Dhaara Raamayana 12

#ಧಾರಾ_ರಾಮಾಯಣ - 01-07-2019  ದಿನ12
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ

ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ

ವಿಶ್ವಾಮಿತ್ರರು ಮಗು ಶ್ರೀರಾಮನನ್ನು ಉದ್ಧಾರಗೊಳಿಸಲು ಮಾಡಿರುವ ಸುಪ್ರಭಾತವಿದು.
ಎಲೆಹಾಸಿನಲ್ಲಿ ಮಲಗಿರುವ ರಾಮನನ್ನು ಬೆಳಗಿನ ಜಾವದಲ್ಲಿ ಎಬ್ಬಿಸುತ್ತಾರೆ ವಿಶ್ವಾಮಿತ್ರರು ಈ ಶ್ಲೋಕದ ಮೂಲಕವಾಗಿ.

ಹೇ ರಾಮ, ಕೌಸಲ್ಯೆಯ ತನಯನೇ, ಮೊದಲ ಸಂಧ್ಯೆಯು (ಸೂರ್ಯೋದಯಕ್ಕೆ ಒಂದು ಘಂಟೆ ಮೊದಲು ಅಲ್ಲಿಂದ ಸೂರ್ಯೋದಯದ ಅರ್ಧ ಘಂಟೆಯ ನಂತರದ ಅವಧಿ)  ಆಗ್ತಾ ಇದೆ, ಬೆಳಕಾಗ್ತಾ ಇದೆ ಎದ್ದೇಳು ನರವ್ಯಾಘ್ರನೆ... ದೈವಸದೃಶವಾದ ಕರ್ತವ್ಯ ಇದೆ, ಏಳು ರಾಮ‌. ಇದು ಸರಳಾರ್ಥ.

ಕೊಂಚ ಆಳಕ್ಕಿಳಿದರೆ..

ಜ- ಜನ್ಮ
ಪ್ರಜಾ- ಉತ್ತಮ ಜನ್ಮ
ಸುಪ್ರಜಾ - ಅತ್ಯುತ್ತಮ ಜನ್ಮ

ಕೌಸಲ್ಯೆ - ಕೋಸಲ ದೇಶದ ರಾಜಕುಮಾರಿ (ಹೆಸರು ಗೊತ್ತಿಲ್ಲ, ರಾಮಾಯಣದಲ್ಲಿ ಎಲ್ಲೂ ಉಲ್ಲೇಖವಿಲ್ಲ)
ಕೈಕೇಯಿ - ಕೇಕಯದ ಊರಿನವಳು (ಹೆಸರು ಗೊತ್ತಿಲ್ಲ, ರಾಮಾಯಣದಲ್ಲಿ ಎಲ್ಲೂ ಉಲ್ಲೇಖವಿಲ್ಲ)
ಸುಮಿತ್ರೆ - ಸುಮಿತ್ರೆ ಎಂಬುದು ಹೆಸರು (ಎಲ್ಲಿಯವಳು ಅಂತ ಗೊತ್ತಿಲ್ಲ, ರಾಮಾಯಣದಲ್ಲಿ ಎಲ್ಲೂ ಉಲ್ಲೇಖವಿಲ್ಲ)

ಕೌಸಲ್ಯಾ ಸುಪ್ರಜಾ ರಾಮ - ಹೇ ರಾಮ, ಕೋಸಲೆಯ ನಾಡಿನ ಸುಪ್ರಜ ನೀನು, ಉತ್ತಮೋತ್ತಮ ಜನ್ಮ ಹೊಂದಿದವನು, ಒಂದು ರಾಜ್ಯದ ಸತ್ಪ್ರಜೆ. ಪೂರ್ವಾ ಸಂಧ್ಯಾ- ಜೀವನವನ್ನು ದಿನಕ್ಕೆ ಹೋಲಿಸಿದರೆ, ರಾಮನ ಜೀವನದಲ್ಲೂ ಬೆಳಗಾಗ್ತಾ ಇದೆ, ಅಂದರೆ ರಾಮನ ಬಾಲ್ಯ - ಬಾಲ್ಯ ಅಂದರೆ ಬೆಳಗು, ವಿದ್ಯೆಯ ಬೆಳಕು ಹೆಚ್ಚಾಗ್ತಾ ಹೋಗುತ್ತದೆ. ಅರಿವನ್ನು ದಿನೇದಿನೇ ಹೆಚ್ಚಿಸಿಕೊಳ್ಳಬೇಕು, ಬಾಲ್ಯದಲ್ಲಿ.. ನರಶಾರ್ದೂಲ - ರಾಮನನ್ನು ಬಿಟ್ಟು ಮತ್ಯಾರಿಗೆ ಹೋಲುವಂತದ್ದು, ಮನುಷ್ಯರಲ್ಲೇ ಶ್ರೇಷ್ಠ ಅವನು! ನರವ್ಯಾಘ್ರನವನು! ಉತ್ತಿಷ್ಠ - ಏಳು ರಾಮ, ರಾಮನಲ್ಲಿನ ರಾಮತ್ವ ಜಾಗೃತವಾಗಲಿ, ಆಗ ಲೋಕಕ್ಕೆ ಕಲ್ಯಾಣ ಆಗುತ್ತದೆ.
ಕರ್ತವ್ಯಂ ದೈವಮಾಂತ್ರಿತಂ - ದಿವ್ಯ ಕರ್ತವ್ಯ, ದೇವ ಕಾರ್ಯ ನಿನಗಿದೆ! ರಾತ್ರಿ ಅನ್ನುವುದು ಮಾಯೆ(ಪ್ರಕೃತಿ), ಪುರುಷ ಹಗಲು. ಮಾತುಯ ಮೀರಿದ ಕರ್ತವ್ಯ ನಿನಗಿದೆ!

ವಿಶ್ವಾವಿದ್ಯಾಪೀಠಕ್ಕೆ ಇದು ಧ್ಯೇಯಶ್ಲೋಕವಾಗುವಂಥದ್ದು. ಅನ್ವಯಿಸುವುದಾದರೆ ರೋಮಾಂಚನವಾಗುವುದು!
ಕೌಸಲ್ಯಾ ಸುಪ್ರಜಾ ರಾಮ - ದೇಶಕ್ಕೆ ಸುಪ್ರಜೆ ಆಗಿ ಹೊರಗೆ ಬರಬೇಕು,ಣ್ಣಿನ ಮಗನಾಗಬೇಕು. ಅವನ ಅಮ್ಮನಿಗೆ ಪ್ರಸವ ವೇದನೆ ಸಾರ್ಥಕ ಅಂತ ಅನ್ನಿಸಬೇಕು, ಅಂತಹ ಮಕ್ಕಳನ್ನ ಬೆಳೆಸಬೇಕು, ರಾಮನಂತಹವರನ್ನು.

ಪೂರ್ವಾಸಂಧ್ಯಾ - ದೇಶಕ್ಕೆ ರಾತ್ರಿ ಕಳೆದು ಬೆಳಗಾಗುವ ಕಾಲ ಬಂದಿದೆ, ಭಾರತ ಬೆಳಕಾಗುವ ಕಾಲ ಬಂದಿದೆ. ಇದಕ್ಕಾಗಿ ಒಂದೊಂದು ಮಗುವು ಭಾ‌..ರತನಾಗಬೇಕು, ಭಾರತ ಭಾಸ್ಕರನಾಗಬೇಕು, ಅಷ್ಟು ವಿದ್ಯೆಯನ್ನು ಗಳಿಸಬೇಕು, ಅಂತಹಾ ವಿದ್ಯೆಯಿಂದ ಭಾರತವನ್ನು ಬೆಳಗಬೇಕು. ದೇಶವನ್ನು, ದೇಶದ ಮೂಲಕ ವಿಶ್ವವನ್ನು ಬೆಳಗುವ ಕಾರ್ಯ ಮುಂದಿದೆ!

ಉತ್ತಿಷ್ಠ ನರಶಾರ್ದೂಲ - ಇಡಿ ಸಮಾಜದ ಒಳಿತುಗಳನ್ನು ಒಳಗೊಂಡು ಶಾರ್ದೂಲನಾಗಿ ಬೆಳೆಯಬೇಕು.

ಕರ್ತವ್ಯಂ ದೈವಮಾಹ್ನಿಕಂ - ದೇವರ ಕರ್ತವ್ಯ ಇದೆ, ಏಳು.. ಜೀವ ಕಲ್ಯಾಣದ ಕರ್ತವ್ಯ. ಬೆಳಕಿನ ಕರ್ತವ್ಯ..

ನರನೊಳಗಿನ ಸಿಂಹತ್ವವನ್ನು ಜಾಗೃತಗೊಳಿಸಬೇಕು, ಅವನನ್ನು ಎಬ್ಬಿಸಬೇಕು, ಅವನಲ್ಲಿ ಸುಪ್ತವಾಗಿರುವ ಜ್ಞಾನವನ್ನು ಪ್ರವರ್ಧನಗೊಳಿಸಬೇಕು, ಮತ್ತು ಕರ್ತವ್ಯಕ್ಕೆ ತೊಡಗಿಸಬೇಕು! ಇದು #ವಿಷ್ಣುಗುಪ್ತ_ವಿಶ್ವವಿದ್ಯಾಪೀಠ ಮಾಡಬೇಕಾಗಿರುವ ಕಾರ್ಯ! ಕರ್ತವ್ಯಬೋಧವೊಂದಿದ್ದರೆ, ಅದು ಕೃತಯುಗವೇ ಮತ್ತೆ!
ಹಾಗಾಗಿ ಕರ್ತವ್ಯದ ಜ್ಞಾನವನ್ನು ಕೊಡುವುದು ವಿಷ್ಣುಗುಪ್ತ ವಿದ್ಯಾಪೀಠದ ಕರ್ತವ್ಯ.

ಅವರವರು ಮಾಡುವ ಕರ್ತವ್ಯವನ್ನು ಅವರವರು ಮಾಡದಿರುವುದೇ ಎಲ್ಲ‌ ಸಮಸ್ಯೆಗಳಿಗೆ ಮೂಲ - ಶ್ರೀಸೂಕ್ತಿ

ವಿಶ್ವಾಮಿತ್ರರು ರಾಮನನ್ನು ಎಬ್ಬಿಸಿದರು, ಎಲ್ಲಾ ಕಾರ್ಯಗಳನ್ನು ಮಾಡಿ ಹೊರಟರು. ಮುಂದೆ ಪುಣ್ಯಾಶ್ರಮದ ದರ್ಶನ ಆಗುತ್ತದೆ, ರಾಮ-ಲಕ್ಷ್ಮಣರಿಗೆ ಸಹಜ ಕುತೂಹಲ ಈ ಆಶ್ರಮದ ಕುರಿತು. ಮಕ್ಕಳ ಪ್ರಶ್ನೆಗೆ ಕೌಶಿಕರು ಉತ್ತರ ಕೊಡುತ್ತಾರೆ.

"ಕಾಮಕ್ಕೆ ಒಂದು ಕಾಲದಲ್ಲಿ ಆಕಾರ,ಶರೀರ ಇತ್ತು, ಸೊಕ್ಕು ಇತ್ತು. ಪರಿಣಾಮ, ಕಾಮದೇವ ಹೋಗಿ ಶಿವನನ್ನು ಕೆಣಕಿದ, ಶಿವ ಇದೇ ಆಶ್ರಮದಲ್ಲಿ ತಪಸ್ಸು ಮಾಡ್ತಿದ್ದ... ಪರಿಣಾಮ? ರುದ್ರನ ಕ್ರೋಧಾಗ್ನಿ ಕಾಮನನ್ನು ದಹಿಸಿತು; ಶಿವ ತನ್ನ ನೇತ್ರಾಗ್ನಿಯಲ್ಲಿ ಕಾಮನನ್ನು ದಹಿಸಿದ. ಕಾಮ ಸುಟ್ಟುರಿದು ಹೋದ, ಸುಟ್ಟುದುರಿ ಹೋದ! ಅವನ ಅಂಗಗಳು ದಹನಗೊಂಡು ಬಿದ್ದವು, ಕಾಮನು ಅನಂಗನಾದ. ಅದು ಅಂಗರಾಜ್ಯ ಅಂತ ಎನಿಸಿಕೊಂಡಿತು"

ವಿಶ್ವಾಮಿತ್ರರು, ರಾಮಲಕ್ಷ್ಮಣರು ಈಗ ಇರೋದು ಅಂಗರಾಜ್ಯದಲ್ಲಿ...

ವಿಶ್ವಾಮಿತ್ರರು ಹೇಳ್ತಾರೆ "ಇದು ರುದ್ರನ ಪೂರ್ವಾಶ್ರಮ, ರುದ್ರ ಪೂರ್ವದಲ್ಲಿ ತಪಸ್ಸು ಮಾಡುತ್ತಿದ್ದ. ಇಲ್ಲಿ ಈಗಲೂ ಶಿವನ ಶಿಷ್ಯ ಪರಂಪರೆಯ ಮುನಿಗಳು ಇದ್ದಾರೆ, ಪಾಪ ರಹಿತರು, ಧರ್ಮಸಹಿತರು.. ಹಾಗಾಗಿ ರಾಮ, ನಾವು ಇವತ್ತು ಇಲ್ಲಿಯೇ ಶಿವನ ಆಶ್ರಮದಲ್ಲಿ, ಶಿವನ ಶಿಷ್ಯರ ಸಹವಾಸದಲ್ಲಿ ವಾಸ್ತವ್ಯ ಮಾಡೋಣ.. ನಾಳೆ ನಿತ್ಯಕರ್ಮವನ್ನು ಮುಗಿಸಿ ಗಂಗಾಸರಯೂ ಸಂಗಮವನ್ನು ದಾಟಿ ಮುಂದೆ ಹೋಗೋಣ."

ಆ ಶಿವಶಿಷ್ಯ ಮುನಿಗಳ ದೃಷ್ಟಿ ದೀರ್ಘವಾಯಿತು, ಇರುವಲ್ಲಿಂದಲೇ ವಿಶ್ವಾಮಿತ್ರರು, ರಾಮಲಕ್ಷ್ಮಣರ ಬರವು ಗೊತ್ತಾಯ್ತು. ಅವರು ಓಡೋಡಿ ಬಂದು ಇವರನ್ನೆಲ್ಲ ಸ್ವಾಗತ ಮಾಡಿ, ಉಪಚಾರ ಮಾಡ್ತಾರೆ...ರಾತ್ರಿ ವಸತಿ... ರಾತ್ರಿಯಿಡೀ ರಾಮ ಲಕ್ಷ್ಮಣರಿಗೆ ನಿದ್ದೆಯಿರಲಿಲ್ಲವಂತೆ! ಏಕೆಂದರೆ ವಿಶ್ವಾಮಿತ್ರರು ಕಥೆ ಹೇಳ್ತಾ ಇದ್ರು, ಅದು ಎಷ್ಟು ಸ್ವಾರಸ್ಯ ಇತ್ತು ಅಂದ್ರೆ ರಾಮಲಕ್ಷ್ಮಣರಿಗೆ ಬೆಳಗಾಗಿದ್ದೇ ಗೊತ್ತಾಗಲಿಲ್ಲವಂತೆ!

ಪ್ರಾತಃಕಾಲ ಸ್ನಾನಾದಿ ಕಾರ್ಯಗಳು ಮಾಡಿದ ಮೇಲೆ... ಶಿವ ಶಿಷ್ಯರು ಸಿದ್ಧಪಡಿಸಿದ ನಾವೆಯಲ್ಲಿ ಕುಳಿತು ರಾಮ ಲಕ್ಷ್ಮಣರು, ವಿಶ್ವಾಮಿತ್ರರು ಗಂಗಾ-ಸರಯೂ ಸಂಗಮವನ್ನು ದಾಟುತ್ತಾ ಇದ್ದಾರೆ... ನೀರಿನ ಮಧ್ಯ ಬಂದಾಗ ಒಂದು ವಿಶೇಷ ಸದ್ದು ರಾಮನಿಗೆ ಕೇಳ್ತಾ ಇದೆ, ನೀರು ಯಾವುದಕ್ಕೋ ಅಪ್ಪಳಿಸಿದ ಹಾಗೆ ಕೇಳ್ತಿದೆ... ವಿಶ್ವಾಮಿತ್ರರು ಉತ್ತರ ಕೊಟ್ಟರು: "ಕೈಲಾಸ ಪರ್ವತದಲ್ಲಿ ಬ್ರಹ್ಮದೇವ ತನ್ನ ಮನಸ್ಸಿನಿಂದ ಸರೋವರವನ್ನು ನಿರ್ಮಾಣಮಾಡಿದ. ಸೃಷ್ಟಿಕರ್ತನ ಸುಂದರ ಮಾನಸವೇ ಸರೋವರ ಆಯಿತು, ಅದೇ ಮಾನಸಸರೋವರ. ಆ ಮಾನಸ ಸರಸ್ಸಿನಿಂದ ಹರಿಯುವ ಆಕೆಯನ್ನು ಸರಯೂ ಎಂದು ಕರೆಯುತ್ತಾರೆ, ಸರಯೂ ಸೃಷ್ಟಿಕರ್ತನ ಮನಸ್ಸಿನಿಂದ ಅಯೋಧ್ಯೆಗೆ ಹರಿಯುತ್ತಾಳೆ‌‌‌. ಬ್ರಹ್ಮಸರಸ್ಸಿನಿಂದ ಹರಿಯುವ ಆಕೆ ಪವಿತ್ರಳು. ಅಯೋಧ್ಯೆಯ ಮೂಲಕ ಗಂಗೆಯನ್ನು  ಸೇರುತ್ತಾಳೆ. ಆ ಸದ್ದು ಏನಂದ್ರೆ ಆ ಸರಯೂ ಗಂಗೆಯನ್ನು ಸೇರುವ ಸಂಭ್ರಮದ ಶಬ್ದ ಅದು, ಅಭಸವದು, ಸರಯುವಿಗೆ ಗಂಗೆಯ ಮೇಲಿನ ಪ್ರೀತಿಯದು, ರಾಮಾ ನಮಸ್ಕಾರ ಮಾಡು"

ಗಂಗಾ ಸರಯೂ ಸಂಗಮವನ್ನು ದಾಟಿ ಹೋಗುವಾಗ ಒಂದು ವನ ಸಿಗುತ್ತದೆ, ಆಗ ರಾಮ ಹೇಳುತ್ತಾನೆ, "ಏನು ಗುರುಗಳೇ ಈ ವನ ಯಾಕೋ ಹಿತ ಎನಿಸುತ್ತಿಲ್ಲ, ಘೋರವಾಗಿದೆ. ಕ್ರೂರ ಪ್ರಾಣಿಪಕ್ಷಿಗಳ ಕ್ರೂರಧ್ವನಿ. ಯಾಕೆ ಹೀಗೆ, ಏನಾಗಿದೆ ಈ ವನಕ್ಕೆ?"

ವಿಶ್ವಾಮಿತ್ರರು "ಈ ಕಾಡು ಒಂದು ಕಾಲದಲ್ಲಿ ನಾಡು, ಜೋಡುನಾಡು(ಎರಡು ನಾಡು) ಗಳಿದ್ದವು, ಮಲದಾ , ಕರೂಷಾ ಎಂಬ ಹೆಸರಿನ ಸಮೃದ್ದವಾದ ನಾಡುಗಳಿದ್ದವು, ದೈವಾನುಗ್ರಹ ಇತ್ತು ಈ ನಾಡುಗಳಿಗೆ. ಇಂದ್ರನಿಗೆ ಬ್ರಹ್ಮಹತ್ಯೆ ಪಾಪ‌ ತಗುಲಿತು, ಅಶುಚಿತ್ವ ಬಂತು ಇಂದ್ರನಿಗಗ, ಹಸಿವು ಅವನಲ್ಲಿ ಪ್ರವೇಶ ಆಯಿತು. ಆಗ ದೇವತೆ ಋಷಿಗಳು ಕಲೋಷದಕಗಳಿಂದ ಅವನ ಪಾಪವನ್ನು ತೊಳಿತಾರೆ, ಕೊಳೆಯನ್ನ ಕಳಿತಾರೆ, ಹಾಗೆ ಮಾಡಿದಾಗ ಈ ಜೋಡಿ ನಾಡಿನ ಮಣ್ಣು ಇಂದ್ರನ ಪಾಪವನ್ನು, ಕೊಳೆಯನ್ನು ಸ್ವೀಕರಿಸಿತು‌‌‌. ಇಂದ್ರ ಸುಪ್ರೀತನಾಗಿ, ಈ ನಾಡು ಯಾವಾಗಲೂ ಸಮೃದ್ಧವಾಗಿರಲಿ ಎಂದು ಹರಸಿದ‌‌. ಕೆಲ ಕಾಲ ಈ ನಾಡು ಸಮೃದ್ಧವಾಗಿಯೇ ಇತ್ತು.

ಸದಾಚಾರ ಸಂಪನ್ನನಾದ ಯಕ್ಷಪತಿ ಸುಕೇತುವಿಗೆ ಮಕ್ಕಳಿರಲಿಲ್ಲ. ತಪಸ್ಸು ಮಾಡಿದ. ಬ್ರಹ್ಮ ಪ್ರತ್ಯಕ್ಷ ನಾದ, ಆಗ ಸುಕೇತುವು ಸಂತತಿ ಬೇಕು ಅಂತ ಕೇಳಿದ.. ಒಂದು ವಿಚಿತ್ರವಾದ ಹೆಣ್ಣುಮಗು ಹುಟ್ಟುತ್ತಾಳೆ, ಅವಳಿಗೆ ಸಾವಿರ ಆನೆ ಬಲ ಇರುತ್ತದೆ... ಒಂದು ಸಾವಿರ ಆನೆಯ ಬಲವುಳ್ಳ ಸುಂದರ ಹೆಣ್ಣುಮಗುವಿನ ಪ್ರಾಪ್ತಿಯಾಯಿತು. ತಾಟಕಾ ಅವಳು. ಆಕೆ ರಾಕ್ಷಸಿಯಲ್ಲ, ಯಕ್ಷಿ. ಆಕೆಯನ್ನು ಬೆಳೆಸುತ್ತಾನೆ‌, ರೂಪಯೌವನಶಾಲಿಯಾಗುತ್ತಾಳೆ, ಮದುವೆ ವಯಸ್ಸಿಗೆ ಬರುತ್ತಾಳೆ, ಆಕೆಯನ್ನು ಜಂಭಪುತ್ರನಾದ ಸುಂದನನಿಗೆ ಕೊಟ್ಟು ವಿವಾಹ ಮಾಡಿದರು. ಆ ಚಂದದ ಸಂಸಾರಕ್ಕೊಂದು ಬಹಳ ಒಳ್ಳೆಯ ಮಗ ಹುಟ್ಟುತ್ತಾನೆ, ಅವನ ಹೆಸರೇ ಮಾರೀಚ. ಭಯಪಡುವ ಆಕಾರ ಇತ್ತಂತೆ, ನಿತ್ಯವೂ ಪ್ರಜೆಗಳನ್ನು ಗೋಳು ಹೋಯ್ದುಕೊಳ್ಳುವುದೇ ಅವನ ಉದ್ಯೋಗ ಆಗಿತ್ತು, ಅದು ಅವನ ಗೀಳಾಗಿತ್ತು. ಈ ತಾಟಕೆಯ ಹತ್ತಿರ ನಾವು ಬಂದಿದ್ದೇವೆ, ಈ ರಸ್ತೆಯ ಮಧ್ಯದಲ್ಲಿ ಅವಳ ವಾಸ ಇದೆ. ಬೇಕಂತಲೇ ದಾರಿಗೆ ಅಡ್ಡವಾಗಿ ವಾಸವಿದೆ. ನಮಗೆ ಅನ್ಯಮಾರ್ಗವಿಲ್ಲ. ಅವಳ ಮುಖಾಂತರವೇ ಹೋಗಬೇಕು‌. ಈ ವನಕ್ಕೆ ತಾಟಕಾವನ ಅಂತ ಹೆಸರು" ಎಂದು ಹೇಳಿದರು.

"ಗುರುಗಳೇ ನಾನು ತಿಳಿದಂತೆ ಯಕ್ಷರು ಅಲ್ಪಬಲರು, ಹಾಗಿರುವಾಗ ಈ ಸಾವಿರ ಆನೆಯ ಬಲ ಹೇಗೆ ಬಂತು" ಎಂಬ ಪ್ರಶ್ನೆಗೆ ವಿಶ್ವಾಮಿತ್ರರು ಉತ್ತರಿಸಿದರು‌

ಒಂದು ಸಲ ಸುಂದ ಅಗಸ್ತ್ಯರನ್ನು ಕೆಣಕುತ್ತಾನೆ, ಅವರು ಸುಂದನನ್ನು ಧ್ವಂಸ ಮಾಡುತ್ತಾರೆ. ಸುಂದ ಇಲ್ಲವಾಗಿಬಿಟ್ಟ. ತಾಟಕೆ ಹೋಗಿ ಅಗಸ್ತ್ಯರನ್ನು ಆಕ್ರಮಿಸಿ, ನಾಶ ಮಾಡ್ತೇನೆ ಎಂದು ಹೋದಳು, ಮಾರೀಚನೂ ಜೊತೆಯಲ್ಲಿ ಇದ್ದ, ಆಗ ಅಗಸ್ತ್ಯರು ಮಾರೀಚನಿಗೆ ರಾಕ್ಷಸತ್ವದ ಶಾಪವನ್ನು ಕೊಟ್ಟರು. ತಾಟಕೆ ಮುಂದೆ ಬಂದಾಗ ರೂಪಪರಿವರ್ತನೆಯ ಶಾಪ ಕೊಟ್ಟರು. ನಿನ್ನ ಮನಸ್ಸೆಂಥದ್ದೋ ಅಂತದ್ದೇ ರೂಪ ನಿನಗೆ ಬರಲಿ ಎಂದರು. ತಾಟಕೆಗೆ ರೂಪ ಪರಿವರ್ತನೆಯ ಶಾಪವೇ ಕೊಟ್ಟರು; ಸುಂದರ ರೂಪವು ತೊಲಗಿ ವಿಕೃತವಾದ, ಭಯಾನಕವಾದ, ದಾರುಣವಾದ ರೂಪವು ನಿನಗೆ ಬರಲಿ ಎಂದು ಶಪಿಸಿದರು.. ಅವರು ಅಲ್ಲಿಂದ ಹೊರಟರು.

ನಮ್ಮ ಮನಸ್ಸು ಹೇಗೋ, ಮನುಷ್ಯ ಹಾಗೆ; ನಿಧಾನಕ್ಕಾದರೂ ಅವನ ರೂಪ ಬದಲಾವಣೆಯಾಗುತ್ತದೆ!

ತಾಟಕೆಯು ಅಗಸ್ತ್ಯರ‌ ಮೇಲಿನ ಸಿಟ್ಟನ್ನು ತೀರಿಸುವುದು ಆ ಜೋಡುನಾಡಿನ ಊರಿನ ಜನರ ಮೇಲೆ. ಇದರ ಪರಿಣಾಮ ಅಲ್ಲಿ ಯಾರೂ ಉಳಿದುಕೊಳ್ಳಲಿಲ್ಲ. ಕ್ರಮೇಣ ಎಲ್ಲರನ್ನು ತಿಂದಳು ಅಥವಾ ಓಡಿಹೋದರು. ಅಲ್ಲಿ ಕಾಡು ನಿರ್ಮಾಣ ಆಯಿತು. ಇವತ್ತೂ ಅವಳಿಗೆ ಸಿಟ್ಟು, ಹಗೆ ಸಾಧಿಸುತ್ತಾಳೆ...

ಇದು ಮೊದಲಿನಂತೆ ಆಗಬೇಕು ರಾಮ ಎಂದು ಹೇಳುತ್ತಾರೆ. ಅದಕ್ಕೆ ಏನು ಮಾಡಬೇಕು‌ ಎಂದು ರಾಮ ಕೇಳಿದ

ಅದಕ್ಕೆ ವಿಶ್ವಾಮಿತ್ರರು: "ಆಕೆಯ ಬದುಕಿನ ವಿಧಾನ ಚೆನ್ನಾಗಿಲ್ಲ, ಪರಮ ದಾರುಣ, ಗೋವುಗಳ ಬ್ರಾಹ್ಮಣರ ಸಜ್ಜನರ ಹಿತಕ್ಕಾಗಿ ಇವಳನ್ನ ಕೊಲ್ಲಬೇಕು, ಸ್ತ್ರೀವಧೆ ಪಾಪದ ಕುರಿತು ಯೋಚನೆ ಮಾಡಬೇಡ, ವಿಹಿತ ಇದು, ಸಮಾಜಕ್ಕೇ  ಒಳ್ಳೇದಾಗುವಂತದ್ದು‌. ಕ್ರೂರ ಅಂತ ಅಂದ್ಕೋಬೇಡ, ವಿಹಿತವಿದು, ಪ್ರಜಾ ರಕ್ಷಣೆಗೋಸ್ಕರವಾಗಿ ಚೂರು ಪಾಪ ಬಂತು ಅಂದರೂ ಮಾಡಬೇಕಾಗುತ್ತದೆ. ರಾಜ್ಯಭಾರ ಮಾಡುವವರಿಗೆ ಇದು ಧರ್ಮ, ಇವಳು  ಅಧರ್ಮಿಣಿ ಹಾಗಾಗಿ ಇವಳನ್ನು ಕೊಲ್ಲಬೇಕು" ಎಂದರು.

ಇಷ್ಟು ಹೇಳಿದ ಮತ್ತೆಯೂ ರಾಮನ ಮನಸ್ಸು ತೂಗುಯ್ಯಾಲೆಯಲ್ಲಿ... ಕರಮುಗಿದು ಶಿರಭಾಗಿ ನಿಂತು, "ತಂದೆಯ ವಚನ ಇದೆ ನಿಮ್ಮ ಮಾತನ್ನು ಕೇಳಬೇಕು ಅಂತ, ಅದರಲ್ಲೂ ಹೇಳುತ್ತಿರುವವು ಕೌಶಿಕರು(ವಿಶ್ವಾಮಿತ್ರರು) ಈ ಕಾರಣಕ್ಕಾಗಿ ತಾಟಕೀ ವಧೆಯನ್ನು ಮಾಡ್ತೇನೆ" ಎಂದ

ಅನಿವಾರ್ಯವಾಗಿ ಹೆಜ್ಜೆಯನ್ನು ಮುಂದಿಟ್ಟನಂತೆ ರಾಮ,  ಧನುಷ್ಟೇಂಕಾರವನ್ನು ಮಾಡುತ್ತಾನೆ‌. ಭೀತನಾದರೆ ಪಲಾಯನ, ವೀರನಾದರೆ ಯುದ್ಧಕ್ಕೆ ಬಾ ಎಂಬ ಯುದ್ಧಾಹ್ವಾನ... ತಾಟಕಿವನದಲ್ಲಿದ್ದ ಉಳಿದ ಪ್ರಾಣಿಪಕ್ಷಿಗಳೆಲ್ಲ ಓಡಿ ಹೋದವು‌‌. ಧನುಷ್ಟೇಂಕಾರ ಆದ ಜಾಗಕ್ಕೆ ತಾಟಕಿ ತನ್ನ ದೊಡ್ಡ ದೊಡ್ಡ ಹೆಜ್ಜೆಗಳಿಂದ ಓಡಿ ಬಂದಳು‌. ದೊಡ್ಡ ಆಕಾರ, ಎಲ್ಲ ಅಂಗಗಳು ವಿಕಾರ... "ಲಕ್ಷ್ಮಣ, ಇವಳನ್ನು ಕೊಲ್ಲುವ ಮನಸಿಲ್ಲವೋ, ಇವಳು ಸ್ತ್ರೀ ಎಂಬ ಕಾರಣಕ್ಕೆ ಬೆಲೆ ಕೊಡಬೇಕಲ್ಲವೋ, ಹೆಚ್ಚೆಂದರೆ ಕಿವಿ-ಮೂಗುಗಳನ್ನು ಕತ್ತರಿಸಿ ಓಡಿಸಿಬಿಡೋಣ" ಎಂದು ರಾಮ ಹೇಳಿದ‌

ತನ್ನ ಬಾಹುವನ್ನು ಮೇಲೆತ್ತಿ ಬರ್ತಾಳೆ ತಾಟಕಿ, ವಿಶ್ವಾಮಿತ್ರರು ಒಂದು ಹೂಂಕಾರವನ್ನು ಮಾಡಿ, ರಾಮಲಕ್ಷ್ಮಣರಿಗೆ ಜಯವಾಗಲಿ ಎಂದು ಹರಸಿದರು.

ಆಕೆ ತನ್ನ ಮಾಯಾಜಾಲದಿಂದ ಒಬ್ಬರಿಗೊಬ್ಬರು ಕಾಣದಂತೆ ಧೂಳಿಮಯ ಮಾಡಿದಳು, ಹಾಗೆ ಮಾಡಿ ಅವರಿಬ್ಬರ ಮೇಲೆ ಕಲ್ಲಿನ ಮಳೆಗರೆದಳು..  ಆಗ ರಾಮನಿಗೆ ಸ್ವಲ್ಪ ಸಿಟ್ಟು ಬಂತು, ಆಕೆಯ ಕಲ್ಲಿನ ಮಳೆಯನ್ನು, ಮೇಲ್ಮುಖವಾದ ತನ್ನ ಬಾಣದ ಮಳೆಯಿಂದ ಭೇಧಿಸಿದ, ಮತ್ತು ಮುಂದುವರೆದಾಗ ತಾಟಕಿಯ ಕೈಗಳನ್ನೇ ಕತ್ತರಿಸಿಬಿಡ್ತಾನೆ‌, ಅಷ್ಟು ಹೊತ್ತಿಗೆ ಲಕ್ಷ್ಮಣ ಅವಳ ಕಿವಿ-ಮೂಗಿನ ತುದಿಯನ್ನು ಕತ್ತರಿಸುತ್ತಾನೆ. ಆಗ ಅವಳು ಮಾಯವಾದಳು.

ಬಗೆಬಗೆಯ ರೂಪಗಳನ್ನು ತಾಳುತ್ತಾಳೆ, ಭ್ರಮೆಗೊಳಿಸುತ್ತಾಳೆ‌...

ವಿಶ್ವಾಮಿತ್ರರಿಗೆ ಸಾಕಾಯಿತು, "ಸಾಕು ಮಾಡು ಕರುಣೆಯನ್ನು. ಅಸ್ಥಾನದಲ್ಲಿ ಕರುಣೆ, ಸ್ನೇಹ ಒಳ್ಳೆಯದಲ್ಲ, ದಯೆಗೆ ಇಲ್ಲಿ ಪಾತ್ರವಿಲ್ಲ, ಅವಳು ಪಾಪಾ(ಪಾಪವೇ ಉಳ್ಳವಳು), ಯಜ್ಞ ಧ್ವಂಸಕಳು, ಸಂಧ್ಯಾಕಾಲದಲ್ಲಿ ಅವಳ ಶಕ್ತಿ ವರ್ಧಿಸುತ್ತದೆ, ಇನ್ನಷ್ಟು ಜಾಸ್ತಿ ಮಾಡುವ ಮೊದಲು ಅವಳ ಸಂಹಾರ ಮಾಡು" ಎಂದರು ವಿಶ್ವಾಮಿತ್ರರು.

ಕೊನೆಗೂ ಮನಸ್ಸು ಮಾಡಿದ ರಾಮ, ಶಬ್ದವೇದಿ ಪ್ರಯೋಗ ಮಾಡಿದ, ಒಂದೇ ಬಾಣದಿಂದ ಆಕೆಯ ಹೃದಯ ಛೇದಿಸಿದಾಗ ಆಕೆಯ ತಲೆ ಉರುಳಿತು.. ತಾಟಕಾ ಸಂಹಾರ... ರಾಮನ ಬದುಕಿನಲ್ಲಿ ವೀರಸಿರಿಯ ಮೊದಲ ಪ್ರವೇಶ‌.

ಇಂದ್ರನ ನೇತೃತ್ವದಲ್ಲಿ ದೇವತೆಗಳು ಪ್ರತ್ಯಕ್ಷರಾಗಿ, ಆನಂದಿಂದ ರಾಮನನ್ನು ಶ್ಲಾಘಿಸಿದರು. ವಿಶ್ವಾಮಿತ್ರರಲ್ಲಿ ಪ್ರಾರ್ಥಿಸಿದರು, ವಿಶ್ವಾಮಿತ್ರರರೇ ತಮ್ಮಲ್ಲಿರುವ ಎಲ್ಲ ವಿದ್ಯೆಗಳನ್ನು ಅವನಿಗೆ ಕೊಟ್ಟುಬಿಡಿ, ಅವನು ಮುಂದೆ ದೇವರ ಕಾರ್ಯಗಳನ್ನು ಮಾಡಬೇಕಿದೆ" ಎಂದು ಹೇಳಿ ಅವರು ಅಂತರ್ಧಾನರಾದರು‌

ತಾಟಕಿವಧ ಆಗ್ತಿದ್ದಂತೆ ಆ ಕಾಡು ಮಂಗಲಮಯವಾಗಿತು. ಆ ಕಾಡಿನಲ್ಲಿದ್ದ ಒಂದು ಕಳೆಯನ್ನು ತೆಗೆದಿದ್ದರಿಂದ ಇಡಿಯ ಕಾಡಿಗೆ ಶೋಭಾಯಮಾನವಾದ ಕಳೆ ಬಂದಿತ್ತು.

ರಾಮನ ತೇಜಸ್ಸು ನೂರ್ಮಡಿಯಾಗುವ ಸಂದರ್ಭಕ್ಕಾಗಿ ನಾಳೆಗಾಗಿ ಕಾಯೋಣ..

#DhaaraRaamayan

No comments:

Post a Comment

Please leave your comments here.....