Dhaara Raamayana 31


#ಧಾರಾ_ರಾಮಾಯಣ - 24-07-2019 ದಿನ31
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ

ಇರುವುದು  ಗಗನ ಇರದಿದ್ದರೆ, ಆಗಬೇಕಾಗಿದ್ದು ಆಗಬೇಕಾದಂತೆ ಆಗದಿದ್ದರೆ, ಬರುವ-ಬರಬಹುದಾದ-ಕೆಲವೊಮ್ಮೆ ಬರಬೇಕಾದ ಭಾವವೇ ಕ್ರೋಧ.

ಇರುವುದು ಇರಬೇಕಾದ ಹಾಗೆ ಇರಬೇಕು. ಆಗುವುದು ಆಗಬೇಕಾದ ಹಾಗೆ ಆಗಬೇಕು. ಅಯೋಧ್ಯೆಯ ರತ್ನಸಿಂಹಾಸನದಲ್ಲಿ ರಾಮನಿರಬೇಕು. ರಾಮನು ಭವನವಾಸಿಯಾಗದೆ ವನವಾಸಿಯಾಗಬೇಕು ಎಂದು ತಿಳಿದ ಲಕ್ಷ್ಮಣನಿಗೆ ಕೋಪ ಬಂತು. ದುಃಖ ಹರ್ಷಗಳ ಮಧ್ಯೆ ತೊಳಲಾಡುತ್ತಿತ್ತು ಅವನ ಮನ. ದುಃಖ - ರಾಮನು ಕಾಡಿಗೆ ಹೋಗಬೇಕು ಎನ್ನುವುದಕ್ಕಾಗಿ, ಹರ್ಷ - ತನ್ನಣ್ಣನ ವ್ಯಕ್ತಿತ್ವವ ಕಂಡು. ಎಂತಹಾ ವ್ಯಕ್ತಿತ್ವವದು! ಆ ನಿಸ್ಪೃಹ ವ್ಯಕ್ತಿತ್ವವನ್ನು ಕಂಡಾಗ ಹೆಮ್ಮೆ, ಹರ್ಷ! ಆದರೆ ಸ್ವತಃ ರಾಮನೇ ಸಮಾಧಾನ ಮಾಡಿದರೂ ಲಕ್ಷ್ಮಣನ ಮನಸ್ಸು ಕ್ರೋಧಕ್ಕೆ ಹೆಚ್ಚು ಒಲಿಯಿತು. ಲಕ್ಷ್ಮಣನ ಕ್ರೋಧವು ಬಿಲದೊಳಗಿನ ಸರ್ಪವು ರೋಷದಿಂದ ಬುಸುಗುಟ್ಟುವ ಹಾಗೆ ಇತ್ತು. ಲಕ್ಷ್ಮಣನೆಂದರೆ ಆದಿಶೇಷನ ಅವತಾರವೇ, ಸರ್ಪ. ಆದಿಶೇಷನಿಗೆ ಕೋಪವಿಲ್ಲ, ಆದರೇ ಇಲ್ಲಿ ಅಣ್ಣನಿಗಾಗುತ್ತಿರುವ ಅನ್ಯಾಯವ ಕಂಡು ಕ್ರೋಧಗೊಂಡ. ಕ್ರುದ್ಧವಾದ ಸಿಂಹದ ಮುಖದಂತಹ  ಮುಖ, ಆನೆ ತನ್ನ ಸೊಂಡಿಲನ್ನು ಕೊಡುಗುವ ಹಾಗೆ ಕೈತುದಿಯನ್ನು ಕೊಡಗುತ್ತಾ, ಓರೆಗಣ್ಣಿನಿಂದ, ಕಣ್ತುದಿಯಿಂದ ಅಣ್ಣನನ್ನು ನೋಡುತ್ತಾ ಮಾತಾಡಿದ.

"ಧಾರ್ಮಿಕರಂತೆ ಕಾಣುವವರೆಲ್ಲ ಧಾರ್ಮಿಕರಲ್ಲ, ಒಳ್ಳೆಯವರಂತೆ ಮಾತಾಡುವವರೆಲ್ಲ ಒಳ್ಳೆಯವರಲ್ಲ. ಮೋಸವು ಇರುತ್ತದೆ ಎಂದು ಏಕೆ ನೀನು ಅರ್ಥಮಾಡಿಕೊಳ್ಳುತ್ತಿಲ್ಲ? ಕೊಟ್ಟ ಮಾತು, ಸತ್ಯ ವಚನ ಎಂಬ ನೆಪಮಾಡಿ ಅನ್ಯಾಯ ಮಾಡಹೊರಟಿದ್ದಾರೆ. ಒಂದು ವೇಳೆ ಧರ್ಮ ಎಂದು ನೀನು ಹೇಳುವುದಾದರೆ, ಆ ಧರ್ಮ ನಿನ್ನನ್ನು ಕಾಡಿಗೆ ಕಳುಹುತ್ತಿದೆಯೆಂದಾದರೆ, ಆ ಧರ್ಮ ನನಗೆ ಬೇಡ. ಆ ಧರ್ಮವನ್ನು ದ್ವೇಷಿಸುತ್ತೇನೆ ನಾನು. ಶತ್ರುಗಳಿಗೆ ಪಿತೃ ಎಂದು ಹೆಸರಿದೆಯಾ? ಅವರು ವೈರಿಗಳು. ನೀನು ಇದೆಲ್ಲಾ ದೈವ, ವಿಧಿ ಎಂದೆಯಲ್ಲಾ? ಅದೆಲ್ಲ ಏನೂ ಅಲ್ಲ. ಆ ದೈವವನ್ನು ನನ್ನ ಪೌರುಷದಿಂದ ಹಿಮ್ಮೆಟ್ಟಿಸುವೆ. ನಾನು ಸಿದ್ಧ ಮಾಡಿ ತೋರಿಸುತ್ತೇನೆ - ವಿಧಿಗಿಂತ ಪುರುಷ ಪ್ರಯತ್ನ ದೊಡ್ಡದು ಎಂಬುದಾಗಿ." ಎಂದ ಲಕ್ಷ್ಮಣ.

ಜೀವನದ ಬಂಡಿಗೆ ಎರಡು ಚಕ್ರಗಳು - ಒಂದು ವಿಧಿ, ಒಂದು ಪುರುಷ ಪ್ರಯತ್ನ.
ಯಾವುದು ಮೊದಲೇ ಬರೆಯಲ್ಪಟ್ಟಿದೆಯೋ ಮತ್ತು  ಬದಲಾವಣೆ ಮಾಡಲು ಸಾಧ್ಯವಿಲ್ಲವೋ ಅದು ವಿಧಿ /ಹಣೆಬರಹ.
ನಮ್ಮ ಪ್ರಯತ್ನದಿಂದ ನಮ್ಮ ಜೀವನವನ್ನು ರೂಪಿಸಿಕೊಳ್ಳುವಂತಹದ್ದು  ಪುರುಷಪ್ರಯತ್ನ.

ಲಕ್ಷ್ಮಣನು ಮುಂದುವರಿಸುತ್ತಾ "ಅದಾರು ಬರುತ್ತಾರೋ ಬರಲಿ, ಲೋಕಪಾಲರೇ ಬರಲಿ ಇಂದು ನಿನಗಾಗುವ ಪಟ್ಟಾಭಿಷೇಕವನ್ನು ತಡೆಯಲು ಸಾಧ್ಯವಿಲ್ಲ. ನನ್ನನ್ನು ಎದುರಿಸಬೇಕು ಅವರು. ಇನ್ನು, ವನವಾಸ. ಅದು ನಡೆಯಲಿ - ಅವರಿಬ್ಬರು ವನವಾಸ ಮಾಡಲಿ, ಮಾಡಿಸೋಣ. ಕೈಕೇಯಿ ದಶರಥರನ್ನು ಕಾಡಿಗಟ್ಟೋಣ, ಅವರಿಗೆ ರುಚಿ ಗೊತ್ತಾಗಲಿ. 14 ವರ್ಷಗಳು ಅಲ್ಲಿರಲಿ. ನಿನ್ನನ್ನು ಕಾಡಿಗೆ ಕಳುಹಿಸುವ ಅವರ ಆಸೆಯನ್ನು ನಾನು ಕತ್ತರಿಸಿ ಹಾಕುತ್ತೇನೆ. ನೀನೇ ವನವಾಸ ಮಾಡಬೇಕಾ? ಮಾಡಬಹುದು. ಬಾಳುವಷ್ಟು ಬಾಳಿ, ಆಳುವಷ್ಟು ಆಳಿ ನಿನ್ನ ಮಕ್ಕಳಿಗೆ ರಾಜ್ಯವನ್ನು ಕೊಟ್ಟಮೇಲೆ ವಾನಪ್ರಸ್ಥಕ್ಕೆ ನಿನ್ನ ಜೊತೆಯಲ್ಲಿ ನಾನೂ ಸೇರಿ ಹೋಗೋಣ. ನಿನ್ನ ರಾಜ್ಯವನ್ನು ನಾನು ರಕ್ಷಿಸದೇ ಇದ್ದರೆ ನನಗೆ ವೀರಲೋಕಗಳು ಸಿಗದೇ ಇರಲಿ - ಇದು ನನ್ನ ಪ್ರತಿಜ್ಞೆ. ಇದೆಲ್ಲ ಹಾಗಿರಲಿ, ನಿನಗೀಗ ಕೆಲಸವೇನೆಂದರೆ ಪಟ್ಟಾಭಿಷೇಕದ ಸ್ಥಳಕ್ಕೆ ಹೋಗಿ ಧಾರ್ಮಿಕವಿಧಿಗಳನ್ನು ಮುಗಿಸಿ ಪಟ್ಟಾಭಿಷೇಕ ಮಾಡಿಕೊಳ್ಳುವುದಷ್ಟೇ. ಉಳಿದದ್ದೆಲ್ಲ ನನಗಿರಲಿ. ಅಪ್ಪಣೆಕೊಡು ನನಗೆ." ಎಂದನು.

ಯಾರು ಧರ್ಮಕ್ಕಾಗಿ ಯುದ್ಧ ಮಾಡುತ್ತಾ ಸಾಯುತ್ತಾರೋ, ಅವರಿಗೆ ವೀರಲೋಕ ಪ್ರಾಪ್ತಿಯಾಗುತ್ತದೆ.
ಕ್ಷತ್ರಿಯನು ಯುದ್ಧದಲ್ಲಿ ಗೆದ್ದರೆ ಇಹಲೋಕದಲ್ಲಿ ರಾಜ್ಯ, ಸೋತರೆ ವೀರಲೋಕ ದೊರಕುತ್ತದೆ.

ಲಕ್ಷ್ಮಣನು ರಾಮನಿಗೆ - ಒಂದುವೇಳೆ ದಶರಥನು ವಿಚಲಿತನಾಗಿ ತನ್ನ ಸೈನ್ಯಕ್ಕೆ ಯುದ್ಧದ ಅಪ್ಪಣೆ ಮಾಡಿದರೆ, ತಾನೊಬ್ಬನೇ ಇಡೀ ಸೈನ್ಯ  ಸಮುದಾಯವನ್ನು ಎದುರಿಸುತ್ತೇನೆ ಎಂದನು.
ಬಾಹುಗಳು ಇರುವುದು ಶೋಭೆಗಲ್ಲ. ಧನಸ್ಸು ಇರುವುದು ಅಲಂಕಾರಕ್ಕಲ್ಲ. ಕತ್ತಿ ಇರುವುದು ಸೊಂಟಕ್ಕೆ ಕಟ್ಟಲು ಅಲ್ಲ. ಬಾಣಗಳಿರುವುದು ಬತ್ತಳಿಕೆಯಲ್ಲಿ ಇರುವುದಕ್ಕೆ ಅಲ್ಲ.
ಇದೆಲ್ಲದಕ್ಕೂ ಶತ್ರು ಸಂಹಾರದ ಕಾರ್ಯಗಳಿದೆ ಎಂದು ವೀರತನದ ಮಾತುಗಳನ್ನು ಆಡಿದನು ಲಕ್ಷ್ಮಣ.
ಒಬ್ಬ ವ್ಯಕ್ತಿಯ ಮೇಲೆ ಅನೇಕ ಬಾಣಗಳನ್ನ ಪ್ರಯೋಗ ಮಾಡಿ ಹತಗೊಳಿಸುವುದು ಮತ್ತು ಒಂದೇ ಬಾಣದಿಂದ ಅನೇಕ ಯೋಧರನ್ನು , ಆನೆಗಳನ್ನು , ಅಶ್ವಗಳನ್ನು ಹತಗೊಳಿಸುವುದು ಲಕ್ಷ್ಮಣನಿಗೆ ತಿಳಿದಿತ್ತು.

ಲಕ್ಷ್ಮಣನ ಮಾತುಗಳನ್ನು ಆಲಿಸಿದ ರಾಮನು ಲಕ್ಷ್ಮಣನ ಕಣ್ಣೀರನ್ನು ಒರೆಸಿ, ಶತೃಗಳಿಗೆ ಮಾಡುವಂತೆ ನಮ್ಮವರಿಗೆ ಮಾಡುವುದು ಸರಿಯಲ್ಲ. ನಾನು ಪಿತೃವಾಕ್ಯ ಪರಿಪಾಲನೆ ಮಾಡುತ್ತೇನೆ, ನೀನು ನನ್ನನ್ನು ಅನುಸರಿಸು ಎಂದು ಲಕ್ಷ್ಮಣನಿಗೆ ಹೇಳಿದನು.

ಆಗ ಇದನ್ನೆಲ್ಲ ಕೇಳಿದ  ಕೌಸಲ್ಯೆಯು, ದಶರಥನಿಗೆ ನನ್ನಲ್ಲಿ ಜನಿಸಿದ ರಾಮ ಕಾಡಿಗೆ ಹೋಗಬೇಕಾ?? ಹುಟ್ಟಿದ ಮೇಲೆ ದುಃಖವನ್ನು ಕಾಣದವನು, ಎಲ್ಲರಿಗೂ ಪ್ರಿಯ ಮಾತುಗಳನ್ನು ಆಡಿ ಜೀವನ ಮಾಡಿದವನು, ಧರ್ಮಾತ್ಮನಾದ ರಾಮನು ತನ್ನಿಂದ ದೂರವಾಗಬೇಕಾ?? ರಾಮನ ನೌಕರರು (ಆಳುಗಳು) ಮೃಷ್ಟಾನ್ನವನ್ನು ಊಟ ಮಾಡುವಾಗ, ರಾಮನು ಮಾತ್ರ ಕಾಡಿಗೆ ಹೋಗಿ ಗೆಡ್ಡೆ -ಗೆಣಸನ್ನು ತಿಂದು ಜೀವನ ಮಾಡಬೇಕಾ?? ಎಂದು ದುಃಖ ಪಟ್ಟಳು.

ಕೌಸಲ್ಯೆಯು ತನ್ನ ಮಾತನ್ನು ಮುಂದುವರಿಸುತ್ತಾ, ತನ್ನ ಹೃದಯದಲ್ಲಿ ಶೋಕಾಗ್ನಿಯೊಂದು ಹುಟ್ಟಿಕೊಂಡಿದೆ. ಅದಕ್ಕೆ ರಾಮನ ವಿರಹವೇ ಗಾಳಿ. ನನ್ನೀ ಗೋಳಾಟವೇ ಸೌದೆ, ಕಣ್ಣೀರು ಆಹುತಿ, ಘೋರಚಿಂತೆಯೇ ಹೊಗೆ. ನೀನಿಲ್ಲದಾಗ ಈ ಬೆಂಕಿ ನನ್ನನ್ನು ಸುಟ್ಟುಹಾಕುವುದು ಎಂದು ಶೋಕಿಸಿದಳು. ಹಾಗಾಗಿ ನಾನೂ ಬರುವೆ ನಿನ್ನ ಜೊತೆ.
ಹೇಗೆ ಗೋವು ಕರುವನ್ನು ಬಿಟ್ಟು ಇರುವುದಿಲ್ಲವೋ ಹಾಗೆ ನಾನು ರಾಮನನ್ನು  ಬಿಟ್ಟು ಇರುವುದಿಲ್ಲ ಎಂದು ಕೌಸಲ್ಯೆ ಹೇಳಿದಳು.

ರಾಮನು ಕೌಸಲ್ಯೆಯನ್ನು ಸಮಾಧಾನ ಮಾಡುತ್ತಾ , ನೀನಿಲ್ಲವೆಂದರೆ ಕೈಕೇಯಿಯಷ್ಟೇ ಇರುತ್ತಾಳೆ, ದೊರೆಯ ಗತಿ ಏನು?
ಪತಿವ್ರತೆಯಾದವಳು ಯಾವ ಕಾರಣಕ್ಕೂ ದೊರೆಯನ್ನು ತ್ಯಾಗ ಮಾಡಬಾರದು ಎಂದನು. ರಾಮನ ಈ ಮಾತಿಗೆ ಕೌಸಲ್ಯೆ ಒಮ್ಮೆ ಒಪ್ಪಿದಳು. ನಿನಗೆ ಗೊತ್ತೇ ಆಗುವುದಿಲ್ಲ, 14 ವರ್ಷ ವನದಲ್ಲಿ ವಿಹರಿಸಿ ಬರುತ್ತೇನೆ ಅಮ್ಮ ಎಂದ.
ಅದೇಕ್ಷಣದಲ್ಲಿ ಕೌಸಲ್ಯೆಗೆ ಮತ್ತೆ ಕೈಕೇಯಿಯ ನೆನಪಾಗಿ, ಸವತಿಯರ ಮಧ್ಯೆ ಇರಲಾಗದು, ನಾನು ವನವಾಸಕ್ಕೆ ಬರುತ್ತೇನೆ ಎಂದಳು. ಆಗ ರಾಮನು ಅಳುತ್ತಲೇ ತಾಯಿಯನ್ನು ಸಮಾಧಾನ ಮಾಡಿದ. ದೊರೆಯ ಮಾತನ್ನು ಮೀರುವ ಹಾಗಿಲ್ಲ. ನಿನಗೆ ಪತಿಯ ಮಾತನ್ನು ಮೀರುವ ಹಾಗಿಲ್ಲ. ನನಗೆ ತಂದೆಯ ಮಾತನ್ನು ಮೀರುವ ಹಾಗಿಲ್ಲ ಎಂದು ರಾಮನು ಸಮಾಧಾನ ಮಾಡಿ, ಭರತನು ನಿನ್ನನ್ನು ಬಿಟ್ಟುಕೊಡಲಾರನಮ್ಮ, ಅವನು ಧರ್ಮಾತ್ಮ. ನಾನಿಲ್ಲದ ಕೊರತೆಯನ್ನು ನೀಗಿಯಾನು ಅವನು. ನಾನು ಮಾಡಬೇಕಾದ್ದನ್ನು ಧರ್ಮಾತ್ಮನಾದ ಭರತನು ಮಾಡುವನು ಎಂದನು.
ನನ್ನ ವಿರಹದ ಶೋಕದಲ್ಲಿ ದೊರೆ ನಶಿಸಿಹೋಗದಂತೆ ಸಮಾಧಾನ ಮಾಡು ಎಂದು ಕೌಸಲ್ಯೆಗೆ ಹೇಳುತ್ತಾ, ಪಾತಿವ್ರತ್ಯದ ಮಹಿಮೆಯನ್ನು ವಿವರಿಸಿದನು.

ಜೀವನದಲ್ಲಿ ಉತ್ಕೃಷ್ಟವಾದದ್ದನ್ನು ಪಡೆಯಲು  ಕಾಲಪ್ರತೀಕ್ಷೆಯನ್ನು ತಪಸ್ಸಿನಂತೆ ಮಾಡಬೇಕು
ಕಾಲಪ್ರತೀಕ್ಷೆಯನ್ನು ಮಾಡು, ನಾನು ಮರಳಿ ಬಂದಾಗ ನೂರು ಪಟ್ಟು ಸುಖ ಬರುತ್ತದೆ ಅಮ್ಮಾ, ಎಂದು ತಾಯಿಯನ್ನು ಸಮಾಧಾನ ಪಡಿಸಿದನು.

'ಆ ಕಾಲಕ್ಕೆ ಮೀರಿದ್ದು ಯಾವುದೂ ಇಲ್ಲ, ನಿನ್ನ ಅಚಲ ನಿರ್ಧಾರವನ್ನು ಬದಲಿಸುವುದು ಸಾಧ್ಯವಿಲ್ಲ. ಇದು ವಿಧಿಯೇ. ಹೋಗಿ ಬಾ ಮಗನೇ' ಎಂದು ರಾಮನ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ತಿಳಿದ ದೇವಿ ಕೌಸಲ್ಯೆಯು ರಾಮನಿಗೆ ಪ್ರಯಾಣಹೊರಟವರಿಗೆ ಮಾಡತಕ್ಕಂತಹಾ ಮಂಗಲಕಾರ್ಯಗಳನ್ನು ಮಾಡಿದಳು. ನನ್ನಿಂದ ಇದನ್ನು ತಡೆಯಲಾಗುತ್ತಿಲ್ಲ. ಆದ್ದರಿಂದ ರಘೋತ್ತಮನೇ ಹೋಗಿ, ಮರಳಿ ಬೇಗ ಬಾ ಎಂದಳು. ಸತ್ಪುರುಷರ ಮಾರ್ಗದಲ್ಲಿರು.
ಯಾವ ಧರ್ಮವನ್ನು ನೀನು ಪಾಲನೆ ಮಾಡುತ್ತಿಯೋ, ಯಾವ ದೇವರಗಳನ್ನು ನೀನು ಪೂಜಿಸುತ್ತಿಯೋ ಅವುಗಳು ನಿನ್ನನ್ನು ರಕ್ಷಣೆ ಮಾಡಲಿ ಎಂದು ಪ್ರಾರ್ಥಿಸಿದಳು. ಬ್ರಹ್ಮಾಂಡದಲ್ಲಿ ಇನ್ನೇನು ಬಾಕಿ ಇಲ್ಲದಂತೆ ಎಲ್ಲರಿಗೂ ಕೈಮುಗಿದು ರಾಮನನ್ನು ರಕ್ಷಿಸಿ ಎಂದು ಪ್ರಾರ್ಥಿಸಿ, ಪೂಜಿಸಿದಳು. ರಾಮನಿಗೆ ಮಂಗಲವಾಗಬೇಕೆಂದು ಮತ್ತೆ ಹೋಮವನ್ನು ಮತ್ತು ಬಲಿಯನ್ನು ಮಾಡಿಸಿದಳು. ಕೊನೆಯಲ್ಲಿ ತಾನೇ ಮಾಡುವಂತಹಾ ಮಂಗಲವನ್ನು ರಾಮನಿಗೆ ಮಾಡಿ, ವಿಶಲ್ಯಕರಣಿ ಎನ್ನುವ ವಿಶೇಷ ದಿವ್ಯೌಷಧಿಯನ್ನು ರಾಮನಿಗೆ ಕಟ್ಟಿ ಅಭಿಮಂತ್ರಣೆ ಮಾಡಿದಳು. ಯುದ್ಧದಲ್ಲಿ ದೇಹದ ಒಳಗುಳಿದ ಆಯುಧದ ಚೂರುಗಳನ್ನು ಸ್ಪರ್ಶ - ಆಘ್ರಾಣದ ಮೂಲಕ ಹೊರಹಾಕುವ ವಿಶೇಷ ಶಕ್ತಿ ವಿಶಲ್ಯಕರಣಿ ಔಷಧಕ್ಕಿತ್ತು. ಇದೆಲ್ಲದರ ನಂತರ ದುಃಖವಶಳಾಗಿದ್ದರೂ ತುಂಬಾ ಸಂತೋಷಗೊಂಡವಳಂತೆ, ಶಿಥಿಲವಾಕ್ಯಗಳಿಂದ ಮಾತನಾಡುತ್ತಾ, ತಬ್ಬಿಕೊಂಡು ನಿನ್ನೆಲ್ಲಾ ಸಂಕಲ್ಪಗಳು ಸಿದ್ಧಿಯಾಗಿ ಸರ್ವಸಿದ್ಧಾರ್ಥನಾಗಿ ಹೋಗಿ ಬಾ ಎಂದಳು. ಮಗನನ್ನು ಬಲಗೊಂಡು ಮತ್ತೆ ಮತ್ತೆ ಆಲಂಗಿಸಿದಳು. ನೀನು ಮರಳಿ ಬಂದ ದಿನ ಸೀತೆ ಮತ್ತು ನನಗೆ ಪರಮಮಂಗಲ ದಿನ.

ರಾಮನು ತಾಯಿಯ ಪಾದಗಳನ್ನು ಮರಮರಳಿ ಒತ್ತಿ ಒತ್ತಿ ನಮಸ್ಕರಿಸಿದನು. ಹಾಗೆಮಾಡಿ ಎದ್ದ ರಾಮನಲ್ಲಿ ಅತಿಶಯವಾದ ಶೋಭೆಯು ಪ್ರಜ್ವಲಿಸಿತು.
ತಾಯಿಯ ಆಶೀರ್ವಾದ ಜೀವನದಲ್ಲಿ ವ್ಯಕ್ತಿತ್ವಕ್ಕೆ ಶೋಭೆಯನ್ನು ತರುವುದು

ಕಾಡಿನಿಂದ ಮರಳಿ ಬರುವವರೆಗೆ ಬೇಕಾಗುವಷ್ಟು ಸಮಾಧಾನ ಮಾಡಿ, ಸೀತೆಯಿರುವಲ್ಲಿಗೆ ರಾಮನು ರಾಜಮಾರ್ಗದಲ್ಲಿ ನಡೆದುಕೊಂಡು ಹೊರಟಾಗ ರಾಜಮಾರ್ಗವೇ ಶೋಭಿಸಿತು.
18 ವರ್ಷದವಳಾದ ಸೀತೆಗೆ ರಾಜತಂತ್ರದ ಜ್ಞಾನವಿತ್ತು. ತಾನೇ ಸ್ವತಃ ದೇವಕಾರ್ಯಗಳನ್ನೆಲ್ಲ ಮಾಡಿ, ಸೀತೆಯು ರಾಮನ ಪ್ರತೀಕ್ಷೆಯನ್ನು ಮಾಡುತ್ತಿದ್ದಳು, ಆಕೆಗೆ ಈ ವಿಚಾರಗಳಾವುವೂ ಗೊತ್ತಿಲ್ಲ. ರಾಮ ತನ್ನ ಮನೆಗೆ ಬಂದ. ಕೊಂಚ ತಲೆ ತಗ್ಗಿಸಿದ ರಾಮನನ್ನು ನೋಡಿ ಸೀತೆಯು ಏನೋ ಅಶುಭ ನಡೆದಿದೆ ಎನ್ನುವುದನ್ನು ಗುರುತಿಸಿ, ರಾಮನೆಡೆಗೆ ಧಾವಿಸಿದಳು. ಸೀತೆಯ ಮುಂದೆ ರಾಮ ತನ್ನ ಮನಸ್ಸಿನಲ್ಲಿರುವದನ್ನು ತೋರಿಸದೆ ಇರಲು ಸಾಧ್ಯವಿಲ್ಲ, ಇರಲಾರ.

ರಾಮ ಮತ್ತು ಸೀತೆ ಎಂದರೆ ಸೂರ್ಯ ಮತ್ತು ಸೂರ್ಯಪ್ರಭೆ ಇದ್ದ ಹಾಗೆ, ಅದೆರಡು ಬೇರೆ ಆಗಲು ಸಾಧ್ಯವಿಲ್ಲ ಎಂದು ವಾಲ್ಮೀಕಿಗಳು ವರ್ಣಿಸಿದ್ದಾರೆ.
ನಾವು ಅತಿಯಾಗಿ ಕಾಳಜಿ ಮಾಡುವವರ ದುಃಖವು ಕೇವಲ ಅವರ ಮುಖವರ್ಣದಿಂದಲೇ ಅರ್ಥವಾಗುತ್ತದೆ
ತುಂಬಾ ದುಃಖದಿಂದ ಸೀತೆಯು ಈ ಹೊತ್ತಿನಲ್ಲಿ ಯಾಕಿಷ್ಟು ಬೇಸರ ಎಂದು ರಾಮನಿಗೆ ಕೇಳಿದಳು. ಶ್ವೇತ ಛತ್ರಗಳು ವಾಗ್ಮಿಗಳು, ಮಂತ್ರಿಗಳು, ಸೇನಾಪತಿಗಳು, ಪೌರರು, ಜನಪದರು, ರಾಜ ರಥ, ಶತ್ರುಂಜಯವೆಂಬ ಆನೆ, ಭದ್ರಾಸನ ಎಲ್ಲ ಎಲ್ಲಿ ಹೋಯಿತು ಎಂದು ಸೀತೆಯು ರಾಮನನ್ನು ಪ್ರಶ್ನಿಸಿದಳು.

ಮುಂದೆ ರಾಮನು ಸೀತೆಗೆ ಹೇಗೆ ಉತ್ತರಿಸಿದ ಎನ್ನುವ ಸೀತಾರಾಮ ಸಂವಾದ ಭಾಗವನ್ನು ಮುಂದಿನ ಪ್ರವಚನದಲ್ಲಿ ಕೇಳೋಣ......

#DhaaraRaamayan

No comments:

Post a Comment

Please leave your comments here.....