#ಧಾರಾ_ರಾಮಾಯಣ - 23-07-2019 ದಿನ30
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ
ಪ್ರಿಯರಾದವರಿಗೆ ಪ್ರಿಯ ವಾರ್ತೆ ಹೇಳುವುದು ಸುಲಭ. ಅಪ್ರಿಯರಾದವರಿಗೆ ಅಪ್ರಿಯ ವಾರ್ತೆ ಹೇಳುವುದು ಸುಲಭ.
ಆದರೆ ಅಪ್ರಿಯರಾದವರಿಗೆ ಪ್ರಿಯವಾರ್ತೆಯನ್ನು ಹೇಳಲು ದೊಡ್ಡ ಮನಸ್ಸು ಬೇಕು. ಮತ್ತೂ ಕಷ್ಟ, ಪ್ರಿಯರಾದವರಿಗೆ ಅಪ್ರಿಯ ವಾರ್ತೆ ಹೇಳುವುದು. ಅದಕ್ಕೆ ಗಟ್ಟಿಮನಸ್ಸು ಬೇಕು. ಆ ಕಷ್ಟವನ್ನು ರಾಮ ಅನುಭವಿಸುತ್ತಾ ಇದ್ದಾನೆ.
ತನಗದು ಅಪ್ರಿಯವಲ್ಲ, 'ಸತ್ಯ'ವಷ್ಟೆ. ಆದರೆ ತಾಯಿಗೆ? ಅದು ಹಾಲಾಹಲ!
ಅಷ್ಟು ಸಂತೋಷದಲ್ಲಿದ್ದಾಳೆ ಕೌಸಲ್ಯೆ. ಮಗನಿಗಾಗಿಯೇ ದೇವತಾ ತರ್ಪಣ ನೀಡುತ್ತಿದ್ದಾಳೆ. ವ್ರತವನ್ನು ಆಚರಿಸುತ್ತಿದ್ದಾಳೆ. ಹವನವು ನಡೆಯುತ್ತಿದೆ. ಆ ಸಂದರ್ಭ ರಾಮನಾಗಮನದಿಂದ ಮತ್ತಷ್ಟು ಸಂತುಷ್ಟಳಾಗಿ ಕುಳಿತುಕೊಳ್ಳಲಿಕ್ಕೆ ರತ್ನಪೀಠದ ವ್ಯವಸ್ಥೆ ಮಾಡುತ್ತಾಳೆ, ಊಟಕ್ಕೆ ಕರೆಯುತ್ತಾಳೆ! ಈಗ ರಾಮನು ಆ ಅಪ್ರಿಯ ವಾರ್ತೆಯನ್ನು ನುಡಿಯಬೇಕು.
ರತ್ನಪೀಠವನ್ನು 'ಸ್ವೀಕರಿಸಿದೆ' ಎಂಬಂತೆ ಮುಟ್ಟಿದನಂತೆ, ಊಟದ ಬಗ್ಗೆ ಉತ್ತರಿಸುವ ಮೊದಲು ವಿಷಯ ಹೇಳಬೇಕಾಗಿದೆ. ರಾಮನ ಸ್ವಭಾವವೇ ವಿನಯ. ವಿನಯದಿಂದ, ದೇವರಂಥಾ ಅಮ್ಮನ ಕುರಿತಾದ ಗೌರವದಿಂದ ಮತ್ತಷ್ಟು ಬಾಗಿ,
'ಅಮ್ಮಾ, ನೀನರಿಯೆ, ನಿನ್ನ ಮಟ್ಟಿಗೆ ದೊಡ್ಡ ಭಯವೊಂದು ಕಾದಿದೆ ನಿನ್ನನ್ನು. ನಾನು ಮುಂದೆ ಹೇಳುವ ಮಾತುಗಳು ನಿನಗೆ, ಸೀತೆಗೆ, ಲಕ್ಷ್ಮಣನಿಗೆ ತುಂಬಾ ನೋವಾಗುವಂತಹಾದ್ದು, ಕೇಳಲಿಕ್ಕೆ ಕಷ್ಟವಾಗುವಂತಹಾದ್ದು..'
ನೇರವಾಗಿ ಹೇಳುತ್ತಾನೆ. 'ದಂಡಕಾರಣ್ಯಕ್ಕೆ ಹೊರಟೆನಮ್ಮಾ. ರತ್ನಪೀಠ ತೆಗೆದುಕೊಂಡು ಏನು ಮಾಡಲಿ ದರ್ಭಾಸನದಲ್ಲಿ ಕುಳಿತುಕೊಳ್ಳುವ ಕಾಲವಿದು. 14 ವರ್ಷ ನಾನು ನಿರ್ಜನ ವನದಲ್ಲಿರಬೇಕಮ್ಮ, ಗೆಡ್ಡೆ ಗೆಣಸು ಹಣ್ಣು ಹಂಪಲು ಸೇವಿಸಿಕೊಂಡು ಬದುಕಬೇಕು ಮುನಿಗಳ ಜೀವನದಂತೆ. ಯೌವರಾಜ್ಯವನ್ನು ಭರತನಿಗೆ ರಾಜನು ಕೊಡಲಿದ್ದಾನೆ'. ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಕತ್ತರಿಸಿ ಕೆಡವಲ್ಪಟ್ಟ ಸಾಲವೃಕ್ಷದ ಕೊಂಬೆಯ ಹಾಗೆ ದೊಪ್ಪನೆ ಉರುಳಿ ಬಿದ್ದಳು ಕೌಸಲ್ಯೆ. ಬೋಧವೇ ತಪ್ಪಿ ಹೋಯಿತು. ಧರೆಗುರುಳಿದ ದೇವತೆಯಂತೆ ಕಂಡು ಬಂದಳು.
ಅವಳು ಆ ದುಃಖಕ್ಕೆ ಅರ್ಹಳಲ್ಲವೆಂದನಿಸಿತು ರಾಮನಿಗೆ. ಎಬ್ಬಿಸಿ ಕೂರಿಸುತ್ತಾನೆ, ಆದರೆ ಆಕೆಗೆ ಎಚ್ಚರವಿಲ್ಲ. ಆಕೆಯ ಮೈಗೆ ಹಿಡಿದ ಧೂಳನ್ನು ವರೆಸಿ ತುಂಬ ಪ್ರೀತಿಯಿಂದ ಅಮ್ಮನನ್ನು ನೇವರಿಸುತ್ತಾನೆ. ಇರುವಷ್ಟು ಹೊತ್ತು ಪ್ರೀತಿ ಮಾಡುವುದು ಬಿಟ್ಟು ಬೇರೆ ಅವಕಾಶವಿಲ್ಲ ರಾಮನಿಗೆ.
ಸಾವರಿಸಿಕೊಂಡು ಮುಂದೆ ಕೌಸಲ್ಯೆ ಹೇಳುತ್ತಾಳೆ, 'ಮಗನೇ, ನೀನು ಹುಟ್ಟದಿದ್ದರೆ ನನಗೆ ಒಂದೇ ಶೋಕ; ಬಂಜೆ ಕೌಸಲ್ಯೆ! ಅದು ಬಹಳ ಸಮಯ ಇತ್ತು. ಆದರೆ ಈ ಶೋಕದ ಮುಂದೆ ಅದೇನೂ ಅಲ್ಲ. ಪಟ್ಟ ಏರುವ ಹೊತ್ತಿನಲ್ಲಿ ಬೆಟ್ಟ (ಕಾಡು) ಏರುವೆಯಾದರೆ ಅದೇ ದುಃಖ ಒಳ್ಳೆಯದಿತ್ತು..'
ನೀನು ಹುಟ್ಟಿರದಿದ್ದರೇ ಚೆನ್ನಾಗಿರುತ್ತಿತ್ತು ಎಂಬರ್ಥದ ಮಾತುಗಳು. ಪಡೆದುಕೊಂಡು ಕಳೆದುಕೊಳ್ಳುವ ದುಃಖದ ಮುಂದೆ ಇಲ್ಲದಿರುವ ದುಃಖವೇ ಒಳ್ಳೆಯದು.
'ಪತಿಯ ಪತಿತ್ವದಲ್ಲಿ ಇಲ್ಲಿಯವರೆಗೆ ಸುಖವನ್ನು ಕಾಣಲಿಲ್ಲ, ನಾನು ಬದುಕಿದ ಕಾರಣವೇ ಅಲ್ಲಿ ಕಾಣದ ಸುಖವನ್ನು ಸುತನಲ್ಲಿ ಕಂಡೇನು ಎಂಬ ಆಸೆ. ಅದೂ ಇಲ್ಲದಾಯಿತೇ? ಕೈಕೇಯಿಯೆಂಬ ರಾಹುವಿನಿಂದ ಗ್ರಹಣಕ್ಕೊಳಗಾಗಿ ಸುಖವನ್ನು ಕಾಣದ ಬದುಕಿದು. ಪಟ್ಟದರಾಣಿ, ಯಜ್ಞಭಾಗಿನಿಯಾಗಿದ್ದುಕೊಂಡು ನನಗಿಂತ ಚಿಕ್ಕವರಾದ ಕೈಕೇಯಿ ಮತ್ತು ಅವಳ ಪರಿವಾರದಿಂದ ದಾಸಿಗಿಂತ ಕಡೆಯಾಗಿ ನೋವನುಭವಿಸಿರುವೆ. ಇನ್ನಂತೂ ತುಂಬ ಕೇಳಲಿಕ್ಕೆ ಇದೆ! ಸವತಿಯರಿಂದ ಕಿರುಕುಳಕ್ಕೊಳಗಾಗಿ ಬಾಳುವುದು ತುಂಬ ಕಷ್ಟ. ನನ್ನ ಶೋಕ, ವಿಲಾಪಕ್ಕೆ ಇನ್ನು ದಡವೇ ಇಲ್ಲ. ಅದು ಅನಂತ. ರಾಮನಿರುವಂತೆಯೇ ನಿರಾಕೃತೆ ನಾನಿಲ್ಲಿ. ಇನ್ನು ನೀನು ಹೊರಟುಬಿಟ್ಟರೆ? ಕೊನೆಪಕ್ಷ ನೀನು ಬಳಿಬಂದಾಗ ಸುಖವಿತ್ತು. ಇನ್ನು ನನಗೆ ಮರಣವೊಂದೇ ಗತಿ. ಕೈಕೇಯಿಯಿಂದ ಇನ್ನಿಲ್ಲದಂತೆ ನಿಗ್ರಹಕ್ಕೊಳಗಾದವಳು ನಾನು. ಗಂಡನಿಂದ ಉಪೇಕ್ಷಿತಳು. ಅತಂತ್ರವಾದವಳು. ನನ್ನ ಸ್ಥಿತಿ ಕೈಕೇಯಿಯ ದಾಸಿಯರಿಗೆ ಸಮ ಅಥವಾ ಅದಕ್ಕಿಂತಲೂ ಕಡೆ'.
'ಇನ್ನು ಮುಂದೆ? ಈವರೆಗೆ ಕೆಲವರಾದರೂ ನನ್ನನ್ನು ಭಾತಾಡಿಸುತ್ತಿದ್ದವರು, ಗೌರವಿಸುತ್ತಿದ್ದವರು. ಮುಂದೆ ಕೈಕೇಯಿಯ ಮಗನ ಮುಖ ನೋಡಿದವರು ನನ್ನ ಕಡೆ ತಿರುಗಿಯೂ ನೋಡರು. ಯಾರೂ ಗತಿಯಿಲ್ಲ ನನಗೆ. ನಿನ್ನ ಮುಖ ನೋಡುವ ಯೋಗ ಇಲ್ಲ, ಮುಂದೆ ಆಕೆಯ ಮುಖವೇ ನೋಡಬೇಕು. ಕೈಕೇಯಿಯ ಸಿಡುಕು ಮೋರೆ, ಅಲ್ಲಿ ಬೇರೆ ಭಾವವೇ ಇಲ್ಲ. ಕ್ರೋಧ ಮಾತ್ರ ಅಕ್ಕನ ಬಳಿ! ಸಿಡುಕು-ಕೆಡುಕು ಇಷ್ಟೇ. ಎದೆಸೀಳುವ ಮಾತುಗಳೇ. ಆ ಮುಖವನ್ನ ಹೇಗೆ ನೋಡಲಿ ಈ ದೌರ್ಭಾಗ್ಯವಂತೆ? ಹತ್ತೇಳು ವರ್ಷಗಳು ನಿನ್ನಿಂದಾಗಿ ಬೆಳಕು ಬಂತು. ಮುಪ್ಪಿನಲ್ಲಿ ಸ್ವಲ್ಪವಾದರೂ ಸುಖದಿಂದ ನೆಮ್ಮದಿಯಿಂದ ಬಾಳುವೆನೆಂದು ಭಾವಿಸಿದೆ. ನನ್ನ ದುಃಖ ಅಕ್ಷಯವೆಂದು ಈಗ ತಿಳಿಯಿತು. ಈ ಅವಮಾನ, ತಿರಸ್ಕಾರದ ಮಧ್ಯೆ ಹೇಗೆ ಬದುಕಲಿ?'
'ಅದು ಬಿಡು, ಪರಿಪೂರ್ಣ ಚಂದ್ರಪ್ರಭೆಯ ನಿನ್ನ ಮುಖವನ್ನೇ ನೋಡದೆ ಈ ಹಾಳು ಬಾಳನ್ನು ದೌರ್ಭಾಗ್ಯವತಿ ನಾನು ಹೇಗೆ ಬಾಳಲಿ? ಈ ನನ್ನ ಹೃದಯ ಎಷ್ಟು ಕಲ್ಲಾಗಿರಬಹುದು, ಇಂತಹಾ ಸುದ್ದಿ ಕೇಳಿಯೂ ಒಡೆದಿಲ್ಲ! ಒಡೆದಿದ್ದರೆ ಚೆನ್ನಾಗಿತ್ತು. ನಾನೀಗ ಸಾಯಬೇಕಿತ್ತಲ್ಲ, ಬಹುಶಃ ಯಮಲೋಕದಲ್ಲಿಯೂ ನನಗೆ ಜಾಗವಿಲ್ಲವೇನೋ. ನನ್ನ ಸಂಯಮದ ಬದುಕು, ದಾನ, ವ್ರತ, ತಪಸ್ಸೆಲ್ಲವೂ ವ್ಯರ್ಥ. ಬಯಸಿದಾಗ ಮರಣಕ್ಕೂ ಅವಕಾಶವಿಲ್ಲವೇ?'
ಇಲ್ಲಿರಲು ಸಾಧ್ಯವಿಲ್ಲ, ಸಾವೂ ಇಲ್ಲ. ದುಃಖಿಸುತ್ತಾಳೆ ತಾಯಿ. ಮುದಿ ಬಡಕಲು ಹಸುವು ತನ್ನ ಕರುವನ್ನು ಹಿಂಬಾಲಿಸುವಂತೆ ನಾನು ನಿನ್ನ ಹಿಂದೆ ಕಾಡಿಗೆ ಬರುತ್ತೇನೆ, ಅದಕ್ಕೆ ಅವಕಾಶ ಕೊಡು ಎನ್ನುತ್ತಾ ದಿವ್ಯಸ್ತ್ರೀ ಗೋಳಾಡಿದಳು.
ರಾಮ ಸುಮ್ಮನಿದ್ದ, ಲಕ್ಷ್ಮಣ ಸುಮ್ಮನಿರಲಿಲ್ಲ. ' ಅಮ್ಮಾ, ನಿಮ್ಮ ಮಾತಿಗೆ 100 ಕ್ಕೆ 100 ಸಹಮತ ನನ್ನದು. ಅಣ್ಣ ಯಾಕೆ ಕಾಡಿಗೆ ಹೋಗಬೇಕು? ಒಂದು ಹೆಣ್ಣಿನ ಮಾತು ಕೇಳಿ ಅಣ್ಣ ರಾಜ್ಯವನ್ನು ತೊರೆದು ಕಾಡಿಗೆ ಹೋಗಬೇಕಾ? ವೃದ್ಧ ತಂದೆ, ಮುಪ್ಪಿನಲ್ಲಿ ಬುದ್ಧಿಯೂ ಕೆಟ್ಟು ಹಿಂದು-ಮುಂದಾಗಿ ಆ ಹೆಣ್ಣಿಗೆ ವಶನಾಗಿದ್ದಾನೆ. ಅಂತಹ ದೊರೆ ಬಾಯಿಗೆ ಬಂದಿದ್ದನ್ನು ಹೇಳಿದರೆ ಪಾಲಿಸಬೇಕಾ? ತಂದೆ ತಂದೆಯಾಗಿ, ದೊರೆ ದೊರೆಯಾಗಿ ಮಾತಾಡಬೇಕು. ಇದು ವಿವೇಕವಾ? ಇದು ಹೆಣ್ಣಿನ ಮರುಳು' ಎಂದು ಹೇಳುತ್ತಾನೆ.
ಕಾಡಿಗೆ ಕಳುಹಿಸುವುದು ಆಗಿನ ಕಾಲದ ಕಠಿಣ ಶಿಕ್ಷೆಯಾಗಿತ್ತು. 'ಅಂತಹ ಅಪರಾಧವೇನಿದೆ ಅಣ್ಣನದು? ಕಾಡಿಗಟ್ಟುವಂಥದ್ದಿರಲಿ, ಸಣ್ಣ ದೋಷವಾದರೂ ಏನಿದೆ? ಯಾವ ನಗರಕ್ಕೂ ಬರಕೂಡದು, ಕಾಡಲ್ಲೇ ಇರಬೇಕು. ಏನು ಮಾಡಿದ್ದಾನೆ ಅಂಥಾದ್ದನ್ನು ನಮ್ಮಣ್ಣ? ಇಡೀ ಲೋಕದಲ್ಲಿ ರಾಮನಲ್ಲಿ ದೋಷವಿದೆ ಎನ್ನುವವರು ಒಬ್ಬರೂ ಇಲ್ಲ, ರಾಮನ ಪರಮವೈರಿಯೂ ರಾಮನಲ್ಲಿ ದಛಷವಿದೆ ಎಂದು ಹೇಳುವವರು ಇಲ್ಲ! ಯಾಕೀಪರಿ ಶಿಕ್ಷೆ? ದೇವರಂಥವನು, ಸರಳ, ಕಪಟವಿಲ್ಲ, ಸುಶಿಕ್ಷಿತ, ಗುರುಹಿರಿಯರ ನಿಯಂತ್ರಣದಲ್ಲಿರುವವನು. ಶತ್ರುಗಳಲ್ಲಿಯೂ ವಾತ್ಸಲ್ಯವನ್ನು ತೋರುವವನು. ಧರ್ಮದಲ್ಲಿ ದೃಷ್ಟಿ ನೆಟ್ಟವನು. ಯಾರಾದರೂ ಇಂತಹ ಮಗನನ್ನು ತ್ಯಾಗ ಮಾಡುತ್ತಾನೆಯೇ? ಚೂರೂ ದೋಷವಿಲ್ಲದ ಮಗನನ್ನು ಕಾಡಿಗಟ್ಟಲು ರಾಜನಿಗೆ ಮರಳಿ ಬಾಲ್ಯ ಬಂದಿದೆ. ಮಕ್ಕಳಾಟಿಕೆ. ಯಾವ ಮಗನೂ ರಾಜವೃತ್ತವು ಒಪ್ಪದ ತಂದೆಯ ಇಂತಹ ಅರಳು ಮರುಳಿನ ಮಾತನ್ನು ನಡೆಸಬೇಕಿಲ್ಲ' ಎಂದು ತಾಯಿಯ ಬಳಿ ನುಡಿಯುತ್ತಾನೆ ಲಕ್ಷ್ಮಣ.
ಬಳಿಕ ಅಣ್ಣನಿಗೆ, 'ಇನ್ನೊಬ್ಬನಿಗೆ ಈ ವಿಷಯ ಗೊತ್ತಾಗುವುದರ ಮೊದಲು ಪಟ್ಟವನ್ನೇರು. ಕೈಗೆ ತೆಗೆದುಕೋ ಆಡಳಿತವನ್ನು. ನಾನಿರುವೆ ಜೊತೆಯಲ್ಲಿ. ಪಟ್ಟಾಭಿಷೇಕದ ಸಮಯದಲ್ಲಿ ವಿಪ್ಲವ ಬಂದರೆ ನನ್ನ ಧನುಸ್ಸು ಉತ್ತರ ಕೊಡುತ್ತದೆ. ನನ್ನ ಬಾಣಗಳ ರುಚಿಯನ್ನು ಅಂತಹವರು ನೋಡುತ್ತಾರೆ. ನನಗೆ ನೀನೊಬ್ಬನೇ, ಮತ್ಯಾರೂ ನನ್ನವರಲ್ಲ. ಯಾರಾದರೂ ಭಲತನ ಕಡೆಯವನು ಕಂಡುಬಂದರೆ ಅವರನ್ನು ಧ್ವಂಸ ಮಾಡುತ್ತೇನೆ. ನಾವು ಮೃದುವಾಗಿದ್ದುದರ ಫಲವಿದು. ಮೃದುವಾಗಿರುವವರಿಗೆ ಬರೀ ಅವಮಾನ, ತಿರಸ್ಕಾರ. ದಂಡವೊಂದೇ ಇಂಥಾ ಅನ್ಯಾಯಕ್ಕೆ ಉತ್ತರ' ಎನ್ನುತ್ತಾ ತಂದೆಯ ಬಗ್ಗೆಯೂ ಕ್ರುದ್ಧನಾಗಿ ಬೈಯ್ಯುತ್ತಾನೆ. 'ಕೈಕೇಯಿಯ ಸಂಗದಿಂದ ತಂದೆಯು ದುಷ್ಟನಾಗುವುದಾದರೆ, ಮತ್ತೆ ಯಾವ ಬಾಂಧವ್ಯವೂ ಇಲ್ಲ. ಸೆರೆಗೆ ತಳ್ಳಿ, ತಲೆ ಕಡಿಯುವುದೇ. ತಂದೆಯಾದರೂ ಕೂಡ ಕಾರ್ಯಾಕಾರ್ಯದ ಪರಿವೆಯಿಲ್ಲದೇ ದಾರಿ ತಪ್ಪಿದರೆ ತಕ್ಕ ಶಾಸ್ತಿ ಮಾಡಬೇಕು.'
ಕೌಸಲ್ಯೆಯ ಮುಂದೆ ತನ್ನ ಭಾವವನ್ನು ಪ್ರಕಟಿಸುತ್ತಾ 'ಅಮ್ಮ, ನನ್ನೆಲ್ಲಾ ಭಾವಸಮರ್ಪಣೆ ಅಣ್ಣನಲ್ಲಿ. ಯಾವ ಆಪತ್ತಿಗಾದರೂ ನನ್ನ ಪ್ರವೇಶ ಮೊದಲು, ಆಮೇಲೆ ರಾಮ. ಅಣ್ಣನೇ ನನ್ನ ಸರ್ವಸ್ವ. ಅಣ್ಣ ಬೆಂಕಿಗೆ ಹೋಗಬೇಕೆಂದರೆ ಮೊದಲು ನಾನು, ಕಾಡಿಗೆ ಹೋಗಬೇಕೆಂದರೆ ಮೊದಲು ನಾನು. ಲಕ್ಷ್ಮಣ ಇದ್ದಾನೆ ಮುಂದೆ. ನೀ ಅಳಬೇಡ ಅಮ್ಮ, ನನ್ನ ಪರಾಕ್ರಮದಿಂದ ನಿನ್ನ ದುಃಖವನ್ನು ಪರಿಹರಿಸುವೆ.' ಎನ್ನುತ್ತಾನೆ ಕೌಸಲ್ಯೆಗೆ. ಒಂದಷ್ಟು ಬೈದ ತಂದೆಗೆ.
ಕೌಸಲ್ಯೆಗೂ ಸ್ವಲ್ಪ ಉತ್ಸಾಹ ಬಂತು. ಬೆಂಬಲಕ್ಕೆ ಯಾರೋ ಇದ್ದಾರೆ ಎಂಬ ಕಾರಣಕ್ಕೆ. ದಿಕ್ಕೇ ಕಾಣದಾದಾಗ ಒಂದು ಸಣ್ಣ ದಿಶೆ. 'ಸರಿಯಾಗಿ ಆಲೋಚಿಸಿ ನಿನಗೆ ಸರಿಯೆನ್ನಿಸಿದ್ದನ್ನು ಮಾಡು. ಲಕ್ಷ್ಮಣನ ಕೆಲವು ಮಾತುಗಳು ಸರಿಯಿದೆ, ಅದನ್ನು ಮಾಡು. ನನ್ನ ಸವತಿಯ ಮಾತುಗಳನ್ನು ಕೇಳುವುದು ಸರಿಯಲ್ಲ. ಮಾತೃಶುಶ್ರೂಷೆ ನಿನಗೆ ಧರ್ಮ. ತಾಯಿಯ ಸೇವೆಯೇ ದೊಡ್ಡ ತಪಸ್ಸು. ಮಾತೃವಚನಪರಿಪಾಲನೆಯೂ ಮುಖ್ಯ, ನಾನೊಪ್ಪಲಾರೆ ನೀನು ಕಾಡಿಗೆ ಹೋಗುವುದನ್ನು' ಎನ್ನುತ್ತಾ ಧರ್ಮಪಾಶದಿಂದ ರಾಮನನ್ನು ಕಟ್ಟಿಹಾಕುವ ಪ್ರಯತ್ನ ಮಾಡ್ತಾಳೆ. 'ನೀನು ಹೋಗಲೇಬೇಕು ಎಂದಾದರೆ, ನಾನು ಪಾಯೋಪವೇಶ ಮಾಡುವೆ. ನಾನು ಹಾಗೆ ಸತ್ತಾಗ ನಿನಗೆ ಪಾಪ ಬರುವುದು ನೋಡು.' ಎಂದು ಕೇಳಿದಳು.
ರಾಮನ ಭಾವ, 'ನಿನ್ನ ಮಾತನ್ನು ಪಾಲನೆ ಮಾಡುವೆನು, 14 ವರ್ಷಗಳು ಕಳೆದ ಮೇಲೆ. ಇದು ಮೊದಲು. ಪ್ರತಿಜ್ಞೆಗಳಿದ್ದಾವೆ ಅಲ್ಲಿ. ಈ ಸಮಯದಲ್ಲಿ ಆ ವಾಕ್ಯವನ್ನು ಆಕ್ರಮಿಸುವ ಶಕ್ತಿ ನನ್ನಲ್ಲಿಲ್ಲ. ಅಮ್ಮಾ, ಪ್ರಸನ್ನಗೊಳಿಸು. ನಿನ್ನನ್ನು ನೋಯಿಸುವ ಸಲುವಾಗಿ ಅಲ್ಲಮ್ಮಾ, ತಂದೆಯ ಮಾತನ್ನು ಕೇಳಿ ಹಾಳಾದವರುಂಟೇ? ನನ್ನಾಸೆಯೂ ಅದೇ, ಕಾಡಿಗೆ ಹೋಗಲಿಕ್ಕೆ ಬಯಸುವೆನು.' ಎಂದು ತನ್ನ ತಲೆಯನ್ನು ಆಕೆಯ ಕಾಲ ಮೇಲಿಟ್ಟು ಕಾಡಿಗೆ ಹೋಗಲು ಅಪ್ಪಣೆಕೊಡು, ನನ್ನ ಪ್ರಾಣಗಳ ಮೇಲಾಣೆ. ಮಂಗಲಾಶೀರ್ವಾದ ಮಾಡು.' ಎಂದು ಹೇಳುವ.
ಮತ್ತೆ ಲಕ್ಷ್ಮಣನಿಗೆ, 'ನಿನಗೆ ತುಂಬ ಪ್ರೀತಿ ನನ್ನಲ್ಲಿ, ಗೊತ್ತು ನನಗೆ. ನೀನು ಮಹಾಪರಾಕ್ರಮಿ. ಆದರೆ ಅದಿರಲಿ ಬಿಡು, ಈಗ ಕರ್ತವ್ಯವಿದೆ. ತಂದೆಯ ಪ್ರತಿಜ್ಞೆ ಮೀರುವುದು ನನ್ನಿಂದ ಸಾಧ್ಯವಿಲ್ಲ. ಅಧರ್ಮ ಮಾಡುವ ಶಕ್ತಿ ನನ್ನಲ್ಲಿಲ್ಲ. ನೀನು ನನ್ನ ಬುದ್ಧಿಯನ್ನು ಅನುಸರಿಸು.'
ಬಳಿಕ ಅಮ್ಮನಿಗೆ, 'ಈ ಪ್ರತಿಜ್ಞೆ ಮುಗಿದ ಬಳಿಕ ನಿನ್ನ ಮಾತನ್ನು ನೆರವೇರಿಸುವೆನಮ್ಮಾ. ನನ್ನ ನಿನ್ನ ಪ್ರೀತಿ ಬಂಧ ಕಡಿಮೆಯಲ್ಲ. ದುಃಖಿಸಬೇಡಮ್ಮ. ತಂದೆಯ ಮಾತನ್ನು ನಡೆಸಿ ಬೇಗನೇ ಮತ್ತೆ ನಾಡಿಗೆ ಬರುವೆ. ಬಳಿಕ ನಿನ್ನ ಮಾತನ್ನು ನಡೆಸುವೆ. ನನಗೆ ತಂದೆ ಹೇಗೆ ದೊಡ್ಡವನೋ ನಿನಗೂ ದೊಡ್ಡವನು, ಪತಿ ನಿನಗೆ. ಲಕ್ಷ್ಮಣನಿಗೂ ದೊಡ್ಡವನು. ಅವನು ಹೇಳಿದಂತೆ ನಾವೆಲ್ಲ ಕೇಳಬೇಕು. ಇದು ಸನಾತನ ಧರ್ಮ.
ಕೌಸಲ್ಯೆ ಸುಲಭದಲ್ಲಿ ಬಿಟ್ಟು ಕೊಡುವವಳಲ್ಲ. 'ತಂದೆ ಹೇಗೋ, ನಾನೂ ಹಾಗೆ ನಿನಗೆ. ನಿನಗೆ ನಾನು ದೊರೆಗಿಂತ ಕಡಿಮೆ ಪ್ರೀತಿ ಕೊಟ್ಟೆನೇ? ಈ ಸ್ಥಿತಿಯಲ್ಲಿ ನನ್ನನ್ನು ನೀನು ಬಿಟ್ಟುಹೋಗಬಾರದು. ನಿನ್ನ ಸಾನಿಧ್ಯಕ್ಕಿಂತ ಹೆಚ್ಚು ಅಮೃತವೂ ಬೇಡ, ನಿನ್ನ ಸಂಗ ಮಾತ್ರ ಬೇಕು ನನಗೆ' ಎಂದಳು.
ಆ ಕ್ಷಣದಲ್ಲಿ ರಾಮ ವಿಚಲಿತನಾಗಲೇ ಇಲ್ಲ. ತನ್ನದೇ ದಾರಿಯಲ್ಲಿ ಮುಂದುವರೆದ, ತನ್ನ ನಿರ್ಧಾರದಲ್ಲಿ ನೆಲೆನಿಂತನವನು.
ಮುಂದೆ ರಾಮ ಲಕ್ಷ್ಣಣನಿಗೆ 'ನೀನೂ ಅಮ್ಮನ ಜೊತೆ ಸೇರಿ ಏಕೆ ದಾರಿ ತಪ್ಪಿಸುವೆ? ನನಗೆ ಕಷ್ಟವಾಗೋದಿಲ್ವ? ನಾನು ಸತ್ಯ-ಧರ್ಮದಲ್ಲಿ ಇರಬೇಡವೇ? ನಾನು ಹೇಳಿದ್ದನ್ನು ಕೇಳುವುದೇ ಈಗ ನಿನ್ನ ಕರ್ತವ್ಯ. ತಂದೆಯ ಬಗ್ಗೆ ಹಾಗೆಲ್ಲ ಹೇಳಬಾರದು. ತಂದೆಗೆ ತಪ್ಪಿ ನಡೆಯಬಾರದು. ತಂದೆ ಯಾವ ಭಾವದಿಂದಾರೂ ಹೇಳಿರಲಿ, ಅಪ್ಪಣೆ ಮಾಡಿದ್ದು ಹೌದಾದರೆ ಆ ಮಾತನ್ನು ಪಾಲಿಸಬೇಕು. ಪಾಲನೆ ಮಾಡುವುದಷ್ಟೇ ಕೆಲಸ, ವಿವೇಚನೆ ಮಾಡಲು ಅಧಿಕಾರವಿಲ್ಲ. ನಮ್ಮ ವ್ಯಾಪ್ತಿಯಲ್ಲ ಅದು. ತಂದೆಯ ಪ್ರತಿಜ್ಞೆಯನ್ನು ವ್ಯರ್ಥ ಮಾಡುವುದು ನನ್ನಿಂದ ಸಾಧ್ಯವಿಲ್ಲ.'
ಮತ್ತೆ ರಾಮ ಅಮ್ಮನಿಗೆ, 'ಅಂತಹಾ ಧರ್ಮರಾಜ ಅಪ್ಪ ಬದುಕಿರುವಾಗಲೇ ಅವನ ಪತ್ನಿಯಾದ ನೀನು ಅವನನ್ನು ಬಿಟ್ಟು ನನ್ನೊಡನೆ ಕಾಡಿಗೆ ಬರುವುದು ಎಷ್ಟು ಸರಿ? ವಿಧವೆಯರು ಮಗನಜೊತೆ ಹೋಗುವಹಾಗೆ ನನ್ನ ಜೊತೆ ಬರುವುದು ಅದು ಪಾತಿವ್ರತ್ಯ ಧರ್ಮಕ್ಕೆ ಸಲ್ಲುವುದೇ?' ಎಂದು ಪ್ರಶ್ನಿಸುತ್ತಾನೆ. 'ರಾಜ್ಯಕ್ಕಾಗಿ ಸತ್ಯ ಧರ್ಮವನ್ನು ಬಿಡುವುದು ರಾಮನ ಕೆಲಸವಲ್ಲ. ಈ ಬದುಕು ನಶ್ವರ. ನಶ್ವರವಾಧ ಬದುಕಿನಲ್ಲಿ ಅಧರ್ಮದಿಂದ ಪಡೆದುದಾವುದೂ ನನಗೆ ಬೇಡ' ಎನ್ನುತ್ತಾನೆ.
ರಾಮನ ಪರಾಕ್ರಮ ಆತನ ಸತ್ಯವಚನದಲ್ಲಿದೆ, ಅವನ ಚಿತ್ತಸ್ಥೈರ್ಯದಲ್ಲಿದೆ, ತತ್ತ್ವನಿಷ್ಠೆ, ಸತ್ಯನಿಷ್ಠೆಯಲ್ಲಿದೆ. ಅವನ ಪರಾಕ್ರಮ ದಂಡಕಾರಣ್ಯಕ್ಕೆ ಹೋಗುವ ನಿರ್ಧಾರವನ್ನು ಬದಲಿಸದಿರುವಲ್ಲಿದೆ.
ತಾಯಿಯನ್ನು ಪ್ರಸನ್ನಗೊಳಿಸಿ ಲಕ್ಷ್ಮಣನಿಗೆ ಅನುಶಾಸನ ವಿಧಿಸುತ್ತಾನೆ. ಕಣ್ಣು ಕೆಂಪಾಗಿದೆ ಲಕ್ಷ್ಮಣನದು, ರೋಷದಿಂದ ಸರ್ಪರಾಜನಂತೆ ಅಕ್ಷರಶಃ ಬುಸುಗುಡುತ್ತಿದ್ದಾನೆ. ಅವನು ತಮ್ಮ, ಪ್ರಿಯ, ಸ್ನೇಹಿತ, ಒಡನಾಡಿ, ರಾಮನ ಎರಡನೇ ಅಂತರಾತ್ಮ. ಅವನನ್ನು ಪ್ರೀತಿಯಿಂದ ಬಳಸಿ 'ರೋಷವನ್ನೂ ಶೋಕವನ್ನೂ ನಿಗ್ರಹಿಸು, ಧೈರ್ಯವನ್ನಾಶ್ರಯಿಸು. ಸಂತೋಷವನ್ನು ಬಿಡಬೇಡ. ಅಭಿಷೇಕದ ಸಿದ್ಧತೆಗಳನ್ನು ವಿಸರ್ಜಿಸು. ಉಪಯುಕ್ತ ಎನ್ನಿಸುವ ಸಂಗ್ರಹಗಳನ್ನು ವನವಾಸ ವ್ರತಕ್ಕಾಗಿ ಬಳಸೋಣ. ಕೈಕೇಯಿಯು ನಿರ್ವಿಶಂಕಳಾಗಲಿ, ಶಂಕೆಯುಳಿಯುವುದು ಬೇಡ. ಆಕೆಗೆ ಸಮಾಧಾನ ಸಿಗಲಿ. ನಾನು ತಿಳಿದೋ ತಿಳಿಯದೆಯೋ ಯಾವ ಅಪ್ರಿಯವನ್ನೂ ತಂದೆ ತಾಯಿಯಂದಿರಿಗೆ ಮಾಡಿಲ್ಲ. ಈಗ ಮಾಡಬೇಕಾ? ಪ್ರತಿಜ್ಞಾ ಭಂಗವಾದರೆ ಮುಂದೆ ಆತನಿಗೆ ನರಕ, ಆ ಬಯ ಅವನಿಗೆ ಬೇಡ. ಸ್ವರ್ಗ ಆತನಿಗೆ ಸಿಗಲಿ. ಅದಕ್ಕಾಗಿ ಪ್ರಯತ್ನಿಸಬೇಕು. ಕಾಡಿಗೆ ಹೋಗುವುದು ಎಂಬ ನನ್ನ ಈಗಿನ ಚಿಂತನೆಗೆ ಒಂದು ಗೆರೆ ವ್ಯತ್ಯಾಸವಾಗುವುದೂ ನನಗಿಷ್ಟವಿಲ್ಲ. ತಡವಿಲ್ಲದೇ ಹೊರಡಬೇಕು. ಕೈಕೇಯಿ, ದಶರಥರ ಮೇಲೆ ಬೇಸರಿಸಬೇಡ. ಇದು ವಿಧಿ, ನಮ್ಮ ಚಿಂತನೆಗೆ ನಿಲುಕದ್ದು, ಅದಕ್ಕೆ ಹೀಗಾಯ್ತು. ಅದಿಲ್ಲದಿದ್ದರೆ ಚಿಕ್ಕಮ್ಮ ಹೀಗೆ ವರ್ತಿಸಲು ಸಾಧ್ಯವಿಲ್ಲ. ನಾವಿಬ್ಬರೂ ಅತ್ಯಂತ ಪ್ರೀತಿಯಲ್ಲಿರಲಿಲ್ಲವೇ. ಕೈಕೇಯಿಯನ್ನು ಬೈಯಬೇಡ, ಅದು ವಿಧಿ. ನಮ್ಮ ಊಹೆಗೆ ತರ್ಕಕ್ಕೆ ನಿಲುಕದ್ದೆಲ್ಲವೂ ವಿಧಿಯೇ. ವಿಧಿಯ ಜೊತೆ ಯುದ್ಧಮಾಡಲು ಸಾಧ್ಯವಿಲ್ಲ. ವಿಧಿ ಅಗೋಚರ, ಅದರ ಫಲ ಮಾತ್ರ ಸಿಗುವಂಥದ್ದು. ಯಾವುದು ನಾವು ಸಂಕಲ್ಪ ಮಾಡದೇ ಇದ್ದರೂ, ನಿರೀಕ್ಷೆ ಮಾಡದೇ ಇದ್ದರೂ, ಊಹೆ ಮಾಡದೇ ಇದ್ದರೂ ಆಗುತ್ತಿದೆಯೋ ಅದೆಲ್ಲ ದೈವ, ಅದೆಲ್ಲ ವಿಧಿ. ಹಾಗಾಗಿ ವಿಧಿಗೆ ಶರಣಾಗು' ಎಂದು ಹೇಳುತ್ತಾನೆ.
ಚಿಂತನೆಮಾಡಿದರೆ ಅದು ಹೌದು. ಮಂಥರೆಗೆ, ಕೈಕೇಯಿಗೆ ಆ ಬುದ್ಧಿ ಬರದೇ ಇದ್ದಿದ್ದರೆ ಮುಂದಿನ ಸಾಲು ಸಾಲು ಮಹತ್ಕಾರ್ಯಗಳು ಆಗುತ್ತಿರಲಿಲ್ಲ. ಸಮುದ್ರಕ್ಕೆ ಸೇತುವೆ, ರಾವಣ ಸಂಹಾರ, ಅಥವಾ ಆ ದಾರಿಯಲ್ಲಿ ಇಷ್ಟಾರು ಶರಣರ ಉದ್ಧಾರ - ಇವುಗಳು ಆಗುತ್ತಿರಲಿಲ್ಲ. ಹಾಗಾಗಿ ಅದು ವಿಧಿಯೇ.
ರಾಮನ ಚಿಂತನೆಯ ರೀತಿಯೇ ಅದ್ಭುತ. ಆದರೂ ಲಕ್ಷ್ಮಣನಿಗೆ ಸಮಾಧಾನವಿಲ್ಲ. ರಾಮನ ಕಡಿವಾಣವೇ ಲಕ್ಷ್ಮಣನಿಗೆ ದೊಡ್ಡ ಸಮಸ್ಯೆ. ಏನಾದ್ರೂ ಮಾಡಿ ಅಣ್ಣನನ್ನು ಪಟ್ಟದಲ್ಲಿ ಕೂರಿಸಬೇಕು ಎಂದು ಲಕ್ಷ್ಮಣನ ಮನಸ್ಸು. ಆದರೆ -
'ರಾಜ್ಯ ಬರುವ ಹಾಗೆ ಬಂದರೆ ತೆಗೆದುಕೊಳ್ಳತ್ತೇನೆ. ಅಧರ್ಮದಲ್ಲಿ ಬರುವುದಾದರೆ ಬೇಡ. ಹೇಗೆ ಹೇಗೋ ಬಂದರೆ ತೆಗೆದುಕೊಳ್ಳುವುದಿಲ್ಲ. ಯಾವುದಾದರೂ ಅಧರ್ಮದಲ್ಲಿ ಬಂದರೆ ಅದು ತ್ಯಾಗವೇ' ಇದು ರಾಮ.
ಇಲ್ಲಿ, ನಾವು ಕೌಸಲ್ಯೆ, ಲಕ್ಷ್ಮಣನ ಪ್ರೀತಿಯನ್ನು ಗಮನಿಸಬೇಕು. ಆ ತಾಯ್ತನದ ಪ್ರೀತಿ, ಈ ರಾಮನ ಸ್ಥೈರ್ಯ, ಅದು ಆದರ್ಶ, ಧೀರೋದ್ಧಾತ್ತ ವ್ಯಕ್ತಿತ್ವ. ಇದು ರಾಮನ ರಾಮತ್ವ. ಹಿಮಪರ್ವತಸದೃಶನಾಗಿರತಕ್ಕಂತಹಾ ಅಚಲ ರಾಮನ ಸ್ಮರಣೆಯನ್ನು ಅನುಸಂಧಾನ ಮಾಡಬೇಕು, ಅದು ರಾಮಾಯಣ ಶ್ರವಣದ ಸಾರ್ಥಕತೆ.
ಇಷ್ಟು ಇಂದಿಗೆ, ರಾಮ-ಲಕ್ಷ್ಮಣರ ಸಂವಾದದ ಮುಂದಿನ ಭಾಗವನ್ನು ನಾಳೆ ನೋಡೋಣ..
#DhaaraRaamayan
No comments:
Post a Comment
Please leave your comments here.....