Dhaara Raamayana 47

Dhaara Raamayana Discourse

Source: Discourse by Sri Sri Raghaveshwara Bharathi Swamiji
Texts: WhatsApp groups and other social media platforms

Dhaara Raamayana 47th day

#ಧಾರಾ_ರಾಮಾಯಣ ಪ್ರವಚನದ 47ನೇ ದಿನದ ಅಕ್ಷರರೂಪ:

ನಾವು ಬಿಟ್ಟರೂ ಅದು ಬಿಡದು. ಬದುಕಿನಲ್ಲಿ ಒಮ್ಮೊಮ್ಮೆ ಅನುಭವಕ್ಕೆ ಬರುವ ಸಂಗತಿಯಿದು. ಬೇಡದ ಅದೆಷ್ಟೋ ಸಂಗತಿಗಳನ್ನ ನಾವು ಬಿಡ್ತೇವೆ. ಅದು ನಮ್ಮನ್ನ ಬಿಡೋದೇ ಇಲ್ಲ. ವ್ಯಸನದ ಹಾಗೆ...

13 ನೇ ದಿನ ಅಪ್ಪನ ಅಪರಾದಿಕ್ರಿಯೆಯನ್ನ ಭರತ ಪೂರೈಸಿದ್ದಾನೆ. 14ನೆಯ ದಿನದ ಪ್ರಾರ್ತಃಕಾಲ ಎದ್ದು ಆಸೀನನಾಗಿದ್ದಾನೆ. ಆ ಸಮಯದಲ್ಲಿ ರಾಜಕರ್ತೃಗಳು ಬಂದು ಭರತನನ್ನು ಸುತ್ತುವರಿದರು. ಅವರು ರಾಜನಿಗೆ ಮಾರ್ಗದರ್ಶನ ಮಾಡುವವರು. ಅಂತಹ ರಾಜನಿಗೆ ಸಮೀಪದವರು, ಸಚಿವರು, ಸುತ್ತುವರೆದು ಹೇಳಿದರು, ರಾಮನನ್ನು ಕಾಡಿಗೆ ಕಳಿಸಿ ದಶರಥ ಸ್ವರ್ಗವನ್ನೇರಿಯಾಗಿದೆ. ಮತ್ಯಾರೂ ಇಲ್ಲ ಈಗ. ಇಂದು ನೀನು ನಮಗೆ ರಾಜನಾಗು.

ಕೂಡಲೇ ಭರತ, ನನಗದು ಬೇಡ. ನಾನು ರಾಜ್ಯವನ್ನು ಬಯಸಲಿಲ್ಲ. ನಾನು ಈ ಕುತಂತ್ರದಲ್ಲಿ ಭಾಗಿಯಾಗಿಲ್ಲ. ಆವಾಗ ರಾಜ ಕರ್ತೃಗಳು ಈ ಕುತಂತ್ರದಲ್ಲಿ ನೀನು ಭಾಗಿ‌ ಆಗಿಲ್ಲ ಅದು ತಾನಾಗೇ ಬಂದಿದೆ ನೀನು ತೆಗೆದುಕೊಂಡರೆ ಅಪರಾಧವಿಲ್ಲ. ಯಾಕೆಂದರೆ ಯಾವ ರಾಜ್ಯದಲ್ಲಿ ರಾಜನಿಲ್ಲವೋ ಅಲ್ಲಿ ವಾಸ ಮಾಡಬಾರದು. ಮೊದಲು ದೊರೆ, ಮತ್ತೆ ಪತ್ನಿ , ಮತ್ತೆ ಸಂಪತ್ತು. ಹೀಗಿರುವಾಗ ಅನಾಯಕವಾದ ರಾಜ್ಯ ಹೇಗಿರಲಿಕ್ಕೆ ಸಾಧ್ಯ? ರಾಮನಂತೂ ಯಾವ ಕಾರಣಕ್ಕೂ ರಾಜ್ಯವನ್ನೊಪ್ಪದೇ ಕಾಡಿಗೆ ಹೋಗಿದ್ದಾನೆ. ಬೇರೆ ದಾರಿ ಇಲ್ಲ. ಈ ಅಭಿಷೇಕಕ್ಕೆ ಬೇಕಾದೆಲ್ಲವನ್ನು ಸಿದ್ಧತೆ ಮಾಡಿಕೊಂಡಿದ್ದಾರೆ, ರಾಜನಾಗೆಂದು ಹೇಳಿದರು.

ಪರೀಕ್ಷೆಯಿದು. ಯಾಕೆ ಅಂದ್ರೆ ತಾನೇನು ಪ್ರಯತ್ನ ಮಾಡಿಲ್ಲ. ನನಗೆ ಬಂದಿದೆ ರಾಜ್ಯ. ಬೇರೆ ಗತಿ ಇಲ್ಲ. ಅಣ್ಣ ಕಾಡಿಗೆ ಹೋಗಾಗಿದೆ, ರಾಜ್ಯ ಅನಾಥವಾಗ್ತದೆ ಅಂತಾದ್ರು ಭರತ ಸ್ವೀಕರಿಸಲೇಬೇಕಾಗಿದೆ..

ಭರತ ಸಿದ್ಧತೆ ಮಾಡಿದ. ರಾಮನ ಅಭಿಷೇಕಕ್ಕೆ ಸಿದ್ಧ ಮಾಡಿದಂತಹ ಶ್ವೇತಛತ್ರವೋ ಇತ್ಯಾದಿ ಸಾಮಗ್ರಿಗಳಿಗೆ  ಒಂದು ಪ್ರದಕ್ಷಿಣೆ ಬಂದನಂತೆ.
ಬಂದು ಎಲ್ಲಾ ರಾಜಕರ್ತೃಗಳಿಗೆ ಹೀಗೆಂದ, "ನಮ್ಮ ಕುಲದಲ್ಲಿ ದೊಡ್ಡವನು ರಾಜನಾಗಬೇಕು. ಇದು ಉಚಿತ. ರಾಮನು ರಾಜನಾಗಲಿ ಅಂತ ಹೇಳಿ. ರಾಮನಿಗೆ ಆಗಬೇಕಾಗಿರುವುದನ್ನ ನನಗೆ ಕಟ್ಟಬೇಡಿ. ನಮ್ಮಣ್ಣ ರಾಮ, ಅವನು ರಾಜನಾಗ್ತಾನೆ. ನಾನು ಕಾಡಿಗೆ ಹೋಗುತ್ತೇನೆ.
೧೪ ವರ್ಷದ ವನವಾಸವನ್ನು ನಾನು ಮಾಡುತ್ತೇನೆ. ಅಣ್ಣನ ಪರವಾಗಿ. ಈಗ ಸೇನೆ ಸಿದ್ದವಾಗಲಿ. ಅಂದರೆ, ತಾನು ಮಾತ್ರವಲ್ಲ, ಎಲ್ಲರು ಹೋಗಿ ರಾಮನ ಹತ್ತಿರ ಕೇಳಿಕೊಳ್ಳಲು. ಯಾಕೆಂದರೆ ನಾನು ಒಬ್ಬ ಹೋಗಿ ಕೇಳಿಕೊಂಡರೆ ತಮ್ಮ, ಸಣ್ಣವನು. ನನ್ನನ್ನ ಒಪ್ಪಿಸಿ, ಗದರಿಸಿ ಬಿಟ್ಟಾನು ಅನ್ನುವ ಕಾರಣಕ್ಕೆ ಎಲ್ಲರು ಒಟ್ಟಾಗಿ ಹೋಗಿ ರಾಮನನ್ನು ಅಯೋಧ್ಯೆಗೆ ಬರಲು ಒತ್ತಾಯಿಸಬೇಕು ಅನ್ನುವ ತಯಾರಿಯ ಅಂಗವಾಗಿ ಚತುರಂಗ ಸೈನ್ಯವು ಸಿದ್ಧವಾಗಲಿ".

ನೀವೇನು ಪಟ್ಟಾಭಿಷೇಕದ ಸಿದ್ದತೆಯನ್ನು ಮಾಡೀದ್ದೀರಿ ಇದು ಬೇಕಾಗುತ್ತದೆ, ಇರಲಿ, ಇದನ್ನು ತಗೊಂಡೇ ಹೋಗೋಣ. ಅಲ್ಲೇ ಮಾಡಿಬಿಟ್ಟರಾಯಿತು, ಸಂದರ್ಭ ಬಂದರೆ. ಇಂತಲ್ಲೇ ಮಾಡಬೇಕೆಂದಿಲ್ಲ ಪಟ್ಟಾಭಿಷೇಕವನ್ನ. ಬರೋದ್ರೊಳಗಡೆ ಮನಸು ಬದಲಾಯಿಸಿಕೊಂಡರೆ ಕಷ್ಟ. ಎಲ್ಲಾ ಸೇರಿ ಒತ್ತಾಯಿಸಿ ಒಪ್ಪಿಸಿ ಅಲ್ಲಿಯೇ ಅಭಿಷೇಕ ಮಾಡಿಬಿಡೋದು ರಾಮನಿಗೆ. ಹಾಗಾಗಿ ಅಭಿಷೇಕದ ಸಾಮಗ್ರಿಗಳನ್ನು ಮುಂದಿಟ್ಟುಕೊಂಡು ರಾಮನಿಗಾಗಿ ನಾನು ಕಾಡಿಗೆ ಹೋಗುತ್ತೇನೆ. ಯಜ್ಞ ಶಾಲೆಯಿಂದ ಅಗ್ನಿಯನ್ನು ಅಗ್ನಿಹೋತ್ರ ಗೃಹಕ್ಕೆ ತರುವಂತೆ ನಾನು ರಾಮನನ್ನು ಕಾಡಿನಿಂದ ನಾಡಿಗೆ ಕರೆತರುತ್ತೇನೆ. ಅಗ್ನಿ ಅದು ಯಜ್ಞಶಾಲೆಯಲ್ಲಿ ಇರುವುದು ಅಪರಾಧವಲ್ಲ, ಆಮೇಲೆ ಅಗ್ನಿಹೋತ್ರ ಗೃಹಕ್ಕೆ ಬರಬೇಕು ಮರಳಿ. ಹಾಗಾಗಿ ರಾಮಾಗ್ನಿಯನ್ನು, ರಾಮಪರಂಜ್ಯೋತಿಯನ್ನು ನಾನು ಮರಳಿ ನಾಡಿಗೆ ತರುತ್ತೇನೆ. ತಾಯಿಗೂ ಒಂದು ಮಾತನ್ನ ಹೇಳದೇ ಹೋದರೆ ಸಮಾಧಾನವಿಲ್ಲ. ಈ ನನ್ನ ಮಾತೃಗಂಧಿನಿಯನ್ನು, ಮಾತೃಗಂಧಿನಿ ಅಂದರೆ ತಾಯಿಗೆ ತಾಯಿಯ ಸೆಂಟ್ (ಸುಗಂಧ) ಹಾಕಿದಂತೆ. ತಾಯಿಯಲ್ಲ. ಇವಳು ತಾಯಿಯಲ್ಲ, ಬರೇ ಒಂದು ತಾಯಿಯ ಪರಿಮಳ ಹಾಕಿಕೊಂಡು, ಓಡಾಡಿಕೊಂಡು ಇದಾಳೆ. ಇವಳ ಇಚ್ಛೆಯನ್ನು ನಾನು ಪೂರೈಸುವುದಿಲ್ಲ. ಇವಳ ಇಚ್ಛೆಯನ್ನು ನಾನು ನಡೆಯೋಕೆ ಬಿಡುವುದಿಲ್ಲ. ಹಾಗಾಗಿ ನಾನು ಕಾಡಿನಲ್ಲಿ ವಾಸ ಮಾಡುತ್ತೇನೆ. ರಾಮ ದೊರೆಯಾಗುತ್ತಾನೆ.

ಅದಕ್ಕೆ ಬರಿಯ ಮಾತಲ್ಲ ಭರತನದ್ದು, ಕೃತಿಯಲ್ಲಿ ಮಾಡಿ ತೋರಿಸುತ್ತಾನೆ. ಅವನ ಮನಸ್ಸಿನಲ್ಲಿ ಯೋಜನೆಗಳಿವೆ. ಶಿಲ್ಪಿಗಳು ಮಾರ್ಗವನ್ನು ಸಿದ್ದಗೊಳಿಸಲಿ. ಕುಶಲರಾದ ಶಿಲ್ಪಿಗಳು ಇಲ್ಲಿಂದ ಗಂಗಾನದಿಯವರೆಗೆ ಸುಪ್ರಶಸ್ತವಾದ ಮಾರ್ಗವನ್ನು ಸಿದ್ಧಗೊಳಿಸಿರಿ. ಅದೇಕೆಂದರೆ ರಾಮ, ಲಕ್ಷ್ಮಣ, ಸೀತೆ ಅವರೇ ಮೂರು ನಾಲ್ಕು ಜನ ಹೋಗುವುದಾದರೆ ಅದೇ ದಾರಿ ಸಾಕು. ಈಗ ಚತುರಂಗ ಸೈನ್ಯ ಹೋಗುವುದಾದರೆ ಅದಕ್ಕೆ ಪ್ರಶಸ್ಥವಾದ ವಿಶಾಲವಾದ ಮಾರ್ಗ ಬೇಕು. ಚತುರಂಗ ಸೈನ್ಯ ಮಾತ್ರವಲ್ಲ ಅಯೋಧ್ಯೆಗೆ ಅಯೋಧ್ಯೆಯೇ ಬರುವುದಿದೆ. ಹಾಗಾಗಿ ಸರಿಯಾದ ದಾರಿ ಬೇಕಾಗುತ್ತದೆ.

ಶಿಲ್ಪಿಗಳು ಸಮ-ವಿಷಮಗಳನ್ನು ಗಮನಿಸಿ ಏರು-ತಗ್ಗುಗಳಿದ್ದರೆ ಸಮಗೊಳಿಸಿ ಸರಿಯಾದ ಪಥ, ಷಟ್ಪಥ ಹಾಗೆ ಸುಪ್ರಶಸ್ಥವಾದ ಮಾರ್ಗವನ್ನ ಗಂಗಾನದಿಯವರೆಗೆ ಸಿದ್ಧಗೊಳಿಸಲು ಶಿಲ್ಪಿಗಳು ಹೊರಡಲಿ.

ಹಾಗೆಯೇ ರಕ್ಷಕರು (ರಕ್ಷಣಾ ವಿಭಾಗದವರು) ಮೊದಲು ಹೋಗಲಿ. ಎಲ್ಲಿ ದಾರಿ ದುರ್ಗಮ, ಎಲ್ಲಿ ದಾರಿ ಇಲ್ಲ, ಎಲ್ಲಿ ಉಂಟು ಎಂದು ತಿಳಿಯಲು ರಕ್ಷಣಾ ವಿಭಾಗದವರು ಮುಂದೆ ಹೋಗಲಿ ಎಂದಾಗ ಅಲ್ಲಿ ಸೇರಿದ ಜನಸ್ತೋಮ ತಲೆದೂಗಿದರಂತೆ.

ಏನಾದರೂ ನೀನು ರಾಜ್ಯ ತಗೆದುಕೊಳ್ಳೋದಿಲ್ವಾ ಹಾಗಾದರೆ ಇಂಥಹ ಪರೀಕ್ಷೆಗಳು!!! ರಾಮ ಬೇಕೋ? ರಾಜ್ಯ ಬೇಕೋ!? ಒಂದು ಸಲ ಮೇಲಿಂದ, ಕೆಳಗಿಂದ ಎಲ್ಲೆಲ್ಲಿಂದಲೋ ಪರೀಕ್ಷೆಗಳು ಬರ್ತದೆ. ಆದರೆ ಆತನ ಮನಸ್ಸು ದೃಢ. ಅಲ್ಲಿ ನೆರೆದ ಜನ ಭರತನಿಗೆ  ಹೇಳಿದರಂತೆ ಇಂತಹಾ ಮಾತಾಡುವ ನಿನಗೆ ಲಕ್ಷ್ಮಿ ಒಲಿದು ಬರಲಿ. ನಿನಗೆ ಒಳ್ಳೆದಾಗಲಿ ಅನ್ನುವ ಆಶೀರ್ವಾದವಿತ್ತರು. ದೊಡ್ಡಣ್ಣನಿಗೇ ರಾಜ್ಯ ಸಿಗಬೇಕೇಂದು ನೀನು ಕಂಕಣ ಬದ್ಧನಾಗಿದ್ದೀಯಲ್ಲ, ನಿನಗೆ ಲಕ್ಷ್ಮಿ ಒಲಿದು ಬರಲಿ ಎಂದು ಹೇಳುವಾಗಲೇ ಅವರೆಲ್ಲರ ಕಣ್ಣಲ್ಲಿ ನೀರು ತುಂಬಿತು. ಲೋಕವು ಭರತನಿಗೆ ಹೇಳಿದ್ದು ಮಹಾಲಕ್ಷ್ಮಿಯೇ ಒಲಿದು ಬರಲಿ ನಿನಗೆ ಎಂದು. ಈ ಮಾತನ್ನು ನಾವು ನೆನಪಿಸಿದುದು ವರಮಹಾಲಕ್ಷ್ಮಿ ಹಬ್ಬದ ದಿನ..

ನಿಜವಾಗಿಯೂ ಪ್ರಾರಂಭವಾಯಿತು ಮಾರ್ಗ ನಿರ್ಮಾಣದ ಕಾರ್ಯ. ನೆಲವನ್ನು ಬಲ್ಲವರು, ಸೂತ್ರಕರ್ಮವಿಶಾರದರು , ನೆಲವನು ಅಗೆಯುವವರು, ಯಂತ್ರವನ್ನು ನಿರ್ಮಾಣ ಮಾಡುವವರು, ನೌಕೆ  ನಿರ್ಮಾಣ ಮಾಡುವವರು , ಸುಪರ್ ವೈಸರ್ಸ್ , ಅಂದ್ರೆ ಪ್ರಧಾನ ಶಿಲ್ಪಿಗಳು ರಥ ಮಾಡುವವರು, ಕ್ಷಿಪಣಿ ಮಾಡುವವರು, ದೂರಕ್ಕೆ ಎಸೆಯುವ ಯಂತ್ರಗಳು ಅವುಗಳು ಬೇಕಾಗುತ್ತದೆ. ಯಾವುದಾದರೂ ಆಪತ್ತು ಬಂದ್ರೆ ಬೇಕಾಗುತ್ತದೆ..ಕಲ್ಲನ್ನ ದೂರದವರೆಗೆ ಎಸೆಯಲು ಬರಬೇಕು. ಅಂತಹ ಯಂತ್ರ ಬಡಗಿಗಳು , ಮರಗಳನ್ನ ಕಡೆಯುವಂತವರು , ಬಾವಿ ಮಾಡುವವರುರು , ಸುಣ್ಣ, ಬಿದಿರಿನ ಕೆಲಸ ಮಾಡುವವರು..ಇನ್ನು ಕೆಲವರು ನೋಡುವವರು ..ಇದೂ ಬೇಕಾಗ್ತದೆ.
ಮಾಡುವವರು ನೋಡುವವರು ಆಗಬಾರದು, ನೋಡುವವರು ಮಾಡುವವರಾಗಬಾರದು.

ಇದಿಷ್ಟು ಮುಂದೆ ಹೋಗಬೇಕಾಗಿದ್ದ ಸಮೂಹಗಳು.. ಹಿಂದೆ ಬರುವವರು ಇನ್ನೂ ಇದ್ದಾರೆ..
 ಅವರಿಗೆಲ್ಲಾ ಭಾರಿ ಖುಷಿ. ನಾವೆಲ್ಲಾ ರಾಮನ ಹುಡುಕಲು ಹೋಗುವವರು, ರಾಮ ಬರ್ತಾನೆ ನಮ್ಮದೂ ಸೇವೆ ಇದೆ ಅದರಲ್ಲಿ ಅಂತ. ನಾವು ಮಾಡಿದ ರಸ್ತೆಯಲ್ಲಿ ರಾಮ ಬರ್ತಾನೆ!

 ಹೀಗೆ..
ಒಂದು ಒಳ್ಳೆಯ ಕೆಲಸಕ್ಕೆ ಹೊರಟಾಗ ಆಗುವ ಸಂತೋಷವೇ ಬೇರೆ. ಅದು ಒಳ್ಳೆಯ ಕೆಲಸ ಮಾಡಿದವರಿಗೆ ಮಾತ್ರ ಗೊತ್ತಿರುತ್ತದೆ. ಅದಿಲ್ಲದೆ ಇದ್ದರೆ ಗೊತ್ತಾಗುವುದೇ ಇಲ್ಲ ಅದು ಏನು ಅಂತ. ಕೇಡುಗರಿಗೆ ಒಳ್ಳೆಯ ಕೆಲಸದಲ್ಲಿರುವ ತೃಪ್ತಿ ಗೊತ್ತಾಗುವುದೇ ಇಲ್ಲ.

ಹಾಗೆ ಪ್ರಜೆಗಳಿಗೆಲ್ಲಾ ತುಂಬಾ ಹರ್ಷವಾಯಿತು ಮದುವೆಗೆ ಹೊರಟ ಹಾಗೆ ಹೊರಟಿತು ಕೆಲಸದವರ ಸಮೂಹ. ಎಲ್ಲರಿಗೂ ರಾಮ ಕಾರ್ಯ ಮಾಡುವ ಹುಮ್ಮಸ್ಸು ಇದೆ. ಉಕ್ಕಿ ಬಂದ್ರು ಸಮುದ್ರದ ಹಾಗೆ. ಕಾರ್ಯಕರ್ತರ ಸಮೂಹ ಎದ್ದು ಹೊರಟಿತಪ್ಪ ಅಯೋಧ್ಯೆಯಿಂದ ಗಂಗೆಯ ಕಡೆಗೆ. ತಮ್ಮ ತಮ್ಮ ಗುಂಪುಗಳನ್ನು ಮಾಡಿಕೊಂಡು ರಸ್ತೆಯ ಕೆಲಸಗಾರರು ಉಪಕರಣಗಳನ್ನು ತೆಗೆದುಕೊಂಡು ಹೊರಟರು. ಹಾರೆ ,ಕತ್ತಿ , ಗುದ್ದಲಿ ತಗೊಂಡು ರಸ್ತೆ ಮಾಡತೊಡಗಿದರು. ಮೋಟು ಮರಗಳು ,ಬಳ್ಳಿಗಳು ,ದೊಡ್ಡ ದೊಡ್ಡ ಕಲ್ಲುಗಳನ್ನು ತೆಗೆದು ದಾರಿ ಮಾಡಲು ಹೊರಟರು. ಬರೀ ಮರ ಕಡಿದುದು ಮಾತ್ರವಲ್ಲ . ಮರ ಇಲ್ಲದಲ್ಲಿ ಮರ ನೆಟ್ಟರು. ಈಗಿನ ಕಾಲಕ್ಕೂ ಆಗಿನ ಕಾಲಕ್ಕೂ ಇರುವ ವ್ಯತ್ಯಾಸ.

ಮಾಡಬೇಕಾದ್ದನ್ನ ಮಾತ್ರ ಮಾಡಿದ್ರು. ಕಂಡ ಕಂಡಲ್ಲಿ ಹಾಳು ಮಾಡುತ್ತಿರಲಿಲ್ಲ. ಸೇತುವೆಗಳನ್ನು ಕಟ್ಟಿದರು, ಕೆಲವು ಕಡೆ ಸುರಂಗ ಮಾರ್ಗ ಮಾಡಿದರು. ಜಲಾಶಯಗಳನ್ನು ಮಾಡಿದರು. ನೀರೇ ಇಲ್ಲದ ಪ್ರದೇಶಗಳಲ್ಲಿ ಬಾವಿಗಳನ್ನು ತೋಡಿ ಕಟ್ಟಿದರು . ಹಾಗೇ ಭರತ ಬರುವ ದಾರಿಯಲ್ಲಿ ಸುಣ್ಣ ಬಳಿದರು, ಹೂ ಬಿಟ್ಟ ಮರಗಳ ದಾರಿ ಹುಡುಕಿ, ಎಲ್ಲಿ ಪಕ್ಷಿಗಳಿದ್ದರು ಅಲ್ಲೇ ದಾರಿಗಳನ್ನು ಮಾಡಿದರು. ಪತಾಕೆಗಳನ್ನು  ಕಟ್ಟಿದರು ದಾರಿಗಳಲ್ಲಿ . ರಾಮನಿಗಾಗಿ ಏರಿಸಿದರು ಪತಾಕೆ , ದಾರಿಗೆ ಚಂದನದ ನೀರನ್ನು ಎರೆಚಿದರು. ರಾಮ ಮಾರ್ಗಕ್ಕೆ ಹೂಗಳನ್ನು ಚೆಲ್ಲಿದರು. ಆ ದಾರಿ ಸುರ ಮಾರ್ಗದಂತೆ ಕಂಗೊಳಿಸಿತು. ರಮಣೀಯವಾದ ಪ್ರದೇಶಗಳಲ್ಲಿ ಶಿಬಿರಗಳು ಎರ್ಪಟ್ಟಿತು.

ಯೋಗ್ಯ ಕಾರ್ಯಕ್ಕಾಗಿ ಯೋಗ್ಯರನ್ನೇ ಆರಿಸಿಕೊಂಡು ಗಂಗಾ ನದಿಯವರೆಗೆ ಮಾರ್ಗಗಳಾಯಿತು.
ಕಾಲವನ್ನು ಆಯ್ಕೆ ಮಾಡಿಕೊಂಡು ಶಿಬಿರಗಳನ್ನು ಏರ್ಪಡಿಸುತ್ತಾರೆ. ಸಮಾಲೋಚನೆಗಳು, ವಿಶ್ರಾಮಕ್ಕಾಗಿ ಸ್ಥಳಗಳನ್ನು ಕಲ್ಪಿಸಲಾಯಿತು. ಶಿಬಿರಗಳನ್ನು ಉಪ್ಪರಿಗೆಗಳು ಬರುವ ಹಾಗೆ ತಯಾರು ಮಾಡುತ್ತಿದ್ದರು. ಎತ್ತರ ಎತ್ತರದ ಮಹಡಿಗಳು ಬರುವ ಹಾಗೆ ಮಾಡಿ ಜಗಲಿಗಳನ್ನು ಮಾಡಿ ಅಮರಾವತಿಯನ್ನು ಹೋಲುವಂತೆ ಮಾಡಿದರು. ಹೀಗೆ ಗಂಗಾತೀರದವರೆಗೆ ಮಾರ್ಗ ನಿರ್ಮಾಣವಾಯಿತು. ಹೀಗೆ ರಸ್ತೆಯು ಗಗನದಂತೆ ಶೋಭಿಸಿತು. ಅಂದರೆ ಅಲ್ಲಿ ಶಿಬಿರಗಳನ್ನು ಮಾಡಿದ್ದಾರೆ, ಹೂ ಚೆಲ್ಲಿದ್ದರೆ, ಪತಾಕೆ ಏರಿಸಿದ್ದಾರೆ, ಸುಗಂಧ ಭರಿತವಾದ ಚಂದನವನ್ನು ಚೆಲ್ಲಿದ್ದಾರೆ. ಅಗಲವಾದ ರಸ್ತೆ ಆಗಸವನ್ನು ಹೋಲಿದರೆ ಅಲ್ಲಿ ಮಾಡಿದ ಅಲಂಕಾರಗಳು ನಕ್ಷತ್ರಗಳನ್ನು ಹೋಲುತ್ತಿದ್ದವು. ಅಯೋಧ್ಯೆಯಿಂದ ಗಂಗಾತೀರದವರೆಗೆ ಮಾರ್ಗ ನಿರ್ಮಾಣವಾಯಿತು. ಕೆಲವೇ ಕೆಲವು ದಿನಗಳಲ್ಲಿ ಮಾರ್ಗಗಳು ಸಿದ್ದವಾಯಿತು.

   ಇತ್ತ ಅಯೋಧ್ಯೆ ಕಡೆಗೆ, ಅಪರಕ್ರಿಯೆಗಳು ಎಲ್ಲ ಮುಗಿದು ಹೋಗಿದೆ. ನಿತ್ಯ ಬದುಕು ಪ್ರಾರಂಭವಾಗಿದೆ. ಭರತ ಏಳುವ ಹೊತ್ತಿಗೆ ಸ್ತುತಿ ಮಾಡಿದರಂತೆ. ಶಂಖ ಊದುವವರು ಶಂಖ ಊದಿದರು. ಆ ಮಂಗಳ ಘೋಷ ಮುಗಿಲು ಮುಟ್ಟಿದವು. ಇದು ರಾಜನನ್ನ ಸಕಾಲಕ್ಕೆ ಏಳಿಸುವ ಪರಿ. ಆದರೆ ಭರತನಿಗೆ ಇಷ್ಟವಾಗಲಿಲ್ಲ. ಅಷ್ಟು ಬಗೆಯ ನಾದಗಳು ಎದೆಯನ್ನು ಬಂದು ಸೂಜಿಯಿಂದ ತಿವಿದ ಹಾಗಾಯಿತು. ಸಾವಿರಾರು ಬಾಣಗಳು ಒಟ್ಟಿಗೆ ಬಂದು ನುಗ್ಗಿದ ಹಾಗೆ ಆಯಿತು. ಯಾಕೆಂದರೆ ನಾನು ದೊರೆಯಲ್ಲ.

   ಯಾವುದು ನಮ್ಮದಲ್ಲವೋ ಅದು ನಮ್ಮದಲ್ಲ ಎಂಬ ಪ್ರಜ್ಞೆ ಇದ್ದರೆ ಯಾವ ಪರೀಕ್ಷೆಗಳನ್ನೂ ಎದುರಿಸಬಹುದು. ರಾಮನಂತು ತನ್ನದು ತನ್ನದಲ್ಲ ಎನ್ನುವವನು, ಭರತನೂ ಅದೇ ಜಾತಿಯವನೆ. ಅವನಿಗೆ ಸಂದಿದೆ ರಾಜ್ಯ. 'ನನ್ನದಲ್ಲ ಎನ್ನೋ ತೀರ್ಮಾನ'. ನೋಡು ಶತ್ರುಘ್ನ, ಕೈಕೇಯಿ ಮಾಡಿದ ಪಾಪವನ್ನು! ರಾಮ ಕಾಡಿಗೆ ಹೋಗಿ, ದಶರಥ ಸ್ವರ್ಗವನ್ನೇರಿ ರಾಜ್ಯ ಅನಾಥವಾಗಿದೆ. ಈಗ ಇಂತಹಾ ಪರಿಸ್ಥಿತಿಯನ್ನು ನೋಡು. ಸುಳಿಯಲ್ಲಿ ಸಿಕ್ಕಿಕೊಂಡ ಅಯೋಧ್ಯೆಯನ್ನು ನೋಡು. ಇದಕ್ಕೆಲ್ಲ ಕೈಕೇಯಿಯೇ ಕಾರಣ. ಒಡೆಯ ಕಾಡಿಗೆ ಹೋಗಿದ್ದರಿಂದ ನಮಗಾದ ಪರಿಸ್ಥಿತಿಯನ್ನು ನೋಡು.

   ಅತ್ತ ಆಸ್ಥಾನಕ್ಕೆ ವಸಿಷ್ಠರು ಆಗಮಿಸಿದರು. ಸಭೆ ಹೇಗಿತ್ತು? ಸ್ವರ್ಣಸಭೆ ಅದು. ಮಣಿರತ್ನ ಸಮಾನವಾಗಿತ್ತು.  ರಾಜಗುರುಪೀಠ ಏರಿ ಕುಳಿತು, ದೂತನನ್ನು ಕರೆದು ಅಪ್ಪಣೆ ಮಾಡುತ್ತಾರೆ. ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಅಮಾತ್ಯರು, ಎಲ್ಲರೂ ಸಭೆಗೆ ಬರಲು ಆದೇಶಿಸಿದರು. ಸಾಮಾನ್ಯ ಪ್ರಜೆಗಳನ್ನೂ ಕರೆದರು. ಭರತ, ಶತ್ರುಘ್ನ, ಸುಮಂತ್ರ ಎಲ್ಲರೂ ಬರಲಿ ಎಂದು ಅಪ್ಪಣೆಯಾಯಿತು. ಪ್ರಜೆಗಳೆಲ್ಲಾ ಬಂದರು. ಭರತನೂ ಬಂದ. ಪ್ರಜೆಗಳೆಲ್ಲಾ ಗೌರವ ಕೊಡುತ್ತಾ ಇದ್ದಾರೆ. ಆದರೆ ಭರತನಿಗೆ ಅದು ಬೇಡ. ದಶರಥ ಇದ್ದಾಗ ಯಾವ ಶೋಭೆ ಇತ್ತೋ ಈಗ ಭರತನಿಂದ ಈ ಶೋಭೆ ಬಂತು. ಪೂರ್ಣಚಂದ್ರನು ರಾತ್ರಿಯನ್ನು ವೀಕ್ಷಿಸುವಂತೆ ಭರತನು ಸಭೆಯನ್ನು ವೀಕ್ಷಿಸುತ್ತಾನೆ. ವಸಿಷ್ಠರು ರಾಜನ ಮಂತ್ರಿಗಳು, ಸೇನೆ ಪ್ರಜೆಗಳನ್ನು ಅವಲೋಕಿಸುತ್ತ ಭರತನಿಗೆ ಹೇಳಿದರು, ರಾಜ್ಯವನ್ನು ದೊರೆ ನಿನಗೆ ಕೊಟ್ಟು ಹೋಗಿದ್ದಾನೆ. ರಾಮನು ನಿನಗೆ ಕೊಟ್ಟ ರಾಜ್ಯವಿದು. ಇದಕ್ಕೆ ಯಾವ ಅಡ್ಡಿ ಇಲ್ಲ. ಹಾಗಾಗಿ ಪಟ್ಟಾಭಿಷೇಕ ಮಾಡಿಕೊಳ್ಳಬೇಕು. ಆ ಕ್ಷಣ ಶೋಕಸಾಗರದಲ್ಲಿ ಮಿಂದೆದ್ದಂತಾಯಿತು ಭರತನಿಗೆ. ಸಭಾ ಮಧ್ಯದಲ್ಲಿ ರೋಧಿಸಿದ.

ಭರತ ಗುರುಗಳನ್ನು ಅಕ್ಷೇಪಿಸಿದನು. ಗುರುಗಳನ್ನು ಆಕ್ಷೇಪಿಸುವಂತಿಲ್ಲ; ಆದರೆ ಭರತ ಸಂಪೂರ್ಣವಾಗಿ  ರಾಮನನ್ನು ನಂಬಿದ್ದನು. "ಗುರುಗಳೇ ನಾನು ರಾಜ್ಯಧಾರಣೆ ಮಾಡಲೋ? ಸಾಧ್ಯವಾಗದು. ಇದ್ಯಾವುದೂ ನನ್ನದಲ್ಲ/ ನನಗೆ ರಾಮ ಮಾತ್ರ.. ರಾಮ ಮಾತ್ರವೇ ದೊರೆ". ಭರತನ ಮಾತನ್ನು ಕೇಳಿ ಎಲ್ಲರೂ ರೋಧಿಸಿದರಂತೆ.  ಕಣ್ಣು ಮುಚ್ಚಿ ರಾಮನನ್ನು ಪ್ರಾರ್ಥಿಸಿದನಂತೆ ಭರತ. ನನಗೆ ಶಕ್ತಿ ಕೊಡು. ಗುರುಗಳ ಮನಸ್ಸನ್ನು ಬದಲು ಮಾಡು ಎಂದು. ಹಾಗೆಯೇ ಎಲ್ಲಾ ಪ್ರಜೆಗಳು ಮನಸಾ ರಾಮನನ್ನು ಪ್ರಾರ್ಥಿಸುತ್ತಾರೆ.

 ಮುಂದೆ ಸುಮಂತ್ರನನ್ನು ಕರೆದು ನನಗೆ ರಥವನ್ನು ಸಿದ್ಧ ಮಾಡು ಎಂದನು, ಸಿದ್ಧಪಡಿಸಿದನು. ಅಯೋಧ್ಯೆಗೆ ಅಯೋಧ್ಯೆಯೇ ಸಿದ್ಧಗೊಂಡಿತು.. ಯಾವ ಜಾತಿ , ಮತ , ಮೇಲು , ಕೀಳು ಇಲ್ಲದೆ ಹೊರಡುವ ಸಿದ್ಧತೆ ಮಾಡಿಕೊಂಡರು.

ಬೆಳಗಾಯಿತು; ಹೊರಟ ಭರತ. ಅವನ ಮುಂದೆ ಮಂತ್ರಿಗಳು, ಗುರುಗಳು, ಪುರೋಹಿತರು ಮುಂದೆ ರಥಗಳಲ್ಲಿ ಸಾಗಿದರು. 9,000 ಆನೆಗಳು, ಲಕ್ಷ ಕುದುರೆಗಳು, 60,000 ರಥಗಳು, ಮುಂದೆ ಕೈಕೇಯಿ, ನಡುವೆ ಸುಮಿತ್ರೆ, ಹಿಂದೆ ಕೌಸಲ್ಯಾ ಹೀಗೆ ರಾಜ ಮಾತೆಯರು ಹೊರಟರು. ಯಾರು ಕಾಡಿಗೆ ಅಟ್ಟಿದರೋ ರಾಮನನ್ನು; ಅವರೇ ಮುಂದೆ ಹೋಗುವಂತಾಯಿತು. ಎಲ್ಲರೂ ಸಂತೋಷದಿಂದ ರಾಮನ ಕಥೆಗಳನ್ನು ಹೇಳುತ್ತಾ, ದೊಡ್ಡ ಗುಂಪು ಹೊರಟಿದೆ. ಸೂಚನೆ ಬಂದವರು, ಸೂಚನೆ ಬಾರದವರು ಎಲ್ಲರೂ ಹೊರಟರು ರಾಮನ ಕಾಣಲು.  ಅಲ್ಲಿ ಪ್ರತಿಷ್ಟೆಗಳು ಇರಲಿಲ್ಲ. ದೊಡ್ಡ ಜ್ಞಾನಿಗಳು ಎಲ್ಲರೂ ರಾಮನ ಕಡೆಗೆ ಹೊರಟರು. ವೈದ್ಯರು , ಧೂಪಗಳನ್ನು ಹಾಕುವವರು , ಮಡಕೆ  ಮಾಡುವವರು , ಪೋಷಕರು , ಸ್ತ್ರೀ ಜೀವಿಗಳು, ಅಂಬಿಗರು , ಬ್ರಾಹ್ಮಣೋತ್ತಮರು ಎತ್ತಿನ ಬಂಡಿಯಲ್ಲಿ ಹೊರಟರು. ಅಂತೂ ರಾಮ ಹೊರಟ ಮೇಲೆ ಮತ್ತೆ ರಾಮನ ಕಡೆಗೆ ಹೋಗುವ ಸಲುವಾಗಿ ಎಲ್ಲಾ ಪ್ರಜೆಗಳು ಸ್ನಾನ ಮಾಡಿ , ಬಟ್ಟೆಯನ್ನು ತೊಟ್ಟು ಅಲಂಕಾರ ಮಾಡಿಕೊಂಡು ಒಟ್ಟಾಗಿ ಅಯೋಧ್ಯೆಯಿಂದ ಗಂಗಾತೀರದ ಕಡೆಗೆ ಸೇನೆ ತಲುಪಿತು. ಗುಹ ಇರುವಲ್ಲಿಯ ತನಕ ಸೇನೆ ತಲುಪುತ್ತದೆ.

ಈಗ ಪ್ರಶ್ನೆ: ಕಂಡ ಗುಹನು ಹೇಗೆ ವಿಚಾರಿಸಬಹುದು..! ಗುಹ ಒಪ್ಪದೆ ಭರತ ಮುಂದೆ ಹೋಗಲು ಸಾಧ್ಯವಿಲ್ಲ. ಗುಹ ಖಂಡಿತವಾಗಿಯೂ ಶಂಕಿಸಬಹುದು. ಏಕೆಂದರೆ ಗುಹನಿಗೆ ರಾಮನೇ ಸರ್ವಸ್ವ ..
ಭರತ ಹೇಗೆ ಗುಹನನ್ನು ಮನವರಿಕೆ ಮಾಡ್ತಾನೆ ಮುಂದಿನ ಪ್ರವಚನದಲ್ಲಿ ಅವಲೋಕಿಸೋಣ.

 #ವಿಷ್ಣುಗುಪ್ತ_ವಿಶ್ವವಿದ್ಯಾಪೀಠ
#Dhaara_ramayan

No comments:

Post a Comment

Please leave your comments here.....