#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ
ಆಯುಧದ ಉಪಯೋಗ ಏನು?
ಕತ್ತಿ, ಗದೆ, ಧನುರ್ಬಾಣ, ಇವುಗಳ ಉಪಯೋಗ ಏನು?
ಎದುರಿಗಿರುವವನ ಪ್ರಾಣ ಹರಣ, ಕಡಿಯವುದು, ಬಡಿಯುವುದು, ಚಚ್ಚುವುದು...ಇವುಗಳಿಗಾಗಿ ಎಂದು ತೋರುತ್ತದೆ.
ಇವು ಮೇಲ್ನೋಟಕ್ಕೆ ಕಾಣುತ್ತವೆ, ಆದರೆ ಇವು ಯಾಕೆ ಆವಿಷ್ಕಾರಗೊಂಡವು ಅಂದರೆ... ಜೀವ ಹಾನಿಗಲ್ಲ, ಜೀವ ಉಳಿಸಲು.
ಅಸ್ತ್ರ : ಅಸು ಎಂಬ ಶಬ್ದಕ್ಕೆ - ಎಸೆಯುವುದು, ಅಪ್ಪಳಿಸುವುದು ಎಂದರ್ಥ. ತ್ರ ಅಂದರೆ - ರಕ್ಷಿಸುವುದು.. ಅಸ್ತ್ರ ಎಂಬುದಕ್ಕೆ ಅರ್ಥವೇ ರಕ್ಷಣೆ..
ಕ್ಷತ್ರ ಶಬ್ದದ ಅರ್ಥ - ಆಪತ್ತು ಬಂದಾಗ ಕಾಪಾಡುತ್ತದೆ ಎಂಬುದು. ಹಾಗಾಗಿ ಇವುಗಳ(ಅಸ್ತ್ರಗಳ) ಮೂಲೋದ್ದೇಶ - ರಕ್ಷಣೆ
ಏನನ್ನು ಕಾಪಾಡುವುದು ಅಂದರೆ - ಧರ್ಮವನ್ನು ಕಾಪಾಡುವುದು; ಧರ್ಮ ಯಾರಲ್ಲಿರುವುದೋ ಅವರನ್ನು, ಧರ್ಮ ಎಲ್ಲಿದೆಯೋ ಅದನ್ನು ಕಾಪಾಡುವುದು. ಧರ್ಮರಕ್ಷಣೆಗಾಗಿ! ಎಲ್ಲಿ ಧರ್ಮವಿದೆಯೋ, ಆ ವ್ಯಕ್ತಿಯನ್ನು ರಕ್ಷಿಸಿದರೆ ಧರ್ಮವನ್ನೇ ರಕ್ಷಿಸಿದಂತೆ.
ಲಂಕೆಯಲ್ಲಿರುವ ಸೀತೆಯನ್ನು ಕಾಪಾಡುವುದು ಅಂದರೆ ಧರ್ಮವನ್ನು ಕಾಪಾಡುವುದು. ಆಕೆಯ ಪಾತಿವೃತ್ಯ ಧರ್ಮವನ್ನು ರಾವಣನಿಂದ ಕಾಪಾಡುವುದು. ಧರ್ಮವನ್ನು ಅಧರ್ಮದಿಂದ ಕಾಪಾಡುವುದು..
ಧರ್ಮಯುದ್ಧದಲ್ಲಿ ಸಾವು ಬಂತೆಂದರೆ ಅದು ಬದುಕಿಗಿಂತ ಶ್ರೇಷ್ಠ - ಶ್ರೀಸೂಕ್ತಿ
ಅಸ್ತ್ರದ ಉಲ್ಲೇಖ ಯಾಕೆ ಅಂದರೆ, ಪ್ರಪಂಚದ ಎಲ್ಲ ದಿವ್ಯಾಸ್ತ್ರಗಳನ್ನು ರಾಮನಿಗೆ ವಿಶ್ವಾಮಿತ್ರರು ಕೊಡಲು ಮುಂದಾಗುತ್ತಿದ್ದಾರೆ.
ಸಕಲ ಶಸ್ತ್ರಗಳನ್ನು ಬಳಸುವುದು ರಾಮನಿಗೆ ಗೊತ್ತು, ಶಸ್ತ್ರ ಅಂದರೆ ಅದು ಭೌತಿಕ ಮಾತ್ರ. ಸಕಲ ಶಸ್ತ್ರ ಪ್ರವೀಣ ಅವನು, ಈಗ ಅವನನ್ನು ಶಸ್ತ್ರ ಪ್ರವೀಣನನ್ನಾಗಿ ಮಾಡಬೇಕಿದೆ.
ಅಸ್ತ್ರ ಅಂದರೆ ಶಸ್ತ್ರಕ್ಕಿಂತ ಅದೆಷ್ಟೋ ಮುಂದಿರುವುದು, ಅಸ್ತ್ರ ಅಂದರೆ ಶಸ್ತ್ರದಲ್ಲಿ ಅದೇನೋ ದೈವೀಕ ಚೈತನ್ಯವಿರುವುದು.
ಶಸ್ತ್ರಕ್ಕೆ ಗುರಿ ಬೇಕು, ಅಸ್ತ್ರಕ್ಕೆ ಗುರಿ ಬೇಡ.. ಅಸ್ತ್ರ ಪ್ರಯೋಗವೆಂದರೆ ಅದರ ಹಿಂದೆ ಆಯಾ ದೇವತೆಗಳು ಕೆಲಸ ಮಾಡುವಂತಹದ್ದು, ಆಗ ಬಾಣಕ್ಕೇ ಜೀವ! ಬಾಣಕ್ಕಿಂತ ಎಷ್ಟೋ ಮುಂದಿನ ರೂಪವದು.
ಅಂತಹಾ ಅಸ್ತ್ರಗಳನ್ನು ವಿಶ್ವಾಮಿತ್ರರು ರಾಮನಿಗೆ ಕೊಡಲಿಕ್ಕಿದ್ದಾರೆ.. ರಾತ್ರಿ ಕಳೆದ ಮೇಲೆ ಬೆಳಿಗ್ಗೆ...
ರಾಮನಂಥವರ ಬಾಣ ಪ್ರಯೋಗವಾದರೆ ಜೀವಕ್ಕೆ ಹಿತವದು; ಜೀವದ ಪಾಪದ ಪರಿಹಾರ ಮತ್ತು ಪಾಪ ಪಂಜರದಿಂದ ಜೀವಕ್ಕೆ ಬಿಡುಗಡೆಯಾಗಿ ಉತ್ತಮ ಗತಿಯನ್ನು ಹೊಂದಲೊಂದು ಅವಕಾಶವದು! ಬಾಣವೆಂಬ ಶಸ್ತ್ರದಿಂದ ಚಿಕಿತ್ಸೆಮಾಡಿ ಆ ಜೀವವನ್ನು ಪಾಪ ಪಂಜರದಿಂದ ಬೇರೆಮಾಡಿ, ಬಿಡುಗಡೆಗೊಳಿಸಿ ಉತ್ತಮ ಗತಿಗೆ ಕಳುಹಿಸಿಕೊಂಡುವಂಥದ್ದು! ಅದು ಜೀವದ ಮೇಲೆ ಮಾಡುವಂತಹಾ ನಿಜವಾದ ಶಸ್ತ್ರಚಿಕಿತ್ಸೆ..
ಬೆಳಿಗ್ಗೆ ಎದ್ದು ಸ್ನಾನಾದಿ ಅನುಷ್ಠಾನಗಳನ್ನು ಮುಗಿಸಿ ರಾಮನನ್ನು ಕರೆದು "ನೀನು ಮಾಡಿದ ಧರ್ಮಕಾರ್ಯದಿಂದ ಸಂತೋಷವಾಗಿದೆ, ಇದಕ್ಕೆ ಬಹುಮಾನವಾಗಿ ಮೂಜಗದಲ್ಲಿರುವ ಸರ್ವಾಸ್ತ್ರಗಳನ್ನೂ ನಿನಗೆ ಕೊಡುತ್ತೇನೆ. ಇವುಗಳ ಫಲವೆಂದರೆ ದೇವತೆಗಳು, ಅಸುರರು, ಗಂಧರ್ವರು, ಉರಗರು, ಹೀಗೇ ಯಾರೇ ನಿನ್ನೆದುರು ಬಂದರೂ ನೀನು ಜಯಿಸಬಲ್ಲೆ, ವಶಕ್ಕೆ ತರಬಲ್ಲೆ" ಎಂದು ಹೇಳಿ ದಿವ್ಯಾಸ್ತ್ರಗಳನ್ನು ಕೊಟ್ಟರು.
ದಿವ್ಯವಾದ ದಂಡಚಕ್ರ, ಧರ್ಮಚಕ್ರ, ಕಾಲಚಕ್ರ, ವಿಷ್ಣುಚಕ್ರ, ಐಂದ್ರಾಸ್ತ್ರ, ವಜ್ರಾಸ್ತ್ರ, ಶೂಲಶ್ರೇಷ್ಠ, ಬ್ರಹ್ಮಶಿರೋಸ್ತ್ರ, ಐಶೀಕಾಸ್ತ್ರ ಹಾಗೇ ಬ್ರಹ್ಮಾಸ್ತ್ರ, ಗದೆಗಳು - ಮೋದಕೀ ಮತ್ತು ಶಿಖರೀ, ಧರ್ಮಪಾಶಾ, ಕಾಲಪಾಶಾ, ವಾರುಣಪಾಶಾ, ಇಬ್ಬಗೆಯ ಸಿಡಿಲುಗಳು - ಶುಷ್ಕ ಮತ್ತು ಆರ್ದ್ರ, ಪಿನಾಕಾಸ್ತ್ರ, ನಾರಾಯಣಾಸ್ತ್ರ, ಹಯಶಿರಸ್ಸು, ಕ್ರೌಂಚಾಸ್ತ್ರ, ವಿಷ್ಣು ಮತ್ತು ರುದ್ರ ಶಕ್ತಾಯುಧಗಳು, ರಾಕ್ಷಸ ಸಂಹಾರಕ್ಕೆ - ಕಂಕಾಲ, ಮುಸಲ, ಕಾಪಾಲ, ಕಂಕಣ, ವಿದ್ಯಾಧರರಿಗೆ ಸಂಬಂಧಿಸಿದ ಖಡ್ಗರತ್ನ ನಂದನ, ಮಾನವ ಎಂಬ ಹೆಸರಿನ ಗಾಂಧರ್ವಾಸ್ತ್ರ, ಪ್ರಸ್ವಾಪನಾಸ್ತ್ರ, ಪ್ರಶಮನಾಸ್ತ್ರ, ಸೌರಾಸ್ತ್ರ, ಮಳೆ ಮತ್ತು ಒಣಗಿಸಲು ಸಾಧ್ಯಮಾಡುವ ಅಸ್ತ್ರ, ಸಂತಾಪನಾಸ್ತ್ರ, ವಿಲಾಪನಾಸ್ತ್ರ, ಅಮಲಾಸ್ತ್ರ, ಕಾಮಾಸ್ತ್ರ, ಮೋಹನವೆಂಬ ಹೆಸರಿನ ಪೈಶಾಚಾಸ್ತ್ರ, ತಾಮಸ ಎಂಬ ಅಸ್ತ್ರ, ಸೌಮನ, ಸಂವರ್ತ, ಮೌಸಲ, ಸತ್ಯ-ಮಾಯಾಧರ ಎಂಬ ಅಸ್ತ್ರಗಳು, ಶತ್ರುವಿನ ತೇಜಸ್ಸನ್ನು ಸೆಳೆಯುವ ಅಸ್ತ್ರ, ಶಿಶಿರಾಸ್ತ್ರ, ಹೀಗೆ ಬಗೆಬಗೆಯ ಅಸ್ತ್ರಗಳನ್ನು ಸ್ವೀಕರಿಸು ಎಂದು ವಿಶ್ವಾಮಿತ್ರರು ಅನುಗ್ರಹಿಸುತ್ತಾರೆ. ರಾಮ ಸ್ವೀಕರಿಸಿದ. ಇಷ್ಟು ಅಸ್ತ್ರಗಳ ಸಂಗ್ರಹ ದೇವತೆಗಳಲ್ಲೂ ಇಲ್ಲವಂತೆ!
ಮುಂಬರುವ ಮಹತ್ಕಾರ್ಯಗಳಿಗೆ ಈ ಅಸ್ತ್ರಗಳು ಬೇಕಾಗುತ್ತವೆ, ಇದು ವಿಶ್ವಾಮಿತ್ರರಿಗೆ, ವಸಿಷ್ಠರಿಗೆ ಗೊತ್ತು... ದಶರಥನಿಗೆ ಏನು ಗೊತ್ತು..?
ಅಸ್ತ್ರದೇವತೆಗಳು ಪ್ರಕಟಗೊಂಡರು, ರಾಮನ ಮುಂದೆ ಬಂದು ತಲೆಬಾಗಿ ಕೈಮುಗಿದು, "ಕೇಳಿದ್ದನ್ನು ನಡೆಸಿಕೊಡುವ ನಾವು ಇನ್ನು ಮುಂದೆ ನಿನ್ನ ಕಿಂಕರರು ರಾಮ, ನೀನು ಏನೇನು ಬಯಸುತ್ತೀಯೋ ಅದನ್ನೆಲ್ಲ ನಾವು ಮಾಡುತ್ತೇವೆ, ನಿನ್ನ ಸಂಕಲ್ಪಕ್ಕೆ ನಾವು ವಶರು, ನಿನ್ನ ಇಚ್ಛೆಗೆ ನಾವು ಅಧೀನರು" ಎಂದವು
ಆ ಚಿಕ್ಕ ರಾಮನ ಪ್ರಬುದ್ಧತೆಯೆಷ್ಟಿತ್ತೆಂದರೆ, ಪ್ರಸನ್ನಮಾನಸನಾಗಿ (ಚಾಂಚಲ್ಯವಿಲ್ಲ-ಗಾಂಭೀರ್ಯದಲ್ಲಿ) ಅಸ್ತ್ರದೇವತೆಗಳನ್ನು ಹಸ್ತದಿಂದ ಸ್ಪರ್ಶ ಮಾಡಿ,"ನನ್ನ ಮನಸ್ಸಿನಲ್ಲಿ ವಾಸಿಸಿಬಿಡಿ, ಬೇಕಾದಾಗ ಕರೆಯುವೆ" ಎಂದನಂತೆ!
ಯಾವುದೇ ದೊಡ್ಡ ಸಂಪತ್ತು, ಅದರ ಆಗಮನಕ್ಕಿಂತ, ವಿವೇಚನೆಯಿಂದ ವಿನಿಯೋಗ ಮುಖ್ಯ! ವಿನಿಯೋಗದಲ್ಲಿ ವಿವೇಚನೆಯಿಲ್ಲದಿರೆ ಯಾವುದೇ ಸಂಪತ್ತು ಶಾಪ! - ಶ್ರೀಸೂಕ್ತಿ
ಅಸ್ತ್ರಗಳೆಂದರೆ ರಾಮನದೇ ಅಂಶಗಳು; ವಿಶ್ವಾಮಿತ್ರರಿಂದ ಎಲ್ಲಾ ಅಸ್ತ್ರಗಳನ್ನು ಸ್ವೀಕರಿಸಿದ ರಾಮನನ್ನು, "ತನ್ನದೇ ಕಿರಣಗಳನ್ನು ಸ್ವೀಕರಿಸಿ ರಾಮಸೂರ್ಯ ಪ್ರಜ್ವಲಿಸಿದ" ಎಂದೇ ಹೇಳಬಹುದು
ವಿಶ್ವಾಮಿತ್ರರಿಗೆ ರಾಮ:
"ಗುರುಗಳೇ, ಅಸ್ತ್ರಗಳನ್ನು ಸ್ವೀಕಾರ ಮಾಡಿದ್ದೇನೆ, ದೇವತಾಸುರರು ನನ್ನನ್ನು ಸೋಲಿಸಲಾಗದ ಶಕ್ತಿ ನಿಮ್ಮ ಕೃಪೆಯಿಂದ ಬಂದಿದೆ...
ಆದ್ರೆ ಈ ಅಸ್ತ್ರಗಳನ್ನು ಉಪಸಂಹಾರ ಮಾಡುವುದನ್ನೂ ನನಗೆ ತಿಳಿದಿರಬೇಕಲ್ಲವೇ, ಉಪಸಂಹಾರವನ್ನು ತಿಳಿಸಿಕೊಡಿ" ಎಂದು ರಾಮ ಹೇಳುತ್ತಿದ್ದಂತೆ, ಮೊದಲೇ ಸಿದ್ಧರಾಗಿದ್ದ ವಿಶ್ವಾಮಿತ್ರರು, ಎಲ್ಲ ಅಸ್ತ್ರಗಳ ಉಪಸಂಹಾರಗಳನ್ನು ಹೇಳಿಕೊಡುತ್ತಾರೆ..
ರಾಮ ಎಲ್ಲವನ್ನೂ ಸ್ವೀಕರಿಸುತ್ತಾನೆ.
ಆ ಅಸ್ತ್ರಗಳು ದಿವ್ಯಶರೀರಗಳು, ಉಪಸಂಹಾರದ ಬೋಧೆಯಾಗುತ್ತಿದ್ದಂತೆ ಪ್ರಕಟಗೊಂಡವು! "ಹೇ ನರಶಾರ್ದೂಲ, ನಿನ್ನ ಕಿಂಕರರು ನಾವು. ಏನಪ್ಪಣೆ? ಎಂದು ಕೇಳಿದವು. "ಮನಸ್ಸಿನಲ್ಲಿರಿ, ಕಾರ್ಯಬಂದಾಗ ನೆರವಾಗಿ" ಎಂದನಂತೆ ರಾಮ. "ಹೋಗಿ ಬರುತ್ತೇವೆ" ಎಂದು ಹೇಳಿ, ರಾಮನನ್ನು ಸುತ್ತುಹಾಕಿ ಹೇಗೆ ಬಂದವೋ ಹಾಗೇ ಹೊರಟುಹೋದವು ಅಸ್ತ್ರಗಳು...
ವಿಶ್ವಾಮಿತ್ರರ, ರಾಮಲಕ್ಷ್ಮಣರ ಪಯಣ ಮುಂದುವರೆಯಿತು, ಇನ್ನೊಂದು ವನವನ್ನು ಪ್ರವೇಶ ಮಾಡುತ್ತಾರೆ, ರಾಮ ಮಧುರವಾಗಿ ಹೇಳ್ತಾನೆ " ಗುರುಗಳೇ ಮುಂದೆ ಕಾಣುವ ಪರ್ವತದ ಅನತಿ ದೂರದಲ್ಲಿ ಮೋಡಗಳ ಹಿಂದೆ ಹೊಳೆಯುವ ವೃಕ್ಷ ಸಾಲುಗಳು ಯಾವುದು? ಈ ಕಾಡನ್ನು ದೂರದಿಂದ ನೋಡುವಾಗಲೇ ಬಲವಾದ ಕುತೂಹಲ, ಹಿತ ಎನ್ನಿಸುತ್ತಿದೆ, ಸೌಮ್ಯ ಮೃಗಗಳಿಂದ ಕೂಡಿದೆ, ಅತೀವ ಮನೋಹರ, ಸುಖಪ್ರದ.. ಈ ಪರಿಸರ ಇದು ಸುಖ, ಇದು ಹಿತ.. ಇದು ಯಾರ ಆಶ್ರಮ ಹೇಳಿ,ಭಗವಂತ.. ನಾವು ಬರಬೇಕಾದರೆ ಹೀಗೆ ಬಂದೆವಾ, ಇದೇ ಸಿದ್ಧಾಶ್ರಮವಾ, ನೀವು ಯಜ್ಞವನ್ನು ಮಾಡುವ, ರಾಕ್ಷಸರು ಉಪಟಳ ಮಾಡುವ, ನಾನು ರಾಕ್ಷಸರನ್ನು ವಧಿಸುವ ಆಶ್ರಮ ಇದೇನಾ, ನಾನು ಇದನ್ನ ತಿಳಿಯಬೇಕಾಗಿದೆ" ಎಂದು ರಾಮ ಹೇಳಿದಾಗ..
ವಿಶ್ವಾಮಿತ್ರರು ಮನಸ್ಸಲ್ಲೇ ಹೇಳ್ತಾರೆ 'ನಿನ್ನ ಪೂರ್ವಾಶ್ರಮ ಇದು, ನಿನ್ನ ತಪೋಭೂಮಿ ಇದು, ಜನ್ಮಾಂತರದ ನೆನಪದು' ಎಂದು, ಹೊರಗೆ ಹೇಳುವಂತಿಲ್ಲ ..
ವಿಶ್ವಾಮಿತ್ರರು ಹೇಳುತ್ತಾರೆ..
ರಾಮ, ಇಲ್ಲಿ ದೇವಶ್ರೇಷ್ಠರಾದ ವಿಷ್ಣುವು ಯುಗ ಯುಗಗಳ ಕಾಲ ತಪಸ್ಸು ಮಾಡಿದ್ದಾನೆ, ಇದು ವಾಮನನ ಪೂರ್ವಾಶ್ರಮ, ಸಿದ್ಧಾಶ್ರಮ ಎಂದು ಹೆಸರು, ಅವನ ಉದ್ದೇಶ ಸಿದ್ಧಿಸಿದ್ದರಿಂದ ಆ ಹೆಸರು..
ಪ್ರಹ್ಲಾದನ ಮೊಮ್ಮಗನಾದ ಬಲಿ, ದೇವತೆಗಳನ್ನು ಗೆದ್ದು ಲೋಕಾಧಿಪತಿ ಆದ.... ಅವನ ಹಿಂಬಾಲಕರು ವಿಪ್ಲವಕಾರರು, ಹಾಗಾಗಿ ಬಲಿ ಒಳ್ಳೇಯವನೇ ಆದರೂ ಲೋಕಕ್ಕೆ ಅಹಿತವೇ ಆಗಿತ್ತು. ದೇವತೆಗಳು ಬಲಿಯನ್ನು ಪಟ್ಟದಿಂದ ಇಳಿಸಲು ಕಾಯುತ್ತಿದ್ದರು...
ಬಲಿ ಯಜ್ಞ ಮಾಡುತ್ತಾನೆ, ಆಗ ದೇವತೆಗಳು ವಿಷ್ಣುವಿನಲ್ಲಿ ಪ್ರಾರ್ಥಿಸುತ್ತಾರೆ, ಬಲಿ ಯಜ್ಞವನ್ನು ಮಾಡುವಾಗ ಅಲ್ಲಿ ಯಾರು ಹೋಗಿ ಏನು ಕೇಳಿದರೂ ಅವನು ಕೊಡುತ್ತಾನೆ... ನಾನು ಹೇಗೆ ಹೋಗಲಿ ಎಂದು ವಿಷ್ಣು ಕೇಳುತ್ತಾನೆ, ಆಗ ದೇವತೆಗಳು "ಬ್ರಾಹ್ಮಣ ವಟುವಾಗಿ ಹೋಗಿ ಕೇಳು" ಎಂದು ಹೇಳಿದರು, ಆ ಕಡೆ ಅದಿತಿ-ಕಶ್ಯಪರ ತಪಸ್ಸು, 'ತಮ್ಮ ಮಗನಾಗಿ ಬರಬೇಕು, ಉಪೇಂದ್ರನಾಗಿ ಅವತರಿಸಬೇಕು,, ಇಲ್ಲಿಯೇ ತಪಸ್ಸು ಮಾಡು' ಎಂಬುದು...
ಇಬ್ಬರಿಗೂ ಅಸ್ತು ಎಂದ ವಿಷ್ಣು..
ಪರಂಜ್ಯೋತಿ ವಿಷ್ಣುವು ಅದಿತಿಯಲ್ಲಿ ಪುಟ್ಟ ಗಾತ್ರದಲ್ಲಿ ವಾಮನನಾಗಿ ಹುಟ್ಟಿಬಂದನು, ಬಲಿಯ ಯಜ್ಞಕ್ಕೆ ಹೋಗಿ, ಮೂರು ಹೆಜ್ಜೆಗಳನ್ನು ಕೇಳಿದನು.. ಇದರಿಂದ ಮೂರು ಲೋಕವು ಇಂದ್ರಾದಿ ದೇವತೆಗಳಿಗೆ ಸೇರಿತು.. ಮತ್ತೆ ತ್ರಿವಿಕ್ರಮನು ಬಲಿಯ ಮೇಲೆ ಪಾದ ಇಟ್ಟು ಪಾತಾಳಕ್ಕೆ ತಳ್ಳಿದ... ಬಲಿಯ ಯೋಗ ಅದು, ಪರಮಾತ್ಮನೇ ತಲೆಯ ಮೇಲೆ ಕಾಲಿಟ್ಟನು. ಮತ್ತುಳಿದ ರಾಕ್ಷಸರ ನಿಗ್ರಹ ಆಯ್ತು" ಎಂಬ ಕಥೆಯನ್ನು ಹೇಳಿ, ವಾಮನರು ಮೊದಲು ಇದ್ದ ಆಶ್ರಮ ಇದು, ಈ ಆಶ್ರಮ ಪ್ರವೇಶ ಮಾತ್ರದಿಂದಲೇ ಎಲ್ಲ ಶ್ರಮಗಳು ಪರಿಹಾರ ಆಗುತ್ತವೆ..
ವಾಮನನ ಮೇಲಿನ ಭಕ್ತಿ-ಪ್ರೀತಿಯಿಂದ ನಾನಿಲ್ಲಿ ಬಂದು ಉಳಿದುಕೊಂಡೆ ಎಂದರು ವಿಶ್ವಾಮಿತ್ರರು. ಮಹಾತ್ಮರು ಸುಮ್ಮನೆ ಬಂದು ಹೋಗುವುದಿಲ್ಲ, ಅವರಿದ್ದಲ್ಲಿ ಅವರ ಚೈತನ್ಯವಿದ್ದೇ ಇರುತ್ತದೆ! ವಾಮನರ ಮಹಾಚೈತನ್ಯ ಇದೆ ಅಲ್ಲಿ...
ಸಿದ್ಧಾಶ್ರಮವನ್ನು ಪ್ರವೇಶ ಮಾಡ್ತಾರೆ.. ಹೇಗೆ ಅಂದ್ರೆ... ಪುನರ್ವಸು ಜೋಡಿ ನಕ್ಷತ್ರಗಳ ಹಾಗೆ ರಾಮ ಲಕ್ಷ್ಮಣರು, ಚಂದ್ರನ ಹಾಗೆ ವಿಶ್ವಾಮಿತ್ರರು.
ಅಲ್ಲಿದ್ದ ಆಶ್ರಮವಾಸಿಗಳು, ಅವರನ್ನು ಆದರ ಸತ್ಕಾರಗಳಿಂದ ಬರಮಾಡಿಕೊಂಡರು...
ರಾಮಲಕ್ಷ್ಮಣರು ಕೈಮುಗಿದು ಕೇಳಿದರಂತೆ, "ಯಜ್ಞ ಶುರುಮಾಡೋಣವೇ, ಈಗಲೇ ಯಜ್ಞಾದೀಕ್ಷೆಯನ್ನು ತೊಡಿ..." ಎಂದು.
ಬಂದ ಕೆಲಸ ಮಾಡಲು ಅದೆಷ್ಟು ಉತ್ಸುಕತೆ. ರಾಮಲಕ್ಷ್ಮಣರು ಯಜ್ಞರಕ್ಷೆಗಾಗಿ ಧನಸ್ಸನ್ನು ಮೇಲೆತ್ತಿದ್ದಾರೆ, "ಇದೋ ನಾವು ಸಿದ್ಧ, ನಮ್ಮ ಕರ್ತವ್ಯ ಇದೆ" ಎಂಬ ಭಾವ.
ವಿಶ್ವಾಮಿತ್ರರೂ ತಡಮಾಡದೇ ಇಂದ್ರಿಯಗಳನ್ನು ಸಂಯಮ ಮಾಡಿ, ಅಂತರ್ಮುಖರಾಗಿ ದೀಕ್ಷಾ ಪ್ರವೇಶ ಮಾಡಿದರು.
ಬೆಳಿಗ್ಗೆ ವಿಶ್ವಾಮಿತ್ರರು ಅಗ್ನಿಹೋತ್ರ ಮುಗಿಸಿ ಕುಳಿತಿದ್ದಾರೆ, ರಾಮಲಕ್ಷ್ಮಣರು ಸ್ನಾನಜಪ ಮುಗಿಸಿ ಬಂದು ವಿಶ್ವಾಮಿತ್ರರಲ್ಲಿ ಕೇಳಿದರು "ಯಾವಾಗ ಬ್ರಹ್ಮನ್, ಯಾವಾಗ ನಾವು ಆ ರಾಕ್ಷಸರನ್ನು ವಧಿಸುವದು?"
ವಿಶ್ವಾಮಿತ್ರರು ಮಾತೇ ಆಡಲಿಲ್ಲ, ಪಕ್ಕದಲ್ಲಿದ್ದ ವಿಶ್ವಾಮಿತ್ರರ ಪರಿವಾರದವರು ಹೇಳಿದರು, ಇಂದಿನಿಂದ ಆರು ಹಗಲು ಆರು ರಾತ್ರಿಗಳವರೆಗೆ ಈ ಯಜ್ಞವನ್ನು ರಕ್ಷಿಸಬೇಕು... ದೀಕ್ಷಾ ಪ್ರವೇಶ ಮಾಡಿದ್ದರಿಂದ ವಿಶ್ವಾಮಿತ್ರರು ಮೌನರಾಗಿದ್ದರು..
ಯುದ್ಧವನ್ನು ಸ್ವಾಗತಿಸುವ ಮಕ್ಕಳನ್ನು ನೋಡಿ ಸಂತೋಷಪಟ್ಟರು...
ಆರು ಹಗಲು, ಆರು ರಾತ್ರಿ ಕಾಯುವ ಕೆಲಸ ಶುರುವಾಯಿತು,ಯಜ್ಞ ಹೇಗೆ ಉಪಾಸನೆಯೋ ಯಜ್ಞರಕ್ಷೆಯೂ ಕೂಡ ಉಪಾಸನೆಯೇ... ಉಪಾಸ ಅಂದ್ರೆ ಹತ್ತಿರ ಇರಬೇಕು ಎಂಬುದು.. ಅದು ಕರ್ತವ್ಯ..
ಒಂದು ದಿನ ಕಳೆಯಿತು, ಎರಡು - ಮೂರು - ನಾಲ್ಕು - ಐದು ದಿನ ಕಳೆಯಿತು, ರಾಕ್ಷಸರ ಸುಳಿವೇ ಇಲ್ಲ...ಎಲ್ಲವೂ ಶಾಂತವಾಗಿತ್ತು...
ಐದು ದಿನ ಕಳೆದಿದೆ, ಆರನೇ ದಿನದ ಹಗಲು ಬಂದಿದೆ...ಕೊನೆಯ ಹಂತ... ಇದ್ದಕ್ಕಿದ್ದಂತೆ ರಾಮನಿಗೆ ಏನೋ ಬೇರೆ ತರಹ ಅನ್ನಿಸಿತು, ಆತನ ಅಂತರಂಗದಲ್ಲಿ ಏನೋ ಸೂಚನೆ,ಲಕ್ಷ್ಮಣನಿಗೆ ಹೇಳಿದ, ಜಾಗರೂಕನಾಗಿ, ಏಕಾಗ್ರನಾಗು, ಯುದ್ಧಮಾಡುವ ಇಚ್ಛೆಯಿಂದ ತ್ವರೆ ಮಾಡುತ್ತಿರುವಾಗಲೇ... ಯಜ್ಞಶಾಲೆಯಲ್ಲಿ, ಯಜ್ಞಜ್ವಾಲೆ ಪ್ರಜ್ವಲಿಸಿತು, ವಿಶ್ವಾಮಿತ್ರ ಸಹಿತವಾಗಿ ಎಲ್ಲರೂ ಪ್ರಜ್ವಲಿಸಿದರು... ಇದು ಒಂದು ಸೂಚನೆ.. ಯಜ್ಞ ನಡಿಯುತ್ತಿದೆ, ಮಂತ್ರಗಳು ಕ್ರಮಪ್ರಕಾರ ಉಚ್ಛಾರ ಆಗ್ತಾ ಇದೆ...ಗಗನದಲ್ಲಿ ಭಯಾನಕವಾದ ಶಬ್ದ ಉಂಟಾಯಿತು. ಅಲ್ಲಿಂದ ಆಪತ್ತು ಬರುತ್ತಾ ಇದೆ.. ಮಳೆಗಾಲದಲ್ಲಿ ಕಾರ್ಮೋಡಗಳು ಬಂದು ಮುಸುಕಿದಂತೆ ಕರಿಬಣ್ಣದ ರಾಕ್ಷಸರು ಮುಸುಕಿದರು... ಬರುವಾಗ ಮಾಯೆಯನ್ನು ವಿಸ್ತರಿಸುತ್ತಿದ್ದಾರೆ, ಬರಬರುತ್ತಿದ್ದಂತೆ ಯಜ್ಞದ ಮೇಲೆ ರಕ್ತದ ಮಳೆಯನ್ನು ಸುರಿಸುತ್ತಾರೆ..
ರಾಮನ ಕಣ್ಣಿಗೆ ಮೊದಲು ರಕ್ತವನ್ನು ಕಂಡು, ಧಾವಿಸಿದನು, ತಲೆ ಎತ್ತಿ ನೋಡಿದನು, ದಿವಿಯಲ್ಲಿ ಆ ಇಬ್ಬರು ರಾಕ್ಷಸರು ಮತ್ತವರ ಸೈನ್ಯ... ಹೆಚ್ಚು ಸಮಯವಿಲ್ಲ, ಆಗಲೂ ರಾಮನ ವಿವೇಕ ಅದ್ಭುತವಾಗಿ ಕೆಲಸ ಮಾಡುತ್ತಿತ್ತು... ಬಂದು ಮುತ್ತುವ ಅವರಿಬ್ಬರನ್ನು ಕಂಡು ರಾಜೀವಲೋಚನ ರಾಮ - ಲಕ್ಷ್ಮಣನಿಗೆ ಹೇಳಿದ, "ಓ ನೋಡು ಅವನ, ಇವನನ್ನು ಯಾಕೋ ಕೊಲ್ಲಲು ಮನಸಿಲ್ಲ, ಆದರೆ ಹಾಗೇ ಬಿಡಲಾರೆ, ಇನ್ನು ಈ ಜನ್ಮದಲ್ಲಿ ಈಕಡೆ ಬರಬಾರದು, ನನ್ನ ಬಳಿ ಇರುವ ಮಾನವಾಸ್ತ್ರವನ್ನು ಪ್ರಯೋಗಿಸಿದರೆ ಚಂಡಮಾರುತದ ಜೊತೆಗೆ ಹಾಗೇ ಆತ ಕೊಚ್ಚಿಕೊಂಡು ಹೋಗಿ ಬೀಳ್ತಾನೆ.." ಎಂದು ಹೇಳಿದ.
ಮಾನವಾಸ್ತ್ರದಿಂದ ಬಾಣವನ್ನು ಅಭಿಮಂತ್ರಿಸಿ ಮಾರೀಚನ ಎದೆಗೆ ಪ್ರವಹಿಸಿದ, ಮಾರೀಚ ನೂರು ಯೋಜನ ದೂರ ಹಾರಿ ಸಮುದ್ರಕ್ಕೆ ಹೋಗಿ ಬಿದ್ದ, ಆಮೇಲೆ ಯಾವಾಗಲೋ ಎಚ್ಚರವಾದಾಗ ಲಂಕೆಗೆ ಈಜಿಕೊಂಡು ಹೋಗಿ ಸೇರಿಕೊಂಡನಂತನಂತೆ...
ಮಾರೀಚನನ್ನು ಯಾಕೆ ಕೊಲ್ಲಲಿಲ್ಲ, ಅಂದರೆ... ಸಂಕಲ್ಪವೇ ಹಾಗಿದೆ... ಯಾರನ್ನು ಯಾವಾಗ ಉಳಿಸಬೇಕು, ಯಾಕೆ ಉಳಿಸಬೇಕು; ಯಾರನ್ನು ಯಾವಾಗ ಅಳಿಸಬೇಕು, ಹೇಗೆ ಅಳಿಸಬೇಕು - ದೈವಕ್ಕೆ ಗೊತ್ತು ಅದು! ಮುಂದೊಂದು ದಿನ ಮಾರೀಚ ಮಾಯಾಮೃಗನಾಗಿ ಸೀತೆಯ ಮುಂದೆ ಬರಬೇಕು, ಸೀತಾಪಹಾರ ಆಗಬೇಕು...ಹಾಗಾದರೆ ಮಾತ್ರವೇ ಸಪರಿವಾರ ರಾವಣ ಸಂಹಾರ ಮಾಡಲು ಸಾಧ್ಯ! ಭಗವತ್ಸಂಕಲ್ಪಕ್ಕನುಸಾರವಾಗಿ ನಡೆಯುತ್ತಿದೆ..
ಈಗ ಮಾರೀಚ ಬದುಕಿ ಏನು ಮಾಡಿದ ಅಂದ್ರೆ ತನ್ನವರೆಲ್ಲರೂ ಸಾಯುವಂತೆ ವ್ಯವಸ್ಥೆ ಮಾಡಿದ..
ಆದರೆ ಉಳಿದವರ ಜೊತೆ ತಳೆದ ನಿಲುವೇ ಬೇರೆ. ಪಾಪಕರ್ಮರಾದ, ಯಜ್ಞಘ್ನರಾದ ಇವರನ್ನು ವಧಿಸುತ್ತೇನೆ ಎಂದು ಆಗ್ನೇಯಾಸ್ತ್ರವನ್ನು ಸುಬಾಹುವಿನ ಮೇಲೆ ಪ್ರಯೋಗಿಸಿದಾಗ, ಆತ ಬಿದ್ದು ಸತ್ತೇಹೋದ... ಜೊತೆಯಲ್ಲಿ ಬಂದ ಸೈನ್ಯರೆಲ್ಲರನ್ನೂ ವಾಯುವ್ಯಾಸ್ತ್ರವನ್ನು ಪ್ರಯೋಗಿಸಿ ಸಾಯಿಸಿದ..
ಮೂರೇಮೂರು ಅಸ್ತ್ರಗಳ ಮೂಲಕ ಸರ್ವರಾಕ್ಷಸರ ನಿಗ್ರಹ ಮಾಡಿದಾಗ, ಎಲ್ಲ ಋಷಿಗಳು ಸುತ್ತುವರೆದು ಸ್ತುತಿಸಿದರು. ಯಜ್ಞ ಸಮಾಪ್ತವಾದ ಮೇಲೆ ವಿಶ್ವಾಮಿತ್ರರೂ ಕೂಡ.. "ಕೃತಾರ್ಥನಾದೆ ನಾನು, ಸಿದ್ಧಾಶ್ರಮ ಹೆಸರಿಗೆ ತಕ್ಕಂತೆ ಸಿದ್ಧಾಶ್ರಮವಾಯಿತು, ಗುರುವಚನ ನೀನು ಪಾಲಿಸಿದೆ" ಎಂದರು...
ಬಂದ ಕೆಲಸ ಆಗಿದೆ, ಆದರೂ ರಾಮನನ್ನು ಕಳಿಸಿ ಕೊಡುವ ಮನಸ್ಸಿಲ್ಲ ವಿಶ್ವಾಮಿತ್ರರಿಗೆ... ಅದು ಯಾಕೆ? ಮುಂದೇನು ಕೆಲಸಗಳು? ಎಂಬ ನಿರೀಕ್ಷೆ, ಸಿಹಿಯ ಪ್ರತೀಕ್ಷೆಯಲ್ಲಿ ಮುಂದುವರಿಯೋಣ, ಇಂದಿಗೆ ಇಲ್ಲಿಗೆ ವಿಶ್ರಮಿಸೋಣ.
#DhaaraRaamayan

No comments:
Post a Comment
Please leave your comments here.....