Dhaara Raamayana 104

#ಧಾರಾ_ರಾಮಾಯಣ ಪ್ರವಚನಮಾಲಿಕೆಯ 104ನೇ ದಿನದ ಅಕ್ಷರರೂಪ:

ಒಂದು ಮನೆ ಎಷ್ಟು ದೊಡ್ಡವಿರಬಹುದು? ಮೊದಲು ಕೇಳಬೇಕಾದ ಪ್ರಶ್ನೆ ಎಷ್ಟು ದೊಡ್ಡದಿರಬೇಕು ಅಂತ. ಏಕೆಂದರೆ, ಚಿಕ್ಕದಾದರೂ ತೊಂದರೆ, ದೊಡ್ಡದಾದರೂ ತೊಂದರೆ. ಎಷ್ಟು ಬೇಕೋ ಅಷ್ಟಿದ್ದರೆ ಮಾತ್ರವೇ ಸುಖ. ಹಣವು ಕಡಿಮೆಯಾದರೆ ಹಾಹಾಕಾರ, ಹೆಚ್ಚಾದರೆ ಅಹಂಕಾರ, ಎರಡೂ ಆಪತ್ತು. ಕಡಿಮೆ‌ ಇದ್ದರೆ ಸಣ್ಣ ಆಪತ್ತು, ಹೆಚ್ಚಿದ್ದರೆ ದೊಡ್ಡ ಆಪತ್ತು. ಹಾಗೆ, ಯಾವುದೂ ಕೂಡ ಕಡಿಮೆಯೂ ಆಗಬಾರದು, ಹೆಚ್ಚೂ ಆಗಬಾರದು. ಈಗ ಸಣ್ಣ ಜನರಿಗೆ ಸಣ್ಣ ಮನೆ ಸಾಕು. ದೊಡ್ಡ ಜನರಿಗೆ ದೊಡ್ಡ ಮನೆ ಬೇಕಾಗ್ತದೆ.

ರಾವಣ? ದೊಡ್ಡ ಜನವೇ. ಯಾಕೆಂದರೆ, ನಮಗೆಲ್ಲ ಒಂದು ತಲೆ ಇದ್ರೆ, ಅವನಿಗೆ ಹತ್ತು ತಲೆ. ನಮಗೆಲ್ಲ ಎರಡು ಕೈ ಇದ್ರೆ, ಅವನಿಗೆ ಇಪ್ಪತ್ತು ಕೈ ಇದೆ. ವ್ಯಾಪ್ತಿ ಹದಿನಾಲ್ಕು ಲೋಕದಲ್ಲಿದೆ. ಅವನ ಮನೆ ಎಷ್ಟು ದೊಡ್ಡದಿತ್ತು ಅಂದ್ರೆ, ಅಗಲ - ಅರ್ಧ ಯೋಜನ, ಉದ್ದ - ಒಂದು ಯೋಜನ! ಮನೆ ಅಂದರೇನು? ಒಂದೇ ಮನೆಯಲ್ಲ ಅದು. ಅನೇಕಾನೇಕ ಭವನಗಳ ಮಾಲಿಕೆ. ಅಲ್ಲಿ ರಾವಣನ ಭವನಗಳೇ ಅನೇಕ. ಒಂದೊಂದು ಭಾವಕ್ಕೆ ಒಂದೊಂದು ಭವನ ಇದೆ. ಇನ್ನು ಅವನ ರಾಣಿಯರಿಗೆಲ್ಲ ಬೇರೆ ಬೇರೆ ಮನೆಗಳು ಇರಬೇಕೇ ಹೇಗೂ. ಎಲ್ಲಾ ರಾಣಿಯರಿಗೂ ಇಲ್ಲ, ಇರಲಿಕ್ಕೆ ಸಾಧ್ಯವೂ ಇಲ್ಲ! 7,000! ಇನ್ನು ಅವನ ರಾಜಕುಮಾರರು. ಅವನ ಮಕ್ಕಳು, ಸಹೋದರರು.. ಅವರ ಮನೆಗಳು, ಮಂತ್ರಿಗಳು, ಸೇನಾಪತಿಗಳು, ದೊಡ್ಡ ದೊಡ್ಡ ರಾಕ್ಷಸ ನಾಯಕರುಗಳು, ಸಚಿವರುಗಳು, ಅವರ ಗೃಹಗಳು, ಇದೆಲ್ಲ‌ ಸೇರುವಾಗ ಎರಡು ಮೈಲಿ ಮತ್ತು ನಾಲ್ಕು ಮೈಲಿಗಳ ವಿಸ್ತೀರ್ಣದಲ್ಲಿ ಇದ್ದುಬಿಟ್ಟಿದೆ.

ಮನೆ ಚಿಕ್ಕದಿದ್ದರೂ ತೊಂದರೆಯಿಲ್ಲ, ಮನಸ್ಸು ದೊಡ್ಡದಿರಬೇಕು. ಇವನಿಗೆ‌ ಮನೆ ದೊಡ್ಡದಿದೆ, ಆದರೆ ಮನಸ್ಸು ಚಿಕ್ಕದಿದೆ, ಸಂಕುಚಿತವಾದ ಮನಸ್ಸಿದೆ. ತಾನು, ತನ್ನದು, ತನಗೇ ಬೇಕು ಎಲ್ಲ. ಇನ್ಯಾರೂ ಸುಖವಾಗಿರಬಾರದು ಎನ್ನುವ ಮಟ್ಟಿಗೆ ಶುದ್ಧವಾದ ಮನಸ್ಸುಳ್ಳವನು ಅವನು. ಆದರೆ ಮನೆ ಮಾತ್ರ ದೊಡ್ಡದಿದೆ. ಮಾತ್ರವಲ್ಲ, ಸಮೃದ್ಧಿ ಕೂಡ ಅದ್ಭುತವಾಗಿದೆ. ಸಂಪತ್ತಿನ ಪಾಲಕ ಕುಬೇರನ ಬಳಿ‌ ಇರಬಹುದಾದ ಅಥವಾ ಇಂದ್ರನ ಬಳಿ ಇರಬಹುದಾದ ಅಥವಾ ಮಿಗಿಲಾದ ಸಂಪತ್ತೆಲ್ಲ ರಾವಣನ ಊಳಿಗದವರಲ್ಲಿತ್ತು. ಇಂಥಾ ಮನೆಯಲ್ಲಿ ಕುಬೇರನಿಂದ ದರೋಡೆ ಮಾಡಿ ತಂದ ಅದ್ಭುತವಾದ ಆ ಪುಷ್ಪಕ ವಿಮಾನ. ಅದು ನಿಜವಾಗಿ ವಿಶ್ವಕರ್ಮನಿಂದ ಸೃಷ್ಟಿಕರ್ತ ಬ್ರಹ್ಮನಿಗಾಗಿ ವಿರಚಿತವಾಗಿರತಕ್ಕಂತದ್ದು. ಹಾಗಾಗಿ ಒಂದು ಕಾಲದಲ್ಲಿ ಬ್ರಹ್ಮನ ವಿಮಾನವಾಗಿತ್ತದು. ಬಳಿಕ ಕುಬೇರ, ರಾವಣನ ದೊಡ್ಡಣ್ಣ. ಅವನು ಎಳವೆಯಲ್ಲಿ ತಪಸ್ಸು ಮಾಡಿ ಬ್ರಹ್ಮನನ್ನು ಪರಿತೋಷಿಸಿದಾಗ ಪ್ರಕಟಗೊಂಡ ಬ್ರಹ್ಮ, "ಏನು ಬೇಕು, ಕೇಳು" ಎಂದಾಗ ಕುಬೇರ, " ಈ ಲೋಕದ ಸೇವೆಯನ್ನು ನಾನು ಮಾಡಬೇಕು, ಲೋಕಪಾಲಕತ್ವವನ್ನು ಕೊಡು" ಎಂದು ಕೇಳಿದ. ಅವನು ಕೇಳಿದ್ದಕ್ಕಿಂತ ಬಹಳ ಹೆಚ್ಚನ್ನೇ ಕೊಡ್ತಾನೆ ಬ್ರಹ್ಮ. ಪುಷ್ಪಕವಿಮಾನವಿರಲಿ ತಗೋ. ಉತ್ತರ ದಿಕ್ಕಿನ ಒಡೆತನ ತಗೊ, ಇರಲಿ. ಧನೇಶ್ವರತ್ವ ನಿನಗೇ ಇರಲಿ. ಲಂಕಾನಗರಿ ನಿನಗಿರಲಿ. ಹೀಗೆ, ಕುಬೇರನ ತಪಸ್ಸಿಗೆ ಮೆಚ್ಚಿ ಬ್ರಹ್ಮದೇವ ಕುಬೇರನಿಗೆ ಕೊಟ್ಟಿರತಕ್ಕಂತದ್ದು ಆ ವಿಮಾನ.

ಯಾವುದನ್ನು ಪರಮ ತಪಸ್ಸಿನಿಂದ ಕುಬೇರನು ಪಡಕೊಂಡನೋ, ಅದನ್ನು ದೌರ್ಜನ್ಯದಿಂದ ಅಪಹರಿಸಿದನು ರಾವಣ. ಲಂಕೆಯನ್ನು ಔದಾರ್ಯದಿಂದ ಬಿಟ್ಟುಕೊಟ್ಟ ಕುಬೇರ. ಆ ಪುಷ್ಪಕವಿಮಾನದೊಳಗೆ ಮುಗಿಲು ಮುಟ್ಟುವ ಜಗಲಿಗಳು, ಗೌಪ್ಯ ಪ್ರಕೋಷ್ಠಗಳಿದ್ದವು. ಆ ವಿಮಾನದೊಳಗೆ ಎಲ್ಲವೂ ರತ್ನಮಯ. ತುಲನೆ ಮಾಡಲು ಸಾಧ್ಯವಿಲ್ಲದ ಮೌಲ್ಯವುಳ್ಳ ಮುತ್ತುಗಳಿಂದ ನೆಲವನ್ನು ಮಾಡಿದ್ದರು. ಇಷ್ಟು ಹೊತ್ತು ಪುಷ್ಪಕವಿಮಾನವನ್ನು ಸುತ್ತ ನೋಡ್ತಿದ್ದಾನೆ ಹನುಮಂತ. ಮೆಲ್ಲನೆ ಆ ದಿವ್ಯ ಪುಷ್ಪಕವಿಮಾನವನ್ನು ಏರಿದನಂತೆ. ಪುಷ್ಪವಿದ್ದಂತೆ ಪುಷ್ಪಕವಿಮಾನ, ನೋಡುವಾಗಲೇ ಸಂತೋಷ ಕೊಡುವಂಥದ್ದು. ಜನರಿಗೆ ತಕ್ಕಂತೆ ವಿಸ್ತಾರವಾಗಬಲ್ಲದು. ಅರಳುವ, ಮುದುಡುವ ಶಕ್ತಿಯುಳ್ಳದ್ದಾದ್ದರಿಂದ 'ಪುಷ್ಪ'ಕವಿಮಾನ ಶಬ್ದ ಬಂದಿರತಕ್ಕಂತದ್ದು. ಅದರದ್ದೇ ಆದ ದಿವ್ಯಗಂಧ, ಜೊತೆಯಲ್ಲಿ ಬಗೆಬಗೆಯ ಪಾನ, ಭಕ್ಷ್ಯದ ಎಲ್ಲ ವ್ಯವಸ್ಥೆಯಿದೆ. ಇವೆಲ್ಲದರ ಪರಿಮಳದ 'ವಾಯು' ಹನುಮಂತನನ್ನು ಕರೆದಿದೆ.

ದೊಡ್ಡದೊಂದು ರತ್ನಗಂಬಳಿಯನ್ನು ಹಾಸಿತ್ತು ವಿಮಾನದೊಳಗೆ. ಆ ಒಂದು ರತ್ನಗಂಬಳಿಯಲ್ಲಿ ಸಮಗ್ರ ಭೂಮಂಡಲದ ಚಿತ್ರಣವಿತ್ತು. ಪರಿಮಳದ ಗಾಳಿ ಬೀಸುವ ವ್ಯವಸ್ಥೆಯಿತ್ತು. ವಸಿಷ್ಠರ ಕಾಮಧೇನುವಿನಂತೆ ಆ ಪುಷ್ಪಕ ವಿಮಾನವಿತ್ತು. ಒಳಗೆ ಇರುವವನ ಇಂದ್ರಿಯಗಳು ಏನು ಬಯಸಿದರೂ ಲಭ್ಯವದು. ಎಲ್ಲ ಸುಖವೂ ಲಭ್ಯವಿದೆ ಆ ವಿಮಾನದ ಒಳಗೆ‌. ಒಳಗೆ ಹೋದೊಡನೆಯೇ ಮನಸ್ಸಿಗೊಂದು ಆಹ್ಲಾದ. ಶೋಕನಾಶಿನಿ ಪುಷ್ಪಕವಿಮಾನ. ಮಾತ್ರವಲ್ಲ, ಆನಂದದ ಅಲೆಯನ್ನು ಚೆಲ್ಲುವಂಥದ್ದು. ಒಳಗೆ ಹೋದವರು ಸುಂದರರಲ್ಲದಿದ್ದರೂ ಸುಂದರರಾಗ್ತಾರಂತೆ! ಚರ್ಮದ ವರ್ಣವನ್ನೇ ತಿಳಿಗೊಳಿಸುವ ಶಕ್ತಿಯುಳ್ಳದ್ದು ಪುಷ್ಪಕವಿಮಾನ. ‌ನಮ್ಮನ್ನೇ ಬದಲು ಮಾಡಬಲ್ಲದ್ದು. ಕರೆದು ಕರೆದು ಬೇಕಾದ್ದನ್ನು ಕೊಡಬಲ್ಲ‌ ವಿಮಾನವದು. ಅಚ್ಚರಿಗೊಂಡ ಮಾರುತಿ, "ಇದು ಸ್ವರ್ಗ, ಇದು ದೇವಲೋಕ, ಇದು ಇಂದ್ರನಗರಿ. ಅಥವಾ ಇದು ಪರಮಸಿದ್ಧಿ. ಈ ಆನಂದ ಮುಕ್ತಿಗೆ ಹತ್ತಿರ ಹತ್ತಿರವಿದೆ" ಎಂಬುದಾಗಿ ಹನುಮನು ಉದ್ಘರಿಸಿದನಂತೆ.

ಹನುಮಂತನು ಅಲ್ಲಿ ಒಂದು ವಿಚಿತ್ರವನ್ನು ಕಂಡ. ಒಂದು ಜಾತಿ‌ ಅಸಂಖ್ಯಾತ. ಆ ಜಾತಿಯನ್ನು ಒಂದು ಕಡೆಯಲ್ಲಿ ಅಷ್ಟು ಸಂಖ್ಯೆಯಲ್ಲಿ ಕಾಣಲಿಕ್ಕೆ ಸಾಧ್ಯವಿಲ್ಲ. ಏನದು? ನಾರಿಯರು. ರತ್ನಗಂಬಳಿಯಲ್ಲಿ ಪವಡಿಸಿದ ಅಸಂಖ್ಯಾತ ನಾರಿಯರನ್ನು ಕಂಡನಂತೆ ಹನುಮಂತ. ಚಿತ್ರವಿಚಿತ್ರವಾದ ದೇಹವರ್ಣ, ವಸ್ತ್ರವರ್ಣ ಮತ್ತು ಮಾಲಿಕೆಗಳ ವರ್ಣ‌. ನಾರಿಯರ ಸಮೂಹ. ಎಲ್ಲ ಮಲಗಿದ್ದಾರೆ. ಹನುಮಂತ ಒಂದು‌ ಶಾಲೆ (Hall) ಯನ್ನು ಪ್ರವೇಶ ಮಾಡಿದರೆ ಸಾವಿರಾರು ಸ್ತ್ರೀಯರಿದ್ದರಂತೆ. ಯಾರೂ ಎಚ್ಚರವಾಗಿಲ್ಲ, ಎಲ್ಲರೂ ನಿದ್ದೆ ಮಾಡ್ತಾ ಇದ್ದಾರೆ. ಅರ್ಧರಾತ್ರಿಯ ಸಮಯವದು. ಹನುಮ ಲಂಕೆಯ ಪ್ರವೇಶ ಮಾಡುವಾಗ ಸೂರ್ಯಾಸ್ತವಾಗಿತ್ತು. ಲಂಕೆಗೂ ಹನುಮನಿಗೂ ಒಂದು ಯುದ್ಧ, ಒಂದು ರಾಜಿ ಎಲ್ಲ ಆಯ್ತಲ್ಲ! ಅದು ಸೂರ್ಯಾಸ್ತದ ಹೊತ್ತು.

ಹನುಮ ಲಂಕೆಯನ್ನು ಪ್ರವೇಶ ಮಾಡುವಾಗ ಸೂರ್ಯಾಸ್ತವಾಗಿತ್ತು. ಲಂಕೆಗೂ ಹನುಮಂತನಿಗೂ ಆದ ಒಂದು ಯುದ್ಧ, ರಾಜಿ ಅದು ಸೂರ್ಯಾಸ್ತದ ಹೊತ್ತು, ಒಳಬಂದಾಗ ಅದು ಚಂದ್ರೋದಯದ ಹೊತ್ತು. ಪುಷ್ಪಕವಿಮಾನದ ಬಳಿ ಬರುವಾಗ ಅರ್ಧ ರಾತ್ರಿ. ಹಾಗೆ ಹುಡುಕುತ್ತಾ ಮುಂದೆ ಸಾಗಿದಾಗ ಅಲ್ಲಿ ಸಾವಿರಾರು ಸ್ತ್ರೀಯರು, ಮಧುಪಾನ ಮತ್ತು ನಿದ್ದೆಯಲ್ಲಿದ್ದಾರೆ. ಅತಿಯಾದ ಪಾನದಿಂದ ಮಲಗಿಲ್ಲ ಬದಲಾಗಿ ಅಮಲಿನಿಂದ ಒರಗಿದ್ದಾರೆ. ಅತಿಯಾದ ಪಾನದಿಂದ ಅಮಲು ಮತ್ತು ನಿದ್ದೆ ಎರಡು ಸೇರಿದೆ ಅಲ್ಲಿ. ಅದಕ್ಕಿಂತ ಮೊದಲು ತುಂಬಾ ಕ್ರೀಡಿಸಿದ್ದಾರೆ ಮತ್ತು ಪಾನ, ನಿದ್ದೆಯ ಶ್ರಮದ ಫಲವಾಗಿ ಅತಿಯಾದ ನಿದ್ದೆಯಲ್ಲಿ ಒರಗಿ ಮಲಗಿದ್ದಾರೆ. ಅಲ್ಲಿರುವ ಸಾವಿರಾರು ಸ್ತ್ರೀಯರ ಮುಖಗಳು ಪದ್ಮಗಳಂತೆ ಇತ್ತು. ಅವರ ಮುಖಗಳು ಪದ್ಮಗಂಧವನ್ನು ಬೀರುತ್ತಿತ್ತು. ಹಾಗಾಗಿ ಅದು ಸಾವಿರಾರು ಪದ್ಮಗಳಿಂದ ಕೂಡಿದ ಪದ್ಮವನದಂತೆ ಕಂಡಿತು. ಹೀಗೆ ಕಾಣಲು ಒಂದು ಕಾರಣವೂ ಇತ್ತು ಅದೇನೆಂದರೆ ಪದ್ಮವನದಲ್ಲಿ ಹಗಲಿನಲ್ಲಿ ದುಂಭಿಗಳು, ಜೇನು ಮತ್ತು ಹಂಸಗಳ ಬೇರೆ ಬೇರೆ ಜಲಚರಗಳು ಸದ್ದುಮಾಡುತ್ತಾ ಇರುತ್ತದೆ ಆದರೆ ರಾತ್ರಿಯಲ್ಲಿ ಕಮಲಗಳು ಮುದುಡಿರುತ್ತವೆ ಮತ್ತು ಯಾವ ಸದ್ದು ಕೂಡ ಇರುವುದಿಲ್ಲ. ಹಾಗೆಯೇ ಆ ಸ್ತ್ರೀಯರಿದ್ದರ ಕಣ್ಣುಮುಚ್ಚಿದ್ದವು, ತುಟಿಗಳು ಮುಚ್ಚಿದ್ದವು ಯಾವುದೇ ಶಬ್ದ ಇರಲಿಲ್ಲ. ಆ ಇಡೀ ಪ್ರಕೋಷ್ಟದಲ್ಲಿ ಸ್ತ್ರೀಯರ ಮುಖಗಳಿಂದ ಪದ್ಮಪರಿಮಳ ಬೇರುತ್ತಿತ್ತು. ಉತ್ತಮೊತ್ತಮ ಜಾತಿಯ ಸ್ತ್ರೀಯರಿದ್ದರು. ಆಗಸದಿಂದ ಸಾವಿರಾರು ತಾರೆಗಳು ಉರುಳಿಬಿದ್ದಂತೆ. ತಾರೆಗಳ ರಾಶಿಯಂತೆ ಆ ವರನಾರಿಗಳು ಕಂಡರು. ಹಾಗೆಯೇ ರಾವಣನನ್ನು ಇಷ್ಟು ಪರಿಮಳವೂ ಸೇವಿಸುತ್ತಿತ್ತು. ಭುಜಗಳೆಲ್ಲ ಸೇರಿದ್ದವು, ಎಲ್ಲಾ ಸ್ತ್ರೀಯರು ಅಸ್ತವ್ಯಸ್ತವಾಗಿ ಮಲಗಿದ್ದರು. ಅಂತಹ ವಿಚಿತ್ರವಾದ ಸ್ತ್ರೀಮಾಲೆಯನ್ನು ಕಂಡನು. ಸ್ತ್ರೀವನವೆಂದು ಕೂಡಾ ಕರೆದಿದ್ದಾರೆ ಅದನ್ನು. ಅಷ್ಟು ಸ್ತ್ರೀಯರನ್ನು ಕಂಡನು ಹನುಮಂತ. ಅಲ್ಲಿಯ ಪರಿಸ್ಥಿತಿ ಹೇಗಿತ್ತು ಎಂದರೆ ಯಾರ ಆಭರಣ, ವಸ್ತ್ರ, ಮುಖ ಯಾರದ್ದು ಎಂದು ಪ್ರಯತ್ನ ಪಟ್ಟರೂ ಕಂಡುಹಿಡಿಯಲು ಆಗದ ಪರಿಸ್ಥಿತಿ ಹಾಗೆ ಕಲಸಿ ಹೋಗಿದೆ. ಒಂದು ವ್ಯಕ್ತಿಗೆ ಅಥವಾ ಮನುಷ್ಯನಿಗೆ ಇಷ್ಟು ಅಗತ್ಯ ಇದೆಯಾ? ಹೀಗೆ ಮಾಡಬೇಕಾ? ಎಂಬುದು ದೊಡ್ಡ ಪ್ರಶ್ನೆ. ಯಾವ ರಾಜನಿಗಾಗಲಿ, ಯಾವ ಚಕ್ರವರ್ತಿಯಾಗಲಿ ಅಥವಾ ಉದಾಹರಣೆ ರಾಮ ಅವನು ಈ ಭೂಮಂಡಲಕ್ಕೆ, ಎಲ್ಲ ಮೃಗಪಕ್ಷಿ, ಮನುಕುಲಕ್ಕೆ ಚಕ್ರವರ್ತಿ ಆದರೆ ರಾಮ ಏಕಪತ್ನಿ ವ್ರತಸ್ಥ. ಆ ಪತ್ನಿಯೊಡನೆ ಬಾಳಲಾಗದ ವಿಕಟ ಬಂದಾಗಲೂ ಬೇರೆ ಹೆಣ್ಣಿನ ಕಡೆ ನೋಡಲಿಲ್ಲ ರಾಮ. ಅವನ ಇಡೀ ಜೀವನದಲ್ಲಿ ಮತ್ತೊಂದು ಸ್ತ್ರೀಯನ್ನು ಕಣ್ಣೆತ್ತಿ ನೋಡಲೇ ಇಲ್ಲ ರಾಮ. ಅಂತಹ ರಾಮನೆಲ್ಲಿ, ಈ ರಾವಣನೆಲ್ಲಿ? ಇವರಿಗೆ ನ್ಯಾಯಕೊಡಬಹುದ ಅವನು? ಇವರ ಬದುಕಿಗೆಲ್ಲಾ ಅರ್ಥವೇನು? ಅರ್ಥ ಇದೆಯಾ ಅವರ ಬದುಕಿಗೆ? ಆ ಸ್ತ್ರೀಯರ ತಂದೆಯನ್ನೋ, ಗಂಡನನ್ನೋ, ಅಣ್ಣತಮ್ಮಂದಿರನ್ನೋ ಕೊಂದು ಎತ್ತಿಕೊಂಡು ಬಂದಿರುವುದು. ಬಲಾತ್ಕಾರದಿಂದ ಸೆಳೆದು ತರಲ್ಪಟ್ಟವರು ಅವರೆಲ್ಲಾ. ಏನು ಅರ್ಥ ಅವರ ಬದುಕಿಗೆ? ಎಂತಹ ಬದುಕು ಅದು? ಇದಕ್ಕಿಂತ ಕ್ರೌರ್ಯ ಮತ್ತೊಂದಿಲ್ಲ. ಅವರ ಬದಕನ್ನು ನೆನೆಸಿಕೊಂಡರೆ ಅವರು ಹೇಗಿರಬಹುದು ಎಂದು ಬೇಸರವಾಗುತ್ತದೆ. ಅವರೆಲ್ಲಾ ಯಾರು ಎಂಬುದನ್ನು ವರ್ಣನೆಮಾಡಿದ್ದಾರೆ ವಾಲ್ಮೀಕಿಮಹರ್ಷಿಗಳು; ಅಲ್ಲಿ ರಾಜಕನ್ಯೆಯರಿದ್ದರು, ಋಷಿಕನ್ಯೆಯರಿದ್ದರು, ದೈತ್ಯಕನ್ಯೆಯರಿದ್ದರು, ಗಂಧರ್ವಕನ್ಯೆಯರು, ರಾಕ್ಷಸಕನ್ಯೆಯರು ಇದ್ದರು. ಕೆಲವರು ಅವರಾಗೆ ರಾವಣನ ಹಿಂದೆ ಬಂದವರು. ಅವರ ಬದುಕೂ ಬರಡೇ. ಇನ್ನು ಕೆಲವರು ಯುದ್ಧದಲ್ಲಿ ಸೋತವರ ಪತ್ನಿ, ಮಕ್ಕಳು ಅಂತವರನ್ನು ಎತ್ತಿಕೊಂಡು ಬಂದಿದ್ದ. ರಾವಣನ ಪತ್ನಿದರ್ಜೆ ಯಾರಿಗೆ ಸಿಕ್ಕಿದೆಯೋ ಅವರ ಸಂಖ್ಯೆ ಎಳುಸಾವಿರ. ವಾಲ್ಮೀಕಿಗಳು ಒಂದು ಮಾತನ್ನು ಹೇಳಿದ್ದಾರೆ; ಅಲ್ಲಿ ಇದ್ದ ಎಲ್ಲಾ ಸ್ತ್ರೀಯರು ರಾವಣನಮೇಲೆ ಮನಸ್ಸು ಉಳ್ಳವರಾಗಿದ್ದರು. ಇದರ ಅರ್ಥ ರಾವಣ ಒಳ್ಳೆಯ ಮನುಷ್ಯ ಎಂದಲ್ಲ, ಬದಲಾಗಿ ರಾವಣನ ಮೇಲೆ ಮನಸ್ಸು ಇಟ್ಟರೆ ಮಾತ್ರ ಅವರಿಗೆ ಬದುಕುವ ಅವಕಾಶವಿತ್ತು ಅಲ್ಲಿ. ರಾವಣನಿಗೆ ಬ್ರಹ್ಮದೇವರ ಶಾಪವಿತ್ತು ಅದೇನೆಂದರೆ ಯಾರು ರಾವಣನನ್ನು ಒಪ್ಪಿಲ್ಲವೋ ಅವರನ್ನು ರಾವಣ ಮುಟ್ಟುವಂತಿಲ್ಲ, ಅವರನ್ನು ಪತ್ನಿ ಮಾಡಿಕೊಳ್ಳುವಂತಿಲ್ಲ. ಅದಕ್ಕಾಗಿ ಅವನು ಸ್ತ್ರೀಯರನ್ನು ಸೆಳೆದುತಂದು ಅವರಿಗೆ ಷರತ್ತು ಹಾಕುತ್ತಿದ್ದ, ಸಮಯದ ಗಡುವನ್ನು ನೀಡುತ್ತಿದ್ದ ಅಷ್ಟರಲ್ಲಿ ಅವರು ಪತ್ನಿಯಾಗುವುದಾಗಿ ಒಪ್ಪದಿದ್ದರೆ ಅವರನ್ನು ಸಣ್ಣ ಸಣ್ಣ ಚೂರಾಗಿ ಕತ್ತರಿಸಿ ಬೆಳಗಿನ ತಿಂಡಿಗೆ ಸೇವಿಸುತ್ತಿದ್ದ. ಸೀತೆಗೂ ಇದನ್ನೇ ಹೇಳಿದ್ದ, ಒಂದು ವರ್ಷದ ಅವಧಿಯನ್ನು ನೀಡಿದ್ದ. ಇದು ಅವನ ಪದ್ಧತಿ. ಮಾನಸಿಕವಾಗಿ ಒತ್ತಡ ನೀಡುವಂತದ್ದು. ಬೆಳಗಿನ ತಿಂಡಿಯಗಬೇಕು ಇಲ್ಲವೇ ಪತ್ನಿಯಾಗಬೇಕು ಇಂತಹ ಷರತ್ತು. ಹೀಗೆ ಅವನನ್ನು ಪತಿಯಾಗಿ ಒಪ್ಪಿಕೊಂಡಂತಹ ಸ್ತ್ರೀಯರು ಅವರೆಲ್ಲಾ. ಕೆಲವರು ಮನಸಾರೆ ಒಪ್ಪಿದವರು, ಇನ್ನು ಕೆಲವರು ಒತ್ತಡದಿಂದ. ಇದು ರಾವಣನ ಪ್ರೇಮದ ಪರಿ. ಕೆಲವರು ಆತನ ಮನೆಯಮೇಲೆ ಆಕ್ರಮಣವಾದಗ ಸತ್ತಿದ್ದರು, ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಉಳಿದವರನ್ನು ಇವನೇ ಕೊಂದಿದ್ದಾನೆ. ಹೀಗಿದ್ದೂ ಆತನಿಗೆ ಏಳುಸಾವಿರ ಪತ್ನಿಯರು. ಅಂದರೆ ಇಂತಹ ಅನ್ಯಾಯವನ್ನು, ಪಾಪವನ್ನು ಊಹೆಮಾಡಿಕೊಳ್ಳಬಹುದು. ಇಂತವನನ್ನು ಪೂಜಿಸುವವರು, ಅವನ ಅನುಯಾಯಿಗಳು ಇಂದಿಗೂ ಇದ್ದಾರೆ. ಅವರು ಎಂತವರಾಗಿರಬಹುದು?

ಅಲ್ಲಿರುವವರ ಪೈಕಿ ಎಲ್ಲರೂ ಒಳ್ಳೆಯ ಕುಲದವರು, ಔದಾರ್ಯ ಉಳ್ಳವರು, ರೂಪವತಿಯರು. ಹೇಗೆ ಅವರೆಲ್ಲರೂ ಉತ್ತಮ ಸ್ತ್ರೀಯರಿಗೆ ಇರುವಂತಹ ಎಲ್ಲಾ ಗುಣಗಳನ್ನು ಹೊಂದಿದವರು. ಅಂತಹ ಸ್ತ್ರೀಯರು ಅಷ್ಟು ಸಂಖ್ಯೆಯಲ್ಲಿ ಇದ್ದರು ಆದರೆ ಸೀತೆ ಮಾತ್ರಾ ಅವರೆಲ್ಲರಿಗಿಂತ ಭಿನ್ನ. ಅದು ರಾವಣನ ತುತ್ತಲ್ಲ. ಹಾಗಾಗಿ ಹನುಮಂತ ಆಲೋಚನೆ ಮಾಡುತ್ತಾನೆ ಇವರಲ್ಲಿ ಯಾರು ಸೀತೆಯಾಗಲು ಸಾಧ್ಯವಿಲ್ಲವೆಂದು. ಆರ್ತನಾಗಿ ಹನುಮಂತ ಆ ದೃಶ್ಯವನ್ನು ನೋಡುತ್ತಾನೆ. ಇವರಿಗಿಂತ ಗುಣಶ್ರೇಷ್ಠಳು ಸೀತೆ. ಈ ಪಟ್ಟಿಯಲ್ಲಿ, ಈ ಸಾಲಿನಲ್ಲಿ ಆಕೆ ಸೇರಲಿಕ್ಕೆ ಸಾಧ್ಯವಿಲ್ಲ. ಎಂತಹ ಅನ್ಯಾಯ ಮಾಡಿದ್ದಾನೆ ಅವಳ ವಿಷಯದಲ್ಲಿ ಲಂಕೇಶ್ವರ. ಅನಾರ್ಯಕರ್ಮವನ್ನು ಮಾಡಿದನಲ್ಲಾ ಆಕೆಯ ವಿಷಯದಲ್ಲಿ ಎಂದು ಪರಿತಪಿಸಿದನು ಹನುಮಂತ. ಮತ್ತೂ ಮುಂದುವರೆಯುತ್ತಾನೆ ಹನುಮಂತ ಅಲ್ಲಿ ಒಂದು ದೊಡ್ಡ ಶಯನಾಸನವಿತ್ತು ಅದನ್ನು ಸ್ಫಟಿಕದಿಂದ ಮಾಡಲ್ಪಟ್ಟಿತ್ತು. ಆ ಮಂಚಕ್ಕೆ ನವರತ್ನಗಳ ಅಲಂಕಾರವಿತ್ತು. ಆ ಮಂಚವನ್ನು ನೋಡಿ ಆಶ್ಚರ್ಯವಾಯಿತಂತೆ ಹನುಮಂತನಿಗೆ. ಆ ಮಂಚದಲ್ಲಿ ಆನೆದಂತ, ಬಂಗಾರ, ವೈಡೂರ್ಯ, ಅದಕ್ಕೆ ತಕ್ಕಂತೆ ಆಸನಗಳನ್ನು ಕಲ್ಪಿಸಲಾಗಿತ್ತು. ಬೇಕಾದಾಗ ಕುಳಿತುಕೊಳ್ಳುವ, ಮಲಗುವ ವ್ಯವಸ್ಥೆ ಆ ಮಂಚದಲ್ಲಿ ಇತ್ತು. ಮತ್ತು ಬಹಳ ಶ್ರೇಷ್ಠವಾದ ಹಾಸಿಗೆಯನ್ನು ಹಾಸಲಾಗಿತ್ತು. ಬೆಲೆಕಟ್ಟಲಾರದ ಬೆಲೆಯ ಹಾಸಿಗೆಯನ್ನು ಹಾಸಲಾಗಿತ್ತು. ವಿಚಿತ್ರವೆಂದರೆ ಆ ಮಂಚದ ಒಂದು ತುದಿಯಲ್ಲಿ ಹುಣ್ಣಿಮೆಯ ಚಂದ್ರನನ್ನು ಹೋಲುವ ಶ್ವೇತಛತ್ರವಿತ್ತು, ಅದನ್ನು ಉತ್ತಮೋತ್ತಮವಾದ ರತ್ನಮಾಲಿಕೆಗಳಿಂದ, ಪುಷ್ಪಮಾಲಿಕೆಗಳಿಂದ ಅಲಂಕಾರ ಮಾಡಲಾಗಿತ್ತು. ಇಕ್ಕೆಲೆಗಳಲ್ಲಿ ಸ್ತ್ರೀಯರು ಪರಿಮಳಭರಿತ ಗಾಳಿಯನ್ನು ಬೀಸುತ್ತಿದ್ದರು. ಆ ಹಾಸಿಗೆಗೆ ಕುರಿಯ ತುಪ್ಪಳದಿಂದ ಮಾಡಿದ ಕಂಬಳಿಯನ್ನು ಹಾಸಲಾಗಿತ್ತು. ಉತ್ತಮೋತ್ತಮವಾದ ಹೂವುಗಳಿಂದ ಹಾಸಿಗೆಯನ್ನು ಅಲಂಕಾರ ಮಾಡಲಾಗಿತ್ತು. ಅಷ್ಟೆಲ್ಲಾ ಸ್ರ್ತೀಯರೊಡಗೂಡಿ ರಾವಣ ಪುಷ್ಪಕವಿಮಾನದಲ್ಲಿ ಮಲಗಿದ್ದ. ರಾವಣನ ಭವನಕ್ಕಿಂತಲೂ ಉತ್ಕೃಷ್ಟವಾಗಿತ್ತು ಪುಷ್ಪಕವಿಮಾನ. ಪುಷ್ಪಕವಿಮಾನದ ಸುಖ ಬೇರೆ ಹಾಗಾಗಿ ಅಲ್ಲಿ ಹೋಗಿ ಮಲಗಿದ್ದ ರಾವಣ. ಆ ಸ್ಫಟಿಕದ ಮಂಚದ ಮೇಲೆ ಕಾರ್ಮೋಡದಂತೆ ಮಲಗಿದ್ದ ರಾವಣ. ಉತ್ತಮೋತ್ತಮವಾದ ಕುಂಡಲಗಳು, ಕೆಂಪಾದ ಕಣ್ಣು, ದೊಡ್ಡ ದೊಡ್ಡ ಬಾಹುಗಳು, ಬೆಳ್ಳಿಯ ಬಂಗಾರದ ನೂಲುಗಳಿಂದ ಮಾಡಿದ ವಸ್ತ್ರ. ತೆಳುವಾದ ಬೆಳ್ಳಿಯ ಬಂಗಾರದ ನೂಲುಗಳಿಂದ ಹೆಣೆದು ಆ ವಸ್ತ್ರಗಳನ್ನು ಸಿದ್ಧಪಡಿಸಲಾಗಿತ್ತು. ರಕ್ತಚಂದನದ ಲೇಪನವನ್ನು ಮಾಡಿಕೊಂಡಿದ್ದಾನೆ ರಾವಣ. ದಿವ್ಯ ಆಭರಣಗಳನ್ನು ಧಾರಣೆಮಾಡಿದ್ದಾನೆ. ಕುರೂಪಿಯಲ್ಲ, ರಾಕ್ಷಸರ ಪೈಕಿ ಸ್ಪುರದ್ರೂಪಿ ರಾವಣ.

ತನಗೆ ಬೇಕಾದಾಗ ಬೇಕಾದ ರೂಪವನ್ನು ಧಾರಣೆಮಾಡುವ ಶಕ್ತಿಯಿತ್ತು ರಾವಣನಿಗೆ. ರಾಕ್ಷಸಕನ್ಯೆಯರಿಗೆ ಪ್ರಿಯನಂತೆ ಅವನು. ಮತ್ಯಾರಿಗೂ ಪ್ರಿಯನಲ್ಲ. ರಾಕ್ಷಸರಿಗೆ ಸುಖವನ್ನು ಕೊಡುವವನು. ಇನ್ನು ಅವಕಾಶವಿಲ್ಲದಷ್ಟು ಮಧ್ಯಪಾನ ಮಾಡಿ ಹಾಗೆಯೇ ಒರಗಿದ್ದಾನೆ. ಆ ಹೊಳೆಯುವ ಮಂಚದಲ್ಲಿ ರಾವಣನು ಮಲಗಿದ್ದಾನೆ. ಉಸಿರಾಡುತ್ತಿದ್ದಾನೆ. ಅದು ಹೇಗೆ ಎಂದರೆ ಸರ್ಪವು ಬುಸುಗುಡುವಂತೆ ಉಸಿರಾಡುತ್ತಿದ್ದಾನೆ. ಅಥವಾ ಆನೆ ಉಸಿರಾಡುವಂತೆ ಉಸಿರಾಡುತ್ತಿದ್ದಾನೆ. ವಾನರ ಶ್ರೇಷ್ಠನು ಅದು ರಾವಣ ಎಂದು ತಿಳಿದಕೂಡಲೇ ಭೀತ ಭೀತನಂತೆ ಹಿಂದೆ ಸರಿದನು. ಹನುಮಂತನಿಗೆ ಉದ್ವೇಗ ಉಂಟಾಯಿತು. ಅದು ಯಾಕೆ ಎಂದು ತಿಲಕರು ಉದಾಹರಣೆ ನೀಡಿದ್ದಾರೆ; ಪಾಪಿಗಳಲ್ಲಿ ಪಾಪಿ ತಾನೇ ರಾವಣ. ಅಂತವನನ್ನು ಕಂಡಾಗ ಪುಣ್ಯ ಪುರುಷರಿಗೆ ತಾನಾಗಿಯೇ ಹಿಂದೆ ಸರಿಯುವಂತೆ ಆಗುತ್ತದೆ. ಸ್ವಚ್ಛವಾಗಿದ್ದವರು ಕೊಳಕನ್ನು ಕಂಡು ಹಿಂದೆಸರಿದಂತೆ, ಯಾವ ಪರಿಮಳ, ರೂಪ ಇಷ್ಟವಾಗುವುದಿಲ್ಲವೋ ಅಲ್ಲಿಂದ ತಕ್ಷಣವೇ ಹಿಂದೆ ಸರಿಯುತ್ತೇವೆ. ಹಾಗಾಗಿ ಭೀತನಾಗು ಅಲ್ಲ ಅದು ಅವನಿಗೆ ಸಹ್ಯವಲ್ಲ ಎಂದು ಹಿಂದೆ ಸರಿದ. ಜೊತೆಯಲ್ಲಿ ರಾವಣನ ಪ್ರಭಾವ, ತೇಜಸ್ಸು ಕೂಡ ಹಾಗಿದೆ. ಹಿಂದೆ ಸರಿದವನು ಅಲ್ಲಿದ್ದ ಒಂದು ವೇದಿಕೆಯ ಮೆಟ್ಟಿಲನ್ನೇರಿ ನೋಡತೊಡಗಿದ ರಾವಣನನ್ನು. ರಾವಣನನ್ನು ನೋಡುವ ಮನಸ್ಸು ಇದೆ. ಹಾಗೆ ನೋಡಿದಾಗ ಹನುಮಂತನಿಗೆ ರಾವಣನಲ್ಲಿ ಕಂಡಿದ್ದೇನೆಂದರೆ ಬರೀ ಮಧ್ಯ. ಮಧ್ಯಕ್ಕೆ ಅಂದರೆ ಪಾನಕ್ಕೆ ಮೇಲು ಹೊದಿಕೆಯನ್ನು ಹಾಕಲಾಗಿದೆ. ಅವನನ್ನು ನೋಡುತ್ತಿದ್ದನು ಹನುಮಂತ. ಅಂತಹ ರಾವಣ ಮಲಗಿದ್ದಾಗ ಅವನ ಮಂಚವು ಹೇಗೆ ಶೋಭಿಸಿತು ಎಂದರೆ ಗಂಧಹಸ್ತಿ ಮಲಗಿದಂತೆ. ಆನೆಗಳಲ್ಲಿ ಒಂದು ಜಾತಿಯ ಆನೆ ಗಂಧಹಸ್ತಿ. ಅದರ ಪರಿಪಳ ಆಘ್ರಾಣಮಾತ್ರದಿಂದ ಬೇರೆ ಆನೆಗಳು ಬೆದರಿ ಓಡುತ್ತವೋ ಆ ಆನೆಗೆ ಗಂಧಹಸ್ತಿ ಎಂದು ಹೆಸರು. ಪರ್ವತದ ಮೇಲೆ ಗಂಧಹಸ್ತಿ ಮಲಗಿದಂತೆ ಇತ್ತು ಆ ದೃಶ್ಯ.

ಯಾವ ಆನೆಯ ಪರಿಮಳದ ಆಘ್ರಾಣ ಮಾತ್ರದಿಂದ ಬೇರೆಯ ಆನೆಗಳು ಬೆದರಿ ಓಡುತ್ತವೆಯೋ ಆ ಆನೆಗೆ ಗಂಧಹಸ್ತಿ ಎಂದು ಹೆಸರು. ಗಂಧಹಸ್ತಿಯು ಮಲಗಿದರೆ ಪ್ರಸ್ರವಣ ಪರ್ವತ ಹೇಗೆ ಕಾಣಬಹುದೋ ಹಾಗಿತ್ತು ದೃಶ್ಯ. ಎರಡು ಕೈಗಳು ಅತ್ತ ಇತ್ತ ಚೆಲ್ಲಲ್ಪಟ್ಟಿದೆ. ಇಪ್ಪತ್ತಲ್ಲ. ಸ್ವರ್ಣದ ಅಂಗದಗಳು ಬಾಹುಗಳಲ್ಲಿ. ಎರಡು ಭುಜಗಳು ಇಂದ್ರ ಧ್ವಜದಂತೆ. ಆ ಭುಜಗಳ ಮೇಲೆ ಚಿಹ್ನೆಗಳು. ಐರಾವತವು ತನ್ನ ದಂತದಿಂದ ತಿವಿದ ಗುರುತಿದೆ. ಅವನಿಗೆ ಹೆಮ್ಮೆ ಅದು. ಇನ್ನೊಂದು ಕಡೆಗೆ ಇಂದ್ರನ ವಜ್ರಾಯುಧವು ಸೀಳಿದ ಗುರುತು. ಬೇರೆ ಸ್ಥಳದಲ್ಲಿ ವಿಷ್ಣುಚಕ್ರದ ಚಿಹ್ನೆ. ನಾರಾಯಣನಿಗೂ ರಾವಣನಿಗೂ ಯುದ್ಧವಾಗಿಲ್ಲ. ವಿಷ್ಣುಚಕ್ರ ಎನ್ನುವುದು ಒಂದು ಬಗೆಯ ಅಸ್ತ್ರ. ಅದರ ಪ್ರಯೋಗವಾಗಿದೆ. ಹೀಗೆ ಅನೇಕ ಅನೇಕ ದೇವಾಯುಧಗಳು ತಮ್ಮ ಗುರುತನ್ನು ಮೂಡಿಸಿವೆ ಅವನ ದೇಹದ ಮೇಲೆ. ಆದರೆ ಅವನಿಗೇನೂ ಆಗಿಲ್ಲ. ಶರೀರಕ್ಕೆ ಸರಿಹೊಂದುವ ಬಾಹುಗಳು, ಬಲಪೂರ್ಣವಾಗಿವೆ. ಒಳ್ಳೆಯ ಉಂಗುರಗಳನ್ನು ಬೆರಳಿಗೆ ಹಾಕಿದ್ದಾನೆ. ಪರಿಘಾಯುಧವನ್ನು ಹೋಲುವ ಭುಜಗಳು ವೃತ್ತಾಕಾರವಾಗಿವೆ, ಆನೆಯ ಸೊಂಡಿಲಿನಂತೆ. ಕೈಗಳು ಐದು ಹೆಡೆಯ ಸರ್ಪದಂತೆ ಇದೆ. ಕೆಂಪಾದ ಚಂದನವನ್ನು ಪೂಸಿಕೊಂಡಿದ್ದಾನೆ ಕೈಗಳಿಗೆ. ಯಕ್ಷರು, ಪನ್ನಗರು, ದೇವರು, ದಾನವರನ್ನು ಆಕ್ರಂಂದಿಸುವಂತೆ ಮಾಡಿದ ಭುಜಗಳು. ಮಂದರ ಪರ್ವತದಂತಿರುವ ಶರೀರದಿಂದ ಹೊರಬಂದ ಎರಡು ಮಹಾಸರ್ಪಗಳಂತೆ ಎರಡು ಭುಜಗಳು. ನಿದ್ದೆ ಮಾಡುತ್ತಿರುವಾಗ ಉಸಿರು ಬಿಡುತ್ತಿದ್ದನು. ಆ ಉಸಿರಿನಲ್ಲಿ ಚೂತ, ಪುನ್ನಾಗ, ಬಕುಲ ಇವುಗಳ ಪರಿಮಳವಿತ್ತು. ಜೊತೆಯಲ್ಲಿ ಮೃಷ್ಟಾನ್ನದ ಮತ್ತು ಪಾನದ ಪರಿಮಳ. ಆ ಪರಿಮಳ ಮನೆಯನ್ನೇ ತುಂಬುತ್ತಿತ್ತು.

ಆಮೇಲೆ ಅವನ ಕಿರೀಟ. ಮುತ್ತಿನ ಮಣಿಯಿಂದ ಶೋಭಿಸುವ ಸ್ವರ್ಣಕಿರೀಟ. ಸ್ವಲ್ಪ ಓರೆಯಾಗಿತ್ತು. ಅದು ಮುಖಕ್ಕೆ ಕಾಂತಿಯನ್ನು ಕೊಟ್ಟಿತ್ತು. ಮಲಗಿದ್ದಾಗಲೂ ಕಿರೀಟವನ್ನೇಕೆ ಧರಿಸಿದ್ದನೆಂದರೆ ಕುಳಿತು ಕುಡಿಯುವಾಗ ಒರಗಿದ್ದ ಕಾರಣದಿಂದ. ವಿಶಾಲವಾಗಿರುವ ವಕ್ಷಸ್ಥಲ. ಅಲ್ಲಿ ರತ್ನಹಾರ. ರಕ್ತಚಂದನ ಲೇಪನವಾಗಿದೆ. ಅಲ್ಲಿ ಒಳ್ಳೆಯ ಭಾವನೆ ಯಾವುದೂ ಇಲ್ಲ. ಸ್ವಚ್ಛ ಬಿಳಿಯ ರೇಷ್ಮೆಯ ಬಟ್ಟೆಯನ್ನು ಉಟ್ಟಿದ್ದಾನೆ. ಪೀತಾಂಬರವೂ ಸೇರಿದೆ. ಇಷ್ಟೆಲ್ಲಾ ಅಲಂಕಾರವಿದ್ದರೂ ಸ್ಫಟಿಕದ ಮಂಚದ ಮೇಲೆ ಉದ್ದಿನ ರಾಶಿಯನ್ನು ಹಾಕಿದಂತಿತ್ತು. ಕಪ್ಪುಬಣ್ಣದವನು ಅವನು. ಮಂಚದ ನಾಲ್ಕು ದಿಕ್ಕಿನಲ್ಲಿ ನಾಲ್ಕು ಕಾಂಚನ ದೀಪಗಳು. ಅವನ ಶರೀರದ ಮೇಲೆ ಬೆಳಕು ಚೆಲ್ಲಿದ್ದವು ಅವು. ನಾಲ್ಕು ದಿಕ್ಕಿಗೂ ಬೆಳಕು ಚೆಲ್ಲುತ್ತಿದ್ದವು ಅವು. ಹೀಗೆ ರಾವಣನನ್ನು ನೋಡುತ್ತಾನೆ ಹನುಮಂತ.

ಹಾಗೆಯೇ ಅವನ ಪಾದದ ಕಡೆಗೆ ನೋಡಿದಾಗ ಒಂದಷ್ಟು ಸ್ತ್ರೀಯರು ಅಲ್ಲಿ ಬಿದ್ದಿದ್ದಾರೆ. ಚಂದ್ರವದನೆಯರು, ಚಾರುಕುಂಡಲ ಭೂಷಿತೆಯರು ಅವರು. ಕೆಲವರು ನೃತ್ಯ ಕುಶಲೆಯರು. ಕೆಲವರು ಗಾಯನದಲ್ಲಿ, ವಾದನದಲ್ಲಿ ನಿಷ್ಣಾತರು. ಕೆಲವರು ಹಾಗೆಯೇ ಕುಳಿತು ನಿದ್ದೆಮಾಡುತ್ತಿದ್ದಾರೆ. ಅವರು ಜಾಗ ಸಿಕ್ಕಿದಲ್ಲೆಲ್ಲಾ ಮಲಗಿದ್ದರು. ಒಂದು ಕಡೆ ಅಮಲು ಇನ್ನೊಂದು ಕಡೆ ಶ್ರಮ. ಹಾಗಾಗಿ ಗಾಢ ನಿದ್ದೆ ಅವರಿಗೆ. ಒಬ್ಬ ನೃತ್ಯ ಕೋವಿದೆ ನೃತ್ಯದ ಭಂಗಿಯಲ್ಲಿಯೇ ಮಲಗಿದ್ದಳು. ಬೇರೆಬೇರೆ ವಾದನಗಳನ್ನು ನುಡಿಸುತ್ತಿದ್ದವರು ಅದನ್ನು ತಬ್ಬಿಕೊಂಡು ಮಲಗಿದ್ದರು. ಒಬ್ಬಳು ವೀಣೆಯನ್ನು, ಇನ್ನೊಬ್ಬಳು ಮಡ್ಡುಕವನ್ನು ಹಿಡಿದು ಅದರ ಮೇಲೆಯೇ ನಿದ್ದೆ ಮಾಡಿದ್ದಾಳೆ. ಪುಟ್ಟ ಮಗುವನ್ನು ತಬ್ಬಿ ಮಲಗಿದಂತೆ ಇತ್ತು. ಇನ್ನೊಬ್ಬಳು ತಮಟೆಯನ್ನು ತಬ್ಬಿ ಮಲಗಿದ್ದಳು. ಇನ್ನೊಬ್ಬಳ ಕೈಯಲ್ಲಿ ಕೊಳಲಿದೆ. ಇನ್ನೊಬ್ಬಳು ವಿಪಂಚಿ( 7 ತಂತಿಗಳ ವೀಣೆ)ಯನ್ನು ಹಿಡಿದು ಮಲಗಿದ್ದಳು. ಮೃದಂಗ, ಮದ್ದಲೆ, ಡಿಂಡಿಮವನ್ನು ತಬ್ಬಿ ಮಲಗಿದ್ದರು. ಇನ್ನೊಬ್ಬಳು ಕಲಶದಲ್ಲಿ ನೀರು ತಂದಿದ್ದಾಳೆ. ಅಲ್ಲಿಯೇ ನಿದ್ದೆ ಮಾಡಿದ್ದರಿಂದ ಅವಳ ಮೇಲೆ ನೀರು ಚೆಲ್ಲಿದೆ. ಹೇಗಿದೆಯೋ ಹಾಗೆಯೇ ವರ್ಣನೆ ಮಾಡಿದ್ದಾರೆ ವಾಲ್ಮೀಕಿಗಳು. ಆತೋದ್ಯಗಳೆಲ್ಲವೂ ಪ್ರದರ್ಶಿತವಾಗಿದ್ದವು. ಆದರೆ ಎಲ್ಲರೂ ನಿದ್ದೆ ಮಾಡಿದ್ದರು.

ಈ ಗುಂಪಿನಿಂದ ಪ್ರತ್ಯೇಕವಾಗಿರುವ ಉತ್ತಮವಾದ ಒಂದು ಮಂಚ. ಅಲ್ಲಿ ಒಬ್ಬಳು ಮಲಗಿದ್ದಾಳೆ. ಏಕೆಂದರೆ ಅವಳು ಈ ಗುಂಪಿನಿಂದ ಭಿನ್ನಳು. ಅವಳು ತುಂಬಾ ಲಕ್ಷಣವಾಗಿದ್ದಳು. ಆಕೆಯನ್ನು ಹನುಮಂತ ಕಂಡ. ಅನೇಕ ಆಭರಣಗಳನ್ನು ತೊಟ್ಟಿದ್ದಳು ಅವಳು. ಅವಳಿಂದಾಗಿ ಆ ಮನೆಯೇ ಬೆಳಗುತ್ತಿತ್ತು. ಆ ಇಡೀ ಭವನಕ್ಕೆ ಅಲಂಕಾರದಂತೆ ಅವಳಿದ್ದಳು. ಚಿನ್ನದ ವರ್ಣದವಳು. ರಾವಣನಿಗೆ ಅತ್ಯಂತ ಪ್ರೀತಿಯವಳು. ರಾವಣನ ಅಂತಃಪುರದ ಒಡತಿ ಅವಳು. ಅವಳೇ ಮಂದೋದರಿ. ಮಹೋದರಿ ಎಂದರೆ ದೊಡ್ಡ ಹೊಟ್ಟೆಯವಳು, ಶೂರ್ಪನಖಿಯಂತೆ. ಮಂದೋದರಿ ಎಂದರೆ ಕ್ಷೀಣವಾಗಿರುವ ಹೊಟ್ಟೆ. ಇದೆಯೋ ಇಲ್ಲವೋ ಎನ್ನುವಂತೆ. ಹನುಮಂತನು ಅವಳನ್ನು ಕಂಡನು. ಒಂದು ಕ್ಷಣ ಸೀತೆಯೇ ಇವಳು ಅನ್ನಿಸಿತು. ಮಂದೋದರಿಯ ಯೋಗ್ಯತೆ ತುಂಬಾ ದೊಡ್ಡದು, ಲಕ್ಷಣಗಳೂ ಕೂಡಾ. ಸೀತೆಯದ್ದೇ ಬಣ್ಣ. ಅವಳಂತೆಯೇ ಪತಿವ್ರತೆ. ಅವಳಲ್ಲಿ ಧರ್ಮವಿದೆ. ಹಾಗಾಗಿ ಅವನಿಗೆ ಸೀತೆ ಎಂದು ಅನ್ನಿಸಿತು. ಅವನಿಗೆ ತುಂಬಾ ಸಂತೋಷವಾಯಿತು. ಇದರ ಫಲ ಎಷ್ಟು ದೊಡ್ಡದು! ಇದಕ್ಕಾಗಿ ಎಷ್ಟೆಲ್ಲಾ ಹುಡುಕಿದ್ದು! ಹಾಗಾಗಿ ಅತ್ಯದ್ಭುತವಾದ ಆನಂದವಾಯಿತು. ಒಮ್ಮೆ ಬಾಲವನ್ನೆತ್ತಿ ಬಡಿದನು. ಚಪ್ಪಾಳೆ ತಟ್ಟಿದನು. ಭುಜವನ್ನು ತಟ್ಟಿಕೊಂಡನು. ನಂತರ ತನ್ನ ಬಾಲಕ್ಕೆ ಮುತ್ತು ಕೊಟ್ಟು ಅವನಿಗಾದ ಆನಂದವನ್ನು ಆಚರಣೆ ಮಾಡಿದನು. ಹನುಮಂತನು ಆಟವಾಡುತ್ತಾ, ಹಾಡುತ್ತಾ, ಎಲ್ಲ ಕಡೆ ಓಡುಡುತ್ತಾ, ಕೊನೆಯಲ್ಲಿ ಅಲ್ಲಿ ಮರಗಳಿಲ್ಲದಿದ್ದರೂ ಒಂದೊಂದು ಕಂಬವನ್ನು ಹತ್ತಿ ಹಾರುತ್ತಾ ಶುದ್ಧ ಕಪಿಯ ವರ್ತನೆಯನ್ನು ಹನುಮಂತನು ಮಾಡಿದನು. ಹನುಮಂತನು ವಾಯುಪುತ್ರ, ರಾಮದೂತನೇ ಆಗಿದ್ದರೂ ಸಹ ತಾನು ಕಪಿಯು ಹೌದು ಎಂದು ಸಾಬೀತು ಪಡಿಸಿದ ಎಂದು ವಾಲ್ಮೀಕಿಗಳು ವರ್ಣಿಸಿದ್ದಾರೆ. ಸಂತೋಷಗೊಂಡಾಗ ಕಪಿಗಳು ಏನೆಲ್ಲ ಮಾಡಬಹುದೋ ಅದನ್ನೆಲ್ಲ ಹನುಮಂತನು ಮಾಡಿದನು. ಹಿಂದೊಮ್ಮೆ ರಾಮ ಸುಗ್ರೀವನ ಬಳಿ ಪ್ರಥಮ ಬಾರಿಗೆ ಬರುತ್ತಿದ್ದಾಗ ಸುಗ್ರೀವನಿಗೆ ಭಯವಾಗುತ್ತದೆ. ಆಗ ಹನುಮಂತನು ಕಪಿಯ ಹಾಗೆ ಮಾಡಬೇಡ ಎಂದು ಸುಗ್ರೀವನಿಗೆ ಹೇಳಿದ್ದನು.

ಮಂಡೋದರಿಯನ್ನು ನೋಡಿದ ಮೇಲೆ ಹನುಮಂತನು ಇವಳು ಸೀತೆಯಲ್ಲ ಎಂದು ತೀರ್ಮಾನಿಸುತ್ತಾನೆ. ರಾಮನ ವಿರಹದಿಂದ ಸೀತೆ ಇಷ್ಟು ನಿಶ್ಚಿಂತೆಯಿಂದ ಮಲಗಿರಲು ಸಾಧ್ಯವಿಲ್ಲ, ಸೀತೆಯಾದರೆ ಊಟ ಮಾಡುತ್ತಿರಲಿಲ್ಲ, ಇಷ್ಟೊಂದು ಅಲಂಕಾರ ಮಾಡಿಕೊಳ್ಳುತ್ತಿರಲಿಲ್ಲ, ಸೀತೆಯೇ ಆಗಿದ್ದರೆ ದೇವತೆಗಳೇ ಬಂದರೂ ಒಪ್ಪಿಕೊಳ್ಳುತ್ತಿರಲಿಲ್ಲ ಎಂದು ಯೋಚಿಸಿ ಇವಳು ಸೀತೆ ಅಲ್ಲ ಎಂದು ತೀರ್ಮಾನಿಸಿದನು.

ರಾಮನಿಗೆ ಸಮಾನರಾದವರು ದೇವತೆಗಳಲ್ಲಿ ಕೂಡ ಇಲ್ಲ.

ಮೇಲಿನ ಹನುಮಂತನ ಭಾವವು ಸೀತೆಯ ಮೇಲೆ ಅವನಿಗಿದ್ದ ನಂಬಿಕೆಯನ್ನು ತೋರಿಸುತ್ತದೆ. ಸೀತೆ ಯಾರು..? ಸೀತೆ ಏನು ...?? ಎಂಬುದನ್ನು ರಾಮ–ಲಕ್ಷ್ಮಣರಿಂದ ಹಲವು ಬಾರಿ ಕೇಳಿದ್ದರಿಂದ ಹನುಮಂತನಿಗೆ ಚೆನ್ನಾಗಿ ಗೊತ್ತಿತ್ತು. ಮೊದಲು ಸೀತೆ ಎಂದು ಭಾವಿಸಿದ ತನ್ನ ಮನಸ್ಸನ್ನು ಸಹ ಹನುಮಂತನು ಕೊಡವಿದನು. ಹನುಮಂತನು ಅನ್ವೇಷಣೆಯನ್ನು ಮುಂದುವರಿಸಿದನು. ಹನುಮಂತನಿಗೆ ಒಂದೊಂದು ಶಾಲೆಯಲ್ಲಿ, ಒಂದೊಂದು ಪಾರ್ಶ್ವದಲ್ಲಿ ಸಾವಿರದ ಸಂಖ್ಯೆಯಲ್ಲಿ ಸ್ತ್ರೀಯರು ಕಾಣುತ್ತಾರೆ. ಆ ಸ್ತ್ರೀಯರೆಲ್ಲರೂ ಯಾವುದೋ ದೇಶದ ರಾಣಿಯರಂತೆ ಕಾಣುತ್ತಿದ್ದರು. ಸಾವಿರಾರು ಹೆಣ್ಣಾನೆಗಳ ಮಧ್ಯದಲ್ಲಿ ಮದಗಜದಂತೆ, ಗಂಡಾನೆಯಂತೆ ರಾಜನ ಶೋಭಿಸಿದನು. ಅಲ್ಲಿಂದ ಮುಂದಕ್ಕೆ ಹನುಮಂತನು ಪಾನ ಭೂಮಿಗೆ ಹೋಗುತ್ತಾನೆ. ಅಲ್ಲೊಂದು ಪಾನಶಾಲೆ ಇತ್ತು. ಅದು ಮಧ್ಯ–ಮಾಂಸಗಳ ದೊಡ್ಡ ಪ್ರಪಂಚವೇ ಆಗಿತ್ತು. ಎಲ್ಲ ಪ್ರಾಣಿಗಳ ಮಾಂಸ ಮತ್ತು ಬಗೆ ಬಗೆಯ ಮಧ್ಯಗಳು ಅಲ್ಲಲ್ಲಿ ಚೆಲ್ಲಿದ್ದವು. ಪರಿಮಳವು ಎಲ್ಲ ಕಡೆ ಹರಡಿತ್ತು. ಇಂತಹದ್ದೊಂದು ದೊಡ್ಡ ಮೈಲಿಗೆ, ಮಲಿನ ಪ್ರಪಂಚವನ್ನು ಹನುಮಂತನು ನೋಡಿದನು. ರಾವಣನ ಅಂತಃಪುರವನ್ನು ಪೂರ್ಣವಾಗಿ ಹನುಮಂತನು ಶೋಧಿಸಿದನು.

ನಂತರ ಹನುಮಂತನಿಗೆ ಭಯಂಕರವಾದ ಚಿಂತೆಯೊಂದು ಕಾಡಿತು. ತನ್ನಿಂದ ಧರ್ಮಕ್ಕೆ ಚ್ಯುತಿಯಾಯಿತೇ..? ಬದುಕಿಡೀ ಪಾಲಿಸಿದ ಪರಿಶುದ್ಧ ಭಾವಕ್ಕೆ ಚ್ಯುತಿಯಾಯಿತೇ ?? ಎಂದು ಹನುಮಂತನು ಅವನ ಬಗ್ಗೆ ಅವನಿಗೆ ಬೇರೆ ಭಾವ ಬರುವಷ್ಟು ಚಿಂತಿಸಿದನು. ಅಲ್ಲಿ ಎಲ್ಲ ಸ್ತ್ರೀಯರು ನಿಶ್ಚಿಂತೆಯಿಂದ ಮಲಗಿರುವಾಗ ನೋಡಿದೇನಲ್ಲ, ಇದು ನನಗೆ ದೊಡ್ಡ ಧರ್ಮಲೋಪವನ್ನುಂಟು ಮಾಡುತ್ತದೆ, ದೊಡ್ಡ ಪಾಪವು ಬರುತ್ತದೆ ಎಂದು ಭಯದಿಂದ ಹನುಮಂತನು ತುಂಬಾ ಬೇಸರಗೊಂಡನು. ಆಗ ಹನುಮಂತನಿಗೆ ಇದು ಸರಿಯೇ / ತಪ್ಪೇ ಎಂದು ಕೇಳಲು ಬೇರೆ ಯಾರು ಇರಲಿಲ್ಲ. ಹನುಮಂತನು ತನ್ನೊಡನೆ ತಾನೇ ಸಂವಾದವನ್ನು ಮಾಡಿದನು. ನಿಜವಾಗಿಯೂ ನನಗೆ ದೋಷ ಬರುವುದೇ ಎಂದು ವಿಶ್ಲೇಷಣೆ ಮಾಡಿದನು.

ನಾನು ಸಾವಿರ ಸಾವಿರ ಪರಸ್ತ್ರೀಯರನ್ನು ನೋಡಿದ್ದು ಹೌದು, ಆದರೆ ಯಾವ ಭಾವದಿಂದ ನೋಡಿದರೆ ದೋಷವೋ ಆ ಭಾವದಿಂದ ನೋಡಿಲ್ಲ ಎಂದು ತನ್ನ ಮನಸ್ಸಿನೊಳಗೇ ಹನುಮಂತನು ಯೋಚಿಸಿದನು. ನನ್ನ ಮನಸ್ಸಿನಲ್ಲಿ ಯಾವ ವಿಕಾರವೂ ಇಲ್ಲ ಮತ್ತು ಮನಸ್ಸಿನಿಂದ ಪಾಪ ಮಾಡಿಲ್ಲ ಎನ್ನುವ ತೀರ್ಮಾನಕ್ಕೆ ಬಂದನು.

ಮನವರಿಯದ ಪಾಪ ತಾನಿರದು ―ಶ್ರೀಸೂಕ್ತಿ.

ಮನಸ್ಸಿನಿಂದ ಮಾಡದ ಪಾಪಕ್ಕೆ ದೋಷವಿಲ್ಲ. ಮನಸ್ಸಿನಿಂದ ಮಾಡುವ ಪಾಪಕ್ಕೆ ದೋಷ ತಪ್ಪಿದ್ದಲ್ಲ. ಮನಸ್ಸು ಲಿಪ್ತವಾಗದಿದ್ದರೆ ಮೂಜಗವನ್ನು ಕೊಂದರೂ ಕೊಂದ ಪಾಪವಿಲ್ಲ ಎಂದು ಮುಂದೆ ಕೃಷ್ಣನು ಹೇಳಿದ್ದಾನೆ. ಲೇಪವಿದ್ದರೆ ಮಾತ್ರ ಪಾಪ. ಲೇಪವಿಲ್ಲದಿದ್ದರೆ ಪಾಪವಿಲ್ಲ. ಸೀತೆಯನ್ನು ನಾರಿಯರ ಮಧ್ಯೇ ಹುಡುಕದೆ ಬೇರೆಲ್ಲಿ ಹುಡುಕಬೇಕಿತ್ತು ಎಂದು ತನಗೆ ತಾನೇ ಪ್ರಶ್ನಿಸಿಕೊಳ್ಳುತ್ತಾನೆ. ಸ್ತ್ರೀಯರನ್ನು ಸ್ತ್ರೀಯರ ಮಧ್ಯೆದಲ್ಲೇ ಹುಡುಕಬೇಕು. ಯಾವುದು ಯಾವ ಜಾತಿಯದೋ ಆ ಜಾತಿಯ ಮಧ್ಯವೇ ಹುಡುಕಬೇಕು. ಕಳೆದು ಹೋದ ಸ್ತ್ರೀಯನ್ನು ಮೃಗಗಳ ಮಧ್ಯೆ ಹುಡುಕಲು ಸಾಧ್ಯವಿಲ್ಲ ಎಂದು ಅವನಿಗೆ ಅವನೇ ಉತ್ತರಿಸಿಕೊಳ್ಳುತ್ತಾನೆ. ಹನುಮಂತನು ಸಾವಿರ ಸಾವಿರ ಸ್ತ್ರೀಯರ ಮಧ್ಯೇ ಶುದ್ಧ ಮನಸ್ಸಿನಿಂದ ಹುಡುಕಿದ ಪರಿಣಾಮದಿಂದ ನಾಗ ಕನ್ಯೆಯರನ್ನು, ರಾಜ ಕನ್ಯೆಯರನ್ನು ಕಂಡರೂ ಸೀತೆ ಮಾತ್ರ ಕಾಣಲಿಲ್ಲ. ಸೀತೆಯನ್ನು ಕಾಣದ ಹನುಮಂತನು ಒಂದಿಷ್ಟು ಹೊತ್ತು ಬೆಪ್ಪಾಗಿ ಕುಳಿತು ಮುಂದೇನು ಮಾಡಲಿ ಎಂದು ಯೋಚಿಸಿದನು. ನಂತರ ಚಿಂತೆಯನ್ನು ಕೊಡವಿ, ಪಾನ ಭೂಮಿಯನ್ನು ಬಿಟ್ಟು ಬೇರೆ ಕಡೆಯಲ್ಲಿ ಹುಡುಕಲು ಆರಂಭಿಸಿದನು.

ಮುಂದೇನಾಯಿತು ..? ಎಂಬುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.....

#DhaaraRamayan
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ

No comments:

Post a Comment

Please leave your comments here.....