳ ಮದುವೆಯ ನಂತರ ಕುಶನಾಭ ಪುತ್ರ ಸಂತತಿಗಾಗಿ ಪುತ್ರಕಾಮೇಷ್ಠಿ ಯಾಗ ಮಾಡಿದ.
ಕುಶನು ಬ್ರಹ್ಮನ ಕಡೆ ಹೋಗುವಾಗ ಕುಶನಾಭನಿಗೆ ಹರಸಿ, ಗಾದಿ ಎಂಬ ಪುತ್ರನ ಸಂತತಿ ಆಗುತ್ತದೆ... ಈ ಗಾದಿ ಯಾರು ಅಂದರೆ ವಿಶ್ವಾಮಿತ್ರರ ತಂದೆ..
ತನ್ನ ತಂದೆ ಗಾದಿ, ಕುಶ ವಂಶದವನು ನಾನು ಕೌಶಿಕ.. ಎಂದು ವಿಶ್ವಾಮಿತ್ರರು ಹೇಳಿದರು.
ಕೌಶಿಕನಿಗೆ ಒಬ್ಬಳು ಅಕ್ಕ ಇರ್ತಾಳೆ, ಕೌಶಿಕಿ (ಸತ್ಯವತಿ)... ಕೌಶಿಕಿಯ ಪತಿ ಋಷೀಕರು ದೇಹತ್ಯಾಗ ಮಾಡಿ ಸ್ವರ್ಗ ಸೇರಿದರೆ, ಕೌಶಿಕೆ ಸಶರೀರಳಾಗಿ ಸ್ವರ್ಗ ಸೇರ್ತಾಳೆ... ಆಮೇಲೆ..
"ಕೆಲಕಾಲದ ಬಳಿಕ ಕೌಶಿಕಿ ನದಿಯಾಗಿ ಲೋಕದ ಹಿತಕ್ಕಾಗಿ ತಿರುಗಿ ಭೂಮಿಗೆ ಬಂದಳು (ಹಿಮಾಲಯದ ಪರಿಸರದಲ್ಲಿರತಕ್ಕಂತಹಾ ನದಿ). ದಿವ್ಯ, ಪುಣ್ಯೋದಕವಾದ ನದಿಯಾಕೆ.
ಅದೇ ಕಾರಣಕ್ಕೆ, ನಾನು ಹಿಮಾಲಯಕ್ಕೆ ಆಗಾಗ ಹೋಗಿ ತಪಸ್ಸು ಮಾಡುತ್ತೇನೆ, ಅಕ್ಕನ ಮೇಲಿನ ಪ್ರೀತಿಯಿಂದಾಗಿ ಕೌಶಿಕಿ ನದಿ ತೀರಕ್ಕೆ ಹೋಗಿ ವಾಸ ಮಾಡುತ್ತೇನೆ, ಇದು ನನ್ನ ವಂಶದ ಚರಿತ್ರೆ" ಎಂದರು ವಿಶ್ವಾಮಿತ್ರರು.
ಅಷ್ಟುಹೊತ್ತಿಗೆ ಅರ್ಧ ರಾತ್ರಿಯಾಗಿತ್ತು, "ಈಗ ನೀನು ವಿಶ್ರಾಂತಿ ಮಾಡು, ನಿನಗೆ ಮಂಗಲವಾಗಲಿ" ಎಂದರು ವಿಶ್ವಾಮಿತ್ರರು.
ಮರಗಿಡಗಳೆಲ್ಲ ನಿಶ್ಚಲವಾಗಿವೆ, ಪ್ರಾಣಿಪಕ್ಷಿಗಳೆಲ್ಲ ತಮ್ಮ ನೆಲೆಯನ್ನು ಸೇರಿವೆ, ಕತ್ತಲನ್ನು ದಿಕ್ಕುಗಳಿಗೆಲ್ಲ ಹಚ್ಚಲಾಗಿದೆ, ಸಂಧ್ಯಾಕಾಲ ನಮಗೆ ಗೊತ್ತಾಗದಂತೆ ಕಳೆದುಹೋಗಿವೆ, ಆಕಾಶದ ತುಂಬೆಲ್ಲ ಭಗವಂತನ ಕಣ್ಣುಗಳು-ನಕ್ಷತ್ರಗಳು, ಆಕಾಶದಲ್ಲೆಲ್ಲ ದೀಪೋತ್ಸವ. ಜಗತ್ತಿನ ಕತ್ತಲನ್ನೆಲ್ಲ ಪರಿಹಾರ ಮಾಡುತ್ತಾ, ಜೀವಿಗಳ ಮನವನ್ನು ಆಹ್ಲಾದಗೊಳಿಸುತ್ತಾ ಚಂದ್ರನ ಉದಯ ಆಗುತ್ತಿದೆ. ಇನ್ನು ಸ್ವಲ್ಪಹೊತ್ತಿನಲ್ಲಿ ಯಕ್ಷರಾಕ್ಷಸರು, ಹಸಿಮಾಂಸ ತಿನ್ನುವಂತಹ ಜೀವಿಗಳು ಓಡಾಡುತ್ತವೆ, ಎಂದು ಹೇಳಿ ವಿಶ್ವಾಮಿತ್ರರು ವಿರಮಿಸಿದರು.. ಆಗ ಋಷಿಗಳೆಲ್ಲ ಸಾಧು ಸಾಧು ಸಾಧು ಎಂದರಂತೆ...
ಎಲ್ಲರೂ ವಿಶ್ರಮಿಸುತ್ತಾರೆ...
ಬೆಳಗಾಯಿತು, ವಿಶ್ವಾಮಿತ್ರರು ರಾಮನನ್ನು ಎಬ್ಬಿಸಿದರು..
ಸ್ನಾನಾದಿ ಕರ್ತವ್ಯಗಳನ್ನು ಮಾಡಿ.. ಈ ಅಗಾಧವಾದ ಶೋಣಾ ನದಿಯನ್ನು ದಾಟುವುದು ಹೇಗೆ ಗುರುಗಳೇ ಎಂದು ರಾಮ ಕೇಳಿದಾಗ, ವಿಶ್ವಾಮಿತ್ರರು ದಾರಿ ತೋರಿಸುತ್ತಾರೆ.
ದೂರ ಪ್ರಯಾಣ ಮಾಡಿ, ಸಂಜೆಯ ವೇಳೆ ಇನ್ನೊಂದು ನದಿಯ ಬಳಿ ಬಂದರು..ಆಕೆ ಗಂಗೆ. ದೂರದಿಂದಲೇ ಜಾಹ್ನವಿ(ಗಂಗೆ)ಯನ್ನು ಕಂಡರು, ಪುಣ್ಯನದಿ ಅದು.. ನೋಡುತ್ತಲೇ ಋಷಿಗಳೆಲ್ಲ ಸಂತೋಷಗೊಂಡರು... ಹಂಸಸಾರಸಗಳು ವಿಹರಿಸುತ್ತವೆ... ರಾಮನಿಗೆ ಸಂತೋಷವಾಯಿತು. ಅಲ್ಲೇ ವಾಸ್ತವ್ಯ ಎಂದು ನಿರ್ಧರಿಸಿ, ಸ್ನಾನಾದಿ ಅನುಷ್ಠಾನಗಳನ್ನು ಪೂರೈಸಿ ಕುಳಿತುಕೊಳ್ಳುತ್ತಾರೆ.
ಈ ಗಂಗೆಯ ಬಗ್ಗೆ ತಿಳಿಯಬೇಕು, ಇವಳಿಗೆ ಯಾಕೆ ಮೂರು ದಾರಿ, ಗಂಗೆಯ ಉಗಮ, ಬೆಳೆದಿದ್ದು ಹೇಗೆ ಎಂಬುದನ್ನು ತಿಳಿಸಿ ಗುರುಗಳೇ ಎಂದು ಕೇಳಿದ...
ವಿಶ್ವಾಮಿತ್ರರು ಹೇಳ್ತಾರೆ, ಹಿಮಾಲಯನ ಹೆಂಡತಿ ಮೇನ(ಮೇರು ಪರ್ವತದ ಮಗಳು), ಅವರಿಗಿಬ್ಬರು ಮಕ್ಕಳು - ದೊಡ್ಡವಳು ಗಂಗಾ, ಚಿಕ್ಕವಳು ಉಮಾ(ಪಾರ್ವತಿ-ಪರ್ವತನ ಮಗಳು)
ಗಂಗೆಯನ್ನು ದೇವತೆಗಳು ದೇವತಾಕಾರ್ಯಗಳಿಗೆ ಸ್ವೀಕರಿಸಿದರು.
ಉಮಾ, ರುದ್ರನನ್ನು ತಪಸ್ಸಿನ ಮೂಲಕ ಪಡೆದುಕೊಂಡಳು..
ಪುನಃ ರಾಮ ಕೇಳ್ತಾನೆ, ನನಗೆ ದೊಡ್ಡಮಗಳು ಗಂಗೆಯ ವಿವರ ಬೇಕು ಅಂತ ಕೇಳ್ತಾನೆ....
ಆದರೆ ವಿಶ್ವಾಮಿತ್ರರು ಮತ್ತೆ ಪಾರ್ವತಿಯ ಬಗ್ಗೆ ಹೇಳ್ತಾರೆ, ಶಿವನು ಶಿವೆಯನ್ನು ವರಿಸಿ, ಮಹಾಶಕ್ತಿಗಳು ಸೇರಿ ಅನಂತಕಾಲ ಸಂದಿದ್ದವು..ದೇವತೆಗಳು ಚಿಂತಿತರಾದರು, ಈ ಎರಡು ಮಹಾಶಕ್ತಿಗಳು ಸೇರಿದರೆ ಬರುವ ಮೂರನೆ ಶಕ್ತಿ ಏನಿರಬಹುದು? ಅವರನ್ನು ಸುಧಾರಿಸುವುದು ಹೇಗೆ ಎಂದು..! ದೇವತೆಗಳು ಶಿವನಲ್ಲಿ ಪ್ರಾರ್ಥಿಸಿದರು, ಆಗ ಶಿವ ತನ್ನ ತೇಜಸ್ಸನ್ನು ಭೂಮಿಯಲ್ಲಿ ಇಟ್ಟ, ಭೂಮಿ ತುಂಬಿಹೋಯಿತು, ಆಗಲಿಲ್ಲ ಭೂಮಿಗೆ...ಆಗ ದೇವತೆಗಳು ಅಗ್ನಿದೇವನಲ್ಲಿ, ನೀನು ವಾಯುವಿನ ಜೊತೆ ಸೇರಿ ಆ ತೇಜಸ್ಸಿನ ಒಳಗೂ ಹೋರಗೂ ಆವರಿಸು ಎಂದ,
ಅಗ್ನಿದೇವ ಹಾಗೇ ಮಾಡಿದಾಗ, ಉದ್ಭವಾಗಿದ್ದು ಆ ಶ್ವೇತಪರ್ವತ.. ಅಲ್ಲಿ ಹುಟ್ಟಿದ್ದು ಕಾರ್ತಿಕೇಯ...
ದೇವತೆಗಳಿಗೆ ಸಂತೋಷವಾಗಿ, ಶಿವ-ಉಮೆಯರನ್ನು ಪೂಜಿಸಿದರು... ಪಾರ್ವತಿಗೆ ಕೋಪ.. ಶಿವಶಿವೆಯರ ಮಧ್ಯದಲ್ಲಿ ಬರುವುದಕ್ಕೆ ನೀವು ಯಾರು, ನಿಮಗೇನು ಗೊತ್ತು ಅಂತ ಕೇಳ್ತಾಳೆ... ನನಗೆ ಅಪ್ರಿಯವನ್ನು ಮಾಡಿದ ಫಲ ನಿಮಗೆಲ್ಲ ಫಲ ಬರಲಿ... ಶಪಿಸಿದಳು ಪಾರ್ವತಿ! ಮಹಾಮಂಗಲ ಸಂತಾನಕ್ಕಾಗಿ ನಾನು ನನ್ನ ಪತಿಯಲ್ಲಿ ಸೇರಿದರೆ ನೀವು ಬಂದು ಅಡ್ಡಿಪಡಿಸಿದಿರಾ.... ನಿಮಗೆ ನಿಮ್ಮ ಸತಿಯರಲ್ಲಿ ಮಕ್ಕಳಾಗದಿರಲಿ, ನನ್ನ ಸ್ಥಿತಿಯೇ ನಿಮಗೂ ಬರಲಿ.... ಜೊತೆಗೆ.. ಭೂಮಿಯನ್ನು ಕೂಡಾ ಶಪಿಸುತ್ತಾಳೆ, ನಿನಗೆ ದಿನಕ್ಕೊಬ್ಬ ಗಂಡ ಅಂತಾಗಲಿ, ನೀನೂ ಒಂದೇ ರೂಪದಲ್ಲಿ ಇರುವುದಿಲ್ಲ (ಅಂದಿನಿಂದ ಭೂಪತಿಗಳ ಕಾಟ ಭೂಮಿಗೆ..) ಮಕ್ಕಳು ನಿನಗೆ ಎಷ್ಟೇ ಇರಬಹುದು, ಆದರೆ ನನ್ನ ಕ್ರೋಧದ ಫಲವಾಗಿ ನಿನ್ನ ಮಕ್ಕಳಿಂದ ನಿನಗೆ ಸುಖವೇ ಇಲ್ಲದಂತಾಗಲಿ... (ಸತ್ಯವಾಗಿದೆ ಅದು! ಇಂದಿನವರೆಗೂ ಭೂತಾಯಿಯ ಮಕ್ಕಳು ಭೂಮಿಗೆ ಕಷ್ಟವನ್ನು, ದುಃಖವನ್ನೇ ಕೊಟ್ಟಿದ್ದು, ಕೊಡುತ್ತಾನೇ ಇದ್ದಾರೆ)
ದೇವತೆಗಳಿಗೆ, ಭೂಮಿಗೆ ತಮ್ಮ ತಪ್ಪಿನ ಅರಿವಾಗಿ ತಲೆ ತಗ್ಗಿಸಿ ನಿಂತರು...
ಪರಶಿವ, ಶಿವೆಯನ್ನು ಕರೆದುಕೊಂಡು ಹೊರಟ.. ದೇವಿಯನ್ನು ತಂಪು ಮಾಡುವ ಉದ್ದೇಶದಿಂದ ತಂಪಾದ ಹಿಮಾಲಯದ ಶಿಖರಕ್ಕೆ ಹೋಗಿ ಪತ್ನಿಯನ್ನು ಪಕ್ಕದಲ್ಲೇ ಕೂರಿಸಿಕೊಂಡು ತಪಸ್ಸು ಮಾಡುತ್ತಾನೆ...
ಪಾರ್ವತಿಯ ದುಃಖ, ಕೋಪ, ನೋವು ಪರಿಹಾರವಾಗಬೇಕು, ಹೇಗೆ? ಅದು ಗಂಗೆಯ ಮೂಲಕ ಪರಿಹಾರವಾಯಿತಾ? ನಾಳೆಯ ಪ್ರವಚನದಲ್ಲಿ ನೋಡೋಣ.
#DhaaraRaamayan

No comments:
Post a Comment
Please leave your comments here.....