ಜಗತ್ತಿನ ಯಾವ ಎರಡು ವ್ಯಕ್ತಿಗಳ ಸರ್ವಾಭಿಮತ, ಸಹಮತ ಎಲ್ಲದರಲ್ಲೂ ಬರಲು ಸಾಧ್ಯವಿಲ್ಲ. ಸಹಮತ-ಭಿನ್ನಮತಗಳನ್ನು ಬಿಟ್ಟು , ಜೀವನಕ್ಕೆ ಹೊಂದಾಣಿಕೆಯೇ ಮುಖ್ಯ.
ಶ್ರೀರಾಮನು ಪ್ರತಿಜ್ಞೆಯನ್ನು ಮಾಡಿದ್ದಾನೇನೆಂದರೆ ದಂಡಕಾರಣ್ಯ ರಾಕ್ಷಸರ ಸಂಹಾರವನು ಮಾಡಿ ಮುನಿಗಳ ರಕ್ಷಿಸುವೆ. ಆದರೆ ಇಲ್ಲಿ ಸೀತೆಯ ಅಭಿಪ್ರಾಯ ಬೇರೆಯಿದೆ. ಕಾರಣ : ವೈರವಿಲ್ಲದೇ ರೌದ್ರ ಬೇಕೆ? ರಾಕ್ಷಸರೊಡನೆ ಕಲಹಕ್ಕೆ, ವೈರ ಭಾವಕ್ಕೆ ನಾವೇಕೆ ಹೋಗಬೇಕು? ಎಂಬುದು ಸೀತೆಯ ಮಾತು.
ಆದರೆ ಸುದೇಷ್ಣರ ಆಶ್ರಮದಿಂದ ಹೊರಡುವಾಗ ಶಸ್ತ್ರ, ಬಿಲ್ಲು, ಬಾಣಗಳನ್ನು ತಂದುಕೊಟ್ಟವಳೇ ಅವಳು. ಆದರೆ ಮನಸಿನಲಿ ಬೇರೆ ಅಭಿಪ್ರಾಯವಿದ್ದರೂ ತನ್ನ ಕರ್ತವ್ಯ ಮರೆಯಲಿಲ್ಲ ಎಂಬುದನ್ನು ನಾವಿಲ್ಲಿ ಇದರಿಂದ ತಿಳಿಯಬಹುದು. ರಾಮನಿಲ್ಲಿ ಸೀತೆಯ ಮಾತನ್ನು ಒಪ್ಪದಿದ್ದರೂ ಸೀತೆಯನ್ನು ಒಪ್ಪುತ್ತಾನೆ.
ಇದರಿಂದ ರಾಮ-ಸೀತೆ ಹೇಗೆ ಅನ್ಯೋನ್ಯದಿಂದ ಇದ್ದರು ಎಂಬುದನ್ನು ರಾಮಾಯಣ ಉಲ್ಲೇಖಿಸುತ್ತದೆ.
ಇತ್ತ ರಾಮನು ಸಂಧ್ಯಾವಂದನೆಯ ಬಳಿಕ ಅಗಸ್ತ್ಯ ಭ್ರಾತರ ಆಶ್ರಮವನ್ನು ಪ್ರವೇಶಮಾಡಿದಾಗ ಅಲ್ಲಿ ರಾಮ-ಲಕ್ಷ್ಮಣ ಮತ್ತು ಸೀತೆಯನ್ನು ಸ್ವಾಗತಿಸಿ, ಉಪಚರಿಸುವರು. ನಂತರ ಕಂದಮೂಲ ಫಲಾಹಾರಗಳ ಸೇವನೆಯ ಬಳಿಕ ಅಂದಿನ ರಾತ್ರಿಯನ್ನು ಅಲ್ಲಿಯೇ ಕಳೆದು, ಮರುದಿನ ಬೆಳಗ್ಗೆ ಸುದೇಷ್ಣರು ತೋರಿದ ದಾರಿಯಲಿ ಪ್ರಯಾಣ ಮುಂದುವರೆಸಲು ತಯಾರಾದ ರಾಮನು ನಿಮ್ಮ ಅಣ್ಣನನ್ನು ಕಂಡುಬರುವೆನೆಂದು ಹೇಳಿದನು. ಅಂತೆಯೇ ರಾಮನನ್ನು ಸಂತೋಷದಿಂದ ಹರಸಿ ಕಳುಹಿಸಿದರು.
ಹೀಗೆ ಪ್ರಯಾಣ ಮಾರ್ಗದಲ್ಲಿ ಅನೇಕ ವೃಕ್ಷಗಳನ್ನು ಕಂಡನು- ಜಲಕದಂಬ, ನೀವಾರ, ಫಲಸ, ತಾಳೆ, ದಿವಿಶ, ಹೊಂಗೆ, ಹಿಪ್ಪೆ ಮುಂತಾದಗಳಲ್ಲದೇ ಮರಗಳಲ್ಲಿ ಪುಷ್ಪಗಳು ಬಿಟ್ಟಿದ್ದವು, ಆನೆಗಳಿಂದ ಮರದ ಕೊಂಬೆಗಳು ಬಗ್ಗಿ ಹೋಗಿದ್ದವು, ಮಂಗಗಳು ಫಲಗಳನ್ನು ಸೇವಿಸುತ್ತಿದ್ದವು, ಅಮಲೇರಿದ ಪಕ್ಷಿಗಳು.. ಇವುಗಳನ್ನು ವೀಕ್ಷಿಸುತ್ತಾ ಸಾಗುತ್ತಿರುವಾಗ...
ರಾಮನು ಲಕ್ಷ್ಮಣನ ಬಳಿ - ನಾವು ಒಂದು ಒಳ್ಳೆಯ ಜಾಗಕ್ಕೆ ಬಂದಂತಿದೆ; ಮರಗಳು, ಎಲೆಗಳನು ನೋಡು; ಅಗಸ್ತ್ಯರ ಆಶ್ರಮ ಬಹುದೂರವಿರಲಿಕ್ಕಿಲ್ಲ.
ಆಶ್ರಮ ಎಂದರೆ ಅದು ಶ್ರಮವನ್ನು ಕಳೆಯುವ ಜಾಗ. ಬದುಕನ್ನು ಸಾರ್ಥಕಗೊಳಿಸುವ ಮಾರ್ಗ. ಅಗಸ್ತ್ಯರೆಂದರೆ ಪರ್ವತವನ್ನು ಸ್ತಂಭನಗೊಳಿಸಿದವರು. ಸಪ್ತ ಪರ್ವತಗಳಲ್ಲಿ ಒಂದಾದ ವಿಂಧ್ಯ ಪರ್ವತದ ಗುರು. ವಿಂಧ್ಯನ ಅಹಂಕಾರವನ್ನು ಭಂಗ ಮಾಡಿ ದಕ್ಷಿಣ ದಿಕ್ಕಿಗೆ ದಾರಿಯನ್ನು ಇತ್ತವರು ಅಗಸ್ತ್ಯರು.
ಸೂರ್ಯನು ದಿನಾ ಮೇರು ಪರ್ವತವನ್ನು ಪ್ರದಕ್ಷಿಣೆ ಬರುವುದನ್ನು ಸಹಿಸದ ವಿಂಧ್ಯನು ಒಂದು ದಿನ ಸೂರ್ಯನ ಬಳಿ ಮೇರು ಏನು ಹೆಚ್ಚು, ನಾನೇನು ಕಡಿಮೆ ನನಗೂ ನೀನು ಪ್ರದಕ್ಷಿಣೆಯನ್ನು ಮಾಡೆಂದಾಗ ಸೂರ್ಯನು ಇದು ನಿಯತಿ, ನನ್ನದಲ್ಲ ಅದು ಸಾಧ್ಯವಾಗದು ಎಂದಾಗ ವಿಂಧ್ಯನು ಉನ್ನತವಾಗಿ ಬೆಳೆಯುತ್ತಾ ಸೂರ್ಯನ ಪ್ರದಕ್ಷಿಣಾಕಾರ ಪಥಕ್ಕೆ ತೊಂದರೆಯನ್ನುಂಟು ಮಾಡುವನು.
ಇದನ್ನು ಗಮನಿಸಿದ ದೇವತೆಗಳು, ವಿಂಧ್ಯನಲ್ಲಿ ನೀನು ಮಾಡುತ್ತಿರುವುದು ಸರಿಯಿಲ್ಲ ಸೂರ್ಯನ ಚಲನೆಗೆ ಅಡ್ಡಿ ಪಡಿಸದಿರು ಎಂಬ ದೇವತೆಗಳ ಪ್ರಾರ್ಥನೆಯು ವ್ಯರ್ಥವಾಯಿತು. ಆದ ಕಾರಣ ದೇವತೆಗಳೆಲ್ಲರೂ ಅಗಸ್ತ್ಯರಲ್ಲಿ ಪ್ರಾರ್ಥಿಸಿದಾಗ, ಅಗಸ್ತ್ಯರು ಲೋಕಕಲ್ಯಾಣಕ್ಕಾಗಿ ತಮ್ಮ ಪತ್ನಿ ಲೋಪಮುದ್ರೆಯನ್ನು ಕರೆದುಕೊಂಡು ವಿಂಧ್ಯನಿರುವಲ್ಲಿಗೆ ಬಂದಾಗ ವಿಂಧ್ಯನು ಶಿರಬಾಗಿ ವಂದಿಸಿದನು.
ಆಗ ಅಗಸ್ತ್ಯರು ವಿಂಧ್ಯನಲ್ಲಿ ನನಗೆ ದಕ್ಷಿಣ ದಿಕ್ಕನ್ನು ಸೇರಲಿರುವ ಕಾರಣ ನಾನು ಹೋದ ಕಾರ್ಯ ಮುಗಿಸಿ ಬರುವವರೆಗೆ ನೀನು ಹೀಗೆ ಇರು ಎಂದರು. ಹೀಗೆ ದಕ್ಷಿಣಕ್ಕೆ ದೊಡ್ಡ ಉಪಟಳವಾಗಿರುತ್ತಿದ್ದ ವಿಂಧ್ಯನನ್ನು, ರಾಕ್ಷಸರ ಭಯದಿಂದ ದಕ್ಷಿಣ ಭಾರತವನ್ನು ರಕ್ಷಿಸುವುದಕ್ಕಾಗಿ, ಲೋಕ ಹಿತಕ್ಕಾಗಿ ಮೃತ್ಯುವನ್ನು ತಡೆದವರು ಅಗಸ್ತ್ಯರು. ಅವರಿಂದಾಗಿ ದಕ್ಷಿಣ ದಿಕ್ಕಿಗೆ ಗತಿಯನ್ನು ಕೊಟ್ಟರು.
ಅತ್ತ ಆಶ್ರಮದಿಂದ ಹೊಗೆ ಏಳುತ್ತಿದೆ, ರಾಕ್ಷಸರೂ ಕೂಡ ಪ್ರಶಾಂತರಾಗಿರುವ ಸ್ಥಳ, ಪ್ರಶಾಂತ ವಾತಾವರಣ ಹೀಗೆ ದಾರಿಯಲಿ ಅಗಸ್ತ್ಯರ ಮತ್ತು ವಿಂಧ್ಯನ ಕಥೆಯನ್ನು ರಾಮನು ಲಕ್ಷ್ಮಣನಿಗೆ ಹೇಳುವನು. ಅಗಸ್ತ್ಯರು ಎಂದರೆ ಭಗವಂತನಿಗೆ ಒಳಿತು ಮಾಡುವಷ್ಟು ಒಳ್ಳೆಯವರು. ನಮ್ಮ ವನವಾಸವನ್ನಿನ್ನು ಇಲ್ಲಿ ಕಳೆಯೋಣ..
ಮುನಿಗಳು ದೇವತೆಗಳ ಉಪಚಾರವನ್ನು ಮಾಡುವುದು ಸಾಮಾನ್ಯ. ಆದರೆ ಇಲ್ಲಿ ದೇವತೆಗಳು ಮುನಿಗಳ ಉಪಚಾರವನ್ನು ಮಾಡುತ್ತಾರೆ, ಸುಳ್ಳು ಹೇಳುವವ, ಕಾಮಾಂಧಕ ಇಲ್ಲಿ ಬದುಕಲಾರರು, ಅನೇಕ ಮಹಾತ್ಮರು ಸಿದ್ಧಿಯನು ಪಡೆದು ಸ್ವರ್ಗವನ್ನು ಸೇರಿದ್ದಾರೆ. ಇಲ್ಲಿ ತಪಸ್ಸು ಮಾಡಿದರೆ ಅಮರತ್ವ ಪ್ರಾಪ್ತವಾಗುವುದು, ದುರ್ಲಭವಾದ ವರಗಳು ಲಭಿಸುವವು ಎಂದು ಲಕ್ಷ್ಮಣನಿಗೆ ಅಗಸ್ತ್ಯರ ಕುರಿತಾಗಿ ಪರಿಚಯಿಸುತ್ತಾ ಅಗಸ್ತ್ಯರ ಆಶ್ರಮವನ್ನು ತಲುಪುವರು.
ಆಶ್ರಮವನ್ನು ತಲುಪಿದವರೇ ಶಿಷ್ಯನೋರ್ವನಲ್ಲಿ ರಾಮ ," ರಾಮ ಬಂದಿರುವನು, ಸೀತೆಯೊಡಗೂಡಿ ಬಂದಿದ್ದಾನೆ" ಎಂದು ಅಗಸ್ತ್ಯರಿಗೆ ತಿಳಿಸಲು ಹೇಳುವನು. ಅದರಂತೆಯೇ ಶಿಷ್ಯನು ಹೋಗಿ ಅರುಹಿದಾಗ- ವಿಷಯ ತಿಳಿದ ಅಗಸ್ತ್ಯರು ಹರುಷದಿಂದ, ಎಷ್ಟು ವರ್ಷಗಳಿಂದ ಕಾದೇ!!! ಭಾಗ್ಯವಿಂದು ಒದಗಿಬಂತು ಎಂದು ಹೇಳುತ್ತಾ, ಯಾಕೆ? ರಾಮನನ್ನು ಒಳಗೆ ಕರೆಯಲಿಲ್ಲ ; ಎಂದು ಹೇಳುವರು. ಆಗ ಬಹು ಗಡಿಬಿಡಿಯಿಂದಲೇ ಶಿಷ್ಯನು ರಾಮನನ್ನು ಕರೆತರಲು ಹೊರಬರುವಾಗ, ಇತ್ತ ರಾಮನು ಲಕ್ಷ್ಮಣನಲ್ಲಿ ನೋಡು ನೋಡು ಅಗಸ್ತ್ಯರೇ ಬರುತ್ತಿದ್ದಾರೆ ಎಂದು ಬರುತ್ತಿರುವ ಅಗಸ್ತ್ಯರ ಪರಿಚಯವನ್ನು ಮಾಡುವನು.
ಬಂದಿರುವ ರಾಮನನ್ನು ಸ್ವಾಗತಿಸಿ, ಉಪಚರಿಸುವರು ಅನಂತರ ಕುಶಲ ಪ್ರಶ್ನೆಯನು ಮಾಡಿ ಅರ್ಘ್ಯವನು ನೀಡುವರು ಅಗಸ್ತ್ಯರು. ನಂತರ ವಾನಪ್ರಸ್ಥ ವಿಧಿಯ ಪ್ರಕಾರ ಭೋಜನವನು ಮಾಡುವರು.
ಧರ್ಮಕೋವಿದನಾದ ರಾಮನಿಗೆ "ಅಥಿತಿಗಳಿಗೆ ಉಪಚರಿಸಿದೆ. ತಾನೇ ತಿಂದರೆ ಆತ ತನ್ನ ಮಾಂಸವನ್ನು ತಾನೇ ಉಣ್ಣುವನು" ಎಂದು ಆತಿಥ್ಯ ಧರ್ಮದ ಮತ್ತು ಸುಳ್ಳು ಸಾಕ್ಷಿ ಹೇಳಿದರೆ ಏನಾಗುವುದು ಎಂಬ ತತ್ವವನು ಹೇಳಿದರು ಅಗಸ್ತ್ಯರು. ಹೀಗೆ ಪ್ರಿಯವಾಗಿ, ಆತ್ಮ ತುಂಬುವಷ್ಟು ರಾಮನನ್ನು ಅಗಸ್ತ್ಯರು ಸತ್ಕರಿಸುವರು.
ಇದೋ ರಾಮ ನಿನಗಾಗಿ ಕಾದಿಟ್ಟ ಧನುಸ್ಸು, ಇದು ವೈಷ್ಣವ ಧನುಸ್ಸು. ಇದು ಈ ಲೋಕದ ಸಾಮಾನ್ಯ ಬಡಗಿ ಮಾಡಿದ್ದಲ್ಲ. ವಿಶ್ವಕರ್ಮ ಮಾಡಿದ್ದು, ಇದೋ ಮಹೇಂದ್ರನು ಕೊಟ್ಟ ಬಾಣಗಳು; ಇವು ಅಕ್ಷಯ (ಬತ್ತದ) ಬತ್ತಳಿಕೆಗಳು, ಹರಿತ ಬಾಣಗಳು, ಬೆಂಕಿಯಂತೆ ತೋರುವ ಬಾಣಗಳು, ಮಹಾಖಡ್ಗ, ಹೀಗೆ ವರಾಯುಧಗಳನ್ನು ಕೊಡುವರು ಹೀಗೆ ಮಾತುಗಳು ಮುಂದುವರೆಯುವುದು.
ರಾಮನ ಭಂಡಾರಕ್ಕೆ ಭಂಡಾರಿಗಳು ಈ ಅಗಸ್ತ್ಯರು.
ರಾಮನೇ ನಾನಿಂದು ಪ್ರಸನ್ನನಾದೆನು, ಸಂತೋಷವಾಯಿತು, ಪರಮಾನಂದ ಹೊಂದಿದೆನು. ಸೀತೆಯನ್ನು ಕರೆದುಕೊಂಡು ಬಂದೆಯಲ್ಲ. ಮಾರ್ಗಾಯಾಸವಾಯಿತೆ? ಸುಕುಮಾರಿ ಸೀತೆ, ಈ ಕಡು ಕಷ್ಟಕಾಲದಲ್ಲಿ ರಾಮನ ಜೊತೆಗೆ ಬಂದಿರುವಳು, ಈಕೆ ಪ್ರಶಂಸೆಗೆ ಯೋಗ್ಯಳು, ಅರುಂಧತಿಯಂಥವಳು ಎಂದು ಅಗಸ್ತ್ಯರು ಸೀತೆಯ ಬಗ್ಗೆ ಹೇಳುವರು.
ನೀನು ಇಲ್ಲಿ ಸೀತೆಯೊಡನೆ ಇರಬಹುದು ಎಂದಾಗ ಪ್ರಜ್ವಲಿಸುತ್ತಿದ್ದ ಅಗ್ನಿಯಂತಿದ್ದ ಅಗಸ್ತ್ಯರಿಗೆ ರಾಮನು ಇಂತೆಂದನು- "ಅನುಗ್ರಹೀತನಾದೆ ನಾನು, ಮನಸ್ಸು ಮಾಡಿದರೆ ಯಾವ ವರವನ್ನಾದರೂ ಕೊಡುವ ನೀವು, ನಮಗೆ ವಾಸಮಾಡುವುದಕ್ಕೆ ಯೋಗ್ಯವಾದ ಆಶ್ರಮ ಸ್ಥಾನವನ್ನು ಸೂಚಿಸಿ" ಎಂದು ರಾಮನು ಕೇಳಿದಾಗ ಕೊಂಚ ಧ್ಯಾನಿಸಿ;
ಮಗೂ..., ಇಲ್ಲಿಂದ ಎರಡು ಯೋಜನ ದೂರದಲ್ಲಿ ಪಂಚವಟಿ ಎಂಬ ಸ್ಥಳವಿದೆ, ಆ ದೇಶವು ಬಹುಮೃಗಗಳಿಂದ ಕೂಡಿದ ಫಲಪುಷ್ಪಗಳಿಂದ ಕೂಡಿದ ಜಾಗ. ಅಲ್ಲಿಗೆ ಹೋಗಿ ಪಿತೃ ವಾಕ್ಯ ಪರಿಪಾಲನೆಯನ್ನು ಮಾಡಬಹುದು. ಧನ್ಯ ನಿನ್ನ ತಂದೆ, ನಿನ್ನಿಂದ ದಶರಥನಿಗೆ ಕೀರ್ತಿ, ಪಾಪಶೂನ್ಯನು ನೀನು, ನಿನಗೆ ಎಲ್ಲವೂ ಗೊತ್ತು, ತಪಸ್ಸಿನ ಬಲ, ದಶರಥನ ಪ್ರೀತಿ, ನಾನೆಲ್ಲವನು ತಿಳಿದಿರುವೆ" ಎಂದು ಅಗಸ್ತ್ಯರು ಹೇಳುವರು.
ನಿನ್ನ ಹೃದಯದ ಅಭಿಲಾಷೆಯನು ತಪಸ್ಸಿನ ಮೂಲಕ ತಿಳಿದಿರುವೆ, ಇಲ್ಲಿರಬೇಕೆಂದು ಬಂದವ ; ಪಂಚವಟಿಗೆ ತೆರಳಲು ಬಯಸಿದ್ದು ಎಲ್ಲವನ್ನೂ ಬಲ್ಲವರು ಅಗಸ್ತ್ಯರು. ಸೀತೆ ರಮಿಸುವಳು ಅಲ್ಲಿ, ಮೈಥಿಲಿಯು ರಮಿಸುವಳು, ಬೇಕಾದಷ್ಟು ಫಲಮೂಲಗಳು ದೊರಕುವವು, ಪಕ್ಷಿಗಳ ಕಲರವ, ಏಕಾಂತ. ಏಕೆಂದರೆ ನೀನು ನಿನ್ನ ಪತ್ನಿಯಾದ ಸೀತೆಯ ರಕ್ಷಣೆ ಮಾಡುವ ಸಾಮರ್ಥ್ಯವುಳ್ಳವ. ನೀನು ಅಲ್ಲಿದ್ದರೆ ತಾಪಸರ ರಕ್ಷಣೆ ಆಗುವುದು, ನಿತ್ಯ ಪುಷ್ಪಗಳಿಂದ ಕೂಡಿದ ಪಂಚವಟಿ ಇದು ಎಂದು ಅಗಸ್ತ್ಯರು ರಾಮನಿಗೆ ಪಂಚವಟಿಯ ಬಗ್ಗೆ ತಿಳಿಸುವರು.
ಅನಂತರ ರಾಮನು ಅಗಸ್ತ್ಯರನು ಆದರಿಸಿ ಹೋಗಿ ಬರುವೆನೆಂದು ಪಂಚವಟಿಯ ಕಡೆಗೆ ಪ್ರಯಾಣ ಆರಂಭಿಸಲು ಅಗಸ್ತ್ಯರ ಆಶ್ರಮದಿಂದ ತೆರಳುವರು.
ಹೀಗೆ ಹೋದಾಗ ಕಾನನದ ಮಾರ್ಗ ಮಧ್ಯದಲಿ ದೊಡ್ಡದೊಂದು ಹದ್ದನ್ನು ಕಾಣುವರು, ರಾಕ್ಷಸರು ವೇಷದಲ್ಲಿ ಬಂದಿರುವಂತೆ ಭಾಸವಾಗುವಂತಿದ್ದ ಆ ಪಕ್ಷಿಯನ್ನು ಮಾತನಾಡಿಸಿದಾಗ...
ಆ ಹದ್ದು ಮೃದುವಾದ ದನಿಯಲಿ ಮಗೂ, ನಾನು ನಿನ್ನ ತಂದೆಯ ಸ್ನೇಹಿತ ಎಂದು ಹೇಳಿತು. ಅದರ ಮಾತುಗಳಿಂದಲೇ ಗೌರವ ಭಾವನೆಯು ಉಂಟಾಗಿದ್ದ ರಾಮನೊಳು ತಂದೆಯ ಸ್ನೇಹಿತನೆಂದಾಗ ಸಂತೋಷವಾಯಿತು. ಗೌರವದಿಂದ ಆದರಿಸಿದ ರಾಮನು, ಪಕ್ಷಿಯ ಕುಲ, ಹೆಸರು ಕೇಳಿದಾಗ; ವಿಸ್ತಾರವಾಗಿ ಶುರುಮಾಡಿದ. ನಾನು ಜಟಾಯು. ಅರುಣನ ಮಗ, ನೀನು ಒಪ್ಪುವುದಾದರೆ ಈ ಮೃಗರಾಕ್ಷಸ ಸೇವಿತವಾಗಿರುವ ಈ ಅರಣ್ಯದಲ್ಲಿ ಇರುವ ನಾನು ಸೀತೆಯನು ಕಾಪಾಡುವೆ. ಅವನ ಮಾತನು ಕೇಳಿದ ರಾಮನು ಆಲಂಗಿಸಿ, ಗೌರವಿಸಿದನು. ನಮ್ಮ ತಂದೆಯ ಮತ್ತು ನಿನ್ನ ಸಖಿತ್ವದ ಕಥೆಯನು ಹೇಳು ಎಂದು ಪುನಃ ಪುನಃ ಕೇಳುವನು.
ಹೀಗೆ ಸೀತೆ, ಲಕ್ಷ್ಮಣನೊಡಗೂಡಿ ಮಿಡತೆಗಳನ್ನು ಸುಡಲು ಹೋಗಲು ಹೋಗುವಂತೆ ರಾಮನೆಂಬ ಬೆಂಕಿಯು ರಕ್ಕಸರನು ಸುಡಲು ಜಟಾಯುವಿನೊಡಗೂಡಿ ಪಂಚವಟಿಗೆ ತೆರಳುವನು ಮತ್ತು ರಾಕ್ಷಸರನ್ನು ಪ್ರತೀಕ್ಷೆ ಮಾಡುವನು.
ಮುಂದುವರಿದ ಭಾಗವಾಗಿ... ಮುಂದಿನ ಕಥಾಭಾಗವನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ
#DhaaraRamayan
No comments:
Post a Comment
Please leave your comments here.....