Dhaara Raamayana 45


#ಧಾರಾ_ರಾಮಾಯಾಣ ಪ್ರವಚನಮಾಲಿಕೆಯ
45ನೇ ದಿನದ ಅಕ್ಷರರೂಪ:

ಏನು ನಡೆದರೂ ಏನೂ ಆಗದಂತಿರಬೇಕು. ಎಲ್ಲರಿಗೂ ಸಾಧ್ಯವಿಲ್ಲ. ಇದು ಯಾರಿಗೆ ಸಾಧ್ಯ ಎಂದರೆ ಒಂದು ಯೋಗಿಗೆ, ಮತ್ತೊಂದು ಕ್ರೂರಿಗೆ. ಎಂತಹ ಒಂದು ಘಟನೆ ನಡೆದರೂ ಒಂದು ಸ್ವಲ್ಪವೂ ವಿಚಲಿತರಾಗದೇ ಇರುತ್ತಾರೆ.

ಹೀಗೆ ತಿದ್ದಬಹುದು- ಏನನ್ನೂ ನೋಡಿಯೂ ಏನೂ ಆಗದಿರುವವನು ಯೋಗಿ.
ಏನನ್ನು ಮಾಡಿಯೂ ಏನೂ ಆಗದಿರುವವನು ಕ್ರೂರಿ.
ಹಾಗಾಗಿಯೇ ಭರತ ಕೈಕೇಯಿಯ ಬಳಿ 'ಅಪ್ಪ ಎಲ್ಲಮ್ಮಾ?' ಎಂದು ಕೇಳಿದಾಗ ಆಕೆ ಅಷ್ಟೇ ಸಹಜವಾಗಿ,
"ರಾಜ, ಮಹಾತ್ಮ, ತೇಜಸ್ವಿ, ಯಜ್ಞಶೀಲ, ಸಜ್ಜರಿಗೆ ಗತಿಯಾಗಿದ್ದ ನಿನ್ನ ತಂದೆ ಎಲ್ಲರೂ ಎಲ್ಲಿ ಹೋಗುತ್ತಾರೋ ಅಲ್ಲಿ ಹೋಗಿದ್ದಾರೆ" ಎನ್ನುವಾಗ ಸ್ವಲ್ಪವೂ ವ್ಯಥೆಯಿಲ್ಲ ಆಕೆಗೆ.

 ದಶರಥನಿಗೆ ಇವಳ ಮೇಲಿನ ಮೋಹಕ್ಕೆ, ಇವಳಲ್ಲಿ ಇಟ್ಟಿದ್ದ ಪ್ರೀತಿಗೇನರ್ಥ? ಪ್ರೀತಿ ಎಂಬುದು ಬಹಳ ಅಮೂಲ್ಯವಾದದ್ದು. ಅದನ್ನು ಇಡಬೇಕಾದರೆ ಯೋಚಿಸಿ ಇಡಬೇಕು. ಪ್ರೀತಿಯ ಬೆಲೆ ಗೊತ್ತಿಲ್ಲದಿರುವಲ್ಲಿ ಅದನ್ನು ಇಟ್ಟರೆ ಅದು ಮರುಭೂಮಿಯಲ್ಲಿ ಬೀಜ ಬಿತ್ತಿದಂತಾಗುತ್ತದೆ.  ಕೈಕೇಯಿಯ ಹಾಗೆ. ಅವನಿಗೇನಾದರೂ ಇವಳಿಗೇನೂ ಆಗಲೇ ಇಲ್ಲ. ಇವಳಿಂದಾಗಿಯೇ ವಿಲವಿಲನೆ ಒದ್ದಾಡಿ ಪ್ರಾಣಬಿಟ್ಟರೂ ಇವಳಿಗೇನೂ ಆಗಲೇ ಇಲ್ಲ.

ಅವಳು ತೀರಾ ಸಹಜವಾಗಿ ಹೇಳಿದ್ದನ್ನು ಕೇಳಿಸಿಕೊಂಡ ಭರತ ಸಹಜವಾಗಿರಲಿಲ್ಲ. ದೈವಶಕ್ತಿಯಾದರೂ ಮನುಷ್ಯಾವತಾರದಲ್ಲಿ ಇರುವವನು ಭರತ. ಹಾಗಾಗಿ ಮನುಷ್ಯತ್ವಕ್ಕೆ ಸಲ್ಲುವ ರೀತಿಯಲ್ಲಿ ಭಾವನೆಗಳನ್ನು ಸ್ವೀಕಾರ ಮಾಡುತ್ತಿದೆ ಅದು. ಆ ಪಿತೃಶೋಕದ ಶಕ್ತಿ ಭರತನನ್ನು ಜರ್ಜರಿತವಾಗಿಸಿತು. "ಹಾ ಹತೋಸ್ಮಿ" ಎಂದು ದೀನನಾಗಿ ವಿಲಪಿಸಿ ಕುಸಿದುಬಿದ್ದನಂತೆ ಭರತ. ಪರಮವೀರನಾದರೂ ತಂದೆಯ ಶೋಕವನ್ನು ಸಹಿಸಲಿಲ್ಲ ಆತ. ತಂದೆಯ ಪರ್ಯಂಕವನ್ನು ನೋಡಿ ಚಂದ್ರನಿಲ್ಲದ ರಾತ್ರಿಯಂತೆ ತಂದೆಯಿಲ್ಲದ ಪರ್ಯಂಕ ಬಿಕೋ ಎನ್ನುತ್ತಿದೆ ಎನ್ನುವಾಗ ಆತನ ಕಂಠ ಬಿಗಿದಿದೆ. ಕಣ್ಣೀರು ಧಾರೆಯಾಗಿ ಹರಿದಿದೆ. ತನ್ನ ವಸ್ತ್ರದಿಂದ ಕಾಂತಿಪೂರ್ಣವಾದ ಮುಖವನ್ನು ಮುಚ್ಚಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ. ದೇವನಂತಹವನು, ಧರೆಗಿಳಿದ ಸೂರ್ಯಚಂದ್ರರಂತವನು ಭರತ ಕೆಳಗೆ ಬಿದ್ದಿದ್ದಾನೆ ಅಂತಹ ಭರತನನ್ನು ಕೈಕೇಯಿ ಎಬ್ಬಿಸಿ, ಎದ್ದೇಳು ರಾಜಪುತ್ರ, ಮಹಾಕೀರ್ತಿಶಾಲಿ ನೀನು, ನಿನ್ನಂತಹವರು ಶೋಕಿಸಬಾರದು ಎಂದಳು.

ಬಹುಕಾಲ ವಿಲಪಿಸಿ ನಂತರ ಭರತ ಹೇಳಿದ್ದೇನು? ಬಹಳ ಕನಸನ್ನಿಟ್ಟುಕೊಂಡು ಹೋಗಿದ್ದೆ. ನನ್ನ ಅಣ್ಣ ರಾಮನಿಗೆ ಪಟ್ಟಾಭಿಷೇಕವಾಗುತ್ತದೆ ಎಂದು ಕನಸು ಕಟ್ಟಿ ರಾಜಗೃಹಕ್ಕೆ ಹೋಗಿದ್ದೆ ಎನ್ನುವಾಗ ಭರತನ ವ್ಯಕ್ತಿತ್ವ ಎಷ್ಟು ದೊಡ್ಡದು ಎಂದು ತಿಳಿಯುತ್ತದೆ.
ಭರತನಿಲ್ಲದ ಸಮಯದಲ್ಲಿ ಪಟ್ಟಾಭಿಷೇಕ ಮಾಡಬೇಕು ಎಂದುಕೊಂಡಿದ್ದರೂ ಕೊನೆಗೆ ಭರತನೇ ರಾಮನಿಗೆ ರಾಜ್ಯಕೊಡುವಂತಾಯ್ತು. ಆ ಯೋಗವೂ ಸಿಗಲಿಲ್ಲ ದಶರಥನಿಗೆ. ಹಾಗಾಗಿ ಯಾರು ಭಗವದ್ಭಕ್ತರೋ ಅವರನ್ನು ಕೆಣಕದಿರುವುದೇ ಕ್ಷೇಮ.

ರಾಮನಿಗೆ ಪಟ್ಟಾಭಿಷೇಕವೆಂದುಕೊಂಡು ಸಂತೋಷದಿಂದ ಹೋದೆ ಆದರೆ ಇಲ್ಲೇನೋ ಆಗಿಹೋಯಿತಲ್ಲ. ಏನಾಯಿತು ಅಮ್ಮಾ.. ಅಪ್ಪನಿಗೆ? ಯಾವ ಖಾಯಿಲೆ ಬಂದಿತ್ತು? ಎಂದು ಕೇಳಿ ತಂದೆಯ ಅಪರಸಂಸ್ಕಾರಗಳನ್ನು ಮಾಡಿದ ರಾಮ ಲಕ್ಷ್ಮಣರೇ ಧನ್ಯರು ಎಂದು ಹೇಳಿ ತಂದೆ ಈಗ ಇದ್ದಿದ್ದರೆ ನಾನು ಬಂದ ವಿಷಯ ಕೇಳಿ ಬಂದು ಅಪ್ಪಿಕೊಂಡು ನೆತ್ತಿಯನ್ನು ಆಘ್ರಾಣಿಸುತ್ತಿದ್ದರು ಎಂದು ಹೇಳಿ ತನ್ನ ಬಾಲ್ಯವನ್ನೂ ನೆನಪಿಸಿಕೊಳ್ಳುತ್ತಾನೆ.

ಮುಂದೇನು ಎಂದರೆ ಯಾರು ನನ್ನ ಅಣ್ಣನೋ, ನನ್ನ ಬಂಧುವೋ, ನಾನು ಯಾರ ಚರಣಸೇವಕನೋ,  ಯಾರು ನನ್ನ ಸರ್ವಸ್ವವೋ ಅಂತಹ ಅಣ್ಣನನ್ನು ಬರಹೇಳು ಅಮ್ಮ ಎಂದು ಹೇಳುತ್ತಾನೆ. ನನಗೆ ಇನ್ನು ಅವನೇ ಗತಿ ಎನ್ನುತ್ತಾನೆ. ತಂದೆಯ ಕೊನೆಯ ಮಾತೇನು ಹೇಳು ಎಂದಾಗ ಕೈಕೇಯಿ ಹಾ ರಾಮ, ಹಾ ಸೀತೆ, ಹಾ ಲಕ್ಷ್ಮಣ ಎಂದು ವಿಲಪಿಸಿದರು ಎಂದು ಹೇಳಿ ಮರಳಿ ಬರುವ ರಾಮ, ಸೀತೆ, ಲಕ್ಷ್ಮಣರನ್ನು ಕಾಣುವವರು ಧನ್ಯರು ಎಂದು ಹೇಳಿದರು ಎಂದಾಗ ಮತ್ತೂ ವಿಷಾದವಾಯಿತಂತೆ ಭರತನಿಗೆ. ಎರಡನೇ ಅಪ್ರಿಯವಾರ್ತೆ ಕೇಳಿ ವಿಷಣ್ಣವದನನಾಗಿ ಕೇಳಿದನಂತೆ ಭರತ; 'ಕೌಸಲ್ಯಾನಂದವರ್ಧನ ಸೀತಾಲಕ್ಷ್ಮಣರೊಡಗೂಡಿ ಎಲ್ಲಿದ್ದಾನೆ ಅಮ್ಮ?' ಎಂದಾಗ ಆಕೆ ತಾನು ಹೇಳುವ ವಾರ್ತೆ ಭರತನಿಗೆ ಪ್ರಿಯವೆಂದು ಭಾವಿಸಿ, "ಮಗನೇ, ರಾಮ ನಾರುಡಿಯನ್ನು ಉಟ್ಟು ದಂಡಕಾರಣ್ಯಕ್ಕೆ ತೆರಳಿದ ಸೀತೆ, ಲಕ್ಷ್ಮಣರೊಡಗೂಡಿ" ಎಂದಾಗ ನಡುಗಿದನಂತೆ ಭರತ! ಏಕೆಂದರೆ ಸೂರ್ಯವಂಶದಲ್ಲಿ ಕಾಡಿಗೆ ಕಳುಹಿಸುವುದು ಅಂತಹ ಅಕಾರ್ಯ ಮಾಡಿದಾಗ. ಹಾಗಿದ್ದಾಗ ರಾಜಪುತ್ರನನ್ನು ಕೂಡ ಕಾಡಿಗೆ ಅಟ್ಟುತ್ತಾರೆ.

 ಅಣ್ಣನ ಚಾರಿತ್ರ್ಯದ ಪ್ರಶ್ನೆಯಿದೆ ಅಲ್ಲಿ ಎಂದು ಇನ್ನಿಲ್ಲದ ದಿಗಿಲಾಯಿತು. ಮತ್ತೆ ಕೇಳಿದ ಬ್ರಾಹ್ಮಣ ಸ್ವತ್ತನ್ನು ಅಪಹರಿಸಿದರೆ ಕಾಡಿಗೆ ಅಟ್ಟುತ್ತಾರೆ ಅಂತಹ ತಪ್ಪೇನಾಯಿತು? ನಿರಪರಾಧಿಯನ್ನು ರಾಮ ಹಿಂಸಿಸಿದನೇ? ಪರಸ್ತ್ರೀ ಅವಲೋಕನ?  ಇಂತಹ ಯಾವುದಾದರೂ ಅಕಾರ್ಯವಾದರೆ ಮಾತ್ರ ಕಾಡಿಗೆ ಅಟ್ಟುವ ಶಿಕ್ಷೆ ಬರುವಂಥದ್ದು. ಮತ್ತೇಕೆ ಅಣ್ಣನನ್ನು ಕಾಡಿಗೆ ಅಟ್ಟಲಾಯಿತು? ಎಂದು ಕೇಳಿದಾಗ ಕೈಕೇಯಿ ತನ್ನ ಮಹತ್ಕಾರ್ಯವನ್ನು ಸಂತೋಷದಿಂದ ಅರುಹಿದಳಂತೆ.

 ಬ್ರಾಹ್ಮಣ ಧನವನ್ನು ಅಪಹರಿಸಲಿಲ್ಲ, ಯಾವ ನಿರಪರಾಧಿಯನ್ನು ಹಿಂಸಿಸಿಲ್ಲ, ಪರಸ್ತ್ರೀಯನ್ನು ಆತ ಕಣ್ಣೆತ್ತಿಯೂ ನೋಡಲಿಲ್ಲ ಎಂದಾಗ ಮತ್ತೇನಾಯಿತು ಎಂದನಂತೆ ಭರತ. ಆಗ ಆಕೆ ರಾಮನ ಪಟ್ಟಾಭಿಷೇಕ ಎಂದು ನನಗೆ ಗೊತ್ತಾದಾಗ ನಾನು ರಾಜ್ಯವನ್ನು ಕೇಳಿದೆ ಮತ್ತು ರಾಮನನ್ನು ಕಾಡಿಗೆ ಕಳುಹಿಸಲು ಕೇಳಿದೆ, ನಿನ್ನ ತಂದೆ ಸ್ವಧರ್ಮವನ್ನು ಬಿಡದೆ ಅದೇ ಪ್ರಕಾರವಾಗಿ ನಡೆದುಕೊಂಡು ಅವರನ್ನು ಕಾಡಿಗೆ ಕಳುಹಿಸಿ, ಪುತ್ರಶೋಕದಿಂದ ಕಂಗೆಟ್ಟು ಕಾಲನಾದ. ಅದಿರಲಿ ನೀನು ಆದಷ್ಟು ಬೇಗ ಪಟ್ಟಾಭಿಷೇಕ ಮಾಡಿಸಿಕೊಂಡು ದೊರೆಯಾಗಬೇಕು ಎಂದು ಹೇಳಿದಾಗ:
 ಮೊದಲನೆಯದಾಗಿ ಎಷ್ಟು ದೊಡ್ಡ ಅನಾಹುತ ನಡೆದುಹೋಗಿದೆ. ಇನ್ನೊಂದು ಕಡೆಯಿಂದ ಅದಕ್ಕೆ ತಾನು ನಿಮಿತ್ತ. ಮತ್ತೆ ಪ್ರಪಂಚ ನನ್ನನ್ನು ಹೇಗೆ ನೋಡಬಹುದು?
ಈ ಮೂರು ಸಂಗತಿಗಳಿಂದ ದುಃಖದಲ್ಲಿ ಬೆಂದುಹೋದ ಭರತ.
ಮೊಟ್ಟಮೊದಲು ಭರತ ಹೇಳಿದ್ದು, ಸತ್ತವರಿಗೆ ರಾಜ್ಯ ಉಪಯೋಗವಿಲ್ಲ, ಹತನಾದ ನನಗೆ ರಾಜ್ಯದಿಂದೇನು? ತಂದೆಯನ್ನು ಕಳೆದುಕೊಂಡೆ, ತಂದೆಯ ಸಮಾನನಾದ ಅಣ್ಣನನ್ನು ಕಳೆದುಕೊಂಡಮೇಲೆ ರಾಜ್ಯವನ್ನು ಕಟ್ಟಿಕೊಂಡು ನನಗೇನು ಎಂದು ಹೇಳಿ ದುಃಖದಿಂದ ಮಾತನ್ನು ಮುಂದುವರೆಸಿದ.  ರಾಜನನ್ನು ಯಮಪುರಿಗಟ್ಟಿ, ರಾಮನನ್ನು ಕಾಡಿಗಟ್ಟಿ ಗಾಯದ ಮೇಲೆ ಉಪ್ಪು ಸುರಿದೆಯಾ? ಆ ಸಹೋದರರು ರಾಮನಲ್ಲಿಟ್ಟ ಪ್ರೀತಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ, ರೀತಿ ಮಾತ್ರ ಬೇರೆ. ಭರತ ಅಧಿಕಾರಕ್ಕಾಗಿರುವವನಲ್ಲ, ಧರ್ಮಕ್ಕಾಗಿರುವವನು.

ಕೈಕೇಯಿಯ ಮಾತನ್ನು ಕೇಳಿದ ಭರತನಿಗೆ ಆಕೆಯಲ್ಲಿ ತಾಯಿಭಾವ ಕಳೆದುಹೋಯಿತು.
ಕೈಕೇಯಿಯ ಬಗ್ಗೆ ಅವನ ಮೊದಲ ಮಾತು: ಇಕ್ಷ್ವಾಕು ಕುಲಕ್ಕೆ ಕಾಲರಾತ್ರಿಯಾಗಿ ಬಂದೆ ನೀನು, ನನ್ನ ತಂದೆ ವರಿಸಿದ್ದು ಕೆಂಡವನ್ನು, ವರಿಸುವಾಗ  ಅವನಿಗೆ ಅರ್ಥವಾಗಲಿಲ್ಲ. ಪಾಪದರ್ಶಿನಿ, ಕುಲಪಾಂಸಿನಿ  ನಿನ್ನಿಂದ ರಾಜನಿಗೆ ಮೃತ್ಯುವಾಯಿತು. ಕುಲದ ಸುಖ ಕಳೆದು, ತೊಳೆದೆ. ನಿನ್ನನ್ನು ಪತ್ನಿಯಾಗಿ ಹೊಂದಿ ದಶರಥ ತೀವ್ರ ದುಃಖದಲ್ಲಿ ಸಾಯುವಂತಾಯಿತು, ರಾಮನನ್ನೇಕೆ ಕಾಡಿಗಟ್ಟಿದೆ ಎಂದಾಗ ಆಕೆಯ ಬಳಿ ಉತ್ತರವಿಲ್ಲ.

ಯಾಕೆ ಎನ್ನುವ ಪ್ರಶ್ನೆಗೆ ಸಮರ್ಪಕವಾದ ಉತ್ತರವಿಲ್ಲದ ಕಾರ್ಯ ಮಾಡಬಾರದು

ನಿನ್ನಂಥವಳನ್ನು ತಂಗಿಯಾಗಿ ಹೊಂದಿ ಕೌಸಲ್ಯೆ, ಸುಮಿತ್ರೆಯರು  ಬದುಕಿದ್ದರೆ ದೊಡ್ಡದು. ನಮ್ಮಣ್ಣ ನಿನ್ನನ್ನು ಪ್ರೀತಿಯಿಂದ ನೋಡಿಕೊಂಡಷ್ಟು ನಾನೂ ನೋಡಿಕೊಂಡಿಲ್ಲ. ತನ್ನ ತಾಯಿಯನ್ನು ಹೇಗೆ ನೋಡಿಕೊಳ್ಳುತ್ತಿದ್ದನೋ ನಿನ್ನನ್ನೂ ಹಾಗೆಯೇ ನೋಡಿಕೊಂಡಿದ್ದ.

ಇನ್ನು ಕೌಸಲ್ಯೆ, ದೀರ್ಘದರ್ಶಿನಿ ಆಕೆ. ಸ್ವಂತ ತಂಗಿಯಂತೆ ನಿನ್ನನ್ನು ನೋಡಿಕೊಂಡಿಲ್ಲವಾ? ಅಂತಹವಳ ಮಗನನ್ನು ಕಾಡಿಗಟ್ಟಿದೆಯಲ್ಲ ಪಾಪಿ ನಿನಗೆ ಸ್ವಲ್ಪವೂ ವ್ಯಥೆಯಾಗಲಿಲ್ಲವಾ?
ಪಾಪ ಮಾಡಿಯಾದ ಮೇಲೆ ಪಶ್ಚಾತ್ತಾಪ ಪಡದವರನ್ನು ವಿಧಿಯೂ ಕ್ಷಮಿಸದು.
ನನ್ನ-ರಾಮನ ಸಂಬಂಧ ನಿನಗೆ ಅರ್ಥವೇ ಆಗಲಿಲ್ಲ. ಆಗಿದ್ದರೆ ನೀನು ಈ ರೀತಿ ಮಾಡುತ್ತಿರಲಿಲ್ಲ.
ರಾಮನಿಲ್ಲದೇ ನಾನು ರಾಜ್ಯಭಾರ ಮಾಡುವೆನೆಂದು ಹೇಗೆ ಯೋಚಿಸಿದೆ? ತಂದೆಯೂ ರಾಜ್ಯಭಾರದ ಸಮಯದಲ್ಲಿ ರಾಮನನ್ನೆ ಆಶ್ರಯಿಸಿದ್ದ. ದಶರಥನ ಕಾರ್ಯಗಳನ್ನು ತಾನೇ ನಡೆಸಿ ತಂದೆ ಆರಾಮವಾಗಿರುವಂತೆ ನೋಡಿಕೊಳ್ಳುತ್ತಿದ್ದ. ನನಗೆ ರಾಜ್ಯದ ಆಸೆಯಿಲ್ಲ. ಒಂದು ವೇಳೆ ಲೋಭದಿಂದ ರಾಜ್ಯದ ಆಸೆ ಬಂದರೂ ನಿನ್ನ ಆಸೆಯನ್ನು ಪೂರೈಸದಿರಲಾಗಿಯೇ ರಾಜ್ಯವನ್ನು ಸ್ವೀಕರಿಸುವುದಿಲ್ಲ. ಇಕ್ಷ್ವಾಕು ವಂಶದಲ್ಲಿರಲು ಯೋಗ್ಯಳಲ್ಲ ನೀನು, ನಿನ್ನನ್ನು ಮನೆಯಿಂದಲೇ ಹೊರಹಾಕುತ್ತಿದ್ದೆ ಆದರೆ ಹಾಗೆ ಮಾಡಿದರೆ ರಾಮ ನನ್ನನ್ನು ಕ್ಷಮಿಸಲಾರ.

 ಅಂಥವನಿಗೆ ಇಂತಹ ಪಾಪ ಮಾಡಲು ನಿನಗೆ ಮನವಾದರೂ ಹೇಗೆ ಬಂತು? ಪಾಪದರ್ಶಿನಿ, ನಮ್ಮ ಕುಲದಲ್ಲಿ ಹಿರಿಯವನಿಗೆ ರಾಜ್ಯ ಉಳಿದ ಸಹೋದರರು ಅವನಿಗೆ ರಾಜ್ಯಭಾರದಲ್ಲಿ ಸಹಾಯ ಮಾಡುತ್ತಾರೆ ಇದು ಕುಲಧರ್ಮ. ಕ್ರೂರಿ , ರಾಜಧರ್ಮ ನಿನಗೇಕೆ ಕಾಣಿಸಲಿಲ್ಲ? ಮನುವಿನಿಂದ ಆರಂಭಿಸಿ ಇಂದಿನವರೆಗೆ ಕಿರಿಯರಿಗೆ ಪಟ್ಟಕಟ್ಟಿಲ್ಲ. ನಮ್ಮ ಕುಲದ ಹೆಮ್ಮೆ ನಿನ್ನಿಂದಾಗಿ ಮುಗಿಯಿತು. ನಿನ್ನ ವಂಶವನ್ನೇ ನೋಡು ಅಲ್ಲಿಯೂ ಕಿರಿಯವರಿಗೆ ಪಟ್ಟ ಕಟ್ಟಿಲ್ಲ. ನಿನ್ನ ಕುಲಪೂರ್ವಜರೂ ಹೀಗಲ್ಲ. ಮತ್ತೆಲ್ಲಿಂದ ಬಂತು ನಿನಗೆ ಈ ದುರ್ಬುದ್ಧಿ. ನಿನ್ನ ಈ ಕೇಡು ಬಯಕೆಯನ್ನು ಪೂರ್ಣಗೊಳಿಸಲಾರೆ. ನನ್ನ ಜೀವನದಲ್ಲಿ ಸಂಕಟದ ಪರ್ವ ಪ್ರಾರಂಭಿಸಿದೆ ನೀನು. ಭರತನ ಮುಕ್ತಾಯವಾಗಬಹುದು ಇದರಿಂದ ಅಥವಾ ನಾನು ಬದುಕಿದ್ದರೂ ಸತ್ತಂತೆಯೇ.

ಈಗಲೇ ಹೊರಟೆ ಅಣ್ಣನನ್ನು ಕಾಡಿನಿಂದ ಕರೆತರುವೆ. ಎರಡು ಕಾರಣಕ್ಕಾಗಿ, ಒಂದು ರಾಮನಿಗೇ ಸಲ್ಲಬೇಕು ಈ ರಾಜ್ಯ, ಇನ್ನೊಂದು ನಿನಗೆ ನೋವು ನೀಡಬೇಕು. ಅದಕ್ಕಾಗಿಯೇ ಮಾಡುವೆ ಈ ಕಾರ್ಯವನ್ನು. ರಾಜಭಾವ ಕೆಲಸ ಮಾಡುತ್ತಿದೆ ಭರತನಲ್ಲಿ. ರಾಮನನ್ನು ಕರೆತಂದು ಸಿಂಹಾಸನದಲ್ಲಿ ಕುಳ್ಳಿರಿಸಿ ಸಂತೃಪ್ತ ಅಂತರಾತ್ಮದಿಂದ ಅವನ ಸೇವೆ ಮಾಡಿಕೊಂಡು ಇರುತ್ತೇನೆ ಎಂದು ಹೇಳಿ ಇನ್ನೂ ಅನೇಕ ರೀತಿಯಲ್ಲಿ ಕೈಕೇಯಿಯನ್ನು ನಿಂದಿಸಿದ ಭರತ. ಶೋಕಾತುರನಾದ ಭರತನ ಧ್ವನಿ ರಾಜಭವನದಲ್ಲಿ ಮಾರ್ಮೊಳಗಿತು. ಇನ್ನೂ ಕೋಪಗೊಂಡು ಯಾವ ರಾಜ್ಯಕ್ಕಾಗಿ ಇಷ್ಟೆಲ್ಲ ಹಪಹಪಿಸಿದೆಯೋ ಅಂತಹ ರಾಜ್ಯಬಿಟ್ಟು ತೊಲಗು ದುಷ್ಟಚಾರಿಣಿಯೇ, ನೀನು ಇಷ್ಟೆಲ್ಲ ಮಾಡಿದ ಮೇಲೆ ನನ್ನ ತಂದೆ ನಿನ್ನನ್ನು ತ್ಯಜಿಸಿರಬಹುದು. ನಾನು ಸಾಯುತ್ತೇನೆ, ನೀನು ಅಳಬೇಡ. ನಿನ್ನ ಪ್ರೀತಿ, ದುಃಖ ಎರಡೂ ಬೇಡ. ರಾಮ ನಿನಗೇನು ಮಾಡಿದ್ದ? ಯಾಕೆ ಒಬ್ಬರಿಗೆ ಮೃತ್ಯು, ಮತ್ತೊಬ್ಬರಿಗೆ ವನವಾಸ ಮಾಡಿದೆ. ಇದರಿಂದ  ಭ್ರೂಣಹತ್ಯೆಯ ದೋಷ ಬಂತು ನಿನಗೆ. ಕೈಕೇಯಿ ನರಕಕ್ಕೆ ಹೋಗು, ಪತಿಲೋಕ ನಿನಗೆ ಸಿಗದಿರಲಿ. ಎಂತಹ ಘೋರ ಕರ್ಮ ಮಾಡಿದೆ ನೀನು. ಸರ್ವಲೋಕಪ್ರಿಯನಾದ ರಾಮನನ್ನು ನೀನು ದೂರ ಮಾಡಿ ನನಗೆ ಕೇಡು ಮಾಡಿದೆ. ನನಗೆ ಭಯ ಏನೆಂದರೆ ಅಣ್ಣನಿಂದ ಆರಂಭಿಸಿ ನಾನು ಎಲ್ಲರನ್ನೂ ಕಳೆದುಕೊಳ್ಳುತ್ತೇನೆ. ಜೀವಲೋಕದಲ್ಲಿ ಶಾಶ್ವತ ಅಪಕೀರ್ತಿ ಕಟ್ಟಿಕೊಟ್ಟೆ.

ತಾಯಿಯ ರೂಪದಲ್ಲಿರುವ ಶತ್ರುವೇ, ಇನ್ನು ಮೇಲೆ ನನ್ನೊಡನೆ ನೀನು ಮಾತನಾಡುವಂತಿಲ್ಲ.  ಪತಿಘಾತಿನಿ, ಕೌಸಲ್ಯೆ, ಸುಮಿತ್ರೆ ನನ್ನ ನಿಜವಾದ ತಾಯಂದಿರು. ನಿನ್ನಂತಹ ಕುಲದೂಷಣೆಯನ್ನು ಪಡೆದು ಹೇಗಿದ್ದಾರೋ? ನಿಜವಾಗಿಯೂ ಅಶ್ವಪತಿಯ  ಮಗಳಲ್ಲ ನೀನು. ಅಂತಹ ಧರ್ಮಜ್ಞ ಆತ.  ಅಲ್ಲಿಯೇ ಹುಟ್ಟಿದ ಕುಲಪ್ರಧ್ವಂಸಿನಿಯಾದ ರಾಕ್ಷಸಿ ನೀನು.

ನಾವು ಯಾವುದನ್ನೇ ಮಿತಿಮೀರಿ ಮಾಡಿದಾಗ ನಮಗೆ ಅದೇ ಮರಳಿ ಬರುತ್ತದೆ.

 ಯಾವ ರಾಜ್ಯಕ್ಕಾಗಿ ನೀನು ಇಷ್ಟೆಲ್ಲ ಮಾಡಿದೆಯೋ,ಅದರ ಭಾರವನ್ನು ನಾನು ಹೊರಬೇಕು. ಇಂತಹ ಕಷ್ಟಬಂದಾಗ ತಂದೆಯನ್ನೋ , ಅಣ್ಣನನ್ನೋ ಆಶ್ರಯಿಸೋಣವೆಂದರೆ ಅವರೂ ಇಲ್ಲ. ಧರ್ಮಸಂಯುಕ್ತಳಾದ ಕೌಸಲ್ಯೆಯನ್ನು ಪುತ್ರವಿಹೀನಳನ್ನಾಗಿ ಮಾಡಿ ಯಾವ ನರಕಕ್ಕೆ ಹೊರಟೆ ನೀನು? ನೀನು ತಾಯಿಯೇ ಆಗಿದ್ದರೆ ನಿನಗೆ ಕೌಸಲ್ಯೆಯ ಪ್ರೀತಿ ಅರ್ಥವಾಗಬೇಕಾಗಿತ್ತು. ತಾಯಿಯ ಅಂಗ, ಪ್ರತ್ಯಂಗ, ಅಂತರಂಗದಿಂದ ಮಗನ ಜನನ. ಹೃದಯದಿಂದ ಹುಟ್ಟುತ್ತಾನೆ ಆತ. ಹಾಗಾಗಿ ತಾಯಿಗೆ ಮಕ್ಕಳು ಎಲ್ಲರಿಗಿಂತ ಪ್ರಿಯ. ನೀನೆಂಥ ತಾಯಿ ಇದು ಅರ್ಥವಾಗದಿರುವವಳು ಎಂದು ಹೇಳಿ ಒಂದು ಉದಾಹರಣೆ ನೀಡುತ್ತಾನೆ;

 ಒಮ್ಮೆ ಸುರಭಿ ದೇವಲೋಕದಲ್ಲಿ ಸಂಚರಿಸುತ್ತಿರುವಾಗ ಭೂಲೋಕದಲ್ಲಿ ಒಬ್ಬ ರೈತ ಆಹಾರವಿಲ್ಲದೆ ಬಡವಾದ ಎತ್ತುಗಳನ್ನು ಹೊಡೆದು, ಬಡಿದು ದುಡಿಸುವುದನ್ನು ನೋಡಿ ಕಣ್ಣೀರು ಹಾಕುತ್ತಾಳೆ. ಅದೇ
ಸಮಯದಲ್ಲಿ ಇಂದ್ರ ದೇವಲೋಕದಲ್ಲಿ ಸುರಭಿಯ ಕೆಳಗೆ ಸಂಚರಿಸುವಾಗ ಆಕೆಯ ಕಣ್ಣ ಬಿಂದುಗಳು ಇಂದ್ರನ ಮೇಲೆ ಬಿದ್ದವಂತೆ. ಆ ಕಣ್ಣೀರಿನಲ್ಲಿ ಸುರಭಿಯ ಪರಿಮಳ. ತಲೆಯೆತ್ತಿ ನೋಡಿದಾಗ  ಅವಳ ಕಣ್ಣೀರು ನೋಡಿ ಆತಂಕವಾಗಿ ನಾವೇನಾದರೂ ತಪ್ಪು ಮಾಡಿದೆವಾ ಎಂದು ಕೇಳಿದಾಗ, ಇಲ್ಲಪ್ಪಾ ನಿಮ್ಮ ತೊಂದರೆಯಿಲ್ಲ, ನೋಡಲ್ಲಿ ನನ್ನಿಬ್ಬರು ಮಕ್ಕಳು ದೀನರಾಗಿ, ಎಷ್ಟು ದಿನವಾಯಿತೋ ಮೇವು ತಿಂದು, ಆ ಕೃಷಿಕ ಬಿಡದೆ ದಂಡಿಸುತ್ತಿರುವುದನ್ನು ನೋಡಿ ನನ್ನ ಮಕ್ಕಳ ಪರಿಸ್ಥಿತಿ ನೆನೆದು ದುಃಖವಾಗಿ ಕಣ್ಣೀರು ಸುರಿಸಿದೆ ಎಂದಾಗ ಇಂದ್ರ ಹೇಳಿದನಂತೆ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೆ ಸಮನಾದ ಪ್ರಿಯ ಬೇರೆಯಿಲ್ಲ. ಯಾರ ಮಕ್ಕಳ  ಸಂತತಿಯಿಂದ ಭೂಮಿ ಆವೃತವಾಗಿದೆಯೋ ಅಂತಹ ಮಕ್ಕಳಲ್ಲಿ ಇಬ್ಬರ ಕಷ್ಟವನ್ನು ನೋಡಿ ಕಣ್ಣೀರಿಡುತ್ತಿರುವ ಈ ತಾಯಿಯನ್ನು ನೋಡಿ ಜಗತ್ತಿನಲ್ಲಿ ತಾಯಿ ಮಕ್ಕಳ ಸಂಬಂಧಕ್ಕಿಂತ ಶ್ರೇಷ್ಠವಾದ ಸಂಬಂಧ ಬೇರೆಯಿಲ್ಲ ಎಂದು ಇಂದ್ರನೇ ಧಾವಿಸಿದ. ಲೋಕದ ಉಳಿವಿಗಾಗಿ ಸುರಭಿಯ ಕೊಡುಗೆ ಬಹಳ ಇದೆ. ಅಂತಹ ಸಾವಿರಾರು ಮಕ್ಕಳನ್ನು ಹೊಂದಿದ ಸುರಭಿಯೇ ತನ್ನೆರಡು ಮಕ್ಕಳ ಕಷ್ಟವನ್ನು ನೋಡಿ ಕಣ್ಣೀರು ಸುರಿಸಿದಾಗ ಕೌಸಲ್ಯೆಯ ಪರಿಸ್ಥಿತಿ ಏನಿರಬಹುದು? ಅಂತಹ ಪುತ್ರರತ್ನವನ್ನು ಕಳೆದುಕೊಂಡ ಕೌಸಲ್ಯೆಯ ದುಃಖ, ಕರುಳ ವೇದನೆ ಎಂತಹದ್ದಿರಬಹುದು? ಇನ್ನು ಮುಂದೆ ಹೇಗೆ ಬದುಕಿಯಾಳು ಆಕೆ?  ಏಕಪುತ್ರಳನ್ನು ಮಗನಿಂದ ದೂರಮಾಡಿದ ಕಾರಣಕ್ಕಾಗಿ ನಿನಗೆ ಇಲ್ಲಿಯೂ, ಅಲ್ಲಿಯೂ ಶೋಕ ಕಟ್ಟಿಟ್ಟ ಬುತ್ತಿ. ಆದರೆ ನಾನು ನೀನಲ್ಲ, ನಾನು ತಂದೆಯನ್ನು ಗೌರವಿಸುತ್ತೇನೆ,ನಾನು ಅಣ್ಣನನ್ನು ಪೂಜಿಸುವವನು. ಯಾವುದರಿಂದ ಆತ್ಮವಿಕಾಸವೋ, ಕುಲವಿಕಾಸವೋ ಅಂತಹದ್ದನ್ನು ಮಾಡಿ, ರಾಮನನ್ನು ಕರೆತಂದು ರಾಜ್ಯಾಭಿಷೇಕ ಮಾಡಿ ನಾನೇ ಕಾಡಿಗೆ ಹೋಗುತ್ತೇನೆ.

 ಹೇ ಪಾಪಸಂಕಲ್ಪಳೇ, ನೀನು ಮಾಡಿದ ಪಾಪವನ್ನು ಭರಿಸುವ ಶಕ್ತಿ ನನಗಿಲ್ಲ. ಕಣ್ಣೀರು ತುಂಬಿದ ಪೌರರು ನನ್ನನ್ನು ನೋಡುವಾಗ ಅದನ್ನು ಸಹಿಸುವ ಶಕ್ತಿ ನನಗಿಲ್ಲ. ನೀನು ಒಂದು ಕೆಲಸ ಮಾಡು, ಅಗ್ನಿಪ್ರವೇಶ ಮಾಡು ಅಥವಾ ನೀನೆ ದಂಡಕಾರಣ್ಯಕ್ಕೆ ಹೋಗು, ಇಲ್ಲವಾದರೆ ಬಳ್ಳಿಯನ್ನು ಕೊರಳಿಗೆ ಹಾಕಿಕೋ ಇದರ ಹೊರತು ನಿನಗೆ ಬೇರೆ ದಾರಿಯಿಲ್ಲ ಎಂಬುದಾಗಿ ಹೇಳಿ ನನಗಿರುವ ದಾರಿ ಒಂದೆ ರಾಮನಿಗೆ ರಾಜ್ಯ ದೊರೆತರೆ ಮಾತ್ರ ಮುಕ್ತಿ. ಯಾರಿಗೂ ಬರಬಾರದ ಸ್ಥಿತಿ ಬಂತು ಕೈಕೇಯಿಗೆ. ಆಕೆಗೆ ಆಶ್ರಯ ದಶರಥ ಅವನನ್ನು ಕೊಂದಂತಾಯಿತು. ಇನ್ನು ಉಳಿದಿದ್ದು ಭರತ ಅವನೂ ಈ ರೀತಿಯಾಗಿ ಹೇಳಿದರೆ ಆಕೆ ಹೋಗುವುದಾದರೂ ಎಲ್ಲಿಗೆ?

ಪಾಪವಾಗಲೀ ಪುಣ್ಯವಾಗಲಿ ಅತ್ಯುತ್ಕಟವಾಗಿದ್ದರೆ ಕೂಡಲೇ ಫಲ ಕೊಡುತ್ತದೆ

ಅಂಕುಶದಿಂದ ತಿವಿಯಲ್ಪಟ್ಟ ಆನೆಯು ಹೇಗೆ ಕ್ರೋಧದಿಂದ ಕೆಳಗೆ ಬಿದ್ದು ಒದ್ದಾಡುತ್ತದೆಯೋ ಅಂತಹ ಅವಸ್ಥೆ ಭರತನದು. ಅವನ ಶೋಕದ ತೀವ್ರತೆ ಹಾಗೂ ಕೈಕೇಯಿಯ ಕರ್ಮ ಈ ರೀತಿಯಾಗಿ ಭರತನಿಂದ ಹೇಳಿಸುತ್ತಿದೆ.
ಭರತನ ಕಣ್ಣು ಕೆಂಪಾಗಿದೆ, ವಸ್ತ್ರ ಅಸ್ತವ್ಯಸ್ತವಾಗಿದೆ, ಆಭರಣಗಳು ಯಾವುದೂ ಅದರ ಜಾಗದಲ್ಲಿಲ್ಲ. ಶೋಕ ತಾಳಲಾರದೆ ಭರತನಿಗೆ ಜ್ಞಾನ ತಪ್ಪಿ ಮತ್ತೆ ಎಚ್ಚರವಾದಾಗ ದೈನ್ಯದಿಂದ ನಿಂತಿದ್ದಳಂತೆ ಕೈಕೇಯಿ.

ಕೌಸಲ್ಯೆ ಭರತರ ಸಮಾಗಮವಾದಾಗ ಭರತನ ನಿಜವಾದ ಸತ್ವಪರೀಕ್ಷೆ; ಅದು ಮುಂದಿದೆ. ಮೈನವಿರೇಳಿಸುವ ಸಂದರ್ಭವದು. ಆ ಸನ್ನಿವೇಶವನ್ನು ಮುಂದಿನ ಪ್ರವಚನದಲ್ಲಿ ನಿರೀಕ್ಷಿಸೋಣ...

#Dhaara_ramayan
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ

No comments:

Post a Comment

Please leave your comments here.....